ಇಂದಿನ ಕರ್ನಾಟಕದ ಘನ ಮಂತ್ರಿಮಂಡಲದಲ್ಲಿ ಯಾವ ಒಬ್ಬ ಮಹಿಳೆಯೂ ಇಲ್ಲದಿರುವುದು ಮಹಿಳೆಯರಾದ ನಮಗೆ ನಿರಾಸೆಯನ್ನು ಉಂಟುಮಾಡಿದೆ. ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಲಿಂಗತ್ವ ರಾಜಕಾರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಮಹಿಳಾ ಪ್ರತಿನಿಧೀಕರಣವನ್ನು ತನ್ನ ಮುಖ್ಯ ಅಜೆಂಡಾಗಳಲ್ಲಿ ಒಂದು ಎಂಬುದನ್ನು ಇದುವರೆಗೆ ತೋರಿಸಿಕೊಟ್ಟ ಆಡಳಿತ ವ್ಯವಸ್ಥೆ ಸದ್ಯದ ಪರಿಸ್ಥಿತಿಯಲ್ಲಿ ಲಿಂಗತ್ವ ರಾಜಕಾರಣ ಮಾಡಿ ಮಹಿಳೆಯರನ್ನು, ಸಮಾನತೆಯ ಸಿದ್ಧಾಂತವನ್ನು ಮೂಲೆಗುಂಪು ಮಾಡುತ್ತಿದೆಯೇ?- ನಾಗರೇಖಾ ಗಾಂವಕರ, ಉಪನ್ಯಾಸಕರು.
“ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ” ಎಂಬ ಜಪ ಮಾಡುತ್ತಾ ಮಹಿಳಾ ಸಾಮರ್ಥ್ಯವನ್ನು ಹಳದಿ ಕಣ್ಣುಗಳಿಂದಲೇ ನೋಡುತ್ತಾ, ಅರೆ ತೂಕದ ಪೆಟ್ಟಿಗೆಯಲ್ಲಿ ತೂಗುತ್ತಾ ಬಂದ ಭಾರತದಂತಹ ದೇಶದಲ್ಲಿ ಮಹಿಳೆಯನ್ನು ಸಂಪೂರ್ಣ ಸಮಾನತೆಯಿಂದ ನೋಡುವ ಜಾಯಮಾನ ಮತು ಪ್ರವೃತ್ತಿಗಳು ಇಂದಿಗೂ ಬಂದಿಲ್ಲ. ಇದಕ್ಕೆ ಇಂಬು ಕೊಡುವಂತೆ ಸಾರ್ವಜನಿಕ ವಲಯಗಳಲ್ಲಿ ಕಾರ್ಯಕ್ಷೇತ್ರಗಳಲ್ಲಿ ಮಹಿಳೆಯರನ್ನು ಅವರ ಬೌದ್ಧಿಕ ಸಾಮರ್ಥ್ಯವನ್ನು ಸದಾ ಒರೆಗೆ ಹಚ್ಚುವ ಇಲ್ಲವೇ ಟೀಕೆಗಳಿಂದ ಮೂದಲಿಸುವ ಪ್ರವೃತ್ತಿಗಳು ಆಡಳಿತ ಕ್ಷೇತ್ರದಿಂದ ಹಿಡಿದು ಐಟಿಬಿಟಿ, ವೈದ್ಯಕೀಯ, ಕೃಷಿ, ಇತ್ಯಾದಿಯಾಗಿ ಗುಮಾಸ್ತ ಕೆಲಸದವರೆಗೂ ಅವಗಣನೆಗೆ ಗುರಿಮಾಡಲಾಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆಯಾಗಿ ಇಂದಿನ ಕರ್ನಾಟಕದ ಘನ ಮಂತ್ರಿಮಂಡಲದಲ್ಲಿ ಯಾವ ಒಬ್ಬ ಮಹಿಳೆಯೂ ಇಲ್ಲದಿರುವುದು ಮಹಿಳೆಯರಾದ ನಮಗೆ ನಿರಾಸೆಯನ್ನು ಉಂಟುಮಾಡಿದೆ. ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಲಿಂಗತ್ವ ರಾಜಕಾರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಮಹಿಳಾ ಪ್ರತಿನಿಧೀಕರಣವನ್ನು ತನ್ನ ಮುಖ್ಯ ಅಜೆಂಡಾಗಳಲ್ಲಿ ಒಂದು ಎಂಬುದನ್ನು ಇದುವರೆಗೆ ತೋರಿಸಿಕೊಟ್ಟ ಆಡಳಿತ ವ್ಯವಸ್ಥೆ ಸದ್ಯದ ಪರಿಸ್ಥಿತಿಯಲ್ಲಿ ಲಿಂಗತ್ವ ರಾಜಕಾರಣ ಮಾಡಿ ಮಹಿಳೆಯರನ್ನು, ಸಮಾನತೆಯ ಸಿದ್ಧಾಂತವನ್ನು ಮೂಲೆಗುಂಪು ಮಾಡುತ್ತಿದೆಯೇ? ಪ್ರಶ್ನೆ ಉದ್ಭವಿಸಿದೆ.
