ದೆಹಲಿ ಕಟ್ಟಡ ಕುಸಿತದಂತಹ ದುರಂತಗಳು ಕೇವಲ ಒಂದು ಕಟ್ಟಡದ ಸುರಕ್ಷತೆಯ ಪ್ರಶ್ನೆಯಲ್ಲ. ಅವು ನಗರ ಯೋಜನೆ, ಕಟ್ಟಡ ನಿಯಮಗಳು, ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯ ಮತ್ತು ಆಡಳಿತ ವ್ಯವಸ್ಥೆಯ ಪರಿಣಾಮಕಾರಿತ್ವಕ್ಕೆ ಹಿಡಿದ ಕನ್ನಡಿ. ಭಾರತದ ನಗರಗಳನ್ನು ಸುರಕ್ಷಿತ ಮತ್ತು ಸಮರ್ಥ ಆರ್ಥಿಕ ಕೇಂದ್ರಗಳನ್ನಾಗಿ ಮಾಡಬೇಕಾದರೆ ನಗರ ಆಡಳಿತ ರಚನೆಯನ್ನು ಮೂಲಮಟ್ಟದಿಂದಲೇ ಪುನರ್ವಿಮರ್ಶಿಸಬೇಕು – ಒಲಿವರ್ ಡಿʼಸೋಜಾ, ಮುಂಬೈ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಭೀಕರ ಕಟ್ಟಡ ಕುಸಿತವು ನಮ್ಮ ನಗರಗಳ ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಮತ್ತು ಆದಾಯದ ಮಾದರಿಯನ್ನು ಸಮಗ್ರವಾಗಿ ಪುನರ್ವಿಮರ್ಶಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.
ಆರು ಜೀವಗಳನ್ನು ಬಲಿ ಪಡೆದ ಕಟ್ಟಡ ಕುಸಿತ
ಸೆಪ್ಟೆಂಬರ್ 6, 2026 ರಂದು ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದು ಆರು ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡ ಘಟನೆ ದೇಶದ ನಗರಾಡಳಿತ ವ್ಯವಸ್ಥೆಯತ್ತ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕುಸಿದ ಕಟ್ಟಡವು ಹಳೆಯದೇನೂ ಆಗಿರಲಿಲ್ಲ. ಆದರೆ ಕಳಪೆ ನಿರ್ಮಾಣದಿಂದಾಗಿ ಅತ್ಯಂತ ದುರ್ಬಲವಾಗಿತ್ತು. ಹೆಚ್ಚಿನ ಬಾಡಿಗೆ ಆದಾಯದ ದುರಾಶೆಗೆ ಬಿದ್ದು ಅದರ ಮೇಲೆಯೇ ಮತ್ತೊಂದು ಅಂತಸ್ತನ್ನು ನಿರ್ಮಿಸಲಾಗುತ್ತಿತ್ತು.
ಈ ಘಟನೆ ಕೇವಲ ಸಾಮಾನ್ಯ ಅಪಘಾತ’ ಎಂದು ಹೇಳಿ ಆಚೆಗೆ ಸರಿಸಿಬಿಡಬಹುದಾದಷ್ಟು ಸರಳವಲ್ಲ. ಕಟ್ಟಡ ನಿರ್ಮಾಣದ ಗುಣಮಟ್ಟ, ಸ್ಥಳೀಯ ಪ್ರಾಧಿಕಾರದ ಅನುಮತಿ, ಹೆಚ್ಚುವರಿ ಅಂತಸ್ತಿನ ನಿರ್ಮಾಣ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲ್ವಿಚಾರಣೆ ಈ ಎಲ್ಲದರ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸುತ್ತವೆ.
ಅಧಿಕಾರಿಗಳ ಕಣ್ಣಿಗೆ ಕಾಣದ ಕಟ್ಟಡ!
ಕಟ್ಟಡ ನಿರ್ಮಾಣ ಕಾಮಗಾರಿ, ಅಂತರ್ಜಲ ಬಳಕೆ, ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ವಿಷಯಗಳ ಮೇಲೆ ನಿರಂತರ ನಿಗಾ ವಹಿಸುವುದು ನಾಗರಿಕ ಸಂಸ್ಥೆಗಳ (Civic Bodies) ಪ್ರಾಥಮಿಕ ಜವಾಬ್ದಾರಿ. ಹೀಗಿರುವಾಗ ಸುಮಾರು 50 ಅಡಿ ಎತ್ತರದ ಅಕ್ರಮ ಕಟ್ಟಡವೊಂದು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಹೇಗೆ ? ನಿಯಮ ಉಲ್ಲಂಘನೆಗಳು ಬಹಿರಂಗವಾಗಿ ನಡೆಯುತ್ತಿದ್ದರೂ ಇಲಾಖೆಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದೆ, ದುರಂತ ಸಂಭವಿಸಿದ ನಂತರ ಕೇವಲ ‘ನಿರ್ಲಕ್ಷ್ಯ’ ಎಂದು ಹೇಳಿದರೆ ಸಾಲದು. ಇದರ ಪೂರ್ಣ ಹೊಣೆಗಾರಿಕೆ ಹೊರಬೇಕಾದವರು ಯಾರು ಎಂಬುದು ಸ್ಪಷ್ಟವಾಗಬೇಕು.

