1982 ಮೇ ಕೊನೆಯ ದಿನಗಳು. ಭುವನೇಂದ್ರ ಕಾಲೇಜಿನಲ್ಲಿ ನನ್ನ ಪಾಲಿನ ನೀರು ಮುಗಿದಿತ್ತು. ಪಿಸಿಎಂ ಮತ್ತು ಝಡ್ ಬಿ ಸಿ ವಿಭಾಗದ ವಿದ್ಯಾರ್ಥಿಗಳೆಲ್ಲ ಸೇರಿ ಕಾರ್ಕಳದ ದ್ವಾರಕಾ ಹೋಟೆಲ್ ನಲ್ಲಿ ಒಂದು ಸಣ್ಣ ಸಂತೋಷಕೂಟವನ್ನೂ ಏರ್ಪಡಿಸಿದೆವು. ಕಾಲೇಜಿನ ವತಿಯಿಂದ ವಿದಾಯಕೂಟ ಎಂದೇನೂ ಇರಲಿಲ್ಲ. ಆದರೆ ಕಾಲೇಜು ಮ್ಯಾಗಝಿನ್ ಗಾಗಿ ಅಧ್ಯಾಪಕರೊಂದಿಗೆ ಅಂತಿಮ ವರ್ಷ ಬಿ ಎಸ್ ಸಿ ಪದವಿಯ ವಿದ್ಯಾರ್ಥಿಗಳ ಒಂದು ಗ್ರೂಪ್ ಫೋಟೋ ಕಾರ್ಯಕ್ರಮವಿತ್ತು.
ನಾನು ಇನ್ನು ಇಲ್ಲಿನ ವಿದ್ಯಾರ್ಥಿಯಲ್ಲವಲ್ಲ, ನನ್ನ ಮೆಚ್ಚಿನ ಕೆಲ ವ್ಯಕ್ತಿಗಳಿಂದ ಆಟೋಗ್ರಾಫ್ ಪಡೆಯೋಣ ಅನಿಸಿತು. ಅಧ್ಯಾಪಕರ ಕೊಠಡಿಗಳಿಗೆ ಅಳುಕುತ್ತಲೇ ಹೋದೆ. “ಜೀವಿಸುತ್ತಾ ಜಯಿಸುವುದೇ ಜೀವನದ ಸಾರವು, ನಿಮಗೆ ಮಂಗಳವಾಗಲಿ” ಎಂದು ಲೇಖಕ, ಉಪನ್ಯಾಸಕ ಎಂ ರಾಮಚಂದ್ರ ಬರೆದರು. “ಪ್ರಿಯ ಶ್ರೀನಿವಾಸ್, ಜ್ಞಾನ ಸಂಪಾದನೆಯೂ ಜೀವನದ ಒಂದು ಗುರಿಯಾಗಿರಲಿ” ಎಂದು ಗಣಿತಶಾಸ್ತ್ರ ವಿಭಾಗದ ಬಿ ಪದ್ಮನಾಭ ಗೌಡರು ಬರೆದರು. “ಇಳೆಯಿಂದ ಮೊಳಕೆವೊಗೆವಂದು ತುತ್ತೂರಿ ದನಿಗಳಿಲ್ಲ, ಫಲಮಾಗುವಂದು ತಮಟೆಗಳಿಲ್ಲ, ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ, ಹೊಲಿನಿನ್ನ ತುಟಿಗಳನು ಮಂಕುತಿಮ್ಮ, ಶುಭಾಶಯಗಳು” ಎಂದು ಬರೆದರು ಭೌತಶಾಸ್ತ್ರ ವಿಭಾಗದ ಮೆಚ್ಚಿನ ಉಪನ್ಯಾಸಕ ಎಂ ಆರ್ ವೆಂಕಟೇಶ ರಾವ್. “ಎಳಸು ಎಳಸಾಗಿ ದರ್ಶನಿಸಿದ ನೆನಪಿನ ಚಿಗುರು/ ಬಿಸಿಲಿನ ತಾಪಕ್ಕೆ ನಲುಗಿ ಬಾಡುವ ಮುನ್ನವೇ/ ನೀರೆರೆದು ಕಾಪಾಡಿ/ ಹೃದಯ ಕವಾಟಿನಲ್ಲಿ ಬಚ್ಚಿಟ್ಟುಕೊಳ್ಳುತ್ತೇನೆ ಎಂದು, ʼಭರವಸೆʼ ಶೀರ್ಷಿಕೆಯಡಿಯಲ್ಲಿ ಗುಲಾಬಿ ಬಿ ಎಸ್ ಒಂದು ಕವಿತೆಯನ್ನೇ ಬರೆದು ಆಟೋಗ್ರಾಫ್ ನಲ್ಲಿ ದಾಖಲಿಸಿದರು. ʼಶ್ರೀ-ನಿವಾಸಕ್ಕೆ ಆಮಂತ್ರಿಸುವುದಾದರೆʼ ಎಂದು ಮನೆಯ ವಿಳಾಸವನ್ನೂ ಕೊಟ್ಟುಬಿಟ್ಟರು.
ಎಷ್ಟೊಂದು ನೆನಪುಗಳು!
ನಾಲ್ಕು ವರ್ಷಗಳ ಕಾಲ ಭುವನೇಂದ್ರ ಕಾಲೇಜು ನನ್ನ ಬದುಕಿನ ಭಾಗವೇ ಆಗಿಹೋಗಿತ್ತು. ವಾರ್ಷಿಕೋತ್ಸವ ಮತ್ತಿತರ ಚಟುವಟಿಕೆಗಳಿದ್ದಾಗ ನಾನು ಮನೆಗೆ ಹೋಗುತ್ತಿರಲಿಲ್ಲ, ಇಲ್ಲಿನ ಹಾಸ್ಟೆಲ್ ನಲ್ಲಿಯೋ ಸಹಪಾಠಿಗಳ ರೂಮುಗಳಲ್ಲಿಯೋ ವಾಸ್ತವ್ಯ ಹೂಡುತ್ತಿದ್ದೆ. ಮನೆಯಲ್ಲಿ ಓದಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಜಾದಿನಗಳಲ್ಲಿಯೂ ನಾನು ಕಾಲೇಜಿನ ಗ್ರಂಥಾಲಯದಲ್ಲಿಯೇ ಇರುತ್ತಿದ್ದೆ.
