ಮೇ 19, 1982. ಅಂತಿಮ ಬಿ ಎಸ್ ಸಿ ಪರೀಕ್ಷೆಗಳ ಕೊನೆಯ ದಿನ. ಪ್ರಶ್ನೆಪತ್ರಿಕೆಗೆ ಉತ್ತರಿಸುವ ಕೆಲಸದಲ್ಲಿ ತಲ್ಲೀನನಾಗಿದ್ದೆ. ಪರೀಕ್ಷಾ ಮೇಲ್ವಿಚಾರಕರಾದ, ಕನ್ನಡ ಉಪನ್ಯಾಸಕ ಎಂ ರಾಮಚಂದ್ರರು ಬಳಿಗೆ ಬಂದವರೇ, ʼಯು ಅರ್ ಟು ಮೀಟ್ ದ ಪ್ರಿನ್ಸಿಪಾಲ್ʼ ಎಂಬ ಚೀಟಿಯನ್ನು ಡೆಸ್ಕ್ ನ ಮೇಲಿಟ್ಟರು. ಒಂದು ಕ್ಷಣ ಅಚ್ಚರಿ, ಭಯ ಎಲ್ಲವೂ ಆಯಿತು. ಭಯ ಯಾಕೆಂದರೆ, ಸಾಮಾನ್ಯವಾಗಿ ಏನಾದರೂ ತಪ್ಪು ಸಂಭವಿಸಿದಾಗ ಪ್ರಿನ್ಸಿಪಾಲರನ್ನು ಭೇಟಿಯಾಗಲು ಬರುವ ಕರೆಯದು. ಮೊದಲೇ ಪ್ರೊಫೆಸರ್ ಕಿಣಿಯವರ ಶಿಸ್ತು, ಸಿಟ್ಟು ಎಂದರೆ ಎಲ್ಲರಿಗೂ ಗೊತ್ತಿರುವಂಥದ್ದೇ.
ಪರೀಕ್ಷೆ ಮುಗಿದ ಬಳಿಕ ಹೆದರುತ್ತಲೇ ಪ್ರಿನ್ಸಿಪಾಲರ್ ಚೇಂಬರ್ ನತ್ತ ಸರಿದೆ. ಪ್ರಿನ್ಸಿಪಾಲರು ಏನೋ ಕೆಲಸದಲ್ಲಿ ತಲ್ಲೀನರಾಗಿದ್ದರು. ನನ್ನನ್ನು ನೋಡಿದವರೇ “ಬನ್ನಿ ಕುಳಿತುಕೊಳ್ಳಿ” ಎಂದರು. ಜವಾನನಿಗೆ ಹೇಳಿ ಚಹಾ ಕೂಡಾ ತರಿಸಿದರು.
“ಪರೀಕ್ಷೆ ಮುಗೀತಲ್ಲ, ಮುಂದೆ ಏನು ಮಾಡಬೇಕು ಎಂದಿದ್ದೀರಿ?” ಎಂದು ಮಾತು ಆರಂಭಿಸಿದರು. “ಮತ್ತೇನಿಲ್ಲ ಸಾರ್, ಉಡುಪಿಯಲ್ಲಿ ಬಿ ಎಡ್ ಓದುವ ಯೋಚನೆಯಿದೆ” ಎಂದೆ (ಬಿ ಎಡ್ ಮುಗಿಸಿ ಬಂದರೆ ತಮ್ಮ ಹೈಸ್ಕೂಲಿನಲ್ಲಿ ಕೆಲಸ ಕೊಡುವುದಾಗಿ ದುರ್ಗಾ ಹೈಸ್ಕೂಲಿನ ಸ್ಥಾಪಕ ಶಿರ್ವ ಶಿವಣ್ಣ ಶೆಟ್ಟರು ನನ್ನ ತಂದೆಯ ಬಳಿ ಹೇಳಿದ್ದರು). “ಅದು ಜುಲೈ ಮುಗಿದ ಆನಂತರವಲ್ಲವೇ, ಅಷ್ಟು ದಿನ ಏನು ಮಾಡುವ ಯೋಚನೆಯಿದೆ?” ಎಂದು ಕೇಳಿದರು. “ಸದ್ಯ ಏನೂ ಇಲ್ಲ ಸಾರ್” ಎಂದೆ. “ಹಾಗಾದರೆ ನಮ್ಮ ಕಿಣಿ ಅಂಡ್ ರಾವ್ ಕೆಮಿಸ್ಟ್ರಿ ಬುಕ್ ನ ಪ್ರತಿನಿಧಿಯಾಗಿ ನೀವು ಯಾಕೆ ಉತ್ತರ ಕರ್ನಾಟಕ ಪ್ರವಾಸ ಮಾಡಬಾರದು? ಕೆಲಸ ಮತ್ತೇನಿಲ್ಲ, ವಿಜ್ಞಾನ ಕಾಲೇಜುಗಳಿಗೆ ಭೇಟಿ ನೀಡುವುದು, ಅಲ್ಲಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ಕಂಡು ಅವರಿಗೆ ನಮ್ಮ ಪುಸ್ತಕ ನೀಡುವುದು, ವಿದ್ಯಾರ್ಥಿಗಳಿಗೆ ಆ ಪುಸ್ತಕವನ್ನು ಶಿಫಾರಸು ಮಾಡಲು ಹೇಳುವುದು ಅಷ್ಟೇ, ನಿಮಗೆ ಒಪ್ಪಿಗೆಯಾದರೆ, ನಾಳೆ ನಮ್ಮ ಕೆಮಿಸ್ಟ್ರಿ ವಿಭಾಗದ ಸೂರ್ಯನಾರಾಯಣ ರಾವ್ ಅವರನ್ನು ಭೇಟಿಯಾಗಿ. ಅವರು ಉಳಿದ ವ್ಯವಸ್ಥೆ ಮಾಡುತ್ತಾರೆ” ಎಂದರು. ಕ್ಷಣ ಕಾಲ ಯೋಚನೆಗೆ ಬಿದ್ದೆ. “ಸರಿ ಸಾರ್” ಎಂದು ಎದ್ದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೊರಗೆ ಎಂದೂ ಹೋಗದವ ನಾನು. ಏನು ಮಾಡುವುದು ಎಂಬ ಅಳುಕು ಒಂದೆಡೆಯಾದರೆ, ಹೇಗೂ ರಜೆಯಿದೆ, ಬೇರೆಯವರ ಖರ್ಚಿನಲ್ಲಿ ರಾಜ್ಯವನ್ನು ತಿರುಗಾಡುವ ಅಪರೂಪದ ಅವಕಾಶ ಯಾರಿಗೆ ತಾನೇ ದೊರೆತೀತು? ಎಂಬ ಯೋಚನೆ ಇನ್ನೊಂದು ಕಡೆ.
