ರಾಜ್ಯದಲ್ಲಿ ಇತ್ತೀಚೆಗೆ ಪತ್ತೆಯಾದ ನಕಲಿ ಹಾಗೂ ಕಳಪೆ ಕ್ಯಾನ್ಸರ್ ಔಷಧ ಜಾಲವು ಸಾರ್ವಜನಿಕರ ಆರೋಗ್ಯ ಮತ್ತು ಭದ್ರತೆಯ ಮೇಲಿನ ಗಂಭೀರ ಬೆದರಿಕೆಯಾಗಿದೆ. ಇಂತಹ ಗಂಭೀರ ಆರೋಗ್ಯ ದುರಂತಗಳ ಸಂದರ್ಭದಲ್ಲಿ ರಾಜಕೀಯ ಜಡತ್ವ ಮತ್ತು ಸಮಾಜದ ಮೌನದ ಬಗ್ಗೆ ಬೆಳಕು ಚೆಲ್ಲುವ, ಹಿರಿಯ ಪತ್ರಕರ್ತರಾದ ರುದ್ರಪ್ಪ ಸಿ, ಅವರ ಅತ್ಯಂತ ಗಂಭೀರ ಹಾಗೂ ಚಿಂತನಾರ್ಹ ಬರಹ ಇಲ್ಲಿದೆ.
ಕ್ಯಾನ್ಸರ್ ಅತ್ಯಂತ ಭಯಾನಕ ರೋಗ. ಅದರಿಂದ ಆಗುವ ದೈಹಿಕ ಮತ್ತು ಮಾನಸಿಕ ಯಾತನೆ ಅತ್ಯಂತ ಘೋರ. ಅದರ ದುಬಾರಿ ವೆಚ್ಚದ ಭಾರದಿಂದ ಕುಟುಂಬಗಳು ದಿವಾಳಿಯಾಗುತ್ತಿವೆ. ಇದೇ ವೇಳೆ ಇತರೆ ರೋಗಗಳ ಜತೆಗೆ ಕ್ಯಾನ್ಸರ್ ಕಾಯಿಲೆಯ ಔಷಧಿಯೂ ಕಳಪೆ ಮತ್ತು ಕಲಬೆರಕೆ ಎನ್ನುವ ಸುದ್ದಿ ಬರ ಸಿಡಿಲಿನಂತೆ ಎರಗಿದೆ. ದೂರದ ಯಾವುದೋ ರಾಜ್ಯಗಳಲ್ಲಿ ಇಂತಹ ಸಂಗತಿಗಳು ಸಾಮಾನ್ಯವಾಗಿದ್ದವು. ಆದರೆ ನಮ್ಮ ರಾಜ್ಯದಲ್ಲಿಯೇ ಇಂತಹ ಜಾಲಗಳು ಪತ್ತೆಯಾಗುತ್ತಿವೆ. ಆದ್ದರಿಂದ ಕ್ಯಾನ್ಸರ್ ಬಾಧಿತ ಸಾವಿರಾರು ಕುಟುಂಬಗಳು ಭೀತಿಯಿಂದ ತತ್ತರಿಸಿವೆ.
ಬಸವಣ್ಣ ಈಗ ಇದ್ದಿದ್ದರೆ “ಧರೆ ಹತ್ತಿ ಉರಿದಡೆ..ತಾಯ ಮೊಲೆವಾಲು ನಂಜಾಗಿ ಕೊಲುವಡೆ..ಇನ್ನಾರಿಗೆ ದೂರುವೆ ಕೂಡಲ ಸಂಗಮ ದೇವಾ..” ಎಂಬ ತಮ್ಮ ವಚನಕ್ಕೆ “ಕ್ಯಾನ್ಸರ್ ಔಷಧಿ ಕಲಬೆರಕೆಯಾದಡೆ” ಎನ್ನುವ ಸಾಲನ್ನು ಸೇರಿಸುತ್ತಿದ್ದರೇನೋ..!
