ನವದೆಹಲಿ : ವಿದ್ಯಾರ್ಥಿಗಳ ಬೇಡಿಕೆಗಳನ್ನು ಬೆಂಬಲಿಸಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಗಳ ವಿಷಯದಲ್ಲಿ ಸರ್ಕಾರದ ವಿರುದ್ಧದ ತಮ್ಮ ಟೀಕೆಯನ್ನು ತೀವ್ರಗೊಳಿಸಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳು ನ್ಯಾಯಯುತ ಕಾರಣಕ್ಕಾಗಿ ಪ್ರತಿಭಟಿಸುತ್ತಿದ್ದಾರೆ ಮತ್ತು ಸರ್ಕಾರವು ಅವರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಬುಧವಾರ ಹೇಳಿದರು.
ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು , ಪ್ರಸ್ತುತ ಆಡಳಿತದ ಅಡಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಲಾಗಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವನ್ನು ಗಂಭೀರವಾಗಿ ಟೀಕಿಸಿದರು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು “ಭ್ರಷ್ಟ” ಮತ್ತು “ಅಸಮರ್ಥ” ಎಂದು ಕರೆದ ರಾಹುಲ್ ಗಾಂಧಿ, ಅವರು ರಾಜೀನಾಮೆ ನೀಡಬೇಕೆಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. “ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದು ನ್ಯಾಯಯುತವಾದ ಬೇಡಿಕೆ. ಪ್ರಧಾನ್ ಒಬ್ಬ ಭ್ರಷ್ಟ ಮತ್ತು ಅಸಮರ್ಥ ವ್ಯಕ್ತಿ. ಈ ಎಲ್ಲಾ ಘಟನೆಗಳಿಗೂ ಪ್ರಧಾನ್ ಅವರೇ ನೇರ ಕಾರಣ. ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಹೇಳಿದರು.
“ಭಾರತದ ಶಿಕ್ಷಣ ವ್ಯವಸ್ಥೆಯು ನಮ್ಮ ಅತಿದೊಡ್ಡ ಆಸ್ತಿಯಾಗಿತ್ತು, ಆದರೆ ಶಿಕ್ಷಣ ಸಚಿವರು ಅದನ್ನು ನಾಶಪಡಿಸಿದ್ದಾರೆ” ಎಂದು ಆರೋಪಿಸಿದರು.
ಅಂಕಿಅಂಶಗಳನ್ನು ಉಲ್ಲೇಖಿಸಿದ ಗಾಂಧಿ, ಕಳೆದ 10 ವರ್ಷಗಳಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ, ಅಂದರೆ ಸರಾಸರಿ ತಿಂಗಳಿಗೆ ಒಂದು ಸೋರಿಕೆ ಸಂಭವಿಸಿದೆ. ಈ ಸೋರಿಕೆಗಳು ಕೋಟ್ಯಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿವೆ. ಆದರೂ, ಕಳೆದ 10 ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ,” ಎಂದು ರಾಹುಲ್ ಹೇಳಿದರು.
ಶಿಕ್ಷಣ ವ್ಯವಸ್ಥೆಯು ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕದಂತಾಗಿದೆ. ಈ ದೋಷಪೂರಿತ ವ್ಯವಸ್ಥೆಯು ಬಡವರು ಮತ್ತು ಮಧ್ಯಮ ವರ್ಗದವರಿಗೆ ಅವಕಾಶದ ಬಾಗಿಲನ್ನು ಮುಚ್ಚಿದೆ. ಈ ವ್ಯವಸ್ಥೆಯು ಕೇವಲ ಶ್ರೀಮಂತರಿಗಾಗಿ ಮಾತ್ರ ಇದೆ. ಇದರಲ್ಲಿ ಬಡವರಿಗೆ ಯಾವುದೇ ಸ್ಥಾನವಿಲ್ಲ ಎಂದು ರಾಹುಲ್ ಹೇಳಿದರು.
ಭಾರತದಲ್ಲಿ ನೀಟ್ (NEET) ಆಕಾಂಕ್ಷಿಗಳ ವಾರ್ಷಿಕ ತರಬೇತಿ ವೆಚ್ಚವು 1.32 ಲಕ್ಷ ಕೋಟಿ ರೂಪಾಯಿಗಳಷ್ಟಿದೆ ಎಂದು ಉಲ್ಲೇಖಿಸಿದ ರಾಹುಲ್ ಗಾಂಧಿ, ಇದು ದೇಶದ ವಾರ್ಷಿಕ ಶಿಕ್ಷಣ ಬಜೆಟ್ ಆದ 1.4 ಲಕ್ಷ ಕೋಟಿ ರೂಪಾಯಿಗಳಿಗೆ ಬಹುತೇಕ ಸಮಾನವಾಗಿದೆ ಎಂದು ಪ್ರತಿಪಾದಿಸಿದರು.


