ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ- 25 |  ಹೊರಗೆಲ್ಲ ಖ್ಯಾತ, ಊರಲ್ಲಿ ಅಪರಿಚಿತ-   ಕಾದಂಬರಿಕಾರ ʼಸದಾನಂದʼ

ʼಸದಾನಂದʼ ಎಂಬ ಕಾವ್ಯ ನಾಮದಲ್ಲಿ ಬರೆಯುತ್ತಿದ್ದ ಕೆ ಎಸ್‌ ರಾವ್‌ ಅವರ ಮೊದಲ ಕತೆ 60 ರ ದಶಕದಲ್ಲಿ ಕನ್ನಡದ ಖ್ಯಾತ ಸಾಪ್ತಾಹಿಕ ಪತ್ರಿಕೆ ʼಸುಧಾʼದಲ್ಲಿ ಪ್ರಕಟವಾಯಿತು. ʼಪ್ರೀತಿ ಮತ್ತು ಚಿನ್ನದ ಕ್ರಾಸುʼ ಅವರ ಮೊದಲ ಕತೆ.

70 ರ ದಶಕದಲ್ಲಿ ಅದೇ ಸಾಪ್ತಾಹಿಕದಲ್ಲಿ ಅವರ ʼಬೇರುಗಳು ಮತ್ತು ಬಿಳಲುಗಳುʼ ಸಣ್ಣಕತೆ ಪ್ರಕಟವಾಯಿತು. ಈ ಕತೆಯನ್ನು ಇಷ್ಟಪಟ್ಟ ದಿ. ಕೆ ಎಸ್‌ ನಾರಾಯಣ ಸ್ವಾಮಿ ಮತ್ತು ಖ್ಯಾತ ನಿರ್ದೇಶಕ ದಿ. ಎನ್.‌ ಲಕ್ಷ್ಮಿನಾರಾಯಣ್‌ ಅದನ್ನೊಂದು ಚಲನಚಿತ್ರವಾಗಿಸುವ ಯತ್ನದಲ್ಲಿ ವಿಜಯನಾರಸಿಂಹ ಅವರಿಂದ ಗೀತೆ ಮತ್ತು ಸಂಭಾಷಣೆಯನ್ನು ಬರೆಸುವ ಹಂತದವರೆಗೂ ಪ್ರಯತ್ನ ಸಾಗಿತ್ತು. ಅದೇನೋ ಕಾರಣದಿಂದ (ಬಹುಶಃ ಆರ್ಥಿಕ) ಅದು ಆ ಹಂತದಿಂದ ಮುಂದುವರಿಯಲಿಲ್ಲ. ಮುಂದೆ ಇದೇ ಕತೆಯನ್ನು ಸದಾನಂದರು ಸಣ್ಣ ಪುಟ್ಟ ಬದಲಾವಣೆಯೊಂದಿಗೆ ʼಜೀವನವೃಕ್ಷʼ ಎಂಬ ಕಾದಂಬರಿಯಾಗಿಸಿದರು. ಇದು ಪ್ರಕಟಗೊಂಡು ಭಾರೀ ಜನಪ್ರಿಯತೆ ಗಳಿಸಿತು. ʼಸುಧಾʼದ ಆಗಿನ ಸಂಪಾದಕ ಎಂ ಬಿ ಸಿಂಗ್‌ ವಿಶೇಷ ಪ್ರೋತ್ಸಾಹ ನೀಡಿ, ಸದಾನಂದರು ಇನ್ನಷ್ಟು ಕತೆ, ಕಾದಂಬರಿ ಬರೆಯುವ ಹಾಗೆ ಮಾಡಿದರು.

ಅಂದಿನಿಂದ ಕತೆ ಕಾದಂಬರಿ ರಚನೆಯಲ್ಲಿ ನಿರಂತರ ತೊಡಗಿಕೊಂಡ ಸದಾನಂದ ಅವರ ಸುಮಾರು 50 ಕ್ಕೂ ಅಧಿಕ ಕಾದಂಬರಿಗಳು, ಕಾದಂಬರಿ ಪ್ರಕಟಣೆಗೇ ಮೀಸಲಾದ ʼರಾಗಸಂಗಮʼ ಸಹಿತ ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಪ್ರಿಯವಾದವು. ಕೆಲ ಕತೆಗಳು ತೆಲುಗಿಗೆ ಅನುವಾದವಾದವು. ಕತೆಗಳು ಆಕಾಶವಾಣಿ ರೂಪಕಗಳಾಗಿ ಹಾಗೂ ದೂರದರ್ಶನದಲ್ಲಿ ಕಿರುಚಿತ್ರಗಳಾಗಿ ಪ್ರಸಾರವಾದವು. ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಪ್ರಾತಿನಿಧಿಕ ಸಂಕಲನಕ್ಕೆ ಇವರ ಕತೆ ಆಯ್ಕೆಯಾದುದಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಕತೆಗಳನ್ನು ತೆಲುಗಿಗೆ ಅನುವಾದಿಸಿಕೊಂಡು ಪ್ರಕಟಿಸುವ ತೆಲುಗಿನ ವಿಶಿಷ್ಟ ಮಾಸಪತ್ರಿಕೆ ʼವಿಪುಲʼ ದಲ್ಲೂ ಕೆಲವು ಕತೆಗಳು ಪ್ರಕಟವಾಗಿ  ತೆಲುಗುನಾಡಿನಲ್ಲೂ ಸದಾನಂದರು ಖ್ಯಾತರಾದರು.

