ಚುನಾವಣೋತ್ತರ ಸಮೀಕ್ಷೆ; ಬರೀ ಹುಸಿ ನಿರೀಕ್ಷೆ

ಯಾವುದೇ ರೀತಿಯ ನಿಖರತೆಯನ್ನು ಹೊಂದಿರದ ಈ ಎಕ್ಸಿಟ್ ಪೋಲ್ ಎಂಬುದರ ವಿಶ್ವಾಸಾರ್ಹತೆಯೇ ಕುಂದಿರುವಾಗ ಒಪಿನಿಯನ್ ಪೋಲ್ ಮತ್ತು ಎಕ್ಸಿಟ್ ಪೋಲ್ ಗಳನ್ನು ಕಾನೂನಾತ್ಮಕವಾಗಿ ಬಹಿಷ್ಕರಿಸಬೇಕಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಕಣಿ ಹೇಳುವವರು, ಭವಿಷ್ಯ ನುಡಿಯುವವರು, ಜ್ಯೋತಿಷ್ಯ ನೋಡುವವರು ಯಾವುದನ್ನೂ ನಿಖರವಾಗಿ ಹೇಳದೆ ಹೋದರೂ ಯಾವುದೋ ಒಂದು ರೀತಿ ತಮ್ಮದೇ ಲೆಕ್ಕಾಚಾರದಲ್ಲಿ ಅಂದಾಜು ಮಾಡಿ ಸತ್ಯದ ತಲೆಯ ಮೇಲೆ ಹೊಡೆದಂತೆ ಪ್ರಸ್ತುತ ಪಡಿಸುತ್ತಾರೆ. ಹತ್ತರಲ್ಲಿ ಯಾವುದೋ ಒಂದು ವಾಸ್ತವಕ್ಕೆ ಹತ್ತಿರವಾದರೆ ನಾವು ಹೇಳಿದ ಭವಿಷ್ಯ ಸತ್ಯಸ್ಯ ಸತ್ಯ ಅಂತ ನಂಬಿಸುತ್ತಾರೆ.

ಅದೇ ರೀತಿ ಈ ಚುನಾವಣೋತ್ತರ ಸಮೀಕ್ಷೆಗಳು ಅಂದರೆ ಎಕ್ಸಿಟ್ ಪೋಲ್ ಗಳು. ಚುನಾವಣಾ ಮತದಾನ ಮುಗಿಯುವುದನ್ನೇ ಕಾಯ್ದುಕೊಂಡಿರುವ ಈ ಗಿಳಿ ಶಾಸ್ತ್ರದ ತಳಿಗಳು ತಮ್ಮ ಭವಿಷ್ಯವಾಣಿಯನ್ನು ಹೇಳುತ್ತವೆ, ಸುದ್ದಿ ಮಾಧ್ಯಮಗಳು ಬಿತ್ತರಿಸಲು ಆರಂಭಿಸುತ್ತವೆ. ಮಳೆಗಾಲ ಶುರುವಾದಾಗ ಹುಟ್ಟುವ ಅಣಬೆಗಳಂತೆ ಎಕ್ಸಿಟ್ ಪೋಲ್ ಕಂಪನಿಗಳು ಹುಟ್ಟುತ್ತವೆ. ಶಾಸ್ತ್ರ ನುಡಿದು ಸಾಯುತ್ತವೆ. ಹುಟ್ಟಿ ಸಾಯುವುದರೊಳಗೆ ತಮ್ಮ ಪ್ರಾಯೋಜಕರಿಂದ ಎಷ್ಟು ಬೇಕೋ ಅಷ್ಟು ಹಣ ಕಿತ್ತುಕೊಂಡು ಕೃತಾರ್ಥವಾಗುತ್ತವೆ.