ರಾಜಕೀಯ ರಂಗದಲ್ಲಿ ಶೇಕಡಾ 33ರಷ್ಟು ಅವಕಾಶಗಳಿದ್ದಾಗಲೂ ಸ್ತ್ರೀಯರ ತೊಡಗಿಸಿಕೊಳ್ಳುವಿಕೆ ಗಣನೀಯವಾಗಿ ಕಡಿಮೆ. ಕಾರಣ ಅಲ್ಲಿ ಹೆಂಗಳೆಯರ ಮೇಲೆ ನಡೆಯಬಹುದೆನ್ನುವ ದೌರ್ಜನ್ಯಗಳ ಭೀತಿ. ಹೊರ ಪ್ರಪಂಚದಲ್ಲಿ ತೊಡಗಿಸಿ ಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಪರಪುರುಷನೊಂದಿಗೆ ವ್ಯವಹರಿಸಬೇಕಾದ ಸಂದರ್ಭಗಳಲ್ಲಿ ಆಕೆಯ ನೈತಿಕತೆಯ ಪ್ರಜ್ಞೆ, ಅದಕ್ಕೆ ಸಂಪ್ರದಾಯಸ್ಥ ಸಮಾಜದ ಕೊಂಕುನುಡಿಗಳು ಆಕೆಯ ಸಾಮರ್ಥ್ಯದ ಹೊರತಾಗಿಯೂ ಆಕೆಯಲ್ಲಿ ನಕಾರಾತ್ಮಕ ನಿಲುವನ್ನು ಬೆಳೆಸಿಬಿಡುತ್ತವೆ. ಇದರಿಂದ ಮೂಲಭೂತವಾದಿ ದೋರಣೆಗಳುಳ್ಳ ಕೌಟುಂಬಿಕ ಹೆಣ್ಣುಗಳು ತಮ್ಮ ವ್ಯಕ್ತಿತ್ವಕ್ಕೆ ಕುಂದುಂಟಾಗುವ ಭಯದಿಂದ, ಜನರ ಅವಹೇಳನಕರ ಮಾತುಗಳಿಗೆ ಹೆದರಿ ರಾಜಕೀಯ ಪ್ರಪಂಚದಲ್ಲಿ ಇಲ್ಲ ಸಾಮಾಜಿಕ ಬದುಕಿನಲ್ಲಿ ಸ್ವತಂತ್ರವಾಗಿ ತೊಡಗಿ ಕೊಳ್ಳುವುದಿಲ್ಲ.
ಆದರೆ ಈ ಎಲ್ಲ ಕಟ್ಟಳೆಗಳಿಂದ ತಮ್ಮನ್ನು ಬಿಡಿಸಿಕೊಂಡು, ಸಾಮಾಜಿಕವಾಗಿ, ರಾಜಕೀಯವಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಇಂದಿಗೆ ಹೆಚ್ಚಿದೆ. ಆದರೂ ಅದು ಪುರುಷರ ಪ್ರತಿಶತದ ಅನುಪಾತಕ್ಕೆ ಸಮಾನವಾಗಿಲ್ಲ, ಅಷ್ಟೇ ಅಲ್ಲ ಇದುವರೆಗೂ ಬಹಳ ಸೀಮಿತ ಸಂಖ್ಯೆಯಲ್ಲಿಯೇ ಇದೆ ಎಂಬುದನ್ನು ನಾವು ಒಪ್ಪಲೇಬೇಕು. ಇಂತಹ ಸಂದರ್ಭದಲ್ಲಿ ಮಹಿಳಾ ಸಬಲೀಕರಣ, ಮಹಿಳಾ ಪ್ರತಿನಿಧೀಕರಣ, ಸ್ತ್ರೀ ಸಮಾನತೆ ಇತ್ಯಾದಿ ನೆಲೆಯಲ್ಲಿ ಹೊಸ ಹೊಸ ಯೋಜನೆಗಳನ್ನು ಯೋಚನೆಗಳನ್ನು ಹಾಕಿಕೊಳ್ಳುವ ಸರಕಾರಗಳು ತಮ್ಮ ಮಂತ್ರಿಮಂಡಲದಲ್ಲಿ ಮಾತ್ರ ಮಹಿಳೆಯರ ಭಾಗವಹಿಸುವಿಕೆಯನ್ನು ಏಕೆ ನಿಯಂತ್ರಿಸುತ್ತವೆ? ಎಂಬ ಪ್ರಶ್ನೆ ಪ್ರಜ್ಞಾವಂತ ಸುಶಿಕ್ಷಿತ ಸ್ತ್ರೀ ಸಮುದಾಯವನ್ನು ಕಾಡುತ್ತಿದೆಯಷ್ಟೇ ಅಲ್ಲದೆ ಕೆಣಕುತ್ತಿದೆ ಕೂಡಾ. ಮಹಿಳಾ ಮೀಸಲಾತಿಗೆ ನಮ್ಮ ಸರಕಾರಗಳು ಏಕೆ ಹಿಂದೇಟು ಹಾಕುತ್ತಿವೆ?. ಇದು ಪುರುಷ ಮನಸ್ಥಿತಿಯ ಇನ್ನೊಂದು ಮುಖವೇ?

ರಾಜಕೀಯ ರಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತು ಮೀಸಲಾತಿ ಕುರಿತಂತೆ ಸಿಂಹಾವಲೋಕನ ಮಾಡಿದರೆ ಅಂದಿನ ಕಾಂಗ್ರೆಸ್ ಸರಕಾರಗಳು ಮಹಿಳಾ ಪ್ರಾತಿನಿಧ್ಯವನ್ನು ಪೋಷಿಸಿಕೊಂಡು ಬಂದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಸ್ವತಂತ್ರ ಭಾರತದ ಮೊಟ್ಟಮೊದಲ ಕೇಂದ್ರ ಸಚಿವ ಸಂಪುಟದಲ್ಲಿ ರಾಜಕುಮಾರಿ ಅಮೃತ್ ಕೌರ ಆರೋಗ್ಯ ಸಚಿವರಾಗಿದ್ದರು. ಶೈಕ್ಷಣಿಕವಾಗಿ ಅಂದಿನ ಮಹಿಳೆಯರ ಸ್ಥಾನಮಾನ ಬಹಳ ಶೋಚನೀಯವಾಗಿದ್ದರೂ, ರಾಜಕೀಯವಾಗಿ ಮಹಿಳೆಯರು ತಮ್ಮನ್ನು ಇನ್ನೂ ಸಕ್ರಿಯವಾಗಿ ತೊಡಗಿಸಿ ಕೊಂಡಿರಲಿಲ್ಲವಾಗಿದ್ದರೂ, ಸುಶಿಕ್ಷಿತ ಮತ್ತು ರಾಜಕೀಯ ಇಚ್ಛಾಶಕ್ತಿಯ ಮಹಿಳೆಯರು ತೀರಾ ಕಡಿಮೆ ಇದ್ದಾಗಲೂ ಅಂದಿನ ಕೇಂದ್ರ ಮಂತ್ರಿಮಂಡಲದಲ್ಲಿ ಮಹಿಳೆಯೊಬ್ಬರು ಸ್ಥಾನ ಪಡೆದಿದ್ದು ಹೆಮ್ಮೆಯ ಸಂಗತಿ. ನೆಹರೂರವರ ಸರಕಾರ ಮಹಿಳಾ ಪ್ರತಿನಿಧೀಕರಣವನ್ನು ಎತ್ತಿ ಹಿಡಿದ ಹಿರಿತನಕ್ಕೆ ಸಾಕ್ಷಿ. ಕರ್ನಾಟಕದಲ್ಲಿ 1985ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅಬ್ದುಲ್ ನಜೀರ್ ಅವರ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 25 ರಷ್ಟು ಮಹಿಳಾ ಮೀಸಲಾತಿಗೆ ಅಂಗೀಕಾರ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿತ್ತು. ಹಾಗೇ 1987ರಲ್ಲಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ರಾಜೀವ್ ಗಾಂಧಿಯವರ ಕಾಂಗ್ರೆಸ್ ಸರಕಾರದಿಂದ ಮೊಟ್ಟ ಮೊದಲ ಬಾರಿಗೆ ಮಹಿಳೆಯರ ಪ್ರಾತಿನಿಧ್ಯವನ್ನು ಎತ್ತಿ ಹಿಡಿಯಲು ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವರವರ ನೇತೃತ್ವದಲ್ಲಿ 14 ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿತ್ತು. