ಪರಿಸರ ಸಂರಕ್ಷಣೆ, ಸಾವಯವ ಕೃಷಿ, ಸಮಗ್ರ ಆರೋಗ್ಯಪೂರ್ಣ ಜೀವನಶೈಲಿಯನ್ನು ಪ್ರತಿಪಾದಿಸುತ್ತಿದ್ದ ಭೀಮನಕಟ್ಟೆಯ ಡಾ.ಎ.ಎನ್.ನಾಗರಾಜ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಯುವ ಬರಹಗಾರ್ತಿ ರೇಶ್ಮಾ ಗುಳೇದಗುಡ್ಡಾಕರ್ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹೆಕ್ಕಿ ಬರೆದ ನುಡಿನಮನ ಇಲ್ಲಿದೆ
ಒಂದು ಮುಂಜಾನೆ ಅವರನ್ನು ಭೇಟಿಯಾಗಬೇಕೆಂಬ ಹಂಬಲದಿಂದ ಅವರ ಮನೆಗೆ ಹೊರಟಾಗ ಮಧ್ಯಾಹ್ನದ ಸಮಯವಾಗಿತ್ತು…
ನಗುಮುಖದಿಂದಲೇ ಬಂದು ನನ್ನ ಹೆಸರನ್ನು ಕರೆದು ಸ್ವಾಗತಿಸಿದ ಅವರನ್ನು ಕಂಡು ನಾನು ಬೆರಗಾದೆ!
ಅಂದು ನಾನು ಭೇಟಿಯಾದಾಗ ಅವರ ವಯಸ್ಸು 96!. ಆದರೆ ವಯೋ ಸಹಜ ಲಕ್ಷಣ ಯಾವುದೂ ಕಾಣಲಿಲ್ಲ.
ಕಣ್ಣಿಗೆ ಕನ್ನಡಕವನ್ನೂ ಧರಿಸುತ್ತಿರಲಿಲ್ಲ. “ನೀನು ಇಂದು ಬರುತ್ತೀಯ ಎಂದು ನಾನು ಕಾದಿದ್ದೆ” ಎಂದು ಅವರು ಹೇಳಿದಾಗ ನನಗೆ ಬಹಳ ಸಂತೋಷವಾಯಿತು. ಏಕೆಂದರೆ ಅದುವರೆಗೂ ನಾನು ಓದಿದ ಕೃತಿಗಳ ಹಿರಿಯ ಸಾಹಿತಿಗಳ ಯಾವ ಮಕ್ಕಳನ್ನು ನಾನು ನೇರವಾಗಿ ಭೇಟಿಯಾಗಿರಲಿಲ್ಲ. ಹೀಗಾಗಿ ಎ.ಎನ್. ನಾಗರಾಜ್ ಅವರ ಭೇಟಿ ನನಗೆ ಅತ್ಯಂತ ವಿಶೇಷವಾಗಿತ್ತು. ರೇಖಾಂಬ ಮೇಡಂ ಅವರ ಸಂಪರ್ಕದ ನೆರವಿನಿಂದ ನನಗೆ ಇವರ ಪರಿಚಯ ಸಾಧ್ಯವಾಗಿತ್ತು. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಲೇ ವಿಜ್ಞಾನ ತಂತ್ರಜ್ಞಾನ ಹೀಗೆ ಎಲ್ಲ ವಿಚಾರಗಳ ಕುರಿತು ಚುರುಕಾಗಿ ವಿವರಿಸಿದರು.