ನಾನು ಪ್ರವಾಸಕ್ಕೆ ಸಿದ್ಧನಾದೆ. ʼಎಂ ಶ್ರೀನಿವಾಸ್, ಬಿ ಎಸ್ ಸಿ, ಕಿಣಿ ಅಂಡ್ ರಾವ್ ಪಬ್ಲಿಷರ್ಸ್ ಪ್ರತಿನಿಧಿʼ ಎಂಬ ವಿಸಿಟಿಂಗ್ ಕಾರ್ಡ್ ಮುದ್ರಿಸಿ ಸಿದ್ಧಪಡಿಸಿಕೊಂಡೆ (250 ವಿಸಿಟಿಂಗ್ ಕಾರ್ಡ್ ಗೆ ಆದ ಒಟ್ಟು ಖರ್ಚು 33 ರುಪಾಯಿ). ಸೂರ್ಯನಾರಾಯಣ ರಾವ್ ಅವರು, ನಾನು ಯಾವ ಯಾವ ಊರುಗಳ, ಯಾವ ಯಾವ ಕಾಲೇಜುಗಳಿಗೆ ಭೇಟಿ ನೀಡಬೇಕು ಎಂಬ ವಿವರ ಒದಗಿಸಿ, ಸುಮಾರು 25 ಕೆಮಿಸ್ಟ್ರಿ (ದ್ವಿತೀಯ ಪಿಯುಸಿಗೆ ನಿಗದಿ ಪಡಿಸಿದ್ದು) ಪುಸ್ತಕ, 1200 ರುಪಾಯಿ ನಗದು, ಹುಬ್ಬಳ್ಳಿಯ ಯು ಆರ್ ಶೆಣೈ ಪುಸ್ತಕದಂಗಡಿಯ ಮಾಲೀಕರಿಗೆ ಒಂದು ಪತ್ರ (ಈತ ನಮ್ಮ ಪ್ರತಿನಿಧಿ, ಈತ ಕೇಳುವಷ್ಟು ಪುಸ್ತಕ ಮತ್ತು ಹಣ ಕೊಡಿ ಎಂಬ ಒಕ್ಕಣೆ) ನನಗೆ ಒಪ್ಪಿಸಿದರು.
ಶಿವಮೊಗ್ಗದ ಮಿನಿ ಬಸ್ ಹತ್ತಿದೆ
1982ರ ಜೂನ್ 31. ನನ್ನಲ್ಲಿ ಸರಿಯಾದ ಬ್ಯಾಗ್ ಇರಲಿಲ್ಲ. ಮುಷ್ತಾಕ್ ನಿಂದ ಎಂದು ಕಾಣುತ್ತದೆ, ಒಂದು ಬ್ಯಾಗ್ ಎರವಲು ಪಡೆದು, ಅದರಲ್ಲಿ 25 ಪುಸ್ತಕಗಳನ್ನು, ನನ್ನ ಬಟ್ಟೆ ಬರೆ ತುರುಕಿ, ಜೊತೆಗೆ ಇಲ್ಲಿ ಇನ್ನೇನು ಮಳೆಗಾಲ ಆರಂಭವಾಗಲಿರುವುದರಿಂದ ಒಂದು ದೊಡ್ಡ ಕೊಡೆ (ಮಡಚಲಾಗದ್ದು. ಈ ಕೊಡೆ ನನ್ನ ಪ್ರಯಾಣದಾದ್ಯಂತ ಒಂದು ದೊಡ್ಡ ಕಿರಿಕಿರಿಯಾಯಿತು. ಅನೇಕರು ನನ್ನನ್ನು ವಿಚಿತ್ರವಾಗಿ ನೋಡುವಂತೆಯೂ ಆಯಿತು. ಯಾಕೆಂದರೆ, ಉತ್ತರ ಕರ್ನಾಟಕದಲ್ಲಿ ಮಳೆಗಾಲ ಶುರುವಾಗಲು ಇನ್ನೂ ಮೂರು ವಾರಗಳ ಸಮಯವಿತ್ತು) ಹಿಡಿದುಕೊಂಡು, ಗೆಳೆಯರಿಗೆ ವಿದಾಯ ಹೇಳಿ ಶಿವಮೊಗ್ಗದ ಮಿನಿ ಬಸ್ ಹತ್ತಿದೆ.
ಎಲ್ಲೇ ಹೋಗಲೀ ಸಾಮಾನ್ಯವಾಗಿ ನನ್ನ ಕಾರ್ಯಕ್ರಮ ಹೀಗಿತ್ತು- ಆ ಊರಿನ ಲಾಡ್ಜ್ ನಲ್ಲಿ ಉಳಿದುಕೊಳ್ಳುವುದು. ಅಲ್ಲಿನ ವಿಜ್ಞಾನ ಕಾಲೇಜಿನ ವಿಳಾಸ ಪತ್ತೆ ಹಚ್ಚಿ, ಕೆಲ ಕೆಮಿಸ್ಟ್ರಿ ಪುಸ್ತಕ ಸಹಿತ ಅಲ್ಲಿಗೆ ಹೋಗುವುದು, ಕೆಮಿಸ್ಟ್ರಿ ವಿಭಾಗಕ್ಕೆ ಹೋಗಿ, “ನಾನು ಕಿಣಿ ಅಂಡ್ ರಾವ್ ಕೆಮಿಸ್ಟ್ರಿ ಪುಸ್ತಕದ ಪ್ರತಿನಿಧಿಯಾಗಿ ಬಂದಿದ್ದೇನೆ, ನೀವು ದಯವಿಟ್ಟು ನಿಮ್ಮ ವಿದ್ಯಾರ್ಥಿಗಳಿಗೆ ಈ ಪುಸ್ತಕವನ್ನು ಶಿಫಾರಸು ಮಾಡಬೇಕು” ಎಂದು ಅವರಲ್ಲಿ ವಿನಂತಿಸಿಕೊಳ್ಳುವುದು.
ಮೊದಲ ಬಾರಿ ಆಗುಂಬೆ ಘಾಟಿ ದಾಟಿದೆ. ದಿನದ ಪಯಣ ಮುಗಿಸಿ ಶಿವಮೊಗ್ಗದ ಒಂದು ಲಾಡ್ಜ್‌ನಲ್ಲಿ ಉಳಿದುಕೊಂಡೆ. ಮಾರನೇ ದಿನ ಮೊದಲ ಭೇಟಿ ಅಲ್ಲಿನ ಸಹ್ಯಾದ್ರಿ ಕಾಲೇಜಿಗೆ. ಆನಂತರ ಡಿ ವಿ ಎಸ್ ಕಾಲೇಜು. ಹೀಗೆ ನನ್ನ ಕಾಲೇಜು ಭೇಟಿಯ ಕಾರ್ಯಕ್ರಮ ಶುರುವಾಯಿತು.
