ಬೆಂಗಳೂರು : ರಾಯಚೂರು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ದಲಿತರ ಮೇಲೆ ನಡೆದ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಕುರಿತು ಜಿಲ್ಲಾ ಮಟ್ಟದಲ್ಲಿ ನಡೆದ ಪ್ರತಿಭಟನೆಯ ಕಾವು ಇದೀಗ ರಾಜಧಾನಿಗೆ ಶಿಫ್ಟ್ ಆಗಿದೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ಇಲಾಖೆಗಳು ದಲಿತರ ಹೋರಾಟಕ್ಕೆ ಮಣಿದು ನಾಗರಿಕ ನಿರ್ದೇಶನಾಲಯಕ್ಕೆ ನೀಡಿದ ಪ್ರಕರಣಗಳು ಸಿಬ್ಬಂದಿಯ ಕೊರತೆಯಿಂದ ಸಮಗ್ರ ತನಿಖೆ ನಡೆಸಲು ಸಾಧ್ಯವಿಗದೆಂಬ ಅಹವಾಲನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಅಜಯ್ ಸಿಂಗ್ ಸೇರಿದಂತೆ ಮಾಜಿ ಸಚಿವರಾದ ಎನ್. ಎಸ್. ಬೋಸರಾಜ್ ರವರ ನೇತೃತ್ವದಲ್ಲಿ ತೆರಳಿದ ನಿಯೋಗವಿಂದು ಗೃಹ ಮಂತ್ರಿಗಳಿಗೆ ವಿವರವಾದ ಮಾಹಿತಿಯನ್ನು ನೀಡಿ ಯಾವುದೆ ರಾಜಕೀಯ ಪ್ರಭಾವಕ್ಕೆ ಮಣಿಯದೆ ನಿಷ್ಪಕ್ಷಪಾತವಾದ ತನಿಖೆ ನಡೆಸಲು, ಸ್ವತಂತ್ರ ಸಂಸ್ಥೆಗಳ ಮೂಲಕ ಉನ್ನತ ಮಟ್ಟದ ತನಿಕೆ ನಡೆಸಲು ಒತ್ತಾಯಿಸಲಾಯಿತು.
“ಭೂಮನಂದನ ಭೀಕರ ಕಗ್ಗೊಲೆ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದರೆ”…ಅಶ್ವಿನಿ, ರಾಣೆಮ್ಮಳ ಅತ್ಯಾಚಾರ ಪ್ರಕರಣ ವಿಕೃತ ಕಾಮಿ ಉಮೇಶ ರೆಡ್ಡಿ ಕೃತ್ಯಕ್ಕೂ ಮೀರಿದ್ದು”.. ಎಂಬ ಮುಖಂಡರ ಅಭಿಪ್ರಾಯಗಳನ್ನು ಮುಕ್ತವಾಗಿ ಆಲಿಸಿದ ಗೃಹ ಸಚಿವರು ಸದರಿ ಪ್ರಕರಣದ ಸತ್ಯಾಸತ್ಯತೆಗಳ ಗಂಭೀರತೆಯು ನನ್ನ ಗಮನಕ್ಕಿದೆ. ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಮೇಲೆ ನಂಬಿಕೆ ಇಡಿ ಎಂಬ ಆಶ್ವಾಸನೆಯನ್ನು ವ್ಯಕ್ತಪಡಿಸಿದರು.
ಎಲ್ಲಾ ಮುಖಂಡರ ಅಭಿಪ್ರಾಯಗಳನ್ನು ಮುಕ್ತವಾಗಿ ಆಲಿಸಿದ ಗೃಹಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕೂಡಲೇ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ಒಂದು ವೇಳೆ ಗೃಹಮಂತ್ರಿಗಳು ಪ್ರಕರಣದ ವಿಳಂಬಕ್ಕೆ ಕಾರಣವಾದಲ್ಲಿ ರಾಜ್ಯದಗಲಕ್ಕೂ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೋರಾಟಗಾರರ ನಿಯೋಗವು ಸ್ಪಷ್ಟಪಡಿಸಿದೆ.
ಸದರಿ ನಿಯೋಗದಲ್ಲಿ ಎಸ್ ಮಾರೆಪ್ಪ ವಕೀಲರು, ರವೀಂದ್ರನಾಥ್ ಪಟ್ಟಿ, ಅಂಬಣ್ಣ ಅರೋಲಿಕರ್, ಶಿವರಾಯ ಅಕ್ಕರಕಿ, ಹೇಮರಾಜ್ ಅಸ್ಕಿಹಾಳ್,
ಶರಣಪ್ಪ ದಿನ್ನಿ, ಬೂದೆಪ್ಪ ಕ್ಯಾದಿಗಿ, ಬಸವರಾಜ್ ಮಿಯಾಪುರ, ಬಸವರಾಜ್ ಹದ್ದಿನಾಳ್, ಅರ್ಜುನ್ ಜಗಲಿ, ನರಸಿಂಹಲು ನೆಲಹಾಳ್, ನರಸಿಂಹಲು ಮರ್ಚಟಾಳ್, ಬಸವರಾಜ್ ಭಂಡಾರಿ, ವಸಂತ್ ಅಸ್ಕಿಹಾಳ್ ತಾಯಪ್ಪ ಗದಾರ್ ಉಪಸ್ಥಿತರಿದ್ದರು.