ಮೊದಲು ಈ ಅಂದಾಜು ಸಮೀಕ್ಷೆಗಳು ಮತದಾನಕ್ಕಿಂತ ಮೊದಲೇ ಭವಿಷ್ಯ ಹೇಳಿ ಮತದಾರರನ್ನು ಗೊಂದಲಕ್ಕೀಡು ಮಾಡುತ್ತಿದ್ದವು. ಹಲವಾರು ಮತದಾರರ ಮೇಲೆ ಇನ್ಫ್ಲೂಯನ್ಸ್ ಮಾಡುವ ಸಾಧ್ಯತೆಯೂ ಇತ್ತು. ಇದರಿಂದಾಗಿ ಚುನಾವಣಾ ಆಯೋಗವು ಮತದಾನದ ಕೊನೆಯ ಹಂತ ಮುಗಿಯುವವರೆಗೂ ಯಾರೂ ಸಮೀಕ್ಷೆಯ ಭವಿಷ್ಯ ಹೇಳಕೂಡದು ಎಂದು ಆದೇಶಿಸಿತು. ಅದನ್ನು ಮೀರಿದರೆ Section 126A of Representation of the people Act ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಈ ನಜರಂದಾಜು ಎಜನ್ಸಿಗಳಿಗೆ ಸ್ವಲ್ಪ ಕಡಿವಾಣ ಬಿದ್ದಿದೆ. ಮತದಾನದ ಕೊನೆಯ ಹಂತ ಮುಗಿಯುವವರೆಗೂ ಕಾಯಲೇಬೇಕಿದೆ.  

ಯಾವುದೇ ಎಕ್ಸಿಟ್ ಪೋಲ್ ಎಜನ್ಸಿಗಳನ್ನು ಕೇಳಿ ನೋಡಿ, ನಮ್ಮದೇ ವೈಜ್ಞಾನಿಕ ಸಮೀಕ್ಷೆ, ಕರಾರುವಾಕ್ಕಾದ ಸರ್ವೇ ಎಂದೇ ಹೇಳುತ್ತಾರೆ. ಆದರೆ ಇವುಗಳ ಅಂಕೆ ಸಂಖ್ಯೆಯಲ್ಲೇ ತಾಳ ಮೇಳ ಇರುವುದಿಲ್ಲ. ತಳ ಮಟ್ಟದ ಸಮೀಕ್ಷೆ, ಭೂತ್ ಮಟ್ಟದ ಸರ್ವೆ ಮಾಡಿದ್ದೇವೆ ಎಂದೆಲ್ಲಾ ನಂಬಿಸಲು ಪ್ರಯತ್ನಿಸುತ್ತಾರೆ, ಆದರೆ ಬಹುತೇಕ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವೂ ಇರುವುದಿಲ್ಲ. ಕಾಕತಾಳೀಯವೆಂಬಂತೆ ಎಲ್ಲೋ ಒಂದೋ ಎರಡೂ ಸಮೀಕ್ಷೆಗಳು ಚುನಾವಣಾ ಫಲಿತಾಂಶಕ್ಕೆ ಒಂಚೂರು ಹತ್ತಿರ ಇರಬಹುದಾದರೂ ಅದರಲ್ಲೂ ನಿಖರತೆಯ ಕೊರತೆ ಇದ್ದೇ ಇರುತ್ತದೆ.

1990 ರ ದಶಕದಿಂದೀಚೆಗೆ ಖಾಸಗಿ ಮಾಧ್ಯಮಗಳಾದ ಸಿಓಟರ್, ಇಂಡಿಯಾ ಟುಡೇ, ಆಕ್ಸಿಸ್ ಮಥ ಇಂಡಿಯಾ, ಟುಡೇಸ್ ಚಾಣಕ್ಯ ಮುಂತಾದ ಎಜೆನ್ಸಿಗಳು ಎಕ್ಸಿಟ್ ಪೋಲ್ ರಿಪೋರ್ಟ್ ಸಿದ್ಧಪಡಿಸುತ್ತವೆ ಹಾಗೂ ಟಿವಿ ವಾಹಿನಿಗಳು ಈ ಕುರಿತು ವ್ಯಾಪಕವಾಗಿ ಚರ್ಚಿಸುತ್ತವೆ.

