ಡಾ.ಉದಯ ಕುಮಾರ ಇರ್ವತ್ತೂರು
ಪ್ರೊಫೆಸರ್ ಗೋಮತಿಯವರ ನೆನಪಿನಲ್ಲಿ ಮಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಉಪನ್ಯಾಸ ಸರಣಿಯ 2026ನೇ ಸಾಲಿನ ಉಪನ್ಯಾಸ, “ಚಿಂತನೆಯೇ ಭಿನ್ನಮತವಾದಾಗ – ಭಾಷೆ ಮತ್ತು ಜಗತ್ತಿನ ಕುರಿತು ಆಲೋಚನೆಗಳು” ಎನ್ನುವ ವಿಷಯದ ಕುರಿತಾಗಿತ್ತು. ಅನುವಾದಕ್ಕಾಗಿರುವ ಪ್ರತಿಷ್ಠಿತ ಬುಕರ್ ಪ್ರಶಸ್ತಿಯ 2025ನೇ ಸಾಲಿನ ವಿಜೇತರಾದ ದೀಪಾ ಭಾಸ್ತಿಯವರು ಈ ಉಪನ್ಯಾಸವನ್ನು ನೀಡಿದರು. ಅವರ ಉಪನ್ಯಾಸದ ಆಯ್ದ ಭಾಗವನ್ನು ತಮ್ಮ ಅನಿಸಿಕೆಯೊಂದಿಗೆ ಡಾ. ಉದಯಕುಮಾರ ಇರ್ವತ್ತೂರು ಅವರು ಇಲ್ಲಿ ಹಂಚಿಕೊಂಡಿದ್ದಾರೆ.
ತನ್ನ ವಿದ್ವತ್ತು, ಮಹಿಳಾಪರ ಕಾಳಜಿ, ಸಮಾಜದ ಕುರಿತು ಕಳಕಳಿಗಳ ಕಾರಣಕ್ಕೆ ಒಂದು ತಲೆಮಾರಿಗೆ ಆದರ್ಶರಾಗಿ ಬಾಳಿದವರು ಪ್ರೊ. ಗೋಮತಿ. ಗೋಮತಿಯವರ ಬಹಳಷ್ಟು ಚಿಂತನೆಗಳನ್ನು ತಾನೂ ಕೂಡಾ ಹಂಚಿಕೊಂಡಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹಳ ಸಂತೋಷದ ವಿಷಯವೆನ್ನುವುದನ್ನು ದೀಪಾ ನೆನೆಸಿಕೊಂಡರು. ಅದರೊಂದಿಗೇನೇ, ಬಹಳ ಸಮಯದ ನಂತರ ಮಂಗಳೂರಿನಲ್ಲಿ ಅಧ್ಯಾಪಕರು, ಸಹಪಾಠಿಗಳು, ಸಂಬಂಧಿಕರು ಮತ್ತು ಬಹಳಷ್ಟು ಮಂದಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವ ಈ ಸಭೆಯಲ್ಲಿ ಉಪನ್ಯಾಸ ನೀಡುವ ಅವಕಾಶವು ನನ್ನ ಸಂತೋಷವನ್ನು ಸಂಭ್ರಮವಾಗಿಸಿದೆ ಎಂದರು. ತಾನು ಬೌದ್ಧಿಕವಾಗಿ ಈ ಮಟ್ಟಕ್ಕೆ ಬೆಳೆಯಲು ಬಹಳ ಕಾರಣರಾದ, ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಪ್ರೊ.ಡಿ.ಎಸ್. ಪೂರ್ಣಾನಂದ, ಮತ್ತು ಪದವಿ ತರಗತಿಯಲ್ಲಿ ಅಧ್ಯಯನ ಮಾಡುವ ವೇಳೆ ಆಂಗ್ಲ ಭಾಷಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಪ್ರೊ.ಪಟ್ಟಾಭಿರಾಮ ಸೋಮಯಾಜಿ ಇವರನ್ನು ನೆನೆಸಿಕೊಂಡರು. ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ತನ್ನ ಆಲೋಚನೆಯ ಕ್ರಮವನ್ನು ಬದಲಾಗುವಂತೆ ಮಾಡುವ ಮೂಲಕ ಜ್ಞಾನದ ಜಗತ್ತನ್ನು ಅನ್ವೇಷಿಸುವಂತೆ ಪ್ರೇರೇಪಿಸಿದ ಆ ಇಬ್ಬರು ಅಧ್ಯಾಪಕರು ಮತ್ತು ಉಳಿದ ಎಲ್ಲ ಅಧ್ಯಾಪಕರಿಗೆ ನಾನು ಆಭಾರಿಯಾಗಿರುತ್ತೇನೆ ಎನ್ನುವ ಮಾತು ಅವರ ವ್ಯಕ್ತಿತ್ವದ ಸರಳತೆ, ಮತ್ತು ಗುರು ಹಿರಿಯರ ಕುರಿತು ಅವರಲ್ಲಿರುವ ಗೌರವ ಭಾವಕ್ಕೆ ಸಾಕ್ಷಿಯಾಗಿತ್ತು. ಸಮಾರಂಭದಲ್ಲಿದ್ದ ಬಹಳಷ್ಟು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಇದರ ಮೂಲಕ ಒಂದು ಸಂದೇಶ ರವಾನೆಯಾದಂತೆ ನನಗನಿಸಿತು. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ತಿಳಿದು ಅವರಿಗೆ ಒತ್ತಾಸೆಯಾಗಿ ನಿಂತಾಗ ಅದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಮಾತ್ರವಲ್ಲ ಸಮಾಜಕ್ಕೂ ಪ್ರಯೋಜನವಾಗುತ್ತದೆ ಎನ್ನುವುದು ಮತ್ತು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕಗಳಿಸುವ ದೃಷ್ಟಿಯಿಂದ ಮಾತ್ರ ಅಧ್ಯಾಪಕರಿಂದ ಜ್ಞಾನವನ್ನು ಪಡೆಯುವುದಲ್ಲ ಬದಲಿಗೆ ಭವಿಷ್ಯ ರೂಪಿಸಿಕೊಳ್ಳುವ ಉದ್ದೇಶದಿಂದಲೂ ಅವರ ಮಾರ್ಗದರ್ಶನ ಪ್ರೇರಣೆ ಪಡೆಯಬಹುದು ಎನ್ನುವ ಅವರ ಅನುಭವದ ನುಡಿ ಈ ಹೊತ್ತಲ್ಲಿ ಮೌಲ್ಯಯುತವಾದುದು ಎನ್ನುವುದು ನನ್ನ ಅನಿಸಿಕೆ.

