ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ – 29 |ಬಿ ಎಡ್‌ ದಿನಗಳು ಮತ್ತು ವೀರೇಂದ್ರನ ಸಾಹಸಗಳು‌

ಬಿ ಎಡ್‌ ಕಾಲೇಜಿನಲ್ಲಿ ಸಹಜವಾಗಿ ವಿಭಿನ್ನ, ವಿಚಿತ್ರ ಮನೋಭಾವದ ವಿದ್ಯಾರ್ಥಿಗಳೂ ಇರುತ್ತಿದ್ದರು. ಒಬ್ಬೊಬ್ಬರದೂ ಒಂದೊಂದು ಬಗೆಯ ವ್ಯಕ್ತಿತ್ವ, ಒಬ್ಬೊಬ್ಬರದೂ ಒಂದೊಂದು ಬಗೆಯ ಸ್ವಾರಸ್ಯಕರ ಕತೆಗಳು. ಇವರ ಪೈಕಿ ಈಗಲೂ ನನಗೆ ಮರೆಯಲಾಗದ ಒಬ್ಬ ವ್ಯಕ್ತಿಯೆಂದರೆ, ವೀರೇಂದ್ರ.

ವೀರೇಂದ್ರ ತೀರಾ ಚಂಚಲ ಸ್ವಭಾವದವ. ಶೃಂಗೇರಿಯ ಕಡೆಯವ. ಕುಳ್ಳಗಿನ, ಗುಂಡಗಿನ, ದಷ್ಟಪುಷ್ಟ ದೇಹ, ಕಬಡ್ಡಿ ಆಟಕ್ಕೆ ಹೇಳಿ ಮಾಡಿಸಿದ ಮೈಕಟ್ಟು. ಆತ ದೂರದ ಊರಿನವನಾದ ಕಾರಣ ಕಾಲೇಜು ಪಕ್ಕದಲ್ಲಿಯೇ ರೂಮು ಮಾಡಿಕೊಂಡಿದ್ದ. ಕಾಲೇಜು ಸೇರಿದ ಆರಂಭದ ದಿನಗಳಲ್ಲಿ ಮಧ್ಯಾಹ್ನ ಕಾಲೇಜು ಕ್ಯಾಂಟೀನ್‌ ನಲ್ಲಿಯೇ ಆತ ಊಟ ಮಾಡುತ್ತಿದ್ದ.

ಕೆಲವೇ ದಿನಗಳಲ್ಲಿ ಆತನಿಗೆ ಕ್ಯಾಂಟೀನ್‌ ಊಟ ಬೋರ್‌ ಅನಿಸತೊಡಗಿತು. ಮೊದಲ ಹಂತದ ಬದಲಾವಣೆಯಾಗಿ, ಕ್ಯಾಂಟೀನ್‌ ಊಟ ನಿಲ್ಲಿಸಿ, ಸಾಂಬಾರ್‌ ಮಾತ್ರ ಒಯ್ದು, ರೂಮಿನಲ್ಲಿಯೇ ಅನ್ನ ಬೇಯಿಸುವ ನಿರ್ಧಾರಕ್ಕೆ ಬಂದ. ಕೆಲವು ದಿನಗಳ ಬಳಿಕ ಸಾಂಬಾರ್‌ ಒಯ್ಯುವುದನ್ನೂ ನಿಲ್ಲಿಸಿ ರೂಮಿನಲ್ಲಿಯೇ ಅದನ್ನೂ ತಯಾರಿಸತೊಡಗಿದ.

ಒಂದಷ್ಟು ದಿನ ಹೀಗೆಯೇ ನಡೆಯಿತು. ರೂಮಿನಲ್ಲಿ ಅನ್ನ ಬೇಯಿಸುವುದು, ಸಾಂಬಾರ್‌ ತಯಾರಿಸುವುದು, ಪಾತ್ರೆ ತೊಳೆಯುವುದು ಕಿರಿಕಿರಿ ಅನಿಸತೊಡಗಿತು. ಸರಿ, ರೂಮಿನಲ್ಲಿ ಅನ್ನ ಮಾತ್ರ ಬೇಯಿಸಿ ಮತ್ತೆ ಸಾಂಬಾರ್ ಕ್ಯಾಂಟೀನ್‌ ನಿಂದ ಒಯ್ಯತೊಡಗಿದ. ಒಂದಿಷ್ಟು ದಿನಗಳ ಬಳಿಕ ರೂಮಿನ ಅಡುಗೆಗೆ ಸಂಪೂರ್ಣ ನಮಸ್ಕಾರ ಹೇಳಿ ಮತ್ತೆ ಕ್ಯಾಂಟೀನ್‌ ಊಟ ಶುರು ಮಾಡಿದ. ಕ್ಯಾಂಟೀನ್‌ ಊಟ, ಬರೇ ಕ್ಯಾಂಟೀನ್ ಸಾಂಬಾರ್‌,‌ ಕ್ಯಾಂಟೀನ್‌ ಸಾಂಬಾರ್‌ ಗೂ ವಿದಾಯ, ಮತ್ತೆ ಕ್ಯಾಂಟೀನ್‌ ಊಟ ಹೀಗೆ ಇಡೀ ವರ್ಷ ಆತನ ಊಟದ ಕಾರ್ಯಕ್ರಮ ಪುನರಾವರ್ತನೆಯಾಗುತ್ತಲೇ ಇತ್ತು.

ಬಿ ಎಡ್‌ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ನಾಗರಿಕ ತರಬೇತಿ ಶಿಬಿರ ನಡೆಯುತ್ತದೆ. ಉಡುಪಿಯಿಂದ ಹತ್ತಿಪ್ಪತ್ತು ಮೈಲಿ ದೂರದ ಅದಮಾರಿನಲ್ಲಿ ಆ ಬಾರಿಯ ಶಿಬಿರ ಆಯೋಜನೆಯಾಗಿತ್ತು. ವೀರೇಂದ್ರನ ಗೆಳೆಯರು ಹೇಳುವ ಪ್ರಕಾರ ನಾಗರಿಕ ತರಬೇತಿ ಶಿಬಿರದ ಮುನ್ನಾ ದಿನ ಆತ ರೂಮಿನಲ್ಲಿಯೇ ಅಡುಗೆ ಮಾಡಿದ. ಉಂಡ ಬಟ್ಟಲನ್ನೂ ತೊಳೆಯದೆ ಹಾಗೆಯೇ ಶಿಬಿರಕ್ಕೆ ಹೋದ. ಶಿಬಿರ ಮುಗಿಯುತ್ತಲೇ ಮಧ್ಯಾವಧಿ ರಜೆಯ ಕಾರಣ ಊರಿಗೆ ಹೋದ. ಮತ್ತೆ ಆತ ಬಟ್ಟಲು, ಪಾತ್ರೆ ತೊಳೆದದ್ದು ಕಾಲೇಜು ರಜೆ ಕಳೆದು ಮರಳಿ ಬಂದ ಬಳಿಕ!

ವಿನೂತನ ಸೊಳ್ಳೆ ಪರದೆಯ ಆವಿಷ್ಕಾರ!