ಇಂತಹ ಭೇಟಿಗಳ ಸಮಯದಲ್ಲಿ ಬಿಡುವು ಇದ್ದರೆ ಅಥವಾ ಕೆಲವೊಮ್ಮೆ ಬಿಡುವು ಮಾಡಿಕೊಂಡು ಆ ಊರಿನ ಚಾರಿತ್ರಿಕ ಮಹತ್ತ್ವದ ಸ್ಥಳಗಳಿಗೂ ಭೇಟಿ ನೀಡುತ್ತಿದ್ದೆ. ಯಾಕೆಂದರೆ ಚಿತ್ರದುರ್ಗ (ಮದಕರಿ ನಾಯಕನ ಕೋಟೆ), ಹಂಪಿ, ಬಿಜಾಪುರ (ಗೋಲ್ ಗುಂಬಜ್), ಬೀದರ್, ಬೈಲಹೊಂಗಲ ಮೊದಲಾದ ಐತಿಹಾಸಿಕ ಜಾಗಗಳೂ ನನ್ನ ಪ್ರಯಾಣದ ಪಟ್ಟಿಯಲ್ಲಿದ್ದವು.
ಪಯಣ ಮುಂದುವರಿಯಿತು. ಶಿವಮೊಗ್ಗ, ಭದ್ರಾವತಿ, ಚಿತ್ರದುರ್ಗ, ದಾವಣಗೆರೆ, ಹಂಸಭಾವಿ, ಹರಿಹರ, ಹಾವೇರಿ, ರಾಣಿಬೆನ್ನೂರು ದಾಟಿ ಹುಬ್ಬಳ್ಳಿ ಸೇರಿದೆ. ಇಷ್ಟಾಗುವಾಗ ನಾನು ಕಾರ್ಕಳದಿಂದ ತೆಗೆದುಕೊಂಡು ಹೋಗಿದ್ದ 25 ಪುಸ್ತಕಗಳು ಮುಗಿದಿದ್ದವು. ನನ್ನದು ಒಂದು ರೀತಿಯ ಈಸೋಪನ ಕತೆ. ಪಯಣ ಹೊರಡುವಾಗ ಸರಿಸುಮಾರು ಹತ್ತು ಕೆಜಿ ಭಾರದ ಪುಸ್ತಕಗಳು. ಒಂದೊಂದೇ ಊರು ದಾಟುತ್ತಿದ್ದಂತೆ ಹೊರೆ ಕಡಿಮೆಯಾಗುತ್ತಾ ಹೋಗುತ್ತದೆ. ಯು ಆರ್ ಶೆಣೈ ಪುಸ್ತಕದಂಗಡಿಯ ವಿಳಾಸ ಪತ್ತೆ ಹಚ್ಚಿ ಅಲ್ಲಿಗೆ ತಲಪಿದೆ. ಪ್ರೊಫೆಸರ್ ಕಿಣಿಯವರು ಕೊಟ್ಟ ಪತ್ರ ಅವರಿಗೆ ಒಪ್ಪಿಸಿದೆ. ಅವರು 25 ಪುಸ್ತಕ ಕೊಟ್ಟರು. “ಹಣ ಬೇಕೇ?” ಎಂದೂ ಕೇಳಿದರು. “ಬೇಡ” ಅಂದೆ.

ಗದಗದ ಹಾದಿ
ಆನಂತರ ಗದಗದ ಹಾದಿ ಹಿಡಿದೆ. ಗದಗ, ನರೇಗಲ್, ಹೊಸಪೇಟೆ, ಬಳ್ಳಾರಿ, ರಾಯಚೂರು, ಗುಲ್ಬರ್ಗ, ಶಹಾಬಾದ್, ಬೀದರ್, ಭಾಲ್ಕಿ, ಬಸವಕಲ್ಯಾಣ, ವಿಜಾಪುರ, ಬಾಗಲಕೋಟೆ, ಜಮಖಂಡಿ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಬೈಲಹೊಂಗಲ ಮೊದಲಾದ ಊರುಗಳ ಕಾಲೇಜುಗಳ ಭೇಟಿ ಮುಗಿಸಿಕೊಂಡು ಮತ್ತೆ ಹುಬ್ಬಳ್ಳಿಗೆ ಮರಳಿದೆ. ಬೆಳಗಾವಿ ಮತ್ತು ಉತ್ತರಕನ್ನಡ ಭೇಟಿ ಬಾಕಿ ಉಳಿದಿತ್ತು. ಕೊಂಡು ಹೋದ ಪುಸ್ತಕಗಳು ಮುಗಿದಿದ್ದವು. ಹಾಗಾಗಿ ಮತ್ತೆ ಪುಸ್ತಕ ಪಡೆದುಕೊಳ್ಳಲು ಯು ಆರ್ ಶೆಣೈ ಅಂಗಡಿಗೆ ಹೋದೆ. ನಾನು ಅಲ್ಲಿಗೆ ಹೋದಾಗ, ನನಗೆ ಕಾರ್ಕಳದಿಂದ ಪ್ರೊಫೆಸರ್ ಕಿಣಿಯವರಿಂದ ಬಂದಿದ್ದ ಪತ್ರ ಕೊಟ್ಟರು. “ಪ್ರವಾಸ ಮೊಟಕು ಗೊಳಿಸು. ಬಿ ಎಡ್ ಸೇರಲು ಸಮಯ ಸನ್ನಿಹಿತವಾಗಿದೆ. ಹಾಗಾಗಿ ತಕ್ಷಣ ಹೊರಟು ಬಾ” ಎಂಬ ಒಕ್ಕಣೆ ಅದರಲ್ಲಿತ್ತು. ಒಂದೆಡೆ ಖುಷಿ, ಇನ್ನೊಂದೆಡೆ ಬೇಸರ. ಬೆಳಗಾವಿ ಮತ್ತು ಉತ್ತರಕನ್ನಡ ಭಾಗಕ್ಕೂ ಭೇಟಿ ನೀಡುವ ಕನಸಿತ್ತು. ಆಗ ಬಹುತೇಕ ಮಧ್ಯ ಮತ್ತು ಉತ್ತರ ಕರ್ನಾಟಕ ಪ್ರವಾಸ ಮುಗಿಸಿದಂತಾಗುತ್ತಿತ್ತು.