ತಾನು ಅನುವಾದಿಸಿದ ಅನುವಾದಿತ ಇಂಗ್ಲೀಷ್ ಕೃತಿ “ಹಾರ್ಟ್ ಲ್ಯಾಂಪ್” (ಮೂಲ ಲೇಖಕಿ ಭಾನು ಮುಷ್ತಾಕ್) ಗೆ ಬುಕರ್ ಪ್ರಶಸ್ತಿ ಬಂದಿರುವುದು ಸಂತೋಷದ ವಿಚಾರವಾಗಿದೆ. ಆದರೆ ಈ ಅನುವಾದದ ಕೆಲಸ ಮತ್ತು ಅದಕ್ಕೆ ಸಿಕ್ಕಿದ ಈ ಪ್ರಶಸ್ತಿಯನ್ನು ಮೀರಿ ನಾನು ಮಾಡುವ ಸಾಹಿತ್ಯದ ಕೆಲಸಗಳಿಗಾಗಿ ನಾನು ಗುರುತಿಸಿಕೊಳ್ಳಬೇಕು ಎನ್ನುವುದು ತನ್ನ ನಿಲುವು ಎಂದು ದೀಪಾ ನುಡಿದರು. “ಖಂಡಿತವಾಗಿಯೂ ಈ ಪ್ರಶಸ್ತಿ ನನಗಿರುವ ಅವಕಾಶಗಳನ್ನು ವಿಸ್ತರಿಸಿದೆ. ನನಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಜಗತ್ತಿನ ಅನೇಕ ಕಡೆಗಳಲ್ಲಿ ಮಾತನಾಡುವ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಇದೊಂದು ಅಪೂರ್ವವಾದ ಅವಕಾಶ ಮತ್ತು ಅನುಭವ ಕೂಡಾ. ವಿದ್ಯಾರ್ಥಿಗಳು, ಯುವಜನರು ಮತ್ತು ವಿವಿಧ ಜನ ಸಮುದಾಯಗಳೊಂದಿಗೆ ಸಂವಾದ ನಡೆಸುವ ಮೂಲಕ ಲಭ್ಯವಾಗುವ ಅನುಭವ ಅನನ್ಯವಾದದ್ದು. ಆದರೆ ಇಂತಹ ಅವಕಾಶಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ ಹಾಗಾಗಬಾರದು. ಯಾವುದರ ಬಗೆಗಾದರೂ ಕುರುಡು ಪ್ರೀತಿ, ಎಲ್ಲೆ ಮೀರಿದ ಸಂಭ್ರಮ ಒಳ್ಳೆಯದಲ್ಲ. ಅದು ಭಾಷೆಯ ಬಗೆಗಿರಬಹುದು ಅಥವಾ ದೇಶದ, ಜಾತಿಯ, ವರ್ಗದ ಬಗೆಗಾದರೂ ಇರಬಹುದು” ಎನ್ನುವ ಮಾತುಗಳು ಔಪಚಾರಿಕತೆಯನ್ನು ಮೀರಿದ ಅವರ ಮನದ ಮಾತುಗಳೆನಿಸಿದವು.
