ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ – 30 | ನಾನು ಹೈಸ್ಕೂಲ್‌ ಮಾಸ್ತರನಾದೆ

ನನ್ನಪ್ಪನಿಗೆ ಹಿಂದಿನಿಂದಲೂ, ತನ್ನ ಮಕ್ಕಳಲ್ಲಿ ಯಾರಾದರೊಬ್ಬರು ಮಾಸ್ತರನಾಗಬೇಕು ಎಂಬ ದೊಡ್ಡ ಬಯಕೆಯಿತ್ತು. ಮಾತ್ರವಲ್ಲ, ಅವರ ಆಪ್ತ ಗೆಳೆಯ, ಉದ್ಯಮಿ, ದುರ್ಗಾ ಹೈಸ್ಕೂಲ್‌ ನ ಸ್ಥಾಪಕ ಶಿರ್ವ ಶಿವಣ್ಣ ಶೆಟ್ಟರು, ʼಬಿ ಎಡ್‌ ಮುಗಿಸಿ ಬಂದರೆ ನಿಮ್ಮ ಮಗನಿಗೆ ನನ್ನ ಹೈಸ್ಕೂಲ್‌ ನಲ್ಲಿ ಕೆಲಸ ಕೊಡುತ್ತೇನೆʼ ಎಂಬ ಭರವಸೆಯನ್ನೂ ನೀಡಿದ್ದರು. ನಾನು ಉಡುಪಿಗೆ ಬಿಎಡ್‌ ಓದುವುದಕ್ಕೆ ಹೋಗಲು ಒಂದು ಕಾರಣ ಇದುವೂ ಆಗಿತ್ತು. ಅಂತೂ ಅಪ್ಪನ ಆಸೆಯ ಒಂದು ಭಾಗ ಈಡೇರಿತು. ನಾನು ಬಿಎಡ್‌ ಕಾಲೇಜಿನಲ್ಲಿ ಒಳ್ಳೆಯ ಹೆಸರನ್ನು ಪಡೆದು ಬಿ ಎಡ್ ಪದವಿಯೊಂದಿಗೆ ಊರಿಗೆ ಮರಳಿದೆ.

ಬಿ ಎಡ್‌ ಅಂತಿಮ ಪರೀಕ್ಷೆಯಲ್ಲಿ ಅಷ್ಟೇನೂ ಒಳ್ಳೆಯ ಅಂಕ ಬಂದಿರಲಿಲ್ಲ. ಥಿಯರಿ ವಿಭಾಗದ ಕಳಪೆ ಅಂಕಗಳು ಒಟ್ಟು ಅಂಕಗಳನ್ನು ಎಳೆದು ಕೆಳಗೆ ಹಾಕಿದವು. Theory ವಿಭಾಗದ Education in India ದಲ್ಲಿ ೪೮/೧೦೦, Philosophy & Sociology of  Education ನಲ್ಲಿ ೪೮/೧೦೦, Educational Psychology and Evaluation ನಲ್ಲಿ 51/100, Content cum Methodology ವಿಭಾಗದಲ್ಲಿ ಭೌತಶಾಸ್ತ್ರ 65/100, ಗಣಿತಶಾಸ್ತ್ರ 65/100, ಪ್ರಾಕ್ಟಿಕಮ್‌ ಭಾಗದಲ್ಲಿ ಭೌತಶಾಸ್ತ್ರ ಬೋಧನೆ 120/200, ಗಣಿತಶಾಸ್ತ್ರ ಬೋಧನೆ 28/100, CCA 34/50, ʼಸಾಮಾಜಿಕವಾಗಿ ಉಪಯುಕ್ತ ಕೆಲಸʼ 18/25, ʼಸಮುದಾಯದೊಂದಿಗೆ ಕೆಲಸ ಮಾಡುವುದುʼ 14/25, ಮೊದಲಾದ ಇತರ ವಿಭಾಗಗಳ ಅಂಕಗಳೂ ಸೇರಿದಂತೆ 591/1000 ಅಂಕಗಳು ಬಂದವು. ಇದು ಚಿಂತೆಯ ಸಂಗತಿಯೇನೂ ಅಲ್ಲ. ಯಾಕೆಂದರೆ ಬಿ ಎಡ್‌ ಒಂದು ರೀತಿಯ ತರಬೇತಿ ಕಾರ್ಯಕ್ರಮ. ಹಾಗಾಗಿ ಇಲ್ಲಿ ಎಷ್ಟು ಅಂಕ ಬಂತು ಎನ್ನುವುದಕ್ಕಿಂತಲೂ ಕೋರ್ಸ್‌ ಪೂರ್ಣಗೊಳಿಸುವುದು, ತೇರ್ಗಡೆಯಾಗುವುದು ಮುಖ್ಯ.

ಸಂದರ್ಶನಕ್ಕೆ ಹಾಜರಾದೆ

1983 ರ ಮೇ ತಿಂಗಳು. ಕುಕ್ಕುಂದೂರು ಜೋಡುರಸ್ತೆಯ ದುರ್ಗಾ ಹೈಸ್ಕೂಲ್‌ ನಲ್ಲಿ ವಿಜ್ಞಾನ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಿ ಜಾಹೀರಾತು ನೀಡಿದ್ದರು. ನಾನೂ ಅರ್ಜಿ ಗುಜರಾಯಿಸಿದೆ. ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಸಂದರ್ಶನದ ದಿನ ಅಲ್ಲಿಗೆ ಹೋದೆ. ಅಸಲಿಗೆ ಅದು ಕಾಟಾಚಾರದ ಸಂದರ್ಶನ. ಆ ಹುದ್ದೆ ನನಗೆ ಮೀಸಲು ಎಂದು ಮೊದಲೇ ನಿರ್ಧಾರವಾಗಿತ್ತು. ಆದರೆ ಶಾಲೆಗಳು ಹಾಗೆ ನೇಮಕಾತಿ ಮಾಡಿಕೊಳ್ಳುವುದು ನಿಯಮ ಬಾಹಿರ. ಅಧಿಕೃತ ಪ್ರಕ್ರಿಯೆಯ ಮೂಲಕವೇ ಅದು ಆಗಬೇಕು. ಎಂದೇ, ಅಧಿಕೃತ ಜಾಹೀರಾತು ನೀಡಿ ಸಂದರ್ಶನದ ವ್ಯವಸ್ಥೆ ಮಾಡಿದ್ದರು.

