ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ-26 | ಅಪ್ಪನ ಕೊನೆಯ ವೇಷ ಮತ್ತು ಇತರ ಕೆಲ ನೆನಪುಗಳು

1927 ರಲ್ಲಿ ಹುಟ್ಟಿದ ಅಪ್ಪ (ಮುದಿಯಾರು ರಾಮಪ್ಪ ಗೌಡ) 1947 ರಲ್ಲಿ ಯಕ್ಷಗಾನ ರಂಗಪ್ರವೇಶ ಮಾಡಿದ್ದರು. ಎರಡು ಮೂರು ವರ್ಷ ವೃತ್ತಿ ಯಕ್ಷಗಾನ ಮೇಳದಲ್ಲಿ ಕಲಾವಿದನಾಗಿ ದುಡಿದ ಅವರು, ಮುಂದೆ ಉದ್ಯೋಗದ ಕಾರಣ ಊರು ಬಿಡಬೇಕಾಯಿತು. ಹಾಗಾಗಿ, ಯಕ್ಷಗುರು ಕೀರಿಕ್ಕಾಡು ವಿಷ್ಣುಭಟ್ಟರ ಬನಾರಿ ಗೋಪಾಲಕೃಷ್ಣ ಯಕ್ಷಗಾನ ಸಂಘದ ನಂಟನ್ನೂ ತೊರೆಯಬೇಕಾಯಿತು. ಆದರೂ, ಅವರು ವರ್ಗಾವಣೆಯಾಗಿ ಯಾವುದೇ ಊರಿಗೆ ತೆರಳಲೀ, ಅಲ್ಲಿನವರಿಗೆ ಅವರು ಯಕ್ಷಗಾನ ಕಲಾವಿದ ಎನ್ನುವುದು ಗೊತ್ತಿರುತ್ತಿತ್ತು. ಆದ್ದರಿಂದ, ಅಲ್ಲಿ ಯಕ್ಷಗಾನ ಪ್ರದರ್ಶನವಿದ್ದರೆ, ಅತಿಥಿ ಕಲಾವಿದನನ್ನಾಗಿ ಅಪ್ಪನನ್ನೂ ಆಹ್ವಾನಿಸುತ್ತಿದ್ದರು.

ಅವರು ಶಂಕರನಾರಾಯಣದಲ್ಲಿ 11 ವರ್ಷ ಇದ್ದಾಗಲೂ ಯಕ್ಷಗಾನ ಬಯಲಾಟದಲ್ಲಿ ವೇಷ ಹಾಕಿದ್ದು ನನಗೆ ನೆನಪಿಲ್ಲ. ಆದರೆ ಯಕ್ಷಗಾನ ತಾಳಮದ್ದಲೆ ಕೂಟಗಳಲ್ಲಿ ಅರ್ಥದಾರಿಯಾಗಿ ಭಾಗವಹಿಸುತ್ತಿದ್ದರು.

ಕಾರ್ಕಳಕ್ಕೆ ಬಂದ ಮೇಲೆ ನಾನು ಮೊದಲ ಬಾರಿಗೆ ಮತ್ತು ಕೊನೆಯ ಬಾರಿಗೆ ಅವರ ಯಕ್ಷಗಾನ ಅಭಿನಯ ನೋಡಿದ್ದು ಎಪ್ರಿಲ್‌ 15, 1981 ರಂದು. ಜೋಡುರಸ್ತೆಯ ಕುಕ್ಕುಂದೂರು ದುರ್ಗಾಪರಮೇಶ್ವರಿ ದೇಗುಲದ ವಠಾರದಲ್ಲಿ ಯಕ್ಷಗಾನ ಬಯಲಾಟ ಏರ್ಪಾಡಾಗಿತ್ತು. ಪ್ರಸಂಗ ʼಸೀತಾಪಹಾರʼ. ಅಪ್ಪನಿಗೆ ರಾವಣನ ಪಾತ್ರ. ಅಪ್ಪ ಚೆನ್ನಾಗಿಯೇ ಅಭಿನಯಿಸಿದ್ದರು.

ಅಂದು ಸ್ವಾರಸ್ಯಕರ ಪ್ರಸಂಗವೊಂದು ನಡೆಯಿತು. ಅಲ್ಲಿದ್ದುದು ಎಲ್ಲರೂ ಹವ್ಯಾಸಿ ಕಲಾವಿದರೇ. ಸೀತೆಯ ಪಾತ್ರ ವಹಿಸಬೇಕಾಗಿದ್ದ ವ್ಯಕ್ತಿ ಸಕಾಲದಲ್ಲಿ ಕೈಕೊಟ್ಟುಬಿಟ್ಟ. ಪ್ರದರ್ಶನಕ್ಕೆ ಹೆಚ್ಚು ಸಮಯ ಇಲ್ಲದ ಕಾರಣ, ತುಳುನಾಟಕಗಳಲ್ಲಿ ಸ್ತ್ರೀ ಪಾತ್ರ ವಹಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು, ದಮ್ಮಯ್ಯ ದಕ್ಕಯ್ಯ ಹಾಕಿ ʼಹಿಡಿದು ತಂದರುʼ. ನೀನು ಹೆಚ್ಚೇನೂ ಮಾತನಾಡಬೇಕಾಗಿಲ್ಲ, ಸುಮ್ಮನೆ ನಿಂತರೆ ಸಾಕು ಎಂದರು.

ಮುದಿಯಾರು ರಾಮಪ್ಪ ಗೌಡರು

ಸರಿ, ಆಟ ಶುರುವಾಯಿತು, ಕತೆ ಮುಂದುವರಿಯಿತು. ಚಿನ್ನದ ಜಿಂಕೆಯನ್ನು ಅಟ್ಟಿಸಿಕೊಂಡು ರಾಮ ಹೊರಟು ಹೋದ. ಹಾಗೆ ಹೋದ ಸ್ವಲ್ಪ ಹೊತ್ತಿನಲ್ಲಿ ರಾಮನ ಆರ್ತನಾದ ಕೇಳಿಸಿತು. ಆತಂಕಗೊಂಡ ಸೀತೆ, “ಲಕ್ಷ್ಮಣಾ.. ಅಗೋ.. ಅಣ್ಣನಿಗೆ ಏನೋ ಆಗಿದೆ.. ತಕ್ಷಣ ಹೋಗು..” ಎಂದು ಹೇಳಬೇಕು. ಆತ ಹೋಗಲು ಒಪ್ಪದಿದ್ದಾಗ, “ನೀನು ಹೋಗುತ್ತಿಲ್ಲ.. ಯಾಕೆಂದರೆ ನಿನಗೆ ನನ್ನ ಮೇಲೆ ಮನಸಾಗಿದೆ.. ಎಂತಹ ಸ್ವಾರ್ಥಿ ನೀನು..” ಎಂದೆಲ್ಲ ಆತ ಕೆರಳುವಂತೆ ಡೈಲಾಗ್‌ ಹೊಡೆಯಬೇಕು (ಆತನಿಗೆ ಈ ಕೆಲವು ಮಾತುಗಳನ್ನು ಹೇಳಿಕೊಟ್ಟಿದ್ದರು).