“ನಾನು ಕನ್ನಡವನ್ನು ಚೆನ್ನಾಗಿ ಮಾತನಾಡ ಬಲ್ಲೆ, ಅದು ನನ್ನ ಮಾತೃಭಾಷೆ. ಕನ್ನಡದಲ್ಲಿ ಬರೆದಿದ್ದೇನೆ ಕೂಡಾ. ಆದರೆ ವಿಸ್ತೃತ ಓದಿನ ಮತ್ತು ಅಧ್ಯಯನದ ಕಾರಣದಿಂದ ಇಂಗ್ಲೀಷ್ ಭಾಷೆಯಲ್ಲಿ ಪಳಗಿದ್ದೇನೆ ಎಂದು ಹೇಳಬಹುದು. ಈ ಕಾರಣದಿಂದ ನಾನು ಕನ್ನಡದ ಕೃತಿಗಳನ್ನು ಅನುವಾದ ಮಾಡುವ ಕೆಲಸಕ್ಕೆ ಕೈ ಹಾಕಿರುವುದು. ಅನುವಾದದ ಕೆಲಸ ಮಾಡುವ ಪ್ರಕ್ರಿಯೆಯಲ್ಲಿ ನನಗೆ ನನ್ನ ನೆಲದ ಭಾಷೆಯೇ ಆದ ಕನ್ನಡ ಹೆಚ್ಚು ಅರ್ಥವಾಗ ತೊಡಗಿತು”. ಮಡಿಕೇರಿಯಂತಹ ಊರಲ್ಲಿ ನಾನಿದ್ದ ಕಾರಣ ಓದುವುದು ಸುಲಭವಾಯಿತು. ನಾನು ತರಗತಿಯಾಚೆಗೆ ಈ ಮೊದಲು ಹೇಳಿದ ನನ್ನ ಅಧ್ಯಾಪಕರ ಪ್ರೇರಣೆಯಿಂದಾಗಿ ಅತ್ಯುತ್ತಮ ಕೃತಿಗಳನ್ನು ಓದಿದೆ. ಹೀಗೆ ಇಂಗ್ಲೀಷ್ ಭಾಷೆಯಲ್ಲಿ ನಿರಂತರವಾಗಿ ಓದುವ ಮೂಲಕ, ಭಾಷೆಯನ್ನು ಓದಿ ಬರೆದು ದುಡಿಸಿಕೊಳ್ಳುವುದು ನನಗೆ ಹತ್ತಿರವಾಯಿತು. ವಿಭಿನ್ನ ಸಾಂಸ್ಕೃತಿಕ, ರಾಜಕೀಯ ಹಿನ್ನೆಲೆಯ ಸಾಹಿತ್ಯವನ್ನು ಓದುವ ಮೂಲಕ ತಾನು ಹೇಗೆ ಅರಿವಿನ ಹಾದಿಗಳನ್ನು ವಿಸ್ತರಿಸಿಕೊಂಡೆ ಎನ್ನುವುದನ್ನು ಅವರು ತಮ್ಮ ಮಾತಿನಲ್ಲಿ ಹೇಳಿದರು.
ಭಾಸ್ತಿಯವರ ಅಭಿಪ್ರಾಯದಲ್ಲಿ ಭಾಷೆ ಎಂದೂ ನಿಂತ ನೀರಲ್ಲ; ಅದು ಬದಲಾಗುತ್ತಲೇ ಇರುತ್ತದೆ. ಯಾವುದೇ ಭಾಷೆಯಾದರೂ ಆದರೊಳಗೆ ಜೀವಂತಿಕೆ ಇರುತ್ತದೆ. ಅದು ಕನ್ನಡವಿರಬಹುದು, ತುಳು ಇರಬಹುದು, ಕೊಂಕಣಿ ಇರಬಹುದು, ಮಲಯಾಳಂ ಇರಬಹುದು, ದಖನಿ ಇರಬಹುದು ಇನ್ನಿತರ ಯಾವುದೇ ಭಾಷೆ ಆಗಿರಬಹುದು. ಕೆಲವೊಂದು ಸಲ ಎಲ್ಲ ಅನುಭವಗಳನ್ನು ಭಾಷೆಯ ಮಿತಿಯೊಳಗೆ ತಂದು ಬಿಡುವುದು ಬಹಳ ಕಷ್ಟದ ಕೆಲಸ. ಕೆಲವೊಂದು ವೇಳೆ ಇದು ಅಸಾಧ್ಯ ಮತ್ತು ಅನಗತ್ಯ ಕೂಡಾ. ಎಲ್ಲವನ್ನು ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಭಾಷೆಯ ಮೂಲಕ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹೀಗೆ ನಿರಂತರವಾಗಿ ಪರಿಷ್ಕರಣೆಗೆ ಒಳಗಾಗುತ್ತ, ಬದಲಾಗುತ್ತಾ ಹೋಗುವ ಕಾರಣದಿಂದ ಭಾಷೆಯ ಒಳಗೇ ಒಂದು ರೀತಿಯ ವೈವಿಧ್ಯವಿರುತ್ತದೆ. ನಮ್ಮ ದೇಶವನ್ನೇ ನೋಡಿದಾಗ ಇದು ಬಹುಭಾಷೆಯ ನಾಡು ಮತ್ತು ಭಾಷೆಗಳಲ್ಲಿರುವ ಬಹುತ್ವವೇ ನಮ್ಮ ದೇಶದ ಸಂಸ್ಕೃತಿಯ ಜೀವಾಳ ಎನ್ನುವುದು ವಿಧಿತವಾಗುತ್ತದೆ ಎನ್ನುವ ಅಂಶವೂ ಅವರ ಮಾತು ಕೇಳುವಾಗ ಅನಿಸಿತು. ಭಾಷೆಯ ಬಗೆಗಿನ ಪ್ರೀತಿ, ತುಡಿತ ಕೇವಲ ಸಂವಹನದ ಮಟ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಭಾಷೆ ಜ್ಞಾನದ ಆಕರವೂ ಆಗಿದೆ. ಭಾಷೆಯಾಗಲೀ ದೇಶವಾಗಲೀ ಅದನ್ನು ನಾವು ಪ್ರೀತಿಸುವಾಗ ಅದಕ್ಕೆ ಪುರಾವೆಗಳನ್ನಾಗಲೀ, ಕಾರಣಗಳನ್ನಾಗಲೀ ಕೊಡುವ ಅಗತ್ಯವಿಲ್ಲ. ದೇಶ ಮತ್ತು ಸರಕಾರಗಳ ನಡುವೆ ವ್ಯತ್ಯಾಸವಿದೆ. ದೇಶವನ್ನು ಪ್ರೀತಿಸುವುದು ಎಂದರೆ ಸರಕಾರವನ್ನು ಪ್ರೀತಿಸುವುದಲ್ಲ. ಈ ಸೂಕ್ಷ್ಮಗಳನ್ನು ಭಾಷೆ ನಮಗೆ ತಿಳಿಸಿಕೊಡುತ್ತದೆ. ಭಾಷೆ ಅಧಿಕಾರದ ಕೈಯಲ್ಲಿ ಹೇಗೆ ಅಸ್ತ್ರವಾಗಿ ಉಪಯೋಗಿಸಲ್ಪಡುತ್ತದೆ ಎನ್ನುವ ಸೂಕ್ಷ್ಮ ಸಂಗತಿಯನ್ನು ದೀಪಾ ವಿವರಿಸಿದ ರೀತಿ ಬಹಳ ಮಾರ್ಮಿಕವಾಗಿತ್ತು. ಭಾಷೆ ಅಧಿಕಾರದ ಚಲಾವಣೆ, ಅಭಿಪ್ರಾಯದ ನಿರ್ಮಿತಿಗಲ್ಲ, ಬದಲಾಗಿ ನೆಲದ ಬಹುತ್ವದ ಅಳವನ್ನು ಅರಿಯುವ ದೃಷ್ಟಿಯಿಂದ ಮಹತ್ವ ಪಡೆದಿದೆ ಎನ್ನುವ ಮಹತ್ವದ ವಿಚಾರ ಅವರ ಮಾತಿನಲ್ಲಿ ವ್ಯಕ್ತವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಪ್ರಭುತ್ವದ ನಡುವೆ ಸಂವಹನ, ಸಂವಾದ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ, ಪ್ರಭುತ್ವವನ್ನು ಪ್ರಶ್ನಿಸುವುದು ಸಹಜ ಕ್ರಿಯೆಯಾಗಿದೆ. ಬಹುತ್ವದ ನೆಲೆಗಳು ಗಟ್ಟಿಯಾಗಿರುವ ಕಡೆ ಪ್ರಶ್ನಿಸುವ ಮನೋಭಾವ ಸಹಜವೂ ಕೂಡಾ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ, ಭಿನ್ನ ಅಭಿಪ್ರಾಯಗಳು ಮತ್ತು ಪ್ರಶ್ನೆ ಮಾಡುವ ಅವಕಾಶಗಳು ಸಹಜ; ಅದಿಲ್ಲದೇ ಹೋದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ ಎನ್ನುವ ಆಯಾಮಗಳೂ ಅವರ ಮಾತುಗಳಲ್ಲಿ ವ್ಯಕ್ತವಾದುವು.
ಭಾಷೆಯೊಳಗಿನ ವೈವಿಧ್ಯವೂ ಅದರ ಸೊಗಸು ಎನ್ನುವ ಮಾತುಗಳನ್ನೂ ದೀಪಾ ಉಲ್ಲೇಖಿಸಿದರು. ಕನ್ನಡ ನಾಡಿನಲ್ಲಿರುವ ಕನ್ನಡ ಒಂದೇ ರೀತಿಯಾಗಿಲ್ಲ, ಅದರಲ್ಲಿ ಎಷ್ಟೊಂದು ವೈವಿಧ್ಯವಿದೆ. ಭಾಷೆಯೆನ್ನುವ ಒಂದು ಕ್ಯಾನ್‌ವಾಸಿನಲ್ಲಿ ಎಷ್ಟೊಂದು ಬಣ್ಣಗಳಿವೆ. ಅಲ್ಲದೇ ವಿವಿಧ ಸಂಸ್ಕೃತಿಯ, ಸಮುದಾಯದ ಜನರು ಬಳಸುವ ಲಿಪಿ ಇರುವ ಮತ್ತು ಲಿಪಿ ಇಲ್ಲದ ಎಲ್ಲ ಭಾಷೆಗಳು ಮುಖ್ಯ. ಈ ಎಲ್ಲ ಭಾಷೆಗಳು ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಮೃದ್ಧಗೊಳಿಸಿವೆ. ಭಾಷೆ ಎನ್ನುವುದು ನಮ್ಮ ಅಸ್ಮಿತೆ, ಸಂಸ್ಕೃತಿಯ ಜೀವತಂತು. ನಾವು ಬಳಸುವ ಪ್ರತಿ ಭಾಷೆಯಲ್ಲಿರುವ ಪ್ರತಿಯೊಂದು ಶಬ್ದವೂ ಜೀವನಾನುಭವದ ಉತ್ಪನ್ನವಾಗಿದೆ. ಉದಾಹರಣೆಗೆ ಕಾಗದ, ಮೇಜು, ಹೊತ್ತಗೆ, ಬಂಡವಾಳ, ಸೃಷ್ಟಿ, ಸಮಾಜ ಎನ್ನುವುದು ಕೇವಲ ಶಬ್ದಗಳಲ್ಲ. ಅವು ಅಸ್ಮಿತೆಯನ್ನು, ಜೀವನಾನುಭವವನ್ನು, ನಿತ್ಯದ ಬದುಕಿನ ತುಡಿತಗಳನ್ನು, ಮಿಡಿತಗಳನ್ನು ಪ್ರತಿಫಲಿಸುತ್ತವೆ. ಭಾಷೆಯನ್ನು ಬಳಸುವ ಮನಸ್ಸುಗಳನ್ನು ಅವಲಂಬಿಸಿ ಅವು ಸಮಾಜದಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತವೆ. ಕೆಲವೊಂದು ಜನ ವಿಘಟನೆಯ ಉದ್ದೇಶದಿಂದಲೇ ಭಾಷೆಯನ್ನು ಬಳಸುತ್ತಾರೆ. ಹೀಗೆ ಮಾಡುವುದು ಸರಿಯಲ್ಲ, ಇದು ತಪ್ಪು. ಆದರೆ ಇದು ಭಾಷೆಯ ತಪ್ಪಲ್ಲ, ಭಾಷೆಯನ್ನು ಉಪಯೋಗಿಸುವವರ ತಪ್ಪು. ಪ್ರಸ್ತುತ ಧರ್ಮದ ವಿಷಯದಲ್ಲಿ ಕೂಡಾ ಹೀಗೇ ಆಗುತ್ತಿದೆ. ಧರ್ಮವನ್ನೂ ಕೂಡಾ ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಇದು ಧರ್ಮದ ಸಮಸ್ಯೆಯಲ್ಲ, ಧರ್ಮವನ್ನು ತಪ್ಪಾಗಿ ಗ್ರಹಿಸುವವರ, ಮತ್ತು ತಪ್ಪು ಉದ್ದೇಶಗಳಿಗೆ ಉಪಯೋಗಿಸುವವರ ಸಮಸ್ಯೆ. ಅದರೆ ಬಹಳ ಚಾಣಾಕ್ಷತನದಿಂದ ಇದನ್ನು ಸಮಾಜದ ಎಲ್ಲರ ಸಮಸ್ಯೆಯನ್ನಾಗಿ ಮಾಡಲಾಗುತ್ತಿರುವುದು ಸಮಸ್ಯೆಯಾಗಿದೆ. ಸಮಾಜ ಇದರ ಬಗ್ಗೆ ಜಾಗೃತವಾಗಬೇಕಿದೆ. ಉದಾಹರಣೆಗೆ, ಬಹುಸಂಸ್ಕೃತಿಯ ಈ ನಾಡು ಸೌಹಾರ್ದತೆಯಿಂದ ಶಾಂತಿಯಿಂದ ನೆಮ್ಮದಿಯಿಂದ ಇದ್ದಷ್ಟು ದಿನ ಗಟ್ಟಿಯಾಗಿಯೇ ಇರುತ್ತದೆ. ಆದರೆ ಭಾಷೆಯನ್ನು ಬದುಕು ಅರಿಯುವ, ಬದುಕುವ ಉದ್ದೇಶದ ಬದಲಿಗೆ ರಾಜಕೀಯ ಅಥವಾ ಇನ್ಯಾವುದೋ ಅಧಿಕಾರ ಗಳಿಸುವ ಉದ್ದೇಶದಿಂದ ಬಳಸಲು ಹೊರಟಾಗ ಸಮಾಜದಲ್ಲಿರುವ ಸೌಹಾರ್ದತೆಗೆ, ನೆಮ್ಮದಿಗೆ ಭಂಗವುಂಟಾಗುತ್ತದೆ. ದ್ವೇಷ ಎನ್ನುವುದು ಕೇವಲ ಶಬ್ದವಲ್ಲ, ಅದರ ಹಿಂದೆ ಒಂದು ಉದ್ದೇಶವಿದೆ ಮತ್ತು ಆ ಉದ್ದೇಶದ ಪರಿಣಾಮ ಸಮಾಜದ ಹಿತ ದೃಷ್ಟಿಯಿಂದ ಒಳ್ಳೆಯದಾಗಿಲ್ಲವೆಂದೇ ಹೇಳಬಹುದು. ದ್ವೇಷ ಎನ್ನುವ ಶಬ್ದ ಕೆಟ್ಟದ್ದನ್ನು ಧ್ವನಿಸುತ್ತದೆ. ಕೆಡುಕು ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಸಮಾಜದಲ್ಲಿ ಸಾಮಾನ್ಯವಾಗಿ ಯಾರೂ ಕೆಟ್ಟವರಾಗ ಬಯಸುವುದಿಲ್ಲ. ಆದರೆ ಕೆಡುಕಿನ ಬಗ್ಗೆಯೇ ಹೇಳಿ ಹೇಳಿ ಸಮಾಜದ ಸ್ವಾಸ್ಥ್ಯವನ್ನು ಕದಡಲು ಪ್ರಯತ್ನಿಸಲಾಗುತ್ತದೆ. ಇದು ಸರಿಯಲ್ಲ, ಮತ್ತು ಇದನ್ನು ಯಾವ ಕಾರಣದಿಂದಲೂ ಒಪ್ಪಲಾಗದು ಎಂದು ದೀಪಾ ಅಭಿಪ್ರಾಯಿಸಿದರು.

