ಮಂಡ್ಯ ಸೆ.15 : ಮೈಸೂರು ದಸರಾಗಿಂತಲೂ ಪುರಾತನವಾದ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಅದ್ದೂರಿತನದ ಬದಲು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಾಡಿನ ಸಮಸ್ತ ಎಂಜಿನಿಯರ್‌ಗಳಿಗೆ ದಿನಾಚರಣೆಯ ಶುಭಾಶಯ ಕೋರಿ, ಜಿಲ್ಲೆಯ ಅಭಿವೃದ್ಧಿ ಹಾಗೂ ಪ್ರಸ್ತುತ ವಿದ್ಯಮಾನಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.
ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಈ ಬಾರಿ ಉತ್ಸವಕ್ಕೆ ವಿಶೇಷ ರೂಪ ನೀಡಲಾಗುವುದು. ಅಕ್ಟೋಬರ್ 12 ಮತ್ತು 13ರಂದು ಯುವ ಸಂಭ್ರಮ ಹಾಗೂ ಅಕ್ಟೋಬರ್ 15ರಿಂದ 18ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ಯುವ ದಸರಾದಲ್ಲಿ ಸ್ಥಳೀಯ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಲಾಗುವುದು ಎಂದರು.
ದಸರಾ ಆಚರಣೆಗೆ ಐದು ಕೋಟಿ ರೂ. ಅನುದಾನ ಕೋರಿ ಸಮಿತಿಯು ಮನವಿ ಮಾಡಿದ್ದು, ಶಾಸಕರ ಸಲಹೆಗಳನ್ನು ಪರಿಗಣಿಸಿ ಮುಂದಿನ ಮೂರು ದಿನಗಳಲ್ಲಿ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಕಾನೂನು ಹೋರಾಟದ ಮೂಲಕ ಉತ್ತರ
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಬಳಿಯ ಜಾಗದ ಒತ್ತುವರಿ ತೆರವು ಕುರಿತು ಪ್ರತಿಕ್ರಿಯಿಸಿದ ಅವರು, ಒತ್ತುವರಿದಾರರಿಗೆ ಪರ್ಯಾಯ ಜಾಗ ನೀಡಿದ್ದರೂ ಇನ್ನೂ ಸ್ಥಳಾಂತರಗೊಂಡಿಲ್ಲ. ಪ್ರಸ್ತುತ ನ್ಯಾಯಾಲಯದ ತಡೆಯಾಜ್ಞೆ ಇದ್ದು, ಇದನ್ನು ತೆರವುಗೊಳಿಸಲು ಅಡ್ವೊಕೇಟ್ ಜನರಲ್ ಅವರನ್ನು ನೇಮಿಸಿ ಕಾನೂನು ಹೋರಾಟ ನಡೆಸಲಾಗುವುದು. ಮಿಮ್ಸ್ ಆಸ್ಪತ್ರೆಯ ಸಾಮರ್ಥ್ಯವನ್ನು ಸಾವಿರ ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಶೀಘ್ರವೇ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕುಡಿಯುವ ನೀರಿಗೆ ಸಮಸ್ಯೆ ಇಲ್ಲ
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಆದರೆ, ಕೆಲವೆಡೆ ರೈತರು ನೀರು ತಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕೆ.ಆರ್. ಪೇಟೆ ಹಾಗೂ ಪಾಂಡವಪುರ ಭಾಗದ ರೈತರು ಸಹಕರಿಸಿ, ಮದ್ದೂರು ಹಾಗೂ ಮಳವಳ್ಳಿ ಭಾಗದ ಕೆರೆಗಳು ತುಂಬಲು ಅವಕಾಶ ಮಾಡಿಕೊಡಬೇಕು. ಅಗತ್ಯವಿದ್ದರೆ ಪೊಲೀಸ್ ಭದ್ರತೆ ಪಡೆದು ನೀರು ಹರಿಸಲಾಗುವುದು ಎಂದರು.
ಇಂದು ಅರ್ಜಿ ಸಲ್ಲಿಕೆ
ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪೀಠ ಮೂರು ದಿನ ಕಾರ್ಯನಿರ್ವಹಿಸದ ಕಾರಣ, ಕಾವೇರಿ ನೀರು ನಿಯಂತ್ರಣ ಸಮಿತಿಗೆ (CWRC) ಇಂದು ಮಧ್ಯಾಹ್ನವೇ ವಿಶೇಷ ಅರ್ಜಿ ಸಲ್ಲಿಸಿ ರಾಜ್ಯದ ನೀರಿನ ವಾಸ್ತವ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡಲಾಗುವುದು. ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆ ಜಾರಿ ಮಾತ್ರ ಶಾಶ್ವತ ಪರಿಹಾರ ಎಂದು ಅವರು ಪುನರುಚ್ಚರಿಸಿದರು.
ಬಿಜೆಪಿಗೆ ತಿರುಗೇಟು
ಮದ್ದೂರಿನಲ್ಲಿ ನಡೆಯುತ್ತಿರುವ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸುತ್ತಿರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಸಚಿವರು, ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಬಾರದ ಬಿಜೆಪಿ ನಾಯಕರು, ಗಣೇಶ ವಿಸರ್ಜನೆ ನೆಪದಲ್ಲಿ ರಾಜಕಾರಣ ಮಾಡಲು ಬರುತ್ತಿದ್ದಾರೆ. ನಮ್ಮ ಜಿಲ್ಲೆಯ ಜನರಿಗೆ ಗಣೇಶನನ್ನು ಹೇಗೆ ವಿಸರ್ಜಿಸಬೇಕು ಎಂಬುದು ಗೊತ್ತಿದೆ. ಮಾತನಾಡಲು ಬೇರೆ ವಿಷಯವಿಲ್ಲದ ಕಾರಣ ಬಿಜೆಪಿ ಇಲ್ಲಿ ರಾಜಕೀಯ ಮಾಡುತ್ತಿದ್ದು, ಅವರಿಗೂ ಸೂಕ್ತ ಪೊಲೀಸ್ ಭದ್ರತೆ ಒದಗಿಸಿ ವಾಪಸ್ ಕಳುಹಿಸಲಾಗುವುದು ಎಂದು ತಿರುಗೇಟು ನೀಡಿದರು.