ಸದಾನಂದರ ಕಾದಂಬರಿಗಳು

ಇಂತಹ ಒಬ್ಬ ಪ್ರತಿಭಾವಂತ ಮತ್ತು ಖ್ಯಾತ ಕಾದಂಬರಿಕಾರ ಕಾರ್ಕಳ ಪೇಟೆಯ ಮಧ್ಯದಲ್ಲಿಯೇ ಇದ್ದಾರೆ ಎನ್ನುವುದು ದಶಕಗಳ ಕಾಲ ಕಾರ್ಕಳದವರಿಗೇ ಗೊತ್ತಿರಲಿಲ್ಲ. ಕಾರ್ಕಳದ ಸಾಹಿತ್ಯ ಚರಿತ್ರೆಯ ಬಗ್ಗೆ ರತ್ನಾಕರವರ್ಣಿಯಿಂದ, ಮುದ್ದಣನಿಂದ, ಇಂದಿನ ಬರೆಹಗಾರರ ಬಗ್ಗೆ ದಾಖಲಿಸಿದ ಕಾರ್ಕಳದ ಪ್ರಸಿದ್ಧ ಸಾಹಿತ್ಯ ಪರಿಚಾರಕ ಎಂ ರಾಮಚಂದ್ರರ ʼಕಾರ್ಕಳದ ಸಾಹಿತ್ಯ ಸಂಪತ್ತುʼ ಸಮಗ್ರ ಲೇಖನದಲ್ಲಿಯೂ ಸದಾನಂದರ ಹೆಸರು ಕಾಣಿಸುವುದಿಲ್ಲ. ಕಾರ್ಕಳದ ಭುವನೇಂದ್ರ ಕಾಲೇಜು ಸಾಹಿತ್ಯ ಚಟುವಟಿಕೆಗಳಿಗೆ ಪ್ರಸಿದ್ಧ. ಜಿಲ್ಲಾ ಸಮ್ಮೇಳನ, ತಾಲೂಕು ಸಮ್ಮೇಳನ ಹೀಗೆ ಕಾರ್ಕಳದಲ್ಲಿ ಅನೇಕ ಸಾಹಿತ್ಯ ಸಮ್ಮೇಳನಗಳು ನಡೆದವು. ಆದರೆ ಅಲ್ಲೂ ಸದಾನಂದರಿಗೆ ಜಾಗ ಸಿಗಲಿಲ್ಲ. ಇಂತಹ ಒಬ್ಬ ಪ್ರತಿಭಾವಂತ ಲೇಖಕ 30-40 ವರ್ಷಗಳ ಕಾಲ ಯಾರಿಗೂ ತಿಳಿಯದೆ ಹೋದುದು ಹೇಗೆ? ʼಹಿತ್ತಲ ಗಿಡ ಮದ್ದಲ್ಲʼ ಎಂಬ ಧೋರಣೆಯಿಂದ ಅವರನ್ನು ಕಡೆಗಣಿಸಲಾಯಿತೇ? ಅಥವಾ ಪ್ರಚಾರ ಬಯಸದೆ, ತೆರೆಯ ಮರೆಯಲ್ಲಿಯೇ ಕೆಲಸ ಮಾಡ ಬಯಸುವ ಸದಾನಂದರ ಸ್ವಭಾವದಿಂದಾಗಿ ಹೀಗಾಯಿತೇ? ಉತ್ತರಿಸುವುದು ಕಷ್ಟ.

ಮೊದಲ ಭೇಟಿ

ಕಾರ್ಕಳದಲ್ಲಿ ಜಮೀರಾ ಎಂಬ ಮುಸ್ಲಿಂ ಹೆಣ್ಣುಮಗಳೊಬ್ಬಳು ಕತೆ ಬರೆಯವ ಹವ್ಯಾಸ ಬೆಳೆಸಿಕೊಂಡಿದ್ದಳು. ಒಳ್ಳೆಯ ಕತೆಗಾರ್ತಿಯಾಗಿದ್ದಳು. ಆದರೆ ಸಮುದಾಯದ ಭಯದಿಂದಲೋ ಏನೋ ʼಮೀರಾʼ ಎಂಬ ಹೆಸರಿನಲ್ಲಿ ಆಕೆ ಕತೆ ಪ್ರಕಟಣೆಗೆ ಕಳುಹಿಸುತ್ತಿದ್ದಳು. ಹೊಸಬರು ಬರೆಯುವ ಕತೆಗಳಲ್ಲಿ ಪರಿಪಕ್ವತೆ ಇರುವುದು ಕಡಿಮೆಯಾದ್ದರಿಂದ ಅವು ತಿರಸ್ಕೃತ ಆಗುವ ಸಾಧ್ಯತೆಯೂ ಇರುತ್ತದೆ. ಇದೇ ಕಾರಣದಿಂದ ಕೆಲವರು ಅಂತಹ ಕತೆಗಳನ್ನು ಅನುಭವಿ ಕತೆಗಾರರಿಂದ ತಿದ್ದಿಸಿ ಪತ್ರಿಕೆಗಳಿಗೆ ಕಳುಹಿಸುವುದಿದೆ. ಜಮೀರಾ ಈ ಕೆಲಸವನ್ನು ಸದಾನಂದರಿಂದ ಮಾಡಿಸುತ್ತಿದ್ದರು.

ಅದು 1981ರ ಒಂದು ದಿನವಿರಬೇಕು. ಜಮೀರಾ ಅವರ ತಮ್ಮ ಖಲೀಲ್ “ನಿನಗೆ ಕಾದಂಬರಿಕಾರ ಸದಾನಂದ ಗೊತ್ತಾ? ಅವರ ಕತೆ, ಕಾದಂಬರಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ, ತುಂಬಾ ಒಳ್ಳೆಯ ಕತೆಗಾರ, ಪ್ರಸಿದ್ಧರು” ಎಂದ. ನನ್ನಲ್ಲಂತೂ ಸಾಹಿತ್ಯಾಸಕ್ತಿ ತೀವ್ರ ಗತಿಯಲ್ಲಿ ಬೆಳೆಯುತ್ತಿದ್ದ ಕಾಲ. ಸಾಹಿತ್ಯ, ಸಾಹಿತಿ ಎಂದರೆ ಅದೇನೋ ವಿಶೇಷ ಪ್ರೀತಿ. ಹಾಗಾಗಿ ಕಾರ್ಕಳದಲ್ಲೇ ಇರುವ ಓರ್ವ ಸಾಹಿತಿಯನ್ನು ಭೇಟಿಯಾಗುವ ಅವಕಾಶ ಕಳೆದುಕೊಂಡೇನೇ?

ಸರಿ‌, ಆತನನ್ನು ಸೈಕಲ್‌ ನಲ್ಲಿ ಹಿಂಬಾಲಿಸಿದೆ. ಕಾರ್ಕಳ ಪೇಟೆಯಿಂದ ಅನಂತಶಯನ ದೇವಸ್ಥಾನ ತಲಪಿ, ಅಲ್ಲಿಂದ ಬಲಗಡೆಯ ರಸ್ತೆಗೆ ಆತನ ಸೈಕಲ್‌ ಹೊರಳಿತು. ಇನ್ನೇನು ಚತುರ್ಮುಖ ಬಸದಿ ಬಂತು ಎನ್ನುವುದಕ್ಕೆ ಕೊಂಚ ಮೊದಲು, ಬಲದಲ್ಲಿ ಅನೇಕ ಬಸ್‌ ಗಳು ನಿಂತ ಒಂದು ಗ್ಯಾರೇಜು ಕಾಣಿಸಿತು. ಅದು ʼಹನುಮಾನ್‌ ಟ್ರಾನ್ಸ್‌ಪೋರ್ಟ್‌ʼ ಸಾರಿಗೆ ಸಂಸ್ಥೆಯ ಡಿಪೋ. ಅದರೊಳಗೆ ಹೋದೆವು. ಗ್ಯಾರೇಜಿಗೆ ತಾಗಿಕೊಂಡಂತೆ ಪುಟ್ಟದೊಂದು ಆಫೀಸು. ಅಲ್ಲೊಬ್ಬರು ಬಿಳಿ ಶರಟು ಧರಿಸಿದ, ಸಣಕಲು ದೇಹದ, ಕನ್ನಡಕಧಾರಿ ವ್ಯಕ್ತಿ ಕುಳಿತುಕೊಂಡಿದ್ದರು. ವಯಸ್ಸು ಅಂದಾಜು ನಲವತ್ತಾಗಿರಬಹುದು. “ಬನ್ನಿ ಕುಳಿತುಕೊಳ್ಳಿ” ಎಂದರು. ಖಲೀಲ ನನ್ನನ್ನು ಸಂಕ್ಷಿಪ್ತವಾಗಿ ಪರಿಚಯಿಸಿಕೊಟ್ಟ. ಜಮೀರಾ ಅವರ ಕತೆಯನ್ನು ಸದಾನಂದರ ಕೈಗೆ ತಲಪಿಸಿ ಕೆಲ ಹೊತ್ತು ಅದು ಇದು ಮಾತನಾಡಿದ ಬಳಿಕ ಅಲ್ಲಿಂದ ಹೊರಡಲನುವಾದೆವು. ಹೊರಡುವಾಗ “ಶ್ರೀನಿವಾಸ್‌, ಆಗಾಗ ಬರುತ್ತಿರಿ..” ಎಂದರು ಸದಾನಂದರು.

ಸದಾನಂದರ ಕಾದಂಬರಿ

ಆನಂತರ ಸದಾನಂದರನ್ನು ಆಗಾಗ ಭೇಟಿಯಾಗಿ ಮಾತನಾಡುವ ನನ್ನ ಕಾರ್ಯಕ್ರಮ ಆರಂಭವಾಯಿತು. ಸಾಹಿತ್ಯ ಕುರಿತ ಚರ್ಚೆಗಳಿಗೆ ನನಗೆ ಕಾರ್ಕಳದಲ್ಲಿ ಆಗ ಇತರ ಯಾರೂ ಇರಲಿಲ್ಲ. ಹಾಗಾಗಿ ಸದಾನಂದರೊಂದಿಗೆ ಹರಟುವುದೆಂದರೆ ಅದೇನೋ ಖುಷಿ.

ಸದಾನಂದರು ತಾನು ಇತ್ತೀಚೆಗೆ ಬರೆದ ಕತೆ, ಕಾದಂಬರಿ, ಹೊರಗಡೆ ಸಿಗುತ್ತಿರುವ ಜನಮೆಚ್ಚುಗೆ, ಪ್ರಕಾಶಕರು ಮಾಡುವ ಮೋಸ, ʼತರಂಗʼದಂತಹ ಪತ್ರಿಕೆ ಧಾರಾವಾಹಿಯಾಗಿ ಪ್ರಕಟಮಾಡುತ್ತೇವೆ ಎಂದು ಕಾದಂಬರಿಯನ್ನು ತೆಗೆದುಕೊಂಡು ತಿಂಗಳುಗಟ್ಟಲೆ ಇರಿಸಿಕೊಂಡು, ಪ್ರಕಟಿಸದೆ ಮರಳಿಸಿದ್ದು, ಹೀಗೆ ಅನೇಕ ವಿಚಾರಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು.