ಆದರೆ, ಇಂದು ʼಹಿಡಿದು ತಂದʼ ಸೀತೆ ಸಕಾಲದಲ್ಲಿ ಆ ಡೈಲಾಗ್‌ ಎಲ್ಲ ಮರೆತುಬಿಟ್ಟಿದ್ದಳು. ಸುಮ್ಮನೆ ಗೊಂಬೆಯಂತೆ ನಿಂತುಕೊಂಡಳು. ಲಕ್ಷ್ಮಣ ಬುದ್ಧಿವಂತ. ಒಮ್ಮೆ ತಬ್ಬಿಬ್ಬಾದರೂ, ಸಾವರಿಸಿಕೊಂಡು, ಸಮಯಸ್ಫೂರ್ತಿಯಿಂದ, ಸೀತೆ ಹೇಳಬೇಕಾದ ಡೈಲಾಗನ್ನೆಲ್ಲ ತಾನೇ ಹೇಳತೊಡಗಿದ. “ನೀನು ಏನು ಹೇಳುತ್ತಿರುವುದು? ನನಗೆ ನಿನ್ನ ಮೇಲೆ ಮನಸಾಗಿದೆ, ಹಾಗಾಗಿ ನಾನು ಅಣ್ಣನನ್ನು ಹುಡುಕಲು ಹೋಗುತ್ತಿಲ್ಲ ಎಂದು ನೀನು ಹೇಳುತ್ತಿರುವುದಲ್ಲವೇ..? ಅಯ್ಯೋ.. ಇಂತಹ ಮಾತನ್ನು ಕೇಳಿ ನಾನಿಲ್ಲಿ ಕ್ಷಣಮಾತ್ರವೂ ಇರಲಾರೆ.. ಅಣ್ಣನ್ನು ಹುಡುಕಿಕೊಂಡು ಈಗಲೇ ಹೊರಟೆ..” ಎಂದು ಹೊರಟುಬಿಟ್ಟ. ಕತೆ ಮುಂದುವರಿಯಿತು. ಪ್ರೇಕ್ಷಕರಲ್ಲಿ ನಗುವೋ ನಗು. ಯಾಕೆಂದರೆ ಪ್ರೇಕ್ಷಕರಲ್ಲಿ ಅನೇಕರು ಕಲಾವಿದರಿಗಿಂತಲೂ ಬುದ್ಧಿವಂತರಿರುತ್ತಾರೆ. ಎಡವಟ್ಟಾದುದು ಅವರಿಗೆ ಸ್ಪಷ್ಟವಾಗಿ ಗೊತ್ತಾಗಿತ್ತು.

ಟೈಪ್‌ ರೈಟಿಂಗ್‌ ಶಾಲೆಯಲ್ಲಿ

ಅದು ಉನ್ನತ ವ್ಯಾಸಂಗದ ಬಯಕೆಯ ದಿನಗಳಲ್ಲ. ಒಟ್ಟಿನಲ್ಲಿ ಒಂದು ಉದ್ಯೋಗ ಹಿಡಿಯಬೇಕು ಎಂಬುದೇ ಬದುಕಿನ ಅಂತಿಮ ಗುರಿಯಾಗಿದ್ದ ದಿನಗಳು. ಕ್ಲರ್ಕ್‌ ಕೆಲಸವಾದರೂ ಸರಿಯೇ. ಕ್ಲರ್ಕ್‌ ಆಗಬೇಕಿದ್ದರೆ ಟೈಪ್‌ ರೈಟಿಂಗ್‌ (ಬೆರಳಚ್ಚು) ಗೊತ್ತಿರಲೇಬೇಕು. ಇದೇ ಕಾರಣದಿಂದ ಆಗ ಎಲ್ಲೆಲ್ಲೂ ವಾಣಿಜ್ಯ ಶಾಲೆಗಳು ತಲೆ ಎತ್ತಿದ್ದವು. ಅಲ್ಲಿ ಬೆರಳಚ್ಚಿನ ಜತೆಗೆ, ಶೀಘ್ರಲಿಪಿ (ಶಾರ್ಟ್‌ ಹ್ಯಾಂಡ್)‌ ಕೂಡಾ ಕಲಿಸುತ್ತಿದ್ದರು.

ಶಿರ್ವ ಶಿವಣ್ಣ ಶೆಟ್ಟರ ʼದುರ್ಗಾ ವಾಣಿಜ್ಯ ಶಾಲೆʼ ನಮ್ಮ  ಬಾಡಿಗೆ ಮನೆಯ ಹತ್ತಿರವೇ ಇತ್ತು. ಹಾಗಾಗಿ, 1978ರ ಅಕ್ಟೋಬರ್‌ ನಲ್ಲಿ ನಾನೂ ಟೈಪ್‌ ರೈಟಿಂಗ್‌ ಗೆ ಸೇರಿಕೊಂಡೆ. ಅಜೆಕಾರಿನ ಕಡೆಯಿಂದೆಲ್ಲೋ ಸೈಕಲ್‌ ನಲ್ಲಿ ಬರುವ ಜಯಾನಂದ ಶೆಟ್ಟಿ ನಮಗೆ ಟೈಪಿಂಗ್‌ ಶಿಕ್ಷಕ. ಪಾಪ, ಜುಜುಬಿ ಸಂಬಳಕ್ಕೆ ವರ್ಷವರ್ಷಗಳಿಂದ ದುಡಿಯುತ್ತಿದ್ದ ಅವರಿಗೆ ಒಂದು ಗೌರವಾರ್ಹ ಸಂಬಳ ಕೊಡುವ ಯೋಚನೆಯೂ ಸಂಸ್ಥೆಯ ಮುಖ್ಯಸ್ಥರಿಗಿರಲಿಲ್ಲ.

ಕನ್ನಡ ಆ ಬಳಿಕ ನೋಡೋಣ, ಮೊದಲು ಇಂಗ್ಲಿಷ್‌ ಕಲಿಯುವ, ಎಂದು ಇಂಗ್ಲಿಷ್‌ ಟೈಪ್‌ ರೈಟಿಂಗ್‌ ಗೆ ಸೇರಿಕೊಂಡೆ. ನನ್ನ ಹಾಗೆಯೇ ಅಲ್ಲಿ ಅನೇಕ ಹುಡುಗ ಹುಡುಗಿಯರು ಬರುತ್ತಿದ್ದರು. ವಾರೆ ನೋಟದ ಹುಡುಗಿಯರ ಕಾರಣ, ಹುಡುಗರ ಸಂಖ್ಯೆ ಹೆಚ್ಚೇ ಇರುತ್ತಿತ್ತು ಮತ್ತು ಅವರು ಎಂದೂ ಕ್ಲಾಸ್‌ ತಪ್ಪಿಸುತ್ತಿರಲಿಲ್ಲ (ದಿನಕ್ಕೆ ಒಂದು ಗಂಟೆಯ ಕ್ಲಾಸ್)!‌