ಬಹು ಭಾಷೆ ಬಹು ಸಂಸ್ಕೃತಿ ನಮಗೆ ತೊಂದರೆಯಾದಂತಿಲ್ಲ, ಸಮಸ್ಯೆಯಾದಂತಿಲ್ಲ. ನಾವು ದಿನನಿತ್ಯದ ವ್ಯವಹಾರದಲ್ಲಿ ಮೂರು ನಾಲ್ಕು ಭಾಷೆಗಳನ್ನು ಬಳಸುತ್ತೇವೆ. ಇದರಲ್ಲಿ ನಮಗೇನೂ ತೊಂದರೆಯಿಲ್ಲ. ಮಡಿಕೇರಿಯಂತಹ ಸಣ್ಣ ಊರಿನಲ್ಲಿಯೇ ಜನಸಾಮಾನ್ಯರು ನಿತ್ಯ ಜೀವನದಲ್ಲಿ ಸುಮಾರು 12 ಭಾಷೆಗಳನ್ನು ಬಳಸುತ್ತಾರೆ. ಇದನ್ನು ಹೊರತುಪಡಿಸಿ ಬುಡಕಟ್ಟು ಜನರು ಉಪಯೋಗಿಸುವ 20-22 ಭಾಷೆಗಳಿವೆ. ಅವುಗಳನ್ನು ಬಹಳಷ್ಟು ಜನ ತಿಳಿದೇ ಇಲ್ಲ. ಅಂದರೆ ಬಹುತ್ವ, ಬಹುಭಾಷೆ ಎನ್ನುವುದು ಸಾಮಾನ್ಯ ಜನರ ಬದುಕಿನ ಸಹಜ ಭಾಗವಾಗಿದೆ. ಹೀಗೆ ಬಹುಭಾಷೆ, ಬಹು ಸಂಸ್ಕೃತಿಯ ಹಿನ್ನೆಲೆಯಲ್ಲಿ ನಮ್ಮ ಸಮಾಜ ವಿಕಾಸ ಹೊಂದಿದೆ. ಇದನ್ನು ನಮ್ಮ ಸಮಾಜದ ದೊಡ್ಡ ಶಕ್ತಿ ಎಂದೇ ಪರಿಗಣಿಸಬಹುದು. ಯುರೋಪಿನ ಹಲವು ದೇಶಗಳಲ್ಲಿ ಜನ ಒಂದೋ, ಎರಡೋ ಭಾಷೆ ಮಾತ್ರ ತಿಳಿದಿರುತ್ತಾರೆ ಮತ್ತು ಉಪಯೋಗಿಸುತ್ತಾರೆ. ಅವರಿಗೆ ಭಾರತದಲ್ಲಿ ಜನ ಇಷ್ಟೊಂದು ಭಾಷೆ ಬಳಸುತ್ತಾರೆ ಎನ್ನುವುದೇ ಆಶ್ಚರ್ಯ ಉಂಟು ಮಾಡುತ್ತದೆ. ನಮಗೆ ನಮ್ಮ ದೇಶದಲ್ಲಿ ಒಂದೇ ಭಾಷೆ ಮಾತನಾಡುವವರಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಕೇಳುವಾಗ ನಮ್ಮಲ್ಲಿರುವ ಬಹು ಧರ್ಮಗಳ, ಮತ್ತು ಧರ್ಮಗಳ ಒಳಗೆ ಇರಬಹುದಾದ ವೈವಿಧ್ಯಗಳೂ ನೆನಪಾದುವು. ವಸಾಹತು ಕಾಲದ ನಂತರದಲ್ಲಿಯೂ ಪ್ರಪಂಚದ ಬೇರೆ ಬೇರೆ ಕಡೆ ಸ್ಥಳೀಯ ಭಾಷೆಗಳು ಇಂಗ್ಲೀಷ್‌ನೊಳಗೆ ಅಥವಾ ವಸಾಹತುಶಾಹಿಗಳ ಭಾಷೆಯ ಪ್ರಪಂಚದೊಳಗೆ ಪ್ರವೇಶ ಪಡೆದಿವೆ. ನಮ್ಮ ದೇಶದಲ್ಲಿ ವಸಾಹತುಶಾಹಿಯೊಂದಿಗೆ ಬಂದ ಇಂಗ್ಲೀಷ್‌ನ ಪ್ರಭಾವದ ಕಾರಣದಿಂದ ಬಹಳಷ್ಟು ಕಡೆ ಸ್ಥಳೀಯ ಭಾಷೆಗಳನ್ನು ದಮನಿಸುತ್ತಾ ಬರಲಾಗಿರುವ ದೃಷ್ಟಾಂತಗಳನ್ನು ಕಾಣಬಹುದು. ಒಂದು ಭಾಷೆಯನ್ನು ದಮನಿಸಿ ಅದರ ಮೇಲೆ ಯಜಮಾನಿಕೆ ನಡೆಸುವುದು ಕೂಡಾ ಒಂದು ರೀತಿಯ ಕ್ರೌರ್ಯವಾಗಿದೆ ಎನ್ನುವ ಅವರ ಮಾತಿಗೆ ಸಹಮತವಿದೆ.
ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ಪ್ರದೇಶದ ಸಂಸ್ಕೃತಿಯ ಭಾಗವಾಗಿರುವ ಭಾಷೆಯ (ಸಂಗೀತ, ಸಾಹಿತ್ಯ, ಕಲೆಗಳ ಬಗೆಗೂ ಈ ರೀತಿಯ ಆಕರ್ಷಣೆ ಇರುವುದನ್ನು ಗಮನಿಸಬಹುದು) ಬಗ್ಗೆ ಒಲವನ್ನು ಬೆಳೆಸಿಕೊಳ್ಳುತ್ತಿರುವುದನ್ನು ಕಾಣಬಹುದು. ಇದು ಒಂದು ಆಶಾದಾಯಕವಾದ ಬೆಳವಣಿಗೆಯಾಗಿದೆ. ನಮ್ಮ ತಾಯ್ನುಡಿಗೆ ಎಲ್ಲವನ್ನೂ ವ್ಯಕ್ತಪಡಿಸುವ ಶಕ್ತಿ ಇದೆ. ನಮ್ಮ ತಾಯ್ನುಡಿ ಇನ್ಯಾವುದೋ ಭಾಷೆಗಿಂತ ಕಡಿಮೆ ಎನ್ನುವ ಕೀಳರಿಮೆಯನ್ನು ನಾವು ಮೀರಬೇಕು. ಹಾಗೆ ನೋಡಿದರೆ ಪ್ರಾದೇಶಿಕವಾಗಿರುವ ವಿಶಿಷ್ಟ ಅನುಭವಗಳನ್ನು ಸ್ಥಳೀಯ ಭಾಷೆಗಳಲ್ಲಿ ಹೇಳುವಷ್ಟು ಪರಿಣಾಮಕಾರಿಯಾಗಿ, ಸ್ಪಷ್ಟವಾಗಿ ಇನ್ಯಾವುದೋ ಭಾಷೆಯಲ್ಲಿ ಹೇಳಲು ಆಗುವುದಿಲ್ಲ. ಭಾಷಾಂತರದ ವಿಷಯಕ್ಕೆ ಬಂದಾಗ ಇದು ಅನುವಾದದ ಮಿತಿಯೂ ಆಗಿದೆ. ಹಾಗಾಗಿ ಅನೇಕ ಪದಗಳು ಇಂಗ್ಲೀಷ್‌ನಲ್ಲಿಯೂ ಅದೇ ಭಾವವನ್ನು ಸೃಷ್ಟಿಸುವ ಕಾರಣದಿಂದ ಸ್ಥಳೀಯ ಭಾಷಾ ಸ್ವರೂಪದಲ್ಲಿ ಬಳಕೆಯಾಗುವುದನ್ನು ನಾವು ಕಾಣಬಹುದು. ನಾನೇ ಅಂತಹ ಅನೇಕ ಶಬ್ದಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಬಳಕೆ ಮಾಡುತ್ತೇನೆ ಎನ್ನುತ್ತಾ ತನ್ನ ಸ್ವ ಅನುಭವವನ್ನು ತೆರೆದಿಟ್ಟರು
ಇಲ್ಲಿ ಬಹಳಷ್ಟು ಜನ ವಿದ್ಯಾರ್ಥಿಗಳಿರುವುದರಿಂದ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ನನ್ನ ಅಭಿಪ್ರಾಯವನ್ನು ನಿಖರವಾದ ಮಾತುಗಳಲ್ಲಿ ಹೇಳಲೇಬೇಕು ಅನಿಸುತ್ತದೆ. ಬಹಳಷ್ಟು ಜನರಲ್ಲಿ ಕೃತಕ ಬುದ್ಧಿಮತ್ತೆಯಿಂದ ಬಹಳ ಉಪಯೋಗ ಆಗುತ್ತಿದೆ, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಇದು ಬಹಳ ಉಪಯುಕ್ತವಾಗಿದೆ ಎನ್ನುವ ಅಭಿಪ್ರಾಯವಿದೆ. ಅಲ್ಲಿ ಉಪಯುಕ್ತವೆನಿಸಿದರೆ ಬಳಸುವ ಬಗ್ಗೆ ನನ್ನ ತಕರಾರೇನೂ ಇಲ್ಲ. ಆದರೆ ಕಲೆ, ಸಾಹಿತ್ಯ ಮತ್ತು ಸಂಗೀತದ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗ ಸರ್ವಥಾ ಸಲ್ಲದು ಎನ್ನುವುದು ನನ್ನ ಅಭಿಪ್ರಾಯ. ಕಲಾವಿದನೊಬ್ಬನ, ಸಾಹಿತಿಯೊಬ್ಬನ, ಸಂಗೀತಗಾರನೊಬ್ಬನ ಶ್ರಮ, ತಪಸ್ಸು ಮತ್ತು ಅರ್ಪಣಾ ಮನೋಭಾವವನ್ನು ಸಂಪೂರ್ಣವಾಗಿ ನಿರಾಕರಿಸುವ ಕೃತಕ ಬುದ್ಧಿಮತ್ತೆ ಮನುಷ್ಯನ ಹೃದಯ, ಭಾವನೆಗಳನ್ನು ನಿರಾಕರಿಸುವ ಒಂದು ‘ಅಮಾನವೀಯ’ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತದೆ. ಆ ಕಾರಣದಿಂದ ಇದು ಸ್ವೀಕಾರಾರ್ಹವಲ್ಲ ಎಂಬುದು ಅವರ ಅಭಿಮತವಾಗಿತ್ತು.
ತಂತ್ರಜ್ಞಾನದ ಬಳಕೆಯಿಂದ ದತ್ತವಾದ ಅಂತರ್ಜಾಲದ ಬಳಕೆಯ ಮೂಲಕ ನಮ್ಮ ಕಲಿಕೆಯ ಆಯ್ಕೆಗಳು ವಿಸ್ತಾರಗೊಳ್ಳುವುದರಿಂದ ಅದರ ಬಳಕೆ ಕೆಟ್ಟದ್ದೇನಲ್ಲ. ಯಾವುದನ್ನೇ ಆದರೂ ವಿವೇಚನೆಯಿಂದ ಬಳಸುವುದರಿಂದ ಪರಿಣಾಮ ಒಳಿತೇ ಆಗುತ್ತದೆ. ಆದರೆ ಕೃತಕ ಬುದ್ಧಿಮತ್ತೆ ನಮ್ಮ ಆಲೋಚನಾ ಕ್ರಮ, ವಿಧಾನ ಮತ್ತು ಶಕ್ತಿಯನ್ನೇ ಅಪಹರಿಸುವ ಕಾರಣದಿಂದ ಅದು ಅಪಾಯಕಾರಿಯಾಗಿದೆ. ಮನುಷ್ಯನ ಅಸ್ತಿತ್ವವನ್ನೇ ನಿರಾಕರಿಸುವ ಏನನ್ನೇ ಆದರೂ ಬಳಸುವಾಗ ಎಚ್ಚರವಿರಬೇಕು ಎಂದು ಕಿವಿ ಮಾತು ಹೇಳಿದರು.