ಉದ್ಯೋಗಾಕಾಂಕ್ಷಿಗಳಾಗಿ ಅಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಯುವಕ ಯುವತಿಯರನ್ನು ನೋಡುವಾಗ ನಿಜಕ್ಕೂ ಅಯ್ಯೋ ಅನಿಸುತ್ತಿತ್ತು. ಯಾಕೆಂದರೆ ಅವರದು ವ್ಯರ್ಥ ಪ್ರಯತ್ನ ಎನ್ನುವುದು ಅವರು ಯಾರಿಗೂ ಗೊತ್ತಿರಲಿಲ್ಲ. ಪಾಪ! ಎಲ್ಲೆಲ್ಲಿಂದಲೋ ಖರ್ಚು ಮಾಡಿಕೊಂಡು, ಅಪಾರ ನಿರೀಕ್ಷೆಯನ್ನು ಇರಿಸಿಕೊಂಡು ಬಂದಿದ್ದರು.

ಸಂದರ್ಶನಕ್ಕೆ ಕರೆ ಬಂತು. ಒಳಗೆ ಹೋದೆ. ಸಂದರ್ಶಕನಾಗಿ ಕುಳಿತಿದ್ದ ಶೆಟ್ಟರ ಎರಡನೆ ಮಗ ಗೋಪಾಲಕೃಷ್ಣ ಶೆಟ್ಟಿಯವರು ನನಗೇನೋ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ಅವು ಅಷ್ಟು ಕಷ್ಟದ್ದೂ ಆಗಿರಲಿಲ್ಲ. ನಿರ್ಭಯದಿಂದ ಉತ್ತರಿಸಿದೆ. ಅಂತೂ, ನನಗೆ ಮೊದಲೇ ಗೊತ್ತಿದ್ದಂತೆ, ನಾನು ಕುಕ್ಕುಂದೂರು ದುರ್ಗಾ ಹೈಸ್ಕೂಲ್‌ ನಲ್ಲಿ ವಿಜ್ಞಾನ ಮಾಸ್ತರನಾಗಿ ಆಯ್ಕೆಯಾದೆ. ನನ್ನ ಅದೇ ಹಿಂದಿನ ಸೈಕಲ್‌ ನಲ್ಲಿ ದಿನವೂ ಮಾಸ್ತರಿಕೆಗೆ ದುರ್ಗಾ ಹೈಸ್ಕೂಲ್‌ ಗೆ ಹೋಗಲಾರಂಭಿಸಿದೆ.

ದುರ್ಗಾ ಹೈಸ್ಕೂಲು

ದುರ್ಗಾ ಹೈಸ್ಕೂಲು

ಈ ಹಿಂದೆಯೇ ಹೇಳಿದಂತೆ ಉದ್ಯಮಿ ಶಿರ್ವ ಶಿವಣ್ಣ ಶೆಟ್ಟರು ಗಾಂಧಿ ಕಾಲದವರು. ಆಕಾಶ ನೀಲಿ ಬಣ್ಣದ ಒಂದು ಜುಬ್ಬಾ, ಬಿಳಿ ವೇಸ್ಟಿ ಮತ್ತು ತಲೆಗೊಂದು ನೆಹರೂ ಟೋಪಿ, ಕಾಲಿಗೊಂದು ಚಪ್ಪಲ್ ಇವಿಷ್ಟು ಅವರ ಸರಳ ಉಡುಗೆ. ಇದನ್ನು ಬಿಟ್ಟು ಇನ್ನೊಂದು ತೆರನ ಉಡುಪು ಅವರ ಧರಿಸಿದ್ದು ನಾನು ನೋಡಿಯೇ ಇಲ್ಲ. ಸ್ವಾತಂತ್ರ್ಯ ಪೂರ್ವದ ಅನೇಕ ಹಿರಿಯರಿಗೆ ಶಾಲೆಗಳನ್ನು ಸ್ಥಾಪಿಸಿ ಊರ ಮಕ್ಕಳ ಓದಿಗೆ ವ್ಯವಸ್ಥೆ ಮಾಡಿಕೊಡುವ ಒಂದು ತುಡಿತವಿತ್ತು. ಹಾಗೆಯೇ ಶೆಟ್ಟರೂ ಕುಕ್ಕುಂದೂರು ಜೋಡುರಸ್ತೆಯಲ್ಲಿ 1960 ರ ಸುಮಾರಿಗೇ ಪ್ರಾಥಮಿಕ ಶಾಲೆಯೊಂದನ್ನು ಸ್ಥಾಪಿಸಿದ್ದರು. ಅದು ಆ ಭಾಗದ ಅನೇಕ ಬಡ ವಿದ್ಯಾರ್ಥಿಗಳ ಪಾಲಿಗೆ ಒಂದು ವರದಾನವಾಗಿತ್ತು. 1980 ರ ಸುಮಾರಿಗೆ ಅವರು ಅದೇ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತೆ ಅಡ್ಡಕ್ಕೆ ಕಟ್ಟಲಾದ ನಾಲ್ಕು ಕೊಠಡಿಗಳ ಒಂದು ಕಟ್ಟಡದಲ್ಲಿ ಹೈಸ್ಕೂಲನ್ನೂ ಶುರುಮಾಡಿದ್ದರು. 1982 ರಲ್ಲಿ ಹತ್ತನೆಯ ತರಗತಿಯ ಮೊದಲ ಬ್ಯಾಚು ಓದು ಮುಗಿಸಿ ಹೊರಬಂದಿತ್ತು.

