ಮಹಿಳೆಯರು ಹೋರಾಟಗಳ ಮುಂಚೂಣಿಯಲ್ಲಿರುವುದರ ಜೊತೆಗೆ ನೀತಿ ನಿರೂಪಣೆ, ನಿರ್ಧಾರ ಕೈಗೊಳ್ಳುವಿಕೆ ಮತ್ತು ಅಧಿಕಾರ ನಿರ್ವಹಣೆಯ ಕೇಂದ್ರಗಳಲ್ಲಿಯೂ ಸ್ಥಾನ ಪಡೆಯುವಂತಾಗಬೇಕು. ಇದಕ್ಕಾಗಿ ರಾಜಕೀಯ ಪಕ್ಷಗಳ ರಚನೆ, ಚುನಾವಣಾ ಪ್ರಕ್ರಿಯೆ ಮತ್ತು ಅಧಿಕಾರ ಹಂಚಿಕೆಯ ವ್ಯವಸ್ಥೆಗಳಲ್ಲಿ ಬೇರೂರಿರುವ ಪುರುಷಾಧಿಪತ್ಯದ ಮೌಲ್ಯಗಳು ಹಾಗೂ ಅಡೆತಡೆಗಳು ನಿವಾರಣೆಯಾಗಬೇಕು. ಮಹಿಳೆಯರ ಪ್ರತಿಭಟನಾ ಶಕ್ತಿಯು ರಾಜಕೀಯ ನಾಯಕತ್ವವಾಗಿ ವಿಕಸಿಸಿದಾಗ ಮಾತ್ರ ನೈಜ ರಾಜಕೀಯ ಸಬಲೀಕರಣ ಸಾಧ್ಯವಾಗುತ್ತದೆ – ಡಾ. ಆಶಾ ಬಗ್ಗನಡು, ಉಪನ್ಯಾಸಕಿ.
ಭಾರತದ ಚುನಾವಣಾ ರಾಜಕಾರಣದಲ್ಲಿ ಮಹಿಳೆಯರ ಪಾತ್ರ ಕಳೆದ ಕೆಲವು ದಶಕಗಳಲ್ಲಿ ಗಮನಾರ್ಹವಾಗಿ ಬದಲಾಗಿದೆ. ಒಂದು ಕಾಲದಲ್ಲಿ ಕುಟುಂಬದ ಪುರುಷರ ರಾಜಕೀಯ ಒಲವು ಮತ್ತು ನಿರ್ಧಾರಗಳಿಗೆ ಅನುಗುಣವಾಗಿ ಮತ ಚಲಾಯಿಸುತ್ತಾರೆ ಎಂಬ ಸಾಮಾನ್ಯ ಗ್ರಹಿಕೆ ಇತ್ತು. ಆದರೆ ಇಂದು ಮಹಿಳೆಯರು ತಮ್ಮದೇ ಆದ ರಾಜಕೀಯ ಆಯ್ಕೆ, ಆದ್ಯತೆ ಮತ್ತು ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಚುನಾವಣೆಯಿಂದ ಚುನಾವಣೆಗೆ ಅವರ ಮತದಾನದ ಪ್ರಮಾಣ ಹೆಚ್ಚುತ್ತಿದ್ದು ಭಾರತದ ಚುನಾವಣಾ ರಾಜಕಾರಣದಲ್ಲಿ ಅವರಿಂದು ನಿರ್ಣಾಯಕ ಮತದಾರರಾಗಿದ್ದಾರಲ್ಲದೆ, ಚುನಾವಣಾ ಪ್ರಚಾರ, ಸಾರ್ವಜನಿಕ ಚರ್ಚೆ ಮತ್ತು ರಾಜಕೀಯ ಚಟುವಟಿಕೆಗಳಲ್ಲಿಯೂ ಅವರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಮಹಿಳೆಯರ ಈ ರಾಜಕೀಯ ಪ್ರಜ್ಞೆ ರಾಜಕೀಯ ಪಕ್ಷಗಳನ್ನು ಬಹಳಷ್ಟು ಪ್ರಭಾವಿಸಿದ್ದು ಕರ್ನಾಟಕದ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳೂ ಸೇರಿದಂತೆ ವಿವಿಧ ರಾಜ್ಯಗಳ ಮಹಿಳಾ ಕೇಂದ್ರಿತ ಕಲ್ಯಾಣ ಕಾರ್ಯಕ್ರಮಗಳು ಈ ಹೊತ್ತಿನ ಚುನಾವಣಾ ರಾಜಕಾರಣದಲ್ಲಿ ಪ್ರಮುಖ ಸ್ಥಾನ ಪಡೆದಿವೆ.
