ಬೆಂಗಳೂರು : ಮುಂದಿನ ಎರಡು ವರ್ಷ ಕಾಂಗ್ರೆಸ್ ಕಾರ್ಯಕರ್ತರ ವರ್ಷ. ಇದನ್ನು ಅಗ್ನಿ ಪರೀಕ್ಷೆ ಎಂದೇ ಭಾವಿಸಿ ಈ ಎರಡು ವರ್ಷ ರಾಜ್ಯದ ಚುನಾವಣೆ ಹಾಗೂ ನಂತರದ ಒಂದು ವರ್ಷ ಲೋಕಸಭೆ ಚುನಾವಣೆಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಹಾಗೂ ಆಸ್ ಎಸ್ಎಸ್ ಅನ್ನು ಮಣಿಸಬೇಕಾಗುತ್ತದೆ. ಇದಕ್ಕೆ ನಿಮ್ಮೆಲ್ಲರ ಶಕ್ತಿ ಹಾಗೂ ಸಹಕಾರ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರ್ವೋಚ್ಛ ನಾಯಕಿ ಸೋನಿಯಾ ಗಾಂಧಿ ಅವರಿಗಾಗಿ ಹೋರಾಟ ನಡೆಸಬೇಕಿದೆ. ಇಡೀ ಕಾಂಗ್ರೆಸ್ ಪಕ್ಷ ಅವರನ್ನು ಪ್ರಧಾನಮಂತ್ರಿ ಮಾಡಲು ತೀರ್ಮಾನಿಸಿದಾಗಲೂ ಅವರು ನಾನು ಈ ಹುದ್ದೆ ಸ್ವೀಕರಿಸುವುದಿಲ್ಲ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಮಾಡಿ ಎಂದು ತ್ಯಾಗ ಮಾಡಿರುವುದು ನಮ್ಮ ಮುಂದೆ ಇದೆ. ಅವರೇ ಕಾಂಗ್ರೆಸ್ ಪಕ್ಷವನ್ನು ಉಳಿಸಲು ತ್ಯಾಗ ಮಾಡಿರುವಾಗ, ನಾವು ಪಕ್ಷವನ್ನು ಬೆಳೆಸಲು ಎಲ್ಲರೂ ಸೇರಿ ಕೆಲಸ ಮಾಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ಸಂವಿಧಾನ ಹಾಗೂ ಸೋನಿಯಾ ಗಾಂಧಿ ಅವರ ಆಶಯದಂತೆ ಕೆಲಸ ಮಾಡುವೆ. ಮಹಿಳೆಯರಿಗೆ ಶೇ. 33ರಷ್ಟು ಅವಕಾಶ ಸಿಕ್ಕೇ ಸಿಗುತ್ತದೆ. ಯಾವುದೇ ಜಾತಿ, ಧರ್ಮ, ಭಾಷೆ ತಾರತಮ್ಯವಿಲ್ಲದೇ ಯುವಕರನ್ನು ಸೇರಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಸೌಕರ್ಯವಾಗಿರುವವರು ಇದ್ದರೂ ಕಾಂಗ್ರೆಸ್ ಬಡವರ ಪಕ್ಷ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಳಿ ರುವುದು 700 ಕೋಟಿ ಮಾತ್ರ. ಬಿಜೆಪಿಯಲ್ಲಿ 10 ಸಾವಿರ ಕೋಟಿ ಇದೆ ಎಂದರು.
