ಕನ್ನಡ ರಂಗಭೂಮಿಯ ವಿಶಿಷ್ಟ ಪ್ರತಿಭೆ, ನಿರ್ದೇಶಕ, ನಟ ರಂಗಚಿಂತಕ ಸಾಹಿತಿ ಚಿದಂಬರ ರಾವ್ ಜಂಬೆಯವರು ನಮ್ಮನ್ನಗಲಿದ್ದಾರೆ (12-09-2026) ಅವರು ರಂಗಭೂಮಿಯನ್ನು ಕೇವಲ ಪ್ರದರ್ಶನದ ಮಾಧ್ಯಮವಾಗಿ ನೋಡದೆ, ಸಾಮಾಜಿಕ-ಸಾಂಸ್ಕೃತಿಕ ಚಿಂತನೆಯ ವೇದಿಕೆಯಾಗಿ ಕಟ್ಟಿದವರು. ಅವರ ನಿರ್ದೇಶನದಲ್ಲಿ ಪ್ರಯೋಗಶೀಲತೆ, ಸೃಜನಶೀಲತೆ ಮತ್ತು ವೈಚಾರಿಕತೆಗಳು ವಿಶಿಷ್ಟವಾಗಿ ಮೇಳೈಸಿವೆ. ರಂಗಕಲೆಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಲೇ, ಯುವ ರಂಗಕರ್ಮಿಗಳಿಗೆ ಪ್ರೇರಣೆಯಾದ ಅವರನ್ನು ಸ್ಮರಿಸಿ ಅವರ ಆಪ್ತ ಶಿಷ್ಯ, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಬರೆದ ನುಡಿನಮನ ಇಲ್ಲಿದೆ.
ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ – ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ ಅವರೆಲ್ಲರ ಮಾತುಕತೆಗಳಲ್ಲಿ ಜಂಬೆ ಮೇಷ್ಟ್ರು ಒಮ್ಮೆಯಾದರೂ ಯಾವುದೋ ನಾಟಕ, ಸಂದರ್ಭ ಮುಂತಾಗಿ ಪ್ರತ್ಯಕ್ಷವಾಗುತ್ತಾರೆ. ಅವರ ಉಲ್ಲೇಖವಿಲ್ಲದ ಮಾತುಕತೆಗಳು ವಿರಳ. ಇದು ಕಳೆದ ಮೂರು ದಶಕಗಳ ವಿದ್ಯಮಾನ. ಇಂತಹ ರಂಗ ಗುರುಗಳು ಅಪ್ರತ್ಯಕ್ಷವಾಗಿದ್ದರೂ ಪರಿಣಮಿಸುತ್ತಲೇ ಇರುತ್ತಾರೆ. ಇದಕ್ಕೆ ಕಾರಣ ಜಗತ್ತಿನ ಪ್ರಚಲಿತ ಅಧ್ಯಯನ ಶಿಸ್ತುಗಳಿಗೆ ಹೋಲಿಸಿದರೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಗುರುವಿನ ಇರುವಿಕೆ ಹಾಗು ಕಾರ್ಯ ವಿಧಾನಗಳ ಸ್ವರೂಪ.
ಬದುಕಿನ ಪಠ್ಯಗಳಿಂದ ಪಡೆದು ರಂಗಭೂಮಿಯ ಮೂಲಕ ಬದುಕಿಗೇ ಅನ್ವಯಿಸುವ ಆಳವಾದ ಪ್ರಾಯೋಗಿಕ ಪ್ರಕ್ರಿಯೆಯಲ್ಲಿ ನಿರತರಾದ ಗುರು ಒಮ್ಮೊಮ್ಮೆ ಝೆನ್ ಗುರುವಿನಂತೆ ಭಾಸವಾಗುತ್ತಾರೆ. ಇದು ಮಾನವೀಯ ಅಂತಃಕರಣವೊಂದು ಹಲವು ದಶಕಗಳು ರಂಗ ಗುರುವಿನ ಪಾತ್ರದ ಧಾರಣೆಯ ಧ್ಯಾನದಿಂದ ಪಡೆದುಕೊಂಡಿರಬಹುದಾದ ಆಧ್ಯಾತ್ಮಿಕ ಸಿದ್ದಿ. ಇಂತಹ ರಂಗ ಗುರುವಿನ ಅನುಸಂಧಾನದಿಂದಾಗಿ ಒದಗಿ ಬರುವ ಅನುಭವಗಳು ಕಥನಗಳಾಗಿ, ರಂಗಪಠ್ಯವಾಗಿ ವಿದ್ಯಾರ್ಥಿಗಳ ಜೀವನದುದ್ದಕ್ಕೂ ಅರಿವಾಗಿ ಪರಿಣಮಿಸುವ ರೀತಿ ಅನನ್ಯವಾದುದು.