ರಾಜ್ಯದಲ್ಲಿ ಕಳಪೆ ಮತ್ತು ಕಲಬೆರಕೆ ಔಷಧ ಮಾರಾಟದ ಜಾಲ ಬಯಲಾಗಿರುವ ರೀತಿಯೇ ರೋಚಕವಾಗಿದೆ. ಆಗಸ್ಟ್ 18 ರಂದು ಬಿಡದಿ ಟೋಲ್ ಗೇಟ್ ಬಳಿ ಫಾರ್ಮ್ ಹೌಸ್ ಮೇಲೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅರೋಗ್ಯ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಸುಮಾರು ಐದು ಕೋಟಿ ರೂ. ಬೆಲೆ ಬಾಳುವ ನಕಲಿ ಮತ್ತು ಅವಧಿ ಮೀರಿದ ಔಷಧಿಗಳನ್ನು ಜಪ್ತಿ ಮಾಡಿದರು. ಅಲ್ಲಿ ತೆಲಂಗಾಣ ಮತ್ತು ಹಿಮಾಚಲ ಪ್ರದೇಶಗಳ ಉತ್ಪಾದನಾ ಘಟಕಗಳಿಂದ ಸಗಟು ಪ್ರಮಾಣದಲ್ಲಿ ಅಗ್ಗದ ದರದಲ್ಲಿ ಖರೀದಿಸಿ ತಂದ ಕಳಪೆ ಔಷಧಗಳನ್ನು ಸೀಸೆಗಳಲ್ಲಿ ತುಂಬುತ್ತಿದ್ದರು. ಫೈಝರ್ ಸೇರಿದಂತೆ ಅಂತಾರಾಷ್ಟ್ರೀಯ ಕಂಪನಿಗಳ ಪ್ರೀಮಿಯಂ ಆಮದು ಬ್ರ್ಯಾಂಡುಗಳ ಲೇಬಲ್ ಗಳನ್ನು ಅಂಟಿಸಿ ಗಂಭೀರ ಸ್ಥಿತಿಯ ರೋಗಿಗಳು ಮತ್ತು ಐಸಿಯುಗಳ ಬಳಕೆಗಾಗಿ ಅಧಿಕ ಬೆಲೆಯಲ್ಲಿ ರವಾನೆ ಮಾಡುತ್ತಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಅರೋಗ್ಯ ಸಚಿವ ಯು. ಟಿ.ಖಾದರ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಮಾಲೋಚನೆ ಮಾಡಿದ ಬಳಿಕ ಆಗಸ್ಟ್ 19 ರಂದು ಹಿರಿಯ ಐ. ಪಿ.ಎಸ್.ಅಧಿಕಾರಿ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ಅಂತಾರಾಜ್ಯ ಮಟ್ಟದ ವಿಶೇಷ ತನಿಖಾ ತಂಡವನ್ನು (ಎಸ್ ಐ ಟಿ ) ಸನ್ನದ್ಧಗೊಳಿಸಿದರು ಮತ್ತು ರೋಗಿಗಳ ಹತಾಶ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಈ ನರ ರಾಕ್ಷಸರನ್ನು ಸಂಪೂರ್ಣವಾಗಿ ಸದೆ ಬಡಿಯುವ ಸಂಕಲ್ಪವನ್ನು ಮಾಡಿದರು. ಅದರ ಫಲವಾಗಿ ನಕಲಿ ಔಷಧಗಳ ಮರು ಪ್ಯಾಕಿಂಗ್ ಮತ್ತು ಮಾರಾಟದ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಜಾಲವೊಂದು ಪತ್ತೆಯಾಗಿದೆ.

ಈ ಜಾಲದ ಸೂತ್ರಧಾರಿಗಳಾದ ಆರ್ .ಪ್ರಶಾಂತ್ ಹಾಗೂ ವೀರೇಶ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಅವರು ಟರ್ಕಿ ದೇಶದಿಂದ ಆಮದು ಮಾಡಿದ್ದ ಅಂತಾರಾಷ್ಟ್ರೀಯ ಬ್ರ್ಯಾಂಡುಗಳ ಲೇಬಲ್ ಗಳನ್ನು ಅಂಟಿಸಿ ಕಳಪೆ ಔಷಧಿಗಳನ್ನು ಡಿಸ್ಕೌಂಟ್ ದರಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ತೊಂಬತ್ತಕ್ಕೂ ಹೆಚ್ಚು ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿದ್ದರು. ಇದರಲ್ಲಿ ಬಹು ಪಾಲು “ಜೀವ ರಕ್ಷಕ” ಕ್ಯಾನ್ಸರ್ ಔಷಧಿಗಳು ಮತ್ತು ಐಸಿಯುನಲ್ಲಿ ಬಳಸುವ ವಿಪರೀತ ಬೆಲೆಯ ಇಂಜಕ್ಷನ್ ಗಳು. ಅಧಿಕಾರಿಗಳ ಈ ಕ್ಷಿಪ್ರ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. “ಅಮಾಯಕ ರೋಗಿಗಳ ಬದುಕಿನ ಜತೆಗೆ ಚೆಲ್ಲಾಟವಾಡುವ ಈ ಆರೋಪಿಗಳು ದೇಶದ್ರೋಹಿಗಳು; ಅವರನ್ನು ಗಲ್ಲಿಗೇರಿಸಬೇಕು”ಎಂದು ಅನೇಕ ಜನರು ಆಗ್ರಹ ಪಡಿಸಿದ್ದಾರೆ.