ವಿಜ್ಞಾನಿ ವೀರೇಂದ್ರನ ಸೊಳ್ಳೆ ಪರದೆ ಆವಿಷ್ಕಾರವಂತೂ ನಿಜಕ್ಕೂ ರೋಚಕ. ಉಡುಪಿಯು ನಗರ ಪ್ರದೇಶವಾದುದರಿಂದ ವಿಪರೀತ ಸೊಳ್ಳೆ ಕಾಟ. “ಹೊಗೆ ಹಾಕುವುದು, ಏನೇನೋ ಎಲ್ಲ ಹಚ್ಚುವುದು ಇತ್ಯಾದಿಗಳಿಂದ ಸೊಳ್ಳೆಗೆ ಮಾತ್ರವಲ್ಲ, ನಿನಗೂ ತೊಂದರೆ ಇದೆ ಮಾರಾಯ, ಹಾಗಾಗಿ ಸೊಳ್ಳೆ ಪರದೆ ಬಳಸು, ಅದೇ ಬೆಸ್ಟ್” ಎಂದು ಆತನ ರೂಮ್‌ ಮೇಟುಗಳು ಆತನಿಗೆ ಸಲಹೆ ನೀಡಿದರು. ಸಲಹೆ ಸ್ವೀಕಾರಯೋಗ್ಯ ಅನಿಸಿತು ವೀರೇಂದ್ರನಿಗೆ. ಆದರೆ ಸೊಳ್ಳೆ ಪರದೆ ಖರೀದಿಸಲು ಎಷ್ಟು ಹಣ ಬೇಕಾಗುತ್ತದೆ? ಹೊಲಿಸಿದರೆ‌ ಎಷ್ಟು ಖರ್ಚಾಗುತ್ತದೆ? ದೀರ್ಘ ಕಾಲ ಯೋಚಿಸಿ, ಖರ್ಚು ವೆಚ್ಚ, ಉಳಿತಾಯ, ಲಾಭವನ್ನೆಲ್ಲ ಆತ ಅಳೆದು ತೂಗಿದ. ಸಿದ್ಧ ಸೊಳ್ಳೆಪರದೆ ಖರೀದಿಸುವುದಕ್ಕಿಂತ, ಹೊಲಿಸಿದರೆ ಖರ್ಚು ಕಡಿಮೆ ಎಂಬ ತೀರ್ಮಾನಕ್ಕೆ ಬಂದು, ಸೊಳ್ಳೆ ಪರದೆಗೆ ಬಳಸುವ ನೆಟ್‌ ಖರೀದಿಸಿ ಊರಿಗೆ ಓಡಿದ. ಆತನ ತಂಗಿಗೆ ಹೊಲಿಗೆ ಬರುತ್ತಿತ್ತು. ಆದರೆ ಸೊಳ್ಳೆ ಪರದೆ ಹೊಲಿಯುವುದು ಗೊತ್ತಿರಲಿಲ್ಲ. ಹೇಗೆ ಹೊಲಿಯಬೇಕೆಂದು ವೀರೇಂದ್ರ ಆಕೆಗೆ ಸಂಪೂರ್ಣ ʼಮಾರ್ಗದರ್ಶನʼ ನೀಡಿದ.

ಸರಿ, ಸೊಳ್ಳೆ ಪರದೆ ರೆಡಿಯಾಯಿತು; ಉಡುಪಿಗೆ ಬಂತು. ಇನ್ನು ನೆಮ್ಮದಿಯ ನಿದ್ದೆ ಎಂದು ಅದನ್ನು ಕಟ್ಟಿ ಮಲಗಿದ. ಆದರೆ, ಇಡೀ ರಾತ್ರಿ ಸೊಳ್ಳೆ ಕಾಟ; ನಿದ್ದೆ ಇಲ್ಲ. ಪರದೆಯ ಹೊರಗಡೆ ಇದ್ದುದಕ್ಕಿಂತ ಸೊಳ್ಳೆಗಳು ಒಳಗಡೆ ಇದ್ದುದೇ ಹೆಚ್ಚು. ಬೆಳಗ್ಗೆ ಆತ ರೂಮ್‌ ಮೇಟುಗಳೊಂದಿಗೆ ಸಮಸ್ಯೆ ಹೇಳಿಕೊಂಡ. ರೂಮ್‌ ಮೇಟುಗಳು ಬಂದು ನೋಡಿ ಬಿದ್ದು ಬಿದ್ದು ನಕ್ಕರು. ವೀರೇಂದ್ರ ಹೀಗೆ ಯೋಚಿಸಿದ್ದ- ಒಂದು ಕಡೆ ಗೋಡೆ ಇರುವುದರಿಂದ ಆ ಬದಿಗೆ ಪರದೆ ಯಾಕೆ? ಮೂರು ಬದಿ ಮತ್ತು ಮೇಲೆ ಇದ್ದರೆ ಸಾಲದೇ? ಹಾಗೆಯೇ ಹೊಲಿಸಿ ತಂದಿದ್ದ. ಗೋಡೆಯ ಬದಿಯಿಂದ ಸೊಳ್ಳೆಗಳು ನುಗ್ಗಿದ್ದೇ ನುಗ್ಗಿದ್ದು!

ವರ್ಷ ಇಡೀ ವೀರೇಂದ್ರನಿಗೆ ಸಹಪಾಠಿ ಬಂಗೇರನೊಂದಿಗೆ ಜಗಳವಾಗುತ್ತಲೇ ಇತ್ತು. ಪಾಪ, ಪ್ರತೀ ಬಾರಿಯೂ ಸೋಲು ಈತನದೇ. ಬಂಗೇರನ ವಿರುದ್ಧ ಎಂದಾದರೂ ಒಮ್ಮೆ ಸೇಡು ತೀರಿಸಿಕೊಳ್ಳಲೇಬೇಕೆಂದು ಆತ ಸಮಯ ಕಾಯುತ್ತಲೇ ಇದ್ದ. ಆ ದಿನಗಳಲ್ಲಿ ನಾನು ಅದೇ ವಠಾರದ ಸಹಪಾಠಿಯ ರೂಮಿನಲ್ಲಿ ವಾಸವಿದ್ದೆ. ಒಂದು ದಿನ ವೀರೇಂದ್ರ ನನ್ನಲ್ಲಿ ಹೀಗೆ ಹೇಳಿದ- “ನಾನು ಇವತ್ತು ರಾತ್ರಿ ಹೊರಗಡೆ ಮಂಚ ಹಾಕಿ ಮಲಗಿರುತ್ತೇನೆ. ನೀನು ಹೋಗಿ, ನನಗೆ ಏನಾದರೂ ಕೀಟಲೆ ಮಾಡುವಂತೆ ಬಂಗೇರನಲ್ಲಿ ಹೇಳು. ಆತ ಕೀಟಲೆ ಮಾಡುವಾಗ ನಾನು ಅಲ್ಲಿಂದಲೇ ಆತನಿಗೆ ಒದ್ದುಬಿಡುತ್ತೇನೆ”. ಸರಿ. ವೀರೇಂದ್ರ ಮಲಗಿದ್ದ; ಕಾಲನ್ನು ವಿಸ್ತಾರವಾಗಿ ಚಾಚಿಕೊಂಡಿದ್ದ. ನಾನು ಬಂಗೇರನಿಗೆ ವೀರೇಂದ್ರ ಹೊರಗಡೆ ಗಾಢ ನಿದ್ದೆಯಲ್ಲಿರುವ ಬಗ್ಗೆ ಹೇಳಿ ಪ್ರಚೋದಿಸಿದೆ. ಆತ ಗೆಳೆಯನ ರೂಮಿಗೆ ಹೋಗಿ ಟೂತ್‌ ಪೇಸ್ಟ್‌ ತಂದು ವೀರೇಂದ್ರನ ತೊಡೆಯ ಉದ್ದಕ್ಕೂ ಪೇಸ್ಟ್ ಸವರಿ ಆರಾಮ ವಾಪಸ್‌ ಬಂದ. ಅಲ್ಲಿದ್ದ ಯಾರಿಗೂ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕದ್ದೇ, ಸದ್ದಿಗೆ ಎಚ್ಚರಗೊಂಡ ವೀರೇಂದ್ರ ಒಂದು ಒದ್ದುಬಿಟ್ಟ. ಒದ್ದದ್ದು ಪಕ್ಕದ ಕಂಬಕ್ಕೆ. ನಿದ್ದೆ ಬಂದಂತೆ ನಟಿಸಹೋಗಿ ನಿಜವಾಗಿ ನಿದ್ದೆ ಮಾಡಿ ವೀರೇಂದ್ರ ಮತ್ತೆ ನಗೆಪಾಟಲಿಗೆ ಈಡಾದ. ಆತನಿಗೆ ಎಚ್ಚರವಾದುದು ಅಲ್ಲಿದ್ದವರ ನಗು ಕೇಳಿಯೇ!

ಇನ್ನೂ ಇಪ್ಪತ್ತೊಂದರ ಹರೆಯ, ಹೇಳಿದಂತೆ ಬಾಗುವ ದೇಹ, ನಾನಾಗ ದೈಹಿಕ ಕಸರತ್ತು ಮಾಡುವುದರಲ್ಲಿ ನಿಷ್ಣಾತನಾಗಿದ್ದೆ. ಹಿಂದೆ ಯೋಗಾಸನಗಳನ್ನು ಮಾಡುತ್ತಿದ್ದ ಕಾಲಕ್ಕೆ, ಪದ್ಮಾಸನ, ಶೀರ್ಷಾಸನ, ಉರಗಾಸನ, ಮಯೂರಾಸನ ಇತ್ಯಾದಿ ಮಾಡುತ್ತಿದ್ದೆ. ಅಣ್ಣ ಕಾಲು ಮೇಲೆ ಮಾಡಿ ಕೈಗಳಲ್ಲೇ ನಡೆಯುತ್ತಿದ್ದಾಗ ನಾನೂ ಅದನ್ನು ಮಾಡಲು ಯತ್ನಿಸುತ್ತಿದ್ದೆ. ಹಾಗಾಗಿ, ಓಡಿ ಬಂದು‌ ಎರಡೂ ಕೈಯೂರಿ ಪಲ್ಟಿ ಹೊಡೆಯುವುದು ನನಗೆ ಗೊತ್ತಿತ್ತು. ಲೀಲಾಜಾಲವಾಗಿ ನಾನು ಅದನ್ನು ಮಾಡುತ್ತಿದ್ದೆ.

ನಾನು ಹೀಗೆ ಪಲ್ಟಿ ಹೊಡೆಯುತ್ತಿದ್ದುದು ವೀರೇಂದ್ರನಿಗೆ ವಿಶೇಷ ಆಕರ್ಷಣೆಯಾಗಿತ್ತು. “ಅದನ್ನು ನನಗೂ ಕಲಿಸಿಕೊಡು” ಎಂದು ದುಂಬಾಲು ಬಿದ್ದ. ಸರಿ, ಪಲ್ಟಿ ಹೊಡೆಯುವ ಬಗ್ಗೆ ಥಿಯರಿ ಕ್ಲಾಸ್ ಎಲ್ಲ ಮುಗಿಸಿದೆ. ಕಾಲೇಜಿನ ಲಾಂಗ್‌ ಜಂಪ್‌ ಜಾಗದಲ್ಲಿ ಮರಳು ಇತ್ತು. ಒಂದು ದಿನ ಪ್ರಾಕ್ಟಿಕಲ್‌ ಗಾಗಿ ಅಲ್ಲಿಗೆ ಆತನನ್ನು ಕರೆದುಕೊಂಡು ಹೋದೆ. ಏನೇನು, ಹೇಗೆ ಹೇಗೆ ಮಾಡಬೇಕು ಎಂದು ಹೇಳಲಾರಂಭಿಸಿದೆ. ಪಾಠವನ್ನು ನಾನು ಇನ್ನೂ ಪೂರ್ತಿ ಮಾಡಿರಲಿಲ್ಲ. ಆತ ಪಲ್ಟಿ ಹೊಡೆಯಹೋಗಿ ನೆಲಕ್ಕುರುಳಿ ಜಖಂ ಮಾಡಿಕೊಂಡುಬಿಟ್ಟ. ಜತೆಗೆ ಆತನ ದೈಹಿಕ ಕಸರತ್ತಿನ ತಾತ್ಕಾಲಿಕ ಗುರುವಾದ ನನಗೆ ಎರಡು ಬೈಗಳ ಸಂದಾಯವಾಗಿ ಹೋಗಿತ್ತು.

ನಾನೂ ಯಕ್ಷಗಾನ ವೇಷ ಹಾಕಿದೆ!

ಉಡುಪಿ ಕಲಾರಂಗದ ಈಗಿನ ಕಾರ್ಯದರ್ಶಿಯಾಗಿ ಪ್ರಶಂಸಾರ್ಹ ಕೆಲಸ ಮಾಡುತ್ತಿರುವ ಮುರಳಿ ಕಡೆಕಾರ್‌ ನನ್ನ ಬಿ ಎಡ್‌ ಸಹಪಾಠಿ; ಆತ್ಮೀಯ ಗೆಳೆಯ, ಅತ್ಯುತ್ತಮ ಯಕ್ಷಗಾನ ಕಲಾವಿದ. 1982 ರ ಆ ದಿನಗಳಲ್ಲಿ ನಮ್ಮಲ್ಲಿ ಇನ್ನೂ ಟಿವಿ ಬಂದಿರಲಿಲ್ಲ. ಆ ಕಾಲಕ್ಕೇ ಯಕ್ಷಗಾನ ತಂಡವೊಂದರ ಜತೆಗೆ ಮುರಳಿ ಕೊಲ್ಕತ್ತಾಕ್ಕೆ ಹೋಗಿ ಯಕ್ಷಗಾನ ಪ್ರದರ್ಶನ ನೀಡಿ ಸೈ ಅನಿಸಿಕೊಂಡಿದ್ದ. ಆ ಪ್ರದರ್ಶನ ಕೊಲ್ಕತ್ತಾದಲ್ಲಿ ಅಲ್ಲಿನ ಟಿವಿಯಲ್ಲೂ ಪ್ರಸಾರವಾಗಿತ್ತಂತೆ.