ಈ ಗುರು ಬದುಕಿನ ಪಠ್ಯಗಳನ್ನು ಆಯ್ದಕೊಂಡದ್ದು ಅಂಟನ್ ಚೆಕಾಫ್, ಮ್ಯಾಕ್ಸಿಂ ಗಾರ್ಕಿ, ಲಿಯೋ ಟಾಲ್ಸ್ಟಾಯ್, ವಿಲಿಯಂ ಶೇಕ್ಸ್‌ಪಿಯರ್, ಚಿನಿವಾ ಅಚಿಬೆ, ಶೂದ್ರಕ, ಭಾಸ, ಕಾಳಿದಾಸ, ಸಂಸ, ಮಹೇಶ್ ಎಲ್ಕುಂಚುವಾರ್.. ಮುಂತಾಗಿ ಜಗತ್ತಿನ ಹಲವು ದೇಶ ಭಾಷೆಗಳ ನೂರಾರು ನಾಟಕಕಾರರ ನಾಟಕ ಬರಹಗಳಿಂದ. ಇವುಗಳನ್ನು ರಂಗಕೃತಿಯಾಗಿಸಿ ಭಾರತೀಯ ಹಾಗು ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಾ ಆಯಾ ಕಾಲದ ಸಮುದಾಯದ ವಿವೇಕ ಹಾಗೂ ಅರಿವನ್ನು ವಿಸ್ತರಿಸಿದವರು. ಒಂದು ಕಡೆ ರಂಗಕೃತಿಗಳನ್ನು ಕಟ್ಟುತ್ತಲೇ ಮತ್ತೊಂದು ಕಡೆ ಕನ್ನಡದ ಮೂಲಕವೇ ಭಾರತೀಯ ರಂಗಭೂಮಿಯನ್ನು ಸಶಕ್ತವಾಗಿ ರೂಪಿಸಬಲ್ಲ ಪ್ರತಿಭಾವಂತ ರಂಗಕರ್ಮಿಗಳನ್ನು ರೂಪಿಸುತ್ತಿದ್ದರು. ಹಲವು ದಶಕಗಳ ರಂಗ ಕಾಯಕದ ಫಲವಾಗಿ ಇಂದು ಕರ್ನಾಟಕದ ಯಾವುದೇ ಜಿಲ್ಲೆಯ ಊರುಗಳಲ್ಲಿ ರಂಗ ತರಬೇತಿಯೋ, ನಾಟಕ ಪ್ರದರ್ಶನವೋ ಆಗುತ್ತಿದ್ದರೆ ಅಲ್ಲೆಲ್ಲಾ ಜಂಬೆ ಮೇಷ್ಟ್ರ ಒಬ್ಬಿಬ್ಬರು ಶಿಷ್ಯರಿರುತ್ತಾರೆ.
