1980 ರ ಆ ಕಾಲಕ್ಕೆ, ಸಾಹಿತ್ಯ ಚಟುವಟಿಕೆಗಳಿಗೆ ಜಿಲ್ಲೆಯ ಕಾಲೇಜುಗಳಲ್ಲೇ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಹೆಸರುವಾಸಿಯಾಗಿತ್ತು. ಇದಕ್ಕೆ ಕಾರಣ ಸಾಹಿತ್ಯ ಪರಿಚಾರಕರಾದ ಎಂ ರಾಮಚಂದ್ರ ಮತ್ತು ಉದಯವಾಣಿಯೊಂದಿಗಿನ ಅವರ ಸಂಪರ್ಕದ ಕಾರಣ ಇಲ್ಲಿನ ಪ್ರತಿಯೊಂದು ಸಾಹಿತ್ಯ ಚಟುವಟಿಕೆಗಳನ್ನು ಕುರಿತ ವರದಿ ಆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುದು.
1970 ರ ಸುಮಾರಿಗೆ ಉದಯವಾಣಿ ಪತ್ರಿಕೆ ಆರಂಭವಾಯಿತು. ಭುವನೇಂದ್ರ ಕಾಲೇಜು ಆರಂಭವಾದುದು 1960 ರಲ್ಲಿ. ಭುವನೇಂದ್ರ ಕಾಲೇಜು ಮಣಿಪಾಲದ ಶಿಕ್ಷಣ ಅಕಾಡೆಮಿಗೆ ಸೇರಿದ್ದರಿಂದ ಅದಾಗಲೇ ಮಣಿಪಾಲದ ಪೈ ಬಳಗದ ಜೊತೆಗೆ ಉಪನ್ಯಾಸಕ ರಾಮಚಂದ್ರರಿಗೆ ಒಳ್ಳೆಯ ಒಡನಾಟವಿತ್ತು. ಉದಯವಾಣಿಯ ಆರಂಭದ ದಿನಗಳಿಂದಲೇ ರಾಮಚಂದ್ರರು ಆ ಪತ್ರಿಕೆಯ ಬರೆಹಗಾರರಾಗಿದ್ದರು ಮಾತ್ರವಲ್ಲ, ಕಾರ್ಕಳದಿಂದ ಉದಯವಾಣಿಯ ಬಾತ್ಮೀದಾರರಾಗಿಯೂ ಅವರು ಕೆಲಸ ಮಾಡುತ್ತಿದ್ದರು. ಏನಾದರೂ ಸುದ್ದಿ ಉದಯವಾಣಿಯಲ್ಲಿ ಪ್ರಕಟವಾಗಬೇಕೆಂದರೆ ಅದನ್ನು ರಾಮಚಂದ್ರರ ಬಳಿ ಕೊಟ್ಟರಾಯಿತು. ಅವರು ಒಪ್ಪಿ ಅದನ್ನು ಕಳಿಸಿದರೆಂದರೆ, ಅದು ಪ್ರಕಟವಾಯಿತೆಂದೇ ಅರ್ಥ. ಆ ಕಾಲದ ಅತ್ಯಂತ ಪ್ರಭಾವಿ ಪತ್ರಿಕೆ ಉದಯವಾಣಿಯಲ್ಲಿ ಪ್ರಕಟವಾಗುವುದೆಂದರೆ ಅದೇನು ಸಣ್ಣ ಸಂಗತಿಯೇ? ಇದೇ ರೀತಿಯಲ್ಲಿ ಕಾರ್ಕಳ ಕಾಲೇಜಿನ ಚಟುವಟಿಕೆಗಳ ವರದಿಗಳನ್ನು ಅವರು ಉದಯವಾಣಿಗೆ ಕಳುಹಿಸುತ್ತಿದ್ದರು ಮತ್ತು ಅವು ತಪ್ಪದೇ ಪ್ರಕಟವಾಗುತ್ತಿದ್ದವು. ಕಾಲೇಜಿಗೆ ಒಳ್ಳೆಯ ಹೆಸರು ಬರುತ್ತಿತ್ತು. ಪ್ರಚಾರದಿಂದ ಪ್ರಸಿದ್ಧಿ, ಪ್ರಸಿದ್ಧಿಯಿಂದ ಪ್ರಚಾರ.
ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದಲ್ಲಿ ಆಗ ಇಬ್ಬರು ಉಪನ್ಯಾಸಕರಿದ್ದರು. ಎಂ ರಾಮಚಂದ್ರ ಮತ್ತು ಬಿ ಎಸ್ ಭಂಡಾರಿ. ಇಬ್ಬರೂ ಪ್ರತಿಭಾವಂತರು. ಬಿ ಎಸ್ ಭಂಡಾರಿ ತಮ್ಮ ಕೆಲಸವನ್ನಷ್ಟೇ ಮಾಡಿಕೊಂಡು ತಮ್ಮ ಪಾಡಿಗಿದ್ದರು. ಅವರಿಬ್ಬರಲ್ಲಿ ಅಂತಹ ಸ್ನೇಹವಿರಲಿಲ್ಲ. ಒಂದೇ ಕೊಠಡಿಯಲ್ಲಿ ಕೂರುವವರು. ಆದರೂ ರಾಮಚಂದ್ರರ ಪತ್ರಿಕಾ ಲೇಖನ ಸಂಬಂಧದಲ್ಲಿ ಪರಸ್ಪರ ಟೀಕಿಸುವುದನ್ನೂ ಉದಯವಾಣಿಯ ಮೂಲಕವೇ ಮಾಡುತ್ತಿದ್ದರು!
ಆದರೆ, ಎಂ ರಾಮಚಂದ್ರರಿಗೆ ಅಪಾರವಾದ ಸಾಹಿತ್ಯಾಸಕ್ತಿ. ಅವರು ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಓದಿದವರು. ಸೇಡಿಯಾಪು ಕೃಷ್ಣ ಭಟ್ಟರ ಶಿಷ್ಯ. ಮುಂದೆ ಧಾರವಾಡದಲ್ಲಿ ವೃಷಭೇಂದ್ರ ಸ್ವಾಮಿಯವರ ಶಿಷ್ಯನಾಗಿ ಎಂ ಎ ಮುಗಿಸಿದವರು. ಪಂಡಿತ ಪರಂಪರೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಸಾಹಿತ್ಯ ಚಟುವಟಿಕೆಗಳು, ಮೇರು ಸಾಹಿತಿಗಳು, ಸಾಹಿತ್ಯ ಸಂಘಗಳು ಇವುಗಳೊಂದಿಗೆ ಅವರಿಗೆ ನಂಟು ಇತ್ತು. ಅಲ್ಲೂ ಹೆಚ್ಚಾಗಿ ಸಾಹಿತ್ಯ ಪರಿಚಾರಕನಾಗಿಯೇ ಇದ್ದ ಅವರು ಭುವನೇಂದ್ರ ಕಾಲೇಜಿನಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಮುಂದುವರಿಸಲು ಅವರ ಈ ಹಿನ್ನೆಲೆಯೇ ಕಾರಣವಾಗಿತ್ತು.