ಅನಿಯೋಜಿತ ಪ್ರದೇಶಗಳ ವಿಸ್ತರಣೆ ಏಕೆ ?
ಕುಸಿದ ಕಟ್ಟಡವು ಆ ಪ್ರದೇಶದಲ್ಲಿದ್ದ ಏಕೈಕ ಕಟ್ಟಡವಲ್ಲ. ದೇಶದ ಅನೇಕ ಮಹಾನಗರಗಳಲ್ಲಿ ಇಂತಹ ಕಳಪೆ ಹಾಗೂ ನಿಯಮಬಾಹಿರ ಕಟ್ಟಡಗಳು ಅಣಬೆಗಳಂತೆ ತಲೆಎತ್ತುತ್ತಿವೆ. ಅನಿಯೋಜಿತ ಬಡಾವಣೆಗಳು ಅತ್ಯಂತ ವೇಗವಾಗಿ ವಾಣಿಜ್ಯ ಮತ್ತು ವಸತಿ ಕೇಂದ್ರಗಳಾಗಿ ಮಾರ್ಪಡುತ್ತಿರುವುದಕ್ಕೆ ಕಾರಣಗಳನ್ನು ನಗರ ಯೋಜಕರು (Urban Planners) ಗಂಭೀರವಾಗಿ ಪರಿಶೀಲಿಸಬೇಕಾಗಿದೆ.
ಭಾರತದ ಆರ್ಥಿಕತೆ ಬೆಳೆಯುತ್ತಿರುವಂತೆ ನಗರ ಪ್ರದೇಶಗಳಲ್ಲಿ ವಸತಿ, ಕಚೇರಿ, ಅಂಗಡಿ ಮತ್ತು ಇತರ ಕಟ್ಟಡಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ವಿಶ್ವ ಬ್ಯಾಂಕ್ ಅಂದಾಜಿನ ಪ್ರಕಾರ, ಮುಂದಿನ ಒಂದು ದಶಕದಲ್ಲಿ ಭಾರತದ ನಗರ ಪ್ರದೇಶಗಳಲ್ಲಿ ಸುಮಾರು 60 ಕೋಟಿ ಜನರು ವಾಸಿಸಲಿದ್ದಾರೆ. ದೇಶದ ಒಟ್ಟು ಜಿಡಿಪಿಯ ಸುಮಾರು 70% ನಗರಗಳಿಂದಲೇ ಬರಲಿದೆ. ಇಂತಹ ಸಂದರ್ಭದಲ್ಲಿ ನಗರಗಳ ಬೆಳವಣಿಗೆಯನ್ನು ಕೇವಲ ನಿಯಂತ್ರಿಸುವ ಬದಲು, ಅತ್ಯಂತ ಸುರಕ್ಷಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಯೋಜಿಸುವುದು ತುರ್ತು ಅಗತ್ಯವಾಗಿದೆ.
ಅಧಿಕಾರಿಗಳ ಕಣ್ಣಿಗೆ ಕಾಣದ ಕಟ್ಟಡ!
ಕಟ್ಟಡ ನಿರ್ಮಾಣ ಕಾಮಗಾರಿ, ಅಂತರ್ಜಲ ಬಳಕೆ, ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ವಿಷಯಗಳ ಮೇಲೆ ನಿರಂತರ ನಿಗಾ ವಹಿಸುವುದು ನಾಗರೀಕ ಸಂಸ್ಥೆಗಳ (Civic Bodies) ಪ್ರಾಥಮಿಕ ಜವಾಬ್ದಾರಿ. ಹೀಗಿರುವಾಗ ಸುಮಾರು 50 ಅಡಿ ಎತ್ತರದ ಅಕ್ರಮ ಕಟ್ಟಡವೊಂದು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಹೇಗೆ ? ನಿಯಮ ಉಲ್ಲಂಘನೆಗಳು ಬಹಿರಂಗವಾಗಿ ನಡೆಯುತ್ತಿದ್ದರೂ ಇಲಾಖೆಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದೆ, ದುರಂತ ಸಂಭವಿಸಿದ ನಂತರ ಕೇವಲ ‘ನಿರ್ಲಕ್ಷ್ಯ’ ಎಂದು ಹೇಳಿದರೆ ಸಾಲದು. ಇದರ ಪೂರ್ಣ ಹೊಣೆಗಾರಿಕೆ ಯಾರದ್ದು ಎಂಬುದು ಸ್ಪಷ್ಟವಾಗಬೇಕು.
