ಬೆಂಗಳೂರು/ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಾಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿದೆ. ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶಿಸಿದೆ.
CWRC ಮಾಡಿದ್ದ ಶಿಫಾರಸಿನಂತೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ತಮಿಳುನಾಡಿಗೆ ಹರಿಸಬೇಕಾಗುತ್ತದೆ. ಈ ಪ್ರಮಾಣವನ್ನು ಲೆಕ್ಕ ಹಾಕಿದರೆ 15 ದಿನಗಳಲ್ಲಿ ಒಟ್ಟು ಸುಮಾರು 1.80 ಲಕ್ಷ ಕ್ಯೂಸೆಕ್-ಡೇಸ್ ನೀರು ಹರಿಯಲಿದ್ದು, ಅದು ಸುಮಾರು 15.56 ಟಿಎಂಸಿಗೆ ಸಮಾನವಾಗುತ್ತದೆ.
ಕರ್ನಾಟಕದ ಪರವಾಗಿ CWMA ಸಭೆಯಲ್ಲಿ ರಾಜ್ಯದ ಜಲಾಶಯಗಳ ನೀರಿನ ಲಭ್ಯತೆ, ಒಳಹರಿವಿನ ಪ್ರಮಾಣ, ರಾಜ್ಯದ ರೈತರ ಕೃಷಿ ಅಗತ್ಯ, ಕುಡಿಯುವ ನೀರಿನ ಅವಶ್ಯಕತೆ ಹಾಗೂ ಮುಂದಿನ ದಿನಗಳ ಮಳೆಯ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಸಮರ್ಥ ವಾದ ಮಂಡಿಸಲಾಗಿತ್ತು. ಆದರೆ ಕರ್ನಾಟಕದ ವಾದವನ್ನು ಪರಿಗಣಿಸದೆ CWRCಯ ಶಿಫಾರಸನ್ನೇ CWMA ಎತ್ತಿಹಿಡಿದಿರುವುದು ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ. ಕಾನೂನು ತಜ್ಞರ ಜತೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
CWMAಯ ಆದೇಶದ ಪ್ರಕಾರ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಕರ್ನಾಟಕದಿಂದ ತಮಿಳುನಾಡಿನತ್ತ ಸುಮಾರು 15.56 ಟಿಎಂಸಿ ನೀರು ಹರಿಯಲಿದೆ. ಇಷ್ಟು ಪ್ರಮಾಣದ ನೀರು ಬಿಡುಗಡೆ ಮಾಡುವ ಸಂದರ್ಭದಲ್ಲಿ ರಾಜ್ಯದ ಕಾವೇರಿ ಜಲಾಶಯಗಳಲ್ಲಿನ ಪ್ರಸ್ತುತ ಸಂಗ್ರಹ, ಒಳಹರಿವು ಹಾಗೂ ಮುಂದಿನ ದಿನಗಳ ಮಳೆಯ ಪ್ರಮಾಣ ಅತ್ಯಂತ ಮಹತ್ವ ಪಡೆಯಲಿದೆ.
ಚರ್ಚಿಸಿ ತೀರ್ಮಾನ : ಸಿಎಂ
ವಿಧಾನಸೌಧದಲ್ಲಿ ಮಾತನಾಡಿದ ಅವರು, 12 ಸಾವಿರ ಕ್ಯೂಸೆಕ್ ನೀರು ಬಿಡುವ ಆದೇಶ ಬಗ್ಗೆ ಗಮನಕ್ಕೆ ಬಂದಿದೆ. ನಮ್ಮ ಒಳಹರಿವು ಎಷ್ಟಿದೆ ಅಂತ ನೋಡ್ತಾ ಇದ್ದೀನಿ. ನಮ್ಮ ಪರಿಸ್ಥಿತಿ ನೋಡಿಕೊಂಡು ನಮ್ಮ ರೈತರನ್ನ ಕಾಪಾಡೋ ಕರ್ತವ್ಯ ಇದೆ. ರೈತರನ್ನು ಕಾಪಾಡಬೇಕು. ಕೋರ್ಟ್ ಆದೇಶ ಕೂಡಾ ಪಾಲನೆ ಮಾಡಬೇಕು. ಇವೆರಡನ್ನು ಗಮನದಲ್ಲಿಟ್ಟುಕೊಂಡು ನಮ್ಮ ನೀರಾವರಿ ಸಚಿವರೊಂದಿಗೆ ಚರ್ಚಿಸುತ್ತೇವೆ ಎಂದರು.