ಅವರು ಹನುಮಾನ್‌ ಟ್ರಾನ್ಸ್‌ಪೋರ್ಟ್‌ ಸಂಸ್ಥೆಯ ಕಾರ್ಕಳ ವಿಭಾಗದಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಸಿಬ್ಬಂದಿಗಳಿಗೆ ಹಣ ಬಟವಾಡೆ ಮಾಡುವುದು, ಗ್ಯಾರೇಜು ಸಂಬಂಧವಾಗಿ ಉಡುಪಿಯ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದು, ಹೀಗೆ ಅನೇಕ ಕೆಲಸಗಳನ್ನು ಅವರು ಮಾಡಬೇಕಾಗುತ್ತಿತ್ತು. ಸುತ್ತೆಲ್ಲ ವಾಹನದ ಗ್ರೀಸು, ಡೀಸೆಲ್‌, ಆಯಿಲ್‌ ನ ವಾಸನೆ. ಅದರ ನಡುವೆ ಇವರ ಕಚೇರಿ. ಇದೇ ಕಚೇರಿಯಲ್ಲಿ, ಬಿಡುವಿರದ ಕಚೇರಿ ಕೆಲಸದ ನಡುವೆ ಅವರು ಕತೆ, ಕಾದಂಬರಿ ಬರೆಯುತ್ತಿದ್ದರು!

ಉಡುಪಿ, ಮಂಗಳೂರು, ಕುಂದಾಪುರಗಳಿಗೆ ಹೋಗಿಬರುವ ಹನುಮಾನ್‌ ಬಸ್‌ ನ ಸಿಬ್ಬಂದಿ ಗ್ಯಾರೇಜಿಗೆ ಬರುತ್ತಿದ್ದಂತೆ ಒಮ್ಮೊಮ್ಮೆ ಸದಾನಂದರೊಂದಿಗೆ ದೊಡ್ಡ ಸ್ವರದಲ್ಲಿ ಜಗಳ ತೆಗೆಯುತ್ತಿದ್ದರು. ಬಯ್ಯುತ್ತಿದ್ದರು ಎಂದರೂ ತಪ್ಪಾಗದು. ಆದರೆ ಸದಾನಂದರು ಒಂದಿಷ್ಟೂ ಸಿಟ್ಟುಗೊಳ್ಳದೆ ಸಮಾಧಾನದಿಂದ ಪ್ರತಿಕ್ರಿಯಿಸುತ್ತಿದ್ದರು. “ಅವರು ಹಾಗೆಲ್ಲ ಮಾತನಾಡುವಾಗ ನಿಮಗೆ ಸಿಟ್ಟು ಬರುವುದಿಲ್ಲವಾ?” ಎಂದು ನಾನು ಕೇಳುತ್ತಿದ್ದೆ. “ಅಷ್ಟೆಲ್ಲ ದೂರ ಬಸ್‌ ಓಡಿಸಿ ಟೆನ್ಶನ್‌ ನಲ್ಲಿರುತ್ತಾರೆ, ಅವರಿಗೆ ಸಿಟ್ಟು ಬರುವುದು ಸಹಜ, ನಾವೂ ಸಿಟ್ಟಿನಿಂದ ಮಾತನಾಡಬಾರದು ಅಲ್ವಾ?” ಎನ್ನುವುದು ಅವರ ಉತ್ತರವಾಗಿರುತ್ತಿತ್ತು. ಒಮ್ಮೆ ಬಯ್ಯುವ ಧಾಟಿಯಲ್ಲಿ ಮಾತನಾಡಿದರೂ ಅಲ್ಲಿನ ಸಿಬ್ಬಂದಿಗಳಿಗೆ ಸದಾನಂದರ ಬಗ್ಗೆ ಅಷ್ಟೇ ಪ್ರೀತಿ ಮತ್ತು ಗೌರವವಿರುತ್ತಿತ್ತು. ಒಮ್ಮೆ ಟೆನ್ಶನ್‌ ಇಳಿದ ಮೇಲೆ, ʼತಪ್ಪಾಯಿತುʼ ಎನ್ನುವ ದನಿಯಲ್ಲಿಯೇ ಆ ಸಿಬ್ಬಂದಿಗಳು ಮಾತನಾಡುತ್ತಿದ್ದರು.

ನಾನು ಅಲ್ಲಿಗೆ ಬಂದಾಗಲೆಲ್ಲ ಒಂದು ಕಾಫಿ, ತಿಂಡಿ ಕೊಡಬೇಕು ಎಂದು ಸದಾನಂದರಿಗೆ ಅನಿಸುತ್ತಿತ್ತು. ಆದರೆ ಅಲ್ಲಿ ನೀರು ಹೊರತುಪಡಿಸಿದರೆ ಏನೂ ಇಲ್ಲ. ಹಾಗಾಗಿ ನನ್ನನ್ನು ಅವರ ಸೈಕಲ್‌ ನಲ್ಲಿ ಕೂರಿಸಿಕೊಂಡು, ಅನಂತಶಯನದ ದಿಕ್ಕಿನ ಚಡಾವಿನಲ್ಲಿ ಸೈಕಲ್‌ ತುಳಿಯುತ್ತಾ, ದ್ವಾರಕಾ ಹೋಟೆಲ್‌ ಪಕ್ಕದ ಒಂದು ಸಣ್ಣ ಉಪಹಾರ ಗೃಹಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿ ಪೋಡಿ, ಗೋಳಿ ಬಜೆ ಹೀಗೆ ಯಾವುದಾದರೂ ಒಂದು ತಿಂಡಿ ಕೊಡಿಸಿ ಕೊನೆಗೆ ಶೀರಾದಂತಹ ಒಂದು ತಿಂಡಿಯನ್ನೂ ಕಡ್ಡಾಯವಾಗಿ ತಿನ್ನಿಸುತ್ತಿದ್ದರು.

