ಸಂಪಾದಕೀಯ : ಸೌಜನ್ಯ ಪ್ರಕರಣ: ಅತ್ಯಾಚಾರಿಗಳ ರಕ್ಷಕರಿಗೂ ಶಿಕ್ಷೆಯಾಗಬೇಕು

ಈ ಬಾರಿ ಸೌಜನ್ಯಳಿಗೆ ನ್ಯಾಯ ಸಿಗಲೇಬೇಕು. ಎಸ್‌ ಐಟಿ ತಂಡ ಒಂದೇ ಒಂದು ಸಣ್ಣ ತಪ್ಪಿಗೂ ಅವಕಾಶ ಕೊಡದೇ ಅತ್ಯಂತ ವೃತ್ತಿಪರವಾಗಿ, ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಸೌಜನ್ಯ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಿದ ತನಿಖಾಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಬೇಕು. ಅವರ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳನ್ನೂ ನ್ಯಾಯಾಲಯದ ಕಟಕಟೆಗೆ ತರಬೇಕು. ಸೌಜನ್ಯ ಪ್ರಕರಣದ ಸಾಕ್ಷಿಗಳಲ್ಲಿ ಕೆಲವರ ಅನುಮಾನಾಸ್ಪದ ಸಾವುಗಳನ್ನೂ ತನಿಖೆ ನಡೆಸಬೇಕು. ಸೌಜನ್ಯಳನ್ನು ಅತ್ಯಾಚಾರಕ್ಕೆ ಒಳಪಡಿಸಿದ, ಕೊಲೆಗೈದ ಎಲ್ಲ ದುಷ್ಟರಿಗೂ, ಅವರನ್ನು ರಕ್ಷಿಸುತ್ತ ಬಂದ ಎಲ್ಲ ಪಾಪಿಗಳಿಗೂ ಶಿಕ್ಷೆಯಾಗಬೇಕು – ದಿನೇಶ್‌ ಕುಮಾರ್‌ ಎಸ್‌ ಸಿ, ಸಂಪಾದಕರು, ಕನ್ನಡ ಪ್ಲಾನೆಟ್.

2012ರ ಅಕ್ಟೋಬರ್‌ ನಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕರ್ನಾಟಕದ ಆತ್ಮಸಾಕ್ಷಿಯನ್ನು ಅಲುಗಾಡಿಸಿದ ಅತ್ಯಂತ ಹೀನ ಅಪರಾಧ. ಆಕೆಯ ಮೇಲೆ ನಡೆದ ದೌರ್ಜನ್ಯವೇ ಅತ್ಯಂತ ಭೀಕರ. ಆದರೆ ಈ ಹದಿನಾಲ್ಕು ವರ್ಷಗಳಲ್ಲಿ ನಡೆದಿರುವ ಘಟನಾವಳಿಗಳನ್ನು ಗಮನಿಸಿದರೆ ಸೌಜನ್ಯ ಮೇಲಿನ ದೌರ್ಜನ್ಯ ಕೇವಲ ಆಕೆಯ ಕೊಲೆಯೊಂದಿಗೆ ಕೊನೆಯಾಗಲಿಲ್ಲ, ನಂತರವೂ ಮುಂದುವರೆಯಿತು. ಈ ಪ್ರಕರಣವನ್ನು ಮೊದಲು ಪೊಲೀಸರು, ನಂತರ ಸಿಐಡಿ, ಕೊನೆಗೆ ಸಿಬಿಐ ಹೀಗೆ ಮೂರು ಪ್ರತ್ಯೇಕ ಸಂಸ್ಥೆಗಳು ತನಿಖೆ ಮಾಡಿದವು. ಎಲ್ಲ ತನಿಖೆಗಳು ಹಳ್ಳ ಹಿಡಿದವು. ಸಾಕ್ಷ್ಯಗಳನ್ನು ನಾಶಪಡಿಸಲಾಯಿತು. ಸೌಜನ್ಯ ನ್ಯಾಯಕ್ಕಾಗಿ ಬೇಡಿದಳು. ಆದರೆ ನಮ್ಮ ವ್ಯವಸ್ಥೆ ಅದನ್ನು ನಿರಾಕರಿಸುತ್ತಲೇ ಬಂದಿತು. ಸೌಜನ್ಯ ಪದೇಪದೇ ದೌರ್ಜನ್ಯಕ್ಕೆ ಒಳಗಾದಳು.