ಒಪಿನಿಯನ್ ಪೋಲ್

ಈ ಎಜೆನ್ಸಿಗಳು ಮತದಾನಕ್ಕೆ ಮುಂಚೆ ಮನೆ ಮನೆಗೆ ತೆರಳಿ ಒಪಿನಿಯನ್ ಪೋಲ್ ಸಮೀಕ್ಷೆ ಪ್ರಕಟಿಸುವುದೂ ಸಹ ಮತದಾರರ ಮೇಲೆ ಪರಿಣಾಮ ಬೀರುತ್ತದೆ. ಒಪಿನಿಯನ್ ಪೋಲ್ ಹೆಸರಲ್ಲಿ ಯಾವ ಪಕ್ಷ ಗೆಲ್ಲಬಹುದು ಎನ್ನುವ ಕುರಿತು ತಮ್ಮದೇ ಆದ ಅಭಿಪ್ರಾಯ ಪ್ರಕಟಿಸುವ ಈ ಸಂಸ್ಥೆಗಳು ಮತದಾರರ ಮೇಲೆ ಪ್ರಭಾವ ಬಿದ್ದು ಗೆಲ್ಲಬಹುದಾದ ಪಕ್ಷ ಹಾಗೂ ಅಭ್ಯರ್ಥಿಗಳತ್ತ ಮತದಾರರ ಒಲವು ತಿರುಗುವ ಹಾಗೆ ಮಾಡಲಾಗುತ್ತದೆ. ಇಂತಹ ಅಂದಾಜು ವರದಿ ತಯಾರಿಸುವ ಎಜೆನ್ಸಿಗಳನ್ನು ಪ್ರಭಾವಶಾಲಿ ಆಳುವ ವರ್ಗಗಳು ಕೊಂಡುಕೊಳ್ಳುತ್ತವೆ ಹಾಗೂ ತಮ್ಮ ಪರವಾಗಿ ಜನಮತವನ್ನು ಒಲಿಸಿಕೊಳ್ಳುವ ಹಾಗೂ ಟ್ರೆಂಡ್ ಸೃಷ್ಟಿಸುವ ತಂತ್ರಗಾರಿಕೆಯನ್ನು ಹೆಣೆಯುತ್ತವೆ. ನ್ಯಾಯಯುತ ಚುನಾವಣೆ ಮಾಡಲು ಈ ಒಪೀನಿಯನ್ ಪೋಲ್ ಎನ್ನುವ ಉದ್ದೇಶಪೂರ್ವಕ ಪ್ರಹಸನವನ್ನು ಚುನಾವಣಾ ಆಯೋಗ ನಿಷೇಧಿಸುವುದು ಸೂಕ್ತವಾಗಿದೆ.

ಎಕ್ಸಿಟ್ ಪೋಲ್

ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿ ಬಂದವರನ್ನು ಪ್ರಶ್ನಿಸುವ ಮೂಲಕ ಈ ಏಜನ್ಸಿಗಳು ಎಕ್ಸಿಟ್ ಪೋಲ್ ರಿಪೋರ್ಟ್ ತಯಾರಿಸಿ ಅಂತಿಮ ಮತದಾನ ಮುಗಿದ ಅರ್ಧ ಗಂಟೆಯ ನಂತರ ಸುದ್ದಿ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತವೆ. ಇರುವ ಕಡಿಮೆ ಸಮಯದಲ್ಲಿ ಕೋಟ್ಯಂತರ ಮತದಾರರನ್ನು ಸಂಪರ್ಕಿಸಿ ಪ್ರಶ್ನಿಸಿ ಸರ್ವೇ ಮಾಡುವುದು ಯಾವ ಎಜೆನ್ಸಿಗೂ ಸಾಧ್ಯವಿಲ್ಲ ಹಾಗೂ ಉತ್ತರಿಸುವ ಮತದಾರರು ಸತ್ಯವನ್ನೇ ಹೇಳುತ್ತಾರೆಂಬುದಕ್ಕೆ ಆಧಾರವಿಲ್ಲ. ಹೀಗಾಗಿ ಮತ ಹಾಕಿ ಬಂದ ಕೆಲವೇ ಸಾವಿರ ಮತದಾರರನ್ನು ಸಂಪರ್ಕಿಸಿ, ಚುನಾವಣಾ ಗಾಳಿಯ ದಿಕ್ಕನ್ನು ಊಹಿಸುವ ಹಾಗೂ ತಮ್ಮ ಪ್ರಾಯೋಜಕರ ಹಿತಾಸಕ್ತಿಯನ್ನು ಪರಿಗಣಿಸಿ ಏಜೆನ್ಸಿಗಳು ರಿಪೋರ್ಟ್ ತಯಾರಿಸಿ ಪ್ರಕಟಿಸುತ್ತವೆ.