ಕೃತಕವಾಗಿ ಸೃಷ್ಟಿಸಿದ ಜಾಗದ ಕೊರತೆ (FAR ನಿಯಮಗಳು)
ಪ್ರಸ್ತುತ ಭಾರತದ ನಗರಗಳು ಹೊರವಲಯಗಳತ್ತ ಅಡ್ಡಲಾಗಿ ವಿಸ್ತರಿಸುತ್ತಿವೆ. ನಗರಗಳ ಕೇಂದ್ರ ಭಾಗದಲ್ಲಿ ಜಾಗದ ಬೆಲೆ ದುಬಾರಿಯಾಗಿರುವುದರಿಂದ, ಕಟ್ಟಡ ನಿರ್ಮಾಪಕರು ಮತ್ತು ಗ್ರಾಹಕರು ನಿಯಮಾವಳಿಗಳಿಲ್ಲದ ಅಗ್ಗದ ಹೊರವಲಯಗಳತ್ತ ಮುಖ ಮಾಡುತ್ತಿದ್ದಾರೆ.
ನಗರಗಳಲ್ಲಿ ಜಾಗದ ಅಭಾವ ಕೇವಲ ನೈಸರ್ಗಿಕವಲ್ಲ; ಕಟ್ಟಡ ನಿರ್ಮಾಣಕ್ಕೆ ವಿಧಿಸಲಾಗಿರುವ ಕಠಿಣ ಹಾಗೂ ಅಪೂರ್ಣ ನಿಯಮಗಳಿಂದಲೂ ಸೃಷ್ಟಿಯಾಗಿದೆ: ಒಂದು ನಿವೇಶನದಲ್ಲಿ ಎಷ್ಟು ಶೇಕಡಾ ಭಾಗವನ್ನು ಕಟ್ಟಡಕ್ಕೆ ಬಳಸಬಹುದು, ಎಷ್ಟು ಅಂತಸ್ತುಗಳನ್ನು ನಿರ್ಮಿಸಬಹುದು ಎಂಬುದಕ್ಕೆ ಮಿತಿಗಳಿವೆ.
ಉದಾಹರಣೆಗೆ, 100 ಚದರ ಅಡಿ ನಿವೇಶನದಲ್ಲಿ ಸಿಂಗಾಪುರದಲ್ಲಿ 2,500 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ಅವಕಾಶವಿದೆ, ದೆಹಲಿಯಲ್ಲಿ ಅದೇ 100 ಚದರ ಅಡಿ ನಿವೇಶನಕ್ಕೆ ಸುಮಾರು 350 ಚದರ ಅಡಿ ವಿಸ್ತೀರ್ಣದ ಮಿತಿಯಿದೆ ಎಂಬುದು ಗಮನಾರ್ಹವಾಗಿದೆ.
ನಗರಗಳು ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಬೇಕು
ನಗರಗಳು ಕೇವಲ ವಸತಿ ಪ್ರದೇಶಗಳಲ್ಲ. ಅವು ಉದ್ಯೋಗ, ಉತ್ಪಾದಕತೆ, ವ್ಯಾಪಾರದಂತಹ ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರಗಳು. ಇತ್ತೀಚಿನ ಆರ್ಥಿಕ ಸಮೀಕ್ಷೆಯೂ ಸಹ ನಮ್ಮ ನಗರ ನೀತಿಗಳು ಅನೇಕ ಸಂದರ್ಭಗಳಲ್ಲಿ ಅಭಿವೃದ್ಧಿಗೆ ಪೂರಕವಾಗಿರದೆ, ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಎತ್ತಿ ತೋರಿಸಿದೆ.
ಅತಿಯಾದ ನಿರ್ಬಂಧಗಳು ಮತ್ತು ದುಬಾರಿ ನಿರ್ಮಾಣ ವೆಚ್ಚಗಳು ಜನರನ್ನು ಅಗ್ಗದ ಆದರೆ ಸುರಕ್ಷಿತವಲ್ಲದ ಅನಿಯೋಜಿತ ಪ್ರದೇಶಗಳತ್ತ ತಳ್ಳಬಹುದು. ಅಲ್ಲಿ ಕಟ್ಟಡ ಸುರಕ್ಷತೆ ಮತ್ತು ಮೂಲಸೌಕರ್ಯದ ಮೇಲ್ವಿಚಾರಣೆಯೂ ದುರ್ಬಲವಾಗುವ ಸಾಧ್ಯತೆ ಇದೆ.