ಉಡುಪಿ ಯಕ್ಷಗಾನ ಕೇಂದ್ರ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗಳಲ್ಲಿ ಪದವಿ ಪಡೆದು ಪರಿಣಿತರಾದ ಚಿದಂಬರ ರಾವ್ ಜಂಬೆಯವರು ಸುಮಾರು ಇಪ್ಪತ್ತು ವರ್ಷಗಳ ಕಾಲ ನೀನಾಸಮ್ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಮೈಸೂರು ರಂಗಾಯಣದ ನಿರ್ದೇಶಕರಾಗಿ, ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರಿನ ಮೊದಲ ನಿರ್ದೇಶಕರಾಗಿ, ಸಾಣೇಹಳ್ಳಿಯ ಶಿವಕುಮಾರ ರಂಗಶಾಲೆಯ ನಿರ್ದೇಶಕರಾಗಿ ಒಟ್ಟೂ ಕನ್ನಡ ರಂಗಭೂಮಿಯ ರಂಗಶಾಲೆಗಳಿಗೆಲ್ಲಾ ಅವರ ಅನುಭವದ ಜ್ಞಾನದಿಂದ ಒಳ್ಳೆಯ ಅಡಿಪಾಯ ಹಾಕಿದ್ದಾರೆ. ಆ ಮೂಲಕ ಐದುನೂರಕ್ಕೂ ಹೆಚ್ಚು ಬದ್ಧತೆಯುಳ್ಳ ರಂಗಕರ್ಮಿಗಳನ್ನು ಸೃಷ್ಟಿಸಿದ್ದಾರೆ. ಇವರಲ್ಲಿ ಅನೇಕ ನಟ, ನಟಿಯರು, ನಿರ್ದೇಶಕರು, ರಂಗ ತಂತ್ರಜ್ಞರು, ಸಂಗೀತ ಕಲಾವಿದರು, ಸಂಘಟಕರು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜಂಬೆ ಮೇಷ್ಟ್ರ ಶಿಷ್ಯರೆಂಬುದು ಇವರೆಲ್ಲರ ಹೆಮ್ಮೆ.
ಇವೆಲ್ಲವನ್ನೂ ಅವರು ಸಾಧ್ಯವಾಗಿಸಿದುದು ಭಾರತದ ಯಾವುದೇ ಮಹಾನಗರದಲ್ಲಿ ಅಲ್ಲ; ಬದಲಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಎಂಬ ಗ್ರಾಮದಲ್ಲಿ. ಸ್ವಾತಂತ್ರ್ಯಾನಂತರ ನವ ಭಾರತವನ್ನು ಕಟ್ಟುವ ಹುಮ್ಮಸ್ಸಿನಲ್ಲಿ ಕೆ.ವಿ. ಸುಬ್ಬಣ್ಣ ಮತ್ತು ಗ್ರಾಮಸ್ಥರು ಕಟ್ಟಿದ ನೀನಾಸಮ್ ಸಂಸ್ಥೆಯ ರಂಗಶಿಕ್ಷಣ ಕೇಂದ್ರದ ಮೂಲಕ ನೀನಾಸಮ್ ಬಳಗ, ರಂಗಶಿಕ್ಷಣ ಕೇಂದ್ರ, ತಿರುಗಾಟಗಳಿಗಾಗಿ ಅವರು ನಿರ್ದೇಶಿಸಿದ ವಾಸ್ತವಾದಿ ನಾಟಕಗಳಾದ ಕದಡಿದ ನೀರು, ಆ ಊರು ಈ ಊರು, ಚಿರ ಬಂದಿವಾಡೆ, ಈ ಕೆಳಗಿನವರು, ಚೆರ್ರಿ ಆರ್ಚರ್ಡ್, ತ್ರಿ ಸಿಸ್ಟರ್ಸ್, ಕತ್ತಲೆಗೆ ಹತ್ತು ತಲೆ ಮುಂತಾದ ನಾಟಕಗಳಲ್ಲದೇ ತಲೆದಂಡ, ಭಾಸ ಭಾರತ, ವಿಗಡ ವಿಕ್ರಮರಾಯ, ಚಾಣಕ್ಯ ಪ್ರಪಂಚ, ಲೋಕ ಶಾಕುಂತಲ, ಕಿಂಗ್ ಲಿಯರ್, ಪುಂಟಿಲ, ಅಥೆನ್ಸಿನ ಅರ್ಥವಂತ, ಮಹಾತ್ಮ, ಕೆಂಪು ಕಣಿಗಿಲೆ ಮುಂತಾಗಿ ಇನ್ನೂ ಹಲವಾರು ಮಹತ್ವದ ನಾಟಕಗಳನ್ನು ಕನ್ನಡದ ಜನ ಮಾನಸಕ್ಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಮಾತ್ರವಲ್ಲದೇ ರಾಷ್ಟ್ರೀಯ ನಾಟಕ ಶಾಲೆ ದೆಹಲಿ, ಕಲಾಕ್ಷೇತ್ರ ಮಣಿಪುರ್, ರಂಗಮಂಡಲ್ ಭೂಪಾಲ್, ಭರತೆಂದು ನಾಟ್ಯ ಅಕಾಡೆಮಿ, ಲಕ್ನೋ ಮುಂತಾದ ರಾಜ್ಯಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಈ ಎಲ್ಲ ಪ್ರಯೋಗಗಳಲ್ಲಿ ತೊಡಗಿಸಿಕೊಂಡ ನೂರಾರು ಕಲಾವಿದ ಶಿಷ್ಯರೊಳಗೆ ಹಲವಾರು ಬಗೆಗಳಲ್ಲಿ ಜಂಬೆ ಮೇಷ್ಟ್ರ ರಂಗ ಪ್ರಕ್ರಿಯೆಯ ಒಡನಾಟದ ಕಥೆಗಳಿವೆ. ತಲೆಮಾರಿನಿಂದ ತಲೆಮಾರಿಗೆ ಹರಿವ ಈ ಸ್ಮೃತಿ ಕತೆಗಳು ಒಂದು ಕಾಲದ ರಂಗ ಸಮುದಾಯದ ವಿವೇಕವನ್ನು ರೂಪಿಸಿವೆ. ಜಂಬೆ ಮೇಷ್ಟ್ರು ವಿದ್ಯಾರ್ಥಿಯಾಗಿ ನನ್ನನ್ನು ರೂಪಿಸಿದ ನೆನಪಿನ ಕತೆಗಳನ್ನು ಇಲ್ಲಿ ದಾಖಲಿಸುತ್ತಾ ಗುರುವಿಗೆ ನುಡಿಯ ನಮನಗಳನ್ನು ಸಲ್ಲಿಸುತ್ತೇನೆ.
ಸುಮಾರು 28 ವರ್ಷಗಳ ಹಿಂದೆ ನಾನು ನೀನಾಸಮ್ ರಂಗ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಜಂಬೆ ಸರ್ ಶೇಕ್ಸ್‌ಪಿಯರ್ ನ ‘ಕಿಂಗ್‌ಲಿಯರ್’ ನಾಟಕದ ತಾಲೀಮು ಮಾಡಿಸುತ್ತಿದ್ದರು. ಆ ನಾಟಕದಲ್ಲಿ ನಾನು ‘ಗ್ಲೂಸ್ಟರ್’ ಪಾತ್ರವನ್ನು ನಿರ್ವಹಿಸುತ್ತಿದ್ದೆ. ತಾಲೀಮಿನ ನಡುವೆ ರಂಗದ ಮೇಲಿದ್ದ ನಟನಿಗೆ ಆಂಗಿಕ ಅಭಿನಯವನ್ನು ಕುರಿತು ಹೇಳುತ್ತಾ ‘Body language; it is an extension of soul’ ಎಂದರು. ಏನನ್ನೊ ಯೋಚಿಸುತ್ತಾ ಕುಳಿತಿದ್ದ ನನಗೆ ಈ ವಾಕ್ಯವನ್ನು ಕೇಳಿ ಮೈ ರೋಮಾಂಚನವಾಯಿತು. ‘ಆತ್ಮ ದೇಹದಲ್ಲಿ ಅರಳುವುದು’, ‘ಆತ್ಮದ ವಿಕಸನ ಆಂಗಿಕದಲ್ಲಿ’ ಅಥವಾ ‘ಅಭಿನಯದ ಮೂಲಕ ಆತ್ಮ ವಿಕಾಸ’ ಎಂದೆಲ್ಲಾ ಈಗ ಅನ್ನಿಸುತ್ತಿದೆ. ಆದರೆ ಆಗ ಗುರುವಾಕ್ಯವೊಂದು ನನ್ನೆದೆಯೊಳಗೆ ನೆಟ್ಟಿತ್ತು. ಈಗಲೂ ಈ ವಾಕ್ಯವನ್ನು, ಅದರ ಅನುಭವವನ್ನು ಶೋಧಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದೇನೆ.