ಶಿವಣ್ಣ ಶೆಟ್ಟರು ತನ್ನ ಮೂರನೆಯ ಮಗ ಬಾಲಕೃಷ್ಣ ಶೆಟ್ಟಿಯವರನ್ನು ಬಿ ಎಡ್‌ ಓದಿಸಿ ಅದೇ ಶಾಲೆಯ ಮುಖ್ಯೋಪಾಧ್ಯಾಯರನ್ನಾಗಿ ನೇಮಕ ಮಾಡಿದ್ದರು. ಆ ಮೂಲಕ ಆತನಿಗೊಂದು ಉದ್ಯೋಗದ ವ್ಯವಸ್ಥೆಯನ್ನು ಮಾಡಿದ್ದರು. 1983 ರ ಜೂನ್‌ ನಲ್ಲಿ ನಾನು ಅಲ್ಲಿ ಶಿಕ್ಷಕನಾಗಿ ಕೆಲಸ ಶುರು ಮಾಡಿದೆ. ಶಾಲೆಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳಿದ್ದರು. ನಾಲ್ಕಾರು ಅಧ್ಯಾಪಕರೂ ಇದ್ದರು. ಅವರೆಂದರೆ ಗೋವಿಂದ ಅಡಿಗ, ಕಾಳಿದಾಸ, ಬಾಲಕೃಷ್ಣ ಶೆಟ್ಟಿ, ನಾಯಕ್‌, ಉಪಾಧ್ಯಾಯ (ದೈಹಿಕ ಶಿಕ್ಷಕರು) ಮೊದಲಾದವರು. ನಾನು ಸೇರಿದ ಕೆಲವೇ ದಿನಗಳಲ್ಲಿ ಬಾಲಕೃಷ್ಣ ಶೆಟ್ಟಿ ಮತ್ತು ನಾಯಕ್‌ ಶಾಲೆ ತೊರೆದು ಬೇರೆ ಕಡೆ ಹೋದರು. ಇವರೀರ್ವರೂ ಒಳ್ಳೆಯ ಶಿಕ್ಷಕರಾಗಿದ್ದರು.

ಹೀಗೆ ಶಿಕ್ಷಕರು ಒಬ್ಬೊಬ್ಬರಾಗಿ ಬಿಟ್ಟು ಹೋಗಲು ಒಂದು ಮುಖ್ಯ ಕಾರಣ ಎಂದರೆ, ಅದು ಹೊಸ ಶಾಲೆ. ಹೊಸ ಶಾಲೆಯಾದುದರಿಂದ ಸರಕಾರಿ ಗ್ರಾಂಟು ಬಂದಿರಲಿಲ್ಲ. ಯಾರಿಗೂ ಒಂದು ಗೌರವದ ಸಂಬಳವಿರಲಿಲ್ಲ. ಅಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ಬಿಟ್ಟು ಇತರ ಯಾರ ಹುದ್ದೆಯೂ ಖಾಯಂ ಆಗಿರಲಿಲ್ಲ. ಇತರ ಶಿಕ್ಷಕರ ಹುದ್ದೆ ಸದ್ಯೋಭವಿಷ್ಯದಲ್ಲಿ ಖಾಯಂ ಆಗುವ ಸಾಧ್ಯತೆಯೂ ಇರಲಿಲ್ಲ. ಶಾಲಾ ಆಡಳಿತದವರಿಗೂ ಶಿಕ್ಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಇರಾದೆಯಿರಲಿಲ್ಲ. ನಮಗೆಲ್ಲ ಒಳ್ಳೆಯ ಸಂಬಳ ಕೊಡಲಾಗದಷ್ಟು ಹಣಕಾಸಿನ ಬಡತನ ಅವರಿಗೆ ಇರಲಿಲ್ಲ. ಆದರೆ ಬಡಪಾಯಿಗಳಿಗೆ ಬೇರೆ ಗತಿಯಿಲ್ಲ ಕೊಟ್ಟ ಸಂಬಳ ಪಡೆದುಕೊಂಡು ದುಡಿಯಲಿ ಎಂಬುದೇ ಅವರ ಇರಾದೆಯಾಗಿತ್ತೋ ಏನೋ. ನಮಗೂ ಬೇರೆ ಗತಿಯಿರಲಿಲ್ಲ. ಸಂಬಳ ಸವಲತ್ತು ಬಿಡಿ, ಅವರು ಶಿಕ್ಷಕರಿಗೆ ನೇಮಕಾತಿ ಪತ್ರವನ್ನೂ ಕೊಡುತ್ತಿರಲಿಲ್ಲ. ಅಂದರೆ ನಾವು ಅಲ್ಲಿ ದುಡಿದುದಕ್ಕೆ ಯಾವ ದಾಖಲೆಯೂ ಇಲ್ಲ. ಮಾಸಿಕ 900 ರುಪಾಯಿ ಪಡೆದಿದ್ದೇವೆ ಎಂದು ಸಹಿ ಹಾಕಬೇಕು. ಆದರೆ ನಮಗೆ ಕೊಡುತ್ತಿದ್ದುದು ಮಾಸಿಕ 300 ರುಪಾಯಿ ಮಾತ್ರ!

ಶಾಲೆಯಲ್ಲಿ ಖುಷಿಯ ಕ್ಷಣಗಳು

ಬೋಧನೆಯ ನನ್ನ ಕೆಲಸ ಶುರುವಾಯಿತು. ದಿನವೂ ಟೀಚಿಂಗ್‌ ನೋಟ್ಸ್‌ ತಯಾರಿಸಿ ಮುಖ್ಯೋಪಾಧ್ಯಾಯರಿಗೆ ತೋರಿಸಬೇಕು. ಹತ್ತನೆಯ ತರಗತಿಗೆ ವಿಜ್ಞಾನ, ಒಂಭತ್ತನೆಯ ತರಗತಿಗೆ ಕನ್ನಡ, ಎಂಟನೆಯ ತರಗತಿಗೆ ಗಣಿತವನ್ನು ನಾನು ಬೋಧಿಸುತ್ತಿದ್ದೆ. ಇವು ಮೂರೂ ನನ್ನ ಇಷ್ಟದ ವಿಷಯಗಳೇ ಆಗಿದ್ದವು. ಮುಗ್ಧ ಮಕ್ಕಳ ಒಡನಾಟ ಖುಷಿ ನೀಡುತ್ತಿತ್ತು. ನನ್ನ ತಮ್ಮ ರವಿರಾಜ್‌ (ಈತ ಮುಂದೆ ರವಿರಾಜ್‌ ವಳಲಂಬೆ ಹೆಸರಿನಲ್ಲಿ ಪ್ರಸಿದ್ಧ ಪತ್ರಕರ್ತನಾದ, 2020 ರಲ್ಲಿ ನಿಧನನಾದ) ಎಂಟನೆಯ ತರಗತಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ.