ರಾಮಚಂದ್ರರು ಮೂಲತಃ ಸುಳ್ಯದ ಮಂಡೆಕೋಲಿನವರು. ಮಣಿಯಾಣಿ ಸಮುದಾಯವರು. ಆದರೆ ಅವರು ಎಲ್ಲೂ ತಮ್ಮ ಊರು, ಕುಟುಂಬ ಇತ್ಯಾದಿಗಳ ಮಾಹಿತಿಗಳನ್ನು ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಅವರನ್ನು ಅನೇಕರು ಬ್ರಾಹ್ಮಣ ಎಂದೇ ತಿಳಿದುಕೊಂಡಿದ್ದರು. ಅವರ ನಡೆನುಡಿಗಳೂ ಹಾಗೆಯೇ ಇರುತ್ತಿದ್ದವು. ಅವರು 1962 ರಲ್ಲಿ ಅಧ್ಯಾಪನ ಆರಂಭಿಸಿದಂದಿನಿಂದಲೂ ಕಾರ್ಕಳವನ್ನೇ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಕಾರ್ಕಳದವರೇ ಆಗಿಹೋಗಿದ್ದರು (ನಿವೃತ್ತರಾದುದು 1997ರಲ್ಲಿ).
ರಾಮಚಂದ್ರರು ಒಳ್ಳೆಯ ಲೇಖಕ, ವಾಗ್ಮಿ. ಟಿಪ್ಪಣಿ ಮಾಡಿಕೊಂಡು ಬರದೆ ಅವರು ಭಾಷಣ ಮಾಡಿದ್ದು ಕಡಿಮೆ. ಭಾಷಣ ಮಾಡಲು ಶುರುಮಾಡಿದರೆ ವರ್ಡ್ಸ್ವರ್ತ್, ಷೆಲ್ಲಿಯಿಂದ ಹಿಡಿದು, ʼಯತ್ರ ಯೋಗೇಶ್ವರ ಕೃಷ್ಣ ಯತ್ರ ಪಾರ್ಥೋ ಧನುರ್ಧರಃ…ʼ ಹೀಗೆ ಭಗವದ್ಗೀತೆಯ ಸಾಲುಗಳನ್ನೂ ಜೋಡಿಸಿ ಅದ್ಭುತವಾಗಿ ಭಾಷಣ ಮಾಡುತ್ತಿದ್ದರು. ಅವರು ವೇದಿಕೆಯಲ್ಲಿ ಕುಳಿತ ಅತಿಥಿಯನ್ನು ಹೊಗಳತೊಡಗಿದರೆಂದರೆ ಅ ಅತಿಥಿಗಳಿಗೇ ಕಿರಿಕಿರಿಯಾಗಿ ತಲೆ ಕೆಳಗೆಹಾಕಬೇಕು ಹಾಗಿರುತ್ತಿತ್ತು ಹೊಗಳಿಕೆಯ ಪರಿ. ಆದರೆ ಈ ಎಲ್ಲವುಗಳಿಂದ ಅವರಿಗೆ ಪ್ರಯೋಜನವೂ ಇತ್ತು. ಹೆಗ್ಗಡೆಯಂತಹ ಹೆಗ್ಗಡೆಯವರೂ ಅವರ ಮನೆಗೆ ಭೇಟಿ ನೀಡುತ್ತಿದ್ದರು.
ರಾಮಚಂದ್ರರಿಗೆ ಯಾವುದೇ ಕಾರ್ಯಕ್ರಮ ಅಚ್ಚುಕಟ್ಟಾಗಬೇಕು. ಶಿಸ್ತು ಮುಖ್ಯ. ಇದೇ ಕಾರಣದಿಂದ ಅವರಿಗೆ ಬೇರೆಯವರ ಬಗ್ಗೆ ಹೆಚ್ಚು ವಿಶ್ವಾಸವಿರುತ್ತಿರಲಿಲ್ಲ. ಬೇರೆಯವರು ಸರಿಯಾಗಿ ಮಾಡಲಿಕ್ಕಿಲ್ಲ ಎಂಬ ಅನುಮಾನ. ಹಾಗಾಗಿ, ಕಾರ್ಯಕ್ರಮದ ಸ್ವಾಗತ, ಧನ್ಯವಾದ ಎಲ್ಲವನ್ನೂ ಅವರೇ ನಿರ್ವಹಿಸುತ್ತಿದ್ದರು. ಇದೇ ಕಾರಣದಿಂದ ಅವರಿಗೆ ʼಸ್ವಾಗತ ರಾಮಚಂದ್ರʼ, ʼಧನ್ಯವಾದ ರಾಮಚಂದ್ರʼ ಎಂಬ ಅಡ್ಡ ಹೆಸರುಗಳೂ ಪ್ರಾಪ್ತವಾಗಿದ್ದವು.

ಕಾಲೇಜಿನ ಸಾಹಿತ್ಯ ಸಂಘದಲ್ಲಿ ಅವರು ಖಾಯಂ ಅಧ್ಯಕ್ಷ. ವರ್ಷಕ್ಕೊಮ್ಮೆ ಹೊಸ ಕಾರ್ಯದರ್ಶಿ. ಅಂತಿಮ ಪದವಿ ತರಗತಿಯಲ್ಲಿದ್ದು ಸಾಹಿತ್ಯಾಸಕ್ತಿ ಇರುವ ಒಬ್ಬ ವಿದ್ಯಾರ್ಥಿಯನ್ನು ಅವರೇ ಕಾರ್ಯದರ್ಶಿ ಎಂದು ಘೋಷಿಸಿಬಿಡುತ್ತಿದ್ದರು. ಆತ ಹೆಸರಿಗಷ್ಟೇ ಕಾರ್ಯದರ್ಶಿ. ಕಾರ್ಯಕ್ರಮವೊಂದರ ಸ್ವಾಗತವನ್ನು ಆತ ಮಾಡುವುದಿದ್ದರೆ, ಆತ ಏನು ಹೇಳಬೇಕು ಎಂಬುದನ್ನು ಅವರೇ ನಿರ್ಧರಿಸಿ ಕಾಗದದಲ್ಲಿ ಬರೆದುಕೊಡುತ್ತಿದ್ದರು. ಅದರಲ್ಲಿ ಒಂದು ಪದವನ್ನೂ ಹೆಚ್ಚುಕಡಿಮೆ ಮಾಡುವ ಸ್ವಾತಂತ್ರ್ಯ ವಿದ್ಯಾರ್ಥಿಗಿಲ್ಲ. ವಿದ್ಯಾರ್ಥಿಗಳೊಂದಿಗೆ ಎಂದೂ ಸ್ನೇಹದಿಂದ ಅವರು ಮಾತನಾಡಿದವರಲ್ಲ. ಅವರೊಂದಿಗೆ ಮಾತನಾಡುವುದೆಂದರೆ ಒಂದು ರೀತಿಯ ಭಯ. ಈ ಎಲ್ಲ ಕಾರಣದಿಂದಲೇ ಕಾಲೇಜಿನ ಸಾಹಿತ್ಯ ಸಂಘದಲ್ಲಿ ಕೆಲಸ ಮಾಡಿಯೂ ಮುಂದೆ ಲೇಖಕರಾಗಿ ಹೆಸರು ಮಾಡಿದವರು ಬೆರಳೆಣಿಕೆಯಷ್ಟು ಮಂದಿ. ಅವರು ಯಾರನ್ನೂ ಪ್ರೋತ್ಸಾಹಿಸಿದವರಲ್ಲ, ಬೆಳೆಸಿದವರೂ ಅಲ್ಲ.