ವಿದೇಶಗಳಿಂದ “ಜೀವ ರಕ್ಷಕ” ಔಷಧಗಳ ಆಮದು ಮತ್ತು ರಫ್ತು ದಂಧೆಯ ಹಿಂದಿನ ಒಂದು ಕರಾಳ ಮುಖವನ್ನು ಒಂದು ನಿಜ ಘಟನೆಯ ಮೂಲಕ ವಿವರಿಸುತ್ತೇನೆ: “ನನ್ನ ಸ್ನೇಹಿತರು ಒಂದು ವಿರಳವಾದ ಕ್ಯಾನ್ಸರ್ ನಿಂದ ನರಳುತ್ತಿದ್ದರು. ಬೆಂಗಳೂರಿನಲ್ಲಿ ಎರಡು ಬಾರಿ ಮೇಜರ್ ಸರ್ಜರಿ ನಂತರವೂ ಅದು ಉಲ್ಬಣವಾಯಿತು. ವೈದ್ಯರ ಸಲಹೆ ಮೇರೆಗೆ ದೆಹಲಿಯ ಏಮ್ಸ್ (AIIMS)ಆಸ್ಪತ್ರೆಯಲ್ಲಿ ವಿಶೇಷ ತಜ್ಞ ವೈದ್ಯರನ್ನು ಭೇಟಿ ಮಾಡಿದರು. ಅವರು ಗಹನವಾದ ತಪಾಸಣೆ ಮತ್ತು ವರದಿಗಳ ಪರಿಶೀಲನೆ ಬಳಿಕ “ನಿಮ್ಮ ಕ್ಯಾನ್ಸರ್ ಹಟಮಾರಿ (Refractory)ಗುಣವನ್ನು ಬೆಳೆಸಿಕೊಂಡಿದೆ. ನಿಮಗೆ ಭಾರತದಲ್ಲಿ ಯಾವುದೇ ಔಷಧಿಯಿಲ್ಲ. ಇನ್ನು ಮುಂದೆ “ಕಿನ್ ಲಾಕ್ (ರಿಪ್ರೆಟಿನಿಬ್ )”ಎನ್ನುವ ಜೀವರಕ್ಷಕ ಔಷಧಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು”ಎಂದು ಸೂಚಿಸಿದರು. ಜೊತೆಗೆ ಅವರು “ನೀವು ನನ್ನ ಬಳಿ ಈಗಾಗಲೇ ಮೂರು ವಾರಗಳು ತಡವಾಗಿ ಬಂದಿದ್ದೀರಿ. ಆದಷ್ಟು ಬೇಗ ಹೊಸ ಜೀವ ರಕ್ಷಕ ಔಷಧದ ಬಳಕೆಯನ್ನು ಆರಂಭಿಸಬೇಕು. ಇಲ್ಲದಿದ್ದರೆ ನಿಮ್ಮ ಅರೋಗ್ಯ ಏರುಪೇರಾದೀತು”ಎಂದು ಎಚ್ಚರಿಸಿದರು. ರಿಪ್ರೆಟಿನಿಬ್ (ಕಿನ್ ಲಾಕ್ )ಮಾತ್ರೆಗಳ ಆಮದು ಮಾಡುವ ಕೆಲವು ಏಜೆನ್ಸಿಗಳ ವಿವರಗಳನ್ನು ಕೂಡಾ ತಜ್ಞ ವೈದ್ಯರ ತಂಡದವರು ಒದಗಿಸಿದರು.
ಆ ಏಜೆನ್ಸಿಗಳು ನೀಡಿದ ಮಾಹಿತಿಗಳು ನಮ್ಮ ಸ್ನೇಹಿತರ ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತಿದ್ದವು. “ರಿಪ್ರೆಟಿನಿಬ್(ripretinib) ಔಷಧ ತಯಾರಾಗುವುದು ಅಮೇರಿಕಾದ ಡೆಸಿಫೆರಾ(deciphera)ಕಂಪೆನಿ ಯಲ್ಲಿ. ಅದರ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು ಯುರೋಪ್ ನಲ್ಲಿಯೂ ಇವೆ. ಚೀನಾದ ಝಿಯಾ ಲ್ಯಾಬ್ ಸೇರಿದಂತೆ ಹಲವು ದೇಶಗಳ ಕಂಪನಿಗಳು ರಿಪ್ರೆಟಿನಿಬ್ ಔಷಧಿಯ ಮರು ಪ್ಯಾಕಿಂಗ್ ಮತ್ತು ಮಾರಾಟದ ಹಕ್ಕುಗಳನ್ನು ಪಡೆದಿವೆ. ಆದರೆ ಭಾರತದಲ್ಲಿ ಮಾರಾಟದ ಹಕ್ಕನ್ನು ಆ ಸಂಸ್ಥೆ ಯಾರಿಗೂ ನೀಡಿಲ್ಲ. ಅಂದರೆ ಇಲ್ಲಿ ಸಾಮಾನ್ಯ ಮತ್ತು ವಾಣಿಜ್ಯ ಬಳಕೆಗೆ ಅದು ಲಭ್ಯವಿಲ್ಲ. ಜೀವ ರಕ್ಷಣೆಗೆ ತೀರಾ ಅಗತ್ಯವಿದೆ ಎಂದು ವೈದ್ಯರು ಶಿಫಾರಸು ಮಾಡಿದರೆ ಮಾತ್ರ ವೈಯಕ್ತಿಕ ಬಳಕೆಗೆ ಸೀಮಿತವಾಗಿ ನೇಮ್ಡ್ ಪೇಷಂಟ್ ಪ್ರೋಗ್ರಾಮ್ (named patient program)ಪ್ರಕಾರ ಒಂದು ನಿರ್ಬಂಧಿತ ಅನುಮತಿಯನ್ನು ಕಂಪನಿ ನೀಡುತ್ತದೆ. ಅದೂ ಕೂಡಾ ಭಾರತ ಸರ್ಕಾರದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಯಿಂದ ರೋಗಿಯ ಹೆಸರಿನಲ್ಲಿ ಆಮದು ಲೈಸನ್ಸ್ ಅನ್ನು ಹಾಜರು ಪಡಿಸಬೇಕು. ಬ್ಯಾಂಕಿನ ವಿದೇಶಿ ವಿನಿಮಯ ಖಾತೆ ಮೂಲಕ ಡಾಲರ್ ಗಳ ಲೆಕ್ಕದಲ್ಲಿ ಹಣ ಪಾವತಿ ನಂತರ ಎರಡು ವಾರಗಳಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಔಷಧ ರೋಗಿಯ ಕೈ ಸೇರುತ್ತದೆ”. ಅಂದರೆ ಈ ತುರ್ತು ಜೀವ ರಕ್ಷಕ ಔಷಧಿಗೆ ಇನ್ನೂ ಇಪ್ಪತ್ತೈದು ದಿನಗಳು ಕಾಯಬೇಕು. ಇದರ ಜತೆಗೆ ಈ ಆಮದು ಸಂಸ್ಥೆಗಳು “ಒಂದು ತಿಂಗಳಿಗೆ ಅಮೆರಿಕದಿಂದ ಆಮದು ಮಾಡಿಕೊಂಡರೆ 34 ಲಕ್ಷ ರೂ ವೆಚ್ಚವಾಗುತ್ತದೆ; ಯುರೋಪ್ ನಿಂದ ಖರೀದಿಸಿದರೆ 26 ಲಕ್ಷ ರೂ, ಸಿಂಗಾಪುರದಿಂದ ತರಿಸಿದರೆ 9 ಲಕ್ಷ ರೂ.ಆಗುತ್ತದೆ ” ಎಂದು ವಿವರಿಸುತ್ತಿದ್ದಂತೆ ಇವರು ಸಂಪೂರ್ಣವಾಗಿ ಬೆಚ್ಚಿ ಬೀಳಬೇಕಾಯಿತು. ಆಗ ತಜ್ಞ ವೈದ್ಯರ ತಂಡದವರು “ಮುಂಬೈ ನಲ್ಲಿ ಒಬ್ಬ ರೋಗಿ ಇದೇ ಔಷಧವನ್ನು ಬಳಸುತ್ತಿದ್ದರು. ಅವರು ತೀರಿ ಹೋಗಿರುವುದರಿಂದ ಅವರ ಕುಟುಂಬದವರ ಬಳಿ ಹೆಚ್ಚುವರಿಯಾಗಿ ಮೂರು ಬಾಟಲಿ ಔಷಧಿ ಲಭ್ಯವಿದೆ . ನಿಮಗೆ ಒಂದು ತಿಂಗಳಿಗೆ ಸಾಕಾಗುತ್ತದೆ. ತುಂಬಾ ಕಡಿಮೆ ರೇಟಿನಲ್ಲಿ ಕೊಡುತ್ತಾರೆ “ಎಂದು ಅವರ ಮೊಬೈಲ್ ನಂಬರ್ ನೀಡಿದರು. ನಮ್ಮ ಸ್ನೇಹಿತರು ಮುಂಬೈ ತಲುಪಿದಾಗ ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು. ಆ ರೋಗಿಯ ಕುಟುಂಬದವರು “ನಿಮಗೆ 3 ರಿಪ್ರೆಟಿನಿಬ್ ಔಷಧಿಗಳ ಬಾಟಲಿಯನ್ನು ತಲುಪಿಸಲು ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತೇವೆ. ಅದಕ್ಕೆ ಯಾವ ಬಿಲ್ಲುಗಳೂ ಇಲ್ಲ. ನಾವು ಗ್ರೇ ಮಾರುಕಟ್ಟೆಯಲ್ಲಿ ಇದೇ ವ್ಯಕ್ತಿಯಿಂದ ಖರೀದಿಸಿದ್ದೆವು. ಅವರಿಗೆ 2 ಲಕ್ಷದ 40 ಸಾವಿರ ಕ್ಯಾಶ್ ಕೊಡಿ” ಎಂದು ತಾಕೀತು ಮಾಡಿದರು. ನಮ್ಮ ಸ್ನೇಹಿತರು ಅವರ ಮುಂಬೈ ಸಂಪರ್ಕಗಳ ಮೂಲಕ ನಗದು ಹಣವನ್ನು ಹೊಂದಿಸಬೇಕಾಯಿತು. ಕೊಂಚ ವಿಚಿತ್ರ ಹಾವ -ಭಾವದ ಆ ವ್ಯಕ್ತಿ “ಯಾವುದೇ ಫಾರಿನ್ ಮೆಡಿಸಿನ್ ಬೇಕಿದ್ದರೂ ಹೇಳಿ. 24 ಗಂಟೆಯಲ್ಲಿ ಬೆಂಗಳೂರಿನ ನಿಮ್ಮ ವಿಳಾಸಕ್ಕೆ ತಲುಪಿಸುತ್ತೇವೆ. ಆದರೆ ಎಲ್ಲವೂ ಕ್ಯಾಶ್ ವ್ಯವಹಾರ. ಯಾವುದಕ್ಕೂ ಬಿಲ್ ಇಲ್ಲ “ಎಂದು ವಿವರಿಸಿದ.