ತರಗತಿ ನಡುವಿನ ಆಟದ ವೇಳೆಯಲ್ಲಿ ನಾನು ಮಕ್ಕಳೊಂದಿಗೆ ಕ್ರಿಕೆಟ್‌ ಆಡುತ್ತಿದ್ದೆ. ಬಳಿಕ ಮತ್ತೆ ಪಾಠ ಶುರು. ಮಧ್ಯಾಹ್ನ ಒಮ್ಮೊಮ್ಮೆ ಊಟಕ್ಕೆ ಮನೆಗೆ ಹೋಗುತ್ತಿದ್ದೆ. ಮಧ್ಯಾಹ್ನಾನಂತರದ ತರಗತಿಗಳು ಮುಗಿದ ಬಳಿಕ ನಾವು ಶಿಕ್ಷಕರು ಸ್ವಲ್ಪ ಹೊತ್ತು ಅದು ಇದು ಮಾತಾಡಿ, ಬಳಿಕ ಪಕ್ಕದ ಹೊಟೇಲ್‌ ನಿಂದ ಚಹಾ ತಿಂಡಿ ತರಿಸಿ, ತಿಂದು ಮನೆಗೆ ತೆರಳುತ್ತಿದ್ದೆವು.

ನಾನು ಹೊಸದಾಗಿ  ಕೆಲಸ ಶುರು ಮಾಡಿದ್ದಷ್ಟೇ. ಅನುಭವ ಇರಲಿಲ್ಲ. ನಿಧಾನಕ್ಕೆ ಕೆಲಸ ಕಲಿಯುತ್ತಿದ್ದೆ. ಶಿಕ್ಷಕ ಕೆಲಸ ಒಂದು ರೀತಿಯ ಖುಷಿ ನೀಡುತ್ತಿತ್ತು. ಆದರೆ ಸಮಸ್ಯೆ- ಸಂಬಳದ್ದು ಮತ್ತು ಭವಿಷ್ಯದ್ದು. ಮನೆಯಲ್ಲಿ ಬಡತನವಿತ್ತು. ನಾನು ದುಡಿದು ಬೇಗನೇ ಮನೆಗೆ ಏನಾದರೂ ಸಹಾಯ ಮಾಡಲೇಬೇಕಿತ್ತು. ಆದರೆ ಇಲ್ಲಿ ಕೊಡುತ್ತಿದ್ದುದೇ 300 ರುಪಾಯಿ. ಅಲ್ಲದೆ ಕೆಲಸ ಖಾಯಂ ಆಗುವ ಯಾವ ಖಾತರಿಯೂ ಇರಲಿಲ್ಲ.

ಎಂ ಸಿ ಎಫ್‌ ಜಾಹೀರಾತು

ನಾನು ಬಿ ಎಡ್‌ ಓದುತ್ತಿದ್ದಾಗಲೇ, ಅಂದರೆ 1983 ರ ಮಾರ್ಚ್‌ ನಲ್ಲಿರಬೇಕು, ಒಂದು ದಿನ ಹಿರಿಯ ಅಣ್ಣ ಸುಬ್ರಹ್ಮಣ್ಯ ನನಗೆ ಒಂದು ಪತ್ರಿಕಾ ಜಾಹೀರಾತು ತುಣುಕು ಕಳುಹಿಸಿಕೊಟ್ಟಿದ್ದ. ಅದರಲ್ಲಿ ಮಂಗಳೂರಿನ ಎಂ ಸಿ ಎಫ್‌ ಗೆ (ಮಂಗಳೂರು ರಾಸಾಯನಿಕ ಗೊಬ್ಬರ ಸ್ಥಾವರ, ಪಣಂಬೂರು) ಬಿ ಎಸ್‌ ಸಿ ಅಥವಾ ಡಿಪ್ಲೊಮಾ ಆದವರು ಬೇಕು ಎಂದಿತ್ತು. ಸರಿ ನಾನೂ ಅರ್ಜಿ ಗುಜರಾಯಿಸಿದೆ; ಅರ್ಜಿ ಗುಜರಾಯಿಸಿ ಮರೆತೂ ಬಿಟ್ಟೆ.

ಈಗ ಶಿಕ್ಷಕನಾಗಿ ಸೇರಿ ಒಂದು ತಿಂಗಳೂ ಕಳೆದಿಲ್ಲ, ಎಂ ಸಿ ಎಫ್‌ ನಿಂದ ಪತ್ರಗಳು ಬರಲಾರಂಭಿಸಿವು. ಮೊದಲು ಲಿಖಿತ ಪರೀಕ್ಷೆಗೆ ಆಹ್ವಾನ, ಆಮೇಲೆ ಮುಖತಃ ಸಂದರ್ಶನ ಹೀಗೆ. ನನಗೆ ಆ ಉದ್ಯೋಗದ ಬಗ್ಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಹಾಗಾಗಿ ಟೆನ್ಶನ್‌ ಇಲ್ಲದೆ ಹೋಗಿ ಹಾಜರಾಗಿ ಬರುತ್ತಿದ್ದೆ. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕೆ ಯತ್ನಿಸುತ್ತಿದ್ದರು. ಅಚ್ಚರಿಯೆಂಬಂತೆ ಪ್ರತಿಯೊಂದು ಪರೀಕ್ಷೆಯಲ್ಲೂ ತೇರ್ಗಡೆಯಾಗುತ್ತಾ ಬಂದೆ. ನಾನು ವಿಜ್ಞಾನ ಶಿಕ್ಷಕನಾಗಿದ್ದುದು ಪರೀಕ್ಷೆಗಳನ್ನು ಪಾಸಾಗಲು ಸಹಾಯವೂ ಮಾಡಿತು.