ಕಾಲೇಜಿನ ಪ್ರಾಂಶುಪಾಲ ದಾಮೋದರ ಕಿಣಿಯವರದು ಮಗುವಿನಂತಹ ಮನಸು. ಅವರಿಗೆ ಸಾಹಿತ್ಯ, ಸಾಹಿತಿಗಳ ಪರಿಚಯ ಕಡಿಮೆ. ಆದರೆ, ರಾಮಚಂದ್ರರಿಗೆ ಇಡೀ ರಾಜ್ಯದ ಮೂಲೆ ಮೂಲೆಯ ಮೇರು ಸಾಹಿತಿಗಳ ಪರಿಚಯ, ಸಂಪರ್ಕ ಇತ್ತು. ಇಂತಿಂತಹ ಸಾಹಿತಿಯನ್ನು ಕರೆಸಿ ಸಾಹಿತ್ಯ ಕಾರ್ಯಕ್ರಮ ನಡೆಸುತ್ತೇವೆ ಎಂದು ರಾಮಚಂದ್ರರು ಹೇಳಿದರೆ, ಪ್ರೊ. ಕಿಣಿಯವರು ತಕ್ಷಣ ಒಪ್ಪಿಕೊಂಡು, ಅದಕ್ಕೆ ಬೇಕಾದ ಹಣಕಾಸು ಸಹಿತ ಸಂಪೂರ್ಣ ವ್ಯವಸ್ಥೆ ಮಾಡಿಬಿಡುತ್ತಿದ್ದರು. ರಾಮಚಂದ್ರರು ಸಾಹಿತಿಗಳೊಂದಿಗೆ ಪತ್ರ ವ್ಯವಹಾರ ಮಾಡಿ, ನಿಗದಿತ ದಿನ ಬರಮಾಡಿಕೊಂಡು, ತಮ್ಮ ಮನೆಗೇ ಕರೆದುಕೊಂಡು ಹೋಗಿ ಆ ಸಾಹಿತಿಗಳನ್ನು ಉಪಚರಿಸಿ, ಬಳಿಕ ಕಾಲೇಜಿಗೆ ಕರೆದುಕೊಂಡು ಬಂದು ಭಾಷಣ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಕಾರ್ಯಕ್ರಮದ ಬಳಿ ಪ್ರಾಂಶುಪಾಲರ ಕೊಠಡಿಯಲ್ಲಿ ಸಣ್ಣದೊಂದು ಟೀಪಾರ್ಟಿ ನಡೆಯುತ್ತಿತ್ತು. ಪ್ರಾಂಶುಪಾಲ ಕಿಣಿಯವರಿಗೂ ಮೇರು ಸಾಹಿತಿಗಳನ್ನು ಕಂಡ, ಮಾತಾಡಿಸಿದ ಖುಷಿ. ಮಾರನೇ ದಿನವೇ ಉದಯವಾಣಿಯಲ್ಲಿ ಈ ಸಂಬಂಧದ ಚಿತ್ರಸಹಿತ ವರದಿ ಪ್ರಕಟವಾಗಿ ಇಡೀ ನಾಡನ್ನು ತಲಪುತ್ತಿತ್ತು.
ಹೀಗೆ ಕಾಲೇಜಿನಲ್ಲಿ ವರ್ಷದುದ್ದಕ್ಕೂ ಸಾಹಿತ್ಯ ಸಂಘದ ಕಾರ್ಯಕ್ರಮ ನಡೆಯುತ್ತಿತ್ತು (ಅಲ್ಲದೆ ಆಧ್ಯಾತ್ಮಿಕ ಶಿಬಿರಗಳೂ ನಡೆಯುತ್ತಿದ್ದವು). ಸಾಹಿತ್ಯಾಸಕ್ತಿ ಇರುವ ವಿದ್ಯಾರ್ಥಿಗಳಿಗೋ ಹಬ್ಬವೋ ಹಬ್ಬ. ಜಿ ಪಿ ರಾಜರತ್ನಂ, ಶಿವರಾಮ ಕಾರಂತ, ವೃಷಭೇಂದ್ರ ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಪ್ರಭುಶಂಕರ, ಅಮೃತ ಸೋಮೇಶ್ವರ, ಎಂ ಎನ್ ಜೈಪ್ರಕಾಶ್, ಸುಬ್ರಾಯ ಚೊಕ್ಕಾಡಿ, ಏರ್ಯ, ತೋಳ್ಪಾಡಿ, ಕೊಂಡಾಣ ವಾಮನ, ಸಿ ಹೊಸಬೆಟ್ಟು, ಪ್ರಭಾಕರ ಜೋಷಿ, ಕುಂಬ್ಳೆ, ಬನ್ನಂಜೆ ಗೋವಿಂದಾಚಾರ್ಯ, ಗುಂಡ್ಮಿ ಚಂದ್ರಶೇಖರ ಐತಾಳ, ಕುರಾಡಿ ಸೀತಾರಾಮ ಅಡಿಗ, ಅಮ್ಮೆಂಬಳ ಶಂಕರನಾರಾಯಣ ನಾವಡ, ಉದ್ಯಾವರ ಮಾಧವ ಆಚಾರ್ಯ, ಕುಶಿ ಹರಿದಾಸ ಭಟ್, ಕೆ ಎಸ್ ನರಸಿಂಹ ಸ್ವಾಮಿ, ಟಿಕೆ ರಾಮರಾವ್ ಹೀಗೆ ಸಾಹಿತ್ಯ ಸಾಂಸ್ಕೃತಿಕ ಲೋಕದ ದಿಗ್ಗಜರು ಕಾಲೇಜಿನ ಸಾಹಿತ್ಯ ಕಾರ್ಯಕ್ರಮಗಳಿಗೆ ಹಾಜರಾದವರೇ.
1997 ರಲ್ಲಿ ರಾಮಚಂದ್ರರು ವೃತ್ತಿಯಿಂದ ನಿವೃತ್ತರಾದ ಮೇಲೂ ಅವರ ಈ ಸಾಹಿತ್ಯ ಚಟುವಟಿಕೆ ಕೊನೆಗೊಳ್ಳಲಿಲ್ಲ. ʼಕಾರ್ಕಳ ಸಾಹಿತ್ಯ ಸಂಘʼ ಸ್ಥಾಪಿಸಿ ತಮ್ಮ ಕೊನೆಯುಸಿರಿನ ಕೊನೆ ತನಕವೂ ಕಾರ್ಕಳದಲ್ಲಿ ಸಾಹಿತ್ಯ ಪರಿಸರವನ್ನು ಉಳಿಸಿ ಬೆಳೆಸಿದರು. ತಿಂಗಳಿಗೆ ಎರಡು ಕಾರ್ಯಕ್ರಮಗಳಂತೆ ವರ್ಷಗಟ್ಟಲೆ ಅವರು ಈ ಕಾರ್ಯವನ್ನು ಒಂದು ವೃತದಂತೆ ನಡೆಸಿಕೊಂಡು ಬಂದರು. ಸಾಹಿತ್ಯ ಸಂಘದ ಪರಿಧಿಯನ್ನು ಸಾಹಿತ್ಯದಾಚೆ ವಿಸ್ತರಿಸಿ ಅಲ್ಲಿ ಕಲೆ, ಸಾಹಿತ್ಯ, ವಾಣಿಜ್ಯ ಹೀಗೆ ಎಲ್ಲ ವಿಚಾರಗಳ ಚರ್ಚೆಯೂ ಆಗುವಂತೆ ನೋಡಿಕೊಂಡರು. ಈ ಅರ್ಥದಲ್ಲಿ ಕಾರ್ಕಳದ ಸಾಹಿತ್ಯ, ಸಾಂಸ್ಕೃತಿಕ ಪರಿಸರಕ್ಕೆ ರಾಮಚಂದ್ರರ ಕೊಡುಗೆ ಅಸಾಧಾರಣವಾದುದು.