ಈ ಮುರಳಿ ನನಗೂ ಒಮ್ಮೆ ಯಕ್ಷಗಾನ ವೇಷ ಹಾಕಿಸಿಬಿಟ್ಟಿದ್ದ. ಅದರ ಕತೆ ಸೊಗಸಾಗಿದೆ. ಕಾಲೇಜು ವಾರ್ಷಿಕೋತ್ಸವಕ್ಕೆ ಈಶ್ವರ ಪಾರ್ವತಿ ಪಾತ್ರಗಳೂ ಇರುವ ಒಂದು ಪ್ರಸಂಗ ಆಯ್ದುಕೊಳ್ಳಲಾಗಿತ್ತು. ಪ್ರಸಂಗ ಮರೆತುಹೋಗಿದೆ (ಧಕ್ಷಾಧ್ವರ?). ಆ ಯಕ್ಷಗಾನ ಪ್ರದರ್ಶನದಲ್ಲಿ ನಾನು ಈಶ್ವರ, ಕವಿ ಉಮೇಶ್‌ ಕಾರಂತ ಪಾರ್ವತಿ. ನನಗೆ ಯಕ್ಷಗಾನ ಕುಣಿತ ಬಾರದು. “ಕುಣಿಯುವುದೇನೂ ಬೇಕಾಗಿಲ್ಲ. ಒಂದೆರಡು ಡೈಲಾಗ್‌ ಹೇಳಿದರೆ ಸಾಕು” ಅಂದ ಭೌತಶಾಸ್ತ್ರ ಉಪನ್ಯಾಸಕ, ಆ ಯಕ್ಷಗಾನದ ಯಕ್ಷಗುರು ಉಪಾಧ್ಯಾಯರು ನನಗೆ ಕೆಲವು ಡೈಲಾಗ್‌ ಹೇಳಿಕೊಟ್ಟರು. ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ನನ್ನ ಅಭಿನಯ ಕಳಪೆಯಾಗಿತ್ತು. ಅಂತೂ ನಾನೂ ಜೀವನದಲ್ಲಿ ಒಮ್ಮೆ ಯಕ್ಷ ವೇಷ ಹಾಕಿದೆ; ಮುರಳಿ ನನಗೆ ವೇಷ ಹಾಕಿಸಿದ ಅನ್ನುವುದೇ ಸೂಕ್ತ.

ನನ್ನ ಕೈಬರೆಹದಲ್ಲಿ ಭಿತ್ತಿಪತ್ರಿಕೆ

ಮಹಾಬಲೇಶ್ವರ ರಾವ್‌ ಅವರು ಹಿಂದೆ ಮಂಗಳೂರು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದರು. ನಾನು 1981 ರ ದಿನಗಳಲ್ಲಿ ಅಲ್ಲಿಗೆ ಹೋಗುತ್ತಿದ್ದಾಗ ಅವರನ್ನು ಅಲ್ಲಿ ನೋಡಿದ್ದ ನೆನಪು. ನಾನು ಬಿ ಎಡ್‌ ಕಾಲೇಜು ಸೇರುವ ಕಾಲಕ್ಕೆ ಅವರು ಆಕಾಶವಾಣಿಗೆ ವಿದಾಯ ಹೇಳಿ, ಬಿ ಎಡ್‌ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇರಿದರು (ಮುಂದೆ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದರು). ರಾಯರು ಕಾಲೇಜಿನಲ್ಲಿ ಸಾಹಿತ್ಯಕ್ಕೆ ವಿಶೇಷ ಒತ್ತು ನೀಡುತ್ತಿದ್ದರು. ಆದ್ದರಿಂದ ಅವರು ನನ್ನ ಗುರುವಾಗಿರದಿದ್ದರೂ, ಸಾಹಿತ್ಯ ಚಟುವಟಿಕೆಯ ಕಾರಣಕ್ಕೆ ತೀರಾ ಹತ್ತಿರವಾಗಿದ್ದೆವು.

ಕಾಲೇಜಿನಲ್ಲಿ ಒಂದು ಭಿತ್ತಿಪತ್ರಿಕೆ ಇತ್ತು (ಅಂಕುರ?). ರಾವ್‌ ಅವರು ವಿದ್ಯಾರ್ಥಿ ಶಿಕ್ಷಕರಿಂದ ಲೇಖನ ಸಂಗ್ರಹಿಸಿ ಅವನ್ನು ನನಗೆ ಕೊಡುತ್ತಿದ್ದರು. ನನ್ನ ಕೆಲಸ, ನನ್ನ ಹಸ್ತಾಕ್ಷರದಲ್ಲಿ ಅದನ್ನು ಫುಲ್‌ ಸ್ಕೇಪ್‌ ದಸ್ತಾವೇಜು ಹಾಳೆಯಲ್ಲಿ ಅಂದವಾಗಿ ಬರೆಯುವುದು. ಅದನ್ನು ಭಿತ್ತಿಪತ್ರಿಕೆಯಲ್ಲಿ ಪಿನ್‌ ಚುಚ್ಚಿ ಸಿಕ್ಕಿಸುವುದು. ಮುರಳಿ ನನಗೆ ಸಹಾಯಕ. ಇಡೀ ವರ್ಷ ನಾನು ಈ ಲೇಖನಗಳನ್ನು ನನ್ನ ಕೈಬರೆಹದಲ್ಲಿಯೇ ಬರೆದಿದ್ದೆ. ವರ್ಷದ ಕೊನೆಯಲ್ಲಿ, ಅದನ್ನು ಬುಕ್‌ ಬೈಂಡಿಂಗ್‌ ಮಾಡಿ ರಾವ್‌ ಅವರು ಕಾಲೇಜಿನಲ್ಲಿ ಇರಿಸಿದ್ದರು. ಅನೇಕ ವರ್ಷ ಅದು ಕಾಲೇಜಿನಲ್ಲಿ  ಇತ್ತು. ಈಗ ಇದೆಯೋ ಗೊತ್ತಿಲ್ಲ.