ಕಾಲೇಜಿನ ಕ್ಲಾಸ್‌ ಗಳಿಗೆ ಸಮಯ ಹೊಂದಿಸಿಕೊಂಡು ಬೆಳಗ್ಗೆ ಅಥವಾ ಸಂಜೆ ನಾನು ಟೈಪ್‌ ರೈಟಿಂಗ್‌ ತರಗತಿಗೆ ಹಾಜರಾಗುತ್ತಿದ್ದೆ. ಟೈಪಿಂಗ್‌ ನಲ್ಲಿ ವೇಗವೂ ಇರಬೇಕು, ತಪ್ಪೂ ಕಡಿಮೆ ಇರಬೇಕು. 1979 ಮೇ ತಿಂಗಳಲ್ಲಿ ನಾನು ಜ್ಯೂನಿಯರ್‌ ಗ್ರೇಡ್‌ ಪಾಸ್‌ ಆದೆ. 1980 ರ ಡಿಸೆಂಬರ್‌ ನಲ್ಲಿ ಸೀನಿಯರ್‌ ಗ್ರೇಡ್‌ ಕೂಡ ಪಾಸ್‌ ಆದೆ. ಕನ್ನಡ ಟೈಪಿಂಗ್‌ ಕಲಿಯಬೇಕು ಎನ್ನುವ ಬಯಕೆಯಾಯಿತು. ಒಂದೆರಡು ದಿನ ಹೋದೆ. ʼಕ್ರೈʼ ಎಂಬ ಅಕ್ಷರ ಹೊಡೆಯಬೇಕಿದ್ದರೆ, ಎರಡೆರಡು ಬಾರಿ ಹ್ಯಾಂಡಲ್‌ ಬಾರ್ ಹಿಂದಕ್ಕೆ ತಂದು ಹೊಡೆಯಬೇಕು. ಇಂಗ್ಲಿಷ್‌ ನಲ್ಲಿ ಈ ಸಮಸ್ಯೆ ಇಲ್ಲ. ಕನ್ನಡ ಟೈಪಿಂಗ್‌ ಗೆ ಅಂತಿಮ ನಮಸ್ಕಾರ ಹೇಳಿದೆ. ‌

ನಾನು ಕ್ಲರ್ಕ್‌ ಆಗಲಿಲ್ಲ. ಹಾಗಾಗಿ ಟೈಪಿಂಗ್‌ ಬಳಕೆಗೆ ಬರಲಿಲ್ಲ. ಆದರೆ ಯಾರಿಗೆ ಗೊತ್ತಿತ್ತು, ಮುಂದೆ ಕಂಪ್ಯೂಟರ್‌ ಬರುತ್ತದೆ, ಅಲ್ಲಿಯೂ ʼಕ್ವೆರ್ಟಿʼ ಕೀ ಬೋರ್ಡ್‌ ಇರುತ್ತದೆ ಎಂದು. 2002 ರ ಬಳಿಕ ವಿಂಡೋಸ್‌ ಬಳಕೆಗೆ ಬಂದು, ನಾನು ಕಂಪ್ಯೂಟರ್‌ ಬಳಕೆ ಹೆಚ್ಚು ಮಾಡಿದ ಆನಂತರ, ಹತ್ತೂ ಬೆರಳುಗಳನ್ನು ಬಳಸಿಕೊಂಡು ವೇಗವಾಗಿ ಟೈಪ್‌ ಮಾಡಲು ಹಿಂದಿನ ನನ್ನ ಕಲಿಕೆ ನೆರವಾಯಿತು. ಈಗಲೂ ನಾನು ಟೈಪಿಂಗ್‌ ಮಾಡುವುದು ಹತ್ತೂ ಬೆರಳುಗಳನ್ನು ಬಳಸಿಕೊಂಡು.

1971 ರಲ್ಲಿ ಸ್ಥಾಪನೆಗೊಂಡ ದುರ್ಗಾ ವಾಣಿಜ್ಯ ಶಾಲೆಗೆ 1981 ರಲ್ಲಿ ಹತ್ತು ವರ್ಷ ತುಂಬಿತು. ನಾವು ವಿದ್ಯಾರ್ಥಿಯಾಗಿದ್ದಾಗಲೇ 1.1.1981 ರಂದು ಅಲ್ಲಿನ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು. ದಶಮಾನೋತ್ಸವ ಪ್ರಯುಕ್ತ ʼನರಕದಲ್ಲೊಂದು ನಾಟಕʼದಲ್ಲಿ ನನಗೆ ಯಮನ ಪಾತ್ರ. ಕಾರ್ಕಳದಲ್ಲಿದ್ದಾಗ ನಾನು ಅಭಿನಯಿಸಿದ್ದು ಎರಡೇ ನಾಟಕಗಳಲ್ಲಿ. ಇದು ಒಂದಾದರೆ, ಇನ್ನೊಂದು ಭುವನೇಂದ್ರ ಕಾಲೇಜಿನ ಅಂತರ ಪದವಿ ತರಗತಿಯ ನಾಟಕ ಸ್ಪರ್ಧೆ ʼಸಕ್ಕರೆ ಗೊಂಬೆʼ ಯಲ್ಲಿ.

ಸುಳ್ಯದಲ್ಲಿ ಹಾದಿ ತಪ್ಪಿದ ಮಗ

1980 ರ ಮೇ ತಿಂಗಳು. ಹಿರಿಯ ಅಣ್ಣ ಸುಬ್ರಹ್ಮಣ್ಯ ಪುತ್ತೂರಿನ ವಿಮ್ಕೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕಿರಿಯ ಅಣ್ಣ ಉಮೇಶ್‌ ಸುಳ್ಯದಲ್ಲಿ ಕೆಲಸ ಮಾಡುತ್ತಿದ್ದ. ಒಂದು ದಿನ ಅವರನ್ನು ಭೇಟಿಯಾಗಲು ಕಾರ್ಕಳದಿಂದ ಹೊರಟೆ. ಜೋಡುರಸ್ತೆಯಿಂದ ಕಾರ್ಕಳಕ್ಕೆ 35 ಪೈಸೆ, ಕಾರ್ಕಳದಿಂದ ಮೂಡಬಿದಿರೆಗೆ 1.10 ರುಪಾಯಿ, ಮೂಡಬಿದಿರೆಯಿಂದ ಬಂಟ್ವಾಳಕ್ಕೆ 1.40 ರುಪಾಯಿ, ಬಿಸಿರೋಡ್‌ ನಿಂದ ಪುತ್ತೂರಿಗೆ 2.60 ರುಪಾಯಿ, ಪುತ್ತೂರಿನಿಂದ ಸುಳ್ಯಕ್ಕೆ 2.40 ರುಪಾಯಿ. ಇದು ಆದ ಪ್ರಯಾಣ ಖರ್ಚು.

ಅಲ್ಲಿ ಅಣ್ಣಂದಿರನ್ನು ಭೇಟಿಯಾಗಿ ಕಾರ್ಕಳಕ್ಕೆ ಮರಳುವಾಗ ಒಂದು ಎಡವಟ್ಟಾಯಿತು. ಆಗ ಇಂದಿನಷ್ಟು ಬಸ್‌ ಗಳು ಇರಲಿಲ್ಲ. ಆದ್ದರಿಂದ, ಬಾಡಿಗೆಯ ಅಂಬಾಸಿಡರ್‌ ಕಾರುಗಳು ಹೆಚ್ಚು. ಜಟಕಾ ಬಂಡಿಯಂತಹ ಸರಕಾರಿ ಬಸ್‌ ಗಳು, ಇರುವುದೂ ವಿರಳ, ಆದ್ದರಿಂದ ಕಾರು ಪ್ರಯಾಣವೇ ಜನಪ್ರಿಯ.