ಇದೇ ಸೆ. 21ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಐತಿಹಾಸಿಕ. ಹದಿನಾಲ್ಕು ವರ್ಷಗಳ ನಂತರ ಒಂದು ಪ್ರಕರಣದ ಮರುತನಿಖೆಗೆ ದೇಶದ ಅತ್ಯುನ್ನತ ನ್ಯಾಯಾಲಯ ಆದೇಶ ನೀಡಿರುವುದು ಈ ಘಟನೆಯ ಗಂಭೀರತೆಯನ್ನು ತೋರಿಸುತ್ತದೆ. ಬಹುಶಃ ಇನ್ನು ನ್ಯಾಯದ ಎಲ್ಲ ದಾರಿಗಳು ಮುಚ್ಚಿಹೋದವೆಂದು ಸೌಜನ್ಯ ಕುಟುಂಬದಿಂದ ಹಿಡಿದು ಕರ್ನಾಟಕದ ಸಾಮಾನ್ಯ ಜನತೆ ಮರುಗುತ್ತಿರುವ ಸಂದರ್ಭದಲ್ಲಿಯೇ ಒಂದು ಬೆಳಕಿನ ಕಿಂಡಿ ತೆರೆದಂತಾಗಿದೆ. ನ್ಯಾಯದ ಆಸೆ ಈಗ ಮತ್ತೆ ಚಿಗುರಿದೆ.

ಸೌಜನ್ಯ ಬದುಕಿದ್ದರೆ ಇಂದು ಮೂವತ್ತರ ಹರೆಯದ ಮಹಿಳೆಯಾಗಿರುತ್ತಿದ್ದಳು. ಆದರೆ ಅವಳ ಬದುಕನ್ನು ಹದಿನೇಳು ವರ್ಷಕ್ಕೇ ಉಸಿರುಗಟ್ಟಿಸಿ ನಿಲ್ಲಿಸಲಾಯಿತು. ಮಗಳ ಇಂಥ ಭೀಕರ ಅಂತ್ಯದಿಂದ ಕಂಗೆಟ್ಟ ತಂದೆ ಚಂದಪ್ಪಗೌಡರು ಕೊರಗಿ ಕೊರಗಿಯೇ ನೀಗಿಕೊಂಡರು. ಅದಾದ ನಂತರ ಆಕೆಯ ತಾಯಿ ಕುಸುಮಾವತಿ ಈ ಹದಿನಾಲ್ಕು ವರ್ಷಗಳಲ್ಲಿ ನನ್ನ ಮಗಳಿಗೆ ನ್ಯಾಯ ಕೊಡಿ ಎಂದು ಅಂಗಲಾಚುತ್ತ ಬಂದಿದ್ದಾರೆ. ಅವರ ಇಷ್ಟು ವರ್ಷಗಳ ತಪಸ್ಸಿಗೆ ಒಂದು ಗುಟುಕು ಭರವಸೆ ಸಿಕ್ಕಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಮರುತನಿಖೆ ನಡೆಯಲಿದೆ.