ಕಾಲೇಜು ಸೇರಿದ ಮೊದಲ ದಿನದ ಅನುಭವ, ನಾಲ್ಕು ವರ್ಷ ನಾನು ಓಡಾಡಿದ ಕಾರಿಡಾರ್ ಗಳು, ಕಾಲೇಜಿನ ಭವ್ಯ ಕಗ್ಗಲ್ಲಿನ ಕಟ್ಟಡ, ಪ್ರಶಾಂತ ವಾತಾವರಣ, ಕಾಲೇಜಿಗೆ ದಕ್ಷ ನೇತೃತ್ವ ನೀಡಿದ ಪ್ರೊಫೆಸರ್ ಕಿಣಿ, ಬೋಧನೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಉಪನ್ಯಾಸಕರು, ಎನ್ ಎಸ್ ಎಸ್, ಕಾಲೇಜು ಕ್ಯಾಂಟೀನ್, ಕೃಷ್ಣಮಂದಿರ, ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ದೇಹ ಬಗೆಯಲು ಸಾಕಿದ ಕಪ್ಪೆಗಳ ಗೂಡು, ಭಯಂಕರ ಮುಷ್ಕರ, ನೊಟೀಸ್ ಬೋರ್ಡ್ ನಲ್ಲಿ ಸುಂದರ ಅಕ್ಷರಗಳೊಂದಿಗೆ ನಾನು ಬರೆಯುತ್ತಿದ್ದ ಸೂಚನೆಗಳು, ʼಸಹ್ಯಾದ್ರಿʼ ಭಿತ್ತಿಪತ್ರಿಕೆಯಲ್ಲಿ ನನ್ನ ಬರೆಹಗಳು, ಸುಸಜ್ಜಿತ ಪ್ರಯೋಗಾಲಯ, ಸಾಹಿತ್ಯ ಕಾರ್ಯಕ್ರಮಗಳ ಎಸ್ ಆರ್ ಹಾಲ್, ಆಕರ್ಷಕ ಕವಾಯತು ಸಹಿತ ಸ್ವಾತಂತ್ರ್ಯ ದಿನಾಚರಣೆ, ವಾರ್ಷಿಕೋತ್ಸವ, ವಾರ್ಷಿಕ ಕ್ರೀಡಾಕೂಟ, ಸ್ಪರ್ಧೆಗಳು, ಬಹುಮಾನಗಳು, ಸ್ನೇಹ, ಪ್ರೀತಿ, ಮನಸ್ತಾಪಗಳು, ಓಹ್! ಎಷ್ಟೊಂದು ನೆನಪುಗಳು! ಅವನ್ನೆಲ್ಲ ಕಟ್ಟಿಕೊಂಡು ಕಾಲೇಜಿನಿಂದ ಹೊರಬಿದ್ದೆ.
ಉಡುಪಿಯ ಬಸ್ ಹತ್ತಿದೆ

ಉತ್ತರಕರ್ನಾಟಕ ಯಾತ್ರೆ ಮುಗಿಯಿತು. ರಜಾದಿನಗಳೂ ಮುಗಿದವು. 1982 ರ ಜುಲೈ ಕೊನೆಯಲ್ಲಿ, ಬಿ ಎಡ್ ಕಾಲೇಜು ಸೇರಲು ಕಾರ್ಕಳ ಜೋಡುರಸ್ತೆಯ ಅಯ್ಯಪ್ಪನಗರದಿಂದ ಉಡುಪಿಯ ಬಸ್ ಹತ್ತಿದೆ. ಕುಂಜಿಬೆಟ್ಟು ಎಲ್ಲೆಂದು ಸರಿಯಾಗಿ ಗೊತ್ತಿರಲಿಲ್ಲ. ಕಂಡಕ್ಟರ್ ಬಳಿ ವಿಚಾರಿಸಿಕೊಂಡು ಎಂಜಿಎಂ ಸ್ಟಾಪ್ ನಲ್ಲಿ ಇಳಿದು ನಡೆದುಕೊಂಡು ಹೋದೆ. ರಸ್ತೆಗಿಂತ ಬಹಳ ದೂರದಲ್ಲಿ ಅಲ್ಲ, ಆದರೆ ಶಿಕ್ಷಣ ಸಂಸ್ಥೆಯೊಂದಕ್ಕೆ ಹೇಳಿಮಾಡಿಸಿದ ಜಾಗದಲ್ಲಿತ್ತು ಡಾ ಟಿ ಎಂ ಎ ಪೈ ಶಿಕ್ಷಣ ಮಹಾವಿದ್ಯಾಲಯ. ಸುಂದರ ಕಟ್ಟಡ. ಒಂದು ಪಾರ್ಶ್ವದಲ್ಲಿ ಪುಟ್ಟದೊಂದು ಆಟದ ಮೈದಾನ, ಅದನ್ನು ದಾಟಿದರೆ ಎಂ ಜಿ ಎಂ ಕಾಲೇಜಿನ ಕಂಪೌಂಡ್.
ಕಾಲೇಜು ಪ್ರವೇಶಿಸುತ್ತಿದ್ದಂತೆ ಅತಿಥಿಗಳಿಗೆ ಕೂರಲೆಂದು ಬೆತ್ತದ ಕುರ್ಚಿಗಳು, ಅದರ ಮುಂದೊಂದು ಟೀಪಾಯ್, ಅದರ ಮೇಲೆ ಒಂದಷ್ಟು ಪತ್ರಿಕೆಗಳು. ಅಧ್ಯಯನದ ಕಾರ್ಯಗಳಿಗೆ ಹೇಳಿಮಾಡಿಸಿದಂತಿದ್ದವು ಅಲ್ಲಿನ ವ್ಯವಸ್ಥೆಗಳು. ನಾನು ಹೋದ ದಿನ ಒಬ್ಬ ನವತರುಣನೂ ನನ್ನ ಹಾಗೆಯೇ ಕಾಲೇಜು ಸೇರಲು ಬಂದಿದ್ದ. ಆತನೊಂದಿಗೆ ಮಾತನಾಡಿದೆ. ಆತ ಆನಂದ ವೈ ಎ. ಮುಂದೆ ಈತ ಕಾಲೇಜಿನ ಇಡೀ ವರ್ಷ ಮಾತ್ರವಲ್ಲ, ನಾಲ್ಕು ದಶಕ ಕಳೆದ ಬಳಿಕವೂ ನನ್ನ ಆಪ್ತ ಗೆಳೆಯನಾಗಿ ಉಳಿದ; ದೂರದ ಸಂಬಂಧಿಯೂ ಆದ. ಕಾಲೇಜು ಮುಗಿದು ಆತನನ್ನು ಊರಿಗೆ ಕಳುಹಿಸಿಕೊಡುವಾಗ ನಾನು ಮತ್ತು ಗೆಳೆಯರಾದ ರವೀಂದ್ರ ಶೇಣಿ, ನಾಗಭೂಷಣ ಅಕ್ಷರಶಃ ಅತ್ತಿದ್ದೆವು.