ಸರಿ, ಸುಳ್ಯದಲ್ಲಿ ಪುತ್ತೂರಿಗೆ ಹೋಗುವ ಕಾರು ಏರಲು ನಿರ್ಧರಿಸಿದೆ (18.5.1980). “ಪುತ್ತೂರು.. ಪುತ್ತೂರು.. ಪುತ್ತೂರು..” ಎಂದು ಕಾರಿನವನು ಹೇಳಿದಂತೆ ಕೇಳಿಸಿತು. ನನಗೆ ಸುಳ್ಯ ಮತ್ತು ಅದರ ಸುತ್ತಲಿನ ಊರುಗಳು ಅಪರಿಚಿತ. ಸರಿ, ಪುತ್ತೂರಿಗೆಂದು ಅಲ್ಲಿದ್ದ ಒಂದು ಕಾರು ಏರಿದೆ. ಡ್ರೈವರ್ ಕಾರಿನಲ್ಲಿ ಹತ್ತಿಪ್ಪತ್ತು ಮಂದಿಯನ್ನು ತುಂಬಿಸಿಕೊಂಡಿದ್ದ.‌ ಕಾರು ಹೊರಟಿತು. ಎಲ್ಲಿ ಹೋಗುತ್ತಿದೆ ತಿಳಿಯಲಿಲ್ಲ. ಪುತ್ತೂರಿನ ಹತ್ತಿರ ಬಂದಿರಬೇಕು ಎಂದುಕೊಂಡೆ. ಅನೇಕರು ಇಳಿದರು. ನಾವು ಮೂರೋ ನಾಲ್ಕೋ ಮಂದಿ ಪ್ರಯಾಣಿಕರು ಉಳಿದೆವು. “ನಿಮಗೆ ಎಲ್ಲಿ ಇಳಿಯಬೇಕು” ಎಂದು ಡ್ರೈವರ್‌ ಕೇಳಿದ. “ಪುತ್ತೂರು” ಎಂದೆ. “ಅಯ್ಯೋ.. ಇದು ಗುತ್ತಿಗಾರಿಗೆ ಹೋಗುವ ಕಾರು” ಎಂದ (ಗುತ್ತಿಗಾರು ಅಂದರೆ ಕುಕ್ಕೆ ಸುಬ್ರಹ್ಮಣ್ಯದ ಹಾದಿ). ನನಗೆ ಮೈಯೆಲ್ಲ ಬೆವತು ಹೋಯಿತು. ಇರಿಸುಮುರಿಸಾದುದು ಕೇವಲ ದಾರಿ ತಪ್ಪಿದ್ದಕ್ಕಲ್ಲ. ನಾನು ಪರೀಕ್ಷೆ ಫೇಲಾಗಿ ಮನೆ ಬಿಟ್ಟು ಓಡಿ ಬಂದಿರಬೇಕು ಅಂದುಕೊಂಡ ಡ್ರೈವರ್‌, ನನಗೆ ಬುದ್ಧಿವಾದ ಹೇಳತೊಡಗಿದ. “ಪರೀಕ್ಷೆಯಲ್ಲಿ ಫೇಲಾಗುವುದೆಲ್ಲ ದೊಡ್ಡ ಸಂಗತಿಯಲ್ಲ.. ಅದಕ್ಕೆ ಚಿಂತೆ ಮಾಡಬಾರದು.. ಮನೆ ಬಿಟ್ಟು ಓಡಿಹೋಗುವುದು ಅದಕ್ಕೆ ಪರಿಹಾರವಲ್ಲ…” ಎಂದೆಲ್ಲ ಸಾಂತ್ವನ ಹೇಳತೊಡಗಿದ. ಕಾರು ಗುತ್ತಿಗಾರು ತಲಪಿತು. ಕಾರಿನಿಂದ ಇಳಿದವನೇ ಸರಸರನೇ ಹೋಗಿ ಸುಳ್ಯದ ಕಡೆಗೆ ಹೋಗುವ ಕಾರು ಹತ್ತಿ ಕುಳಿತುಕೊಂಡೆ. ಕಾರಿನಲ್ಲಿ ಮತ್ತೆ ಸುಳ್ಯ ತಲಪಿ, ಪುತ್ತೂರು ಮೂಲಕ ಕಾರ್ಕಳ ಸೇರಿದೆ.

ಆ ಡ್ರೈವರ್‌ ನ ಹೆಸರು ಶೀನಪ್ಪ. ಸುಳ್ಯ ಗುತ್ತಿಗಾರು ಮಾರ್ಗದಲ್ಲಿ ಸಂಚರಿಸುವ ಆತನ ಕಾರು ಆ ಭಾಗದಲ್ಲಿ ತುಂಬಾ ಫೇಮಸ್.‌ ಆತನ ಅಂಬಾಸಿಡರ್‌ ಕಾರಿನಲ್ಲಿ ಇಪ್ಪತ್ತು ಮುವ್ವತ್ತು ಜನರನ್ನು ತುಂಬಿಸಿಕೊಳ್ಳುತ್ತಿದ್ದ.‌ ಜನರನ್ನು ಸಿಕ್ಕ ಸಿಕ್ಕಲ್ಲಿ ತುಂಬಿಸಿ, ಧಡೂತಿ ದೇಹದ ಆತನ ಅರ್ಧ ಕುಂಡೆ ಮಾತ್ರ ಡ್ರೈವರ್ ಸೀಟಿನಲ್ಲಿರುತ್ತಿತ್ತು. ಹತ್ತು ವರ್ಷದ ಬಳಿಕ ನಾವು ಸುಳ್ಯ ತಾಲೂಕು ವಾಸಿಗಳೇ ಆದಾಗ ಆತನ ಕಾರಿನಲ್ಲಿ ಅನೇಕ ಬಾರಿ ಗುತ್ತಿಗಾರಿಗೆ ಸಂಚರಿಸಿದೆ. ಹಿಂದೆ ಆತನ ಕಾರಿನಲ್ಲಿ ದಾರಿತಪ್ಪಿದ ಮಗನಾದುದು, ಆತ ನನಗೆ ಬುದ್ಧಿ ಹೇಳಿದ್ದು ಮತ್ತೆ ಮತ್ತೆ ನೆನಪಾಗಿ ನಗು ಬರುತ್ತಿತ್ತು.