ನನ್ನದೊಂದು ಕೆಟ್ಟ ಸ್ವಭಾವವಿದೆ. ಅದು ನನಗೂ ಗೊತ್ತಿದೆ. ಆದರೆ ಅದನ್ನು ಮೀರಲು ಈಗಲೂ ಆಗುತ್ತಿಲ್ಲ. ಅದೆಂದರೆ ಸಣ್ಣದೊಂದು ಮನಸ್ತಾಪವಾದರೂ ಸಾಕು ಮಾತು ನಿಲ್ಲಿಸುವುದು. ಒಮ್ಮೆ ನನಗೂ ಮಹಾಬಲೇಶ್ವರ ರಾವ್‌ ಅವರಿಗೂ ಮನಸ್ತಾಪವಾಗಿ ಅವರೊಂದಿಗೆ ನಾನು ಮಾತು ನಿಲ್ಲಿಸಿದ್ದೆ. ಕಾರಣ ಮತ್ತೇನೂ ಇಲ್ಲ, ವಾರ್ಷಿಕೋತ್ಸವದ ಸ್ಪರ್ಧೆಗಳಲ್ಲಿ ಕನ್ನಡ ಪ್ರಬಂಧ ಸ್ಪರ್ಧೆಯ ಬಗ್ಗೆ ನನಗೆ ವಿಶೇಷ ಆಸಕ್ತಿ ಇತ್ತು. ಅದರ ಉಸ್ತುವಾರಿ ರಾವ್‌ ಅವರದ್ದು. ಅಲ್ಲಿ ಪ್ರಬಂಧಕ್ಕೆ ಸರ್ವೇಸಾಮಾನ್ಯ ವಿಷಯ ಕೊಡುತ್ತಾರೆ ಎಂದು ನಾನು ಹೋಗಿದ್ದೆ. ಅಲ್ಲಿ ಕೊಟ್ಟ ವಿಷಯ ನೋಡಿ ದಂಗಾಗಿಹೋದೆ. ಕಾರಣ ಇಷ್ಟೇ- ಮಂಜೇಶ್ವರ ಗೋವಿಂದ ಪೈಗಳ ಸಾಹಿತ್ಯದ ಬಗ್ಗೆ ಬರೆಯುವಂತೆ ಅಲ್ಲಿ ಹೇಳಲಾಗಿತ್ತು. ನಾನು ವಿಜ್ಞಾನದ ವಿದ್ಯಾರ್ಥಿ. ನನಗೆ ಗೋವಿಂದ ಪೈಗಳ ಬಗ್ಗೆ ಗೊತ್ತು, ಆದರೆ ಪ್ರಬಂಧ ಬರೆಯುವಷ್ಟು ಗೊತ್ತಿಲ್ಲ. ಬೇಸರವಾಯಿತು, ಸಿಟ್ಟೂ ಬಂತು. “ವಿಜ್ಞಾನದ ವಿದ್ಯಾರ್ಥಿಗಳೂ ಭಾಗವಹಿಸುವ ಸ್ಪರ್ಧೆಯಲ್ಲಿ ಇಂತಹ ವಿಷಯ ಇರಿಸುವುದು ಸರಿಯಲ್ಲ, ಇದನ್ನು ನಾನು ವಿರೋಧಿಸುತ್ತೇನೆ” ಎಂದು ಒಂದೇ ಒಂದು ಸಾಲು ಬರೆದು ಹೊರಬಂದೆ. ನನ್ನದು ಅತಿಯಾಯಿತೋ ಏನೋ. ಆದರೆ ಬಿಸಿರಕ್ತ, ಆಗ ಮಾಡಿದ್ದು ಸರಿ ಎಂದು ಆಗ ಅನಿಸಿತು. ನಾನೂ ರಾವ್‌ ಅವರೂ ಬಹಳ ದಿನ ಪರಸ್ಪರ ಮಾತನಾಡುತ್ತಿರಲಿಲ್ಲ. ಕೊನೆಗೆ ಸಹಪಾಠಿಯೊಬ್ಬಳ ಮಧ್ಯಪ್ರವೇಶದಿಂದ ನಮ್ಮಲ್ಲಿ ರಾಜಿಯಾಯಿತು.

ನಾಗರಿಕ ತರಬೇತಿ ಶಿಬಿರ: ನನ್ನ ಸರಕಾರ ವಿಶ್ವಾಸಮತ ಗೆದ್ದಿತು

ನಾನು ಓದಿನಲ್ಲಿ ಬುದ್ಧಿವಂತನಾಗಿರಲಿಲ್ಲ. ಪ್ರತಿಭಾವಂತನೂ ಆಗಿರಲಿಲ್ಲ. ಆದರೆ ಯಾಕೋ ಗೊತ್ತಿಲ್ಲ ಜನಪ್ರಿಯನಾಗಿದ್ದೆ. ಎಂದೇ, ಬಿ ಎಡ್‌ ವಿದ್ಯಾರ್ಥಿಗಳಿಗೆ ವರ್ಷವೂ ಏರ್ಪಡಿಸುವ ಸಿಟಿಜನ್‌ ಶಿಪ್‌ ಕ್ಯಾಂಪ್‌ ಗೆ ನನ್ನನ್ನು ಪ್ರಧಾನಮಂತ್ರಿಯಾಗಿ ವಿದ್ಯಾರ್ಥಿಗಳು ಆಯ್ಕೆ ಮಾಡಿಬಿಟ್ಟರು. ಅದಮಾರಿನಲ್ಲಿ ಅಕ್ಟೋಬರ್‌ 22, 1982 ರಿಂದ ಮೂರು ದಿನ ಕ್ಯಾಂಪ್.‌ ಬೆಳಗ್ಗೆ ಅಸೆಂಬ್ಲಿ. ಅಲ್ಲಿ ಧ್ವಜವಂದನೆ, “ಅಟೆನ್ಶನ್‌, ಸ್ಟಾಂಡ್‌ ಅಟ್‌ ಈಸ್‌”, ವಿದ್ಯಾರ್ಥಿಗಳಿಗೆ ಕವಾಯತು ಆದೇಶ ಇತ್ಯಾದಿ ನನ್ನ ಜವಾಬ್ದಾರಿ. ವಿದ್ಯಾರ್ಥಿಗಳ ಸಂಸತ್ತು,  ಸಂಸತ್‌ ಅಧಿವೇಶನ ಇವೂ ಇದ್ದವು.

ನಾವು ಕನ್ನಡದ ಮಕ್ಕಳು. ನನ್ನಲ್ಲಿ ಮಾತನಾಡುವ ಇಂಗ್ಲಿಷ್‌ ಜ್ಞಾನ ಅಷ್ಟೊಂದು ಇರಲಿಲ್ಲ. ಆದರೆ ಮಲೆಯಾಳಿಗಳು ಅನಿವಾರ್ಯವಾಗಿ ಇಂಗ್ಲಿಷ್‌ ಮಾತನಾಡಬೇಕಾದುದರಿಂದ ಅವರ ಇಂಗ್ಲಿಷ್‌ ಜ್ಞಾನ ಉತ್ತಮತರವಾಗಿತ್ತು. ನಮ್ಮ ವಿಪಕ್ಷ ಮುಖಂಡ ಜೋಸೆಫ್‌ ಮಲೆಯಾಳಿ ಮಾತ್ರವಲ್ಲ, ವಾದದಲ್ಲೂ ಚತುರ.