ಮಹಿಳೆಯರ ಆರ್ಥಿಕ ಅಗತ್ಯಗಳು ಮತ್ತು ಸಾಮಾಜಿಕ ಭದ್ರತೆಯನ್ನು ಉದ್ದೇಶಿಸಿರುವ ಯೋಜನೆಗಳು ಮಹತ್ವದವೆ. ಆದರೆ ಮಹಿಳೆಯರನ್ನು ಕೇವಲ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನಾಗಿ ನೋಡುವುದಕ್ಕಿಂತ, ಆ ಯೋಜನೆಗಳನ್ನು ರೂಪಿಸುವ ರಾಜಕೀಯ ನಿರ್ಧಾರ ಪ್ರಕ್ರಿಯೆಯಲ್ಲಿಯೂ ಅವರಿಗೆ ಸಮಾನ ಸ್ಥಾನ ಕಲ್ಪಿಸುವುದು ಅಗತ್ಯ. ಮಹಿಳೆಯರಿಗೆ ಹಣಕಾಸಿನ ನೆರವು ನೀಡುವುದು ಸಬಲೀಕರಣದ ಒಂದು ಭಾಗವಾಗಬಹುದು. ಆದರೆ ರಾಜಕೀಯ ನಿರ್ಧಾರಗಳಲ್ಲಿ ಸ್ವತಂತ್ರವಾಗಿ ಪಾಲ್ಗೊಳ್ಳುವ ಅವಕಾಶ, ಸಂಪನ್ಮೂಲಗಳ ಹಂಚಿಕೆಯಲ್ಲಿ ಅಧಿಕಾರ ಮತ್ತು ಆಡಳಿತದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಇಲ್ಲದಿದ್ದರೆ ಅದು ಪೂರ್ಣ ಪ್ರಮಾಣದ ರಾಜಕೀಯ ಸಬಲೀಕರಣವಾಗುವುದಿಲ್ಲ. ಮಹಿಳೆಯರು ಇಂದು ರಾಜಕೀಯ ಯೋಜನೆಗಳ ಫಲಾನುಭವಿಗಳಾಗಿ ಮತ್ತು ಅವುಗಳ ವಿಸ್ತರಣಾಕಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆಯೇ ಹೊರತು, ಅವುಗಳ ನೀತಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ವೈರುಧ್ಯವನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಮಹಿಳೆಯರ ಸಬಲೀಕರಣವನ್ನು ಯೋಜನೆಗಳ ಲಾಭ ಪಡೆಯುವ ಸಾಮರ್ಥ್ಯಕ್ಕೆ ಸೀಮಿತಗೊಳಿಸುವ ರಾಜಕೀಯ ದೃಷ್ಟಿಕೋನ ಬದಲಾಗಬೇಕು. ಸಬಲೀಕರಣದ ಅಂತಿಮ ಗುರಿ ಮಹಿಳೆಯರಿಗೆ ಸೌಲಭ್ಯ ಒದಗಿಸುವುದಲ್ಲ, ತಮ್ಮ ಬದುಕು ಮತ್ತು ಸಮಾಜದ ಭವಿಷ್ಯವನ್ನು ನಿರ್ಧರಿಸುವ ಅಧಿಕಾರ ಅವರಿಗೂ ಸಿಗಬೇಕಿದ್ದು ಅದು ಕೇವಲ ಲಿಂಗ ಸಮಾನತೆಯ ಸಾಧನೆಯಲ್ಲ. ಅದು ಆಡಳಿತದ ಆದ್ಯತೆಗಳು ಮತ್ತು ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಹೊಸ ದೃಷ್ಟಿಕೋನವನ್ನು ತರುವ ಪ್ರಕ್ರಿಯೆಯೂ ಹೌದು.