ಕಟುಕ ತಹಸೀಲ್ದಾರ

ಮನೆಯ ಕಡುಬಡತನದ ಬಗ್ಗೆ, ಅಪ್ಪನಿಗೆ ಸಕಾಲದಲ್ಲಿ ಸಂಬಳ ಸಿಗದಿರುತ್ತಿದ್ದ ಬಗ್ಗೆ ಈಗಾಗಲೇ ಹೇಳಿದ್ದೇನೆ. ಹಾಗಾಗಿ ಎಲ್ಲಿಂದಾದರೂ ಹಣ ಸಿಗಬಹುದೇ ಎಂದು ಕಾಯುತ್ತಿದ್ದೆ. ಇಂತಹ ಹೊತ್ತಿನಲ್ಲಿ ಪೋಸ್ಟ್‌ ಮೆಟ್ರಿಕ್‌ ಸ್ಕಾಲರ್‌ ಶಿಪ್‌ ಗೆ ಅರ್ಜಿ ಆಹ್ವಾನಿಸಿದ್ದರು.

ಶಂಕ್ರಾಣದಲ್ಲಿದ್ದಾಗ ನಮ್ಮ ಪ್ರಿನ್ಸಿಪಾಲರೇ ನನಗೆ ಸಹಕಾರ ಕೊಟ್ಟಿರಲಿಲ್ಲ. ಹಾಗಾಗಿ ಸ್ಕಾಲರ್‌ ಶಿಪ್‌ ಸಿಕ್ಕಿರಲಿಲ್ಲ. ಕಾರ್ಕಳಕ್ಕೆ ಬಂದ ಮೇಲೆ ಮತ್ತೆ ಅರ್ಜಿ ಸಲ್ಲಿಸಿದೆ. ಆದರೆ, ಪ್ರತೀ ಬಾರಿ ಅಪ್ಪನ ಸಂಬಳದ ದಾಖಲೆ ಒದಗಿಸಬೇಕು, ತಹಸೀಲ್ದಾರ್‌ ಕಚೇರಿಯಿಂದ ಜಾತಿ ಸರ್ಟಿಫಿಕೇಟ್‌ ಸಲ್ಲಿಸಬೇಕು. ಇದೊಂದು ಕಿರಿಕಿರಿ. ಆದರೂ ಅದನ್ನು ಸಹಿಸಿಕೊಂಡು ಅರ್ಜಿ ಸಲ್ಲಿಸುತ್ತಿದ್ದೆ. ಅದೃಷ್ಟಕ್ಕೆ ನಾನು ಎರಡನೆ ಪಿಯುಸಿಯಲ್ಲಿ ಓದುತ್ತಿದ್ದಾಗ 300 ರುಪಾಯಿಯ ಸ್ಕಾಲರ್ ಶಿಪ್‌ ಸಿಕ್ಕಿತು. ಹೀಗೇ ಮುಂದಿನ ಎರಡು ವರ್ಷಗಳ ಕಾಲವೂ ಸಿಕ್ಕಿತು. ಓದಿಗೆ ತುಂಬಾ ಅನುಕೂಲವಾಯಿತು.

ಅಂತಿಮ ಬಿ ಎಸ್‌ ಸಿ ಯಲ್ಲಿರುವಾಗ ಮತ್ತೆ ಅರ್ಜಿ ಸಲ್ಲಿಸಿದೆ. ತಾಲೂಕು ಆಫೀಸಿನಲ್ಲಿ ಅರ್ಜಿ ಬೇಗನೇ ಇತ್ಯರ್ಥವಾಗಲಿಲ್ಲ. “ನೀವು ನೇರ ತಹಸೀಲ್ದಾರರಲ್ಲಿಗೆ ಹೋಗಿ ಅವರು ತಕ್ಷಣ ಮಾಡಿಕೊಡುತ್ತಾರೆ” ಎಂದು ಯಾರೋ ಸಲಹೆ ನೀಡಿದರು. ಆಗಿನ ತಹಸೀಲ್ದಾರ್‌ ಹೆಸರು ಶಾಂತಾರಾಮ್‌ ಎಂದು ನೆನಪು. ನಾನು ತಾಲೂಕು ಕಚೇರಿಗೆ ಹೋಗಿ, ಅಲ್ಲಿದ್ದ ಕ್ಲರ್ಕ್‌ ಬಳಿಯಿಂದ ನನ್ನ ಅರ್ಜಿ ತೆಗೆದುಕೊಂಡು, ನೇರ ತಹಸೀಲ್ದಾರ್‌ ಕೊಠಡಿಗೆ ಹೋಗಿ ವಿನಮ್ರವಾಗಿ ಭಿನ್ನವಿಸಿಕೊಂಡೆ. ಆದರೆ, ತಹಸೀಲ್ದಾರ್‌ ಬೆಳಿಗ್ಗೆ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಬಂದಿದ್ದರೋ ಏನೋ. ಮೂಡ್‌ ನಲ್ಲಿರಲಿಲ್ಲ. ಮುಖ್ಯ ಕ್ಲರ್ಕ್‌ ನನ್ನು ಕೊಠಡಿಗೆ ಕರೆಸಿದವರೇ, “ಗೌಡ/ಒಕ್ಕಲಿಗ ಸಮುದಾಯ ಯಾವ ಕೆಟಗೆರಿಯಲ್ಲಿ ಬರುತ್ತದೆ?” ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದರು. ಆತ ಯಾವುದೋ ಪ್ರವರ್ಗವನ್ನು ಹೇಳಿದ. ತಕ್ಷಣ ತಹಸೀಲ್ದಾರ್‌ ಅರ್ಜಿಯ ಮೇಲೆ ಎರಡು ಗೆರೆ ಎಳೆದು cancelled ಎಂದು ಬರೆದು ನನ್ನತ್ತ ಎಸೆದ.

ಅರ್ಜಿಯನ್ನೆತ್ತಿಕೊಂಡು ಹೊರಬಂದೆ. ಮರದಡಿ ನಿಂತೆ. ಕಣ್ಣಿನಿಂದ ಬಳ ಬಳನೆ ನೀರು ಸುರಿಯಲಾರಂಭಿಸಿತು. ತಹಸೀಲ್ದಾರ್‌ ಯಾಕೆ ಇಷ್ಟೊಂದು ನಿರ್ದಯಿಯಾದ? ಆ ದಿನ ಮುಂಡು ಒಗೆದು ಹಾಕಿದ್ದೆ, ಹಾಗಾಗಿ ಲುಂಗಿಯಲ್ಲಿದ್ದೆ, ಇದು ಆತನ ಸಿಟ್ಟಿಗೆ ಕಾರಣವಾಗಿರಬಹುದೇ? 300 ರುಪಾಯಿ! ಹಿಂದಿನ ಎರಡು ವರ್ಷ ಸಿಕ್ಕಿದ್ದು ಈಗ ಇಲ್ಲ! ಆಗಿನಿಂದ ಈಗಕ್ಕೆ ಜಾತಿ ಬದಲಾಗಿಹೋಯಿತೇ? ಓದಿನ ಎಷ್ಟೊಂದು ವಿಷಯಗಳಿಗೆ ಅದು ಸಹಾಯವಾಗುತ್ತಿತ್ತು (ಆಗ ಬಿ ಎಸ್‌ ಸಿ ಪದವಿ ಸೇರಲು ಇದ್ದ ಶುಲ್ಕ 235 ರುಪಾಯಿ)! ಯಾಕೆ ಸರಕಾರಿ ಅಧಿಕಾರಿಗಳು ಹೀಗೆ ಕಟುಕರಂತಾಗುತ್ತಾರೆ?! ಮಂಜಾದ ಕಣ್ಣುಗಳೊಂದಿಗೆ ಸೈಕಲ್‌ ಹತ್ತಿ ಮನೆಕಡೆ ಹೊರಟೆ!