ಸಂಜೆ ಹೊತ್ತಿನಲ್ಲಿ ಅವರ ಆಫೀಸಿಗೆ ಹೋದರೆ, ತನ್ನ ಕೆಲಸ ಮುಗಿದ ಬಳಿಕ, ನನ್ನನ್ನು ಚತುರ್ಮುಖ ಬಸದಿಯ ಬೆಟ್ಟಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿ ಸಂಜೆಯ ಹೊತ್ತು ರಾಮಸಮುದ್ರ ಸರೋವರದ ಸುಂದರ ನೋಟ ಲಭಿಸುತ್ತದೆ. ಅಲ್ಲಿ ಕುಳಿತು ನಾವು ಸಾಹಿತ್ಯ, ಇತಿಹಾಸ, ಪ್ರಕೃತಿ ಹೀಗೆ ನಾನಾ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡುತ್ತಿದೆವು. ಸಂಜೆಯ ಹೊತ್ತು, ಚತುರ್ಮುಖ ಬಸದಿಯ ಬೆಟ್ಟ, ಎದುರುಗಡೆ ಚಾರಿತ್ರಿಕ ಮತ್ತು ಸುಮನೋಹರ ರಾಮಸಮುದ್ರ, ಜತೆಗೆ ಸಾಹಿತ್ಯದ ಚರ್ಚೆ, ಆ ಸುಖವನ್ನು ಬಣ್ಣಿಸುವುದಾದರೂ ಹೇಗೆ?

ಕಥಾಲೋಕದ ತಮ್ಮ ಪಯಣದ ಬಗ್ಗೆ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಅವರು ಹೇಳುತ್ತಿದ್ದರು. ಕೆಲವು ಓದುಗರು ಕತೆ ಕಾದಂಬರಿಯನ್ನು ಮೆಚ್ಚುವ ಜತೆಗೆ ಅದರ ಲೇಖಕರನ್ನೂ ಹಚ್ಚಿಕೊಂಡುಬಿಡುತ್ತಿದ್ದರು. ಅಂತಹ ಅನೇಕರು ಸದಾನಂದರಿಗೆ ಪತ್ರ ಬರೆಯುತ್ತಿದ್ದರು. ಅದರಲ್ಲಿ ಕೆಲವು ಹೆಣ್ಣುಮಕ್ಕಳ ಪ್ರೇಮ ಪತ್ರ ಮಾದರಿಯ ಪತ್ರಗಳೂ ಇರುತ್ತಿದ್ದವು. ಇಂತಹ ಸಂದರ್ಭವನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳುತ್ತಿದ್ದರೋ ಏನೋ? ಆದರೆ, ಸದಾನಂದರ ಸ್ವಭಾವ ಬಹಳ ಭಿನ್ನ. ಹಾಗೆ ಅವರು ಯಾರನ್ನೂ ಹತ್ತಿರಮಾಡಿಕೊಳ್ಳಲು ಬಯಸುತ್ತಿರಲಿಲ್ಲ. ಸಂಸಾರಸ್ಥನಾದ ಅವರಿಗೆ ಅಂತಹವುಗಳ ಅಪಾಯದ ಅರಿವು ಇತ್ತು.

ಒಮ್ಮೆ ಒಬ್ಬಾಕೆ ಪತ್ರ ಬರೆದು “ನನಗೆ ನಿಮ್ಮನ್ನು ಒಮ್ಮೆ ಭೇಟಿಯಾಗಲೇ ಬೇಕು” ಎಂದು ಅವರ ಬಳಿ ಹಟ ಹಿಡಿದಳು. ಬೇರೆ ಯಾರಾದರೂ ಆಗಿದ್ದರೆ ಹೆಣ್ಣೊಬ್ಬಳ ಇಂತಹ ನಿವೇದನೆಯನ್ನು ಹೇಗೆ ನಿಭಾಯಿಸುತ್ತಿದ್ದರೋ!. ಆದರೆ ಸದಾನಂದರು ಈ ವಿಷಯದಲ್ಲಿ ಚಾಣಾಕ್ಷ. ಮುಗ್ಧ ಮನಸಿನ ಆಕೆಯನ್ನು ನಿರಾಶೆಗೊಳಿಸಲೂ ಬಾರದು, ಭೇಟಿಯಾಗುವುದನ್ನೂ ತಪ್ಪಿಸಿಕೊಳ್ಳಬೇಕು. ಮಾರ್ಗ ಹೇಗೆ? ಸದಾನಂದರು ಅದನ್ನು ನಿರ್ವಹಿಸಿದ ರೀತಿ ವಿಶಿಷ್ಟವಾಗಿತ್ತು. ಅವರು ಆಕೆಗೆ ಹೀಗೆ ಒಂದು ಪತ್ರ ಬರೆದರು –“ನೋಡಿ, ನಾವು ಇದುವರೆಗೆ ಎಂದೂ ಭೇಟಿಯಾಗಿಲ್ಲ. ನನ್ನ ಕತೆ, ಕಾದಂಬರಿ ನಿಮಗೆ ಇಷ್ಟವಾಗಿದೆ. ನನ್ನ ಬರೆಹ ಓದಿ ನಿಮಗೂ ನನ್ನ ವ್ಯಕ್ತಿತ್ವದ ಬಗ್ಗೆ ಒಂದು ಸುಂದರ ಕಲ್ಪನೆ ಇರಬಹುದು. ನನಗೂ ಅಂತಹದೇ ಒಂದು ಸುಂದರ ಕಲ್ಪನೆ ನಿಮ್ಮ ಬಗೆಗಿದೆ. ನಾವು ಭೌತಿಕವಾಗಿ ಭೇಟಿಯಾದರೆ ಆಗ ಆ ಕಲ್ಪನೆಯ ಸೌಧ ಉರುಳಿ, ʼಅಯ್ಯೋ ಇವರು ಹೀಗಿದ್ದಾರಾ?ʼ ಎಂದು ಭ್ರಮನಿರಸನವೂ ಆಗಬಹುದಲ್ಲವೇ? ಅದಕ್ಕಿಂತ ಈಗಿನ ಕಲ್ಪನಾಪ್ರಪಂಚದಲ್ಲಿ ಇರುವುದು ಎಷ್ಟು ಚಂದ ಅಲ್ಲವಾ?” ಆಕೆಗೂ ಇದು ಸರಿ ಅನಿಸಿರಬೇಕು. ಮುಂದೆ ಭೇಟಿಯಾಗುವ ಒತ್ತಾಯದ ಪ್ರಸ್ತಾಪ ಬರಲಿಲ್ಲವಂತೆ. ಒಬ್ಬ ಕತೆಗಾರನ ಪ್ರತಿಭೆಗೆ ಮಾರುಹೋಗಿ ಆತನ ಹಿಂದೆ ಬೀಳುವ ಅನೇಕ ಓದುಗರ ಬಗ್ಗೆ ಇಂತಹ ಸ್ವಾರಸ್ಯಕರ ಕತೆಗಳು ಅವರಲ್ಲಿದ್ದವು.