ಭಾರತೀಯ ರಾಜಕೀಯ ರಂಗದಲ್ಲಿ ಮಹಿಳೆಯರ ಪಾತ್ರ ಕಳೆದ ಕೆಲವು ದಶಕಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಒಳಗಾಗಿದ್ದರೂ, ರಾಜಕೀಯ ಅಧಿಕಾರದಲ್ಲಿ ಅವರ ಸಮಾನ ಪಾಲ್ಗೊಳ್ಳುವಿಕೆ ಮಾತ್ರ ಇಂದಿಗೂ ಸವಾಲಾಗಿಯೇ ಉಳಿದಿದೆ. ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆ ಮತ್ತು ಲಿಂಗಾಧಾರಿತ ತಾರತಮ್ಯದ ದೀರ್ಘ ಇತಿಹಾಸ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ಹಲವು ಅಡೆತಡೆಗಳನ್ನು ಸೃಷ್ಟಿಸಿವೆ. ಸ್ವಾತಂತ್ರ್ಯಾನಂತರ ಮಹಿಳಾ ಹಕ್ಕುಗಳ ಹೋರಾಟಗಳು ಈ ಸ್ಥಿತಿಯನ್ನು ಬದಲಿಸುವ ಪ್ರಯತ್ನಕ್ಕೆ ವೇಗ ನೀಡಿದವು. ಅದರಲ್ಲೂ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಕಲ್ಪಿಸಿದ್ದು, ರಾಜಕೀಯ ಒಳಗೊಳ್ಳುವಿಕೆಯ ಮಹತ್ವದ ಮೈಲಿಗಲ್ಲಾಯಿತು. ಆದಾಗ್ಯೂ ಭಾರತದ ರಾಜಕೀಯ ರಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅವರ ಜನಸಂಖ್ಯೆಗೆ ಅನುಗುಣವಾಗಿ ಬೆಳೆಯಲಿಲ್ಲ. ಮತದಾರರಾಗಿ ಮಹಿಳೆಯರ ಸಂಖ್ಯೆ ಹೆಚ್ಚಿದಂತೆ ರಾಜಕೀಯ ನಿರ್ಧಾರಗಳಲ್ಲಿ ಅವರ ಪಾಲು ಹೆಚ್ಚಾಗಬೇಕಿತ್ತು. ಆದರೆ ಮತದಾನದ ಹಕ್ಕು ಮತ್ತು ಅಧಿಕಾರದ ಹಕ್ಕುಗಳ ನಡುವಿನ ಅಂತರ ಇನ್ನೂ ಉಳಿದಿದೆ. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರ ಜನಸಂಖ್ಯೆಯ ಪ್ರಮಾಣಕ್ಕೂ ಅಧಿಕಾರದ ಕೇಂದ್ರಗಳಲ್ಲಿನ ಅವರ ಪಾಲುದಾರಿಕೆಗೂ ಗಮನಾರ್ಹ ವ್ಯತ್ಯಾಸವಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟಿರುವ ಮಹಿಳೆಯರಿಗೆ 18ನೇ ಲೋಕಸಭೆಯಲ್ಲಿ ಕೇವಲ ಶೇ.14ರಷ್ಟು ಪ್ರಾತಿನಿಧ್ಯವಿದೆ. ರಾಜ್ಯ ವಿಧಾನಸಭೆಗಳಲ್ಲಿ ಈ ಪ್ರಮಾಣ ಶೇ.10ನ್ನೂ ತಲುಪಿಲ್ಲ. ಕರ್ನಾಟಕದ ಪರಿಸ್ಥಿತಿಯಂತೂ ಇನ್ನಷ್ಟು ಗಮನಾರ್ಹ. ರಾಜ್ಯದ ಸುಮಾರು 3.40 ಕೋಟಿ ಮಹಿಳೆಯರನ್ನು ಪ್ರತಿನಿಧಿಸಲು ವಿಧಾನಸಭೆಯಲ್ಲಿ ಇರುವುದು ಕೇವಲ 10 ಮಹಿಳಾ ಶಾಸಕಿಯರು. ಅಂದರೆ ಶೇ.4.5ರಷ್ಟು ಮಾತ್ರ. ಇದಕ್ಕಿಂತಲೂ ಮುಖ್ಯವಾಗಿ, 33 ಸದಸ್ಯರ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನವಿಲ್ಲ!