ನನ್ನ ಸರದಿ ಬಂದಾಗ ಅಳುಕುತ್ತಲೇ ಪ್ರಾಂಶುಪಾಲ ಟಿ ವಿಶ್ವನಾಥ್ ಅವರ ಕೊಠಡಿ ಹೊಕ್ಕೆ. “ಬನ್ನಿ ಕುಳಿತುಕೊಳ್ಳಿ” ಎಂದರು. “ಏನು ಬಂದುದು?” ಕೇಳಿದರು. “ಬಿ ಎಡ್ ಅಡ್ಮಿಶನ್ ಗೆ” ಎಂದೆ. “ಅದಕ್ಕೆ ತಡವಾಯಿತಲ್ಲ ಇರುವ ನೂರು ಸೀಟುಗಳೂ ಭರ್ತಿಯಾಗಿವೆ, ನೀವೇಕೆ ತಡ ಮಾಡಿದುದು?” ಎಂದರು. ನಾನು ಚಿಂತೆಗೀಡಾದೆ. ಏನು ಹೇಳುವುದು ತಿಳಿಯಲಿಲ್ಲ. ಪ್ರಾಂಶುಪಾಲರ ಮುಖಚಹರೆ ನಿಧಾನಕ್ಕೆ ನಗುವಿಗೆ ಬದಲಾಯಿತು. “ಪ್ರೊಫೆಸರ್ ಕೆ ಡಿ ಕಿಣಿಯವರು ಎಲ್ಲ ಹೇಳಿದ್ದಾರೆ, ನೀವು ಹೋಗಿ ಆಫೀಸಿನಲ್ಲಿ ಫೀಸ್ ಕಟ್ಟಿ” ಎಂದರು. ಮನಸು ನಿರಾಳವಾಯಿತು. “ಥ್ಯಾಂಕ್ಸ್ ಸರ್” ಎಂದೆ. “ಚೆನ್ನಾಗಿ ಓದಿ, ಕಿಣಿಯವರು ನಿಮ್ಮ ಮೇಲೆ ಅಪಾರ ಭರವಸೆ ಇರಿಸಿಕೊಂಡಿದ್ದಾರೆ, ಅವರನ್ನು ನಿರಾಶೆಗೊಳಿಸಬೇಡಿ” ಎಂದೂ ಮಾತು ಸೇರಿಸಿದರು (ಮುಂದೆ ಟಿ ವಿಶ್ವನಾಥ್ ಮತ್ತು ಪ್ರೊಫೆಸರ್ ದಾಮೋದರ ಕಿಣಿಯವರು ಭೇಟಿಯಾದಾಗಲೆಲ್ಲ ಕಿಣಿಯವರು ನನ್ನ ಬಗ್ಗೆ ವಿಚಾರಿಸುತ್ತಿದ್ದರಂತೆ, ತುಂಬಾ ಪ್ರತಿಭಾವಂತ ಮತ್ತು ಕ್ರಿಯಾಶೀಲ ಹುಡುಗ ಎಂದು ವಿಶ್ವನಾಥರೂ ನನ್ನ ಬಗ್ಗೆ ಒಳ್ಳೆಯ ಮಾತನ್ನೇ ಹೇಳುತ್ತಿದ್ದರಂತೆ). ಅರ್ಜಿ ಕೂಡಾ ಸಲ್ಲಿಸದೆ ಪ್ರೊಫೆಸರ್ ಕಿಣಿಯವರಿಂದಾಗಿ ಬಿ ಎಡ್ ಸೀಟು ಪಡೆದುಕೊಂಡಿದ್ದೆ. ಕೆಲ ದಿನಗಳ ಬಳಿಕ ನಿಗದಿತ ಶುಲ್ಕ ತೆತ್ತು ಶಿಕ್ಷಕ ವಿದ್ಯಾರ್ಥಿಯಾಗಿ ಬಿ ಎಡ್ ಕಾಲೇಜು ಸೇರಿಕೊಂಡೆ.
ತರಗತಿಗಳು ಆರಂಭವಾದವು
ಆಗಸ್ಟ್ 2, 1982 ರಂದು ತರಗತಿಗಳು ಆರಂಭವಾದವು. ಪ್ರಾಂಶುಪಾಲ ಟಿ ವಿಶ್ವನಾಥ್ ನಮಗೆ ʼಎಜುಕೇಶನಲ್ ಸೈಕಾಲಜಿ ಅಂಡ್ ಇವಾಲ್ಯುವೇಶನ್ʼ ಬೋಧಿಸುತ್ತಿದ್ದರು. ʼಎಜುಕೇಶನ್ ಇನ್ ಇಂಡಿಯಾʼ ಲಲಿತಕುಮಾರಿ, ʼಫಿಲಾಸಫಿ ಅಂಡ್ ಸೋಶಿಯಾಲಜಿ ಆಫ್ ಎಜುಕೇಶನ್ʼ ಬಿ ಎಲ್ ಶಂಕರನಾರಾಯಣ, ಗಣಿತವನ್ನು ಮೈಸೂರಿನ ರಂಗರಾಜ್, ಭೌತಶಾಸ್ತ್ರವನ್ನು ಉಪಾಧ್ಯಾಯ ಬೋಧಿಸುತ್ತಿದ್ದರು. ಫಿಲಾಸಫಿ ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು.
ಕಾಲೇಜಿನಲ್ಲಿ ಒಟ್ಟು ವಿದ್ಯಾರ್ಥಿಗಳು 100. ಇದರಲ್ಲಿ ಸುಮಾರು 60 ಮಂದಿ ಯುವತಿಯರು. 40 ಮಂದಿ ಯುವಕರು. ಯುವತಿಯರಲ್ಲಿ ಅನೇಕ ಮಂದಿ ಕೇರಳದಿಂದ ಬಂದವರು. ಉದ್ಯೋಗಕ್ಕಾಗಿ ಬಿ ಎಸ್ ಸಿ ಮುಗಿದ ತಕ್ಷಣ ಬಿ ಎಡ್ ಓದಲು ಬಂದವರು, ಈಗಾಗಲೇ ಮದುವೆಯಾಗಿ ಸಂಸಾರವಿದ್ದು ಉಪನ್ಯಾಸಕ ವೃತ್ತಿಗೆ ಹೆಚ್ಚುವರಿ ಅಗತ್ಯವಾದ ಬಿ ಎಡ್ ಪದವಿ ಗಳಿಸಲು ಬಂದವರು, ಇನ್ನು, ಯುವತಿಯರಲ್ಲಿ ಮದುವೆಯ ಅರ್ಹತೆಗಾಗಿಯೇ ಬಿ ಎಡ್ ಓದಲು ಬಂದವರು ಹೀಗೆ ಎಲ್ಲ ವರ್ಗದವರೂ ಇದ್ದರು. ಕೆಲವು ಹುಡುಗಿಯರು ಬಿ ಎಡ್ ಓದುವಾಗಲೇ ಮದುವೆಯಾಗುವುದೂ ಇತ್ತು. ಐದಾರು ಪರ್ಸೆಂಟ್ ಹೊರತುಪಡಿಸಿದರೆ ಎಲ್ಲರೂ ಯೌವನದಿಂದ ನಳನಳಿಸುವ 22 ರ ಯುವಕ ಯುವತಿಯರು. ಹಾಗಾಗಿ ಬಿ ಎಡ್ ಓದು ಬೋರ್ ಆಗುವ ಪ್ರಶ್ನೆಯೇ ಇಲ್ಲ.
ಮೊದಲ ದಿನ ಪ್ರತಿಯೊಬ್ಬರೂ ಪರಿಚಯ ಮಾಡಿಕೊಳ್ಳಬೇಕಿತ್ತು. ವೇದಿಕೆ ಏರಿ ನಮ್ಮ ಹೆಸರು, ಊರು ಇತ್ಯಾದಿ ಹೇಳಿಕೊಳ್ಳಬೇಕಿತ್ತು. ಮಾರನೇ ದಿನದಿಂದ ಪಾಠಗಳು ಪ್ರಾರಂಭವಾದವು. ಯುವತಿಯರಿಗೆ ಪ್ರತ್ಯೇಕ ಹಾಸ್ಟೆಲ್ ಇತ್ತು. ಆದರೆ ದೂರದ ಯುವಕರಾದರೆ ಖಾಸಗಿ ರೂಮ್ ಮಾಡಿಕೊಂಡು ಇರಬೇಕಿತ್ತು. ಕುಂಜಿಬೆಟ್ಟು, ಇಂದ್ರಾಳಿ ಮೊದಲಾದೆಡೆ ಕೆಲವರು ರೂಮು ಹಿಡಿದುಕೊಂಡಿದ್ದರು. ಹಾಸ್ಟೆಲ್ ಇದ್ದರೂ ನನ್ನಲ್ಲಿ ಅದರ ಶುಲ್ಕ ತೆರುವಷ್ಟು ಹಣ ಇರಲಿಲ್ಲ. ರೂಮು ಮಾಡಿದರೂ ಅಷ್ಟೇ. ಆದ್ದರಿಂದ ನಾನು ಕಾರ್ಕಳದಿಂದ ನಿತ್ಯ ಬಸ್ ಪ್ರಯಾಣ ಮಾಡುವುದನ್ನೇ ಆಯ್ದುಕೊಂಡೆ.
ಡ್ರೈವರ್ ನಂದು
ನಮ್ಮ ಮನೆಯಿಂದ ಅಯ್ಯಪ್ಪ ನಗರ ತನಕ ಸುಮಾರು ಮುಕ್ಕಾಲು ಕಿಲೋಮೀಟರ್ ನಡೆದುಕೊಂಡು ಹೋಗಿ, ಅಲ್ಲಿಂದ ಬಸ್ ಹತ್ತಿ ಕುಕ್ಕುಂದೂರು, ಬೈಲೂರು, ಹಿರಿಯಡ್ಕ, ಪರ್ಕಳ, ಮಣಿಪಾಲ ಮಾರ್ಗವಾಗಿ ನಿತ್ಯವೂ ಕುಂಜಿಬೆಟ್ಟಿಗೆ. ಸಾಮಾನ್ಯವಾಗಿ ಪಯಣಿಸುತ್ತಿದ್ದುದು ಹನುಮಾನ್ ಬಸ್ ನಲ್ಲಿ. ಅದರ ಡ್ರೈವರ್ ನ ಹೆಸರು ಜನರು ಕರೆಯುವಂತೆ ʼನಂದುʼ. ಕೆಲ ದಿನಗಳ ಪ್ರಯಾಣದ ಬಳಿಕ ಆತನಿಗೆ ನನ್ನ ಬಗ್ಗೆ ಎಷ್ಟು ಪರಿಚಯವಾಯಿತೆಂದರೆ, ಬಸ್ ತುಂಬಿ ತುಳುಕುತ್ತಿದ್ದ ಕಾರಣ, ಆತ ಅಯ್ಯಪ್ಪ ನಗರದ ಸ್ಟಾಪ್ ನಲ್ಲಿ ಜನ ಹತ್ತಲು ಬಸ್ ನಿಲ್ಲಿಸುತ್ತಿರಲಿಲ್ಲ. ಆದರೆ ನನಗೆ ಕೈಸನ್ನೆ ಮಾಡಿ ಕೆಲವು ಮೀಟರ್ ದೂರದಲ್ಲಿ ನಿಲ್ಲಿಸಿ, ನನ್ನೊಬ್ಬನನ್ನು ಹತ್ತಿಸಿಕೊಂಡು ಹೋಗುತ್ತಿದ್ದ.
ಉಡುಪಿಯ ಇಂದ್ರಾಳಿ, ದಾಟಿದ ಮೇಲೆ ಬಸ್ ಗೆ ಸ್ಟಾಪ್ ಎರಡೇ ಇದ್ದುದು, ಕುಂಜಿಬೆಟ್ಟಿನ ಎಂ ಜಿ ಎಂ ಕಾಲೇಜು ಸ್ಟಾಪ್ ಅಥವಾ ಶಾರದಾ ಮಂಟಪ ಸ್ಟಾಪ್. ಹಿಂದೆ ಇಳಿದರೆ ಮುಂದೆ ನಡೆಯಬೇಕು, ಮುಂದೆ ನಡೆದರೆ ಹಿಂದೆ ಬರಬೇಕು. ಆದರೆ ನಂದು ಮಾತ್ರ ನನಗೊಬ್ಬನಿಗಾಗಿ ಬಿಎಡ್ ಕಾಲೇಜು ಮುಂದೆಯೇ ಬಸ್ ನಿಲ್ಲಿಸಿ ನನ್ನನ್ನು ಇಳಿಸಿ ಹೋಗುತ್ತಿದ್ದ. ಸಂಜೆ ಕೂಡಾ ಒಮ್ಮೊಮ್ಮೆ ಅದೇ ಬಸ್ ನಲ್ಲಿ ಮನೆಗೆ ಮರಳುತ್ತಿದ್ದೆ. ಈಗಲಾದರೆ ಆತನಿಗೆ ಕೃತಜ್ಞತಾಪೂರ್ವಕವಾಗಿ ಒಂದಿಷ್ಟು ಟಿಪ್ಸ್ ಕೊಡುತ್ತಿದ್ದೆನೋ ಏನೋ, ಆದರೆ ನನ್ನಲ್ಲಿ ಆಗ ಹಣ ಇರಲಿಲ್ಲ. ಅದೇನೇ ಇರಲಿ, ಆತನಿಗೆ ಒಳ್ಳೆಯದಾಗಲಿ ಎಂದು ಮನಸಿನಲ್ಲಿಯೇ ಹಾರೈಸುತ್ತಿದ್ದೆ.
ತಂದೆಯ ಹಣಕಾಸು ಸ್ಥಿತಿ ಅಷ್ಟೇನೂ ಸುಧಾರಿಸಿರಲಿಲ್ಲ. ಅಲ್ಲದೆ ಈಗ ನನಗೆ ಯಾವ ಸ್ಕಾಲರ್‌ಶಿಪ್ ಕೂಡಾ ಸಿಗುವಂತಿರಲಿಲ್ಲ. ಹಿರಿಯ ಅಣ್ಣನಿಗಿಂತ ಕಿರಿಯ ಅಣ್ಣ ಉಮೇಶ್ ಆರ್ಥಿಕವಾಗಿ ತಕ್ಕ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದ್ದ. ಕೊಡಗಿನ ಹುದಿಕೇರಿಯ ಹೈಸ್ಕೂಲಿನಲ್ಲಿ ಕಲಾ ಶಿಕ್ಷಕನಾಗಿದ್ದ ಆತ ಆಗಾಗ ನನಗೆ ಹಣ ಕಳುಹಿಸುತ್ತಿದ್ದ. ಮನಿಯಾರ್ಡರ್ ಮಾಡುವ ಬದಲು ಲಕೋಟೆಯಲ್ಲಿ ಪತ್ರದ ಜತೆಗೆ ಮಡಚಿಟ್ಟು ನೂರು ರುಪಾಯಿ ಕಳುಹಿಸುತ್ತಿದ್ದ. ಆದರೆ ಇದು ಹೇಗೋ ಅಂಚೆ ಕಚೇರಿಯ ಸಿಬ್ಬಂದಿಗೆ ಪತ್ತೆಯಾಗಿರಬೇಕು. ಅವರು ಅತ್ಯಂತ ಚಾಣಾಕ್ಷತನದಿಂದ ಆ ಹಣವನ್ನು ಎಗರಿಸಿ ಪತ್ರವನ್ನು ಮಾತ್ರ ನನಗೆ ಕಳುಹಿಸುತ್ತಿದ್ದರು. ನಾನು ದೂರು ನೀಡುವಂತಿಲ್ಲ, ಯಾಕೆಂದರೆ ಲಕೋಟೆಯಲ್ಲಿ ಹಣ ಕಳುಹಿಸುವುದು ಅಪರಾಧ. ಅಣ್ಣನಿಗೆ ವಿಷಯ ತಿಳಿಸಿ ಆ ಬಳಿಕ ಮನಿಯಾರ್ಡರ್ ಮೂಲಕವೇ ಕಳುಹಿಸುವಂತೆ ಮಾಡಿದೆ.

