ಒಂದು ದೇಶ ನಿಜವಾಗಿಯೂ ಸ್ವತಂತ್ರವಾಗುವುದು, ಅಲ್ಲಿನ ಪ್ರತಿ ಮಹಿಳೆ ತನ್ನ ಧ್ವನಿಯಲ್ಲಿ, ತನ್ನ ಆಯ್ಕೆಯಲ್ಲಿ, ತನ್ನ ಬದುಕಿನಲ್ಲಿ ಸ್ವತಂತ್ರಳಾದಾಗ ಮಾತ್ರ. ಆಗ ಮಾತ್ರ ನಮ್ಮ ತ್ರಿವರ್ಣ ಬಾವುಟ ಗಾಳಿಯಲ್ಲಿ ಸ್ವಚ್ಛಂದ ಹಾರಾಡಲು ಸಾಧ್ಯ, ಅದರ ನೆರಳಿನಲ್ಲಿ ನಿಂತ ಪ್ರತಿಯೊಬ್ಬ ಹೆಣ್ಣಿನ ಮುಖದಲ್ಲೂ ನಿಜವಾದ ಸ್ವಾಭಿಮಾನದ ಬೆಳಕು ಕಾಣಲು ಸಾಧ್ಯ. ಅದೇ ನಮ್ಮ ಆಗಸ್ಟ್ 15 ಕ್ಕೆ ನಾವು ನೀಡುವ ಅತ್ಯುತ್ತಮ ಗೌರವ – ಪ್ರೊ.ಷಾಕಿರಾ ಖಾನಂ
ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.
ಆಗಸ್ಟ್ 15 ಬಂದರೆ ನಮಗೆಲ್ಲ ಮೊದಲು ಕಣ್ಣಿಗೆ ಕಾಣುವುದು ಬಾವುಟ, ಮೆರವಣಿಗೆ, ಸಂಭ್ರಮ, ಭಾಷಣಗಳು, ನೆನಪುಗಳು. ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದು ೨೫೦ ವರ್ಷಗಳ ದಾಸ್ಯದ ಸಂಕೋಲೆಗಳಿಂದ ದೇಶ ಮುಕ್ತಗೊಂಡಿದ್ದಕ್ಕೆ. ಆದರೆ ಮನೆಯ ಒಳಗೆ, ಗಲ್ಲಿಯ ಮೂಲೆಗಳಲ್ಲಿ, ಕೆಲಸದ ಜಾಗದಲ್ಲಿ ಈ ಸ್ವಾತಂತ್ರ್ಯದ ಅರ್ಥ ಮಹಿಳೆಯರಿಗೆ ಬೇರೆಯದೇ ರೀತಿಯಲ್ಲಿ ಕಾಣಿಸುತ್ತದೆ.
ನನ್ನ ತಾತನ ಸ್ವಾತಂತ್ರ್ಯ ಹೋರಾಟವನ್ನು ನೋಡಿದ್ದ, ಅದರ ನೋವನ್ನು ಮತ್ತು ಆನಂದವನ್ನು ಅನುಭವಿಸಿದ್ದ ಅಜ್ಜಿ ಹೇಳುತ್ತಿದ್ದರು – ಸ್ವಾತಂತ್ರ್ಯ ಬಂದ ದಿನ ಊರಿನ ಶಾಲೆಯಲ್ಲಿ ಮೊದಲ ಬಾರಿಗೆ ಗಂಡು ಮಕ್ಕಳ ಸರಿ ಸಮಾನವಾಗಿ ಹುಡುಗಿಯರೂ ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡಿದ್ದರಂತೆ. ಅದು ಕೇವಲ ಹಾಡಾಗಿರಲಿಲ್ಲ. “ನಾವೂ ಈ ದೇಶದವರು” ಎಂದು ಗಟ್ಟಿಯಾಗಿ ಹೇಳಿದ ದಿನ ಅದು. ಅಂದಿನಿಂದ ಇಂದಿನವರೆಗೆ ಪ್ರತಿ ಆಗಸ್ಟ್ 15 ನಮಗೆ ಒಂದು ಜ್ಞಾಪನೆ. ನಮ್ಮ ಮಹಿಳೆಯರು ಹೋರಾಡಿದ್ದು ಬ್ರಿಟಿಷರ ವಿರುದ್ಧವಲ್ಲ, ಮನೆಯ ನಾಲ್ಕು ಗೋಡೆಗಳ ಒಳಗಿನ ಮೌನದ ವಿರುದ್ಧವೂ ಹೌದು.
