ರಂಗ ಪ್ರಯೋಗ ವಿಮರ್ಶೆ | ಕೀಚಕ ; ಹೀಗೊಂದು ಕಾಲ್ಪನಿಕ ಮುಖ

ಮಹಾಭಾರತ ಮಹಾಕಾವ್ಯದ ಉಪಕಥಾನಕ ವಿರಾಟನಗರದ ಕೀಚಕನ ಪ್ರಸಂಗ. “ಪಾಂಡವರು ಪಗಡೆಯಾಟದ ಜೂಜಿನಲ್ಲಿ ಸೋತು 12 ವರ್ಷ ವನವಾಸ ಮುಗಿಸಿ ಕೊನೆಯ ಒಂದು ವರ್ಷದ ಅಜ್ಞಾತವಾಸಕ್ಕಾಗಿ ವಿರಾಟನಗರದ ಅರಮನೆಯಲ್ಲಿ ತಲೆಮರೆಸಿಕೊಂಡಿರುತ್ತಾರೆ. ಸೈರಂಧ್ರಿ ಹೆಸರಲ್ಲಿ ಅರಮನೆಯ ದಾಸಿಯಾಗಿದ್ದ ದ್ರೌಪದಿಯ ಮೇಲೆ ಅಲ್ಲಿಯ ಸೈನ್ಯಾಧಿಪತಿ ಕೀಚಕನ ಕಾಮುಕ ಕಣ್ಣು ಬೀಳುತ್ತದೆ. ದ್ರೌಪದಿಯನ್ನು ರಕ್ಷಿಸಲು ಅಡುಗೆ ಭಟನಾಗಿದ್ದ ಭೀಮನು ಕೀಚಕನನ್ನು ಸಂಹರಿಸುತ್ತಾನೆ” ಎನ್ನುವುದು ಮಹಾಭಾರತದಲ್ಲಿರುವ ಕಥೆ.

ಮಹಾಭಾರತದ ಪಾತ್ರಗಳು ಮತ್ತು ಪ್ರಸಂಗಗಳು ಕವಿಗಳು ನಾಟಕಕಾರರ ಆಲೋಚನೆಗೆ ತಕ್ಕಂತೆ ಬದಲಾಗುತ್ತಲೇ ಇರುತ್ತವೆ. ಕೆಲವರಿಗೆ ದುರ್ಯೋಧನ ಖಳನಾಯಕನಾಗಿ ಕಂಡಿದ್ದರೆ ಇನ್ನು ಕೆಲವರಿಗೆ ದುರಂತ ನಾಯಕ ಸುಯೋಧನನಾಗಿರುತ್ತಾನೆ. ಹಾಗೆಯೇ ಪರಸ್ರ್ತೀ ಮೋಹಿ ಕಾಮಾಂಧನಾಗಿ ಚಿತ್ರಿತನಾಗಿದ್ದ ಕೀಚಕನೂ ಸಹ ಕೈಲಾಸಂ ರವರ ನಾಟಕದಲ್ಲಿ ಭಿನ್ನವಾಗಿ ರೂಪತಳೆಯುತ್ತಾನೆ. ಅದೇ ರೀತಿ ಕಾ.ಲಾ.ವಿಶ್ವನಾಥರವರು ಈ “ಕೀಚಕ” ನಾಟಕದಲ್ಲಿ ಕೀಚಕನನ್ನು ಉದಾತ್ತವಾಗಿ ಆಶ್ರಯದಾತನನ್ನಾಗಿ, ಮಹಾ ವೀರ ಶೂರನನ್ನಾಗಿ ಹಾಗೂ ದುರಂತ ನಾಯಕನನ್ನಾಗಿ ಚಿತ್ರಿಸಿದ್ದಾರೆ.

‘ನಾನು ಗಂಧರ್ವ ಸತಿ’ ಎಂದು ಪರಿಚಯಿಸಿಕೊಂಡ ದಾಸಿ ವೇಷದ ದ್ರೌಪದಿಯ ಮೇಲೆ ಕೀಚಕ ಸಂದೇಹ ತಾಳುತ್ತಾನೆ. ಎಲ್ಲಿ ತಮ್ಮ ಅಜ್ಞಾತವಾಸದ ಗುಟ್ಟು ರಟ್ಟಾಗುತ್ತದೊ ಎಂಬ ಆತಂಕದಿಂದ ನೃತ್ಯಶಾಲೆಯಲ್ಲಿ ಕೌತುಕ ತೋರಿಸುವ ನೆಪದಲ್ಲಿ ಕೀಚಕನನ್ನು ಬರಮಾಡಿಕೊಂಡು ಭೀಮಸೇನನಿಂದ ಕೊಲ್ಲಿಸುತ್ತಾಳೆ. ಇದು ಈ ನಾಟಕದ ಒಂದೆಳೆ ಕಥೆ.