ನಾಗರಿಕ ತರಬೇತಿ ಶಿಬಿರದ ಕೊನೆಯ ದಿನ ನಮ್ಮ ಸಂಸತ್ ಕಲಾಪ ನಡೆಯುವುದಿತ್ತು. ಅವಿಶ್ವಾಸ ಗೊತ್ತುವಳಿ ಮಂಡಿಸಿ ನನ್ನ ಸರಕಾರ ಉರುಳಿಸಿ ನನ್ನನ್ನು ಮುಜುಗರಕ್ಕೆ ಈಡು ಮಾಡಲು ಜೋಸೆಫ್ ಸಂಚು ಹೂಡಿದ್ದ. ಊಟ, ನೈರ್ಮಲ್ಯ ಇತ್ಯಾದಿಗಳ ಅಧ್ವಾನದ ಕಾರಣವಾಗಿ ನನ್ನ ಸರಕಾರ ಉರುಳುವುದಿತ್ತು.

ಈ ಹೊತ್ತಿನಲ್ಲಿ ಮಹಾಬಲೇಶ್ವರ ರಾಯರು ಬಂದರು. ವಿಷಯ ಅವರಿಗೂ ಗೊತ್ತಾಯಿತು. ನನ್ನ ಸರಕಾರ ಉಳಿಸಲು ಅವರೊಂದು ಭಾರೀ ಉಪಾಯ ಹೂಡಿದರು. ನನಗೊಂದು ಅದ್ಭುತ ಭಾಷಣ ಬರೆದುಕೊಟ್ಟರು. ಅಲ್ಲದೆ, “ವಿರೋಧಿ ನಾಯಕನ ಡೆಸ್ಕ್‌ ನ ಒಳಗಡೆ ಮಾರಕ ಆಯುಧ ಇರುವುದಾಗಿ ಗುಮಾನಿಯಿದೆ, ಅದರ ತಪಾಸಣೆ ಆಗಬೇಕು” ಎಂದು ಕಲಾಪದ ನಡುವೆ ಹೇಳಲು ಹೇಳಿದರು. ನಾನು ಹಾಗೆಯೇ ಹೇಳಿದೆ. ತಪಾಸಣೆ ನಡೆಯಿತು. ವಿರೋಧಿ ನಾಯಕನ ಬಳಿ ಆಯುಧ ಇದ್ದ ಕಾರಣ ಆತನನ್ನು ಅಮಾನತು ಮಾಡಿ ಹೊರಹಾಕಲಾಯಿತು. ನನ್ನ ಸರಕಾರ ಉಳಿಯಿತು. ನನ್ನ ಸರಕಾರ ಉಳಿಸಿದವರು ಮಹಾಬಲೇಶ್ವರ ರಾಯರು. ನಿಜ ಹೇಳಬೇಕೆಂದರೆ, ನಾವು ಆ ಆಯುಧವನ್ನು ಮೊದಲೇ ಅಲ್ಲಿ ಇರಿಸಿದ್ದೆವು.

ಅಳಿದ ಊರಿಗೆ ಉಳಿದವನೇ ಗೌಡ

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಐನೂರು ಆರುನೂರು ವಿದ್ಯಾರ್ಥಿಗಳು, ಅಲ್ಲದೆ, ಕ್ರೀಡೆಗಳಲ್ಲಿ ಅದ್ಭುತ ಪ್ರತಿಭಾವಂತರಾದವರೂ ಅಲ್ಲಿದ್ದರು. ಆದ್ದರಿಂದ ನನ್ನಂಥವರಿಗೆ ಅಲ್ಲಿ ಹೆಚ್ಚಿನ ಅವಕಾಶ ಇರಲಿಲ್ಲ. ನಾಲ್ಕುವರ್ಷ ನನ್ನ ಕ್ರೀಡಾ ಚಟುವಟಿಕೆ ನಿಂತೇ ಹೋಗಿತ್ತು. ಮನೆಯ ಪಕ್ಕದಲ್ಲಿ ವಾಲಿಬಾಲ್‌, ಕ್ರಿಕೆಟ್‌, ಬ್ಯಾಡ್ಮಿಂಟನ್‌ ಬಿಟ್ಟರೆ ಬೇರೆ ಇಲ್ಲ. ಆದರೆ ಬಿ ಎಡ್‌ ಕಾಲೇಜಿನಲ್ಲಿ ಟೇಬಲ್‌ ಟೆನ್ನಿಸ್‌ ಸಹಿತವಾಗಿ ಎಲ್ಲ ಕ್ರೀಡೆಗಳಿಗೂ ಅವಕಾಶ ಮತ್ತು ವ್ಯವಸ್ಥೆ ಇತ್ತು. ಕೇವಲ ನೂರು ವಿದ್ಯಾರ್ಥಿಗಳು. ಹಾಗಾಗಿ ʼಅಳಿದ ಊರಿಗೆ ಉಳಿದವನೇ ಗೌಡʼ ಎಂಬಂತೆ ಎಲ್ಲ ಕ್ರೀಡೆಗಳಲ್ಲೂ ನಾನು ಮುಂದು. ಕಬಡ್ಡಿ, ಬಾಲ್‌ ಬ್ಯಾಡ್ಮಿಂಟನ್‌, ವಾಲಿಬಾಲ್‌, ಖೋಖೋ, ಶಟಲ್‌ ಬ್ಯಾಡ್ಮಿಂಟನ್‌, ಹೈಜಂಪ್ ಹೀಗೆ ಪ್ರತಿಯೊಂದರಲ್ಲೂ ನಾನು ಬಹುಮಾನ ಗಳಿಸಿದ್ದೆ.

ಬಿ ಎಡ್‌ ಕಾಲೇಜು ಸೇರಿದ ಮೇಲೆ ಸಾಹಿತ್ಯ ಚಟುವಟಿಕೆಯೂ ನಿರಂತರವಾಗಿತ್ತು (ಕನ್ನಡ ಕೈಬರೆಹ, ಆಶುಭಾಷಣ, ಕನ್ನಡ ಕವಿತೆ, ಇಂಗ್ಲಿಷ್‌ ಕವಿತೆ, ಚಿತ್ರಕಲೆ ಇತ್ಯಾದಿ ಕಾಲೇಜಿನ ಅನೇಕ ಸ್ಪರ್ಧಾ ವಿಭಾಗಗಳಲ್ಲಿ ಬಹುಮಾನ ನನ್ನದೇ ಆಗಿತ್ತು). ತುಷಾರದಲ್ಲಿ ಚಿತ್ರಕವನಗಳು ಪ್ರಕಟವಾಗುತ್ತಿದ್ದವು. ಉಡುಪಿ ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ನನಗೆ ದ್ವಿತೀಯ ಬಹುಮಾನ ಬಂದಿತ್ತು. ಕಾಲೇಜನ್ನು ಪ್ರತಿನಿಧಿಸಿ ಡಿಬೇಟುಗಳಲ್ಲಿ ನಾನೂ ಮುರಳಿಯೂ ಪಾಲ್ಗೊಳ್ಳುತ್ತಿದ್ದೆವು. ಆಕಾಶವಾಣಿಯ ಚರ್ಚಾಗೋಷ್ಠಿಗಳಲ್ಲಿ, ಯುವವಾಣಿ ಕಾರ್ಯಕ್ರಮಗಳಲ್ಲಿ ನಿರಂತರ ಪಾಲ್ಗೊಳ್ಳುತ್ತಿದ್ದೆ.