ಬರೆಯುವ ಎಳೆಯರಿಗೆ ಉತ್ತೇಜನ

ನಾನು ಸದಾನಂದರನ್ನು ಭೇಟಿಯಾಗುವ ಕಾಲಕ್ಕೆ ಸಾಹಿತ್ಯ ರಚನೆಯ ಕೆಲಸ ಅಷ್ಟೇನೂ ಮಾಡುತ್ತಿರಲಿಲ್ಲ. ಅಂತಹ ಪ್ರತಿಭೆಯೂ ನನ್ನಲ್ಲಿರಲಿಲ್ಲ. ಉದಯವಾಣಿಯ ʼಚಿತ್ರಾವಳಿʼ ವಿಭಾಗದಲ್ಲಿ ನನ್ನ ಕೆಲವು ಚಿತ್ರ ಲೇಖನಗಳು ಪ್ರಕಟವಾಗುತ್ತಿದ್ದವು ಅಷ್ಟೇ (ಚಿತ್ರ ಮುಷ್ತಾಕ್‌ ಅಹಮದ್‌ ಅಥವಾ ಕೆ ಎಂ ಖಲೀಲ್‌ ರದು). ಆದರೆ ಸದಾನಂದರಿಗೆ ನನ್ನನ್ನು ಹೇಗಾದರೂ ಬರೆಯುವ ಕೆಲಸಕ್ಕೆ ಹಚ್ಚುವ ಬಯಕೆ (ನಾನು ಬರೆದ ಒಂದು ಪುಟ್ಟ ಕತೆಯನ್ನು ʼಬೆಕ್ಕಿನ ಕಣ್ಣುʼ ಪತ್ರಿಕೆಯಲ್ಲಿ ಅವರು ಪ್ರಕಟಿಸಿದ್ದರು ಕೂಡಾ). ʼಏನಾದರೂ ಬರೀರಿ, ಬರೀರಿʼ ಎನ್ನುತ್ತಿದ್ದರು. ʼನಾನು ಏನ್‌ ಬರೆಯಲಿ ಸಾರ್‌, ನಿಮ್ಮಷ್ಟು ಪ್ರತಿಭಾವಂತ ನಾನಲ್ಲʼ ಎನ್ನುತ್ತಿದ್ದೆ. ಬೇರೇನೂ ಬರೆಯಲಾಗದಿದ್ದರೂ ಕೆಲವು ಸಿನಿ ಮ್ಯಾಗಜಿನ್‌ ಗಳಲ್ಲಿ ಸಿನಿಮಾ ಮತ್ತಿತರ ವಿಷಯಗಳ ಬಗ್ಗೆ ಇಂಗ್ಲಿಷ್‌ ನಲ್ಲಿ ಆಕರ್ಷಕ ಲೇಖನಗಳಿರುತ್ತವೆ. ಅವನ್ನು ಆಧಾರವಾಗಿಸಿಕೊಂಡು ಪುಟ್ಟದೊಂದು ಲೇಖನ ಮಾಡಿ ಉದಯವಾಣಿಗೆ ಕಳುಹಿಸಿ ಎಂದು ಆಗ್ರಹಿಸುತ್ತಿದ್ದರು. ಇಂತಹ ಪ್ರಕಟಣೆಗಳಿಂದ ಬರೆಯುವ ಹುಮ್ಮಸ್ಸು ಬಂದು, ಬರೆಹ ಪ್ರಕಟವಾದರೆ, ಹುಮ್ಮಸ್ಸು ದುಪ್ಪಟ್ಟಾಗಿ ನಾವು ಮುಂದೆ ಒಳ್ಳೆಯ ಕೃತಿ ರಚನೆ ಮಾಡಲು ಸಾಧ್ಯವಾಗುವುದೂ ಇದೆ ಎನ್ನುವುದು ಅವರ ಯೋಚನೆ.

ಅವರ ಒತ್ತಾಯದ ಮೇರೆಗೆ ನಾನು ಉದಯವಾಣಿಗೆ ಕೆಲ ಸಿನಿ ವಿಮರ್ಶೆಗಳನ್ನು ಬರೆಯಲಾರಂಭಿಸಿದೆ. ಆಗಷ್ಟೇ ಬಿಡುಗಡೆಯಾದ ಗಿರೀಶ್‌ ಕಾರ್ನಾಡ್‌, ರೇಖಾ ಪ್ರಧಾನ ಪಾತ್ರದ ‌ʼಉತ್ಸವ್ʼ ಸಿನಿಮಾದ ಬಗ್ಗೆ ಬರೆದೆ. ಅದು ಉದಯವಾಣಿಯಲ್ಲಿ ಪ್ರಕಟವಾಯಿತು. ನನ್ನ ಏನೇ ಬರೆಹ ಪ್ರಕಟವಾದರೂ ಸದಾನಂದರು ಅತ್ಯಂತ ಖುಷಿಪಟ್ಟು ಇನ್ನಷ್ಟು ಬೆನ್ನು ತಟ್ಟುತ್ತಿದ್ದರು.