ಮೊದಲ ಸಂಬಳ

ಮರಿಯಣ್ಣ ಭಟ್ಟರ ಹಿರಿಯ ಮಗ ಸುಬ್ರಹ್ಮಣ್ಯ ಭಟ್‌ ಸಾಣೂರಿನ ರಾಮನಾಥ ಪ್ರಭುಗಳ ರೈಸ್‌ ಮಿಲ್‌ ನಲ್ಲಿ ರೈಟರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರದ್ದು ಗದ್ದೆಯ ಉಸ್ತುವಾರಿಯ ಜತೆಗೆ, ಇಡೀ ರೈಸ್‌ ಮಿಲ್‌ ನ ಸುಪರ್‌ ವೈಸರ್‌ ಕೆಲಸ. ಒಂದೇ ಒಂದು ದಿನ ರಜೆ ಮಾಡದೆ, ವರ್ಷಗಳಿಂದ ಅವರು ಅಲ್ಲಿ ದುಡಿಯುತ್ತಿದ್ದರು. ಆದರೆ ಮದುವೆಯ ದಿನಗಳಲ್ಲಿ ಅವರು ಕೆಲ ದಿನ ರಜೆ ಮಾಡಬೇಕಾಯಿತು.

ಇಂಥದ್ದೇ ಒಂದು ದಿನ, ಅಂದರೆ 1981 ರ ಮೇ ತಿಂಗಳಲ್ಲಿ, “ಒಂದೆರಡು ದಿನ ನನ್ನ ಬದಲಿಗೆ ನೀನು ಕೆಲಸ ಮಾಡಬಹುದೇ?” ಎಂದು ಅವರು ನನ್ನಲ್ಲಿ ಕೇಳಿದರು. ಕಾಲೇಜಿಗೆ ರಜೆಯ ದಿನಗಳು. ಸರಿ, ಎಂದು ಒಪ್ಪಿಕೊಂಡೆ. ನನ್ನ ಕೆಲಸ ಸಾಣೂರಿಗೆ ಹೋಗಿ ಅಲ್ಲಿನ ರೈಸ್‌ ಮಿಲ್‌ ನ ಉಸ್ತುವಾರಿ ಕೆಲಸ. ಕೆಲಸದವರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುತ್ತಾರೆ. ಮಧ್ಯಾಹ್ನ ಮಿಲ್‌ ಮಾಲಕರ ಮನೆಯಲ್ಲಿ ಊಟ. ಸಂಜೆಯ ಹೊತ್ತು ಕೆಲಸಗಾರರಿಗೆ ಅಕ್ಕಿಯ ಮೂಲಕ ವೇತನ ಕೊಡಬೇಕು. ಅಕ್ಕಿ ಮಾರಿದಾಗ ಸಿಕ್ಕ ಹಣ ಇದ್ದರೆ ಅದನ್ನು ಮಿಲ್‌ ಮಾಲಕರಿಗೆ ತಲಪಿಸಬೇಕು.

ಮೂರು ದಿನ ಅಲ್ಲಿ ಕೆಲಸ ಮಾಡಿದೆ. ಸುಬ್ರಹ್ಮಣ್ಯ ಭಟ್ಟರು 10 ರುಪಾಯಿ ಕೊಟ್ಟರು. ಅದು ನನ್ನ ಮೊದಲ ಸಂಬಳ. ನಾನೇ ದುಡಿದು ಗಳಿಸಿದ ಆ ಮೊದಲ ಸಂಬಳ ಪಡೆದಾಗಿನ ಸಂತಸವನ್ನು ವರ್ಣಿಸುವುದು ಕಷ್ಟ.

ಶಿವರಾತ್ರಿಯ ದುರಂತ

ಅದು 1980 ರ ಫೆಬ್ರವರಿ ತಿಂಗಳ 17 ನೇ ತಾರೀಕು. ದುರ್ಗಾಶಾಲೆಯಲ್ಲಿ ನಾಟಕ ಪ್ರದರ್ಶನವೊಂದು ನಡೆಯುವುದಿತ್ತು. ಆ ನಾಟಕಕ್ಕೆ ಪ್ರಾಂಪ್ಟರ್‌ ಕೆಲಸ ನನ್ನದು. ಹಗಲಿಡೀ ನಾಟಕದ ರಿಹರ್ಸಲ್‌ ಇತ್ಯಾದಿ ಕೆಲಸಗಳಲ್ಲಿ ಪಾಲ್ಗೊಂಡು, ಸಂಜೆ ಮನೆಗೆ ಮರಳಿದೆ. ರಾತ್ರಿ ಪ್ರದರ್ಶನದ ಹೊತ್ತಿಗೆ ಮತ್ತೆ ಅಲ್ಲಿ ಹಾಜರಿರಬೇಕು. ಊಟ ಮಾಡಿ, ಅಂದಾಜು ರಾತ್ರಿ ಎಂಟಕ್ಕೆ, ಮನೆಯಿಂದ ಸೈಕಲ್‌ ನಲ್ಲಿ ವೇಗವಾಗಿ ಹೊರಟೆ. ಬೀದಿ ದೀಪಗಳಿಲ್ಲ, ಕತ್ತಲೋ ಕತ್ತಲು. ಅಯ್ಯಪ್ಪ ನಗರದಿಂದ ಜೋಡುರಸ್ತೆಯ ಹಾದಿಯಲ್ಲಿರುವಾಗ ಸೈಕಲ್‌ ನ ಡೈನೆಮೋ ಕೈಕೊಟ್ಟಿತು. ಅದಾಗಿ ಕೆಲವೇ ಕ್ಷಣಗಳು. ರಸ್ತೆಯ ಕಲ್ಲೊಂದಕ್ಕೆ ಸೈಕಲ್‌ ಭೀಕರವಾಗಿ ಡಿಕ್ಕಿ ಹೊಡೆಯಿತು. ರಸ್ತೆಗೆ ಉರುಳಿಬಿದ್ದೆ. ತಕ್ಷಣ ಒಂದಿಬ್ಬರು ಬಂದು ನನ್ನನ್ನು ಎತ್ತಿದರು. ಅದೃಷ್ಟಕ್ಕೆ ನನಗೇನೂ ಆಗಿರಲಿಲ್ಲ. ಆದರೆ ಸೈಕಲ್‌ ಪೂರ್ತಿ ಮುರಿದುಹೋಗಿತ್ತು. ನನ್ನನ್ನು ಎತ್ತಿದರಲ್ಲ, ಅವರು ಯಾಕೆ ಅಲ್ಲಿದ್ದರು? ನನ್ನಲ್ಲಿ ಈಗಲೂ ಇರುವ ಗುಮಾನಿಯೆಂದರೆ ಶಿವರಾತ್ರಿಯಲ್ಲವೇ? ಕಿಡಿಗೇಡಿ ಕೆಲಸಕ್ಕಾಗಿ ಮೈಲಿಗಲ್ಲೊಂದನ್ನು ರಸ್ತೆಗೆ ಅಡ್ಡಲಾಗಿ ಇಟ್ಟವರು ಅವರೇ!