ಆತ ಒಬ್ಬ ಹವಾಲಾ ಆಪರೇಟರ್ ಎನ್ನುವುದು ಇವರಿಗೆ ನಂತರ ಗೊತ್ತಾಯಿತು. ಕ್ಯಾನ್ಸರ್ ರೋಗಿಗಳ ಕುಟುಂಬದವರ ಹತಾಶ ಆರ್ಥಿಕ ಸ್ಥಿತಿಯನ್ನು ಕ್ರಿಮಿನಲ್ ಸಿಂಡಿಕೇಟ್ ಗಳು ದುರುಪಯೋಗ ಪಡಿಸಿಕೊಂಡು ಹಲವು ಕೋಟಿ ಡಾಲರ್ ವಹಿವಾಟು ನಡೆಸುವ ವ್ಯವಸ್ಥೆಯೇ ಗ್ರೇ ಅಥವಾ ಬ್ಲ್ಯಾಕ್ ಮಾರುಕಟ್ಟೆ. (ಕಿನ್ ಲಾಕ್)ರಿಪ್ರೆಟಿನಿಬ್ ನಂತಹ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳನ್ನು ಹೋಲುವ ಈ ಅಗ್ಗದ ದರದ ವಿವಿಧ ಔಷಧಗಳು ಚೀನಾ ಮತ್ತು ಬಾಂಗ್ಲಾ ಹಾಗೂ ವಿಯೆಟ್ನಾಂ ಲಾವೋಸ್ ಫ್ಯಾಕ್ಟರಿಗಳಲ್ಲಿ ಜನರಿಕ್ ಔಷಧಗಳ ಹೆಸರಿನಲ್ಲಿ ಯಾವುದೇ ಸೂಕ್ತ ನಿಗಾ ಇಲ್ಲದೆ ಸಿದ್ಧವಾಗುತ್ತವೆ. ನಂತರ ಗಡಿಯಾಚೆಯಿಂದ ಸುಂಕವನ್ನು ಮತ್ತು ಔಷಧ ಗುಣಮಟ್ಟದ ನಿಗಾ ಸಂಸ್ಥೆಯ (CDSCO)ಅನುಮೋದನೆಯನ್ನು ತಪ್ಪಿಸಿಕೊಂಡು ಮತ್ತು ಶೀತಲೀಕರಣ ಅಂದರೆ ಕೋಲ್ಡ್ ಚೈನ್ ನಿರ್ಬಂಧವನ್ನೂ ಪಾಲಿಸದೆ ಭಾರತದ ಬ್ಲ್ಯಾಕ್ ಮಾರುಕಟ್ಟೆಗೆ ಬರುತ್ತವೆ. ಔಷಧ ಮಾರಾಟಗಾರರು, ವಿವಿಧ ಹಂತದ ಅಧಿಕಾರಿಗಳು, ಕೆಲವು ವೈದ್ಯರು, ಆಸ್ಪತ್ರೆಗಳು, ಫಾರ್ಮಸಿಗಳು, ಭೂಗತ ಜಗತ್ತಿನ ಪಾತಕಿಗಳು, ಹವಾಲಾ ದಂಧೆಕೋರರು, ಅಂತಾರಾಷ್ಟ್ರೀಯ ಕ್ರಿಮಿನಲ್ ಸಿಂಡಿಕೇಟ್ ಗಳು ಈ ಮಾಫಿಯಾದಲ್ಲಿ ಶಾಮೀಲಾಗಿದ್ದಾರೆ. ಕ್ಯಾನ್ಸರ್ ರೋಗಿಗಳನ್ನು ಕೊನೆಯವರೆಗೂ ನೋಡಿಕೊಳ್ಳುವ “ಕರ್ತವ್ಯ”ವನ್ನು ನಿರ್ವಹಿಸಲು ಸತತವಾಗಿ ಪ್ರಯತ್ನಿಸುವ ಕುಟುಂಬದವರು ತುಂಬಾ ಕಡಿಮೆ ರೇಟಿನಲ್ಲಿ ಸಿಗುವ ಈ ಕಳಪೆ ಗುಣಮಟ್ಟದ ಔಷಧಿಯ “ಬಲೆ”ಗೆ ಸುಲಭವಾಗಿ ಬೀಳುತ್ತಾರೆ. ಬೆಂಗಳೂರಿನಲ್ಲಿ ಇತ್ತೀಚಿಗೆ ಅರೋಗ್ಯ ಸಚಿವ ಯು.ಟಿ.ಖಾದರ್ ಅವರ ಪ್ರಯತ್ನದ ಫಲವಾಗಿ ನಡೆದ ಎಸ್.ಐ.ಟಿ ದಾಳಿಯಲ್ಲಿ ಪತ್ತೆಯಾದ ನಕಲಿ ಔಷಧ ಜಾಲದ ಆರೋಪಿಗಳು ಟರ್ಕಿಯಿಂದ ಬಹುರಾಷ್ಟ್ರೀಯ ಕಂಪನಿಗಳ ಲೇಬಲ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು.