ಶೈಕ್ಷಣಿಕ ಪ್ರವಾಸದ ಸ್ವಾರಸ್ಯಕರ ಕತೆಗಳು
ಬಿ ಎಡ್ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವೂ ಇರುತ್ತದೆ; ಮೂರು ದಿನಗಳದ್ದು. ನಮ್ಮನ್ನು ಚಿತ್ರದುರ್ಗ, ಪಟ್ಟದಕಲ್ಲು, ಐಹೊಳೆ, ಬದಾಮಿ, ಬಿಜಾಪುರ, ಹಂಪಿ ಮತ್ತಿತರ ಕೆಲವು ಸ್ಥಳಗಳಿಗೆ ಕರೆದೊಯ್ದಿದ್ದರು (ಜನವರಿ 1983, 23-27).
ಸರಿಯಾಗಿ ನೆನಪಿಲ್ಲ, ಚಿತ್ರದುರ್ಗದಲ್ಲಿರಬೇಕು, ಒಂದು ಕಾಲೇಜಿನಲ್ಲಿ ನಮಗೆ ವಾಸಕ್ಕೆ ವ್ಯವಸ್ಥೆ ಮಾಡಿದ್ದರು. ಅಲ್ಲಿನ ಪಾಯಿಖಾನೆಯಾದರೋ ತುಂಬಿ ತುಳುಕುತ್ತಿತ್ತು. ರಾತ್ರಿ ಹೊತ್ತಿನಲ್ಲಿ ಪಾಯಿಖಾನೆಗೆ ಹೋಗುವ ಒತ್ತಡ ಎಲ್ಲರಿಗೂ ಆಗಿಬಿಟ್ಟಿತ್ತು. ಗೆಳೆಯರೊಂದಿಗೆ ಸೇರಿ ಪರಿಚಯವೇ ಇಲ್ಲದ ಜಾಗೆಯಲ್ಲಿ ಬಯಲಿನಲ್ಲಿ ಕತ್ತಲಿನಲ್ಲಿ ಹೊರಟೆವು. ಒಂದಷ್ಟು ದೂರ ಹೋಗಿ, ಬಳಿಕ ಅಂತರ ಇರಿಸಿಕೊಂಡು ಮರೆಯಲ್ಲಿ ಕುಳಿತೆವು. ಮರೆಗಳು ಯಾವುದೂ ಸಿಗದ ಕಾರಣ ನಾನು ಒಂದು ಕಂಪೌಂಡ್ ಗೋಡೆಯ ಬಳಿ ಕುಳಿತೆ. ಎಲ್ಲ ಅದ ಮೇಲೆ ತಿರುಗಿ ನೋಡಿದರೆ ಅದು ಗುಡಿಯೊಂದರ ಆವರಣಗೋಡೆ. ಬೆಚ್ಚಿಬಿದ್ದು ತಡಮಾಡದೆ ಅಲ್ಲಿಂದ ಜಾಗ ಖಾಲಿ ಮಾಡಿದೆವು.
ಓಬವ್ವನ ಕಿಂಡಿಯಲ್ಲಿ
ಚಿತ್ರದುರ್ಗದಲ್ಲಿ ಒಂದು ಸ್ವಾರಸ್ಯಕರ ಪ್ರಸಂಗ ನಡೆಯಿತು. ಚಿತ್ರದುರ್ಗ ಕೋಟೆಗೆ ಹೋಗುವವರೆಲ್ಲರ ಮುಖ್ಯ ಆಸೆ ಕೋಟೆ ನೋಡುವುದು ಮಾತ್ರವಲ್ಲ, ಒನಕೆ ಓಬವ್ವನ ಕಿಂಡಿ ನೋಡುವುದು ಕೂಡ. ಕೋಟೆ ಸುತ್ತುವಾಗ ನಾವು ಎರಡೋ ಮೂರೋ ತಂಡಗಳಾಗಿ ಬೇರ್ಪಟ್ಟೆವು. ನಮ್ಮ ಲೀಡರ್ ಲಲಿತಾಕುಮಾರಿ ಮೇಡಂ. ನಾವು ಹೀಗೆ ಕೋಟೆ ಸುತ್ತುವಾಗ ಒಂದೆಡೆ ʼಇದು ಓಬವ್ವ ನ ಕಿಂಡಿʼ ಎಂಬ ಬರೆಹ ಕಾಣಿಸಿತು. ಒಂದೆರಡು ಬಂಡೆಗಳ ನಡುವಿನ ಅಗಲಕಿರಿದಾದ ಕಿಂಡಿಯಾಗಿತ್ತದು. ಹೈದರಾಲಿಯ ಸೈನಿಕರನ್ನು ಕೊಂದ ಓಬವ್ವ ಬಳಸಿದ ಕಿಂಡಿಯಲ್ಲಿ ಒಮ್ಮೆ ತೂರದಿದ್ದರೆ ನಮ್ಮ ಪ್ರವಾಸ ಸಾರ್ಥಕವಾದೀತೇ? ಸರಿ, ಹಿಂದೆ ಮುಂದೆ ನೋಡಲಿಲ್ಲ, ಒಬ್ಬೊಬ್ಬರಾಗಿ ಕಿಂಡಿಯಲ್ಲಿ ತೂರಿದೆವು. ತರಚುಗಾಯಗಳಾದವು, ಉಡುಪೂ ಒಂದೆರಡು ಕಡೆ ಹರಿಯಿತು. ಒತ್ತಾಯಕ್ಕೆ ಮಣಿದು ಮೇಡಂ ಕೂಡಾ ಮೈಕೈ ಗಾಯ ಮಾಡಿಕೊಂಡು ಕಿಂಡಿಯಲ್ಲಿ ಒದ್ದಾಡಿ ಅಚೆ ಬಂದರು.