ಇಂದು ನಾವು ಕಚೇರಿಗೆ ಹೋಗುವಾಗ, ಬಸ್ ನಲ್ಲಿ ಪ್ರಯಾಣಿಸುವಾಗ, ರಾತ್ರಿ ಆಫೀಸ್‌ನಿಂದ ಮನೆಗೆ ಬರುವಾಗ ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ. ಈಗ ನಮಗೆ ದಕ್ಕಿರುವ ಸ್ವಾತಂತ್ರ್ಯ ನಮ್ಮ ಅಜ್ಜಿ ತಾಯಂದಿರಿಗೆ ಕನಸಾಗಿತ್ತು. ಅವರು ಅಡುಗೆ ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವ ಹಕ್ಕು ಪಡೆಯಲೂ ಹೋರಾಡಿದರು, ಶಾಲೆಗೆ ಹೋಗುವ ಹಕ್ಕಿಗಾಗಿ ಬಡಿದಾಡಿದರು. ನಾವು ಈಗ ಆ ಹಕ್ಕನ್ನು ಬಳಸಿ ಆಕಾಶದೆತ್ತರಕ್ಕೆ ಹಾರಿದೆವು. ಒಂದು ತಲೆಮಾರಿನ ತ್ಯಾಗ ಮತ್ತೊಂದು ತಲೆಮಾರಿನವರಿಗೆ ಸಾಧನೆ ಯಾಗುತ್ತದೆ. ಅದೇ ಸ್ವಾತಂತ್ರ್ಯದ ಸೌಂದರ್ಯ.
ಪ್ರಪಂಚದ ಯಾವುದೇ ದೇಶ ಸ್ವಾತಂತ್ರ್ಯ ಪಡೆದರೂ ಹೆಣ್ಣಿನ ಸ್ವಾತಂತ್ರ್ಯ ಒಂದು ಗಗನ ಕುಸುಮವೇ ಸರಿ. ಆದರೂ ಸ್ವಾತಂತ್ರ್ಯ ಎಂದರೆ ಕೇವಲ ದೊಡ್ಡ ದೊಡ್ಡ ಸಾಧನೆಗಳಲ್ಲ. ಬೆಳಗ್ಗೆ 6 ಗಂಟೆಗೆ ಎದ್ದು ಮಕ್ಕಳನ್ನು ಶಾಲೆಗೆ ಕಳುಹಿಸಿ, ತಾನೂ ಕೆಲಸಕ್ಕೆ ಹೋಗುವ ತಾಯಿಯ ನಿರ್ಧಾರವೂ ಸ್ವಾತಂತ್ರ್ಯವೇ. “ಇಲ್ಲ, ನಾನು ಮದುವೆಯಾಗಲ್ಲ, ಮೊದಲು ಓದಬೇಕು” ಎಂದು ಹೇಳುವ 20 ವರ್ಷದ ಹುಡುಗಿಯ ಧೈರ್ಯವೂ ಸ್ವಾತಂತ್ರ್ಯವೇ. ಗಂಡನ ಸಂಬಳದ ಮೇಲೆ ಅವಲಂಬಿತವಾಗದೆ ತನ್ನದೇ ಬ್ಯಾಂಕ್ ಖಾತೆ ಇಟ್ಟುಕೊಳ್ಳುವ ಮಹಿಳೆಯ ಆತ್ಮವಿಶ್ವಾಸವೂ ಸ್ವಾತಂತ್ರ್ಯವೇ. ನಾವು ಬಯಸಿದ ಬಟ್ಟೆ ಹಾಕುವುದು, ಬಯಸಿದ ಕೋರ್ಸ್ ಆಯ್ಕೆ ಮಾಡುವುದು, ಇಲ್ಲ ಎಂದು ಹೇಳಲು ಕಲಿಯುವುದು, ಇವೆಲ್ಲವೂ ಚಿಕ್ಕ ಚಿಕ್ಕ ಸ್ವಾತಂತ್ರ್ಯಗಳು. ಈ ಚಿಕ್ಕ ಗೆಲುವುಗಳಿಂದಲೇ ದೊಡ್ಡ ದೇಶದ ಸ್ವಾತಂತ್ರ್ಯ ಬಲವಾಗುವುದು.