ಸೈಕಲ್‌ ಅನ್ನು ತಳ್ಳಿಕೊಂಡೇ ಹೋಗಿ ಹೊಟೇಲೊಂದರ ಬಳಿ ಇರಿಸಿದೆ. ಅಲ್ಲಿಂದ ನಡೆದೇ ಹೋಗಿ ನಾಟಕ ಪ್ರದರ್ಶನಕ್ಕೆ ನೆರವಾದೆ. ರಾತ್ರಿ ಮೂರೂ ಕಾಲು ಗಂಟೆಯ ಹೊತ್ತು, ನಿರ್ಜನ ದಾರಿಯ ಆ ಕಗ್ಗತ್ತಲಲ್ಲೇ ಒಂದು ಕಿಲೋಮೀಟರ್‌ ನಡೆದು ಮನೆಸೇರಿಕೊಂಡೆ. ಸೈಕಲ್‌ ರಿಪೇರಿಗೆ ತುಂಬಾ ಖರ್ಚಾಯಿತು. ಅದೇನೇ ಇರಲೀ, ಜೀವ ಉಳಿಯಿತಲ್ಲ ಅದು ಮುಖ್ಯ.

ಕ್ಯಾಮರಾ ನಂಟು

ಕ್ಯಾಮರಾ ಎಂದರೆ ಮೊದಲಿನಿಂದಲೂ ಹುಚ್ಚು. ಆದರೆ, ಆಗಿನ್ನೂ ಉದಾರೀಕರಣ, ಜಾಗತೀಕರಣ ನೀತಿ ಜಾರಿಯಾಗಿರಲಿಲ್ಲ. ಹಾಗಾಗಿ, ಇಂಡಿಯಾದಲ್ಲಿ ಒಳ್ಳೆಯ ಕ್ಯಾಮರಾ, ರೀಲು, ಸಂಸ್ಕರಣೆ ಇತ್ಯಾದಿ ಯಾವುದೂ ಇರಲಿಲ್ಲ. 1980 ರ ದಿನಗಳಲ್ಲಿ ಕಲರ್‌ ಫೋಟೋಗಳು ಕಾಣಿಸಿಕೊಳ್ಳಲಾರಂಭಿಸಿದವು. ಆದರೆ, ಅವುಗಳ ಸಂಸ್ಕರಣೆ ಇಂಡಿಯಾದಲ್ಲಿ ಆಗುತ್ತಿರಲಿಲ್ಲ; ಗಲ್ಫ್‌ ದೇಶಗಳಲ್ಲಿ. ಕಲರ್‌ ರೋಲ್‌ ನಲ್ಲಿ ಫೋಟೋ ತೆಗೆದು ಅದನ್ನು ಗಲ್ಫ್‌ ದೇಶಕ್ಕೆ ಸಂಬಂಧಿಕರೊಂದಿಗೆ ಕಳುಹಿಸಿಕೊಡುತ್ತಿದ್ದರು. ಅಲ್ಲಿಂದ ಪ್ರಿಂಟ್‌ ಆಗಿ ಬರುತ್ತಿತ್ತು.

ನಾನು 1978 ರಲ್ಲಿ ಮೊದಲಬಾರಿಗೆ ನೋಡಿದ್ದು, ಕ್ಲಿಕ್‌ ಮಾಡಿದ್ದು ʼಕ್ಲಿಕ್‌- 3ʼ ಕ್ಯಾಮರಾದಲ್ಲಿ. 120 ಎಂ ಎಂ ಫಿಲಂ ರೋಲ್‌, 12 ಫೋಟೋಗಳು. ಆದರೆ ಗೆಳೆಯ ಮುಷ್ತಾಕ್‌ ಬಳಿ ಯಶಿಕಾ, ಮಿನಾಲ್ಟಾ ಇತ್ಯಾದಿ ಕೆಲ ಕ್ಯಾಮರಾಗಳಿದ್ದವು. ಅವುಗಳಲ್ಲಿ ಆತ ನನ್ನ ಮತ್ತು ನನ್ನ ತಾಯಿ, ತಂಗಿಯ ಕಲರ್ ಫೋಟೋ  ತೆಗೆದಿದ್ದ. ನಾನು ಆತನಿಂದ ಕ್ಯಾಮರಾ ಎರವಲು ಪಡೆದು ಕೆಲ ಫೋಟೋ ತೆಗೆದುದೂ ಇತ್ತು. ಬಿ ಎಡ್‌ ನಲ್ಲಿದ್ದಾಗ ಸಹಪಾಠಿಯೋರ್ವಳು ಕೊಟ್ಟ ಜರ್ಮನ್‌ ಕ್ಯಾಮರಾ ಕೂಡಾ ಬಳಸಿ ಚಿತ್ರದುರ್ಗದ ಕೋಟೆ ಮತ್ತಿತರ ಐತಿಹಾಸಿಕ ಸ್ಥಳಗಳ ಫೋಟೋ ತೆಗೆದಿದ್ದೆ. ಮುಂದೆ ಇಂಡಿಯಾದಲ್ಲಿಯೇ ಕಲರ್‌ ಸಂಸ್ಕರಣ ವ್ಯವಸ್ಥೆಗಳು ಬಂದವು, ನಾನು 1995 ರಲ್ಲಿ ಕುವೈಟ್‌ ನಿಂದ ಗೆಳೆಯನ ಮೂಲಕ ʼಪೆಂಟಾಕ್ಸ್‌ ಕೆ- 1000ʼ ಕ್ಯಾಮರಾ ತರಿಸಿ‌, ನನ್ನದೇ ಆದ ಕ್ಯಾಮರಾ ಹೊಂದಿದೆ. ಸಚಿತ್ರ ಲೇಖನ ತಯಾರಿಗೆ ಬಳಸಲಾರಂಭಿಸಿದೆ.

ಮೊದಲ ಬಾರಿಗೆ ಪ್ಯಾಂಟ್ಸ್‌ ತೊಟ್ಟೆ

1981 ನೇ ಇಸವಿಯ ಫೆಬ್ರವರಿ 26 ನೇ ದಿನಾಂಕವನ್ನು ನನಗೆ ಈಗಲೂ ಮರೆಯಲಾಗುತ್ತಿಲ್ಲ. ಈಗಿನವರಿಗೆ ಈ ಸಂಗತಿ ಹೇಳಿದರೆ ನಗು ಬರಬಹುದು. ಆ ದಿನ ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ಪ್ಯಾಂಟ್ಸ್‌ ತೊಟ್ಟೆ.