1982ರ ಆಗಸ್ಟ್‌ ನಲ್ಲಿ ನಾನು ಬಿ ಎಡ್‌ ಓದಲು ಉಡುಪಿಗೆ ತೆರಳಿದೆ. ಅಲ್ಲಿ ಒಂದು ವರ್ಷ ಬಿಡುವಿರದ ಅಧ್ಯಯನ ಚಟುವಟಿಕೆ ನಡೆಸಬೇಕಾಯಿತು. ಆ ಕಾರಣದಿಂದ ಸದಾನಂದರೊಂದಿಗಿನ ನನ್ನ ಭೇಟಿ ಕಡಿಮೆಯಾಯಿತು. 1983 ರ ಮೇಯಲ್ಲಿ ನನ್ನ ಬಿಎಡ್‌ ಓದು ಮುಗಿದು ಕಾರ್ಕಳಕ್ಕೆ ಮರಳಿದೆ. ಹೈಸ್ಕೂಲ್‌ ನಲ್ಲಿ ಶಿಕ್ಷಕನಾದೆ; ಕೇವಲ ಮೂರು ತಿಂಗಳ ಮಟ್ಟಿಗೆ. 1983 ರ ಆಗಸ್ಟ್‌ ನಲ್ಲಿ ಕಾರ್ಕಳವನ್ನು ಶಾಶ್ವತವಾಗಿ ತೊರೆದೆ. ಮಂಗಳೂರು ಸೇರಿದೆ. ಹಾಗಾಗಿ ಸದಾನಂದರ ಭೇಟಿ ಇನ್ನಷ್ಟು ಕಡಿಮೆಯಾಯಿತು. ಆದರೆ ಈಗ ನಾನು ಉದಯವಾಣಿಯಲ್ಲಿ ವ್ಯಾಪಕವಾಗಿ ಬರೆಯಲಾರಂಭಿಸಿದ್ದೆ. ಹಾಗೆಯೇ, ತುಷಾರ, ತರಂಗ, ಸುಧಾ, ಮುಂಗಾರು ಪತ್ರಿಕೆಗಳಲ್ಲಿಯೂ ನನ್ನ ಲೇಖನಗಳು ಪ್ರಕಟವಾಗುತ್ತಿದ್ದವು. ನನ್ನ ಈ ಬರೆವಣಿಗೆಗಳೆಲ್ಲವೂ ಅವರ ಕಣ್ಣಿಗೆ ಬೀಳುತ್ತಿದ್ದವು. ದೂರದಿಂದಲೇ ನನ್ನ ಬೆಳವಣಿಗೆಯನ್ನು ಕಂಡು ಖುಷಿಪಡುತ್ತಿದ್ದರು. ಕೆಲವೊಮ್ಮೆ ಫೋನ್‌ ಮಾಡಿ ಮೆಚ್ಚುಗೆಯಿಂದ ಮಾತನಾಡುತ್ತಿದ್ದರು. ನನ್ನ ಕಾರ್ಕಳದ ಭೇಟಿ ತೀರಾ ವಿರಳವಾಗಿತ್ತು. ಅಲ್ಲಿ ನಮ್ಮ ಮನೆಯೂ ಇಲ್ಲವಾಗಿತ್ತು. ಆದರೂ, ನಾನು ಕಾರ್ಕಳಕ್ಕೆ ಭೇಟಿ ನೀಡಿದಾಗಲೆಲ್ಲ ಸದಾನಂದರನ್ನು ಕಾಣುತ್ತಿದ್ದೆ. ಅವರು ಯಥಾ ಪ್ರಕಾರ ಇತ್ತೀಚಿನ ತಮ್ಮ ಕೃತಿಯ ಬಗ್ಗೆ ಮಾತನಾಡುತ್ತಿದ್ದರು, ಪ್ರೀತಿಯಿಂದ ಹೊಟೇಲಿಗೆ ಒಯ್ದು ತಿಂಡಿ ತಿನ್ನಿಸಿ ಕಳುಹಿಸುತ್ತಿದ್ದರು.

ಸದಾನಂದರು ಎಂದೂ ತಮ್ಮ ಕುಟುಂಬದ ಬಗ್ಗೆ ಹೇಳಿಕೊಳ್ಳುತ್ತಿರಲಿಲ್ಲ. ನಮ್ಮ ಕುಟುಂಬ, ಖಾಸಗಿ ಬದುಕಿನ ಬಗ್ಗೆ ಅವರು ಕೇಳುತ್ತಿದ್ದುದೂ ಇಲ್ಲ. ಈಗ್ಗೆ ಸುಮಾರು ಹನ್ನೆರಡು ವರ್ಷಗಳ ಹಿಂದೆ ಅವರಿಗೊಮ್ಮೆ ಫೋನ್‌ ಮಾಡಿದೆ. ಅವರು ಬೆಂಗಳೂರಿನಲ್ಲಿ ಯಾವುದೋ ಒಂದು ಬಸ್‌ ಸ್ಟಾಂಡ್‌ ಬಳಿ ಇದ್ದರು. ತಮ್ಮ ಮಗಳ ಸಂಸಾರದಲ್ಲಿ ಆದ ಏನೋ ಬಿಕ್ಕಟ್ಟಿನ ಬಗ್ಗೆ ಹೇಳಿಕೊಂಡರು. ಆಮೇಲೆ ನನಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನನ್ನ ಮೊಬೈಲ್‌ ಕೆಟ್ಟು ಹೋದಾಗ ಅವರ ಫೋನ್‌ ನಂಬರ್‌ ಕೂಡಾ ಹೋಯಿತು. ಅವರು ತಮ್ಮ ಉದ್ಯೋಗದಿಂದ ನಿವೃತ್ತರಾಗಿರುವುದಂತೂ ಖಂಡಿತಾ. ಬಳಿಕ ಅವರು ತಮ್ಮ ಮೂಲ ಊರು ಹೆಬ್ರಿಗೆ ಮರಳಿರಲೂ ಸಾಕು. ಅವರ ಬಗ್ಗೆ ಗೊತ್ತಿರುವವರು ಕಾರ್ಕಳದಲ್ಲಿರುವುದು ಕಡಿಮೆ. ಆದರೂ ಮಾಹಿತಿ ಕಲೆ ಹಾಕಲು ಯತ್ನಿಸುತ್ತಲೇ ಇದ್ದೆ. ಯಾರಲ್ಲಿ ಕೇಳುವುದು ಎಂದು ಹೀಗೇ ಯೋಚಿಸುತ್ತಿದ್ದಾಗ ಫಕ್ಕನೆ ಕತೆಗಾರ, ಜಾನಪದ ಸಂಶೋಧಕ, ತುಳು ವಿದ್ವಾಂಸ ಮುದ್ದು ಮೂಡುಬೆಳ್ಳೆ ನೆನಪಾದರು. ಅವರಿಗೂ ಸದಾನಂದರ ಪರಿಚಯವಿತ್ತು. ಮುದ್ದು ಅವರಿಗೆ ವಾಟ್ಸಪ್‌ ಸಂದೇಶ ರವಾನಿಸಿದೆ. ಅವರು ಮಹಾರಾಷ್ಟ್ರ, ಮಧ್ಯಪ್ರದೇಶದ ಯಾವುದೋ ಗಡಿಭಾಗದಲ್ಲಿದ್ದರು. ಇಂದು ಅವರ ಫೋನ್ ಬಂತು. ಸದಾನಂದರು ತೀರಿಕೊಂಡು ಸುಮಾರು ಹತ್ತು ವರ್ಷಗಳೇ ಕಳೆದುಹೋದವು ಎಂದರು. ಮನಸು ಮಮ್ಮಲ ಮರುಗಿತು.