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರವು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಇದನ್ನು ಲೋಕಸಭೆ ಅಂಗೀಕರಿಸಿದರೂ ರಾಜ್ಯಸಭೆಯಲ್ಲಿ ವಿಫಲವಾಯಿತು. ಆದರೆ 1992ರಲ್ಲಿ ಇದೇ ಕಾಂಗ್ರೆಸ್ ಸರಕಾರವು ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಅವಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಕಡ್ಡಾಯಗೊಳಿಸುವ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಿತು. ಮತ್ತು 1993ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲು ಅಲ್ಲಿಯೂ ಶೇ. 33 ರಷ್ಟು ಮೀಸಲಾತಿ ಕ್ರಮವನ್ನು ಪಾಲಿಸುವುದನ್ನು ಈ ಕಾಯ್ದೆ ಅಂಗೀಕರಿಸಿತ್ತು. 2009ರಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸಂಪುಟವು ಶೇ. 33ರಷ್ಟಿದ್ದ ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಇದು ಕರ್ನಾಟಕದಲ್ಲಿ 2010ರಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಅವಧಿಯಲ್ಲಿ ಅನುಮೋದನೆಗೊಂಡಿತು. ಇದರಿಂದ ಹಳ್ಳಿಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಪುರುಷರಿಗೆ ಸಮಾನವಾಗಿ ಅಧಿಕಾರವನ್ನು ಹೊಂದಿದ್ದಾರೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಪುರುಷರಿಗಿಂತ ಸಮರ್ಪಕವಾಗಿ, ವ್ಯವಸ್ಥಿತವಾಗಿ ಆಡಳಿತಗಳನ್ನು ನಡೆಸುತ್ತಿದ್ದಾರೆ. ಆದರೆ ಇದೇ ಮಾದರಿಯಲ್ಲಿ ಲೋಕ ಸಭೆ ಮತ್ತು ವಿಧಾನ ಸಭೆಗಳಲ್ಲಿ ಮೀಸಲಾತಿ ಕಲ್ಪಿಸುವ ಪ್ರಯತ್ನಗಳು ಹಲವಾರು ಬಾರಿ ನಡೆದು 2023ರಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆತರೂ, ಕ್ಷೇತ್ರ ಮರು ವಿಂಗಡಣೆ ನೆಪದಲ್ಲಿ ಈ ವಿಧೇಯಕನ್ನು ಜಾರಿಮಾಡಲಾಗುತ್ತಿಲ್ಲ. ಇದು ಒಂದು ನೆಪವಷ್ಟೇ. ಇದರ ಹಿಂದಿನ ಸತ್ಯಗಳು ಬೇರೆಯೇ ಇರುವುದು ಕೂಡಾ ಅಷ್ಟೇ ಸತ್ಯ. ಪುರುಷ ನಾಯಕತ್ವಕ್ಕೆ ಪೆಟ್ಟು ಬೀಳುವ ಸಂಭವನೀಯತೆ, ಹತ್ತಾರು ವರ್ಷಗಳ ಕಾಲ ಸ್ವಂತ ಕ್ಷೇತ್ರದಲ್ಲಿ ಬೆಳೆದ ನಾಯಕನೊಬ್ಬ ಮಹಿಳಾ ಮೀಸಲಾತಿಯಿಂದ ಅಧಿಕಾರ ವಂಚಿತನಾಗುವ ಭೀತಿ ಹೀಗೆ ಹತ್ತಾರು ಕಾರಣಗಳಿವೆ. ಅಂದರೆ ಇಂದಿಗೂ ನಮ್ಮ ಪುರುಷಶಾಹಿ ಮನಸ್ಥಿತಿಯು ಬದಲಾಗದೇ ಇರುವುದು ಬೆಳಕಿನಷ್ಟೇ ಸತ್ಯ.