ವಿಭಜಿತ ಆಡಳಿತವೂ ದೊಡ್ಡ ಸಮಸ್ಯೆ
ಹೆಚ್ಚಿನ ನಾಗರೀಕ ಸಂಸ್ಥೆಗಳು ತಮ್ಮ ಸ್ವಂತ ವೆಚ್ಚಗಳನ್ನು ಭರಿಸಲು ಅಗತ್ಯ ಆದಾಯ ಗಳಿಸಲು ವಿಫಲವಾಗುತ್ತಿವೆ. ಒಂದೇ ಪ್ರದೇಶದ ನಿರ್ವಹಣೆಗೆ ಹಲವು ಇಲಾಖೆಗಳು ಮತ್ತು ಪ್ರಾಧಿಕಾರಗಳು (BBMP, BDA, Bescom, BWSSB) ಜವಾಬ್ದಾರಿ ಹೊಂದಿರುವುದರಿಂದ, ಉಲ್ಲಂಘನೆ ಕಂಡುಬಂದಾಗ ತಕ್ಷಣ ಕ್ರಮ ಕೈಗೊಳ್ಳುವಲ್ಲಿ ಗೊಂದಲ ಉಂಟಾಗುತ್ತದೆ.
ಅಧಿಕಾರ ಯಾರದ್ದು ಎಂಬುದು ಸ್ಪಷ್ಟವಿಲ್ಲದಿದ್ದಾಗ, ತಪ್ಪು ನಡೆದಾಗ ಹೊಣೆಗಾರಿಕೆಯನ್ನು ನಿಗದಿಪಡಿಸಲು ಕಷ್ಟವಾಗುತ್ತದೆ. ನಿಯಮ ಉಲ್ಲಂಘನೆಗಳು ಎಲ್ಲರ ಕಣ್ಣೆದುರೇ ನಡೆಯುತ್ತಿದ್ದರೂ ಕ್ರಮ ವಿಳಂಬವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಅಧಿಕಾರಕ್ಕೂ ಹೊಣೆಗಾರಿಕೆಗೂ ಸ್ಪಷ್ಟತೆ ಅಗತ್ಯ
ದೆಹಲಿ ಕಟ್ಟಡ ಕುಸಿತದಂತಹ ದುರಂತಗಳು ಕೇವಲ ಒಂದು ಕಟ್ಟಡದ ಸುರಕ್ಷತೆಯ ಪ್ರಶ್ನೆಯಲ್ಲ. ಅವು ನಗರ ಯೋಜನೆ, ಕಟ್ಟಡ ನಿಯಮಗಳು, ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯ ಮತ್ತು ಆಡಳಿತ ವ್ಯವಸ್ಥೆಯ ಪರಿಣಾಮಕಾರಿತ್ವಕ್ಕೆ ಹಿಡಿದ ಕನ್ನಡಿ
ಭಾರತದ ನಗರಗಳನ್ನು ಸುರಕ್ಷಿತ ಮತ್ತು ಸಮರ್ಥ ಆರ್ಥಿಕ ಕೇಂದ್ರಗಳನ್ನಾಗಿ ಮಾಡಬೇಕಾದರೆ ನಗರ ಆಡಳಿತ ರಚನೆಯನ್ನು ಮೂಲಮಟ್ಟದಿಂದಲೇ ಪುನರ್ವಿಮರ್ಶಿಸಬೇಕು.
ಯಾರಿಗೆ ಅಧಿಕಾರವಿದೆಯೋ ಅವರಿಗೆ ಸ್ಪಷ್ಟ ಜವಾಬ್ದಾರಿಯೂ ಇರಬೇಕು; ಜವಾಬ್ದಾರಿ ಇರುವವರಿಗೆ ಉತ್ತರದಾಯಿತ್ವವೂ ಇರಬೇಕು. ಕಟ್ಟಡ ಕುಸಿದು ಬಿದ್ದ ನಂತರ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಕ್ಕಿಂತ, ಕುಸಿಯುವ ಮುನ್ನವೇ ಅಪಾಯವನ್ನು ಗುರುತಿಸಿ ತಡೆಯುವ ವ್ಯವಸ್ಥೆ ರೂಪಿಸುವುದೇ ನಿಜವಾದ ನಗರಾಡಳಿತದ ಪರೀಕ್ಷೆ.
ಒಲಿವರ್ ಡಿ’ ಸೋಜಾ
ಮುಂಬೈ
ಇದನ್ನೂ ಓದಿ- ಭಗತ್ ಸಿಂಗ್ | 23 ವರ್ಷ ಭಾರತದಲ್ಲಿ, ಸಾವಿರ ವರ್ಷ ಹೃದಯದಲ್ಲಿ!


