ಕಲ್ಲಕುರಿಚಿ: ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡಿನ ಮತ್ತೊಬ್ಬ ಶಾಸಕ ಪೊಲೀಸ್ ಪ್ರಕರಣ ಎದುರಿಸುವಂತಾಗಿದೆ. ಕಲ್ಲಕುರಿಚಿ ಶಾಸಕ ಅರುಳ್ ವಿಗ್ನೇಶ್ ವಿರುದ್ಧ ಐಎಎಸ್ ಅಧಿಕಾರಿ ಕಿರುಕುಳದ ದೂರು ನೀಡಿದ ಬೆನ್ನಲ್ಲೇ, ರಿಷಿವಂದಿಯಂ ಕ್ಷೇತ್ರದ ಡಿಎಂಕೆ ಶಾಸಕ ವಸಂತಂ ಕಾರ್ತಿಕೇಯನ್ ವಿರುದ್ಧವೂ ಮಹಿಳಾ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ.
ಮಹಿಳಾ ಅಧಿಕಾರಿಯ ದೂರಿನ ಆಧಾರದ ಮೇಲೆ ಗುರುವಾರ ತಿಯಾಗದುರ್ಗಂ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ಸೆಕ್ಷನ್ 79, 132, 351(2) ಹಾಗೂ ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾತಿ ಉಲ್ಲೇಖಿಸಿ ಅವಹೇಳನ, ಉದ್ಯೋಗ ಮುಂದುವರಿಕೆಗೆ ಬೆದರಿಕೆ ಆರೋಪ
ಶಾಸಕ ಕಾರ್ತಿಕೇಯನ್ ದೂರವಾಣಿ ಮೂಲಕ ತಮ್ಮೊಂದಿಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದು, ಮಾತುಕತೆ ವೇಳೆ ಜಾತಿಯನ್ನು ಉಲ್ಲೇಖಿಸಿ ಅವಮಾನಿಸಿದ್ದಾರೆ ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಉದ್ಯೋಗ ಮುಂದುವರಿಸುವ ವಿಚಾರವಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಅಸಭ್ಯ ಸಂದೇಶಗಳನ್ನು ಕಳುಹಿಸುವುದು ಹಾಗೂ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಹರಡುವ ಮೂಲಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ತನಿಖೆ ಆರಂಭಿಸಿದ ಪೊಲೀಸರು
ಮಹಿಳಾ ಅಧಿಕಾರಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಗಳ ಕುರಿತು ತನಿಖೆ ಆರಂಭಿಸಿದ್ದಾರೆ. ದೂರಿನಲ್ಲಿ ಮಾಡಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ, ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