ಗಡಿಯಲ್ಲಿ ನಿಂತು ದೇಶ ಕಾಯುವ ಸೈನಿಕರ ತಾಯಂದಿರು, ಅಕ್ಕಂದಿರು, ರಾತ್ರಿಯೆಲ್ಲ ನಿದ್ದೆ ಬಿಟ್ಟು ಮಕ್ಕಳಿಗೆ ಜ್ವರ ಇದ್ದರೂ ಮರುದಿನ ಆಸ್ಪತ್ರೆಯಲ್ಲಿ ಡ್ಯೂಟಿ ಮಾಡುವ ನರ್ಸ್, 12 ಗಂಟೆ ಕೆಲಸ ಮಾಡಿ ಸಂಜೆ ಮನೆಗೆ ಬಂದು ಅಡುಗೆ ಮಾಡುವ ರೈತ ಮಹಿಳೆಯರು – ಈ ಎಲ್ಲ ಕಥೆಗಳು ಪಠ್ಯಪುಸ್ತಕದಲ್ಲಿ ಇಲ್ಲದಿದ್ದರೂ, ಇವೇ ನಮ್ಮ ನಿಜವಾದ ಸ್ವಾತಂತ್ರ್ಯದ ಕಥೆಗಳು. ದೇಶವನ್ನು ಕಟ್ಟುವುದು ಇಟ್ಟಿಗೆ ಮತ್ತು ಕಾಂಕ್ರೀಟ್‌ನಿಂದ ಮಾತ್ರವಲ್ಲ ಕಾಳಜಿ, ಶ್ರಮ ಮತ್ತು ತಾಳ್ಮೆಯಿಂದ ಕೂಡಾ.
ಆದರೆ ಇನ್ನೂ ಬಗೆಹರಿಯದ ಸ್ವಾತಂತ್ರ್ಯ ಇದೆ. ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯುವ ಸ್ವಾತಂತ್ರ್ಯ, ಕೆಲಸದ ಜಾಗದಲ್ಲಿ ಸಮಾನ ವೇತನ, ಮನೆಯ ಕೆಲಸವನ್ನು “ನನ್ನ ಕೆಲಸ” ಎಂದು ಮಾತ್ರ ನೋಡದೆ ಹಂಚಿಕೊಳ್ಳುವ ಮನಸ್ಸು, ಹೆಣ್ಣು ಮಗುವಿಗೆ “ಒಳ್ಳೆಯ ಹುಡುಗಿ ಹೀಗೆ ಇರಬೇಕು” ಎಂಬ ಚೌಕಟ್ಟು ಇನ್ನೂ ಇದೆ. ಆದರೆ ಪ್ರತಿ ಆಗಸ್ಟ್ 15 ಈ ಚೌಕಟ್ಟನ್ನು ಸ್ವಲ್ಪ ಸ್ವಲ್ಪ ಮುರಿಯಲು ನಮಗೆ ಶಕ್ತಿ ಕೊಡುತ್ತದೆ. ಯಾಕೆಂದರೆ ಸ್ವಾತಂತ್ರ್ಯ ಎಂದರೆ ಅನುಮತಿ ಕೇಳುವುದಲ್ಲ, ಜವಾಬ್ದಾರಿಯಿಂದ ನಿರ್ಧಾರ ತೆಗೆದುಕೊಳ್ಳುವುದು.