ಪ್ರಸ್ತುತ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಂತ್ರಿಮಂಡಲದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲದಿರುವುದು ಕೇವಲ ರಾಜಕೀಯ ಪಕ್ಷವೊಂದರ ನಿರ್ಧಾರ ಮಾತ್ರವಲ್ಲ. ಅದು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಕ್ಕೆ ದೊರೆಯುತ್ತಿರುವ ಸ್ಥಾನವನ್ನು ಕುರಿತು ಪ್ರಶ್ನೆ ಎತ್ತುತ್ತದೆ. ಮಂತ್ರಿಮಂಡಲವು ರಾಜ್ಯದ ಸಂಪನ್ಮೂಲಗಳ ಹಂಚಿಕೆ, ಅಭಿವೃದ್ಧಿಯ ಆದ್ಯತೆ, ಕಾನೂನು ರೂಪಿಸುವಿಕೆ ಮತ್ತು ಆಡಳಿತದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಸಂಸ್ಥೆ. ಇಂತಹ ಸಂಸ್ಥೆಯಲ್ಲಿ ಮಹಿಳೆಯರೇ ಇಲ್ಲದಿದ್ದರೆ, ಜನಸಂಖ್ಯೆಯ ಅರ್ಧದಷ್ಟು ಜನರ ಅನುಭವವು ನೀತಿ ನಿರ್ಧಾರಗಳಲ್ಲಿ ಹೇಗೆ ಪ್ರತಿಫಲಿಸುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ಕೊರತೆ ಕರ್ನಾಟಕ ಅಥವಾ ಭಾರತಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಜಾಗತಿಕ ರಾಜಕಾರಣದ ಅಂಕಿಅಂಶಗಳ ಪ್ರಕಾರ ವಿಶ್ವದಾದ್ಯಂತ ಮಹಿಳೆಯರು ರಾಜಕೀಯ ಅಧಿಕಾರದ ಎಲ್ಲ ಹಂತಗಳಲ್ಲಿಯೂ ಇನ್ನೂ ಸಮಾನ ಸ್ಥಾನವನ್ನು ಪಡೆದಿಲ್ಲ. 2026ರ ಜನವರಿ 1ರ ವಿಶ್ವಸಂಸ್ಥೆಯ ವರದಿಯ ಸ್ಥಿತಿಗನುಗುಣವಾಗಿ ಜಾಗತಿಕವಾದ ಸಂಸತ್ ಸದಸ್ಯರಲ್ಲಿ ಮಹಿಳೆಯರ ಪ್ರಮಾಣ ಶೇ 27.4ರಷ್ಟಿದೆ. ಸಚಿವ ಸಂಪುಟದ ಸಚಿವ ಸ್ಥಾನಗಳಲ್ಲಿ ಮಹಿಳೆಯರ ಪಾಲು ಶೇ 22.4 ಮಾತ್ರ. ಕೇವಲ 25 ದೇಶಗಳಲ್ಲಿ ಮಾತ್ರ ಮಹಿಳೆಯರು ರಾಷ್ಟ್ರದ ಮುಖ್ಯಸ್ಥೆ ಅಥವಾ ಸರ್ಕಾರದ ಮುಖ್ಯಸ್ಥೆಯಾಗಿದ್ದರು. ಈ ವರದಿಯ ಮತ್ತೊಂದು ಮಹತ್ವದ ಅಂಶವೆಂದರೆ ಮಹಿಳೆಯರು ಮಾನವ ಹಕ್ಕು, ಲಿಂಗಸಮಾನತೆ ಮತ್ತು ಸಾಮಾಜಿಕ ರಕ್ಷಣೆಯಂತಹ ಖಾತೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರೆ, ವಿದೇಶಾಂಗ, ಹಣಕಾಸು, ಗೃಹ ಮತ್ತು ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಪುರುಷರ ಪ್ರಾಬಲ್ಯ ಮುಂದುವರಿದಿದೆ. ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಯಲ್ಲಿ ಪ್ರಗತಿ ಕಂಡುಬಂದಿದ್ದರೂ, ನಿರ್ಧಾರಾತ್ಮಕ ಸಂಸ್ಥೆಗಳು ಇನ್ನೂ ಪುರುಷಪ್ರಧಾನವಾಗಿವೆ ಎಂದಿದೆ ವರದಿ.