ಅದಾಗಲೇ ಊರು ಬಿಟ್ಟು 23 ದಿನ ಕಳೆದಿತ್ತು. ಸುಮಾರು 2500 ಮೈಲಿಗಳ ಪಯಣ ಮುಗಿಸಿದ್ದೆ. 8 ಜಿಲ್ಲೆಗಳ 35 ಕಾಲೇಜುಗಳಿಗೆ ಭೇಟಿ ನೀಡಿದ್ದೆ. ಬೇರೆ ಬೇರೆ ಊರುಗಳನ್ನು ಮೊದಲ ಬಾರಿಗೆ ನೋಡುವ ಖುಷಿ ಸಿಕ್ಕಿದ್ದರೆ, ಅದೇ ಹೊತ್ತಿನಲ್ಲಿ ಆ ಭಾಗದಲ್ಲಿನ ನೈರ್ಮಲ್ಯದ ಕೊರತೆ, ನರಕ ಸದೃಶ ರಸ್ತೆಗಳು, ಗುಜರಿ ಸರಕಾರಿ ಬಸ್ ಗಳು, ಜನರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ (ಕೆಸರಿನಿಂದ ಕೂಡಿದ ಕಾಲುಗಳನ್ನು ಬಸ್ ನ ಕಿಟಕಿಯಿಂದ ತೂರಿಸಿ ಆ ಮೇಲೆ ತಲೆ ಕೈ ತೂರಿಸಿ ಸೀಟ್ ಹಿಡಿದುಕೊಳ್ಳುತ್ತಿದ್ದರು) ಇವು ಪ್ರಯಾಣವನ್ನು ಯಮ ಯಾತನೆಯಾಗಿ ಮಾಡುತ್ತಿದ್ದುದೂ ಇತ್ತು. ಕರಾವಳಿಯಿಂದ ಹೋದ ನನ್ನಂಥವರಿಗೆ ಅಲ್ಲಿ ಊಟದ್ದೂ ಒಂದು ಸಮಸ್ಯೆ. ಅನೇಕ ಹೊಟೇಲುಗಳ ಶುಚಿತ್ವ ಅಷ್ಟಕ್ಕಷ್ಟೇ.
ಅದೇ ಹೊತ್ತಿನಲ್ಲಿ, ಕರಾವಳಿಗೆ ಭಿನ್ನವಾಗಿ, ಅಲ್ಲಿನ ಜನರ ಪ್ರತಿಭಟನಾ ಮನೋಭಾವ ಅಚ್ಚರಿ ಮತ್ತು ಮೆಚ್ಚುಗೆ ಮೂಡಿಸುವಂತಿತ್ತು. ಬಸ್ ನಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಬಸ್ ಡ್ರೈವರ್ ಒಂದು ಸ್ಟಾಪ್ ತಪ್ಪಿಸಿ ಮುಂದಿನ ಸ್ಟಾಪ್ ನಲ್ಲಿ ನಿಲ್ಲಿಸಿದಾಗ, ಕೆಲ ಮಂದಿ ಕೆಳಗಿಳಿದು “ನೀನು ನಮ್ಮನ್ನು ಅಲ್ಲಿ ಯಾಕೆ ಇಳಿಸಲಿಲ್ಲ, ನೀನು ಮುಂದೆ ಹೇಗೆ ಹೋಗುತ್ತಿ ನೋಡುತ್ತೇವೆ” ಎಂದು ಬಸ್ ಮುಂದೆ ಹೋಗದಂತೆ ಮಾಡಿದರು. ಇಂತಹ ಅನುಭವಗಳು ಅನೇಕ.
ಹಾವೇರಿಯಲ್ಲಿ ನಡುರಾತ್ರಿ ಬೆಳಗಾದುದು
ಹಾವೇರಿಯನ್ನು ತಲಪುವಾಗ ಸಂಜೆಯಾಗಿತ್ತು, ಜತೆಗೆ ಆಯಾಸವೂ ಆಗಿತ್ತು. ಒಂದು ಲಾಡ್ಜ್ ನಲ್ಲಿ ರೂಮು ಹಿಡಿದು, ಊಟ ಮಾಡಿ, ಮಾರನೇ ದಿನ ಬೇಗನೇ ಎದ್ದು ಪಯಣ ಹೊರಡುವ ಯೋಚನೆಯೊಂದಿಗೆ ನಿದ್ದೆ ಹೋದೆ. ನಿದ್ದೆ ಹೋಗಿ ಎಷ್ಟು ಹೊತ್ತಾಗಿತ್ತೋ ಏನೋ, ಹಠಾತ್ ಎಚ್ಚರವಾಯಿತು. ಗಂಟೆ ನೋಡಿದೆ. ಬೆಳಗಿನ ಏಳು ಗಂಟೆ ತೋರಿಸಿತು. ಓಹ್! ತಡವಾಯಿತು ಎಂದು ಹಲ್ಲುಜ್ಜಿ, ಸ್ನಾನ ಮಾಡಿ, ಪ್ಯಾಂಟ್ ಶರಟು ತೊಟ್ಟು, ತಲೆ ಬಾಚಿ, ಬ್ಯಾಗು ಹಿಡಿದುಕೊಂಡು ಹೊರಬಂದೆ. ನೋಡಿದರೆ, ಜನ ಓಡಾಡುತ್ತಿದ್ದರು, ದಾಬಾಗಳು ಜನರಿಂದ ತುಂಬಿ ತುಳುಕಿಕೊಂಡಿದ್ದವು. ಇಲ್ಲಿ ಬೆಳಗಿನ ಹೊತ್ತಿನಲ್ಲಿಯೂ ಹೀಗೆ ದಾಬಾಗಳು ಇರುತ್ತವೆಯೇ? ಒಂದು ಕ್ಷಣ ಯೋಚನೆಯಾಯಿತು. ಕೈಗಡಿಯಾರ ನೋಡಿಕೊಂಡೆ. ಏನು ಹೇಳುವುದು? ಗಡಿಯಾರ ನಿಂತಿತ್ತು. ಅಲ್ಲೇ ಒಬ್ಬರಲ್ಲಿ ಸಮಯ ಕೇಳಿದೆ. ರಾತ್ರಿಯ ಹತ್ತು ಎಂದರು. ನನ್ನ ಸ್ಥಿತಿಗೆ ನಾನೇ ನಕ್ಕು ಸುಮ್ಮನೆ ಹೋಗಿ ಮತ್ತೆ ಮಲಗಿಕೊಂಡೆ.