ಸೌಜನ್ಯ ಸಾವಿನ ನಂತರ ತಲ್ಲಣಗೊಂಡಿದ್ದು ಧರ್ಮಸ್ಥಳ ಭಾಗದ ಜನತೆ ಮಾತ್ರವಲ್ಲ, ಇಡೀ ಕರಾವಳಿ ಎದ್ದು ನಿಂತು ಪ್ರತಿಭಟಿಸಿತು. ಚಳವಳಿಯ ಕೇಂದ್ರದಲ್ಲಿ ಇದ್ದು ಹೋರಾಟದ ಬೆಂಕಿ ಆರದಂತೆ ನೋಡಿಕೊಂಡವರು ಅಲ್ಲಿನ ಬಲಪಂಥೀಯ ಚಳವಳಿಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಅವರ ಬಳಗ. ಇತ್ತೀಚಿನ ವರ್ಷಗಳಲ್ಲಿ ತಿಮರೋಡಿಯವರೊಂದಿಗೆ ಕೈ ಜೋಡಿಸಿದ ಮಾಜಿ ಬಿಜೆಪಿ ಮುಖಂಡರೂ ಆದ ಗಿರೀಶ್‌ ಮಟ್ಟೆಣ್ಣನವರ್ ಚಳವಳಿಗೆ ಇನ್ನಷ್ಟು ತೀವ್ರತೆಯನ್ನು ತಂದರು. ಅವರೊಂದಿಗೆ ಅಸಂಖ್ಯ ಸಂಖ್ಯೆಯ ʻಸೌಜನ್ಯ ಹೋರಾಟಗಾರರುʼ ಈ ಚಳವಳಿಯನ್ನು ಗಂಭೀರ ಸ್ವರೂಪದಲ್ಲಿ ಹರಡುತ್ತ ಬಂದರು.

ಸೌಜನ್ಯ ನ್ಯಾಯದ ಹೋರಾಟದ ವಿಶೇಷವೆಂದರೆ ಇದರಲ್ಲಿ ಕೇವಲ ಬಲಪಂಥೀಯರು ಇಲ್ಲ. ಈ ಚಳವಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಎಡಪಂಥೀಯರೂ ತೊಡಗಿಕೊಂಡರು. ಅನೇಕ ಚಳವಳಿಗಳು, ಹಕ್ಕೊತ್ತಾಯ ಸಭೆಗಳನ್ನು ಹಮ್ಮಿಕೊಂಡರು. ಧರ್ಮ, ಪಕ್ಷ, ಮತ, ಪಂಥ ಭೇದವಿಲ್ಲದಂತೆ ಸಾಮಾನ್ಯ ನಾಗರಿಕರು ಇದರಲ್ಲಿ ತೊಡಗಿಕೊಂಡರು. ಕರ್ನಾಟಕದ ಎಲ್ಲ ಕ್ಷೇತ್ರಗಳ ಪ್ರಮುಖ ಮಹಿಳಾ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ʻಕೊಂದವರು ಯಾರು?ʼ ಎಂಬ ಬಳಗವೂ ಸಹ ಕಳೆದ ಒಂದು ವರ್ಷದಿಂದ ಸೌಜನ್ಯ ಪ್ರಕರಣ ಸೇರಿದಂತೆ ಆ ಭಾಗದಲ್ಲಿ ನಡೆದ ಹೆಣ್ಣುಮಕ್ಕಳ ಮೇಲಿನ ಕೊಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ವಿರುದ್ಧ ಧ್ವನಿ ಎತ್ತುತ್ತ ಬಂದಿದೆ.

ಚಳವಳಿಗಳು ಬೇರೆಬೇರೆಯಾಗಿ ನಡೆದರೂ ಎಲ್ಲರ ಆಶಯ ಸೌಜನ್ಯ ಅವರಿಗೆ ನ್ಯಾಯ ಸಿಗಬೇಕು ಎಂಬ ಏಕೈಕ ಉದ್ದೇಶವನ್ನು ಹೊಂದಿತ್ತು. ಒಂದು ಚಳವಳಿ ಎಲ್ಲ ಪಂಥೀಯರ ಧಾರೆಗಳನ್ನು ಒಂದು ಕಡೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು ವಿಶೇಷ. ಸುಪ್ರೀಂ ಕೋರ್ಟ್‌ ತೀರ್ಪು ಈ ಎಲ್ಲ ಚಳವಳಿಗಾರರಿಗೂ ಒಂದು ಹೊಸ ವಿಶ್ವಾಸವನ್ನು ತಂದಿದೆ. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವವರಿಗೆ ಒಂದು ಉತ್ಸಾಹವನ್ನು ತಂದಿದೆ.