ಚಿದಂಬರ ರಾವ್ ಜಂಬೆಯವರು ನನ್ನ ಗುರುಗಳು. ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಅವರಿಂದ ಹೇಳಿಸಿಕೊಂಡ ಪಾಠ ಕಡಿಮೆ. ಆದರೆ ಅವರ ಇರುವಿಕೆಯಿಂದ ಪಡೆದುಕೊಂಡದ್ದು ಹೆಚ್ಚು. ಅವರ ಇರುವಿಕೆಯಿಂದಾದ ಅನುಭವಗಳು ನನ್ನ ಆಲೋಚನೆ ನಡೆ ನುಡಿಗಳನ್ನು ಪ್ರಭಾವಿಸಿವೆ. ಇಷ್ಟೂ ವರ್ಷಗಳು ಕಾಯಾ, ವಾಚಾ, ಮನಸಾ ನನ್ನ ನಡೆ ನುಡಿಗಳು, ಆಲೋಚನೆಗಳು ಭ್ರಷ್ಟವಾಗದಂತೆ ಕಾಪಾಡಿವೆ. ಈ ಗುರುಗಳಿಂದ ಏನು ಕಲಿತೆ? ಎಂದು ಕೇಳಿದರೆ ನನಗೆ ಈಗಲೂ ಹೇಳಲು ಗೊತ್ತಾಗುವುದಿಲ್ಲ. ನನ್ನ ಬದುಕಿನುದ್ದಕ್ಕೂ ಕಲಾವಿದನಾಗಿರುವ ಕಾರಣಕ್ಕೆ ಜನರು ತೋರಬಯಸಿದ ಸಿಂಪತಿಯನ್ನು ನಿರಾಕರಿಸಿದ್ದೇನೆ. ಪ್ರೀತಿಯನ್ನಷ್ಟೇ ಸ್ವೀಕರಿಸಿ ಅವರ ಕರುಣೆಯಿಂದ ನಾನು ಕಳೆದುಕೊಳ್ಳಬಹುದಾಗಿದ್ದ ನಿಷ್ಠುರತೆಯನ್ನು ಕಾಪಾಡಿಕೊಂಡಿದ್ದೇನೆ. ‘ಮೃದು ಹೃದಯದ ಕಠಿಣ ಗುರು’ ಅವರು.