ಮತದಾನ ಎನ್ನುವುದೇ ಗೌಪ್ಯವಾಗಿರುವಂತಹುದು. ಇಂತವರಿಗೆ ಮತ ಹಾಕಿದ್ದೇನೆಂದು ಹೇಳುವುದು ಆ ಗೌಪ್ಯತೆಯ ಉಲ್ಲಂಘನೆ. ಯಾರಿಗೆ ಯಾವ ಪಕ್ಷಕ್ಕೆ ಮತ ಹಾಕಿದ್ದೀರೆಂದು ಮತದಾರರನ್ನು ಕೆಣಕಿ ಕೇಳುವುದೂ ಆಕ್ಷೇಪಣೀಯ. ಹೀಗೆ ಸರ್ವೇ ಮಾಡುವಾಗ ಮತದಾರ ಇಂತಹುದೇ ಪಕ್ಷದ ಅಭ್ಯರ್ಥಿಗೆ ಮತಹಾಕಿದ್ದು ಬಹಿರಂಗವಾದರೆ ವಿರೋಧ ಪಕ್ಷದವರನ್ನು ಕೆರಳಿಸುತ್ತದೆ. ಅಂತಹ ಮತದಾರನ ಮೇಲೆ ದ್ವೇಷ ಸಾಧಿಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹೀಗಾಗಿ ನೇರವಾಗಿ ಮತದಾರರನ್ನು ಪ್ರಶ್ನಿಸಿ ಯಾರಿಗೆ ಮತ ಹಾಕಿದ್ದೀರೆಂದು ಕೇಳುವುದು ಚುನಾವಣಾ ಗೌಪ್ಯತೆ ಹಾಗೂ ವ್ಯಕ್ತಿಯ ಹಕ್ಕಿನ ಉಲ್ಲಂಘನೆ ಆಗಿರುವುದರಿಂದ ಈ ರೀತಿಯ ಸರ್ವೇ ಕಾರ್ಯವನ್ನೇ ಚುನಾವಣಾ ಆಯೋಗ ಇಲ್ಲವೇ ಸುಪ್ರೀಂ ಕೋರ್ಟ್ ನಿಷೇಧಿಸುವುದು ಸೂಕ್ತವಾಗಿದೆ.

ಸಮೀಕ್ಷಾ ಏಜೆನ್ಸಿಗಳ ಸೋಲು

ಇನ್ನು ಈ ಎಕ್ಸಿಟ್ ಪೋಲ್ ಏಜೆನ್ಸಿಗಳ ರಿಪೋರ್ಟ್ ಗಳೆಲ್ಲಾ ನಿಖರತೆಯನ್ನು ಹೊಂದಿರುತ್ತವೆ ಎಂಬುದು ಸುಳ್ಳು ಎಂಬುದು ಪ್ರತಿಯೊಂದು ಚುನಾವಣೆಯಲ್ಲೂ ಸಾಬೀತಾಗಿದೆ. 2004 ಹಾಗೂ 2014 ರ ಲೋಕಸಭಾ ಚುನಾವಣೆಯ ಬಹುತೇಕ ಚುನಾವಣೋತ್ತರ ಫಲಿತಾಂಶಗಳು ತಪ್ಪಾಗಿವೆ. 2024 ರ ಚುನಾವಣೆಯಲ್ಲಿ ಮೋದಿ ಸರಕಾರ “ಅಬ್ ಕೀ ಬಾರ್ ಚಾರ್ ಸೌ ಪಾರ್” ಎಂದು ಘೋಷಿಸಿತ್ತು. ಇದನ್ನೇ ನಂಬಿಕೊಂಡಿದ್ದ ಬಹುತೇಕ ಏಜೆನ್ಸಿಗಳು ಮುನ್ನೂರರಿಂದ ನಾನೂರು ಸೀಟುಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದೇ ಭವಿಷ್ಯ ನುಡಿದಿದ್ದವು. ಆದರೆ ಆಗಿದ್ದೇನು? 240 ಸೀಟುಗಳನ್ನಷ್ಟೇ ಗೆದ್ದ ಬಿಜೆಪಿ ಏಕಪಕ್ಷವಾಗಿ ಬಹುಮತವನ್ನೂ ಪಡೆಯಲಿಲ್ಲ. ತನ್ನ ಭದ್ರ ಕೋಟೆ ಉತ್ತರ ಪ್ರದೇಶದಲ್ಲೇ ಬಿಜೆಪಿ ಛಿದ್ರವಾಗಿತ್ತು. ಅಯೋಧ್ಯೆಯಲ್ಲಿಯೇ ಸೋತಿತ್ತು. ತಾವು ಹೇಳಿದ್ದೆಲ್ಲಾ ತಪ್ಪು ಎಂದು ಯಾವ ಸಮೀಕ್ಷಾ ಏಜೆನ್ಸಿಯವರೂ ಜನರ ಕ್ಷಮೆ ಕೇಳಲಿಲ್ಲ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಗಳಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಗೆಲ್ಲುತ್ತದೆ ಎಂದೇ ಎಕ್ಸಿಟ್ ಪೋಲ್‌ಗಳು ಡಂಗುರ ಬಾರಿಸಿದ್ದವು. ಆದರೆ ಆಗಿದ್ದೇ ಬೇರೆ.  ಆಗಲೂ ಯಾವ ಏಜೆನ್ಸಿ ಕೂಡಾ ಕ್ಷಮೆ ಯಾಚಿಸಲಿಲ್ಲ. 2023 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಇಷ್ಟೊಂದು ದೊಡ್ಡ ಬಹುಮತ ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಹಿಂದೆ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ತನ್ನ ಪೊರಕೆಯಿಂದ ಗುಡಿಸುತ್ತದೆ ಎಂದು ಯಾವುದೇ ಏಜೆನ್ಸಿ ಯ ಊಹೆಗೂ ನಿಲುಕಿರಲಿಲ್ಲ. ಈ ಸಲ ಅದೇ ಆಮ್ ಆದ್ಮಿ ಪಕ್ಷ ಇಷ್ಟೊಂದು ಹೀನಾಯವಾಗಿ ಸೋಲುತ್ತದೆ ಎಂಬುದೂ ಸಮೀಕ್ಷೆಯವರ ಅರಿವಿಗೆ ಬಂದಿರಲಿಲ್ಲ.