ಭ್ರಮನಿರಸನಗೊಳಿಸಿದ ಮಂತ್ರಾಲಯ
ರಾಯಚೂರು ಈಗ ಹೇಗಿದೆಯೋ ಗೊತ್ತಿಲ್ಲ. 44 ವರ್ಷಗಳ ಹಿಂದಿನ ಆಗಂತೂ ಹಾಳು ಕೊಂಪೆಯಂತಿತ್ತು. ಎಲ್ಲೆಲ್ಲೂ ಕೊಳಕು ಕೊಳಕು. ರಸ್ತೆಯಲ್ಲಿಯೇ ಹರಿಯುವ ಒಳಚರಂಡಿ ನೀರು. ಹೊಟೇಲಿನಲ್ಲಿ ಉಣ್ಣಲೂ ಭಯವಾಯಿತು. ಇಲ್ಲಿ ಉಂಡ ಕಾರಣವೇ ನಾನು ಮುಂದೆ ಅಮೀಬಿಕ್ ಡೀಸೆಂಟ್ರಿ ಅನುಭವಿಸಿ ಕೊನೆಗೆ ಕಾರ್ಕಳ ತಲಪಿದ ಮೇಲೆಯೇ ಚಿಕಿತ್ಸೆ ಪಡೆದು ಗುಣಮುಖನಾಗಬೇಕಾಯಿತು.
ರಾಯಚೂರಿನ ಕಾಲೇಜು ಭೇಟಿಯ ಬಳಿಕ ನನ್ನ ಬಳಿ ಸಾಕಷ್ಟು ಸಮಯವಿತ್ತು. ಮಂತ್ರಾಲಯದ ಬಗ್ಗೆ ಸಾಕಷ್ಟು ಕೇಳಿದ್ದೆ; ರಾಯರ ಪವಾಡಗಳು, ಅ ಬಗ್ಗೆ ಬಂದಿದ್ದ ಸಿನಿಮಾ. ನದಿ ದಾಟಿದರೆ ಅತ್ತ ಆಂಧ್ರ, ಅಲ್ಲಿ ಮಂತ್ರಾಲಯ. ಛೆ! ಇಷ್ಟು ದೂರ ಬಂದು ಅಲ್ಲಿಗೆ ಹೋಗದಿರುವುದೇ? ಸರಿ ಹೊರಟೆ. ಬಸ್ ಮಂತ್ರಾಲಯ ತಲಪಿತು, ಇಳಿದೆ. ಸ್ವಲ್ಪ ಹೊತ್ತಿನಲ್ಲಿ ನೆನಪಾಯಿತು, ಚಿಲ್ಲರೆ ಮತ್ತೆ ಕೊಡುತ್ತೇನೆ ಅಂದಿದ್ದ ಕಂಡಕ್ಟರ್ ಅದನ್ನು ಕೊಟ್ಟಿರಲಿಲ್ಲ. ದೊಡ್ಡ ಮೊತ್ತ ಅವನ ಬಳಿ ಉಳಿದಿತ್ತು. ಇದು ಮೊದಲ ಆಘಾತ ನೀಡಿತು. ಮೂಡು ಕೆಟ್ಟಿತು.
ಮಂತ್ರಾಲಯ ದೇಗುಲಕ್ಕೆ ಹೋದೆ. ನನಗೆ ಭ್ರಮ ನಿರಸನವಾಯಿತು. ಅಲ್ಲಿ ನೋಡುವುದಕ್ಕೆ ಶಿಲ್ಪ ಕಲಾ ವೈಭವವಾಗಲೀ, ಇತರ ಆಕರ್ಷಣೆಯಾಗಲೀ ಏನೂ ಇಲ್ಲ. ಸರತಿ ಸಾಲಿಗೆ ಇರಿಸಲಾಗಿದ್ದ ಕಬ್ಬಿಣದ ಗ್ರಿಲ್ ಗಳು ದೇಗುಲದ ಅಂದ ಗೆಡಿಸಿದ್ದವು. ಈ ವಾಣಿಜ್ಯ ಸ್ವರೂಪ ನೋಡಿದ ಮೇಲೆ ಒಳಗೆ ಹೋಗಬೇಕು ಅನಿಸಲಿಲ್ಲ. ತುಂಗಭದ್ರಾ ನದಿಯಲ್ಲಿ ಮೀಯೋಣ ಎಂದು ಹೋದೆ. ನೀರು ತುಂಬಾ ಕಡಿಮೆಯಿತ್ತು, ಮಲಿನವೂ ಇತ್ತು. ಮಿಂದಾದ ಬಳಿಕ ಮೈಯೆಲ್ಲ ತುರಿಸಲಾರಂಭಿಸಿತು. ಕಹಿ ಅನುಭವದೊಂದಿಗೆ ರಾಯಚೂರಿಗೆ ಮರಳಿದೆ.
ಬಳ್ಳಾರಿಯಲ್ಲಿ ಸಿಕ್ಕ ಮಲೆಯಾಳಿ
ಹೊಸಪೇಟೆಯಿಂದ ಬಳ್ಳಾರಿಗೆ ಹೋಗಿ ಮರಳುವಾಗ ಬಸ್ ನಲ್ಲಿ ಒಬ್ಬ ಮಲೆಯಾಳಿ ಯುವಕ ಸಿಕ್ಕ. ಆತನಿಗೆ ಕನ್ನಡ ಬಾರದು. ಅಲ್ಪಸ್ವಲ್ಪ ಇಂಗ್ಲಿಷ್ ಬರುತ್ತಿತ್ತು. ಹೊಸಪೇಟೆಯ ಒಂದು ವಿಳಾಸದ ಚೀಟಿ ಕೊಟ್ಟು “ಇಲ್ಲಿಗೆ ನನ್ನನ್ನು ತಲಪಿಸಬಹುದೇ?” ಎಂದು ಕೇಳಿದ. ನಾನೇ ಹೊಸಪೇಟೆಗೆ ಹೊಸಬ, ರಾತ್ರಿಯಾಗುತ್ತಿದೆ ಕೂಡಾ. ಅಪರಿಚಿತ ಜಾಗದ ವಿಳಾಸ ಪತ್ತೆ ಹಚ್ಚುವುದು ಹೇಗೆ? ಅದರೆ, ನನಗೆ ಕನ್ನಡ ಬರುತ್ತಿತ್ತು. ಅದೊಂದೇ ಹೆಚ್ಚುವರಿ ಅನುಕೂಲ. “ಸರಿ ಪ್ರಯತ್ನ ಮಾಡೋಣ” ಅಂದೆ.