ರಷ್ಯಾದ ʼಆ್ಯಂಟನ್ ಚೆಕಾಫ್ʼ ಜಂಬೆ ಸರ್ಗೆ ಮೆಚ್ಚಿನ ಲೇಖಕ. ನಾಟಕಕಾರ. ಅವರ ಈ ಐದು ದಶಕಗಳ ದೀರ್ಘ ರಂಗ ಪಯಣದಲ್ಲಿ ನೀನಾಸಮ್ ವಿದ್ಯಾರ್ಥಿಗಳಿಗೆ, ತಿರುಗಾಟಕ್ಕೆ, ದೇಶದ ಹಲವು ರಂಗ ತಂಡಗಳಿಗೆ ಚೆಕಾಫ್ನ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಚರ್ರಿ ಆರ್ಚಡ್. ಶ್ರೀ ಸಿಸ್ಟರ್ಸ್, ಅಂಕಲ್ ವಾನ್ಯ ಸೇರಿದಂತೆ ಚೆಕಾಫ್ನ ಹಲವು ನಾಟಕಗಳನ್ನು ಒಂದು ರೀತಿಯ ರಿಯಲಿಸ್ಟಿಕ್ ಅನುಸಂಧಾನದಲ್ಲಿ ಶೋಧಿಸಿದವರು ಅವರು. ನಿಜ ಹೇಳಬೇಕೆಂದರೆ ಇಷ್ಟು ವರ್ಷಗಳಲ್ಲಿ ಮತ್ತೆ ಮತ್ತೆ ಚೆಕಾಫ್ನ ನಾಟಕಗಳಿಗೆ ಒಡ್ಡಿಕೊಳ್ಳುತ್ತಾ ಪರಿಣತಿಯನ್ನು ಪಡೆದಿದ್ದರು. ಕೆಲ ವರ್ಷಗಳ ಹಿಂದೆ ಧಾರವಾಡದ ರಂಗಾಯಣದ ವಿದ್ಯಾರ್ಥಿಗಳಿಗೆ ಈ ಲೇಖಕನ ಕಥೆಗಳು, ಲೇಖನಗಳು, ಪತ್ರಗಳು ಎಲ್ಲವನ್ನೂ ಇಟ್ಟುಕೊಂಡು ಈ ಎಲ್ಲಾ ಬರಹಗಳಲ್ಲಿರುವ ಚೆಕಾವ್ನ ಹುಡುಕುತ್ತಾ ‘ಚೆಕಾವ್ ಟು ಶಾಂಪೇನ್’ ನಾಟಕವನ್ನು ನಿರ್ದೇಶಿಸಿದ್ದರು. ಸುಮಾರು ಎರಡು ತಿಂಗಳು ನಡೆದ ಈ ತಾಲೀಮು ಪ್ರಕ್ರಿಯೆಯ ಬಗೆಗೆ ನನ್ನೊಂದಿಗೆ ಮಾತನಾಡುತ್ತಾ ಅವರು ಹೇಳಿದರು ‘ಇಷ್ಟು ವರ್ಷಗಳಲ್ಲಿ ಎಷ್ಟೆಲ್ಲಾ ಬಾರಿ ಚೆಕಾವ್ನ ನಾಟಕಗಳನ್ನು ಮಾಡಿಸಿದ್ದೇನೆ, ಆದರೆ ಚೆಕಾವ್ ನನಗೀಗ ಬೇರೆಯದೇ ರೀತಿಯಲ್ಲಿ ಅರಿವಾಗುತ್ತಿದ್ದಾನೆ’ ಎಂದು ಬಿಟ್ಟರು. ನಾಟಕ ಆಗಲು ನಿಜವಾಗಿ ಒಂದು ತಿಂಗಳ ತಾಲೀಮಿನ ಅವಧಿ ಸಾಲದು ಅನ್ನಿಸುತ್ತಿದೆ ಎಂದರು. ಎಷ್ಟು ವಿನಯದಿಂದ ಇಷ್ಟು ವರ್ಷಗಳಲ್ಲಿ ಚೆಕಾವ್ ನನಗೆ ಅರ್ಥವಾಗಿದ್ದು ಅಲ್ಪ, ಅರಿವಾಗುತ್ತಿರುವುದು ಈಗ ಎಂದುಬಿಟ್ಟರಲ್ಲ ಅನಿಸಿತು. ಇದು ನನಗೆ ಗುರುಗಳು ಹೇಳಿದ ಪಾಠ ಎಂದುಕೊಂಡೆ.