ನಮ್ಮ ಸಾರಸ್ವತ ಲೋಕದಲ್ಲಿ ಕೂಡಾ ಅನೇಕ ರೀತಿಯ ಭೇದಭಾವಗಳಿವೆ. ಅದೊಂದು ರೀತಿಯ ಅಸ್ಪೃಶ್ಯತಾ ಆಚರಣೆ ಎಂದರೂ ತಪ್ಪಾಗದು. ಸಾಮಾಜಿಕ, ಸಾಂಸಾರಿಕ ವಿಷಯಗಳನ್ನು ಆಧರಿಸಿ ಕತೆ ಕಾದಂಬರಿ ಬರೆಯುವ ಜನಪ್ರಿಯ ಕಾದಂಬರಿಕಾರರು ಇಂತಹ ವಿಷಯದಲ್ಲಿ ದೊಡ್ಡ ಮಟ್ಟಿನ ಅನ್ಯಾಯಕ್ಕೆ ಒಳಗಾಗಿದ್ದಾರೆ. ಅವರು ಸಾಹಿತಿಗಳೇ ಅಲ್ಲ ಎಂದು ಅವರನ್ನು ಕಡೆಗಣಿಸಿದ ಉದಾಹರಣೆಗಳೂ ಇವೆ. ಆದರೆ ಸದಾನಂದರಂತಹ ಕಾದಂಬರಿಕಾರರ ಕೃತಿಗಳನ್ನು ಓದುವಾಗ ಅಂತಹ ಕೃತಿ ರಚನೆ ಮಾಡಲು ಅದೆಂತಹ ಪ್ರತಿಭೆ, ಪರಿಶ್ರಮ ಬೇಕು, ಅಲ್ಲೂ ಕಸುಬುದಾರಿಕೆ ಬೇಕೇ ಬೇಕಾಗುತ್ತದೆ, ಅಲ್ಲೂ ಸಾಮಾಜಿಕ ಸಂದೇಶಗಳು ಇದ್ದೇ ಇರುತ್ತವೆ, ಅವು ಇತರ ಪ್ರಸಿದ್ಧರ ಕತೆ ಕಾದಂಬರಿಗಳಿಗಿಂತ ಕಡಿಮೆಯೇನೂ ಅಲ್ಲ ಎನ್ನುವುದು ವೇದ್ಯವಾದೀತು.

ಪ್ರೋತ್ಸಾಹ, ಪ್ರೀತಿಯ ಒತ್ತಾಯದ ಮಟ್ಟಿಗೆ ನನಗೆ ʼಬರೆವಣಿಗೆಯ ಗುರುʼ ಎಂದು ಯಾರಾದರೂ ಇದ್ದರೆ, ಅದು ʼಹಿತ್ತಲಗಿಡ ಮದ್ದಲ್ಲʼ ಎಂಬಂತೆ ಹೊರಗೆಲ್ಲ ಖ್ಯಾತರಾಗಿ, ಊರಲ್ಲಿ ತೀರಾ ಅಪರಿಚಿತನಾಗಿಯೇ ಉಳಿದ ಅದ್ಭುತ ಕಥನ ಪ್ರತಿಭೆ, ಎಳೆಯರನ್ನು ಬರೆಯಲು ಸದಾ ಪ್ರೋತ್ಸಾಹಿಸುವ ʼಸದಾನಂದʼರು.

ಶ್ರೀನಿವಾಸ ಕಾರ್ಕಳ

ಸಮಾಜ ಚಿಂತಕರು

ಇದನ್ನೂ ಓದಿ- https://kannadaplanet.com/its-a-big-story-autobiography-series-24/ ಅದೊಂದು ದೊಡ್ಡ ಕತೆ –ಆತ್ಮಕಥನ ಸರಣಿ- 24 | ಸಾಹಿತ್ಯದ ಹಾದಿಯಲ್ಲಿ ಸಣ್ಣ ಹೆಜ್ಜೆಗಳು

More articles

Latest article

Most read