ಕರ್ನಾಟಕದ ವಾದದ ಪ್ರಮುಖ ಅಂಶವೆಂದರೆ, ಪ್ರಸ್ತುತ ನೀರಿನ ಲಭ್ಯತೆಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗದು ಎಂಬುದು. ರಾಜ್ಯದ ಕುಡಿಯುವ ನೀರಿನ ಅಗತ್ಯ, ನಿಂತಿರುವ ಬೆಳೆಗಳಿಗೆ ಬೇಕಾಗುವ ನೀರು ಹಾಗೂ ಮುಂದಿನ ಮಳೆ ಕೊರತೆಯ ಸಾಧ್ಯತೆಯನ್ನು ಪರಿಗಣಿಸಬೇಕು ಎಂಬುದು ಕರ್ನಾಟಕದ ನಿಲುವಾಗಿದೆ.
ಮತ್ತೊಂದೆಡೆ, ತಮಿಳುನಾಡು ತನ್ನ ಪಾಲಿನ ಕಾವೇರಿ ನೀರು ಸಿಗಬೇಕೆಂದು ಒತ್ತಾಯಿಸುತ್ತಿದ್ದು, ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಮತ್ತು ಬಿಳಿಗುಂಡ್ಲು ಹರಿವಿನ ಆಧಾರದ ಮೇಲೆ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ CWMAಯ ನಿರ್ಧಾರ ಇದೀಗ ರಾಜ್ಯ ಸರ್ಕಾರಕ್ಕೆ ಮುಂದಿನ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳ ಸವಾಲನ್ನು ತಂದಿದೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲಿದೆಯೇ, CWMA ಆದೇಶದ ವಿರುದ್ಧ ಯಾವ ರೀತಿಯ ಕಾನೂನು ಪರಿಹಾರ ಪಡೆಯಲಿದೆ ಮತ್ತು ನೀರು ಬಿಡುಗಡೆ ಕುರಿತು ರಾಜ್ಯದ ಮುಂದಿನ ನಿಲುವು ಏನು ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಗೌರವ್ ಗುಪ್ತಾ ಅವರ ಪ್ರಕಾರ, ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಹೀಗಾಗಿ ಕರ್ನಾಟಕ ಸರ್ಕಾರದ ಮುಂದಿನ ಹೆಜ್ಜೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ CWRC ಶಿಫಾರಸು ಮತ್ತು CWMA ಆದೇಶದ ನಡುವೆ ರಾಜ್ಯದ ವಾದವನ್ನು ಸಮರ್ಥವಾಗಿ ಮಂಡಿಸಿದ್ದೇವೆ ಎಂಬ ಅಧಿಕಾರಿಗಳ ಹೇಳಿಕೆಯ ನಡುವೆಯೇ, 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶ ಕರ್ನಾಟಕದ ರೈತರು ಹಾಗೂ ಕಾವೇರಿ ಕೊಳ್ಳದ ಜನರಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ಒಟ್ಟಾರೆ, CWMAಯ ಈ ನಿರ್ಧಾರ ಜಾರಿಯಾದರೆ 15 ದಿನಗಳಲ್ಲಿ ಸುಮಾರು 15.56 ಟಿಎಂಸಿ ನೀರು ತಮಿಳುನಾಡಿನತ್ತ ಹರಿಯಲಿದೆ. ಈಗ ರಾಜ್ಯ ಸರ್ಕಾರದ ಮುಂದಿರುವ ಪ್ರಮುಖ ಪ್ರಶ್ನೆ, ಈ ಆದೇಶವನ್ನು ಯಾವ ರೀತಿಯಲ್ಲಿ ಕಾನೂನಾತ್ಮಕವಾಗಿ ಪ್ರಶ್ನಿಸಲಿದೆ ಮತ್ತು ಕರ್ನಾಟಕದ ರೈತರ ಹಿತಾಸಕ್ತಿಯನ್ನು ಹೇಗೆ ರಕ್ಷಿಸಲಿದೆ ಎಂಬುದಾಗಿದೆ.