ಅಂದು ನಾವು ಅವರನ್ನು ಭೇಟಿಯಾದಾಗ, ಅವರು ತಮ್ಮದೇ ಆದ ‘ಆನಂದದ ಹುಡುಕಾಟದಲ್ಲಿ’ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸುವ ಕಾಯಕದಲ್ಲಿ ತೊಡಗಿದ್ದರು. ಆ ವೃದ್ಧಾಪ್ಯದಲ್ಲೂ ಅವರಲ್ಲಿದ್ದ ಆನಂದ, ನೆಮ್ಮದಿ ಹಾಗೂ ಚುರುಕುತನ ಅಚ್ಚರಿ ಮೂಡಿಸುವಂತಿತ್ತು. ಇಂಟರ್ನೆಟ್ ಹಾಗೂ ಆಧುನಿಕ ಗ್ಯಾಜೆಟ್‌ಗಳನ್ನು ಸರಾಗವಾಗಿ ಬಳಸುತ್ತಿದ್ದ ಅವರು, ಯಾರ ಸಹಾಯವೂ ಇಲ್ಲದೆ ನಿಧಾನವಾಗಿ ನಡೆಯುತ್ತಾ ಮನೆಯ ಪ್ರತಿಯೊಂದು ಭಾಗವನ್ನೂ ಪರಿಚಯಿಸಿದರು. ತೋಟಕ್ಕೆ ಕರೆದುಕೊಂಡು ಹೋಗಿ ತಮ್ಮ ಸಾವಯವ ಕೃಷಿ ಪದ್ಧತಿಯ ಬಗ್ಗೆ ವಿವರವಾಗಿ ತಿಳಿಸಿದರು.


ಮನೆಯ ಮುಂಭಾಗದಲ್ಲಿದ್ದ ಹಣ್ಣಿನ ಗಿಡಗಳಿಗೆ ಪುಟ್ಟದಾದ ಬೇಲಿ ಹಾಕಿರುವುದನ್ನು ಕಂಡು “ಅದೇಕೆ?” ಎಂದು ಕೇಳಿದೆ. ಅದಕ್ಕವರು, “ಕೆಳಗಿರುವುದು ನಮಗೆ, ಮೇಲಿರುವುದು ಮಂಗಗಳು ಹಾಗೂ ಪಕ್ಷಿಗಳಿಗೆ!” ಎಂದರು. ಮುಂದುವರಿದು, “ಎಲ್ಲವನ್ನೂ ಮನುಷ್ಯರೇ ತಿನ್ನಬಾರದು. ಪ್ರಕೃತಿಯಲ್ಲಿ ಪ್ರಾಣಿ-ಪಕ್ಷಿಗಳಿಗೂ ಸಮಾನ ಪಾಲಿದೆ ಎಂಬುದನ್ನು ಮಾನವ ಮರೆಯಬಾರದು” ಎಂಬ ಕಾಳಜಿಯ ಮಾತುಗಳನ್ನಾಡಿದರು.
ಅಂದು ನಾವು ಅವರನ್ನು ಭೇಟಿಯಾದಾಗ ಅವರು ತಮ್ಮದೇ ಆದ ʼಆನಂದದ ಹುಡುಕಾಟದಲ್ಲಿʼ ಕೃತಿಯನ್ನು ಇಂಗ್ಲೀಷಿಗೆ ಅನುವಾದ ಮಾಡುವ ಕಾಯಕದಲ್ಲಿ ತೊಡಗಿದ್ದರು. ಆ ಇಳಿ ವಯಸ್ಸಿನಲ್ಲೂ ಅವರಲ್ಲಿದ್ದ ಸಂತೋಷ ನೆಮ್ಮದಿ ಹಾಗೂ ಚುರುಕುತನ ಅಚ್ಚರಿ ಮೂಡಿಸುವಂತಿತ್ತು. ಇಂಟರ್ನೆಟ್ ಹಾಗೂ ಆಧುನಿಕ ಗ್ಯಾಜೆಟ್‌ಗಳನ್ನು ಸರಾಗವಾಗಿ ಬಳಸುತ್ತಿದ್ದ ಅವರು, ಯಾರ ಸಹಾಯವೂ ಇಲ್ಲದೆ ನಿಧಾನವಾಗಿ ನಡೆಯುತ್ತಾ ಮನೆಯ ಪ್ರತಿಯೊಂದು ಭಾಗವನ್ನೂ ಪರಿಚಯಿಸಿದರು. ತೋಟಕ್ಕೆ ಕರೆದುಕೊಂಡು ಹೋಗಿ ತಮ್ಮ ಸಾವಯವ ಕೃಷಿ ಪದ್ಧತಿಯ ಬಗ್ಗೆ ವಿವರವಾಗಿ ತಿಳಿಸಿದರು.