ಪಶ್ಚಿಮ ಬಂಗಾಳ ಚುನಾವಣಾ ಎಕ್ಸಿಟ್ ಪೋಲ್‌ಗಳೆಲ್ಲಾ ಬರೀ ಓಳು

ಈಗ ದೇಶಾದ್ಯಂತ ಚರ್ಚೆ ಆಗುತ್ತಿರುವುದು ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ. ಈ ಎಕ್ಸಿಟ್ ಪೋಲ್‌ಗಳ ಹುಸಿತನದ ಬಗ್ಗೆ ತಿಳಿಯಬೇಕೆಂದರೆ ಕಳೆದ ವಿಧಾನಸಭಾ ಚುನಾವಣೆಗಳ ಸಮೀಕ್ಷೆಗಳ ಬಗ್ಗೆ ಮೊದಲು ನೋಡಬೇಕಿದೆ. 2021 ರ ಪಶ್ಚಿಮ ಬಂಗಾಳದ ಚುನಾವಣೋತ್ತರ ಫಲಿತಾಂಶಗಳ ಸರಾಸರಿ ತೆಗೆದುಕೊಂಡರೆ ಟಿಎಂಸಿ ಪಕ್ಷ 135 ರಿಂದ 154 ಸೀಟುಗಳನ್ನು ಗೆಲ್ಲುತ್ತದೆ ಹಾಗೂ ಬಿಜೆಪಿ 125-143 ಸೀಟ್ ಗೆಲ್ಲುತ್ತದೆ ಎಂದು ಹೇಳಲಾಗಿತ್ತು. ಆದರೆ ಚುನಾವಣಾ ರಿಸಲ್ಟ್ ಬಂದಾಗ ಟಿಎಂಸಿ 216 ಸೀಟುಗಳನ್ನು ಗೆದ್ದಿದ್ದರೆ ಬಿಜೆಪಿ  ಕೇವಲ 77 ಸ್ಥಾನ ಪಡೆದಿತ್ತು. ಅದೇ ರೀತಿ 2024 ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 16 ರಿಂದ 19 ಸೀಟುಗಳನ್ನು ಗೆಲ್ಲುತ್ತದೆ ಹಾಗೂ ಬಿಜೆಪಿ 22 ರಿಂದ 25 ಸೀಟ್ ಗೆಲ್ಲುತ್ತದೆ ಎಂದು ಎಲ್ಲಾ ಸಮೀಕ್ಷೆಗಳ ಸರಾಸರಿ ಅಂದಾಜಾಗಿತ್ತು. ಆದರೆ ಈ ಎಲ್ಲಾ ಭವಿಷ್ಯ ನುಡಿಗಳು ತಲೆಕೆಳಗಾಗಿ ಟಿಎಂಸಿ 29 ಸೀಟ್ ಗೆದ್ದು ಬಿಜೆಪಿ 12 ಕ್ಕೆ ಸೀಮಿತವಾಗಿತ್ತು. ಅಂದರೆ ಈ ಏಜೆನ್ಸಿಗಳಿಗೆ ಸರ್ವೇ ಮಾಡಲು ಬರೋದಿಲ್ವಾ ಅಥವಾ ಕೇವಲ ನಜರಂದಾಜಿನ ಸಮೀಕ್ಷೆ ಮಾಡುತ್ತವಾ ಅಥವಾ ಯಾರನ್ನೋ ಮೆಚ್ಚಿಸಲು ಅಂಕೆ ಸಂಖ್ಯೆಗಳನ್ನು ತಿರುಚುತ್ತವಾ?