ಸೌಜನ್ಯ ಕೊಲೆ ನಡೆದ ನಂತರ ಇದನ್ನು ಸರಿಯಾಗಿ ತನಿಖೆ ಮಾಡಬೇಕಿದ್ದ ಬೆಳ್ತಂಗಡಿ ಪೊಲೀಸರು ಆರಂಭದಲ್ಲೇ ಹಾದಿ ತಪ್ಪಿದರು. ಸಾಕ್ಷ್ಯನಾಶ ಮಾಡಲಾಯಿತು. ಗೋಲ್ಡನ್‌ ಹವರ್‌ ಎಂದು ಕರೆಯಲಾಗುವ ಅವಧಿಯನ್ನು ಹಾಳುಗೆಡವಲಾಯಿತು. ಸಂತೋಷ್‌ ರಾವ್‌ ಅವರನ್ನು ಸುಖಾಸುಮ್ಮನೆ ಆರೋಪಿಯನ್ನಾಗಿ ಮಾಡಲಾಯಿತು. ನಂತರ ತನಿಖೆ ನಿರ್ವಹಿಸಿದ CID, ನಂತರ CBI ಎಲ್ಲವೂ ದಾರಿತಪ್ಪಿದ ತನಿಖೆಯನ್ನೇ ಮುಂದುವರೆಸಿದವು. ಆಗಿದ್ದ ತಪ್ಪುಗಳನ್ನು ಸರಿಪಡಿಸುವ ಗೋಜಿಗೇ ಹೋಗಲಿಲ್ಲ. 2023ರಲ್ಲಿ ಸೆಷನ್ಸ್ ನ್ಯಾಯಾಲಯ ಸಂತೋಷ್‌ ರಾವ್ ಅವರನ್ನು ಖುಲಾಸೆಗೊಳಿಸುವಾಗ, ಅವರನ್ನು ಅಪರಾಧಕ್ಕೆ ಕೊಂಡೊಯ್ಯುವ ನಂಬಬಹುದಾದ ಸಾಕ್ಷ್ಯ ಇಲ್ಲ ಎಂದು ಹೇಳಿತು. ಅದಕ್ಕಿಂತಲೂ ಗಂಭೀರವಾಗಿ, ತನಿಖೆಯ ಆರಂಭದ ಹಂತದಲ್ಲೇ ಮಾಡಬೇಕಾಗಿದ್ದ ಹಲವು ಕೆಲಸಗಳು ಸರಿಯಾಗಿ ನಡೆದಿಲ್ಲ ಎಂದು ನ್ಯಾಯಾಲಯ ಗುರುತಿಸಿತು. ಘಟನಾ ಸ್ಥಳದ CCTV ದೃಶ್ಯಗಳನ್ನು ಪಡೆಯಲಾಗಿರಲಿಲ್ಲ. ಮೊದಲ ತನಿಖಾಧಿಕಾರಿ ಸಂಗ್ರಹಿಸಿದ್ದ ಮೊಬೈಲ್ ಟವರ್ ಮಾಹಿತಿಯನ್ನು ಮುಂದಿನ ತನಿಖಾಧಿಕಾರಿಗೆ ನೀಡಲಾಗಿರಲಿಲ್ಲ. ಮೃತಳ ಛತ್ರಿ, ಚಪ್ಪಲಿ ಮತ್ತು ಒಳ ಉಡುಪುಗಳು ಪತ್ತೆಯಾಗಿರಲಿಲ್ಲ. ಮರಣೋತ್ತರ ಪರೀಕ್ಷೆಯನ್ನು ಚಿತ್ರೀಕರಿಸಿರಲಿಲ್ಲ. ಮೃತಳ ಕೈಗಡಿಯಾರದ ಸ್ಥಿತಿಯನ್ನೂ ದಾಖಲಿಸಿರಲಿಲ್ಲ. ಇನ್ನೂ ಮುಖ್ಯವಾಗಿ, ವೆಜೆನೈಲ್ ಸ್ವಾಬ್ ಸರಿಯಾಗಿ ಸಂರಕ್ಷಿಸದ ಕಾರಣ, ಹಲವು ದಿನಗಳ ನಂತರ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ ಕಾರಣದಿಂದಾಗಿ DNA ಪರೀಕ್ಷೆಯಿಂದ ಬೇಕಾದ ಮಾಹಿತಿ ಸಿಗಲಿಲ್ಲ. ಇವೆಲ್ಲವೂ ಸಣ್ಣಪುಟ್ಟ ತಪ್ಪುಗಳಲ್ಲ. ಒಂದು ಕೊಲೆ ಪ್ರಕರಣದಲ್ಲಿ ಸತ್ಯದ ದಾರಿ ತೋರಿಸಬಹುದಾಗಿದ್ದ ಕುರುಹುಗಳು ಒಂದೊಂದಾಗಿ ಕೈತಪ್ಪಿದ ಪ್ರಮಾದಗಳು. ಇವೆಲ್ಲವೂ ಆಕಸ್ಮಿಕವಾಗಿ , ಕಣ್ತಪ್ಪಿನಿಂದ ಆದ ಪ್ರಮಾದಗಳು ಎಂದು ಅನಿಸುವುದಿಲ್ಲ.