ಆದರೆ ಕೇವಲ ಶಂಕೆ ವ್ಯಕ್ತಪಡಿಸಿದ್ದಕ್ಕೆ ಆಶ್ರಯದಾತನಿಗೆ ಸಾವಿನ ಶಿಕ್ಷೆ ಕೊಟ್ಟಿದ್ದು ಅದ್ಯಾಕೋ ಸಮರ್ಥನೀಯ ಎನ್ನಿಸುವಂತಿಲ್ಲ. ಈ ನಾಟಕದ ಕೀಚಕ ದ್ರೌಪದಿಗೆ ಯಾವುದೇ ರೀತಿ ತೊಂದರೆ ಕೊಡದಿದ್ದರೂ ಆತನನ್ನು ವಂಚನೆಯಿಂದ ವಧೆ ಮಾಡಿಸಿದ್ದು ಅಷ್ಟೊಂದು ಸಮಂಜಸವೂ ಅಲ್ಲ. ಇಷ್ಟಕ್ಕೂ ಈ ನಾಟಕದಲ್ಲಿ ಕೀಚಕನನ್ನು ಕೊಲ್ಲುವುದಕ್ಕೆ ಗಟ್ಟಿಯಾದ ಕಾರಣವೂ ಇಲ್ಲ. ದುರ್ಬಲವಾದ ಬುನಾದಿಯ ಮೇಲೆ ಸುಂದರವಾದ ನಾಟಕವನ್ನು ಕಟ್ಟುವ ಪ್ರಯತ್ನವನ್ನು ಯುವ ನಿರ್ದೇಶಕ ಕೃಷ್ಣ ಕಶ್ಯಪ್ ಮಾಡಿದ್ದಾರೆ.

ನಾಟಕದ ಆಶಯಕ್ಕಿಂತ ಕಟ್ಟಲ್ಪಟ್ಟ ಆಕೃತಿ ಮನಮೋಹಕವಾಗಿದೆ. ರಂಗದಂಗಳದಲ್ಲಿ ಬಣ್ಣದೋಕುಳಿಯನ್ನು ಹರಿಸಿರುವ ಜಗಮಗಿಸುವ ಬೆಳಕಿನ ವಿನ್ಯಾಸ, ಹಾಡು ಸಂಗೀತಗಳ ಅಬ್ಬರಗಳು ನೋಡುಗರ ಕಣ್ಣು ಕಿವಿಗಳಿಗೆ ಹಬ್ಬವನ್ನುಂಟು ಮಾಡಿವೆ. ನಾಟಕದಾದ್ಯಂತ ಸಾಂದರ್ಭಿಕವಾಗಿ ಅಳವಡಿಸಲಾದ ಕಥಕ್ ಹಾಗೂ ಭರತನಾಟ್ಯ ನೃತ್ಯಗಳು ನೋಡಲು ಮನಮೋಹಕವಾಗಿವೆ. ಸೆಟ್ ಪ್ರಾಪರ್ಟಿ ಕಾಸ್ಟೂಮ್‌ ಗಳು ಕಣ್ಮನ ಸೆಳೆಯುವಂತಿವೆ. ಒಟ್ಟಾರೆಯಾಗಿ ಇದು ಒಂದು ನಾಟಕ ಎನ್ನುವುದಕ್ಕಿಂತಲೂ ‘ಡಾನ್ಸ್ ಡ್ರಾಮಾ ಮ್ಯೂಸಿಕ್ ಇವೆಂಟ್’ ಎನ್ನುವಂತೆ ಮೂಡಿಬಂದು ನೋಡುಗರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

ಆದರೆ  ಅಗತ್ಯ ಇರಲಿ ಇಲ್ಲದೇ ಇರಲಿ ಪ್ರತಿ ದೃಶ್ಯದಲ್ಲೂ ತುಸು ಹೆಚ್ಚಿಗೇ ಬಳಸಲಾದ ಸ್ಮೋಕ್ ಎಫೆಕ್ಟ್ (ಹೊಗೆ) ಮಾತ್ರ ಅತಿಯಾದಂತೆನ್ನಿಸಿ ವೀಕ್ಷಕರಿಗೆ ಸ್ವಲ್ಪ ಕಿರಿಕಿರಿಯನ್ನುಂಟು ಮಾಡಿದೆ. ಇಲ್ಲಿ ಬೆಳಕು ಸಂಗೀತ ಸ್ಮೋಕು ಎಲ್ಲವೂ ನಾಟಕದ ದೃಶ್ಯ ಸೃಷ್ಟಿಯ ಅಗತ್ಯವನ್ನು ಮೀರಿದ್ದು, ಇವುಗಳು ಸೃಷ್ಟಿಸಿದ ಮಾಂತ್ರಿಕ ಮೋಹಕತೆಗಳು ಪಾತ್ರಗಳ ಅಭಿನಯದ ಪ್ರಭಾವವನ್ನು ಸ್ವಲ್ಪ ಕಡಿಮೆ ಗೊಳಿಸಿದಂತಿವೆ.