ಈ ಸಮೀಕ್ಷಾ ಏಜೆನ್ಸಿಗಳ ಸರ್ವೇಗಳ ವಿಕ್ಷಿಪ್ತತೆಗಳಿಗಾಗಿ ಈಗ ನಡೆದ ಪಶ್ಚಿಮ ಬಂಗಾಳದ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನೊಮ್ಮೆ ನೋಡಬೇಕಿದೆ. ಬಿಜೆಪಿಗೆ ಮ್ಯಾಟ್ರಿಕ್ಸ್ ಪ್ರಕಾರ 146-161, ಪೋಲ್ ಡೈರಿ 142-171, ಪಿ- ಮಾರ್ಕ್ 150-175, ಟುಡೇಸ್ ಚಾಣಕ್ಯ 192 ಸೀಟುಗಳಂತೆ, ಅದೇ ರೀತಿ ಟಿಎಂಸಿ ಪಕ್ಷಕ್ಕೆ ತಾಜಾ ಟಿವಿ 175-205, ಜನಮತ್ 197, ಎಸ್ ಎ ಎಸ್ ಗ್ರುಪ್ 170-190, ಪೀಪಲ್ಸ್ ಪಲ್ಸ್ 177-187 ಸೀಟುಗಳು ದೊರೆಯುತ್ತವೆ ಎಂದು ಅಂದಾಜಿಸಲಾಗಿದೆ. ಅಂದರೆ ಈ ಎಕ್ಸಿಟ್ ಪೋಲ್ ಸೃಷ್ಟಿಕರ್ತರು ಹೇಳಿರುವ ಭವಿಷ್ಯದಲ್ಲೇ ಅಜಗಜಾಂತರ ವ್ಯತ್ಯಾಸ ಇದ್ದು ಯಾವುದೇ ಒಮ್ಮತವಿಲ್ಲ. ಹೀಗಿರುವಾಗ ಯಾವ ಎಕ್ಸಿಟ್ ಪೋಲ್ ನಂಬಿಕೆಗೆ ಅರ್ಹ ಎನ್ನುವುದು ಚುನಾವಣಾ ಫಲಿತಾಂಶದ ದಿನ ಗೊತ್ತಾಗುತ್ತದೆ. ಯಥಾಪ್ರಕಾರ ಈ ಎಲ್ಲಾ ಭವಿಷ್ಯವಾಣಿಗಳೂ ಸುಳ್ಳಾಗುತ್ತವೆ. ಕಾಕತಾಳೀಯ ಎಂಬಂತೆ ಎಲ್ಲೊ ಒಂದೆರಡು ಅಂದಾಜುಗಳು ಫಲಿತಾಂಶದ ಆಜೂ ಬಾಜೂ ಬರಬಹುದಾದರೂ ನಿಖರತೆ ಇರುವುದಿಲ್ಲ.