ಹೊಸಪೇಟೆ ಬಂತು. ಇಳಿದು ಅವರಿವರನ್ನು ಕೇಳುತ್ತಾ ಹೋದೆವು. ಕೆಲವರು ದಾರಿ ತಪ್ಪಿಸಿದರು, ಇನ್ನು ಕೆಲವರು ದಾರಿ ತೋರಿದರು. ಅಂತೂ ಒಂದು ಗಂಟೆಯ ಹುಡುಕಾಟದ ಬಳಿಕ, ರಾತ್ರಿ ಎಂಟರ ಹೊತ್ತಿನಲ್ಲಿ ಮನೆ ಸಿಕ್ಕಿತು. ಮಲೆಯಾಳಿ ಗೆಳೆಯನ ಖುಷಿಗೆ ಪಾರವೇ ಇರಲಿಲ್ಲ. ಎರಡೆರಡು ಬಾರಿ ಥ್ಯಾಂಕ್ಸ್ ಹೇಳಿದ.
ಯಾರೋ ಒಬ್ಬ ಅಸಹಾಯಕನಿಗೆ ನನ್ನಿಂದಾದ ಸಹಾಯ ಮಾಡಿದ ಆತ್ಮ ಸಂತೋಷದೊಂದಿಗೆ ನಾನು ಲಾಡ್ಜ್ ಗೆ ಮರಳಿದೆ. ಆ ಮಲೆಯಾಳಿ ನನ್ನ ಉಪಕಾರವನ್ನು ಮರೆಯಲಿಲ್ಲ. ನನ್ನ ವಿಳಾಸ ಪಡೆದುಕೊಂಡಿದ್ದ ಆತ, ವರ್ಷ ಕಳೆದ ಬಳಿಕ ನನಗೆ ಕೇರಳದ ಒಂದು ಮೂಲೆಯಿಂದ ಒಂದು ಪತ್ರ ಬರೆದು, ಮತ್ತೆ ಧನ್ಯವಾದ ಹೇಳಿದ, ಕೇರಳಕ್ಕೆ ಬರಲೂ ಆಹ್ವಾನ ಕೂಡಾ ನೀಡಿದ.
ನಿಪ್ಪಾಣಿಯ ʼಅತ್ಯಾಧುನಿಕʼ ಕಕ್ಕುಸು
ನಿಪ್ಪಾಣಿಯ ವಸತಿಗೃಹದಲ್ಲಿದ್ದೆ. ಬೆಳಗಾಯಿತು. ಇನ್ನು ಮುಂದಿನ ಪಯಣಕ್ಕೆ ಹೊರಡಬೇಕು. ಕಕ್ಕುಸಿಗೆ ಹೋಗಬೇಕಲ್ಲವೇ? ಕಕ್ಕುಸು ಎಲ್ಲಿ ಎಂದು ವಸತಿಗೃಹದ ರೂಂ ಬಾಯ್ ಬಳಿ ಕೇಳಿದೆ. ಆತ ಒಂದು ಕೊಠಡಿಯ ಬಾಗಿಲು ತೋರಿಸಿದ. ಹೋಗಿ ಬಾಗಿಲು ತೆರೆದೆ. ನೋಡಿದರೆ ಅಲ್ಲಿ ಕಮೋಡ್ ಬಿಡಿ, ನೆಲವೂ ಇರಲಿಲ್ಲ. ಕೆಳಗಿನ ಅಂತಸ್ತಿನಿಂದ ನಿಲ್ಲಿಸಲಾದ ಎರಡು ಮರದ ಕಂಬಕ್ಕೆ ಅಡ್ಡಲಾಗಿ ಎರಡು ಹಲಗೆ ಇರಿಸಲಾಗಿತ್ತು. ಎರಡು ಹಲಗೆಯ ಮೇಲೆ ಆ ಕಡೆ ಈ ಕಡೆ ಕಾಲು ಹಾಕಿ ಕುಳಿತು ಮಲ ವಿಸರ್ಜನೆ ಮಾಡಬೇಕು. ಅದು ಕೆಳಗೆ ಇರಿಸಿದ ಚಟ್ಟಿಯೊಂದಕ್ಕೆ ಬೀಳುತ್ತದೆ. ಅದನ್ನು ಯಾರೋ ಮಲಹೊರುವವರು ಒಯ್ಯುತ್ತಾರೆ. ಊರಿನಲ್ಲಿ ಬಯಲಲ್ಲಿ ವಿಸರ್ಜನೆ ಸಾಮಾನ್ಯ. ಆದರೆ, ವಸತಿಗೃಹವೊಂದರಲ್ಲಿ ಅದೂ 1982 ನೇ ಇಸವಿಯಲ್ಲಿ ಇಂತಹ ಒಂದು ಅಸಹ್ಯ ವ್ಯವಸ್ಥೆಯೇ? ತುಂಬಾ ಕಿರಿ ಕಿರಿಯೆನಿಸಿತು.

ಬಾಗಲಕೋಟೆಯ ವಿದ್ಯಾರ್ಥಿ ಚುನಾವಣೆ
ಬಾಗಲಕೋಟೆಗೆ ನಾನು ತಲಪುವಾಗ ಅಲ್ಲಿನ ಕಾಲೇಜಿನಲ್ಲಿ ವಿದ್ಯಾರ್ಥಿ ಚುನಾವಣೆ ನಡೆಯುತ್ತಿತ್ತು. ಆ ಕಾಲದಲ್ಲಿ ರಾಜ್ಯದಾದ್ಯಂತ ಕಾಲೇಜು ಚುನಾವಣೆ ಎಂದರೆ, ಅದು ಎಂ ಎಲ್ ಎ ಚುನಾವಣೆಗಿಂತ ಕಡಿಮೆ ಏನೂ ಇರುತ್ತಿರಲಿಲ್ಲ. ಅದೇ ತೆರನ ಪ್ರಚಾರ, ಓಲೈಕೆ, ಖರ್ಚು, ಮಾರಾಮಾರಿ, ವಿಜಯೋತ್ಸವ… ಅನೇಕರು ಕಾಲೇಜು ನಾಯಕರಾಗಿಯೇ, ಮುಂದೆ ರಾಜ್ಯ ನಾಯಕರೂ ಆಗುತ್ತಿದ್ದರು.