ಸಂಗೀತ ನೃತ್ಯ ಬೆಳಕಿನ ಅಲಂಕಾರಗಳು ಅತಿಯಾದಷ್ಟೂ ಅಭಿನಯದ ಅನನ್ಯತೆಯ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ನಟನೆ ಹಾಗೂ ಭಾವನೆಗಳನ್ನು ನೋಡುಗರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸ್ಪಾಟ್ ಲೈಟ್ಸ್ ಗಳನ್ನು ಬಳಸಬೇಕಾಗಿತ್ತು. ಅಗತ್ಯ ಇದ್ದಷ್ಟೇ ಹಾಡು ಸಂಗೀತ ಹಾಗೂ ಸ್ಮೋಕ್ ಇಫೆಕ್ಟ್ ಸೃಷ್ಟಿಸಬೇಕಿತ್ತು. ಯಾವಾಗ ಅಭಿನಯ ಪ್ರಧಾನವಾಗಬೇಕಿದ್ದ ನಾಟಕ ಅಲಂಕಾರಿಕ ಪ್ರಧಾನವಾಗುತ್ತದೋ ಆಗ ಪ್ರೇಕ್ಷಕರ ಗಮನ ಅಲಂಕಾರದತ್ತ ಪಲ್ಲಟವಾಗುತ್ತದೆ. ಊಟಕ್ಕೆ ಉಪ್ಪಿನಕಾಯಿ ಪೂರಕವಾಗಿರಬೇಕೇ ಹೊರತು ತರಾವರಿ ಉಪ್ಪಿನಕಾಯಿಗಳ ರುಚಿಯೇ ಊಟವಾಗಬಾರದು. ಈ ಪ್ರದರ್ಶನವನ್ನು ನಾಟಕ ಎಂದುಕೊಳ್ಳುವುದಾದರೆ ಈ ರೀತಿ ಭಾವಿಸಬಹುದಾಗಿದೆ.  ಅದರ ಬದಲು ಇದನ್ನು ಸಂಗೀತ ನೃತ್ಯ ಬೆಳಕಿನ ಡಾನ್ಸ್ ಡ್ರಾಮಾ ಈವೆಂಟ್ ಎಂದುಕೊಳ್ಳುವುದಾದರೆ, ಆ ನಿಟ್ಟಿನಲ್ಲಿ ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ, ಟಿಕೇಟ್ ಕೊಂಡು ಬಂದ ಪ್ರೇಕ್ಷಕರಿಗೆ ಮನರಂಜನೆಯ ಹಬ್ಬದೂಟವನ್ನೇ ಬಡಿಸಿದೆ.

ಈ ಪ್ರಯೋಗದ ಯಶಸ್ಸಿನ ಹಿಂದೆ ಈ ನಾಟಕವನ್ನು ರಚಿಸಿ ಭೀಮನ ಪಾತ್ರದಲ್ಲೂ ನಟಿಸಿದ ಕಾಲಾ ವಿಶ್ವನಾಥರವರ ಶ್ರಮ ಅಪಾರವಾಗಿದೆ. ಸಂಭಾಷಣೆಯ ಪ್ರಾಸಬದ್ಧತೆ ಹಾಗೂ ಶಬ್ದ ಲಾಲಿತ್ಯ ಗಮನ ಸೆಳೆಯುವಂತಿವೆ. ಕೀಚಕ ಪಾತ್ರವನ್ನೂ ಅಭಿನಯಿಸಿ ಈ ನಾಟಕವನ್ನೂ ನಿರ್ದೇಶಿಸಿದ ಕೃಷ್ಣ ಕಶ್ಯಪ್ ರವರ ಪರಿಶ್ರಮ ನಾಟಕದಾದ್ಯಂತ ಗೋಚರವಾಗುತ್ತದೆ. ಈ ತಂದೆ ಮಗ ಇಬ್ಬರೂ ಸೇರಿಕೊಂಡು ಬಹುದಿನಗಳ ಕಾಲ ನೋಡುಗರ ನೆನಪಿನಲ್ಲಿ ಉಳಿಯಬಹುದಾದ ಪ್ರಯೋಗವೊಂದನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮ ರಂಗಭೂಮಿಯ ಬದ್ಧತೆಯನ್ನು ಸಿದ್ದಮಾಡಿ ತೋರಿಸಿದ್ದಾರೆ.