ತಿಪಟೂರಿನ ನಮ್ಮ ರಂಗ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಒಮ್ಮೊಮ್ಮೆ ನನ್ನ ಪಕ್ಕದಲ್ಲಿ ಒಂದು ಖಾಲಿ ಕುರ್ಚಿಯನ್ನು ಇರಿಸಿಕೊಂಡಿರುತ್ತಿದ್ದೆ. ಮತ್ತು ನನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೆ, ಈ ಕುರ್ಚಿಯಲ್ಲಿ ನನ್ನ ಗುರುಗಳು ಕುಳಿತಿರುತ್ತಾರೆ; ನಾನೇನಾದರೂ ತಪ್ಪು ಮಾಡಿದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು. ಹೀಗೆ ಹೇಳುವಲ್ಲಿ ಗುರುವಿನ ಪಾತ್ರ ಮಾಡುತ್ತಿದ್ದ ನಾನು ಪಾಠ ಮಾಡುವ ಬದ್ಧತೆಯಲ್ಲಿ ಎಲ್ಲಿಯೂ ಎಚ್ಚರ ತಪ್ಪದಂತೆ ಗುರುಕಾಯಲಿ ಎಂಬ ಕೋರಿಕೆಯೂ ಇರುತ್ತಿತ್ತು. ನಾನು ಪಾಠ ಮಾಡುವಾಗ ಒಮ್ಮೊಮ್ಮೆ ಜಂಬೆ ಸರ್ ಕುರಿತು ಹೇಳುತ್ತಿದ್ದುದರಿಂದ ಅವರಿಗೆಲ್ಲ ನನ್ನ ಗುರುಗಳ ಬಗ್ಗೆ ಕಲ್ಪನೆ ಇತ್ತು. ಮತ್ತು ಹೆಗ್ಗೋಡು ಬೆಂಗಳೂರಿನ ನಡುವೆ ಕಾರಿನಲ್ಲಿ ಓಡಾಡುವಾಗ ತಿಪಟೂರಿನ ನನ್ನ ಮನೆಗೆ ಅವರು ಬರುತ್ತಿದ್ದುದರಿಂದ ಅವರಲ್ಲಿ ಕೆಲವರಿಗೆ ಅವರ ಪರಿಚಯವಿದ್ದಿತು. ಅದೇಕೋ ಗೊತ್ತಿಲ್ಲ ಅವರಿಗೆ ಮೀಸಲಾಗಿದ್ದ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳುತ್ತಿರಲಿಲ್ಲ. ಮತ್ತು ನಾನು ಯಾವಾಗಲಾದರೂ ಆ ಕುರ್ಚಿಯನ್ನು ನನ್ನ ಪಕ್ಕದಲ್ಲಿಟ್ಟು ನಾಟಕದ ತಾಲೀಮಿಗೋ, ಪಾಠ ಹೇಳಲೋ ತೊಡಗಿದೆನೆಂದರೆ ಇಡೀ ಆವರಣದಲ್ಲಿ ಒಂದು ರೀತಿಯ ಗಾಂಭೀರ್ಯ ಆವರಿಸುತ್ತಿತ್ತು. ಅಗೋಚರ ಗುರುವಿನ ಇರುವಿಕೆಯ ಅರಿವೊಂದು ಭಾಸವಾಗುತ್ತಿತ್ತು. ಕುರ್ಚಿಯನ್ನಿಟ್ಟು ನಾನು ಹೊರಗೆ ಇದ್ದರು ಕೂಡ.