ಸಾಹಿತ್ಯಸಂಘದ ಕಾರ್ಯದರ್ಶಿಯಾದೆ
ಕಾಲೇಜು ಓದುತ್ತಿದ್ದಾಗ ನನ್ನಲ್ಲಿ ನಿಧಾನಕ್ಕೆ ಸಾಹಿತ್ಯಾಸಕ್ತಿ ಕುದುರಲಾರಂಭಿಸಿತು. ಇದಕ್ಕೆ ಕಾಲೇಜಿನ ಸಾಹಿತ್ಯ ಕಾರ್ಯಕ್ರಮಗಳು ಒಂದು ಕಾರಣವಾದರೆ, ಇನ್ನೊಂದು ಕಾರಣ ಆಗ ಲಭ್ಯವಿದ್ದ, ಸಾಹಿತ್ಯಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದ ವೈವಿಧ್ಯಮಯ ಪತ್ರಿಕೆಗಳು. ಲಂಕೇಶ್, ಪ್ರಜಾವಾಣಿ, ಸುಧಾ, ಉದಯವಾಣಿ, ತುಷಾರ ಇತ್ಯಾದಿ. ಅವುಗಳಲ್ಲಿ ನಾಡಿನ ಪ್ರತಿಭಾವಂತ ಕವಿಗಳು, ಕತೆಗಾರರು ಬರೆಯುತ್ತಿದ್ದರು.
ಕಾಲೇಜಿನಲ್ಲಿ ಸಾಹಿತ್ಯಕ್ಕೆ ಮೀಸಲಾದ ʼಸಹ್ಯಾದ್ರಿʼ ಭಿತ್ತಿಪತ್ರಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಲೇಖನ ಓದುತ್ತಾ ನಾನೂ ಬರೆಯಬೇಕು ಎಂದು ಬಯಸುತ್ತಿದ್ದೆ. ಗುಲಾಬಿ ಬಿ ಎಸ್ ಆಗಲೇ ಸಾಹಿತ್ಯ ಸಂಘದ ಸದಸ್ಯರಾಗಿದ್ದರು. ಅವರ ಕವಿತೆಗಳು ಉತ್ಕೃಷ್ಟವಾಗಿದ್ದು, ಅವು ಆಗಾಗ ಭಿತ್ತಿಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದವು ಮಾತ್ರವಲ್ಲ, ಆಗಿನ ತುಷಾರ ಮಾಸಿಕದಲ್ಲಿಯೂ ಪ್ರಕಟವಾಗುತ್ತಿದ್ದವು.
ಲೇಖನ, ಭಾಷಣ, ಗುಂಪು ಚರ್ಚೆ ಹೀಗೆ ನಾನು ಕಾಲೇಜಿನ ಸಾಹಿತ್ಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದೆ, ಬಹುಮಾನಗಳೂ ಬರುತ್ತಿದ್ದವು. ಇದನ್ನು ಕಂಡೋ ಏನೋ ಎಂ ರಾಮಚಂದ್ರರು ನಾನು ದ್ವಿತೀಯ ಪದವಿಯಲ್ಲಿದ್ದಾಗ, ನನ್ನನ್ನು ಸಾಹಿತ್ಯಸಂಘದ ಸದಸ್ಯನನ್ನಾಗಿ ಮಾಡಿದರು. ನನ್ನ ಸೀನಿಯರ್ ಪೆಲತ್ತೂರು ರವಿಶಂಕರ ಕಾರ್ಯದರ್ಶಿಯಾದ. ರವಿಶಂಕರ್ ಚಿತ್ರ ಕಲಾವಿದನೂ ಆಗಿದ್ದು. ವ್ಯಂಗ್ಯ ಚಿತ್ರಗಳನ್ನೂ ರಚಿಸುತ್ತಿದ್ದ (ಮುಂದೆ ಆತ ಮಂಗಳೂರಿನ ʼಅಭಿವ್ಯಕ್ತʼ ನಾಟಕ ತಂಡ ಸೇರಿ ನಟನಾಗಿ, ಪೋಸ್ಟರ್, ಬ್ಯಾನರ್, ವಿನ್ಯಾಸಕನಾಗಿ ಪ್ರಸಿದ್ಧನಾದ. ನಾನು ಮಂಗಳೂರು ಸೇರಿದಾಗ ನಮ್ಮ ರಂಗ ಒಡನಾಟ ಮುಂದುವರಿಯಿತು). ಸಾಹಿತ್ಯಸಂಘದ ಕಾರ್ಯಕ್ರಮಗಳಲ್ಲಿ ನಾನು ತಪ್ಪದೆ ಭಾಗವಹಿಸುತ್ತಿದ್ದೆ. ದೊಡ್ಡ ದೊಡ್ಡ ಸಾಹಿತಿಗಳನ್ನು ನೋಡುವ ಅವರ ಮಾತುಗಳನ್ನು ಆಲಿಸುವ ಅವಕಾಶ ಸಿಗತೊಡಗಿತು. ಕಾರ್ಯಕ್ರಮದ ಮುಗಿದ ಬಳಿಕ ಓಡಿಹೋಗಿ ಸಾಹಿತಿಗಳನ್ನು ಕಾಡಿ ಆಟೋಗ್ರಾಫ್ ತೆಗೆದುಕೊಳ್ಳುತ್ತಿದ್ದೆ.
21 ರ ಹರೆಯವಲ್ಲವೇ? ಪ್ರೇಮ ಅರಳುವ ಸಮಯ, ಭಾವ ಪ್ರಪಂಚದಲ್ಲಿ ಕಳೆದುಹೋಗುವ ಸಮಯ. ಮನೆಯಲ್ಲಿ ಈಸೀಚೇರಿನಲ್ಲಿ ಓದಲು ಕುಳಿತರೆ ಧುತ್ತನೆ ಮನಸಿನಿಂದ ಕವಿತೆಗಳು ಒಂದಾದರೊಂದರಂತೆ ನೆಗೆಯುತ್ತಿದ್ದವು. ಪರೀಕ್ಷೆಯ ಒತ್ತಡದ ದಿನಗಳಲ್ಲಿಯಂತೂ ಈ ಕವಿತೆಗಳ ಕಾಟ ಒಂದಿಷ್ಟು ಹೆಚ್ಚೇ. ಒಂದು ನೋಟ್ ಪುಸ್ತಕದಲ್ಲಿ ಅವನ್ನು ಬರೆದಿಡುತ್ತಿದ್ದೆ. ʼಸಹ್ಯಾದ್ರಿʼ ಎಂಬ ಕಾವ್ಯನಾಮ ಕೂಡಾ ಇರಿಸಿಕೊಂಡಿದ್ದೆ. ಆದರೆ ಅವನ್ನು ಕಾಲೇಜಿನ ಭಿತ್ತಿಪತ್ರಿಕೆಯಲ್ಲಿ ಪ್ರಕಟಿಸಲು ರಾಮಚಂದ್ರರ ಬಳಿ ಕೊಡಲು ಧೈರ್ಯ ಬರುತ್ತಿರಲಿಲ್ಲ.