ನನಗಾಗ ಕೇವಲ 21 ರ ಹರೆಯ. ಕಾಲೇಜು ವಿದ್ಯಾರ್ಥಿಯಂತೆಯೇ ಕಾಣುತ್ತಿದ್ದೆ. ಸರಿ, ನಾನು ಅಲ್ಲಿ ಕಾಲೇಜು ಬಳಿಯಲ್ಲಿ ದಾಟುತ್ತಿದ್ದಾಗ, ಕೆಲವು ವಿದ್ಯಾರ್ಥಿಗಳು ನನ್ನನ್ನು ಬಲವಂತವಾಗಿ ಅಲ್ಲಿನ ಒಂದು ಹೊಟೇಲಿಗೆ ತಳ್ಳಿದರು. ಅಭ್ಯರ್ಥಿಯೊಬ್ಬನ ಪರವಾಗಿ ಅಲ್ಲಿ ಮತದಾರರಿಗೆ ಉಚಿತವಾಗಿ ಭರ್ಜರಿ ಉಪಹಾರದ ವ್ಯವಸ್ಥೆಯಾಗಿತ್ತು. ನಾನು ಇಲ್ಲಿನ ವಿದ್ಯಾರ್ಥಿ ಅಲ್ಲ ಎಂದು ಹೇಳಿಕೊಳ್ಳಲೂ ಅವಕಾಶ ಇರದ ಹಾಗೆ ನನ್ನನ್ನು ಕೂರಿಸಿ, ನನಗೆ ಉಪಹಾರ ಬಡಿಸಿಯೂ ಅಗಿತ್ತು. ಒಂದೆಡೆ ಸಂಕೋಚ, ಇನ್ನೊಂದೆಡೆ ನಗು, ಪುಕ್ಕಟೆಯಾಗಿ ಬೆಳಗಿನ ಉಪಹಾರ ಮುಗಿಸಿಕೊಂಡು ಹೊರಬಿದ್ದೆ.
ಕಾಲೇಜು ತಲಪಿ ರಸಾಯನ ಶಾಸ್ತ್ರ ಉಪನ್ಯಾಸಕರ ಬಳಿ ನನ್ನ ಪುಕ್ಕಟೆ ಉಪಹಾರದ ಕತೆ ಹೇಳಿಕೊಂಡೆ. ಅವರು ಬಿದ್ದು ಬಿದ್ದು ನಕ್ಕರು. “ಏನ್ ಸಾರ್, ಕಾಲೇಜು ಚುನಾವಣೆಗೆ ಇಷ್ಟು ಖರ್ಚು ಮಾಡುತ್ತಾರಾ?” ಅಂದೆ. “ಅಯ್ಯೋ ಇದು ತುಂಬಾ ಕಡಿಮೆ, ನೀವು ಇಲ್ಲಿನ ಬೇರೆ ಕಾಲೇಜುಗಳ ಚುನಾವಣೆ ನೋಡಿಲ್ಲ, ಲಾರಿಗೆ ಮೈಕ್ ಕಟ್ಟಿ ಊರಲ್ಲಿ ಪ್ರಚಾರ ಮಾಡ್ತಾರೆ” ಅಂದರು.
ಸಲಿಂಗ ಕಾಮಿಯ ಕಾಟ
ನಾನು ಕಾರ್ಕಳದಲ್ಲಿದ್ದಾಗಲೇ ಸಲಿಂಗ ಕಾಮಿಗಳ ವರ್ತನೆ ಹೇಗಿರುತ್ತದೆ, ನಾವು ಆ ಬಗ್ಗೆ ಹೇಗೆ ಎಚ್ಚರಿರಬೇಕು ಎಂಬ ಬಗ್ಗೆ ಮುಷ್ತಾಕ್ ನನಗೆ ಹೇಳಿದ್ದ. ನನ್ನ ಉತ್ತರಕರ್ನಾಟಕ ಪ್ರವಾಸ ಸಂದರ್ಭದಲ್ಲಿ ನೇರ ಅಂತಹ ಒಂದು ಅನುಭವಕ್ಕೆ ಈಡಾಗುವಂತಾಯಿತು.
ಊರು ನೆನಪಿಲ್ಲ. ಗದಗದಾಚೆ ಎಲ್ಲೋ ಇರಬೇಕು. ಅಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿದ್ದೆ. ಸರಿಸುಮಾರು 55 ರ ಹರೆಯದ ವ್ಯಕ್ತಿಯೊಬ್ಬರು ಸುಮ್ಮನೆ ನನ್ನನ್ನು ಮಾತಿಗೆಳೆಯತೊಡಗಿದರು. ನಾನು ಕಾರ್ಕಳದವ ಎನ್ನುವುದು ತಿಳಿಯುತ್ತಲೇ, “ನನ್ನ ಮಗ ಸುರತ್ಕಲ್ ಕೆ ಆರ್ ಇ ಸಿಯಲ್ಲಿ ಓದುತ್ತಿದ್ದಾನೆ” ಎಂದರು. ಇದನ್ನು ಕೇಳಿದ ಮೇಲೆ ಅವರೊಡನೆ ಮಾತನಾಡಬಹುದು ಅನಿಸಿತು. ಅದು ಇದು ಮಾತನಾಡಿದರು. ಬಳಿಕ, “ಬನ್ನಿ ಟೀ ಕುಡಿಯೋಣ” ಎಂದು ನಿಲ್ದಾಣದಲ್ಲಿಯೇ ಇದ್ದ ಉಪಹಾರಗೃಹಕ್ಕೆ ಕರೆದೊಯ್ದರು. ನನ್ನ ಮುಂದಿನ ಕುರ್ಚಿಯೂ ಖಾಲಿ ಇತ್ತು. ಆದರೆ ಅವರು ನನ್ನ ಬಳಿಯೇ ಕುಳಿತುಕೊಂಡರು. ತಿಂಡಿಗೆ ಆರ್ಡರ್ ಮಾಡಲಾಯಿತು.
ಕೆಲ ನಿಮಿಷಗಳ ಬಳಿಕ ಸ್ವಲ್ಪ ಸ್ವಲ್ಪವೇ ನನ್ನ ಹತ್ತಿರಕ್ಕೆ ಸರಿಯಲಾರಂಭಿಸಿದರು. ಎದುರುಗಡೆ ಖಾಲಿ ಇದ್ದಾಗಲೂ ನನ್ನ ಪಕ್ಕ ಕುಳಿತಾಗ ನನಗೆ ಮೊದಲ ಸೂಚನೆ ಸಿಕ್ಕಿತ್ತು. ಈಗ ಹತ್ತಿರಕ್ಕೆ ಸರಿಯಲಾರಂಭಿಸಿದಾಗ ಎರಡನೆ ಬಲವಾದ ಸೂಚನೆ ಲಭಿಸಿತು. ಮೈಯೆಲ್ಲ ಬೆವರಲಾರಂಭಿಸಿತು. ತಿಂಡಿಗಾಗಿ ಕೂರುವಂತೆಯೂ ಇಲ್ಲ, ಎದ್ದು ಹೋಗುವಂತೆಯೂ ಇಲ್ಲ.