ಅಂದರೆ ಈ ಜಾಲ ಅಂತಾರಾಷ್ಟ್ರೀಯ ಬ್ಲ್ಯಾಕ್ ಮಾರುಕಟ್ಟೆಯ ಭಾಗವಾಗಿತ್ತೇ ಅಥವಾ ಕೇವಲ ದೇಶೀಯ ಮಾಫಿಯಾ ಹಾವಳಿಗೆ ಸೀಮಿತವಾಗಿತ್ತೇ ಎನ್ನುವುದನ್ನು ಎಸ್ ಐ ಟಿ ಪತ್ತೆ ಹಚ್ಚಬೇಕಿದೆ. ಇದರ ಜತೆಗೆ ಬಿಡದಿ ಫಾರ್ಮ್ ನಲ್ಲಿ ಸೀಸೆಗಳಿಗೆ ಕಳಪೆ ಔಷಧಿಯನ್ನೂ ದ್ರಾವಣವನ್ನೂ ತುಂಬಿ ಮರು ಪ್ಯಾಕಿಂಗ್ ಮಾಡುತ್ತಿದ್ದರು ಎಂದು ಕೂಡಾ ವರದಿಯಾಗಿದೆ. ಆದರೆ ಯಾವುದೇ ಬಹು ರಾಷ್ಟ್ರೀಯ ಬ್ರ್ಯಾಂಡಿನ ಔಷಧಿ ಅಥವಾ ಮಾತ್ರೆಗಳ ಬಾಟಲಿಗಳನ್ನು ವಿನ್ಯಾಸಗೊಳಿಸುವುದು ಅಷ್ಟು ಸುಲಭವಲ್ಲ. ಹೈ ಡೆನ್ಸಿಟಿ ಪಾಲೀಥಿಲೀನ್ ಬಾಟಲಿಗಳನ್ನು ಅಲ್ಯೂಮಿನಿಯಂ ಫಾಯಿಲ್ ಸೀಲು, ಶೀತ ನಿರೋಧಕ ಮುಚ್ಚಳಗಳು, ಹೋಲೋ ಗ್ರಾಮ್, ಬಾರ್ ಕೋಡು, ಬ್ಯಾಚ್ ನಂಬರ್, ತಯಾರಾದ ಮತ್ತು ಅವಧಿ ಮುಗಿಯುವ ದಿನಾಂಕ ಹೀಗೆ ವಿಶಿಷ್ಟ ಗುಣ ಲಕ್ಷಣಗಳೊಂದಿಗೆ ಸಿದ್ಧಪಡಿಸಲು ವಿಶೇಷ ತಾಂತ್ರಿಕ ನೈಪುಣ್ಯತೆ ಅಗತ್ಯ. ಅಂತಹ ತಂತ್ರಜ್ಞಾನ ಬಿಡದಿ ಫಾರ್ಮ್ ವರೆಗೆ ವರ್ಗಾವಣೆಯಾಗಿತ್ತೇ?ಎನ್ನುವ ಕುತೂಹಲವೂ ಇದೆ. ಬೆಂಗಳೂರು ಸೇರಿದಂತೆ ಕರ್ನಾಟಕದ 90 ಆಸ್ಪತ್ರೆಗಳು, ಐ. ಸಿ.ಯು ಗಳು ಮತ್ತು ಔಷಧ ಮಾರಾಟ ಸಂಸ್ಥೆಗಳಿಗೆ ಈ ಕಳಪೆ ಮತ್ತು ಕಲಬೆರಕೆ ಕ್ಯಾನ್ಸರ್ ಔಷಧಗಳು ಮತ್ತು ದ್ರಾವಣಗಳು ವಿತರಣೆಯಾಗುತ್ತಿದ್ದವು ಎಂದು ವರದಿಯಾಗಿದೆ. ಆ ಔಷಧಗಳು ನಿಜವಾಗಿಯೂ ಉಪಯುಕ್ತವಾಗಿವೆಯೇ? ಅಥವಾ ಅವುಗಳಿಂದ ರೋಗಿಗಳಿಗೆ ಅಪಾಯಕಾರಿ ಪರಿಣಾಮವಾಗಿದೆಯೇ? ಅದರ ಬಗ್ಗೆ ಆಸ್ಪತ್ರೆಯವರು, ವೈದ್ಯರು ಮತ್ತು ಫಾರ್ಮಸಿಸ್ಟ್ ಗಳು ಏಕೆ ಮೌನ ವಹಿಸಿದ್ದಾರೆ? ಅಥವಾ ಅವರೂ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆಯೇ? ಈ ಎಲ್ಲಾ ಅನುಮಾನಗಳಿಗೂ ಎಸ್ ಐ ಟಿ ಯ ತೀವ್ರ ತನಿಖೆಯಿಂದ ಉತ್ತರ ದೊರೆಯಬೇಕಾಗಿದೆ. ರಾಜ್ಯದಲ್ಲಿ ಈ ಮೆಡಿಕಲ್ ಮಾಫಿಯಾ ಯು.ಟಿ.ಖಾದರ್ ಅವರು ಅರೋಗ್ಯ ಮಂತ್ರಿಯಾದ ಮೇಲೆ ಆರಂಭವಾಗಿಲ್ಲ. ಅದೂ ಮೊದಲಿಂದಲೂ ಇದೆ. ಎಸ್ ಐ ಟಿ ಯವರು ಬಂಧಿಸಿರುವ ಈ ಕರಾಳ ದಂಧೆಯ ಸೂತ್ರಧಾರ ಕಳೆದ ಮೂರು ವರ್ಷಗಳಿಂದ ನಕಲಿ ಮತ್ತು ಕಳಪೆ ಔಷಧಿಗಳನ್ನು ಸಲೀಸಾಗಿ ವಿತರಿಸುತ್ತಿದ್ದ ಎನ್ನುವ ಮಾಹಿತಿಯೂ ದೊರೆತಿದೆ. ಆಗಲೂ ಒಬ್ಬ ಅರೋಗ್ಯ ಮಂತ್ರಿ ಇದ್ದರು; ಆಗಲೂ ಕಾಂಗ್ರೆಸ್ ಸರ್ಕಾರವೇ ಇತ್ತು.