ಕಟಪಾಡಿ ಜ್ಯೂನಿಯರ್‌ ಕಾಲೇಜಿನಲ್ಲಿ ಬೋಧನಾ ತರಬೇತಿ

ಬಿ ಎಡ್‌ ಶಿಕ್ಷಣ ಕೇವಲ ಥಿಯರಿ ರೂಪದ್ದಲ್ಲ. ಅಲ್ಲಿ ಪ್ರಾಯೋಗಿಕ ಅಧ್ಯಾಪನಕ್ಕೂ ಅಷ್ಟೇ, ಅಥವಾ ಅದಕ್ಕಿಂತಲೂ ಹೆಚ್ಚು ಆದ್ಯತೆ ಇರುತ್ತಿತ್ತು. ನಮ್ಮನ್ನು ತಂಡಗಳಾಗಿ ಮಾಡಿ ಆಸುಪಾಸಿನ ಹೈಸ್ಕೂಲುಗಳಿಗೆ ಹಾಕುತ್ತಿದ್ದರು. ಅಲ್ಲಿ ನಾವು ಸುಮಾರು ಒಂದು ತಿಂಗಳು ಅಲ್ಲಿನ ವಿದ್ಯಾರ್ಥಿಗಳಿಗೆ ಬೋಧನೆ, ಪಠ್ಯೇತರ ಚಟುವಟಿಕೆ ಇತ್ಯಾದಿ ನಡೆಸಿಕೊಡಬೇಕು.

ನನ್ನ ನಾಯಕತ್ವದಲ್ಲಿ ನಮ್ಮ ತಂಡವನ್ನು ಕಟಪಾಡಿ ಜೂನಿಯರ್‌ ಕಾಲೇಜಿಗೆ ಹಾಕಿದರು (ನವೆಂಬರ್‌ 8 – ಡಿಸೆಂಬರ್‌ 17). ಸರಿ ನನ್ನ ಕಟಪಾಡಿ ವಾಸ ಆರಂಭವಾಯಿತು. ಜೂನಿಯರ್‌ ಕಾಲೇಜಿನಿಂದ ನಡಿಗೆಯ ದೂರದ ಏಣಗುಡ್ಡೆಯಲ್ಲಿ ನನ್ನ ಪರಿಚಿತರಾದ ಸೂರ್ಯಕುಮಾರಿ ಕುರುಪ್‌ ಎಂಬವರ ಮನೆಯಿತ್ತು. ಅಲ್ಲಿಂದ ಹೋಗಿ ಬರಲಾರಂಭಿಸಿದೆ. ವಾರಕ್ಕೊಮ್ಮೆ ಕಾರ್ಕಳದ ಮನೆಗೆ.

ಕಟಪಾಡಿ ಜ್ಯೂನಿಯರ್‌ ಕಾಲೇಜಿನಲ್ಲಿ ಹಿಂದೆ ಈ ಕುರುಪ್‌ ಅವರ ಮಗ ಶ್ರೀಧರ ಓದಿದ್ದ. ಆತನ ಸರ್ಟಿಫಿಕೇಟ್‌ ವಿಷಯದಲ್ಲಿ ಅಲ್ಲಿನ ಪ್ರಾಂಶುಪಾಲರು ತಕರಾರು ಎತ್ತಿದ್ದರು. ಒಂದು ದಿನ ನಾನೂ ಆತನೂ ಆ ಬಗ್ಗೆ ವಿಚಾರಿಸಲೆಂದು ಆ ಕಾಲೇಜಿಗೆ ಹೋಗಿದ್ದೆವು. ನಾನು ಲುಂಗಿಯಲ್ಲಿದ್ದೆ. ಇದನ್ನು ಕಂಡೋ ಏನೋ ಪ್ರಾಂಶುಪಾಲರು ನನ್ನ ಮೇಲೆ ಕೆಂಡಾಮಂಡಲರಾಗಿ ಎಗರಿಬಿದ್ದರು. ಕಾರಣವೇ ತಿಳಿಯದೆ ಒಂದು ಕ್ಷಣ ನಾನು ಬೆಚ್ಚಿಬಿದ್ದೆ! ಅವಮಾನಿತನಾಗಿ ಅಲ್ಲಿಂದ ಮರುಮಾತಾಡದೆ ವಾಪಸಾದೆ.

ಎಂತಹ ವಿಪರ್ಯಾಸ! ಇದು ಒಂದೆರಡು ವರ್ಷ ಹಿಂದಿನ ಘಟನೆ. ಇದೀಗ ಅದೇ ಕಾಲೇಜಿನಲ್ಲಿ ತರಬೇತಿ ಶಿಕ್ಷಕನಾಗಿ ನಾನು ಬಂದಿದ್ದೆ. ಅದೇ ಪ್ರಾಂಶುಪಾಲರಿದ್ದರು. ಆ ಹಿಂದಿನ ಘಟನೆ ನನಗೆ ನೆನಪಿತ್ತು. ಆದರೆ ಅವರಿಗೆ ಅದು ನಾನೇ ಎಂಬುದು ಗೊತ್ತಿರಲಿಲ್ಲ!

ಸರಿ, ನಮಗೆ ನಿಗದಿಪಡಿಸಿದ ರೀತಿಯಲ್ಲಿ ಪಾಠ ಬೋಧನೆ ಶುರು ಮಾಡಿದೆವು. ನಡು ನಡುವೆ ಭಾಷಣ, ಚರ್ಚಾಕೂಟ, ಕ್ವಿಜ್‌ ಇತ್ಯಾದಿಗಳನ್ನೂ ನಡೆಸಿದೆವು. ನಾನೇ ಕ್ವಿಜ್‌ ಮಾಸ್ಟರ್. ನವೆಂಬರ್‌ 14ರ ʼಮಕ್ಕಳ ದಿನʼ ಬಂದಾಗ ಆ ದಿನಾಚರಣೆಯನ್ನೂ ನಮ್ಮ ಮುಂದಾಳತ್ವದಲ್ಲಿಯೇ ಆಚರಿಸಲಾಯಿತು.

ನಾನು ಅಲ್ಲಿನ ಒಂದು ತರಗತಿಗೆ, ಎಂಟೋ, ಒಂಬತ್ತೋ, ಹತ್ತೋ ಸರಿಯಾಗಿ ನೆನಪಿಲ್ಲ, ವಿಜ್ಞಾನ ಬೋಧನೆ ಮಾಡುತ್ತಿದ್ದೆ. ಪೀನ ಮಸೂರ, ನಿಮ್ನ ಮಸೂರ, ಮಸೂರದ ಮೂಲಕ ಹಾದು ಹೋಗುವ ಬೆಳಕಿನ ಕಿರಣಗಳು ಬಾಗುವುದು, ಸಂಗಮ ದೂರ, ಸಂಗಮ ಬಿಂದು, ಪ್ರತಿಬಿಂಬ ಎಲ್ಲವನ್ನೂ ಕರಿಹಲಗೆಯ ಮೇಲೆ ಚಾಕ್‌ ನಿಂದ ಬರೆದು ವಿವರಿಸುತ್ತಿದ್ದೆ.