ಆತನ ಕೈ ನಿಧಾನಕ್ಕೆ ನನ್ನ ತೊಡೆಯತ್ತ ಬರಲಾರಂಭಿಸಿತು. ತೊಡೆಯನ್ನು ಸವರಲಾರಂಭಿಸಿದ. ಇನ್ನು ತಡೆಯುವುದು ಅಸಾಧ್ಯವಾಯಿತು. ನಾನು ಗಬಗಬನೆ ತಿಂಡಿ ತಿಂದು, “ಓಹ್ ಬಸ್ ಗೆ ತಡವಾಯಿತು, ಇನ್ನೊಮ್ಮೆ ಸಿಗುತ್ತೇನೆ” ಎಂದು ಹೇಳಿದವನೇ ಓಡಿ ಹೋಗಿ ಯಾವುದೋ ಒಂದು ಬಸ್ ಹತ್ತಿ ಕುಳಿತುಬಿಟ್ಟೆ. ಅಂತೂ ಶನಿಯಿಂದ ತಪ್ಪಿಸಿಕೊಂಡೆ.
ಊರು ಸೇರುವಾಗಿನ ಖುಷಿ
ಮಲೆನಾಡು ಭಾಗದಲ್ಲಿ ಬದುಕಿದವರಿಗೆ ಘಟ್ಟ ದಾಟಿ ಹಸಿರು ವಿರಳವಾಗಿರುವ ಒಣ ಭೂಪ್ರದೇಶಗಳಲ್ಲಿ ಸಂಚರಿಸುವಾಗ ಬಹಳ ಕಷ್ಟವಾಗುತ್ತದೆ. ನಾನು ಕಾರ್ಕಳದಿಂದ ಹೊರಗಿದ್ದುದು ಕೇವಲ 23 ದಿನ. ಆದರೆ ಹಸಿರನ್ನು ನೋಡಲು ಕಣ್ಣು ಕಾತರಿಸುತ್ತಿತ್ತು. ಬಸ್ ಮರಳಿ ಮಲೆನಾಡು ಭಾಗವನ್ನು ಪ್ರವೇಶಿಸುವಾಗ, ಆ ವನರಾಜಿಗಳನ್ನು ನೋಡುವಾಗ ಆದ ಖುಷಿಯನ್ನು ಬಣ್ಣಿಸಲು ಪದಗಳು ಸಾಲವು. ಕೊನೆಗೂ ಕಾರ್ಕಳ ಸೇರಿಬಿಟ್ಟೆ.
ಮನಸು, ದೇಹ ಎರಡೂ ದಣಿದಿತ್ತು. ಒಂದು ದಿನ ವಿಶ್ರಾಂತಿ ಪಡೆದು, ಮಾರನೇ ದಿನ ಪ್ರೊಫೆಸರ್ ಕಿಣಿಯವರನ್ನು ನೋಡಲು ಭುವನೇಂದ್ರ ಕಾಲೇಜಿಗೆ ತೆರಳಿದೆ. ಕಿಣಿಯವರು ನನ್ನನ್ನು ಬಾಯಿತುಂಬ ಹೊಗಳಿದರು. “ನಮಗೆ ರಾಜ್ಯದ ಅನೇಕ ಕಾಲೇಜುಗಳಿಂದ ಫೀಡ್ ಬ್ಯಾಕ್ ಸಿಕ್ಕಿದೆ. ಅವರು ನಿಮ್ಮ ಬಗ್ಗೆ ಒಳ್ಳೆಯ ಮಾತಾಡಿದ್ದಾರೆ” ಎಂದರು. “ಕಿಣಿ ಅಂಡ್ ರಾವ್ ಪುಸ್ತಕಕ್ಕೆ ಅಲ್ಲೆಲ್ಲ ಅಪಾರ ಗೌರವವಿದೆ ಸಾರ್, ನಾನು ಕಿಣಿ ಅಂಡ್ ರಾವ್ ಪುಸ್ತಕದ ಪ್ರತಿನಿಧಿ ಎಂದ ತಕ್ಷಣ ಅಲ್ಲಿನ ಉಪನ್ಯಾಸಕರು ನನ್ನನ್ನು ವಿಶೇಷ ಗೌರವದಿಂದ ನಡೆಸಿಕೊಂಡರು, ಕೆಲವು ಉಪನ್ಯಾಸಕರಂತೂ ವಿದ್ಯಾರ್ಥಿಗಳನ್ನು ಕರೆದು, ನಾನೀಗ ಯಾವ ಪುಸ್ತಕ ಶಿಫಾರಸು ಮಾಡಿದ್ದು? ನೋಡಿಲ್ಲಿ, ಅದರ ಪ್ರತಿನಿಧಿ ಬಂದಿದ್ದಾರೆ” ಎಂದರು ಎಂದೆ. ಕಿಣಿಯವರು ಮತ್ತೊಮ್ಮೆ ಥ್ಯಾಂಕ್ಸ್ ಅಂದರು. “ತಕ್ಷಣ ಕುಂಜಿಬೆಟ್ಟುವಿನ ಬಿ ಎಡ್ ಕಾಲೇಜಿಗೆ ಹೋಗಿ ಅಲ್ಲಿನ ಪ್ರಾಂಶುಪಾಲ ಟಿ ವಿಶ್ವನಾಥ್ ಅವರನ್ನು ಭೇಟಿಯಾಗಿ” ಅಂದರು.
ಅಲ್ಲಿಂದ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಸೂರ್ಯನಾರಾಯಣ ರಾವ್ ಅವರ ಚೇಂಬರ್ ಗೆ ಹೋದೆ. ಪ್ರವಾಸದ ವರದಿ ಒಪ್ಪಿಸಿದೆ. 1200 ರುಪಾಯಿಯಲ್ಲಿ 400 ರುಪಾಯಿ ಉಳಿದಿತ್ತು. ಅದನ್ನು ಕೊಡಹೋದೆ. “ಅದನ್ನು ನೀವೇ ಇರಿಸಿಕೊಳ್ಳಿ” ಎಂದರು. 1982 ರ 400 ರುಪಾಯಿ ಎಷ್ಟು ದೊಡ್ಡ ಮೊತ್ತ ಊಹಿಸಿ. ಧನ್ಯವಾದ ಹೇಳಿ ಹೊರಬಂದೆ.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು
ಇದನ್ನೂ ಓದಿ- ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ-26 | ಅಪ್ಪನ ಕೊನೆಯ ವೇಷ ಮತ್ತು ಇತರ ಕೆಲ ನೆನಪುಗಳು