ಜೂನ್‌, ಜುಲೈ ಕಳೆದು ಆಗಸ್ಟ್‌ ತಿಂಗಳು ಬಂತು. ಇಷ್ಟಾಗುವಾಗ ನಾನು ಎಂ ಸಿ ಎಫ್‌ ಗೆ ಬಹುತೇಕ ಆಯ್ಕೆಯಾಗಿಯೇ ಬಿಟ್ಟಿದ್ದೆ. ಇನ್ನು ಮೆಡಿಕಲ್‌ ಟೆಸ್ಟ್‌ ಮಾತ್ರ ಬಾಕಿ ಇತ್ತು. ಆದರೆ ಶಾಲಾಡಳಿತದವರ ಬಳಿ ವಿಷಯ ಹೇಳಿಕೊಂಡಿರಲಿಲ್ಲ. ಟೆನ್ಶನ್‌ ಶುರುವಾದುದೇ ಇಲ್ಲಿಂದ. ನಾನೀಗ ಏನು ಮಾಡಬೇಕು? ಸಹೋದ್ಯೋಗಿ ಕಾಳಿದಾಸ ಅವರ ತಮ್ಮನೂ ಎಂ ಸಿ ಎಫ್‌ ಗೆ ಆಯ್ಕೆಯಾಗಿದ್ದ. ಅವರೂ ನನ್ನನ್ನು ಹುರಿದುಂಬಿಸಿದರು. “ಇಲ್ಲಿ ಭವಿಷ್ಯ ಇಲ್ಲ, ಎಲ್ಲಿ ಭವಿಷ್ಯ ಇದೆಯೋ ಅಲ್ಲಿಗೆ ಹೋಗಲು ಹಿಂದೆ ಮುಂದೆ ಯೋಚಿಸಬೇಡಿ” ಎಂದೂ ಹೇಳಿದರು.

ಆಗಸ್ಟ್‌ 15, 1983 ರ ವೇಳೆಗಾಗುವಾಗ ನನ್ನ ಬಳಿ ಎಂ ಸಿ ಎಫ್‌ ಸೇರಲು ನೇಮಕಾತಿ ಆದೇಶ ಇತ್ತು. ಇಷ್ಟು ಹೊತ್ತು ಆಕರ್ಷಕ ಸಂಬಳ, ಪಿ ಎಫ್‌, ಗ್ರಾಚುಯಿಟಿ, ತುಟ್ಟಿಭತ್ಯೆ, ಸಿ ಎಲ್‌, ಎಸ್‌ ಎಲ್‌, ಇ ಎಲ್ ಹೀಗೆ ರಜಾ ಸೌಲಭ್ಯಗಳು, ದುಪ್ಪಟ್ಟು ವೇತನದ ಒಟಿ, ಉಚಿತ ಸಾರಿಗೆ, ಆರೋಗ್ಯ ಸೇವಾ ಸೌಲಭ್ಯ, ರಿಯಾಯಿತಿ ದರದಲ್ಲಿ ಊಟ ಉಪಹಾರ, ವಾಸಕ್ಕೆ ಕಂಪೆನಿಯ ವಸತಿಗೃಹ, ಎಲ್‌ ಟಿ ಸಿ ಸೌಲಭ್ಯ ಎಲ್ಲವೂ ಇರುವ ಎಂ ಸಿ ಎಫ್‌ ನ ಉದ್ಯೋಗಕ್ಕೆ ಬಯಸುತ್ತಿದ್ದೆ.

ಆದರೆ, ಅಲ್ಲಿ ಉದ್ಯೋಗ ಖಾತರಿಯಾಗುತ್ತಲೇ ಮತ್ತೆ ಮನಸು ತುಯ್ದಾಡತೊಡಗಿತು. ನಾನು ಬಿಎಡ್‌ ಓದಿದವನು. ನನ್ನ ಆದರ್ಶ ಇದ್ದುದು ಪವಿತ್ರ ವೃತ್ತಿಯಾದ ಶಿಕ್ಷಕ ವೃತ್ತಿ. ನನ್ನ ಬರೆವಣಿಗೆಯ ಕೆಲಸಗಳಿಗೂ ಅದು ಪೂರಕವಾಗಿತ್ತು.‌ ಹೀಗೆ ಮಕ್ಕಳ ಒಡನಾಟದ ಅವಕಾಶ ಇನ್ನು ಯಾವ ವೃತ್ತಿಯಲ್ಲಿದೆ? ಈ ಕೆಲಸ ಬಿಟ್ಟು ಎಂ ಸಿ ಎಫ್‌ ಸೇರಿದೆನೆಂದರೆ ಇನ್ನೆಂದೂ ನಾನು ಮಾಸ್ತರನಾಗುವುದಿಲ್ಲ. ಬಿಎಡ್‌ ಮಾಡಿದ್ದೂ ವ್ಯರ್ಥ. ಶಾಶ್ವತವಾಗಿ ಶಿಕ್ಷಕ ವೃತ್ತಿಯನ್ನು ತೊರೆಯುವುದೇ? ಇಲ್ಲೂ ಮುಂದೊಂದು ದಿನ ಯಾಕೆ ಒಳ್ಳೆಯ ಭವಿಷ್ಯ ಇರದು?

ಈ ನಡುವೆ ಮನಸು ಮತ್ತೆ ನೆನಪಿಸಿತು, ʼಇಲ್ಲಿ ಮಾಸಿಕ 300 ರುಪಾಯಿ ಸಂಬಳ, ಇತರ ಯಾವ ಸೌಲಭ್ಯವೂ ಇಲ್ಲ, ಗ್ರಾಂಟ್‌ ಗೆ ಏಳು ವರ್ಷ ಕಾಯಬೇಕು, ಆಡಳಿತದವರು ಒಳ್ಳೆಯ ಜನಗಳೂ ಅಲ್ಲ, ಕೆಲಸ ಖಾಯಂ ಆಗುವ ಯಾವ ಭರವಸೆಯೂ ಇಲ್ಲ. ಮನೆಯ ಕಷ್ಟ ನೆನಪಿರಲಿ, ಈಗೆಲ್ಲ ಸರಕಾರಿ ಶಿಕ್ಷಕ ನೇಮಕಾತಿಯೂ ನಡೆಯುತ್ತಿಲ್ಲ, ಭವಿಷ್ಯದ ಬಗ್ಗೆ ಅಂಥ ಯಾವ ಭರವಸೆಯೂ ಇಲ್ಲʼ. ಜೀವನದಲ್ಲಿ ಮೊದಲ ಬಾರಿಗೆ ಬಹುದೊಡ್ಡದೊಂದು ಧರ್ಮಸಂಕಟದಲ್ಲಿ ಬಿದ್ದೆ. ನಾನೀಗ ಯಾವ ನಿರ್ಧಾರ ತೆಗೆದುಕೊಳ್ಳಬೇಕು?