ಶಂಕರನಾರಾಯಣದಲ್ಲಿ ಮೊದಲ ಪಿಯು ಓದುವಾಗಲೂ ತೊಡುತ್ತಿದ್ದುದು ಚಡ್ಡಿ. ಕಾರ್ಕಳದಲ್ಲಿ ಕಾಲೇಜಿಗೆ ಹೋಗುವಾಗ ಮುಂಡು (ವೇಸ್ಟಿ). ಅನೇಕರು ಪ್ಯಾಂಟ್ಸ್‌ ತೊಡುತ್ತಿದ್ದರು. ಆದರೆ ನನ್ನಲ್ಲಿ ಅದಕ್ಕೆ ಹಣ ಇರಲಿಲ್ಲ. ದ್ವಿತೀಯ ಪದವಿಯಲ್ಲಿದ್ದಾಗ ಸಿಕ್ಕ ಪೋಸ್ಟ್‌ ಮೆಟ್ರಿಕ್‌ ಸ್ಕಾಲರ್‌ ಶಿಪ್‌ ನ 300 ರುಪಾಯಿಯಲ್ಲಿ 150 ರುಪಾಯಿ ಬಳಸಿಕೊಂಡು ಒಂದು ಪ್ಯಾಂಟ್ಸ್‌ ಹೊಲಿಸಿಕೊಂಡೆ.

ಕಾಲೇಜು ವಾರ್ಷಿಕೋತ್ಸವದ ಮುನ್ನಾ ದಿನ ನಾವು ಸ್ವಯಂಸೇವಕರು ವಾರ್ಷಿಕೋತ್ಸವ ತಯಾರಿಯ ಕೆಲಸ ಮಾಡಬೇಕಾಗಿತ್ತು. ಸಿಹಿತಿಂಡಿ ವಿತರಣೆ ಇತ್ಯಾದಿಯೂ ಇತ್ತು. ಆದಿನ ನಾನು ಪ್ಯಾಂಟ್ಸ್‌ ತೊಟ್ಟು ಕಾಲೇಜಿಗೆ ಹೋದೆ. ಒಂಥರಾ ನಾಚಿಕೆ.. ಎಲ್ಲರೂ ನನ್ನನ್ನೇ ನೋಡುತ್ತಿರುವರೋ ಏನೋ ಎಂದು ಭಾಸ. ಮುಂದೆ ಇನ್ನೊಂದು ಪ್ಯಾಂಟ್ಸ್‌ ಹೊಲಿಸಿಕೊಂಡು ಎರಡು ಪ್ಯಾಂಟ್ಸ್‌ ನಲ್ಲಿ ಅಂತಿಮ ಪದವಿಯ ಇಡೀ ವರ್ಷವನ್ನು ಸುಧಾರಿಸಿದೆ.

ಮುಷ್ತಾಕನ ಪ್ರೇಮ ಪತ್ರ ಪ್ರಕರಣ

ನನ್ನ ಲೇಖನಗಳಿಗೆ ಮುಷ್ತಾಕ ಫೋಟೋಗಳ ಮೂಲಕ ನೆರವಾಗುತ್ತಿದ್ದ. ರಂಜಾನ್‌ ದಿನ ಆತನ ಮನೆಯಲ್ಲಿ ನನಗೆ ಬಿರಿಯಾನಿ ಊಟವೂ ಸಿಗುತ್ತಿತ್ತು. ಕೆಲವೊಮ್ಮೆ ಅಲ್ಲೇ ವಿಶ್ರಾಂತಿ ತೆಗೆದುಕೊಳ್ಳುವುದೂ ಇತ್ತು. ಅದು ನನ್ನ ಮನೆಯಂತೆಯೇ ಆಗಿಹೋಗಿತ್ತು.

ಆದರೆ ಅತನಲ್ಲಿ ಕೊಂಚ ಕಿಡಿಗೇಡಿತನವೂ ಇತ್ತು. ಶಾಲೆ ಓದುತ್ತಲೂ ಇರಲಿಲ್ಲ, ದುಡಿಯುತ್ತಲೂ ಇರಲಿಲ್ಲ. ಅಪ್ಪನ ಹಣದಲ್ಲಿ ಬದುಕು. ಒಮ್ಮೆ ಆತ ಒಂದು ಪ್ರೇಮಪತ್ರ ಬರೆದುಕೊಡಲು ನನ್ನಲ್ಲಿ ಹೇಳಿದ. ನಾನು ಕವಿಯಾಗಿ ಬೆಳೆಯುತ್ತಿದ್ದ ಕಾಲ. ಕಾವ್ಯಾತ್ಮಕವಾಗಿ ಒಂದು ಅದ್ಭುತ ಪ್ರೇಮಪತ್ರ ಬರೆದುಕೊಟ್ಟೆ. ಓದಿದರೆ ಎಂತಹ ಹುಡುಗಿಯೂ ಪ್ರೇಮದ ಬಲೆಗೆ ಬೀಳಲೇಬೇಕು. ಆ ಪತ್ರ ಯಾರಿಗೆ ಎಂದು ಗೊತ್ತಿರಲಿಲ್ಲ.

ಕೆಲ ದಿನಗಳ ಬಳಿಕ ಸೈಕಲ್‌ ರಿಪೇರಿಯ ಅಂಗಡಿಗೆ ಹೋದಾಗ ಅಲ್ಲಿನ ಕೆಲಸಗಾರ, “ನಿನ್ನೆ ಯಾರೋ ಕೆಲವರು ಮುಷ್ತಾಕನನ್ನು ಹುಡುಕಿಕೊಂಡು ಬಂದಿದ್ದರು” ಎಂದ. ನನಗೆ ದಿಗಿಲಾಯಿತು. ಇನ್ನೂ ಕೆಲವು ದಿನಗಳ ಬಳಿಕ ಸಿಕ್ಕ ವರದಿಯ ಪ್ರಕಾರ, ತೀವ್ರ ಜಖಂ ಗೊಳ್ಳುವಂತೆ ಮುಷ್ತಾಕನನ್ನು ಹಿಗ್ಗಾ ಮುಗ್ಗಾ ಥಳಿಸಲಾಗಿತ್ತು.

ಅದು ಇಂದಿಗೆ 45 ವರ್ಷಗಳ ಹಿಂದಿನ ಕತೆ. ಈಗ ಹಿಂದೂ ಹುಡುಗಿಯೊಬ್ಬಳಿಗೆ ಮುಸ್ಲಿಂ ಹುಡುಗನೊಬ್ಬ ಪ್ರೇಮಪತ್ರ ಕೊಟ್ಟರೆ ಪರಿಸ್ಥಿತಿ ಏನಾಗಬಹುದು? ಊರು ಸುಟ್ಟು ಹೋಗುತ್ತಿತ್ತು, ಒಂದೆರಡು ಹೆಣ ಬೀಳುತ್ತಿತ್ತು. ಆಗ ಕಾಲ ಇಷ್ಟು ಕೆಟ್ಟಿರಲಿಲ್ಲ.

ಶ್ರೀನಿವಾಸ ಕಾರ್ಕಳ

ಸಮಾಜ ಚಿಂತಕರು

ಇದನ್ನೂ ಓದಿ- https://kannadaplanet.com/its-a-big-story-autobiography-series-25-novelist-sadananda/ ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ- 25 | ಹೊರಗೆಲ್ಲ ಖ್ಯಾತ, ಊರಲ್ಲಿ ಅಪರಿಚಿತ- ಕಾದಂಬರಿಕಾರ ʼಸದಾನಂದʼ

More articles

Latest article

Most read