ಮೈಸೂರಿನ ರಂಗಾಯಣದಲ್ಲಿ ರಂಗ ಶಾಲೆಯ ವಿದ್ಯಾರ್ಥಿಗಳಿಗಾಗಿ ನಾನು ಗಾರ್ಸಿಯ ಲೋರ್ಕಾನ ‘ಚಮ್ಮಾರನ ಹೆಂಡತಿ’ ನಾಟಕವನ್ನು ನಿರ್ದೇಶಿಸುತ್ತಿದ್ದೆ.. ಅಂದು ನಾಟಕದ ಪ್ರಥಮ ಪ್ರದರ್ಶನಕ್ಕಾಗಿ ತಾಲೀಮು ನಡೆಯುತ್ತಿತ್ತು. ಜಂಬೆ ಸರ್ ಅಂದು ಅನಿರೀಕ್ಷಿತವಾಗಿ ಮೈಸೂರಿಗೆ ಬಂದಿದ್ದು; ಬೆಂಗಳೂರಿಗೆ ವಾಪಸ್ಸು ಹೊರಟಿದ್ದರು. ನಾನು ರಂಗಾಯಣದಲ್ಲಿ ನಾಟಕ ಮಾಡಿಸುತ್ತಿರುವ ವಿಷಯ ತಿಳಿದು ಫೋನ್ ಮಾಡಿದರು. ನಾನು ತಕ್ಷಣವೇ ಯೂನಿವರ್ಸಿಟಿಯ ಗೆಸ್ಟ್‌ಹೌಸ್‌ಗೆ ಹೋದೆ. ಬೆಂಗಳೂರಿಗೆ ಹೊರಟು ಲಗೇಜನ್ನೆಲ್ಲಾ ಹೊರಗಿಟ್ಟುಕೊಂಡು ಜಂಬೆ ಸರ್ ರಿಸೆಪ್ಶನ್‌ನಲ್ಲಿ ಕಾಯುತ್ತಾ ಕುಳಿತಿದ್ದರು. ನಾನು ಹೋಗಿ ಇಂದು ಉಳಿದುಕೊಂಡು ನನ್ನ ನಾಟಕವನ್ನು ನೋಡಲೇಬೇಕೆಂದು ವಿನಂತಿಸಿದೆ. ತಕ್ಷಣವೇ ‘ನಾಟಕಕ್ಕೆ ಬರ್ತೇನ್ರಿ ; ನಾನು ಏನು ಏನು ಪಾಪ (ತಪ್ಪು) ಮಾಡಿದ್ದೇನೆ ನೋಡಬೇಕಲ್ಲ’ ಎಂದು ಲಗೇಜನ್ನು ರೂಮಿಗೆ ವಾಪಸ್ಸು ಇರಿಸಿಬಿಟ್ಟರು. ಅವರು ಕಲಿಸಿದ ವಿದ್ಯೆಯ ಒಪ್ಪು- ತಪ್ಪುಗಳು ಈ ಹಲವು ವರ್ಷಗಳಲ್ಲಿ ಹೇಗೆ ಪರಿಣಮಿಸಿರಬಹುದು ಎಂಬುದನ್ನು ಅಂದಿನ ನನ್ನ ನಾಟಕ ಪ್ರಯೋಗದ ಕನ್ನಡಿಯಲ್ಲಿ ನೋಡಿಕೊಳ್ಳಲು ಬಯಸಿ ಹೇಳಿದ ಆತ್ಮವಿಮರ್ಶೆಯ ಈ ಮಾತನ್ನು ಕೇಳಿದ ತಕ್ಷಣ ನನ್ನೊಳಗೆ ಗಾಢ ಮೌನ ಆವರಿಸಿಬಿಟ್ಟಿತು. ಗುರುವಿನ ಇಂತಹ ನಡೆ-ನುಡಿಗಳು ನನ್ನನ್ನು ಶೋಧಿಸುತ್ತಲೇ ಇರುತ್ತವೆ.
ನಮ್ಮ ಇರುವಿಕೆಯ – ಪ್ರಜ್ಞೆಯ ಭಾಗವೇ ಆಗಿರುವ ಗುರುವಿನ ಬಗೆಗೆ ಬರೆಯುವುದೆಂದರೆ ಅವರು ತೋರಿದ ದಾರಿಯಲ್ಲಿ ನಮ್ಮ ಉಳಿದಿರುವ ರಂಭೂಮಿಯ ಬದುಕನ್ನು ಬದ್ಧತೆ ಮತ್ತು ಎಚ್ಚರದಿಂದ ನಿರೂಪಿಸುವುದೇ ಆಗಿದೆ.
ಸತೀಶ್ ತಿಪಟೂರು
ಇವರು ಪ್ರಸಿದ್ಧ ರಂಗಕರ್ಮಿ, ಲೇಖಕ ಮತ್ತು ಪ್ರಸ್ತುತ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ- ವಿಶೇಷ | ಹಬ್ಬಗಳ ಸಂಭ್ರಮದಲ್ಲಿರಲಿ ವಿವೇಕ, ಸಂಯಮ