ಪ್ರೊಫೆಸರ್‌ ಕಿಣಿಯವರ ಸಲಹೆ

ಇಂತಹ ಹೊತ್ತಿನಲ್ಲಿ ಎಂದಿನಂತೆ ನನಗೆ ನೆನಪಾದುದು ನನ್ನ ಗಾಡ್‌ ಫಾದರ್‌ ನಂತಹ ಪ್ರೊಫೆಸರ್‌ ದಾಮೋದರ ಕಿಣಿಯವರು. ಸಂಜೆ ತರಗತಿ ಮುಗಿದು ಅವರನ್ನು ನೋಡಲು ಭುವನೇಂದ್ರ ಕಾಲೇಜಿಗೆ ಹೋದೆ. ಪ್ರಾಂಶುಪಾಲರ ಕೊಠಡಿ ಪ್ರವೇಶಿಸಿದೆ. “ಹಲೋ ಹೇಗಿದ್ದೀರಿ, ನಿಮ್ಮ ಬಗ್ಗೆ ಟಿ ವಿಶ್ವನಾಥ್‌ ಎಲ್ಲ ಹೇಳಿದ್ದರು, ಏನು ಬಂದಿರಿ?” ಎಂದು ಕೇಳಿದರು. ನಾನು ಹೇಳಲೋ ಬೇಕೋ ಎಂಬ ದ್ವಂದ್ವದೊಂದಿಗೆ ಅವರಲ್ಲಿ ಎಲ್ಲ ವಿಷಯ ಹೇಳಿದೆ. ಎಲ್ಲವನ್ನೂ ಆಲಿಸಿದ ಅವರು “ಗೋ ಅಂಡ್‌ ಜಾಯಿನ್‌ ದೇರ್‌” ಎಂದು ಹೇಳಿದರು. ಅಲ್ಲದೆ, ಈಗ ಶಿಕ್ಷಣ ಕ್ಷೇತ್ರ ಎಷ್ಟು ಗಬ್ಬೆದ್ದು ಹೋಗಿದೆ ಎಂದೂ ಸಂಕ್ಷಿಪ್ತವಾಗಿ ವಿವರಿಸಿದರು. “ಕೆಲಸ ಮಾಡುವುದಕ್ಕೆ ಎಲ್ಲಿಯಾದರೆ ಏನು, ಯಾವುದಾದರೆ ಏನು? ಕೆಲಸದಲ್ಲಿ ಶ್ರದ್ಧೆ, ಪರಿಶ್ರಮ, ಗುರಿ ಮುಖ್ಯ” ಎಂದರು. “ಥ್ಯಾಂಕ್ಸ್‌ ಸರ್‌” ಎಂದು ಹೇಳಿ ಕೊಠಡಿಯಿಂದ ಹೊರಬಿದ್ದೆ. ಹೊರಗಿನ ಬೆಂಚಿನ ಮೇಲೆ ಒಂದಷ್ಟು ಹೊತ್ತು ಕುಳಿತೆ. ಈಗ ಒಂದು ನಿರ್ಧಾರಕ್ಕೆ ಬರುವುದು ಸುಲಭವಾಯಿತು.

ಪ್ರೊಫೆಸರ್‌ ದಾಮೋದರ ಕಿಣಿ

ಮನೆಗೆ ಮರಳಿದವನೇ ಅಪ್ಪ ಅಮ್ಮನಲ್ಲಿ ನನ್ನ ನಿರ್ಧಾರ ಹೇಳಿದೆ. ಅಮ್ಮನಿಗೆ ಇಂತಹ ವಿಚಾರಗಳಲ್ಲಿ ತಿಳಿವಳಿಕೆ ಕಡಿಮೆ. ಹಾಗಾಗಿ, ಅವರಿಗೆ ನಾನು ಏನು ಮಾಡಿದರೂ ಪರವಾಗಿಲ್ಲ. ಅಪ್ಪನಿಗೆ ನಾನು ಮಾಸ್ತರನಾದ ಬಗ್ಗೆ ತುಂಬಾ ಖುಷಿ ಇತ್ತು. ನಿರ್ಧಾರ ತಿಳಿಸುತ್ತಲೇ ಅವರ ಮುಖ ಚಿಕ್ಕದಾಯಿತು. ನಾನು ಪರಿಸ್ಥಿತಿಯ ವಾಸ್ತವವನ್ನು ಹೇಳಿದೆ. ಎಂ ಸಿ ಎಫ್‌ ನಲ್ಲಿ ಒಳ್ಳೆಯ ಭವಿಷ್ಯ ಇದೆ ಎಂದು ವಿವರಿಸಿದೆ. ಒಪ್ಪಿಕೊಳ್ಳುವುದು ಅವರಿಗೆ ಅನಿವಾರ್ಯವಾಯಿತು.