ನಮ್ಮ ಈ ತೂರಾಟ ಇನ್ನೇನು ಮುಗಿದಿರಲಿಲ್ಲ, ಅಷ್ಟಾಗುವಾಗ ನಮ್ಮ ಇನ್ನೊಂದು ತಂಡ ಬಂದು ವಿಷಯ ಏನೆಂದು ಹೇಳಿದರು. ನಾವು ಮಹಾ ಸಾಹಸ ಸಾಧಿಸಿದವರಂತೆ ವಿಷಯ ತಿಳಿಸಿದೆವು. ಅವರಾದರೋ ಬಿದ್ದು ಬಿದ್ದು ನಕ್ಕರು. “ಅಯ್ಯೋ! ಇದು ಓಬವ್ವನ ಕಿಂಡಿಯಲ್ಲ, ಯಾರೋ ನಿಮ್ಮನ್ನು ಮಂಗಮಾಡಿರಬೇಕು, ನಿಜವಾದ ಕಿಂಡಿ ಅಲ್ಲಿದೆ, ಓಬವ್ವನ ಕಿಂಡಿ ಕೋಟೆಯ ಒಳ ಸುತ್ತಿನಲ್ಲಿ ಇರುತ್ತದೆಯೇ?” ಎಂದು ಕೇಳಿದರು. ನಮಗೂ ಸತ್ಯದರ್ಶನವಾಯಿತು. ಇಂಗುತಿಂದ ಮಂಗನಂತಾಗಿತ್ತು ನಮ್ಮ ಮುಖ. ಒಂದೆಡೆ ಅವಮಾನ, ಇನ್ನೊಂದೆಡೆ ಮೈಕೈ ತುಂಬಾ ಗಾಯಗಳು, ಮತ್ತೊಂದೆಡೆ ವ್ಯರ್ಥವಾದ ಸಾಹಸ!
ಜರ್ಮನ್ ಕ್ಯಾಮರಾದಲ್ಲಿ ಫೋಟೋಗಳು
ನನಗೆ ಆ ದಿನಗಳಲ್ಲೇ ಕ್ಯಾಮರಾ ಹುಚ್ಚು ಹಿಡಿದಿತ್ತು. ಹಿಂದೆ ಕ್ಲಿಕ್ ತ್ರೀ ಕ್ಯಾಮರಾ ಬಳಸಿದ್ದೆ ಕೂಡಾ. ಇಷ್ಟು ದೊಡ್ಡ ಪ್ರವಾಸ ಹೋಗುವಾಗ ಯಾರಲ್ಲೂ ಕ್ಯಾಮರಾ ಇಲ್ಲ! ಆಗ ನಮ್ಮ ಸಹಪಾಠಿ ಲತಾ ರಾವ್ ಎಂಬವರು ಡಬ್ಬಾದಂತಹ ತಮ್ಮ ಒಂದು ಹಳೆಯ ಜರ್ಮನ್ ಕ್ಯಾಮರಾ ಕೊಟ್ಟರು. ಅದು 120 ಎಂ ಎಂ ಫಿಲಂ ನ ಕ್ಯಾಮರಾ. ಅದಕ್ಕೆ ಕ್ಯಾಮರಾ ರೋಲ್ ತುಂಬಿಸಿ ಪ್ರವಾಸದ ಉದ್ದಕ್ಕೂ ನಾನು ಒಂದಷ್ಟು ಫೋಟೋ ತೆಗೆದೆ (ಕಪ್ಪು ಬಿಳುಪು). ಮರಳಿ ಬಂದ ಮೇಲೆ ಕಾಲೇಜಿನಲ್ಲಿ ಅದನ್ನು ಪ್ರದರ್ಶಿಸಿದೆ ಕೂಡಾ. ನಾನು ಕ್ಯಾಮರಾ ಮನ್ ಆದುದರಿಂದ ದಾಖಲೆಗಾದರೂ ಪ್ರವಾಸದ ನನ್ನ ಒಂದೇ ಒಂದು ಫೋಟೋ ಇರಲಿಲ್ಲ ಎನ್ನುವುದು ದುರಂತ!
ಬಿ ಎಡ್ ದಿನಗಳನ್ನು ಪಾಠ, ಪಾಠೇತರ ಚಟುವಟಿಕೆಗಳ ಕಾರಣಕ್ಕೆ ಯಾಕೆ ಮರೆಯಲಾಗುತ್ತಿಲ್ಲವೋ, ಸಾವಿನೊಂದಿಗೆ ಮೂರು ಬಾರಿ ಮುಖಾಮುಖಿಯಾದ ಕಾರಣಕ್ಕೂ ನನಗೆ ಮರೆಯಲಾಗುತ್ತಿಲ್ಲ. ಅಧಿಕಪ್ರಸಂಗಿತನ ಜಾಯಮಾನವಾಗಿರುವ ನಾನು ಆ ಮೂರು ಘಟನೆಗಳಲ್ಲೂ ಸಾಯಬಹುದಿತ್ತು. ಬದುಕಿ ಉಳಿದದ್ದೇ ಪವಾಡ.
ಕೋಟೆಯಲ್ಲಿ ದುಸ್ಸಾಹಸ!
ಚಿತ್ರದುರ್ಗ ಪ್ರವಾಸ ಸಂದರ್ಭದಲ್ಲಿ ಕೋಟೆ ನೋಡಲು ಹೋಗಿದ್ದೆವು. ಹೀಗೆ ಹೋಗುತ್ತಾ ಹುಡುಗಾಟಿಕೆಯಿಂದ ನಾವು ಕೆಲವು ಗೆಳೆಯರು, ಒಂದು ಕಗ್ಗಲ್ಲಿನ ಬೆಟ್ಟವನ್ನು ಏರುವ ಯೋಚನೆ ಮಾಡಿದೆವು. ಬೆಟ್ಟ ಕಡಿದಾಗಿತ್ತು. ಆದರೆ ಕೆಳಗಿನಿಂದ ನೋಡುವಾಗ ಅದನ್ನು ಹತ್ತಿ ಆಚೆ ಸಾಗುವುದು ಕಷ್ಟವೆನಿಸಲಿಲ್ಲ. ನಮ್ಮ ಗೆಳೆಯರು ಬೆಟ್ಟ ಏರಿದರು. ನಾನೂ ಏರಿದೆ. ಆದರೆ ಸುರಕ್ಷಿತ ದಾರಿಯಲ್ಲಿ ಸಾಗುವ ಬದಲು ತಪ್ಪಿ ನನ್ನ ದಾರಿ ಒಂದಿಷ್ಟು ಬದಲಾಯಿತು. ಅದು ಸಿಕ್ಕಾಪಟ್ಟೆ ಸ್ಟೀಪ್ ಇರುವ ಜಾಗ. ಮೇಲೆ ಏರಲು ಭಯ, ಕೆಳಗೆ ನೋಡಿದರೆ ಇನ್ನೂ ಭಯ. ಕಾಲುಗಳು ಥರ ಥರ ನಡುಗಲಾರಂಭಿಸಿದವರು. ಮೈ ಬೆವರಲಾರಂಭಿಸಿತು. ಉರುಳಿಬಿದ್ದರೆ ಸಾಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಅಲ್ಲಿದ್ದವರೆಲ್ಲ ತಮಗೆ ಕಂಡಂತೆ ಮಾರ್ಗದರ್ಶನ ನೀಡಿ ನನ್ನ ಭಯವನ್ನು ಇನ್ನೂ ಹೆಚ್ಚಿಸಿದರು. ಆನಂತರ, ಕೊನೆಯ ಯತ್ನವಾಗಿ ಒಂದು ಉಪಾಯ ಮಾಡಿದೆ. ಕಣ್ಣು ಬಿಟ್ಟರೆ ಭಯ ಹೆಚ್ಚು ಎಂದು ತಲೆಯಲ್ಲಿದ್ದ ಟೊಪ್ಪಿಯನ್ನು ಕಣ್ಣಿಗೆ ಸರಿಸಿಕೊಂಡು ನಡುಗುತ್ತಲೇ ಮೇಲಕ್ಕೇ ಮೇಲಕ್ಕೆ ನಿಧಾನವಾಗಿ ಏರಿ ಸಮತಟ್ಟು ಪ್ರದೇಶ ಸೇರಿಕೊಂಡೆ. ಮೊದಲ ಬಾರಿಗೆ ಸಾವು ಎಂದರೆ ಏನು ಎಂಬುದನ್ನು ಅನುಭವಿಸಿ ಬಂದೆ.

