ಮುಂಬೈ : ತುಳು ಭಾಷೆ, ಸಂಸ್ಕೃತಿ ಮತ್ತು ಚಿತ್ರರಂಗದ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಹೆಮ್ಮೆಯ ಸಾಧನೆಗೆ ‘ಪಿಲಿ ಚನ್ನೆ’ ಚಿತ್ರ ಪಾತ್ರವಾಗಿದೆ. ಅನುಪಮಾ ಶರಧಿ ನಿರ್ಮಿಸಿ, ನಿರ್ದೇಶಿಸಿರುವ ಈ ತುಳು ಚಿತ್ರವು 57ನೇ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI)-2026ರ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ.
ಅನುಪಮಾ ಶರಧಿ ಅವರ ಎರಡನೇ ನಿರ್ದೇಶನದ ಚಿತ್ರ ಇದಾಗಿದ್ದು, ಈ ಹಿಂದೆ ಅವರು ‘ನಡುಬೆಟ್ಟು ಅಪ್ಪಣ್ಣ’ ಕನ್ನಡ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ‘ಪಿಲಿ ಚನ್ನೆ’ ಚಿತ್ರದ ವಿಶೇಷವೆಂದರೆ, ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಗಾಯನ, ವಸ್ತ್ರ ವಿನ್ಯಾಸ ಹಾಗೂ ಅಭಿನಯದ ಜವಾಬ್ದಾರಿಗಳನ್ನೂ ಅವರೇ ನಿರ್ವಹಿಸಿದ್ದಾರೆ. ಮಹಿಳೆಯೊಬ್ಬರ ಬಹುಮುಖ ಪ್ರತಿಭೆ ಮತ್ತು ಸೃಜನಶೀಲ ಪ್ರಯತ್ನಕ್ಕೆ ಈ ಚಿತ್ರ ಸಾಕ್ಷಿಯಾಗಿದೆ.
ಭವಿಷ್ಯ ಸಿನಿಮಾ ಬ್ಯಾನರ್ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಕಾಡಿನ ಹಿನ್ನೆಲೆಯ ಕಥಾಹಂದರ ಹೊಂದಿದೆ. ಪಿ.ವಿ.ಆರ್. ಸ್ವಾಮಿ ಛಾಯಾಗ್ರಹಣ, ಅತಿಶಯ್ ಜೈನ್ ಸಂಗೀತ ನಿರ್ದೇಶನ ಹಾಗೂ ಸಂಜೀವ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಭವಾನಿ ಶಂಕರ್ ಆಡ್ತಲೆ ಸಾಹಿತ್ಯ ರಚಿಸಿದ್ದಾರೆ.
ಶಿಲ್ಪಾ ನಾಗರಾಜ್, ನವೀನ್ ಡಿ. ಪಡೀಲ್, ವಿಜಯ ಹರಿ ರೈ, ರಾಧಾಕೃಷ್ಣ ಕುಂಬ್ಳೆ, ಗಂಗಾಧರ ನೆಲ್ಲಿಕೋಡ್, ಶಿಲ್ಪ ಸನತ್ ಮತ್ತು ರವಿ ಪೆರ್ಲಂಪಾಡಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಎರಡನೇ ಚಿತ್ರದಲ್ಲೇ ಭಾರತೀಯ ಪನೋರಮಾ ವಿಭಾಗಕ್ಕೆ ಪ್ರವೇಶ ಪಡೆದಿರುವ ‘ಪಿಲಿ ಚನ್ನೆ’, ತುಳು ಭಾಷೆಯ ಕಥೆ ಮತ್ತು ಸಂಸ್ಕೃತಿಗೆ ರಾಷ್ಟ್ರೀಯ ವೇದಿಕೆಯಲ್ಲಿ ಗುರುತಿನ ಅವಕಾಶ ಕಲ್ಪಿಸಿದೆ. ಅನುಪಮಾ ಶರಧಿ ಅವರ ಈ ಸಾಧನೆ ತುಳು ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