1982 ರ ಆಗಸ್ಟ್. ನಾನು ಅಂತಿಮ ಬಿ ಎಸ್ ಸಿ ಯಲ್ಲಿದ್ದೆ. ಒಂದು ದಿನ ಮಧುರ ಆಘಾತ ಕಾದಿತ್ತು. ನನ್ನನ್ನು ಸಾಹಿತ್ಯಸಂಘದ ಕಾರ್ಯದರ್ಶಿಯನ್ನಾಗಿ ಎಂ ರಾಮಚಂದ್ರರು ಘೋಷಿಸಿಬಿಟ್ಟರು. ʼಕಾರ್ಯದರ್ಶಿ ಆಗುತ್ತಿಯಾ?ʼ ಎಂದು ಕೇಳುವ ಪಂಚಾತಿಗೆಯೆಲ್ಲ ಅವರಲ್ಲಿ ಇಲ್ಲ. ಘೋಷಿಸಿಬಿಡುವುದೇ ಅವರ ಜಾಯಮಾನ.
ಒಂದೆಡೆ ಖುಷಿ, ಇನ್ನೊಂದೆಡೆ ಭಯ. ಸಾಹಿತ್ಯ ಕಾರ್ಯಕ್ರಮವಾಗುವಾಗಲೆಲ್ಲ ನಾನು ವೇದಿಕೆಯಲ್ಲಿರಬೇಕು, ಸ್ವಾಗತ, ಪರಿಚಯ ಅಥವಾ ಧನ್ಯವಾದ ಕಾರ್ಯ ನಡೆಸಿಕೊಡಬೇಕು. ಈಗಾಗಲೇ ಹೇಳಿದ ಹಾಗೆ, ರಾಮಚಂದ್ರರಂತೂ ಎಂದೂ ನಗುಮೊಗದಿಂದ ಮಾತನಾಡಿದವರಲ್ಲ. ಅವರಲ್ಲಿ ಮಾತನಾಡುವುದೆಂದರೆ ಭಯ. ಅವರ ಕೈಬರೆಹವಂತೂ ಲ್ಯಾಟಿನ್ ಭಾಷೆಯಂತಿರುತ್ತಿತ್ತು. ʼಎಂ ರಾಮʼ ಎನ್ನುವುದನ್ನು ಇಂಗ್ಲಿಷ್ ನ ಸಣ್ಣಕ್ಷರ ಎಂ ಬರೆಯುವ ಹಾಗೆ ಶುರುಮಾಡಿ ಎಂ ರಾ ಮ ಎಲ್ಲವೂ ಒಂದೇ ರೀತಿಯಲ್ಲಿರುತ್ತಿತ್ತು.

ಇನ್ನು ಸ್ವಾಗತವಿರಲೀ, ಧನ್ಯವಾದವಿರಲೀ ಅವರು ಬರೆದುಕೊಟ್ಟುದನ್ನೇ ಓದಬೇಕು. ಒಮ್ಮೆ ಹೀಗೇ ಏನೋ ಬರೆದುಕೊಟ್ಟರು. ಅದರ ಒಂದು ಪದ ಅರ್ಥವಾಗಿರಲಿಲ್ಲ. ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು ಎನ್ನುವಾಗ ಹೋಗಿ, ʼಸಾರ್ ಇದು ಅರ್ಥವಾಗಲಿಲ್ಲʼ ಎಂದೆ. ಅದನ್ನು ಸಹನೆಯಿಂದ ಉತ್ತರಿಸಬಹುದಿತ್ತು. ಬದಲಿಗೆ ಅವರು ʼಅದನ್ನು ಈಗ ಕೇಳುವುದಾ?ʼ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಹಾಗಾಗಿ, ಕಾರ್ಯದರ್ಶಿಯೇನೋ ಆದೆ. ಆದರೆ ಅಲ್ಲಿ ನನಗೆ ಸ್ವಂತದ್ದೇನೂ ಕೆಲಸವಿರಲಿಲ್ಲ. ಬೆಳೆಯುವುದಕ್ಕೆ ಅವಕಾಶವೂ ಇರಲಿಲ್ಲ.
ಇನ್ನು ನಾನು ಮಾಡುತ್ತಿದ್ದ ಮುಖ್ಯ ಕಾರ್ಯಕ್ರಮವೆಂದರೆ, ನಾಳೆ ಕಾರ್ಯಕ್ರಮ ಇದ್ದರೆ ಆ ಸಂಬಂಧ ಇವತ್ತು ಕಾಲೇಜು ಪ್ರವೇಶದ್ವಾರದ ಬಳಿಯ ನೊಟೀಸ್ ಬೋರ್ಡ್ ನಲ್ಲಿ, ಬಣ್ಣದ ಚಾಕ್ ಬಳಸಿಕೊಂಡು ಸುಂದರವಾಗಿ ಕಾರ್ಯಕ್ರಮದ ವಿವರ ಬರೆಯುವುದು. ಗಂಟೆಗಟ್ಟಲೆ ಆ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದೆ.
ನಾನು ಕಾರ್ಯದರ್ಶಿಯಾಗಿದ್ದ ಆ ಕಾಲಕ್ಕೆ ಕಾಲೇಜಿನಲ್ಲಿ ಅನೇಕ ವಿಶಿಷ್ಟ ಕಾರ್ಯಕ್ರಮಗಳು ನಡೆದವು. ರಾಜ್ಯೋದಯವಾಗಿ 25 ವರ್ಷವಾದ ಪ್ರಯುಕ್ತ ಇಡೀ ದಿನದ ವಿಶೇಷ ಕಾರ್ಯಕ್ರಮ ಏರ್ಪಾಡಾಗಿತ್ತು. ಕಾರಂತ ಸಹಿತ ಅನೇಕ ಸಾಹಿತಿಗಳು ಆಗಮಿಸಿದ್ದರು. ಆಗೆಲ್ಲ ನನಗೆ ವೇದಿಕೆಯಲ್ಲಿ ಆಸೀನನಾಗುವ ಭಾಗ್ಯ. ಹೆಗ್ಗಡೆಯವರು ಭೇಟಿ ನೀಡಿದಾಗ, ಹಾಗೆಯೇ ಕಾಲೇಜು ವಾರ್ಷಿಕೋತ್ಸವ ನಡೆಯುವಾಗಲೂ ವೇದಿಕೆಯ ಮೇಲೆ ವಿರಾಜಮಾನನಾಗುವ ಅವಕಾಶ. ಮಾರನೇ ದಿನ ನನ್ನ ಫೋಟೋ ಸಹಿತ ವರದಿ ಉದಯವಾಣಿಯಲ್ಲಿ ಪ್ರಕಟವಾಗುವಾಗ ರೋಮಾಂಚನದ ಅನುಭವ.
ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಒಟ್ಟುಗೂಡಿಸಿ ಸಮೂಹ ಗಾಯನ ತರಬೇತಿ ನೀಡಿ ರಾಮಚಂದ್ರರು ನಮ್ಮನ್ನು ಮಂಗಳೂರು ಆಕಾಶವಾಣಿಗೆ ಕರೆದೊಯ್ಯುತ್ತಿದ್ದರು. ʼತಾಯೆಬಾರ ಮೊಗವ ತೋರ ಕನ್ನಡಿಗರ ಮಾತೆಯೇ..ʼ ಹಾಡು ಈಗಲೂ ನೆನಪಿದೆ. ಮೊದಲಬಾರಿ ಆಕಾಶವಾಣಿ ನೋಡಿದೆವು. ಅಲ್ಲಿ ರೆಕಾರ್ಡಿಂಗ್ ಮಾಡುವುದನ್ನು ನೋಡಿದೆವು. ಮುಂದೆ ನಮ್ಮ ಕಾರ್ಯಕ್ರಮ ಪ್ರಸಾರವಾದಾಗ ಆಲಿಸಿ ಪುಲಕಿತರಾದೆವು.
ಇವೆಲ್ಲ ಸರಿ, ಆದರೆ ರಾಮಚಂದ್ರರದು ಒಂದು ಸಮಸ್ಯೆಯಿತ್ತು. ಅವರಿಗೆ ಬಹುತೇಕ ಯಾವ ಉಪನ್ಯಾಸಕರಲ್ಲಿಯೂ ಸ್ನೇಹವೂ ಇರಲಿಲ್ಲ, ಹೊಂದಾಣಿಕೆಯೂ ಇರಲಿಲ್ಲ. ಅವರಿಗೆ ಅವರ ಕಾರ್ಯಕ್ರಮ ಆದರಾಯಿತು. ನಾನು ಹೇಳಿ ಕೇಳಿ ವಿಜ್ಞಾನದ ವಿದ್ಯಾರ್ಥಿ. ಪ್ರಾಕ್ಟಿಕಲ್ ಅದು ಇದು ಸದಾ ಇರುತ್ತಿತ್ತು. ಅದೇ ಹೊತ್ತಿನಲ್ಲಿ ರಾಮಚಂದ್ರರು ಆಕಾಶವಾಣಿ ಕಾರ್ಯಕ್ರಮದ ತರಬೇತಿ ಇರಿಸಿಕೊಳ್ಳುತ್ತಿದ್ದರು. ನಾನು ಯಾವುದಕ್ಕೆ ಹೋಗಬೇಕು? ಭೌತಶಾಸ್ತ್ರದ ಉಪನ್ಯಾಸಕ ಎಂ ಆರ್ ವಿ ರಾವ್, ʼನಿನಗೆ ಅದು ಬೇಕೋ ಇದು ಬೇಕೋ, ನಿರ್ಧರಿಸುʼ ಎಂದು ಮತ್ತೆ ನನ್ನನ್ನು ಇಕ್ಕಟ್ಟಿಗೆ ನೂಕುತ್ತಿದ್ದರು. ನನಗೆ ಭೌತಶಾಸ್ತ್ರ ಪ್ರಾಕ್ಟಿಕಲ್ ಮುಖ್ಯ ಎಂದೆ. ರಾಮಚಂದ್ರರ ತರಬೇತಿ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಅವರಿಗೆ ಸಿಟ್ಟು ಬಂತು. ಮುಂದೊಮ್ಮೆ ನಾಟಕ ಸ್ಪರ್ಧೆ ನಡೆಯುತ್ತಿತ್ತು. ಅದೇ ಹೊತ್ತಿನಲ್ಲಿ ಅವರು ಕನ್ನಡ ಭಾಷಣ ಸ್ಪರ್ಧೆ ಏರ್ಪಡಿಸಿದ್ದರು. ನನಗೆ ಎರಡರಲ್ಲೂ ಭಾಗವಹಿಸುವ ಹುಮ್ಮಸ್ಸು. ಆದರೆ ಕನ್ನಡ ಭಾಷಣ ಸ್ಪರ್ಧೆ ತ್ಯಾಗ ಮಾಡಬೇಕಾಯಿತು. ಹೀಗೆ ಅವರೊಂದಿಗಿನ ನನ್ನ ಸಂಘರ್ಷ ನಿರಂತರವಾಗಿತ್ತು.
ಕಾಲೇಜಿನಲ್ಲಿ ಸಾಹಿತ್ಯಕ್ಕೆ ಒಂದು ಎಕ್ಸ್ ಪೋಶರ್ ದೊರೆಯಿತು. ಆದರೆ ಬರೆಯುವ ಹೆಚ್ಚಿನ ಅವಕಾಶ, ಪ್ರೇರಣೆ ದೊರೆತುದು ಹೊರಗಡೆ. ನಾನು ಮಂಗಳೂರು ಬಾನುಲಿಯನ್ನು ತಪ್ಪದೆ ಆಲಿಸುತ್ತಿದ್ದೆ. ಕಾರ್ಯಕ್ರಮ ಆಲಿಸಿ ಪತ್ರವನ್ನೂ ಬರೆಯುತ್ತಿದ್ದೆ. ಇದೇ ಕಾರಣದಿಂದಲೋ ಏನೋ ನನ್ನನ್ನು ಬಾನುಲಿ ಕೇಂದ್ರದ ಅಬ್ದುಲ್ ರೆಹಮಾನ್ ಪಾಷಾ ಅಲ್ಲಿನ ಯುವ ಕಾರ್ಯಕ್ರಮಕ್ಕೆ ಆಹ್ವಾನಿಸತೊಡಗಿದರು. ಮೊದ ಮೊದಲು ʼಅಭಿಪ್ರಾಯ ಸಂಗ್ರಹʼ ಕಾರ್ಯಕ್ರಮ. ʼಎಂಥವರಿರಬೇಕು ನನ್ನ ಮೇಷ್ಟ್ರುʼ, ʼನಾನು ಹಿರಿಯರಿಂದ ಬಯಸುವುದೇನುʼ, ಹೀಗೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ನನ್ನ ಅಭಿಪ್ರಾಯ ಹೇಳಿ ಬರಬೇಕು. ಅದು ಪ್ರಸಾರವಾಗುತ್ತಿತ್ತು. ಆದರೆ ಸಂಭಾವನೆ ಇಲ್ಲ. ಮುಂದೆ ನನ್ನನ್ನು ಚರ್ಚಾ ಕಾರ್ಯಕ್ರಮಕ್ಕೆ ಆಹ್ವಾನಿಸತೊಡಗಿದರು. ʼಕುಟುಂಬ ಕಲ್ಯಾಣ ಶಿಕ್ಷಣದಲ್ಲಿ ಯುವಜನರ ಪಾತ್ರʼ ಮೊದಲಾದ ವಿಷಯ. ನನ್ನ ಹಾಗೆಯೇ ಇನ್ನೂ ಕೆಲ ಮಂದಿ ಅಲ್ಲಿರುತ್ತಿದ್ದರು. ಚರ್ಚೆಯ ಧ್ವನಿಮುದ್ರಣ ನಡೆಯುತ್ತಿತ್ತು. ಬಳಿಕ ಮರಳಿ ಕಾರ್ಕಳಕ್ಕೆ.