ನಮ್ಮ ಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಇದೆ. ಕೇಸರಿಯ ಶಕ್ತಿ, ಬಿಳಿಯ ಶಾಂತಿ, ಹಸಿರಿನ ಬೆಳವಣಿಗೆ, ಎಲ್ಲವೂ ನಮ್ಮಲ್ಲಿದೆ. ಈ ವರ್ಷ ಆಗಸ್ಟ್ 15 ರಂದು ಬಾವುಟಕ್ಕೆ ವಂದನೆ ಮಾಡುವಾಗ ಒಂದು ಕ್ಷಣ ಸೆಟೆದು ನಿಂತು ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ ಎಂದು ನೋಡಿದರೆ ನಮ್ಮ ಅಜ್ಜಿಯ ಕನಸು, ತಾಯಿಯ ಹೋರಾಟ, ನಮ್ಮ ಪ್ರಯತ್ನ, ಮಗಳ ಆಕಾಂಕ್ಷೆ ಎಲ್ಲವೂ ಒಂದೇ ದಾರಿಯಲ್ಲಿ ಸೇರುತ್ತವೆ. ಸ್ವಾತಂತ್ರ್ಯ ಎಂದರೆ ಅದು ನಮಗೆ ಸಿಕ್ಕ ಉಡುಗೊರೆಯಲ್ಲ, ನಾವು ಮುಂದಿನ ತಲೆಮಾರಿಗೆ ಕೊಡಬೇಕಾದ ಜವಾಬ್ದಾರಿ.
ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ಕಟ್ಟುಪಾಡುಗಳನ್ನು ಮೆಟ್ಟಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮಹಿಳೆಯರು, ಸತಿಯಾದ ಮಹಿಳೆಯರು, ಜೌಹರ್ ಆದ ತರುಣಿಯರು, ಹಲಾಲ ಆದ ಹೆಂಗಸರು, ಪುರುಷರ ಮನಸ್ಸನ್ನು ತಣಿಸಲು ದಣಿವರಿಯದೆ ನೃತ್ಯ ಮಾಡಿದ ನೃತ್ಯಗಾತಿಯರು, ಜೈಲಿನ ಕಬ್ಬಿಣದ ಕಂಬಿಗಳ ಹಿಂದೆ ನಿಂತು ದೇಶಕ್ಕಾಗಿ ಘೋಷಣೆ ಕೂಗಿದ ಮಹಿಳೆಯರು, ತಮ್ಮ ಮಕ್ಕಳನ್ನು ಬಿಟ್ಟು ಚಳವಳಿಗೆ ಇಳಿದ ತಾಯಂದಿರು, ಮೌನವಾಗಿ ಉಪ್ಪಿನ ಸತ್ಯಾಗ್ರಹದಲ್ಲಿ ಕೈ ಜೋಡಿಸಿದ ಗೃಹಿಣಿಯರು ಇವರೆಲ್ಲರ ತ್ಯಾಗವಿಲ್ಲದೆ ನಾವು ಇಂದು ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಿರಲಿಲ್ಲ. ಅವರು ಇಂದಿನ ಸ್ವಾತಂತ್ರ್ಯವನ್ನು ನಮಗೆ ಬಳುವಳಿಯಾಗಿ ನೀಡಿದರು.