ಶಾಲೆ ತೊರೆಯುವ ದಿನಗಳು ಬಂದವು

ಎಂ ಸಿ ಎಫ್‌ ಸೇರಲು, ತರಬೇತಿ ಅವಧಿ ಮುಗಿದು ಮುಂದೆ ಐದು ವರ್ಷ ಕೆಲಸ ಬಿಡುವುದಿಲ್ಲ ಎಂದು ಬಾಂಡ್‌ ನೀಡಬೇಕಿತ್ತು. ಅದು ಆಗಬೇಕಾದುದು ಕಾರ್ಕಳ ಮುನ್ಸಿಫ್ ಕೋರ್ಟ್‌ ನಿಂದ. ಬಾಂಡ್‌ ನೀಡಬೇಕಿದ್ದರೆ ಜಮೀನು ಇರುವ ಯಾರಾದರೊಬ್ಬರು ಖಾತರಿ ನೀಡಬೇಕಿತ್ತು (ಶೂರಿಟಿ). ನನಗೆ ಅಂಥವರು ಯಾರೂ ಇರಲಿಲ್ಲ. ಇಂತಹ ಹೊತ್ತಿನಲ್ಲಿ ಸಹೋದ್ಯೋಗಿ ಗೋವಿಂದ ಅಡಿಗರು ದೇವರಂತೆ‌ ಒದಗಿ ಬಂದರು. “ಹೆದರಬೇಡಿ ನಾನಿದ್ದೇನೆ” ಎಂದು ಹೇಳಿ, ಕಾರ್ಕಳ ಕೋರ್ಟ್‌ ಗೆ ಬಂದು ಅಗತ್ಯ ಪತ್ರಗಳಿಗೆಲ್ಲ ಸಹಿ ಹಾಕಿದರು. ಆದರೆ, ನಾನು ನಿಜಕ್ಕೂ ಕೃತಘ್ನ. ಇಷ್ಟೊಂದು ಉಪಕಾರ ಮಾಡಿದ ಗೋವಿಂದ ಅಡಿಗರೊಂದಿಗೆ ಮುಂದೆ ಸಂಪರ್ಕ ಇರಿಸಿಕೊಳ್ಳಲಿಲ್ಲ. ಅವರನ್ನು ಮರೆತುಬಿಡುವಷ್ಟು ನಿರ್ದಯಿಯಾದೆ. ಯಾಕೆ ಹೀಗೆ ಮಾಡಿದೆ? ನನ್ನಲ್ಲಿ ಈಗಲೂ ಉತ್ತರವಿಲ್ಲ. ಆರಂಭದ ದಿನಗಳಲ್ಲಿ ನಾನು ಮಾಸಿಕ 450 ರುಪಾಯಿ ಸ್ಟೈಪೆಂಡ್‌ ಪಡೆಯುವ ಟ್ರೇನಿಯಾಗಿದ್ದೆ, ವಾರದ ಒಂದು ರಜೆ ಬಿಟ್ಟರೆ ಬೇರೆ ರಜಾ ಸೌಲಭ್ಯ ಇರಲಿಲ್ಲ. ಈ ಕಾರಣದಿಂದ ವಾರಗಳ ಕಾಲ ಕಾರ್ಕಳದ ನಮ್ಮ ಮನೆಗೆ ಮರಳುತ್ತಿರಲಿಲ್ಲ ಕೂಡಾ. ಅಲ್ಲದೆ ಮಂಗಳೂರಿನಲ್ಲಿ ನಾಟಕ, ಸಾಹಿತ್ಯ, ಆಕಾಶವಾಣಿ ಚಟುವಟಿಕೆಗಳು, ಇತ್ಯಾದಿಗಳಲ್ಲೂ ವ್ಯಸ್ತನಾದುದರಿಂದ ಹೀಗೆ ಮಾಡಿದೆನೇ? ನೆಪ ಏನೇ ಇರಲೀ, ನಾನು ಮಾಡಿದ್ದು ತಪ್ಪು.

ಆಗಸ್ಟ್‌ 15 ರ ʼಸ್ವಾತಂತ್ರ್ಯ ದಿನʼವನ್ನು ಭಾಷಣ, ಹಾಡು ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶಾಲೆಯಲ್ಲಿ ಅದ್ದೂರಿಯಾಗಿಯೇ ಆಚರಿಸಿದೆವು. ನಾನು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಎಲ್ಲರೂ ʼಭೇಷ್‌ʼ ಅನ್ನುವಂತಾಯಿತು ಕಾರ್ಯಕ್ರಮ. ನನ್ನ ಮನಸಾದರೋ ಸಂಪೂರ್ಣ ಅಲ್ಲೋಲಕಲ್ಲೋಲವಾಗಿತ್ತು. ಇನ್ನೊಂದು ವಾರದಲ್ಲಿ ನಾನು ಈ ಶಾಲೆಗೆ ಶಾಶ್ವತ ವಿದಾಯ ಹೇಳಬೇಕು. ಶಾಲೆಗೆ ಮಾತ್ರವಲ್ಲ ಶಿಕ್ಷಕ ವೃತ್ತಿಗೇ! ಈಗ ಇವರೆಲ್ಲರ ನಡುವೆ, ʼಏನೂ ಆಗೇ ಇಲ್ಲʼ ಎಂಬಂತೆ ಬೆರೆತಿದ್ದೇನೆ!

ಮತ್ತೆ ಒಂದೆರಡು ದಿನಗಳಲ್ಲಿ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟರಿಗೆ ನನ್ನ ನಿರ್ಧಾರ ತಿಳಿಸಿದೆ. “ಏನು ಟೀಚಿಂಗ್‌ ಪ್ರೊಫೆಶನ್‌ ಬಿಟ್ಟೇ ಹೋಗುತ್ತೀರಾ?” ಎಂದು ಹುಬ್ಬೇರಿಸಿದರು. “ಅನಿವಾರ್ಯ ಸಾರ್‌, ಬದುಕು ಕಟ್ಟಿಕೊಳ್ಳಬೇಕಲ್ಲ”, ಅಂದೆ. ಅವರು ಮಾತಾಡಲಿಲ್ಲ; ಮುನಿಸಿಕೊಂಡಂತೆ ಕಂಡಿತು. ತಿಂಗಳಿಗೆ ಕೊಡುವುದೇ 300 ರುಪಾಯಿ. ಆಗಸ್ಟ್‌ ತಿಂಗಳಲ್ಲಿ 19 ದಿನಗಳ ಕಾಲದ ದುಡಿದಿದ್ದೆ. ಆ ಸಂಬಳವನ್ನೂ ಕೊಡಲಿಲ್ಲ.

ಶಾಲೆ ಬಿಡುವ ದಿನವಂತೂ ನನಗೆ ದುಃಖ ತಡೆದುಕೊಳ್ಳಲು ಆಗಲೇ ಇಲ್ಲ. ನಾನೇಕೆ ಇಷ್ಟೊಂದು ಭಾವುಕ ವ್ಯಕ್ತಿಯಾದೆ?! ತರಗತಿಯಲ್ಲಿ ನನ್ನ ನಿರ್ಧಾರ ಹೇಳುತ್ತಾ ಅತ್ತೇ ಬಿಟ್ಟೆ. ಅಲ್ಲಿ ನನ್ನನ್ನು ಇಷ್ಟಪಡುವ ಅನೇಕ ಮಕ್ಕಳಿದ್ದರು. ಹತ್ತನೆಯ ತರಗತಿಯ ಮಕ್ಕಳು ವಂತಿಗೆ ಸಂಗ್ರಹಿಸಿ ನನಗೊಂದು ಪುಟ್ಟ ಸ್ಮರಣಿಕೆ ಕೂಡಾ ಕೊಟ್ಟರು; ಅವರೂ ಅತ್ತರು.