ಅದು ರೇಡಿಯೋದಲ್ಲಿ ಪ್ರಸಾರವಾಗುವ ಅನೇಕ ಗಂಟೆಗಳ ಮೊದಲೇ ರೇಡಿಯೋ ಹಿಡಿದು ಕೂರುತ್ತಿದ್ದೆ. ಪತ್ರಿಕೆಯಲ್ಲಿರಲೀ, ರೇಡಿಯೋದಲ್ಲಿರಲೀ ನಮ್ಮ ಹೆಸರು, ನಮ್ಮ ದನಿ ತೇಲಿಬಂದಾಗ ರೋಮಾಂಚನಗೊಳ್ಳುವ ವಯಸ್ಸಲ್ಲವೇ? ಒಟ್ಟಿನಲ್ಲಿ ಪ್ರಚಾರ, ಪ್ರಸಿದ್ಧಿಯ ಬಯಕೆ.
ಖಾಲಿ ಕೈಯಲ್ಲಿ ಬಂದೆ!
ಒಮ್ಮೆ ಏನಾಯಿತು ಗೊತ್ತೇ? ಪಾಶಾ ಅವರು ಒಂದು ಕಾರ್ಯಕ್ರಮಕ್ಕೆ ನನ್ನನ್ನು ಕರೆದರು. ಸೂಚನಾ ಪತ್ರದಲ್ಲಿ ʼಸಂಭಾವನೆ ಕೊಡಲಾಗುವುದುʼ ಎಂದೂ ಇತ್ತು. ಕೈಯಲ್ಲಿ ಹಣವಿರಲಿಲ್ಲ. ಹೋಗುವುದಕ್ಕೆ ಹಣ ಹೊಂದಿಸಿಕೊಂಡರಾಯಿತು, ಬರುವಾಗ ಆಕಾಶವಾಣಿಯವರು ಹೇಗೂ ಕೊಡುತ್ತಾರೆ ಎಂದು ಹೊರಟುಬಿಟ್ಟೆ. ಕಾರ್ಕಳದಿಂದ ನಂತೂರು ತಲಪಿ, ಆಕಾಶವಾಣಿಗೆ ನಡೆದುಕೊಂಡು ಹೋದೆ. ಕಾರ್ಯಕ್ರಮದ ರೆಕಾರ್ಡಿಂಗ್ ಮುಗಿಯಿತು. ಹಣ ಕೊಡುತ್ತಾರೆ ಎಂದು ಕಚೇರಿ ಬಳಿ ನಿಂತೆ. ಒಂದು ಪತ್ರಕ್ಕೆ ಸಹಿ ಹಾಕಿಸಿಕೊಂಡ ಅವರು ʼಹಣವನ್ನು ಮನಿ ಆರ್ಡರಿನಲ್ಲಿ ಕಳುಹಿಸಲಾಗುವುದುʼ ಎಂದರು. ಎದೆ ಧಸಕ್ಕೆಂದಿತು. ವಾಪಸ್ ಕಾರ್ಕಳಕ್ಕೆ ಹೋಗಲು ಹಣವಿಲ್ಲ. ಮಂಗಳೂರಿನಲ್ಲಿ ಪರಿಚಯದವರೂ ಇಲ್ಲ. ಆಮೇಲೆ ಹೇಗೆ ಕಾರ್ಕಳ ತಲಪಿದೆ ಎಂಬುದು ಈಗ ಸ್ಪಷ್ಟವಾಗಿ ನೆನಪಿಲ್ಲ. ಬಸ್ಸಿನಲ್ಲಿ ಪರಿಚಯದ ಯಾರಲ್ಲಾದರೋ ಕಾಡಿದೆನೋ ಗೊತ್ತಿಲ್ಲ. ಕಾರ್ಕಳ ಪೇಟೆಯಿಂದ ಮಾತ್ರ ಮೂರು ಕಿಲೋಮೀಟರ್ ದೂರದ ನಮ್ಮ ಮನೆಗೆ ನಡೆದುಕೊಂಡೇ ಹೋದೆ.
ಇದಾದ ಬಳಿಕ ಮಂಗಳೂರು ಆಕಾಶವಾಣಿಯ ಯುವಜನ ಕಾರ್ಯಕ್ರಮದಲ್ಲಿ ಅನೇಕ ಬಾರಿ ಭಾಗವಹಿಸಿದೆ. ಮೊದ ಮೊದಲು ನನ್ನ ಹೆಸರು ʼಎಂ ಶ್ರೀನಿವಾಸ್, ಕಾರ್ಕಳʼ ಎಂದು ಇತ್ತು. ಅದನ್ನು ಪಾಶಾ ʼಶ್ರೀನಿವಾಸ, ಕಾರ್ಕಳʼ ಎಂದು ಮಾಡಿದರು. ಮುಂದೆ ಕೊಮಾ ಕೂಡಾ ಕಳಚಿಕೊಂಡು ಅದೇ ಹೆಸರು ಖಾಯಂ ಆಯಿತು.
ಓದುವ ಮತ್ತು ಬರೆಯುವ ತುಡಿತ ಜೋರಾಗಿತ್ತು. ಓದಲು ಆನೆಕೆರೆ ಬಳಿಯ ಸರಕಾರಿ ಗ್ರಂಥಾಲಯಕ್ಕೆ ಹೋಗಿ ಅಲ್ಲಿಂದ ಪುಸ್ತಕ ತೆಗೆದುಕೊಂಡು ಬಂದು ಓದುತ್ತಿದ್ದೆ. ಅಲ್ಲಿನ ಸದಸ್ಯನಾಗಲು ಶಿಫಾರಸು ಪತ್ರ ಬೇಕಿತ್ತು. ಆ ಪತ್ರವನ್ನು ಕಾಲೇಜಿನ ಪ್ರಾಂಶುಪಾಲ ಕಿಣಿಯವರು ಕೊಟ್ಟರು. ಬರೆಯುವ ತುಡಿತ ಜೋರಾಗಿತ್ತು ನಿಜ. ಆದರೆ ಅದು ಬಾತ್ ರೂಂ ಸಿಂಗರ್ ರೂಪದಲ್ಲಿಯೇ ಇತ್ತು. ನಾನೇ ಬರೆಯುವುದು ನಾನೇ ಓದುವುದು. ಮಂಗಳೂರು ಆಕಾಶವಾಣಿಗೆ ಹೋಗುವಾಗ ಮಾತ್ರ ಅಚ್ಚುಕಟ್ಟಾದ ಲೇಖನ ತಯಾರು ಮಾಡಿಕೊಂಡು ಹೋಗುತ್ತಿದ್ದೆ.
