ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ವಿಚಾರವಾಗಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಡುವೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಾಕ್ಸಮರ ನಡೆದಿದೆ.
ರಾಹುಲ್ ಗಾಂಧಿ ಅವರು ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಅವಕಾಶ ನೀಡಲಾಗುತ್ತಿಲ್ಲ ಎಂಬ ಅರ್ಥದಲ್ಲಿ ನೀಡಿದ್ದ ಹೇಳಿಕೆಯನ್ನು ರಿಜಿಜು ಎಕ್ಸ್‌ನಲ್ಲಿ ಹಂಚಿಕೊಂಡು, ಕಾಂಗ್ರೆಸ್ ನಿಲುವಿನಲ್ಲಿ ಬದಲಾವಣೆಯ ಸ್ಪಷ್ಟ ಸೂಚನೆ ಕಾಣುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು. ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಯಾವುದೇ ಷರತ್ತಿಲ್ಲದೆ ಬೆಂಬಲ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಈಗಾಗಲೇ ಬೆಂಬಲ ನೀಡಿದೆ ಎಂದು ನೆನಪಿಸಿದರು. 2023ರಲ್ಲೇ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಕಾಯ್ದೆಯನ್ನು ಇನ್ನೂ ಏಕೆ ಜಾರಿಗೆ ತಂದಿಲ್ಲ ಎಂದು ಅವರು ಪ್ರಶ್ನಿಸಿದರು.
2023ರಲ್ಲಿ ಅಂಗೀಕಾರಗೊಂಡಿರುವ ಕಾಯ್ದೆಯನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೆ ತರಬೇಕು. ಅದನ್ನು ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯೊಂದಿಗೆ ಏಕೆ ಜೋಡಿಸಲಾಗುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಿಜಿಜು, ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನವು ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ ಕಾನೂನಿನ ಮೂಲಕವೇ ಸಂಪರ್ಕ ಹೊಂದಿದೆ ಎಂದು ಹೇಳಿದ್ದಾರೆ. 2023ರ 106ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಪ್ರಕಾರ, ಸಂಬಂಧಿತ ಜನಗಣತಿ ಹಾಗೂ ನಂತರದ ಕ್ಷೇತ್ರ ಪುನರ್‌ವಿಂಗಡಣೆ ಪೂರ್ಣಗೊಂಡ ಬಳಿಕ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂಬುದು ಸರ್ಕಾರದ ನಿಲುವಾಗಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ 2023ರಲ್ಲಿ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಅಂಗೀಕಾರಗೊಂಡಿತ್ತು. ಆದರೆ ಅದರ ಅನುಷ್ಠಾನವು ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ ಸಂಬಂಧ ಹೊಂದಿರುವುದರಿಂದ, ಕಾಯ್ದೆ ಅಂಗೀಕಾರಗೊಂಡ ತಕ್ಷಣವೇ ಮೀಸಲಾತಿ ಜಾರಿಗೆ ಬಂದಿಲ್ಲ.
ಇದೀಗ 2029ರ ಲೋಕಸಭಾ ಚುನಾವಣೆಗೆ ಮುನ್ನವೇ ಮಹಿಳಾ ಮೀಸಲಾತಿ ಜಾರಿಗೆ ತರುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರ ಮತ್ತೆ ರಾಜಕೀಯವಾಗಿ ಮುನ್ನೆಲೆಗೆ ಬಂದಿದೆ. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಕುರಿತ ಪ್ರಸ್ತಾವನೆಗಳ ಬಗ್ಗೆ ಸರ್ಕಾರವು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ಇತ್ತೀಚೆಗೆ ರಿಜಿಜು ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳ ಕುರಿತು ಚರ್ಚಿಸಿದ್ದರು. ಆದರೆ ಕಾಂಗ್ರೆಸ್ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ಮಹಿಳಾ ಮೀಸಲಾತಿಯನ್ನು ಪ್ರಸ್ತುತ ಲೋಕಸಭೆಯ 543 ಸ್ಥಾನಗಳ ವ್ಯಾಪ್ತಿಯಲ್ಲೇ ಜಾರಿಗೆ ತರಬೇಕು ಎಂಬುದು ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ.
ಮಹಿಳಾ ಮೀಸಲಾತಿ ಜಾರಿಗೆ ಕಾಂಗ್ರೆಸ್ ತಾತ್ವಿಕವಾಗಿ ವಿರೋಧಿಸುತ್ತಿಲ್ಲ. ಆದರೆ ಅದನ್ನು ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ ಜೋಡಿಸುವ ಮೂಲಕ ಅನುಷ್ಠಾನವನ್ನು ಮುಂದೂಡಬಾರದು ಎಂಬುದು ಕಾಂಗ್ರೆಸ್ ವಾದ. ಮತ್ತೊಂದೆಡೆ, ಸಂವಿಧಾನದಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯನ್ನು ಅನುಸರಿಸಿಯೇ ಮೀಸಲಾತಿ ಜಾರಿಗೆ ತರಬೇಕಾಗುತ್ತದೆ ಎಂಬುದು ಕೇಂದ್ರ ಸರ್ಕಾರದ ಪ್ರತಿಪಾದನೆಯಾಗಿದೆ.