ಸೌಜನ್ಯ ನಾಪತ್ತೆಯಾದ ಅಕ್ಟೋಬರ್‌ 9ರ ರಾತ್ರಿ ಆಕೆಯನ್ನು ಹುಡುಕಲು ಕುಟುಂಬದವರು ಮತ್ತು ಗ್ರಾಮಸ್ಥರು ಅದೇ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಆಗ ಕಂಡು ಬರದ ಸೌಜನ್ಯ ದೇಹ ಮರುದಿನ ಅದೇ ಸ್ಥಳದಲ್ಲಿ ಆಶ್ಚರ್ಯಕರವಾಗಿ ಮೃತದೇಹ ಪತ್ತೆಯಾಯಿತು. ಸಂತೋಷ್‌ ರಾವ್‌ ಮಾಡಿಟ್ಟುಕೊಂಡಿದ್ದ ಎಂದು ಪೊಲೀಸರು ಹೇಳಿದ ಟೆಂಟ್ ಕೂಡ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿತು. ಕೊಲೆ ನಡೆದ ರಾತ್ರಿ ಅಲ್ಲಿ ದೊಡ್ಡ ಪ್ರಮಾಣದಲ್ಲೇ ಮಳೆಯಾಗಿತ್ತು. ಆದರೆ ಆಕೆಯ ಬ್ಯಾಗ್ ಮತ್ತು ಅದರೊಳಗಿನ ಪುಸ್ತಕಗಳು ಮಳೆಯಿಂದ ಒದ್ದೆಯಾಗಿರಲಿಲ್ಲ ಅಪರಾಧ ನಡೆದ ಸ್ಥಳ ಅದೇ ಆಗಿತ್ತೇ, ಅಥವಾ ಬೇರೆಡೆ ಘಟನೆ ನಡೆದ ನಂತರ ಮೃತದೇಹವನ್ನು ಅಲ್ಲಿಗೆ ತಂದು ಹಾಕಲಾಗಿತ್ತೇ ಎಂಬ ಪ್ರಶ್ನೆಯನ್ನು ತನಿಖೆ ಮಾಡಿದ ಸಂಸ್ಥೆಗಳು ತಮಗೆ ತಾವು ಕೇಳಿಕೊಳ್ಳಬೇಕಿತ್ತು. ಆದರೆ ಇದೇ ಸುಳ್ಳು ಥಿಯರಿಗಳನ್ನೇ ನ್ಯಾಯಾಲಯದ ಮುಂದೆ ಇಡಲಾಯಿತು.

