ಬೆಂಗಳೂರು: ಕಡಿಮೆ ಬೆಲೆಯ ಔಷಧಿಗಳನ್ನು ದುಬಾರಿ ಬೆಲೆಯ ಜೀವ ರಕ್ಷಕ ಬ್ರಾಂಡ್‌ಗಳ ಹೆಸರಿನಲ್ಲಿ ಮರುಲೇಬಲ್ ಮಾಡುತ್ತಿದ್ದ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳಿಗೆ ಸೇರಿದ 16 ಔಷಧ ಪರವಾನಗಿಗಳನ್ನು ಎಫ್ಡಿಎ ರದ್ದುಗೊಳಿಸಿದೆ.
ನಕಲಿ ಔಷಧ ಜಾಲವನ್ನು ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಪತ್ತೆ ಹಚ್ಚಿ, ರಾಜ್ಯದ 16 ಫಾರ್ಮಸಿಗಳ ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅಧಿಕೃತ ಮಾಹಿತಿ ನೀಡದರು.
ನಕಲಿ ಔಷಧಿಯ ದೊಡ್ಡ ಜಾಲವನ್ನು ಪತ್ತೆ ಹಚ್ಚಿದ್ದೇವೆ. ಎಸ್ ಐಟಿ ವರದಿ ಬಳಿಕ ಮಾಹಿತಿ ಬಹಿರಂಗಗೊಳಿಸುತ್ತೇವೆ. ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಸುಮ್ಮನೆ ಬಿಡಲ್ಲ. ಕೆಲ ಅಂತಾರಾಷ್ಟ್ರೀಯ ಕಂಪನಿಗಳ ಔಷಧಿ ಕುಡ ಸೀಜ್ ಆಗಿದೆ. ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಬಿಡದಿಯ ಫಾರ್ಮ್‌ಹೌಸ್ ಒಂದರ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು 5.05 ಕೋಟಿ ರೂಪಾಯಿ ಮೌಲ್ಯದ ಔಷಧಗಳು, ಯಂತ್ರೋಪಕರಣಗಳು ಮತ್ತು ಮುದ್ರಣ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿತರಣಾ ಜಾಲಕ್ಕೆ ಸಂಬಂಧಿಸಿದ ಔಷಧ ಚಿಲ್ಲರೆ ಮತ್ತು ಸಗಟು ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಲಾಗಿದೆ. ಅಲ್ಲದೆ, ಪೂರೈಕೆ ಜಾಲದ ಕುರಿತು ವಿಶೇಷ ತನಿಖಾ ತಂಡ ತನಿಖೆ ಮುಂದುವರೆಸಲಾಗಿದೆ ಎಂದರು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಯುಕ್ತರಾದ ಕೆ.ಶ್ರೀನಿವಾಸ್ ಮಾತನಾಡಿ, ಕಳೆದ ಆಗಸ್ಟ್ 18 ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ಕುರುಬರಕೇರನಹಳ್ಳಿಯಲ್ಲಿ ಇರುವ ಫಾರ್ಮ್‌ಹೌಸ್ ಒಂದರ ಮೇಲೆ ಜಂಟಿ ಪರಿಶೀಲನೆ ನಡೆಸಿತು. ಇಲ್ಲಿ ಯಾವುದೇ ಮಾನ್ಯ ಪರವಾನಗಿ ಇಲ್ಲದೆ ಔಷಧ ಪ್ಯಾಕಿಂಗ್ ಮಾಡುವ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ನೆರೆಯ ರಾಜ್ಯಗಳಿಂದ ಕಡಿಮೆ ಬೆಲೆಯ ಔಷಧಿಗಳನ್ನು ತಂದು, ಅವುಗಳನ್ನು ಹೊಸ ಬಾಟಲಿಗಳಿಗೆ ತುಂಬಿಸಿ, ದುಬಾರಿ ಜೀವ ರಕ್ಷಕ ಔಷಧಿಗಳಂತೆ (ಫೈಜರ್ ಬ್ರಾಂಡ್) ಮರುಲೇಬಲ್ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಸಂದೇಹಾಸ್ಪದ ನಕಲಿ ಲೇಬಲ್‌ಗಳ ಮೇಲೆ ಕ್ಯೂಆರ್ ಕೋಡ್ಗಳನ್ನು ಪರಿಶೀಲಿಸಿದಾಗ ಅವುಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಇಂತಹ ನಕಲಿ ಔಷಧಿಗಳು ತಪ್ಪು ಅಥವಾ ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿರಬಹುದು ಮತ್ತು ರೋಗಿಗಳ ಜೀವಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಔಷಧಿಗಳು
ಸುಮಾರು 3.38 ಕೋಟಿ ರೂಪಾಯಿ ಮೌಲ್ಯದ ‘CEFIAVIGENT 2.5 Injection’ ಎಂದು ಲೇಬಲ್ ಹೊಂದಿರುವ 5,640 ಬಾಟಲಿಗಳು ಮತ್ತು 52.24 ಲಕ್ಷ ರೂಪಾಯಿ ಮೌಲ್ಯದ 1,531 ‘HIZLAM’ ಇಂಜೆಕ್ಷನ್ ಬಾಟಲಿಗಳು. 470 ‘Xavitaz’ ಬಾಟಲಿಗಳು, ಫೈಜರ್ ಲೇಬಲ್ ಹೊಂದಿರುವ 264 ‘EMBLAVEO’ ಬಾಟಲಿಗಳು, 165 ‘Zavicefta’ ಬಾಟಲಿಗಳು ಹಾಗೂ ‘TIGYNT IV’, ‘Tigvnet’, ‘Aztreo’ ಮತ್ತು ‘Trezam’ ಎಂದು ಲೇಬಲ್ ಮಾಡಲಾದ ಔಷಧಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿದೆ.
16 ಪರವಾನಗಿ ರದ್ದು, 8 ಅಮಾನತು: ತನಿಖಾಧಿಕಾರಿಗಳು ವಿತರಣಾ ಜಾಲವನ್ನು ಪತ್ತೆಹಚ್ಚುತ್ತಿದ್ದಂತೆ, ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳಿಗೆ ಸೇರಿದ 16 ಔಷಧ ಪರವಾನಗಿಗಳನ್ನು ಎಫ್ಡಿಎ ರದ್ದುಗೊಳಿಸಿದೆ. ಇದರ ಜೊತೆಗೆ ಇತರ 8 ಪರವಾನಗಿಗಳನ್ನು ಅಮಾನತುಗೊಳಿಸಿದೆ.
ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿ ತನಿಖೆ ತೀವ್ರಗೊಳಿಸಿದೆ. ವಶಪಡಿಸಿಕೊಂಡ ಔಷಧಗಳು ಮತ್ತು ಯಂತ್ರೋಪಕರಣಗಳನ್ನು ಬೆಂಗಳೂರು ದಕ್ಷಿಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ದಾಖಲಿಸಲಾಗಿರುತ್ತದೆ.
ಗ್ರಾಹಕರಿಗೆ ಎಫ್ಡಿಎ ಸಲಹೆ: ರೋಗಿಗಳು ಪರವಾನಗಿ ಪಡೆದ ಔಷಧಾಲಯಗಳಿಂದ ಮಾತ್ರ ಜೀವ ರಕ್ಷಕ ಔಷಧಿಗಳನ್ನು ಖರೀದಿಸಬೇಕು. ಮಾನ್ಯ ತೆರಿಗೆ ಇನ್‌ವಾಯ್ಸ್‌ಗಳನ್ನು ಪಡೆಯಬೇಕು. ಔಷಧಿ ಪ್ಯಾಕೇಜಿಂಗ್‌ನಲ್ಲಿ ಅನುಮಾನಾಸ್ಪದ ವ್ಯತ್ಯಾಸಗಳನ್ನು ಗಮನಿಸಿದರೆ ಅಥವಾ ಔಷಧ ಲೇಬಲ್‌ನಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಆಗಿಲ್ಲವಾದರೆ, ತಕ್ಷಣವೇ ಔಷಧ ಜಾರಿ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಎಫ್ಡಿಎ ಸಲಹೆ ನೀಡಿದೆ.