ಹೀಗಿರುವಾಗ ಈ ಸುಳ್ಳು ಭವಿಷ್ಯ ಹೇಳಿ ಜನರ ದಿಕ್ಕು ತಪ್ಪಿಸುವ ಈ ಎಕ್ಸಿಟ್ ಪೋಲ್ ಏಜನ್ಸಿಗಳು ಬೇಕಾ? ಎನ್ನುವ ಪ್ರಶ್ನೆ ಕಾಡದೇ ಇರದು. ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೂ ಪ್ರಯೋಜನ ಏನೂ ಆಗುವುದಿಲ್ಲ. ಯಾರಾದರೂ ಸುಪ್ರೀಂ ಕೋರ್ಟಿಗೆ ಪಿಐಎಲ್ ಅರ್ಜಿ ಸಲ್ಲಿಸಿ ಈ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಫಲಿತಾಂಶಗಳ ಪ್ರಕಟಣೆಗಳನ್ನೇ ಕಾನೂನಾತ್ಮಕವಾಗಿ ನಿಷೇಧಿಸಲು ಆಗ್ರಹಿಸುವುದು ಉತ್ತಮ.

ಎಕ್ಸಿಟ್ ಪೋಲ್‌ಗಳಿಂದಾಗುವ ದುಷ್ಪರಿಣಾಮ

* ಒಪಿನಿಯನ್ ಪೋಲ್ ನಂಬುವ ಕೆಲವು ಮತದಾರರು ನಮ್ಮ ಮತದಿಂದ ಏನೂ ಬದಲಾವಣೆ ಸಾಧ್ಯವಿಲ್ಲವೆಂದು ಮತ ಚಲಾಯಿಸದೇ ಇರುವ ಸಾಧ್ಯತೆ ಇದೆ. ಇದಕ್ಕೆ ಬ್ಯಾಂಡ್ ವ್ಯಾಗನ್ ಎಫೆಕ್ಟ್ ಎನ್ನುತ್ತಾರೆ.

* ಮತದಾನದ ನಂತರ ಸರ್ವೇ ಸ್ಯಾಂಪ್ಲಿಂಗ್ ಅಸಮರ್ಪಕವಾಗಿರುವುದರಿಂದ ಹಾಗೂ ಮತದಾರರು ಸತ್ಯ ಹೇಳದೇ ಇರುವುದರಿಂದ ಸುಳ್ಳು ನರೇಟಿವ್ ಸೃಷ್ಟಿಯಾಗುತ್ತದೆ.

* ಸರ್ವೆ ಮಾಡುವಾಗ ಯಾರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬುದು ಪಬ್ಲಿಕ್ ಆದರೆ ಅಸಹನೆ ದ್ವೇಷ ಹೆಚ್ಚಾಗುತ್ತದೆ.

* ಈ ಎಕ್ಸಿಟ್ ಪೋಲ್‌ಗಳ ಆಧಾರದಲ್ಲಿ ಬೆಟ್ಟಿಂಗ್ ದಂಧೆ ಶುರುವಾಗಿ ಅನೇಕರು ನಷ್ಟ ಅನುಭವಿಸುತ್ತಾರೆ.

* ಶೇರು ಮಾರುಕಟ್ಟೆಯಲ್ಲಿ ತುಂಬಾ ಏರಿಳಿತ ಉಂಟಾಗಿ ಹೂಡಿಕೆದಾರರಿಗೆ ನಷ್ಟವಾಗುವ ಸಾಧ್ಯತೆಯೂ ಹೆಚ್ಚು.

* ನಿಜವಾದ ಫಲಿತಾಂಶದ ಜೊತೆಗೆ ಈ ಫೇಕ್ ಪೋಲ್ ಗಳನ್ನು ಹೋಲಿಸಿದಾಗ ಚುನಾವಣಾ ಪಾರದರ್ಶಕ ವ್ಯವಸ್ಥೆಯ ಮೇಲೆ ಜನರಿಗೆ ಅನುಮಾನಗಳು ಶುರುವಾಗುತ್ತವೆ.

ಹೀಗಾಗಿ.. ಯಾವುದೇ ರೀತಿಯ ನಿಖರತೆಯನ್ನು ಹೊಂದಿರದ ಈ ಎಕ್ಸಿಟ್ ಪೋಲ್ ಎಂಬುದರ ವಿಶ್ವಾಸಾರ್ಹತೆಯೇ ಕುಂದಿರುವಾಗ ಒಪಿನಿಯನ್ ಪೋಲ್ ಮತ್ತು ಎಕ್ಸಿಟ್ ಪೋಲ್ ಗಳನ್ನು ಕಾನೂನಾತ್ಮಕವಾಗಿ ಬಹಿಷ್ಕರಿಸಬೇಕಿದೆ.

ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶೇಷಕರು

More articles

Latest article

Most read