ಮಹಿಳೆಯರು ಹೆಚ್ಚೆಚ್ಚು ಅಧಿಕಾರದ ಸ್ಥಾನಗಳನ್ನು ಹೊಂದುವುದರಿಂದ ಎಲ್ಲಾ ಸಮಸ್ಯೆಗಳೂ ಸ್ವಯಂಚಾಲಿತವಾಗಿ ಪರಿಹಾರವಾಗುತ್ತವೆ ಎನ್ನಲಾಗದು. ಆದರೆ ನಿರ್ಧಾರ ಪ್ರಕ್ರಿಯೆಯಲ್ಲಿ ವೈವಿಧ್ಯಮಯ ಅನುಭವಗಳಿಗೆ ಸ್ಥಾನ ದೊರೆತಾಗ ಆಡಳಿತದ ದೃಷ್ಟಿಕೋನ ವಿಸ್ತಾರಗೊಳ್ಳುತ್ತದೆ. ಜಾಗತಿಕ ರಾಜಕಾರಣದಲ್ಲಿ ಮಹಿಳಾ ನಾಯಕಿಯರ ಪ್ರವೇಶವು ಸಾಂಪ್ರದಾಯಿಕ ಅಧಿಕಾರ ರಾಜಕಾರಣದ ಸ್ವರೂಪವನ್ನು ಹಲವು ನೆಲೆಗಳಲ್ಲಿ ಮರುಚಿಂತನೆಗೆ ಒಳಪಡಿಸಿದೆ. ಅಧಿಕಾರವೆಂದರೆ ಕೇವಲ ಆಜ್ಞಾಪಿಸುವ ಅಥವಾ ನಿಯಂತ್ರಿಸುವ ಸಾಮರ್ಥ್ಯವಲ್ಲ, ಅದು ಜನರ ಸಮಸ್ಯೆಗಳಿಗೆ ಸ್ಪಂದಿಸುವ, ವಿವಿಧ ಸಮುದಾಯಗಳ ನಡುವೆ ಸಮನ್ವಯ ಸಾಧಿಸುವ ಮತ್ತು ಸಾಮೂಹಿಕ ಹಿತಾಸಕ್ತಿಯನ್ನು ಆಧರಿಸಿ ನಿರ್ಧಾರಗಳನ್ನು ರೂಪಿಸುವ ಹೊಣೆಗಾರಿಕೆಯೂ ಹೌದು ಎಂಬುದನ್ನು ಅನೇಕ ಮಹಿಳಾ ನಾಯಕಿಯರು ತಮ್ಮ ಆಡಳಿತದ ಮೂಲಕ ಪ್ರತಿಪಾದಿಸಿದ್ದಾರೆ. ಈ ನಾಯಕತ್ವದ ಮಾದರಿಗಳಲ್ಲಿ ಸಹಾನುಭೂತಿ, ಸಂವಾದ, ಸಹಮತ ನಿರ್ಮಾಣ, ಹೊಣೆಗಾರಿಕೆ ಮತ್ತು ಸಾಮೂಹಿಕ ನಿರ್ಧಾರ ಪ್ರಕ್ರಿಯೆಗಳಿಗೆ ಹೆಚ್ಚಿನ ಒತ್ತು ಕಂಡುಬಂದಿದೆಯಲ್ಲದೆ, ಈ ಹೆಣ್ಣುಮಕ್ಕಳು ಆಡಳಿತವನ್ನು ಕೇವಲ ಅಧಿಕಾರಶಾಹಿ ವ್ಯವಸ್ಥೆಯಾಗಿ ನೋಡದೆ, ಜನರ ದೈನಂದಿನ ಬದುಕಿನೊಂದಿಗೆ ನೇರವಾಗಿ ಸಂಬಂಧಿಸಿದ ಸಾರ್ವಜನಿಕ ಸೇವೆಯಾಗಿ ಪರಿಗಣಿಸುವ ದೃಷ್ಟಿಕೋನವೂ ಇಲ್ಲಿ ಮುಖ್ಯವಾಗಿದೆ.
ಮಹಿಳಾ ನಾಯಕಿಯರು ಹೆಚ್ಚೆಚ್ಚು ಅಧಿಕಾರದ ಸ್ಥಾನಗಳನ್ನು ತಲುಪುವುದರಿಂದ ಆರೋಗ್ಯ, ಶಿಕ್ಷಣ, ಮಕ್ಕಳ ಕಲ್ಯಾಣ, ಸಾಮಾಜಿಕ ಭದ್ರತೆ, ಲಿಂಗಸಮಾನತೆ ಮತ್ತು ಮಾನವ ಹಕ್ಕುಗಳಂತಹ ವಿಚಾರಗಳು ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬರುವ ಅವಕಾಶ ಹೆಚ್ಚಿದ್ದು. ಸಾಮಾಜಿಕ ನ್ಯಾಯದಂತಹ ಕ್ಷೇತ್ರಗಳಿಗೆ ಹೆಚ್ಚಿನ ಗಮನ ದೊರೆಯುತ್ತಿದೆ ಎನ್ನುತ್ತವೆ ಹಲವು ಜಾಗತಿಕ ವರದಿಗಳು. ಭಾರತದ ಪಂಚಾಯಿತಿ ವ್ಯವಸ್ಥೆಯಲ್ಲಿ ಮಹಿಳಾ ನಾಯಕತ್ವದ ಪರಿಣಾಮವನ್ನು ಅಧ್ಯಯನ ಮಾಡಿರುವ ವಿಶ್ವಸಂಸ್ಥೆಯ ವರದಿಯೊಂದು ಮಹಿಳೆಯರ ನೇತೃತ್ವದ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಯೋಜನೆಗಳು ಶೇ. 62ರಷ್ಟು ಹೆಚ್ಚಾಗಿದ್ದುದನ್ನು ಉಲ್ಲೇಖಿಸಿದೆ. ಇದು ಮಹಿಳೆಯರ ರಾಜಕೀಯ ಪ್ರಾತಿನಿಧ್ಯವು ಆಡಳಿತದ ಆದ್ಯತೆಗಳ ಮೇಲೂ ಪ್ರಭಾವ ಬೀರಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ.