ನೀವು ನನಗೆ ಶಾಲು ಹೂವ ಹಾಕುವುದಾದರೆ ಅದರ ಬದಲು ಅದೇ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿ. ಆ ಮೂಲಕ ಪಕ್ಷದ ಖಜಾನೆ ತುಂಬಲಿ. 2001ರಲ್ಲಿ ಬೆಂಗಳೂರು ಪಾಲಿಕೆ ಚುನಾವಣೆ ನಡೆಸಲು ನನಗೆ ಜವಾಬ್ದಾರಿ ನೀಡಿದ್ದರು. ಹೊಟೇಲ್ ವೇಯ್ಟರ್, ಕಸ ಗುಡಿಸುವವರು ಸೇರಿದಂತೆ ಸಣ್ಣ ಸಮುದಾಯದವರಿಗೆ ಟಿಕೆಟ್ ಕೊಟ್ಟಾಗ ಎಲ್ಲರು ಆಶ್ಟರ್ಯವಾಗಿದ್ದರು. ಆಗ ಎಲ್ಲರೂ ಗೆದ್ದಿದ್ದರು. ನಾವು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ, ನಮಗೆ ಅಧಿಕಾರ ಸಿಗುತ್ತೋ ಇಲ್ಲವೋ ಎಂಬ ಭಾವನೆ ಬೇಡ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಟ್ಟಾಳು, ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ ಅವರ ನಿಧನ ನಮ್ಮೆಲ್ಲರಿಗೂ ದುಃಖ ತರಿಸುವ ವಿಚಾರ. ಅವರು ತಾಳ್ಮೆಗೆ ಮತ್ತೊಂದು ರೂಪವಾಗಿದ್ದರು. ಅಂತಹ ವ್ಯಕ್ತಿ ತಮ್ಮ ಆರೋಗ್ಯ ಸಮಸ್ಯೆ ಇದ್ದರೂ ವೈದ್ಯರ ವಿಶ್ರಾಂತಿ ಸಲಹೆ ಇದ್ದರೂ ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲೇಬೇಕು ಎಂದು ಭಾಗವಹಿಸಿದರು. ಇದು ಅವರ ಬದ್ಧತೆಗೆ ಉದಾಹರಣೆ. ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಅತ್ಯುತ್ತಮ ಸಂದೇಶ ನೀಡಿ ಹೋಗಿದ್ದಾರೆ. ಕೆಲಸದ ಜೊತೆಗೆ ಆರೋಗ್ಯವೂ ಮುಖ್ಯ. ಹೀಗಾಗಿ ಎಲ್ಲರೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಸಂದೇಶ ನೀಡಿದ್ದಾರೆ ಎಂದರು.
ಜೂ.21ರಂದು ಅರಮನೆ ಮೈದಾನದಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು. ಹರಿಪ್ರಸಾದ್ ಅವರ ಮುಂದೆ ಸಾಕಷ್ಟು ಸವಾಲುಗಳಿದ್ದು, 2 ಉಪಚುನಾವಣೆಗಳು, ಜಿಬಿಎ ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆ 2 ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಅವರ ಜೊತೆ ಎಲ್ಲಾ ಕಾರ್ಯಕರ್ತರು ನಿಂತು ಅವರನ್ನು ಬೆಂಬಲಿಸಬೇಕು. ಅವರು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲೂ ಸಂಘಟನೆ ಮಾಡಿ ಅಪಾರ ಅನುಭವ ಹೊಂದಿದ್ದಾರೆ. ಅವರ ಕಾರ್ಯ ಯೋಜನೆಗೆ ನಾವು ಸ್ಪಂದಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಇಡೀ ಪಕ್ಷ ಅವರ ಜೊತೆಗಿದೆ ಎಂದರು.
ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ ಸಿಎಂ ಸ್ಥಾನ ಬೇಕೋ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೋ ಎಂದು ಕೇಳಿದರೆ ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಯ್ಕೆ ಮಾಡಿಕೊಳ್ಳುವಂತ ವ್ಯಕ್ತಿ. ಅವರಿಗೆ ಅಧಿಕಾರ ಮುಖ್ಯವಲ್ಲ. ಅವರಿಗೆ ಸಂಘಟನೆ ಇಷ್ಟ. ಅವರ ಜೊತೆ ನಾವು ಎಲ್ಲರೂ ಕೈಜೋಡಿಸಿ ದುಡಿಯಬೇಕು ಎಂದರು.