ಪ್ರತಿ ಪಾತ್ರಗಳೂ ಹೆಡ್ ಫೋನ್ ಮೈಕ್ ಬಳಸಿದ್ದು ಸಂಭಾಷಣೆಯಲ್ಲಿ ಹೆಚ್ಚಿನ ಸ್ಪಷ್ಟತೆಯನ್ನು ಹುಟ್ಟಿಸಿದರೂ ಅದ್ಯಾಕೋ ರೆಕಾರ್ಡೆಡ್ ಸಂಭಾಷಣೆ ಎನ್ನುವಂತೆ ಕೇಳುಗರಿಗೆ ಭಾಸವಾಗುತ್ತಿತ್ತು. ಸ್ಟೇಜ್ ಮೈಕ್ ಗಳನ್ನೇ ಪರಿಣಾಮಕಾರಿಯಾಗಿ ಬಳಸಿದ್ದರೆ ಈ ಸಂದೇಹ ನಿವಾರಣೆಯಾಗ ಬಹುದಾಗಿತ್ತು. ಪ್ರವೀಣ್ ಡಿ ರಾವ್ ರವರಂತಹ ಪ್ರಸಿದ್ಧರಿಂದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿಸಿ ರೆಕಾರ್ಡ್ ಮಾಡಿಸಲಾಗಿದ್ದು, ಅದರ ಬದಲಾಗಿ ಲೈವ್ ಹಾಡು ಸಂಗೀತಗಳನ್ನು ಬಳಸಿದ್ದರೆ ಕೇಳುಗರಿಗೆ ಅಸಲಿ ಅನುಭವವಾಗುತ್ತಿತ್ತು ಹಾಗೂ ಅಪಾರ ಹಣವೂ ಉಳಿತಾಯವಾಗುತ್ತಿತ್ತು.

ಕೀಚಕ ಸೈರಂಧ್ರಿ ಹಾಗೂ ಭೀಮ ಈ ಮೂರೇ ಪ್ರಮುಖ ಪಾತ್ರಗಳಿರುವ ಈ ಪುಟ್ಟ ನಾಟಕವನ್ನು ವಿಸ್ತರಿಸಿ ಮೂವತ್ತಕ್ಕೂ ಹೆಚ್ಚು ಕಲಾವಿದರನ್ನು ಬಳಸಲಾಗಿದ್ದು ನಾಟಕಕ್ಕೆ ಅದ್ದೂರಿತನವನ್ನು ತಂದುಕೊಟ್ಟಿದೆ. ಬಲರಾಮನ ಯುದ್ಧ ತರಬೇತಿಯ ಫ್ಲಾಶ್ ಬ್ಯಾಕ್ ದೃಶ್ಯ ಕಡಿತಗೊಳಿಸಿದ್ದರೂ ನಾಟಕಕ್ಕೇನೂ ತೊಂದರೆ ಆಗುತ್ತಿರಲಿಲ್ಲ.

ಏನೇ ಆಗಲಿ ಈ ರೀತಿಯ ಅದ್ದೂರಿ ಪ್ರಯತ್ನಗಳು ರಂಗಭೂಮಿಯಲ್ಲಿ ಆಗುತ್ತಲೇ ಇರಬೇಕು. ಚಿಕ್ಕ ಪುಟ್ಟ ಪರಿಷ್ಕರಣೆಗಳ ಮೂಲಕ ಇನ್ನೂ ಹೆಚ್ಚು ಪ್ರದರ್ಶನಗಳನ್ನು ಕಾಣುವಂತಾಗಬೇಕು. ರಂಗಬದ್ಧತೆ ಇರುವ ರಂಗಶಿಕ್ಷಕ ಕೃಷ್ಣ ಕಶ್ಯಪ್ ರವರಂತಹ ಯುವ ಪ್ರತಿಭೆ ರಂಗಭೂಮಿಗೆ ದಕ್ಕಬೇಕು.

ಶಶಿಕಾಂತ ಯಡಹಳ್ಳಿ

ರಂಗ ಕರ್ಮಿ

ಇದನ್ನೂ ಓದಿ- “ಚಿಂತನೆಯೇ ಭಿನ್ನಮತವಾದಾಗ – ಭಾಷೆ ಮತ್ತು ಜಗತ್ತಿನ ಕುರಿತು ಆಲೋಚನೆಗಳು”- ಒಂದು ಉಪನ್ಯಾಸದ ಸುತ್ತ ಆಲೋಚನೆಯ ಹುತ್ತ

More articles

Latest article

Most read