ಮಹಿಳೆಯರ ರಾಜಕೀಯ ಪ್ರವೇಶವು ಕೇವಲ ಪ್ರಾತಿನಿಧ್ಯದ ಪ್ರಶ್ನೆಯಲ್ಲ, ಅದು ಪುರುಷಪ್ರಧಾನ ಅಧಿಕಾರ ರಚನೆಯನ್ನು ಮರುಪರಿಶೀಲಿಸುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿದೆ. ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಅಧಿಕಾರದ ನಿರ್ಧಾರ ಮತ್ತು ನಿಯಂತ್ರಣ ಈ ಹೊತ್ತಿಗೂ ಪುರುಷರ ಕೈಯಲ್ಲಿಯೇ ಕೇಂದ್ರೀಕೃತವಾಗಿ ಇರುವುದರಿಂದ ಮಹಿಳೆಯರ ಸ್ವತಂತ್ರ ರಾಜಕೀಯ ಅಸ್ತಿತ್ವಕ್ಕೆ ಹಲವು ಮಿತಿಗಳು ಎದುರಾಗಿವೆ. ರಾಜಕೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು ಈ ಅಸಮಾನತೆಯನ್ನು ನಿವಾರಿಸುವ ಮಹತ್ವದ ಹೆಜ್ಜೆಯಾದರೂ, ಅದು ಮಾತ್ರ ಸಂಪೂರ್ಣ ಸಬಲೀಕರಣಕ್ಕೆ ಪರ್ಯಾಯವಾಗಲಾರದು. ಮಹಿಳೆಯರು ಅಧಿಕಾರದ ಸ್ಥಾನಗಳನ್ನು ಅಲಂಕರಿಸಿದರೂ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳುವ ಅವಕಾಶ ದೊರೆಯದಿದ್ದರೆ ಪ್ರಾತಿನಿಧ್ಯವು ಸಾಂಕೇತಿಕವಾಗಿಯೇ ಉಳಿಯುತ್ತದೆ. ಪುರುಷಪ್ರಧಾನ ರಾಜಕೀಯ ಸಂಸ್ಕೃತಿಯ ಪ್ರಭಾವದಿಂದ ಮಹಿಳೆಯರ ನಿರ್ಧಾರ ಸ್ವಾತಂತ್ರ್ಯ ಮತ್ತು ನಾಯಕತ್ವದ ಸಾಮರ್ಥ್ಯಗಳು ನಿಯಂತ್ರಣಕ್ಕೆ ಒಳಗಾಗುವ ಸಾಧ್ಯತೆಯಿದೆ. ಆದ್ದರಿಂದ ಮಹಿಳಾ ರಾಜಕೀಯ ಸಬಲೀಕರಣವು ಅಸ್ತಿತ್ವದಲ್ಲಿರುವ ಅಧಿಕಾರ ವ್ಯವಸ್ಥೆಗೆ ಹೊಂದಿಕೊಳ್ಳುವುದಕ್ಕಿಂತ ಅದನ್ನು ಸಮಾನತೆಯ ನೆಲೆಯಲ್ಲಿ ಪರಿವರ್ತಿಸುವ ಗುರಿಯನ್ನು ಹೊಂದಿರಬೇಕು. ಮಹಿಳೆಯರ ಅನುಭವ, ಸಾಮಾಜಿಕ ಗ್ರಹಿಕೆ ಮತ್ತು ಪರ್ಯಾಯ ಚಿಂತನೆಗಳಿಗೆ ರಾಜಕೀಯ ನಿರ್ಧಾರ ಪ್ರಕ್ರಿಯೆಯಲ್ಲಿ ಸೂಕ್ತ ಮನ್ನಣೆ ದೊರೆಯಬೇಕು. ಇದಕ್ಕಾಗಿ ಮಹಿಳೆಯರು ತಮ್ಮದೇ ಆದ ಸ್ವತಂತ್ರ ರಾಜಕೀಯ ದೃಷ್ಟಿಕೋನ, ಸಂಘಟನಾ ಶಕ್ತಿ ಮತ್ತು ನಾಯಕತ್ವದ ನೆಲೆಗಳನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ. ಅಧಿಕಾರವು ಕೆಲವರ ಪ್ರಾಬಲ್ಯವನ್ನು ಮುಂದುವರಿಸುವ ಸಾಧನವಾಗದೆ, ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ವ್ಯವಸ್ಥೆಯಾಗಿ ರೂಪಾಂತರಗೊಳ್ಳಬೇಕು. ಅಂತಹ ಬದಲಾವಣೆ ಸಾಧ್ಯವಾದಾಗ ಮಾತ್ರ ಮಹಿಳೆಯರ ರಾಜಕೀಯ ಪ್ರಾತಿನಿಧ್ಯವು ನೈಜ ಅಧಿಕಾರವಾಗಿ ಪರಿವರ್ತನೆಗೊಂಡು ಪ್ರಜಾಪ್ರಭುತ್ವದ ಆಶಯಗಳಿಗೆ ಅರ್ಥಪೂರ್ಣ ಕೊಡುಗೆ ನೀಡಬಲ್ಲದು
ಯಾವೊತ್ತಿಗೂ ರಾಜಕೀಯ ಭವಿಷ್ಯ ಬರೆಯುವ ಮಹಾನ್ ಕಾಯಕದಲ್ಲಿ ನಾಡಿನ ಹೆಣ್ಣುಮಕ್ಕಳು ಮುಂಚೂಣಿಯಲ್ಲಿದ್ದಾರೆ. ದೇಶದ ರಾಜಧಾನಿಯಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಹೋರಾಟ, ಕೃಷಿ ಮಸೂದೆ ವಿರುದ್ಧ ರೈತ ಹೋರಾಟ ಮತ್ತು ಏಷ್ಯನ್ ಕ್ರೀಡಾಕೂಟದ ಪದಕ ವಿಜೇತ ಮಹಿಳಾ ಕ್ರೀಡಾಪಟುಗಳ ಹೋರಾಟ ಇತ್ಯಾದಿಗಳಲ್ಲಿ ಹೆಣ್ಣುಮಕ್ಕಳು ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಮಹಿಳಾ ನಾಯಕತ್ವದ ಪ್ರತಿರೋಧದ ಹೊಸ ಶಕ್ತಿ ಮುಂಚೂಣಿಗೆ ಬಂದಿದ್ದು ಜೆನ್-ಝೀ ಯುವತಿಯರ ಇಂದಿನ ಹೋರಾಟ ಸಮಾಜದ ಆಳವಾದ ರಚನಾತ್ಮಕ ಬದಲಾವಣೆಗೆ ಮುನ್ನುಡಿಯಾಗಿದ್ದು, ಎಚ್ಚೆತ್ತ ಹೊಸ ರಾಜಕೀಯ ಪ್ರಜ್ಞೆಯ ಸಂಕೇತವಾಗಿದೆ. ಈ ಯುವತಿಯರ ಪ್ರತಿಭಟನೆಗಳು ಕೇವಲ ತಾತ್ಕಾಲಿಕ ಆಕ್ರೋಶದ ಅಭಿವ್ಯಕ್ತಿಗಳಲ್ಲ, ಅವು ಅಸ್ತಿತ್ವದಲ್ಲಿರುವ ಅಧಿಕಾರ ರಚನೆ, ಲಿಂಗತಾರತಮ್ಯ ಮತ್ತು ರಾಜಕೀಯ ನಿರ್ಲಕ್ಷ್ಯದ ವಿರುದ್ಧದ ಹೊಸ ತಲೆಮಾರಿನ ಹಕ್ಕೊತ್ತಾಯಗಳಾಗಿದ್ದು, ಈ ಹೋರಾಟಗಳ ಮೂಲಕ ಹೆಣ್ಣುಮಕ್ಕಳು ತಮ್ಮ ಹಕ್ಕುಗಳಿಗಾಗಿ ಧ್ವನಿಯೆತ್ತುವುದಷ್ಟೇ ಅಲ್ಲದೆ, ಅಧಿಕಾರದ ನಿರ್ಧಾರ ಪ್ರಕ್ರಿಯೆಯಲ್ಲಿಯೂ ಸಮಾನ ಪಾಲುದಾರಿಕೆಯನ್ನು ಬಯಸುತ್ತಿದ್ದಾರೆ. ಒಂದೆಡೆ ಯುವತಿಯರು ಸಮಾನತೆ ಮತ್ತು ಸ್ವಾಯತ್ತತೆಗಾಗಿ ಬೀದಿಗಿಳಿಯುತ್ತಿದ್ದರೆ, ಮತ್ತೊಂದೆಡೆ ಪ್ರಜಾಪ್ರಭುತ್ವದ ಅಧಿಕಾರ ಕೇಂದ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಇನ್ನೂ ಅಂಚಿನಲ್ಲಿರುವುದು ನಮ್ಮ ರಾಜಕೀಯ ವ್ಯವಸ್ಥೆಯ ವೈರುಧ್ಯವನ್ನು ಅನಾವರಣಗೊಳಿಸುತ್ತದೆ.