ಇದೆಲ್ಲವನ್ನೂ ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪರಿಶೀಲಿಸಿದ ಹಾಗೆ ಕಾಣುತ್ತದೆ. ಕೋರ್ಟ್‌ ತನ್ನ ತೀರ್ಪಿನ 59 ಮತ್ತು 60ನೇ ಪ್ಯಾರಾದಲ್ಲಿ ಹೇಳಿರುವ ಮಾತುಗಳನ್ನು ಗಮನಿಸಿ: “17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯ ಮೇಲೆ ಭೀಕರ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಲಾದ ಪ್ರಕರಣದಲ್ಲಿ, ತನಿಖೆ ಮುಂದುವರಿದ ರೀತಿಯು ಮತ್ತು ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಮೌಲ್ಯಮಾಪನ ಮಾಡಿದ ರೀತಿಯು ಈ ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಅಲುಗಾಡಿಸುತ್ತದೆ. ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾದ ವ್ಯಕ್ತಿಯು ಈ ಅಪರಾಧವನ್ನು ಎಸಗಲು ಸಮರ್ಥನಲ್ಲ ಎಂದು ತೀರ್ಮಾನಿಸಲಾಗಿದೆ. ತನಿಖೆಯನ್ನು ಸ್ಪಷ್ಟವಾಗಿ ಸಂತ್ರಸ್ತೆಗೆ ಅನ್ಯಾಯವಾಗುವ ರೀತಿಯಲ್ಲಿ ನಡೆಸಲಾಗಿದೆ.”

ʻʻನಿಜವಾದ ಅಪರಾಧಿ ಅಥವಾ ಅಪರಾಧಿಗಳು ತನಿಖೆಯನ್ನು ಪ್ರಭಾವಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಂತಹ ಸಡಿಲ ಮತ್ತು ಸರಿಯಲ್ಲದ ತನಿಖೆಯು ತಮ್ಮ ಕರ್ತವ್ಯವನ್ನು ಸರಿಯಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಲು ವಿಫಲರಾದ ತನಿಖಾಧಿಕಾರಿಗಳಿಗೆ ಒಂದು ರೀತಿಯಲ್ಲಿ ಲಾಭವನ್ನು ನೀಡುತ್ತದೆ.”

“ಸುಳ್ಳು ಆರೋಪ ಹೊರಿಸಲ್ಪಟ್ಟ ವ್ಯಕ್ತಿಗೆ ಉಂಟಾದ ಅನ್ಯಾಯವನ್ನು ಸರಿಪಡಿಸುವ ಅವಕಾಶ ಇರುತ್ತದೆ. ಆದರೆ, ಭೀಕರ ಅತ್ಯಾಚಾರಕ್ಕೆ ಒಳಗಾಗಿ ನಂತರ ಕೊಲೆಯಾದ ಸಂತ್ರಸ್ತೆಗೆ ಉಂಟಾದ ಅನ್ಯಾಯವನ್ನು ಎಂದಿಗೂ ಪರಿಹರಿಸಲು ಸಾಧ್ಯವಿಲ್ಲ. ಇಂತಹ ಘೋರ ಅಪರಾಧದ ಸಂತ್ರಸ್ತೆಗೆ ಸರಿಯಾದ ತನಿಖೆ ನಡೆಸಿ ನಿಜವಾದ ಅಪರಾಧಿಗಳನ್ನು ಕಾನೂನಿನ ಮುಂದೆ ತರುವ ಮೂಲಕ ನ್ಯಾಯ ಒದಗಿಸದಿದ್ದರೆ, ಸಮಾಜವು ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತದೆ.”