ಇನ್ನುಳಿದಂತೆ ನನ್ನ ಮೊದಲ ಬರೆಹ ಪ್ರಕಟವಾದುದೇ ದೂರಿನ ಮೂಲಕ. ಅಂದರೆ ದೂರುಗಂಟೆಯ ಮೂಲಕ. ಅಪ್ಪನಿಗೆ ಹನ್ನೊಂದು ತಿಂಗಳು ಸಂಬಳ ಇಲ್ಲದಾಗ ನಾನು ಉದಯವಾಣಿಯ ದೂರುಗಂಟೆಗೆ ʼಹನ್ನೊಂದು ತಿಂಗಳಿನಿಂದ ಸಂಬಳವಿಲ್ಲʼ ಎಂದು ಬರೆದಿದ್ದೆ. ಅದು ಪ್ರಕಟವಾಗಿತ್ತು. ಆಗಿನ ಕಾಲದ ಉದಯವಾಣಿಯ ದೂರುಗಂಟೆ ಬರೆಹ ಎಂದರೆ ಅದು ಅತ್ಯಂತ ಪರಿಣಾಮಕಾರಿ. ಅದಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತಿತ್ತು. ಇದೇ ಕಾರಣವೋ ಏನೋ, ಅಪ್ಪನ ಸಂಬಳ ತಕ್ಷಣ ಮಂಜೂರಾಯಿತು.

1980 ರ ಅದೇ ದಿನಗಳಲ್ಲಿ ಮಂಗಳೂರಿನಿಂದ ʼಸಂತೋಷʼ ಎಂಬ ಮಾಸಿಕ ಆರಂಭವಾಯಿತು. ಪ್ರಕಾಶ ಶೆಟ್ಟಿ ಅದರಲ್ಲಿ ವ್ಯಂಗ್ಯ ಚಿತ್ರಕಾರರಾಗಿದ್ದರು. ಆತನ ವಿನ್ಯಾಸದ ಕಾರಣವಾಗಿಯೇ ಪತ್ರಿಕೆ ತುಂಬಾ ಸುಂದರವಾಗಿತ್ತು. ಅದರಲ್ಲಿ ʼನಮ್ಮ ಶಿಕ್ಷಕರು ಹೇಗಿರಬೇಕುʼ ಎಂದೋ ಏನೋ ಒಂದು ಲೇಖನ ಬರೆದಿದ್ದೆ. ನನ್ನ ಕಿರು ಲೇಖನ ʼಇಬ್ಬರೂ ನಮ್ಮ ಸಮಾಜದವರೇʼಯನ್ನು ಸುಧಾ ಪತ್ರಿಕೆ ಪ್ರಕಟಿಸಿತ್ತು. ಹೀಗೆ ಸಣ್ಣ ಸಣ್ಣ ಹೆಜ್ಜೆಗಳು ಆರಂಭವಾಗಿದ್ದವು. ಕಾಲೇಜು ವಾರ್ಷಿಕಾಂಕದಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದು ಬಹುತೇಕ ಕಳ್ಳಮಾಲು.
ಆಗ ಉದಯವಾಣಿಯಲ್ಲಿ ಈಶ್ವರ ದೈತೋಟ ಕೆಲಸ ಮಾಡುತ್ತಿದ್ದರು. ಅವರು ಎಳೆಯ ಬರೆಹಗಾರರನ್ನು ಪ್ರೋತ್ಸಾಹಿಸುತ್ತಿದ್ದರು. ಇಂಥ ಕಾಲದಲ್ಲಿ ಛಾಯಾಚಿತ್ರಗ್ರಾಹಕ ಗೆಳೆಯ ಮುಷ್ತಾಕ್ ಮತ್ತು ನಾನು ಸೇರಿ ಉದಯವಾಣಿಯ ʼಚಿತ್ರಾವಳಿʼ ವಿಭಾಗಕ್ಕೆ ಪುಟ್ಟ ಚಿತ್ರಲೇಖನ ಕಳುಹಿಸುತ್ತಿದ್ದೆವು. ಚಿತ್ರ ಮುಷ್ತಾಕ್ ನದು, ಪುಟ್ಟ ಬರೆಹ ನನ್ನದು. ಅವುಗಳಲ್ಲಿ ಹೆಚ್ಚಿನವು ಪ್ರಕಟವಾಗುತ್ತಿದ್ದವು. ಇದರಿಂದ ಬರೆವಣಿಗೆಗೆ ಹೊಸ ಹುರುಪು ಬರುತ್ತಿತ್ತು.
1982 ರ ಮಾರ್ಚ್ ತಿಂಗಳಿರಬೇಕು. ತುಷಾರದಲ್ಲಿ ಚಿತ್ರ ಕವನ ಸ್ಪರ್ಧೆ ಏರ್ಪಡಿಸಿದ್ದರು. ಮಗು ಮಳೆಯಲ್ಲಿ ನೆನೆಯುತ್ತ ಆಟವಾಡುತ್ತಿದ್ದ ದೃಶ್ಯ. ನಾನು ಅದಕ್ಕೆ ಒಂದು ಕವನ ಕಳುಹಿಸಿದೆ. ಅದರ ಹೆಸರು ʼಗಂಗಾವತರಣʼ. ತುಷಾರ ಸಂಪಾದಕರಿಗೆ ಆ ಕವನ ಮೆಚ್ಚುಗೆಯಾಗಿರಬೇಕು. ಅದನ್ನು ಚಿತ್ರಕವನ ಸ್ಪರ್ಧೆಗೆ ಪರಿಗಣಿಸದೆ ಮುಖ್ಯ ಕವನವಾಗಿ ಪರಿಗಣಿಸಿ ಪ್ರಕಟಿಸಿದರು. ಅದು ಪ್ರಕಟವಾದುದನ್ನು ಕಂಡಾಗ ಆದ ಸಂತೋಷವನ್ನು ಯಾರಲ್ಲಿ ಹೇಳುವುದು?! ಪ್ರಕಟವಾದ ಮೊದಲ ಕವನ! ಅದೂ ತುಷಾರದಲ್ಲಿ! ಇಡೀ ಜಗತ್ತೇ ಆ ಕವನವನ್ನು ಓದುತ್ತಿದೆ ಎಂಬ ಭಾವ. ಒಂದು ಪ್ರತಿ ತೆಗೆದುಕೊಳ್ಳುವ ಬದಲು, ಮೂರು ಪ್ರತಿ ತೆಗೆದುಕೊಂಡೆ. ಅದನ್ನು ಎಲ್ಲರಿಗೂ ಕಾಣುವ ಹಾಗೆ ಹಿಡಿದುಕೊಂಡು ತಿರುಗುತ್ತಿದ್ದೆ.
ಯಾವುದೋ ಕೆಲಸಕ್ಕೆ ಕಾಲೇಜಿಗೆ ಹೋದಾಗ ಸಿಕ್ಕ ಎಂ ರಾಮಚಂದ್ರರು ʼನಿಮ್ಮ ಒಂದು ಕವಿತೆ ತುಷಾರದಲ್ಲಿ ಪ್ರಕಟವಾಗಿದೆಯಲ್ಲ?ʼ ಎಂದರು. ʼಹೌದು ಸಾರ್ʼ ಎಂದೆ.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು
ಇದನ್ನೂ ಓದಿ- https://kannadaplanet.com/its-a-big-story-autobiography-series-23/ ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ 23 | ಗೋಡೌನ್ ನಲ್ಲಿ ಬಿ ಎಸ್ ಸಿ ತರಗತಿಗಳು