ನನ್ನ ನಿರ್ಧಾರವನ್ನು ಶಾಲೆಯ ಮುಖ್ಯಸ್ಥ ಮತ್ತು ನನ್ನ ಉದ್ಯೋಗದಾತ ಶಿವಣ್ಣ ಶೆಟ್ಟರಿಗೆ ಹೇಳಬೇಕಾಗಿತ್ತು. ಸಂಜೆ ಮನೆಗೆ ಮರಳುವ ದಾರಿಯಲ್ಲಿ ಅವರೇ ಸಿಕ್ಕರು. ಅವರೊಡನೆ ಮಾತನಾಡುವುದೆಂದರೆ ಸದಾ ಒಂದು ಭಯ. ಸೈಕಲ್‌ ನಿಲ್ಲಿಸಿ ಅಳುಕುತ್ತಲೇ ಅವರ ಬಳಿಗೆ ಹೋಗಿ, “ಸಾರ್‌ ನಾನು ಶಾಲೆ ಬಿಡುತ್ತಿದ್ದೇನೆ” ಎಂದೆ. ಯಾಕೆ, ಏನು, ಮುಂದೇನು ಮಾಡುತ್ತೀರಿ ಎಂದೂ ಕೇಳುವ ಸೌಜನ್ಯವನ್ನೂ ತೋರದ ಅವರು, “ಬಿಡಲು ಏನು ಹಿಡಿದುಕೊಂಡಿದ್ದೀರಾ?” ಎಂದು ಕೊಂಕು ಮಾತಾಡಿದರು. ಬೇಸರವಾಯಿತು. ಮನೆ ದಾರಿ ಹಿಡಿದೆ. ಅಲ್ಲಿಗೆ ದುರ್ಗಾ ಹೈಸ್ಕೂಲ್‌ ನೊಂದಿಗಿನ ನನ್ನ ಸಂಬಂಧ ಮುಗಿಯಿತು.

ಮಂಗಳೂರಿನ ಹಾದಿ ಹಿಡಿದೆ

ಮಂಗಳೂರಿಗೆ ಹೊರಡಲು ತಯಾರಿ ಮಾಡತೊಡಗಿದೆ. ಇಷ್ಟು ದಿನ ಮನೆಯಲ್ಲಿಯೇ ಇದ್ದವನು. ವಾಸದ ಚಿಂತೆ ಇರಲಿಲ್ಲ. ಮಂಗಳೂರಿನಲ್ಲಿ ವಾಸಕ್ಕೆ ಯಾವ ವ್ಯವಸ್ಥೆಯೂ ಇಲ್ಲ. ಪರಿಚಯದವರೂ ಇಲ್ಲ. ಆದರೆ, ಹಿರಿಯ ಅಣ್ಣ ಮಂಗಳೂರು ಶಕ್ತಿನಗರದ ಬಳಿಯ ʼಕ್ಯಾನ್‌ ಟ್ರೆಡ್‌ʼ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು ತನ್ನ ಗೆಳೆಯರೊಂದಿಗೆ ಉಳಿದುಕೊಳ್ಳುತ್ತಿದ್ದುದು ಮಂಗಳೂರು ಕದ್ರಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಸಿಗುವ ಗಜಾನನ ಲಾಡ್ಜ್‌ ನಲ್ಲಿ. ಲಾಡ್ಜ್ ಎಂದರೆ ಅದೇನೋ ಫೈವ್‌ ಸ್ಟಾರ್‌ ಲಾಡ್ಜ್‌ ಎಂದು ಕೊಳ್ಳಬೇಡಿ. ಮನೆಯೊಂದನ್ನು 8 ಅಡಿ ಉದ್ದ 8 ಅಡಿ ಅಗಲದ ಬೆಂಕಿ ಪೆಟ್ಟಿಗೆಯಂತಹ ಕೊಠಡಿಗಳನ್ನಾಗಿಸಿ, ಇಪ್ಪತ್ತು ಮೂವತ್ತು ಉದ್ಯೋಗಿಗಳಿಗೆ ಬಾಡಿಗೆಗೆ ನೀಡಲಾದ ಒಂದು ಹಳೆಯ ಮನೆ. ಸದ್ಯ ಅಲ್ಲಿ ನಾನು ಉಳಿದುಕೊಳ್ಳಬೇಕು. ಆದರೆ, ಬ್ಯಾಚುಲರ್‌ ಬದುಕಲ್ಲವೇ? ಅದೂ ಪುರುಷ? ಬಹಳ ವ್ಯವಸ್ಥೆಯೇನೂ ಬೇಕಾಗಿಲ್ಲ. ಸ್ನಾನಕ್ಕೊಂದು ವ್ಯವಸ್ಥೆ, ಮಲಗಲು ಏಳು ಅಡಿ ಉದ್ದ, ಮೂರು ಅಡಿ ಅಗಲದ ಜಾಗ ಸಿಕ್ಕರೆ ಆಯಿತು.

1983 ಆಗಸ್ಟ್‌ 21. ಒಂದೆರಡು ಬಟ್ಟೆಬರೆಗಳ ಪುಟ್ಟ ಬ್ಯಾಗ್‌ ನೊಂದಿಗೆ ಮಂಗಳೂರಿನ ಬಸ್‌ ಏರಿದೆ. ಆಗ, ನಾನು ಶಾಶ್ವತವಾಗಿ ಕಾರ್ಕಳ ತೊರೆಯುತ್ತಿದ್ದೇನೆ, ಶಾಶ್ವತವಾಗಿ ಮಂಗಳೂರು ಸೇರಿಕೊಳ್ಳುತ್ತಿದ್ದೇನೆ ಎನ್ನುವುದು ನನಗೂ ಗೊತ್ತಿರಲಿಲ್ಲ.‌

ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು

ಇದನ್ನೂ ಓದಿ- ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ – 29 |ಬಿ ಎಡ್‌ ದಿನಗಳು ಮತ್ತು ವೀರೇಂದ್ರನ ಸಾಹಸಗಳು‌

More articles

Latest article

Most read