ಒಂದು ದಿನ ನಮ್ಮ ಕಾಲೇಜಿನಿಂದ ಶ್ರೀಯುತ ಉಪಾಧ್ಯಾಯರು ನಮ್ಮ ಚಟುವಟಿಕೆ ನೋಡಲು ಬಂದಿದ್ದರು. ನನ್ನ ತರಗತಿಯಲ್ಲಿ ಕುಳಿತಿದ್ದ ಅವರು, ತರಗತಿ ಮುಗಿದ ಬಳಿಕ, “ನೀವು ಅದನ್ನು ಕರಿಹಲಗೆಯ ಮೇಲೆ ವಿವರಿಸುವ ಬದಲು, ಒಂದು ಕ್ಯಾಂಡಲ್‌ ಒಂದು ಮಸೂರ ಹಿಡಿದು ಪ್ರಾಯೋಗಿಕವಾಗಿಯೇ ವಿವರಿಸಬಹುದಿತ್ತಲ್ಲ?” ಎಂದರು. ಹೌದಲ್ಲ! ಮೊದಲ ಬಾರಿಗೆ ಕರಿಹಲಗೆಯಿಂದ ಹೊರಬರಬೇಕು ಎಂಬ ಜ್ಞಾನೋದಯ ಮೂಡಿತು. ಮುಂದೆ ಅವರು ಹೇಳಿದಂತೆಯೇ ಮಾಡಿದೆ.

ನಮ್ಮ ತಂಡದಲ್ಲಿ ಶೀಲಾ ಎಂ ಸಾಲ್ಯಾನ್‌ ಎಂಬ ಯುವತಿಯೊಬ್ಬಳಿದ್ದಳು. ಆಕೆಯನ್ನು ನೋಡಿದರೆ ಎಂಥವರಿಗೂ ಹಿರಿಯ ಸಹೋದರಿ ಎಂಬ ಭಾವ ಮೂಡಬೇಕು ಅಂತಹ ವ್ಯಕ್ತಿತ್ವ. ಆಕೆಯ ಮನೆ ಪಕ್ಕದ ಎರ್ಮಾಳಿನಲ್ಲಿ. ಆಕೆ ನಮ್ಮ ತಂಡವನ್ನು ಒಮ್ಮೆ ಕಾಪುವಿಗೆ ಕರೆದುಕೊಂಡು ಹೋಗಿ ದೀಪಸ್ತಂಭ ಹತ್ತಿಸಿದ್ದರು. ಮುಂದೊಮ್ಮೆ ನನ್ನನ್ನು ತಮ್ಮ ಮನೆಗೇ ಕರೆದುಕೊಂಡು ಹೋಗಿ ಆಕೆಯ ಮನೆಯವರಿಗೆ ಪರಿಚಯ ಮಾಡಿಕೊಟ್ಟರು. ಕಡಲ ಕರೆ, ಶೀಲಾ ಅವರ ಮನೆಮಂದಿಯ ಅಪಾರ ಪ್ರೀತಿ, ಪರಿಶುದ್ಧ ಶೇಂದಿ, ತಾಜಾ ಮೀನಿನ ಊಟವೂ ಆಯಿತು. ಕಾಲೇಜು ಮುಗಿದ ಬಳಿಕ ನಾನು ಅವರನ್ನು ಎಂದೂ ಭೇಟಿಯಾಗಲಿಲ್ಲ. ಆದರೆ ಅವರ ನೆನಪು ಮಾತ್ರ ಇತ್ತು. ಶೀಲಾ ಒಂದೆರಡು ಬಾರಿ ಪತ್ರ ಕೂಡಾ ಬರೆದಿದ್ದರು. ಕೊನೆಗೆ ದಶಕದ ಬಳಿಕ ನಾನು ಅವರನ್ನು ನೋಡಿದೆ; ಜೀವಂತವಾಗಿಯಲ್ಲ. ಕ್ಯಾನ್ಸರ್‌ ಗೆ ಆಕೆ ಬಲಿಯಾಗಿದ್ದರು. ಅದೊಂದು ದುಃಖದ ಕತೆ. ಅದನ್ನು ಮುಂದೆ ಹೇಳುವೆ.

(ಗ್ರೂಫ್‌ ಫೋಟೋ: ಆನಂದ ವೈ ಎ, ಶ್ರೀನಿವಾಸ್‌, ರವೀಂದ್ರ ಶೇಣಿ, ನಾಗಭೂಷಣ)

ಬಿ ಎಡ್‌ ಮುಗಿಯಿತು. ವರ್ಷ ಕಾಲ ಒಂದು ಕುಟುಂಬದಂತೆ ಇದ್ದ ಸಹಪಾಠಿಗಳು ತಮ್ಮ ತಮ್ಮ ಊರಿಗೆ ಹೊರಟುಬಿಟ್ಟರು. ಎಲ್ಲೆಲ್ಲಿನವರೋ, ಇನ್ನೆಂದೂ ಭೇಟಿಯಾಗುವ ಸಾಧ್ಯತೆಯೂ ಇರಲಿಲ್ಲ. ನನ್ನ ಆಪ್ತ ವಲಯದಲ್ಲಿದ್ದ ವೈ ಎ ಆನಂದ (ಏನಡ್ಕ ಆನಂದ), ನಾಗಭೂಷಣ, ರವೀಂದ್ರ ಶೇಣಿ ನಾವೆಲ್ಲ ಉಡುಪಿ ಪೇಟೆಗೆ ಹೋಗಿ ಒಂದು ಗ್ರೂಪ್ ಫೋಟೋ ತೆಗೆಸಿಕೊಂಡೆವು. ಆನಂದ ಮೊದಲು ನಮ್ಮನ್ನು ಅಗಲಿದ. ಭಾವುಕರಾಗಿ ಕಣ್ಣೀರಿಟ್ಟೆವು. ಆನಂತರ ರವೀಂದ್ರ. ಆನಂತರ ನಾಗಭೂಷಣ. ನಾನು ಹೊರಡುವಾಗ ಅಳಲು ಯಾರೂ ಇರಲಿಲ್ಲ. ಕುಂಜಿಬೆಟ್ಟಿಗೆ ವಿದಾಯ ಹೇಳಿ ಕಾರ್ಕಳದ ಹಾದಿ ಹಿಡಿದೆ.

ಶ್ರೀನಿವಾಸ ಕಾರ್ಕಳ

ಸಮಾಜ ಚಿಂತಕರು.

ಇದನ್ನೂ ಓದಿ- https://kannadaplanet.com/its-a-big-story-autobiography-series-28/ ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ – 28 | ಬಿ ಎಡ್‌ ದಿನಗಳು ಮತ್ತು ಸಾವಿನೊಂದಿಗೆ ಮುಖಾಮುಖಿ

More articles

Latest article

Most read