ಕೋಳಿ ಬದುಕಿಸ ಹೊರಟು ನಾನೇ ಬಾವಿಗೆ ಬಿದ್ದೆ
ಕ್ರಿಸ್ಮಸ್ ಮುನ್ನಾ ದಿನ ನಾನು ಕಟಪಾಡಿಯ ಕುರುಪ್ ಅವರ ಮನೆಯಲ್ಲಿದ್ದೆ. ಪಕ್ಕದಲ್ಲೇ ಒಂದು ಕ್ರಿಶ್ಚಿಯನ್ ಕುಟುಂಬ. ಅವರಿಗೆ ನನ್ನೊಂದಿಗೆ ಆತ್ಮೀಯತೆಯಿತ್ತು. ಅವರು ಹಬ್ಬದ ತಿಂಡಿಗಾಗಿ ಮನೆಗೆ ಕರೆಯುವುದೂ ಇತ್ತು. ನಾನು ಕಾರ್ಕಳಕ್ಕೆ ಹೊರಟವನು, ಅವರ ಮನೆಯ ಪಕ್ಕದಲ್ಲಿಯೇ ಹಾದು ಹೋಗುವಾಗ “ನಮ್ಮ ಕೋಳಿಯೊಂದು ಬಾವಿಗೆ ಬಿದ್ದಿದೆ ಏನು ಮಾಡುವುದು?” ಎಂದು ಕೇಳಿದರು. ಬಾವಿ ನೋಡಿದೆ ಹೆಚ್ಚು ಆಳ ಇರಲಿಲ್ಲ. ಇದಕ್ಕಿಂತ ಆಳ ಬಾವಿ ಕುರುಪ್ ರದ್ದು. ಅದಕ್ಕೆ ನಾನು ಇಳಿದು ಮೇಲೆ ಬಂದ ಅನುಭವವಿತ್ತು. ಉಡುಪು ಕಳಚಿಟ್ಟು, ಬರೇ ಚಡ್ಡಿಯಲ್ಲಿ, “ನಾನು ಇಳಿಯುತ್ತೇನೆ” ಎಂದು ಹಗ್ಗ ಹಿಡಿದು ಬಾವಿಗಿಳಿದೆ. ಬಾವಿಯಲ್ಲಿ ನೀರಿಗಿಂತ ಹೆಚ್ಚು ಕೆಸರು ಇತ್ತು. ಬಾವಿಗಿಳಿದು ಕೋಳಿಯನ್ನು ಬುಟ್ಟಿಯಲ್ಲಿ ಹಾಕಿ ಮೇಲೆ ಕಳುಹಿಸಿದೆ.
ಮೇಲೆ ಬರಲೆಂದು ಹಗ್ಗ ಹಿಡಿದು ಏರಲಾರಂಭಿಸಿದೆ. ಈಗ ಸಮಸ್ಯೆಯ ಅರಿವಾಯಿತು. ಬಾವಿಯ ಕೆಳಬದಿಯಲ್ಲಿ ಶೇಡಿ ಮಣ್ಣು. ಅಲ್ಲಿ ಕಾಲು ಇರಿಸಲು ರಿಂಗ್ ಇಲ್ಲ. ಕಾಲಿನಲ್ಲಿ ಕೆಸರು ಬೇರೆ. ಹಗ್ಗವನ್ನು ಕಾಲಬೆರಳಿನಲ್ಲಿ ಅದುಮಿ ಹಿಡಿದು ಒಂದು ಆಳೆತ್ತರ ನೇತಾಡುತ್ತಾ ಬಂದೆ. ಒಂದೆಡೆ ಕಾಲು ಜಾರುತ್ತಿತ್ತು, ಭಯದಿಂದ ಕೈಗಳಲ್ಲಿ ಶಕ್ತಿಯೂ ಇಲ್ಲದ ಅನುಭವವಾಯಿತು. ಕೈ ಬಿಟ್ಟುಬಿಟ್ಟೆ. ದುಡುಮ್ಮನೆ ಬಾವಿಗೆ ಬಿದ್ದೆ. ಆಳೆತ್ತರ ಕೆಸರು ಇದ್ದ ಕಾರಣ ಅಪಾಯವೇನೂ ಆಗಲಿಲ್ಲ. ಇನ್ನೊಮ್ಮೆ ಯತ್ನಿಸಿದೆ. ಒಂದು ಬಾರಿ ಪ್ಯಾನಿಕ್ ಆದ ಕಾರಣ ಈಗ ನನ್ನ ರಟ್ಟೆಯಲ್ಲಿ ಶಕ್ತಿಯೇ ಇಲ್ಲದಂತೆ ಅನಿಸಲಾರಂಭಿಸಿತು. ಮತ್ತೆ ಬಿದ್ದೆ.
ಮೇಲಿದ್ದ ಮನೆಯವರಿಗೂ ಗಾಬರಿಯಾಯಿತು. ಕೊನೆಗೆ ಅಲ್ಲಿ ಇಲ್ಲಿ ಓಡಿ ಜನ ಸೇರಿಸಿ, ಹಗ್ಗ ಇಳಿಸಿ ತೊಟ್ಟಿಲಿನಂತಹ ವ್ಯವಸ್ಥೆಯ ಮೂಲಕ ನನ್ನನ್ನು ಮೇಲಕ್ಕೆ ಎತ್ತಿದರು. ಕೋಳಿಯನ್ನು ಬಾವಿಯಿಂದ ಎತ್ತಲು ಹೋಗಿ, ನಾನೇ ಬಾವಿಗೆ ಬಿದ್ದು, ನನ್ನನ್ನು ಊರವರು ಸೇರಿ ಮೇಲಕ್ಕೆತ್ತುವ ಹಾಸ್ಯಾಸ್ಪದ ಘಟನೆಗೆ ವಸ್ತುವಾದೆ. ಆಮೇಲೆ ಬಾವಿಗೆ ಇಳಿಯುವುದೆಂದರೆ ನನಗೆ ಸದಾ ಭಯ; ಯಾವತ್ತೂ ರಿಂಗ್ ಇಲ್ಲದ ಆಳ ಬಾವಿಗೆ ಇಳಿಯುವ ಸಾಹಸ ಮಾಡಲಿಲ್ಲ.
ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಕಡಲು ಹೊತ್ತೊಯ್ದಿತು
ಕಾಲೇಜು ದಿನಗಳು ಮುಗಿಯುತ್ತ ಬಂದವು. ಸಹಪಾಠಿಗಳೆಲ್ಲ ಸೇರಿ ಪಕ್ಕದ ಸೈಂಟ್ ಮೇರೀಸ್ ಐಲ್ಯಾಂಡ್ ಗೆ ಹೋಗುವುದು ಎಂದು ನಿರ್ಧಾರವಾಯಿತು. ಕುಂಜಿಬೆಟ್ಟಿನಿಂದ ಉಡುಪಿಗೆ, ಅಲ್ಲಿಂದ ಮಲ್ಪೆಗೆ ಬಸ್. ಮಲ್ಪೆಯಲ್ಲಿ ಖಾಸಗಿ ಬೋಟೊಂದನ್ನು ನಿಗದಿಪಡಿಸಿ ನಾವು ಯುವಕ ಯುವತಿಯರೆಲ್ಲ ಸೈಂಟ್ ಮೇರೀಸ್ ಐಲ್ಯಾಂಡ್ ತಲಪಿದೆವು. ಒಂದು ವರ್ಷ ಕಾಲದ ಗೆಳೆತನ, ಉಕ್ಕೇರುವ ಹರೆಯ, ಅಂತೂ ಗಮ್ಮತ್ತೋ ಗಮ್ಮತ್ತು. ದ್ವೀಪ ಸೇರಿ ಅಲ್ಲಿ ಇಲ್ಲಿ ಅಲೆದಾಡಿದ ಮೇಲೆ ಎಲ್ಲರೂ ಈಜಾಡುವ ಮನ ಮಾಡಿದರು. ನಾನಾದರೋ ಕೆರೆ ನದಿಗಳಲ್ಲಿ ಈಜಿದ ಅನುಭವಿ. ಇಲ್ಲಿ ಗೆಳೆಯರ ಮುಂದೆ ವಿಶೇಷವಾಗಿ ಹುಡುಗಿಯರ ಮುಂದೆ ದೊಡ್ಡ ಜನ ಎಂದು ʼಶೋʼ ಮಾಡುವ ಸಹಜ ಚಪಲ.
ನಾನೂ ಸಮುದ್ರಕ್ಕೆ ಇಳಿದೆ. ಒಂದಷ್ಟು ಹೊತ್ತು ಈಜಾಡಿದೆ. ಅಷ್ಟಾಗುವಾಗ ಒಂದು ಬೃಹತ್ ತೆರೆ ಬಂದು ದಡಕ್ಕೆ ಅಪ್ಪಳಿಸಿ ವಾಪಸ್ ಹೋಗುವಾಗ ನನ್ನನ್ನೂ ತನ್ನೊಂದಿಗೆ ಒಯ್ದಿತು. ಮೇಲಕ್ಕೆ ಕೆಳಕ್ಕೆ ಮಾಡಿತು. ಬಾಯಿಗೆ ಉಪ್ಪು ನೀರು ತುಂಬಿಸಿತು. ನಾನಿನ್ನು ವಾಪಸ್ ಬರುವುದು ಅಸಾಧ್ಯ. ಸಾವಿನ ಅಂತಿಮ ಕ್ಷಣವನ್ನು ನಾನು ಅನುಭವಿಸಿದೆ. ಮನಸಿನಲ್ಲಿ ಚಿತ್ರಗಳ ಸರಮಾಲೆ ಓಡಿತು. “ನಾನು ಮನೆಯಲ್ಲಿ ಹೇಳಿ ಬಂದಿಲ್ಲ, ಇಲ್ಲಿ ಸಾಯುತ್ತೇನೆ, ನನ್ನ ಶವವನ್ನು ಊರಿಗೆ ಒಯ್ಯುತ್ತಾರೆ, ಮನೆಯವರು ಗೋಳೋ ಎಂದು ಅಳುತ್ತಾರೆ ಹೀಗೆ”..
ಪ್ಯಾನಿಕ್ ಆದುದರಿಂದ ನನ್ನ ಶಕ್ತಿ ಕುಂದಿ ಹೋಗಿತ್ತು. ಕಡಲಕರೆಯಿಂದ ಒಂದಷ್ಟು ಒಳಕ್ಕೆ ಹೋಗಿದ್ದ ನಾನು, ಬದುಕುಳಿಯುವ ಕೊನೆಯ ಯತ್ನವೆಂಬಂತೆ ಅಲ್ಲಿಂದ ಇನ್ನಷ್ಟು ಅಪಾಯಕಾರಿಯಾದ ಬಂಡೆಯತ್ತ ಈಜು ಹೊಡೆದೆ. ಅದನ್ನು ಸೇರಿ ಹಿಡಿದುಕೊಂಡೆ. ಅದರಲ್ಲೇನೋ ಮುಳ್ಳಿನಂತಹ ಚಿಪ್ಪುಗಳಿದ್ದವು ಅವು ನನ್ನ ಕೈಗಳಿಗೆ ಕಾಲುಗಳಿಗೆ ಕಂತಿದವು (ಊರಿಗೆ ಮರಳಿದ ಬಳಿಕ ಡಾಕ್ಟರ್ ಉದಯಕುಮಾರ್ ಶಸ್ತ್ರ ಚಿಕಿತ್ಸೆಯ ಮೂಲಕ ಅವನ್ನು ತೆಗೆದು ಗುಣಪಡಿಸಬೇಕಾಯಿತು). ಆ ಅಪಾಯಕಾರಿ ದಂಡೆಯಿಂದ ದಡಕ್ಕೆ ಒಂದು ಸುಲಭ ದಾರಿ ಇತ್ತು. ಅದರ ಮೂಲಕ ಸಾಗಿ ಸಾವಿನ ದವಡೆಯಿಂದ ಪಾರಾದೆ. ಆ ಕ್ಷಣ ಒಂದಿಷ್ಟು ಕೈಕೊಟ್ಟಿದ್ದರೂ ಅಂದೇ ನನ್ನ ಕೊನೆಯಾಗುತ್ತಿತ್ತು. ಬದುಕಿನಲ್ಲಿ ಸಾವಿನೊಂದಿಗೆ ಮುಖಾಮುಖಿಯಾದ ಅನೇಕ ಘಟನೆಗಳಲ್ಲಿ ಇದು ನನ್ನ ಪಾಲಿಗೆ ಹೆಚ್ಚು ಭಯಾನಕ ಘಟನೆ.
ಶ್ರೀನಿವಾಸ ಕಾರ್ಕಳ,
ಸಮಾಜ ಚಿಂತಕರು
ಇದನ್ನು ಓದಿದ್ದೀರಾ? ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ- 27- ಪುಸ್ತಕ ಪ್ರತಿನಿಧಿಯಾಗಿ ಉತ್ತರಕರ್ನಾಟಕ ಯಾತ್ರೆ