ಸುಪ್ರೀಂ ಕೋರ್ಟ್‌ ತೀರ್ಪಿನ ಈ ಮಾತುಗಳು ಬಹಳ ಸ್ಪಷ್ಟವಾಗಿ ಸೌಜನ್ಯಳಿಗೆ ಆಗಿರುವ ಅನ್ಯಾಯದ ಪ್ರಮಾಣವನ್ನು ವಿವರಿಸುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಹಲವು ಮರುತನಿಖೆಗೆ ಆದೇಶಿಸುವಾಗಲೂ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ನೀಡಿದೆ.

ಕರ್ನಾಟಕ ರಾಜ್ಯವು, ಆಧುನಿಕ ತನಿಖಾ ತಂತ್ರಜ್ಞಾನದ ಬಳಕೆಯಲ್ಲಿ ಪರಿಣತಿ ಹೊಂದಿರುವ ಸಮರ್ಥ ತನಿಖಾಧಿಕಾರಿಗಳನ್ನು ಒಳಗೊಂಡ Special Investigation Team (SIT) ಅನ್ನು ರಚಿಸಬೇಕು. ಈ SITಗೆ ರಾಜ್ಯದ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯೇ ಮುಖ್ಯಸ್ಥರಾಗಿರಬೇಕು. ಈಗಾಗಲೇ ನಿರಪರಾಧಿ ಎಂದು ತೀರ್ಮಾನವಾಗಿರುವ ಸಂತೋಷ್‌ ರಾವ್‌ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸುವಂತಿಲ್ಲ. ಮೂರು ತಿಂಗಳ ಒಳಗೆ ತನಿಖೆ ಪೂರೈಸಿ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಬೆಳ್ತಂಗಡಿ ಪೊಲೀಸ್ ಠಾಣೆ, CID ಅಥವಾ CBIಯ ಹಿಂದಿನ ತನಿಖಾ ತಂಡಗಳಲ್ಲಿ ಭಾಗಿಯಾಗಿದ್ದ ಯಾವುದೇ ಅಧಿಕಾರಿಯನ್ನು ಈ ಎಸ್‌ ಐಟಿ ತಂಡದ ಭಾಗವಾಗಿರಿಸಬಾರದು. ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಸೇರಿದಂತೆ ಯಾವುದೇ ವ್ಯಕ್ತಿಯ ಪಾತ್ರದ ಕುರಿತು ತೀರ್ಪಿನ ಯಾವುದೇ ಹೇಳಿಕೆಯಿಂದ ಪ್ರಭಾವಿತರಾಗದೆ ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಸೌಜನ್ಯ ಪ್ರಕರಣದ ಮರುತನಿಖೆ ಹೇಗೆ ಸಾಗಲಿದೆ ಎಂಬ ಕುತೂಹಲದಿಂದ ಇಡೀ ಕರ್ನಾಟಕ ಕುತೂಹಲದಿಂದ ಗಮನಿಸುತ್ತಿದೆ. ಈ ಬಾರಿ ಸೌಜನ್ಯಳಿಗೆ ನ್ಯಾಯ ಸಿಗಲೇಬೇಕು. ಎಸ್‌ ಐಟಿ ತಂಡ ಒಂದೇ ಒಂದು ಸಣ್ಣ ತಪ್ಪಿಗೂ ಅವಕಾಶ ಕೊಡದೇ ಅತ್ಯಂತ ವೃತ್ತಿಪರವಾಗಿ, ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಸೌಜನ್ಯ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಿದ ತನಿಖಾಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಬೇಕು. ಅವರ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳನ್ನೂ ನ್ಯಾಯಾಲಯದ ಕಟಕಟೆಗೆ ತರಬೇಕು. ಸೌಜನ್ಯ ಪ್ರಕರಣದ ಸಾಕ್ಷಿಗಳಲ್ಲಿ ಕೆಲವರ ಅನುಮಾನಾಸ್ಪದ ಸಾವುಗಳನ್ನೂ ತನಿಖೆ ನಡೆಸಬೇಕು. ಸೌಜನ್ಯಳನ್ನು ಅತ್ಯಾಚಾರಕ್ಕೆ ಒಳಪಡಿಸಿದ, ಕೊಲೆಗೈದ ಎಲ್ಲ ದುಷ್ಟರಿಗೂ, ಅವರನ್ನು ರಕ್ಷಿಸುತ್ತ ಬಂದ ಎಲ್ಲ ಪಾಪಿಗಳಿಗೂ ಶಿಕ್ಷೆಯಾಗಬೇಕು.