ಮನೆಯ ಮುಂಭಾಗದಲ್ಲಿದ್ದ ಹಣ್ಣಿನ ಗಿಡಗಳಿಗೆ ಪುಟ್ಟದಾದ ಬೇಲಿ ಹಾಕಿರುವುದನ್ನು ಕಂಡು “ಅದೇಕೆ?” ಎಂದು ಕೇಳಿದೆ. ಅದಕ್ಕವರು, “ಕೆಳಗಿರುವುದು ನಮಗೆ, ಮೇಲಿರುವುದು ಮಂಗಗಳು ಹಾಗೂ ಪಕ್ಷಿಗಳಿಗೆ!” ಎಂದರು. ಮುಂದುವರಿದು, “ಎಲ್ಲವನ್ನೂ ಮನುಷ್ಯರೇ ತಿನ್ನಬಾರದು. ಪ್ರಕೃತಿಯಲ್ಲಿ ಪ್ರಾಣಿ-ಪಕ್ಷಿಗಳಿಗೂ ಸಮಾನ ಪಾಲಿದೆ ಎಂಬುದನ್ನು ಮಾನವ ಮರೆಯಬಾರದು” ಎಂಬ ಕಾಳಜಿಯ ಮಾತುಗಳನ್ನಾಡಿದರು.
ಅವರಲ್ಲಿದ್ದ ಶಾಂತ ಗುಣ ಹಾಗೂ ಬದುಕಿನ ಎಲ್ಲಾ ಏಳು-ಬೀಳುಗಳನ್ನು ಮರೆತು ಮನದಾಳದಿಂದ ನಗುವ ಅವರ ಶೈಲಿಯನ್ನು ಕಂಡು ನಾನು ಮಂತ್ರಮುಗ್ಧಳಾಗಿದ್ದೆ. ಇಂತಹ ಸಾತ್ವಿಕ ಜೀವವನ್ನು ಭೇಟಿಯಾದದ್ದು ನನಗೆ ಮೊದಲ ಅನುಭವ. ಭೇಟಿ ಹಾಗೂ ಸುದೀರ್ಘ ಮಾತುಕತೆಯ ನಂತರ, ಮನೆಯ ಹಿಂಭಾಗದಲ್ಲಿದ್ದ ತುಂಗಾ ನದಿಯ ದಡಕ್ಕೆ ಹೋಗಿ ಬರಲು ಸೂಚಿಸಿದರು. ಜೊತೆಗೆ “ಆದಷ್ಟು ಬೇಗ ಬನ್ನಿ, ಒಟ್ಟಿಗೆ ಊಟ ಮಾಡೋಣ” ಎಂದು ಪ್ರೀತಿಯಿಂದ ಹೇಳಲು ಮರೆಯಲಿಲ್ಲ.
ಅವರ ಊಟದ ಶೈಲಿಯೇ ಬೇರೆಯಾಗಿತ್ತು. ಕಟ್ಟುನಿಟ್ಟಿನ ಆಹಾರ ಕ್ರಮದೊಂದಿಗೆ ಅವರ ಜೀವನ ಸಾಗಿತ್ತು. “ಒಂಟಿತನ ನಿಮಗೆ ಕಾಡಲಿಲ್ಲವೇ?” ಎಂದು ಕೇಳಿದಾಗ, “ಅದು ಕಾಡುವ ಪ್ರಮೇಯವೇ ಬರಲಿಲ್ಲ!” ಎಂದು ನಗುತ್ತಾ ತಮ್ಮ ದೈನಂದಿನ ಚಟುವಟಿಕೆಗಳನ್ನು ವಿವರಿಸಿದರು. “ಎಲ್ಲರನ್ನೂ ಪ್ರೀತಿಸಬೇಕು; ಬದುಕಿನಲ್ಲಿ ಪ್ರೀತಿ ಮತ್ತು ನೆಮ್ಮದಿಯನ್ನು ನಾವು ಹೆಚ್ಚು ನೆನಪಿಸಿಕೊಳ್ಳಬೇಕು ಹಾಗೂ ಇತರರೊಂದಿಗೆ ಹಂಚಿಕೊಳ್ಳಬೇಕು” ಎಂಬುದು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಅವರು ನುಡಿದಂತೆಯೇ ಬಾಳಿದರು, ಅದು ಅವರ ಸಾಹಿತ್ಯ ಕೃತಿಯಲ್ಲೂ ಎದ್ದುಕಾಣುತ್ತದೆ.