ಹೆಣ್ಣುಮಕ್ಕಳ ಈ ಪ್ರತಿಭಟನಾ ಶಕ್ತಿಯು ರಾಜಕೀಯ ಅಧಿಕಾರದ ಪಾಲುದಾರಿಕೆಯಾಗಿ ರೂಪಾಂತರಗೊಳ್ಳುವುದು ಇಂದಿನ ಅಗತ್ಯವಾಗಿದೆ. ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಕೇವಲ ಪ್ರಾತಿನಿಧ್ಯದ ಪ್ರಶ್ನೆಯಲ್ಲ, ಅದು ಅವರ ಮೂಲಭೂತ ಮಾನವ ಹಕ್ಕು ಮತ್ತು ಸಮಾನ ನಾಗರಿಕತ್ವದ ಸಾಂವಿಧಾನಿಕ ಆಶಯವೂ ಹೌದು. ಮಹಿಳೆಯರು ಹೋರಾಟಗಳ ಮುಂಚೂಣಿಯಲ್ಲಿರುವುದರ ಜೊತೆಗೆ ನೀತಿ ನಿರೂಪಣೆ, ನಿರ್ಧಾರ ಕೈಗೊಳ್ಳುವಿಕೆ ಮತ್ತು ಅಧಿಕಾರ ನಿರ್ವಹಣೆಯ ಕೇಂದ್ರಗಳಲ್ಲಿಯೂ ಸ್ಥಾನ ಪಡೆಯುವಂತಾಗಬೇಕು. ಇದಕ್ಕಾಗಿ ರಾಜಕೀಯ ಪಕ್ಷಗಳ ರಚನೆ, ಚುನಾವಣಾ ಪ್ರಕ್ರಿಯೆ ಮತ್ತು ಅಧಿಕಾರ ಹಂಚಿಕೆಯ ವ್ಯವಸ್ಥೆಗಳಲ್ಲಿ ಬೇರೂರಿರುವ ಪುರುಷಾಧಿಪತ್ಯದ ಮೌಲ್ಯಗಳು ಹಾಗೂ ಅಡೆತಡೆಗಳು ನಿವಾರಣೆಯಾಗಬೇಕು. ಮಹಿಳೆಯರ ಪ್ರತಿಭಟನಾ ಶಕ್ತಿಯು ರಾಜಕೀಯ ನಾಯಕತ್ವವಾಗಿ ವಿಕಸಿಸಿದಾಗ ಮಾತ್ರ ನೈಜ ರಾಜಕೀಯ ಸಬಲೀಕರಣ ಸಾಧ್ಯವಾಗುತ್ತದೆ.
ಡಾ. ಆಶಾ ಬಗ್ಗನಡು
ಇವರು ತುಮಕೂರು ಜಿಲ್ಲೆಯವರಾಗಿದ್ದು ಕನ್ನಡದ ಪ್ರಮುಖ ಲೇಖಕಿ, ಚಿಂತಕಿ ಹಾಗೂ ಅಂಕಣಕಾರರಾಗಿದ್ದಾರೆ. ಪ್ರಸ್ತುತ ತುಮಕೂರು ವಿವಿಯಲ್ಲಿ ಉನ್ಯಾಸಕಿಯಾಗಿದ್ದಾರೆ.
ಫೋ : 8296171380