ಮೆಡಿಕಲ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು ಹಳೆಯ ಘಟನೆಯನ್ನು ಪ್ರಸ್ತಾಪಿಸಬಹುದು. 2024 ರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ರಾಜ್ಯದ ಕೆಲವು ಜಿಲ್ಲೆಗಳ ಸರ್ಕಾರೀ ಆಸ್ಪತ್ರೆಗಳಲ್ಲಿ 18 ಮಂದಿ ಎಳೇ ವಯಸ್ಸಿನ ಬಾಣಂತಿಯರು ಸಾವಿಗೀಡಾದರು. ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸಿಸೇರಿಯನ್ ಆಪರೇಷನ್ ನಂತರ ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳಲು ಕಳಪೆ ಗುಣಮಟ್ಟದ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಬಳಸಿದ್ದರಿಂದ ಈ ದುರಂತ ಸಂಭವಿಸಿತ್ತು. ಅದನ್ನು ಪೂರೈಸಿದ್ದ ಪಶ್ಚಿಮ ಬಂಗಾಳದ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚಿಸಿದ್ದರು. ಡ್ರಗ್ ಕಂಟ್ರೋಲರ್ ಅವರನ್ನು ಅಮಾನತು ಮಾಡಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಂದ ಉನ್ನತ ಮಟ್ಟದ ತನಿಖೆಗೆ ಆದೇಶವನ್ನು ಮಾಡಿದ್ದರು. ವಿರೋಧ ಪಕ್ಷದ ನಾಯಕ ಆರ್ .ಅಶೋಕ್ ನ್ಯಾಯಾಂಗ ತನಿಖೆಗೆ ಆಗ್ರಹ ಪಡಿಸಿದ್ದರು. ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ರಾಜಿನಾಮೆಗೆ ಒತ್ತಾಯಿಸಿದ್ದರು. ಸರ್ಕಾರ ಮೆಡಿಕಲ್ ಮಾಫಿಯಾ ಕಪಿ ಮುಷ್ಟಿಯಲ್ಲಿದೆ ಎಂದು ಅವರು ಆರೋಪಿಸಿದ್ದರು. ಆದರೆ ನಂತರ ವಿರೋಧ ಪಕ್ಷಗಳು ತಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಿಲ್ಲ. ಇಂತಹ ಒಂದು ಘೋರ ದುರಂತ ಬಹಳ ಜನರಿಗೆ ಒಂದು ದೊಡ್ಡ ಸಂಗತಿ ಎಂದು ಅನ್ನಿಸಲೇ ಇಲ್ಲ.
ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾನು ಇನ್ನೊಂದು ಪ್ರಕರಣವನ್ನು ಪ್ರಸ್ತಾಪಿಸುತ್ತೇನೆ: 1984 ರಲ್ಲಿ ಬೊಂಬಾಯಿಯ ಜೆ ಜೆ ಸರ್ಕಾರೀ ಆಸ್ಪತ್ರೆಯಲ್ಲಿ ಗ್ಲುಕೋಸ್ ಕಲಬೆರಕೆಯಿಂದ ಒಂದೇ ದಿನ 17 ರೋಗಿಗಳು ಸಾವಿಗೀಡಾದರು. ಅಲ್ಲಿನ ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಅಕ್ರಮ, ಅನ್ಯಾಯ ಮತ್ತು ಮನುಷ್ಯ ನಿರ್ಮಿತ ದುರಂತಗಳನ್ನು ಸಹಿಸುತ್ತಿರಲಿಲ್ಲ. ಅವರ ಉಗ್ರ ಹೋರಾಟದಿಂದ ವಸಂತ ದಾದಾ ಪಾಟೀಲ್ ಕಾಂಗ್ರೆಸ್ ಸರ್ಕಾರ ತತ್ತರಿಸಿತು. ಅರೋಗ್ಯ ಸಚಿವೆ ಡಾ.ಲಲಿತಾ ರಾವ್ ರಾಜೀನಾಮೆ ನೀಡಬೇಕಾಯಿತು. (ಡಾ.ಲಲಿತಾ ರಾವ್ ಮಂಗಳೂರಿನವರು ಮತ್ತು ಕ್ರಿಕೆಟ್ ಆಟಗಾರ ರವಿ ಶಾಸ್ತ್ರಿ ಕುಟುಂಬದವರು). ಜಸ್ಟಿಸ್ ಲೆಂಟಿನ್ ನೇತೃತ್ವದ ನ್ಯಾಯಾಂಗ ಆಯೋಗ ಮೆಡಿಕಲ್ ಮಾಫಿಯಾ ದ ಕರಾಳ ದಂಧೆಯನ್ನು ಅನಾವರಣ ಗೊಳಿಸಿತ್ತು. ನಮ್ಮ ರಾಜ್ಯದಲ್ಲಿ ವಿರೋಧ ಪಕ್ಷಗಳು ಜ್ವಲಂತ ಸಮಸ್ಯೆಗಳ ವಿರುದ್ಧ ಸಾಮಾನ್ಯವಾಗಿ ಅಹೋರಾತ್ರಿ ಧರಣಿ ಮುಂತಾದ ಉಗ್ರ ಹೋರಾಟಗಳನ್ನು ಮಾಡುತ್ತಾರೆ. ಆದರೆ ಈ ದುರಂತದ ವಿರುದ್ಧವೂ ಅದೇ ರೀತಿಯ ಹೋರಾಟವನ್ನು ಮಾಡಿದ್ದರೆ ಸಚಿವರು ನೈತಿಕ ಹೊಣೆಯಿಂದ ರಾಜೀನಾಮೆ ಕೊಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆಗ 18 ಮಕ್ಕಳನ್ನು ಕಳೆದುಕೊಂಡಿದ್ದ ತಂದೆ ತಾಯಿಯವರಿಗೆ ಮತ್ತು ಕುಟುಂಬದವರಿಗೆ ಯಾವುದೋ ಒಂದು ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎಂದು ಜನರು ಭಾವಿಸುತ್ತಿದ್ದರು. ಜನರ ಜೀವ ರಕ್ಷಣೆಗೆ ದೃಢ ನಿಶ್ಚಯವನ್ನು ಮಾಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ಹೋಟೆಲ್ ಗಳು, ಅಥಿತಿ ಗೃಹಗಳಲ್ಲಿ ಕಳಪೆ ಆಹಾರ ಮಾರಾಟ ಮತ್ತು ಸಂಗ್ರಹಣೆ ವಿರುದ್ಧವೂ ನಿರಂತರವಾದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಮೆಡಿಕಲ್ ಮಾಫಿಯಾ ವಿರುದ್ಧ ಆರಂಭವಾಗಿರುವ ಕಾರ್ಯಾಚರಣೆಯ ಪ್ರಗತಿಯ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ. ಕೇಂದ್ರೀಯ ಇಲಾಖೆಗಳು ಮತ್ತು ಪ್ರಾಧಿಕಾರಗಳ ಸಹಕಾರವನ್ನು ಕೋರಿ ಕೇಂದ್ರ ಅರೋಗ್ಯ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ. ಸ್ವತಃ ವೈದ್ಯರಾಗಿರುವ ಕೂಡ್ಲಿಗಿಯ ಕಾಂಗ್ರೆಸ್ ಶಾಸಕ ಡಾ.ಎನ್ ಟಿ ಶ್ರೀನಿವಾಸ್ ವಿಧಾನ ಸಭೆಯಲ್ಲಿ “ನಕಲಿ ಔಷಧ ದಂಧೆಯಲ್ಲಿ ತೊಡಗಿರುವ ಆರೋಪಿಗಳನ್ನು ನೇಣಿಗೆ ಹಾಕಿ” ಎಂದು ಆಗ್ರಹ ಪಡಿಸಿದರು. ಇಡೀ ದೇಶದಲ್ಲಿಯೇ ಬೃಹತ್ತಾದ ಕಾರ್ಯಾಚರಣೆ ಮೂಲಕ ಮೆಡಿಕಲ್ ಮಾಫಿಯಾ ವಿರುದ್ಧ ಸಮರವನ್ನು ಸಾರಿರುವ ಅರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ತುಂಬಿದ ಹೃದಯದಿಂದ ಅಭಿನಂದಿಸಿದರು. ದಿಟ್ಟ ಹಾಗೂ ಧೀರೋದಾತ್ತ ನಡೆಯ ಮೂಲಕ ದೇಶದ್ಯಂತ “ಜೀವ ರಕ್ಷಕ” ಔಷಧಿಗಳಿಗೆ ಪರದಾಡುತ್ತಿರುವ ಕುಟುಂಬಗಳಿಗೆ ಒಂದು ಭರವಸೆಯ ಬೆಳಕಾಗಿರುವ ಖಾದರ್ ಅವರಿಗೆ ಇಡೀ ಸದನ ಒಕ್ಕೊರಲಿನಿಂದ ಅಭಿನಂದಿಸಬೇಕಿತ್ತು. ಆದರೆ ಸದಸ್ಯರು ಈ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿದಂತೆ ಕಂಡು ಬರಲಿಲ್ಲ. ಯಾವುದೇ ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಜೆಗಳೂ ಪ್ರಜ್ಞಾವಂತರಾಗಿರಬೇಕು ಮತ್ತು ಸದಾ ಜಾಗೃತರಾಗಿರಬೇಕು. ಕೆಟ್ಟದ್ದನ್ನು ವಿರೋಧಿಸುವ ಒಳ್ಳೆಯದನ್ನು ಬೆಂಬಲಿಸುವ ವಿವೇಚನೆಯನ್ನು ಹೊಂದಿರಬೇಕು. ಆದರೆ ನಾವು 18 ಮಂದಿ ಬಾಣಂತಿಯರು ಸತ್ತಾಗಲೂ ಅನ್ಯ ಮನಸ್ಕರಾಗಿದ್ದೆವು; ಈಗ ಮೆಡಿಕಲ್ ಮಾಫಿಯಾ ವನ್ನು ಬಯಲಿಗೆ ಎಳೆದಾಗಲೂ ಸಚಿವ ಖಾದರ್ ಅವರಿಗೆ ಒಂದು ಅಭಿನಂದನೆಯನ್ನೂ ಸಲ್ಲಿಸಿಲ್ಲ. ಪ್ರತಾತಂತ್ರ ವ್ಯವಸ್ಥೆಗೆ ಅಗತ್ಯವಾಗಿರುವ ಸ್ಪಂದಿಸುವ ಗುಣವನ್ನೂ ನಾಗರೀಕ ಪ್ರಜ್ಞೆಯನ್ನೂ ಕಳೆದುಕೊಂಡಿದ್ದೇವೆಯೇ?
ರುದ್ರಪ್ಪ ಸಿ, ಬೆಂಗಳೂರು
ಹಿರಿಯ ಪತ್ರಕರ್ತರು
ದೂರವಾಣಿ – 9620026931
ಇದನ್ನೂ ಓದಿ- ಡಿಸ್ಕೌಂಟ್ ನೀಡುವ ಔಷಧ ಕಂಪನಿಗಳಿಗೆ FDA ಶಾಕ್, 16 ಫಾರ್ಮಸಿಗಳ ಲೈಸೆನ್ಸ್ ರದ್ದು