ವಿಜ್ಞಾನಿಯಾಗಿ ಹಾಗೂ ಪರಿಸರ ಪ್ರೇಮಿಯಾಗಿ ಭೀಮನಕಟ್ಟೆಯಲ್ಲಿ ಅವರು ಬಾಳಿದ ರೀತಿ ಅನನ್ಯ. ನದಿಯ ನೀರಿನ ಕಲರವದ ಜೊತೆಗೆ, ಪಕ್ಷಿಗಳ ಇಂಚರ ಹಾಗೂ ಅವರ ಹಾಡುಗಾರಿಕೆಯ ಸುಂದರ ಸಮ್ಮಿಲನವೇ ಅವರ ಮನೆಯ ಪರಿಸರ.
ತಮ್ಮ ತೋಟದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಬಾಳೆಹಣ್ಣನ್ನು ಪ್ರೀತಿಯಿಂದ ಸವಿಯಲು ನೀಡಿದರು. ಆಧ್ಯಾತ್ಮ, ತಾತ್ವಿಕ ಚಿಂತನೆ ಹಾಗೂ ಅವರ ಆಧ್ಯಾತ್ಮಿಕ ಗುರುಗಳ ಭೇಟಿಯ ಕುರಿತು ಮಾತುಕತೆ ನಡೆಸಿದೆವು. ಮಾತುಕತೆಯಲ್ಲಿ ಮುಳುಗಿದ್ದ ನಮಗೆ ಸಂಜೆಯಾಗಿದ್ದೇ ತಿಳಿಯಲಿಲ್ಲ. ಹೊರಡುವಾಗ ಮರೆಯದೇ ಸೆಲ್ಫಿ ತೆಗೆದುಕೊಳ್ಳಲು ಅವರೇ ನೆನಪಿಸಿದರು. “ಮತ್ತೆ ಭೇಟಿಯಾಗೋಣ” ಎಂದು ಸಂತಸದಿಂದ ವಿದಾಯ ಹೇಳಿದರು…
ಆದರೆ ಬದುಕು ಮತ್ತೊಮ್ಮೆ ಅವರನ್ನು ಭೇಟಿಯಾಗುವ ಅವಕಾಶ ನೀಡಲಿಲ್ಲ. ಆ ಭೇಟಿಯೇ ಮೊದಲನೆಯದೂ ಮತ್ತು ಕೊನೆಯದೂ ಆಯಿತು. ಪ್ರತಿಯೊಬ್ಬರನ್ನೂ ತಮ್ಮವರೆಂದು ಪ್ರೀತಿಸುವ, ಯಾವ ಜಾತಿ-ಧರ್ಮಗಳ ಹಂಗಿಲ್ಲದೆ ಸರಳವಾಗಿ ಬಾಳಿದ ಬುದ್ಧ, ಏಸು, ಗಾಂಧೀಜಿಯವರ ತತ್ತ್ವಗಳು ಆ ಭೀಮನಕಟ್ಟೆಯ ಮನೆಯಲ್ಲಿ ಮೂರ್ತರೂಪ ತಳೆದಂತಿದ್ದವು. ಬೇಸರ, ಕೋಪ, ಅವಸರ-ಆತುರ ಯಾವುದೂ ಇಲ್ಲದೆ ಸದಾ ನಗುಮುಖದಿಂದ ಮೆಲ್ಲನೆ ಓಡಾಡುತ್ತಾ, ಎಲ್ಲರನ್ನೂ ಪ್ರೀತಿಸಿ ಮಾರ್ಗದರ್ಶನ ನೀಡುತ್ತಿದ್ದ ಭೀಮನ ಕಟ್ಟೆಯ ಆ ಹಿರಿಯ ಜೀವ ಇಂದು ನೆನಪು ಮಾತ್ರ.
ತುಂಗೆಯ ತೀರದ ಆ ಸಂತನಿಗೆ ಭಾವಪೂರ್ಣ ಅಂತಿಮ ನಮನಗಳು…!
ರೇಶ್ಮಾ ಗುಳೇದಗುಡ್ಡಾಕರ್
ಯುವ ಬರಹಗಾರ್ತಿ
ಇದನ್ನೂ ಓದಿ – ಸಂಪಾದಕೀಯ : ಸೌಜನ್ಯ ಪ್ರಕರಣ: ಅತ್ಯಾಚಾರಿಗಳ ರಕ್ಷಕರಿಗೂ ಶಿಕ್ಷೆಯಾಗಬೇಕು