ಅವರ ಆ ಕಣ್ಣೀರು, ಆ ಹೋರಾಟ ಘರ್ಷಣೆ, ಆ ಸುಟ್ಟ ನೆನಪುಗಳ ಮೇಲೆ ಇಂದು ನಾವು ನಿಂತಿದ್ದೇವೆ. ಆದ್ದರಿಂದ ನಮ್ಮ ದೇಶ ಸ್ವಾತಂತ್ರ್ಯಗೊಂಡು ಹೇಗೆ ತನ್ನ ಸ್ವಾತಂತ್ರ್ಯವನ್ನು ಬರೀ ಆಚರಣೆಗೆ ಮಾತ್ರ ಸೀಮಿತಗೊಳಿಸಿಲ್ಲವೋ ಹಾಗೆ ಅದನ್ನು ಪ್ರತಿ ದಿನದ ಆಯ್ಕೆಯಲ್ಲಿ ಬದುಕೋಣ. ಮಗಳ ಕನಸಿಗೆ ರೆಕ್ಕೆ ಕೊಡುವಾಗ, ಸ್ನೇಹಿತೆಯ ಧ್ವನಿಗೆ ಸಾಥ್ ನೀಡುವಾಗ, ಕೆಲಸದ ಜಾಗದಲ್ಲಿ ಅನ್ಯಾಯವಾದಾಗ ಅದನ್ನು ಪ್ರಶ್ನಿಸುವಾಗ ನಾವು ನಿಜವಾಗಿಯೂ ಆ ಮಹಿಳೆಯರ ಕನಸನ್ನು ಗೌರವಿಸೋಣ.
ಇದು ಸಾಧ್ಯವೇ ಇಲ್ಲ ಎಂದು ಅನಿಸಿದಾಗಲೂ, “ಇದನ್ನು ಸಾಧಿಸುವುದು ಹೇಗೆ?” ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುತ್ತಾ ಮುನ್ನುಗ್ಗುವುದೇ ನಿಜವಾದ ಸ್ವಾತಂತ್ರ್ಯ. ಆ ಜವಾಬ್ದಾರಿಯನ್ನು ಅರಿತು ನಾವು ಪ್ರೀತಿಯಿಂದ, ಧೈರ್ಯದಿಂದ ಅದನ್ನು ಹೊರೋಣ. ಯಾಕೆಂದರೆ ಒಂದು ದೇಶ ನಿಜವಾಗಿಯೂ ಸ್ವತಂತ್ರವಾಗುವುದು, ಅಲ್ಲಿನ ಪ್ರತಿ ಮಹಿಳೆ ತನ್ನ ಧ್ವನಿಯಲ್ಲಿ, ತನ್ನ ಆಯ್ಕೆಯಲ್ಲಿ, ತನ್ನ ಬದುಕಿನಲ್ಲಿ ಸ್ವತಂತ್ರಳಾದಾಗ ಮಾತ್ರ. ಆಗ ಮಾತ್ರ ನಮ್ಮ ತ್ರಿವರ್ಣ ಬಾವುಟ ಗಾಳಿಯಲ್ಲಿ ಸ್ವಚ್ಛಂದ ಹಾರಾಡಲು ಸಾಧ್ಯ, ಅದರ ನೆರಳಿನಲ್ಲಿ ನಿಂತ ಪ್ರತಿಯೊಬ್ಬ ಹೆಣ್ಣಿನ ಮುಖದಲ್ಲೂ ನಿಜವಾದ ಸ್ವಾಭಿಮಾನದ ಬೆಳಕು ಕಾಣಲು ಸಾಧ್ಯ. ಅದೇ ನಮ್ಮ ಆಗಸ್ಟ್ 15 ಕ್ಕೆ ನಾವು ನೀಡುವ ಅತ್ಯುತ್ತಮ ಗೌರವ.
ಪ್ರೊ.ಷಾಕಿರಾ ಖಾನಂ
ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.
ಇದನ್ನೂ ಓದಿ – ಮೀಸಲಾತಿ ವಿರೋಧಿ ಮಾಜಿ ಸುಪ್ರೀಂ ನ್ಯಾ. ಸಂತೋಷ ಹೆಗ್ಡೆ