ಈ ಪ್ರಕರಣವನ್ನು ಈಗ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ಹೊಣೆಗಾರಿಕೆಯೂ ಅತ್ಯಂತ ಮಹತ್ವದ್ದು. ತಾಂತ್ರಿಕ ನಿಪುಣತೆ ಹೊಂದಿರುವ, ಪ್ರಾಮಾಣಿಕ, ಪ್ರಭಾವಗಳಿಗೆ ಒಳಗಾಗದಂಥ ದಕ್ಷ ಅಧಿಕಾರಿಗಳ ಎಸ್‌ ಐಟಿ ತಂಡವನ್ನು ರಚಿಸಬೇಕು ಮತ್ತು ಅದು ಸ್ವತಂತ್ರವಾಗಿ ತನಿಖೆ ನಡೆಸಲು ಎಲ್ಲ ರೀತಿಯ ಅವಕಾಶಗಳನ್ನು ನೀಡಬೇಕು. ಈ ಬಾರಿಯೂ ತನಿಖೆ ದಾರಿ ತಪ್ಪಿದರೆ ಅದಕ್ಕೆ ಸರ್ಕಾರವೂ ಕಾರಣವಾಗಿ ಬಿಡುತ್ತದೆ, ಜವಾಬ್ದಾರಿ ಹೊರಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಕೂಡದು.

ಇದು ಆಗದೇ ಹೋದರೆ ಹದಿನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಹಂಬಲಿಸುತ್ತ ಬಂದಿರುವ ಕೋಟ್ಯಂತರ ಜನರಿಗೆ ನ್ಯಾಯದಾನ ವ್ಯವಸ್ಥೆಯ ಮೇಲಿನ ನಂಬಿಕೆಯೇ ಉಡುಗಿ ಹೋಗುತ್ತದೆ. ನಮ್ಮ ವ್ಯವಸ್ಥೆಯ ಕುರಿತೇ ಅಸಹ್ಯ ಹುಟ್ಟಿಕೊಳ್ಳುತ್ತದೆ. ಹಾಗಾಗದೇ ಇರಲಿ ಎಂಬುದು ಎಲ್ಲರ ಆಶಯ.

ದಿನೇಶ್‌ ಕುಮಾರ್‌ ಎಸ್‌ ಸಿ
ಸಂಪಾದಕರು, ಕನ್ನಡ ಪ್ಲಾನೆಟ್.ಕಾಮ್

ಇದನ್ನೂ ಓದಿ- ಸೌಜನ್ಯ ಪ್ರಕರಣ: ತನಿಖೆಯ ರೀತಿಯೇ ನ್ಯಾಯಾಲಯದ ಮನಸ್ಸನ್ನು ಕದಡಿದೆ ಎಂದ ಸುಪ್ರೀಂ ಕೋರ್ಟ್‌, ತೀರ್ಪಿನ ಪೂರ್ಣವಿವರ ಇಲ್ಲಿದೆ

More articles

Latest article

Most read