ಆಧುನಿಕ ಯುಗದಲ್ಲಿ ಮಹಿಳಾ ಶಿಕ್ಷಣದ ಮಟ್ಟ ಪ್ರತಿಶತ ಶೈಕ್ಷಣಿಕ ಸಾಧನೆಗಳಲ್ಲಿ ಹೆಣ್ಣು ಗಂಡಿಗೆ ಸಮಾನವಾಗಿ ತನ್ನನ್ನು ಸಜ್ಜುಗೊಳಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವಳನ್ನು ಕಡೆಗಣಿಸಿರುವುದು ಮಹಿಳಾ ಮನಸ್ಸುಗಳನ್ನು ಮಹಿಳಾ ಸಂಘಟನೆಗಳನ್ನು ಸಂವೇದನಾಶೀಲರನ್ನು ಚಿಂತಿಸುವಂತೆ ಮಾಡಿದೆ. 2023ರ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆ ಆದ 10 ಜನ ಮಹಿಳೆಯರಲ್ಲಿ ಕಾಂಗ್ರೆಸ್ ಪಕ್ಷದ ಒಟ್ಟು ನಾಲ್ಕು ಮಹಿಳೆಯರು ಆಯ್ಕೆಯಾಗಿದ್ದರು. ಮತ್ತು ಅವರೆಲ್ಲರೂ ಮಂತ್ರಿ ಸ್ಥಾನಕ್ಕೆ ಯೋಗ್ಯರೂ ಆಗಿದ್ದರು. ಪುರುಷ ಪ್ರತಿನಿಧಿಗಳಿಗಿಂತ ಹೆಚ್ಚಿನ ಬೆಂಬಲ ಮತ್ತು ಸಾಮರ್ಥ್ಯ ಅವರದಾಗಿದ್ದರೂ ಕೇವಲ ಒಬ್ಬ ಮಹಿಳೆಗೆ ಅವಕಾಶ ನೀಡಲಾಗಿತ್ತು. ಆ ಮೂಲಕ ಕನಿಷ್ಠ ಮಹಿಳಾ ಪ್ರಾತಿನಿಧ್ಯವನ್ನು ಎತ್ತಿ ಹಿಡಿಯಲಾಗಿತ್ತು. ಆದರೆ ಇಂದು ಎರಡನೇ ಅವಧಿಯ ಮಂತ್ರಿಮಂಡಲದ ಪುನರಾಚನೆಯ ಸಂದರ್ಭದಲ್ಲಿ ಸರಕಾರ ತನ್ನ ಸಿದ್ಧಾಂತವನ್ನು ಗಾಳಿಗೆ ತೂರಿ ಮೊದಲ ಬಾರಿಗೆ ಸಂಪೂರ್ಣ ಪುರುಷ ಸಚಿವ ಸಂಪುಟವನ್ನು ರಚಿಸಿದೆ. ಪ್ರಸ್ತುತ ಸರಕಾರವು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ತನ್ನನ್ನು ಈವರೆಗೆ ಗುರುತಿಸಿಕೊಂಡಿದ್ದು, ಈ ಹಂತದಲ್ಲಿ ಮಹಿಳಾ ವಿರೋಧಿ ನಡೆಯಿಂದ ಸಾರ್ವಜನಿಕರ ಮತ್ತು ಸ್ತ್ರೀ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ತನ್ನ ಸಾಮರ್ಥ್ಯ ಪ್ರತಿಪಾದನೆಯಲ್ಲಿ ಮಹಿಳೆಯರು ಎದುರಿಸುತ್ತಿರುವ ಅಡೆತಡೆಗಳನ್ನು ಗಮನಿಸಿದರೆ ಇದು ಪುರುಷ ಮನಸ್ಥಿತಿಯ ಪ್ರಜ್ಞಾಪೂರ್ವಕ ನಡೆಯೆನಿಸುತ್ತದೆ. ಸದಾ ರಾಜಕೀಯದಿಂದ ದೂರವೇ ಉಳಿದಿದ್ದ ಮಹಿಳೆಯರು ನಿಧಾನಕ್ಕೆ ರಾಜಕೀಯದಲ್ಲೂ ತಮ್ಮ ಸಾಮರ್ಥ್ಯವನ್ನು ನಿರೂಪಿಸತೊಡಗಿದ್ದರು. ಆದರೆ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸದೇ ಇರುವ ಹುನ್ನಾರದ ಹಿಂದೆಯೂ ಪುರುಷ ಮನಸ್ಥಿತಿಯ ಕುತಂತ್ರಗಳು ಕೆಲಸ ಮಾಡಿವೆ. ಇನ್ನು ಕರ್ನಾಟಕದ ವಿಚಾರದಲ್ಲಿ ಇಡೀ ರಾಜ್ಯದಲ್ಲಿ ಸಮರ್ಥವಾಗಿ ಮಂತ್ರಿಗಿರಿಯನ್ನು ನಿಭಾಯಿಸಬಲ್ಲ ಒಬ್ಬಳೇ ಒಬ್ಬ ಮಹಿಳಾ ಶಾಸಕರು ಇಲ್ಲವೇ? ಅಥವಾ ಆಡಳಿತ ವ್ಯವಸ್ಥೆ ಪುರುಷ ಪ್ರಾತಿನಿಧ್ಯವನ್ನೇ ಪ್ರತಿನಿಧಿಸುತ್ತಾ, ಮಹಿಳೆಯ ಸ್ಥಾನಮಾನಗಳನ್ನು ಪುನಃ ಮೂಲೆಗೆ ತಳ್ಳುತ್ತಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಆದರೂ ಎರಡು ದಿನದ ಹಿಂದೆಯಷ್ಟೇ ವಿಧಾನಪರಿಷತ್ತಿಗೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿರುವ ಗಾಯತ್ರಿ ಶಾಂತೇಗೌಡ ಒಂದು ಆಶಾವಾದವಾಗಿದ್ದಾರೆ. ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತವೆಯಾದ್ದರಿಂದ ಮುಂದಿನ ಹಂತದಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ನೀಡುವಲ್ಲಿ ಆಡಳಿತ ವ್ಯವಸ್ಥೆ ಮುಂದಾಗಬಹುದೇ? ಸಮಾನತೆ ಮತ್ತು ಆಡಳಿತದ ನಾಯಕತ್ವದಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಭಾವ್ಯ ಆಶಾವಾದವನ್ನು ಮಹಿಳೆಯರು ಹೊಂದಬಹುದೇ? ಕಾದು ನೋಡೋಣ..
ನಾಗರೇಖಾ ಗಾಂವಕರ
ಕನ್ನಡದ ಸೃಜನಶೀಲ ಬರಹಗಾರ್ತಿ, ಅನುವಾದಕಿ ಮತ್ತು ಅಂಕಣಕಾರ್ತಿ.
ಇದನ್ನೂ ಓದಿ- ಜೆನ್ ಝೀ ಗಾಯಕ್ಕೆ ಭಾಗವತರ ಮುಲಾಮು