ಭಾಷೆಯನ್ನು ಬಳಸುತ್ತಾ ಚಿಂತನೆಯ ಪರಿಧಿಗಳನ್ನು ವಿಸ್ತರಿಸುತ್ತಾ ಹೋಗುವ ನಮ್ಮಲ್ಲಿ ವಿವೇಕ ಬೆಳೆಯುತ್ತದೆ. ಇಂತಹ ಹೊತ್ತಲ್ಲಿ ಮೂಡುವ ಚಿಂತನೆಗಳು ಯಾವತ್ತೂ ಏಕಮುಖವಾಗಿರಲಿಲ್ಲ. ಇದರಲ್ಲಿರುವ ಬಹುತ್ವವೇ ಪ್ರಜಾತಂತ್ರದ ಜೀವಾಳ. ಇಂತಹ ಬಹುತ್ವ, ಭಿನ್ನಮತ ನಮ್ಮ ದೇಶದ ಬಹು ಸಂಸ್ಕೃತಿಯ ಶಕ್ತಿಯಾಗಿದೆಯೇ ಹೊರತು ದೌರ್ಬಲ್ಯವಲ್ಲ ಎನ್ನುವುದು ತನ್ನ ಖಚಿತ ನಿಲುವಾಗಿದೆ ಎನ್ನುವುದನ್ನು ದೀಪಾ ಅವರು ಸ್ಪಷ್ಟವಾಗಿ ವ್ಯಕ್ತಪಡಿಸಿದರು. ಇಂತಹ ಭಾಷೆಯನ್ನು ಶ್ರೀಮಂತವಾಗಿರಿಸಲು ಸಾಹಿತ್ಯದ ವಿವಿಧ ಸ್ವರೂಪದಲ್ಲಿರುವ ಅನುಭವಗಳನ್ನು ತಿಳಿಯುವ ಮೂಲಕ ಬದುಕನ್ನು ಶ್ರೀಮಂತಗೊಳಿಸಬಹುದಾಗಿದೆ ಎನ್ನುವ ದೀಪಾ ಅವರ ಮಾತಿಗೆ ಸಹಮತವಿದೆ.
ಭಾಷೆಯ ಶಕ್ತಿಯನ್ನು ಅರಿಯದೇ ಅದನ್ನು ಅಧಿಕಾರದ ಕೇಂದ್ರಗಳು ದಾಳವಾಗಿ ಬಳಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದೀಪಾ ಭಾಸ್ತಿಯವರ ಮಾತುಗಳು ನೆರೆದವರ ಮನಸ್ಸಿನಲ್ಲಿ ಹೊಸ ಅರಿವನ್ನು ಮತ್ತು ಹುಮ್ಮಸ್ಸನ್ನು ಹುಟ್ಟಿಸಿತು. ಮಾನವ ಸಂಪನ್ಮೂಲ ಎಂದಾಕ್ಷಣ “ಕೌಶಲ್ಯ” ಸಂವಹನ ಎನ್ನುವ ತಜ್ಞರು, ನಿಜವಾದ ಮಾನವ ಸಂಪನ್ಮೂಲ ಸೃಷ್ಟಿಸುವಲ್ಲಿ ಭಾಷೆಯ ಸಾಮರ್ಥ್ಯವನ್ನು ಹೇಗೆ ಬಳಸಬಹುದು ಮತ್ತು ಬೆಳೆಸಬಹುದು ಎನ್ನುವುದಕ್ಕೆ ದೀಪಾ ಅವರ ಮಾತುಗಳು ಸಾಕ್ಷಿಯಾದುವು. ಭಾಷೆ ಎನ್ನುವುದು ಪ್ರಭುತ್ವಕ್ಕೆ ಪ್ರಜೆಗಳನ್ನು ಮೋಡಿಗೊಳಪಡಿಸುವ ಬೇಡಿಯಾದರೆ, ಅದು ಪ್ರಜೆಗಳಿಗೆ ಪ್ರತಿರೋಧದ ನೆಲೆಗಳನ್ನು ಶೋಧಿಸುವ ಮತ್ತು ಎಲ್ಲ ರೀತಿಯ ಅನ್ಯಾಯಗಳನ್ನು ಪ್ರಶ್ನಿಸುವ ಸಾಧನವಾಗಿದೆಯಲ್ಲ ಎನ್ನುವ ಯೋಚನೆ ಮನಸ್ಸಿನಲ್ಲಿ ಹಾದು ಹೋಯಿತು.
ಈ ಕಾರ್ಯಕ್ರಮವನ್ನು ಆಯೋಜಿಸಿದ, ಗೋಮತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ವಿಶ್ವವಿದ್ಯಾನಿಲಯ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರೆಲ್ಲರೂ ಅಭಿನಂದನೀಯರು.

ಡಾ.ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು, ಮಂಗಳೂರು.
ಇದನ್ನೂ ಓದಿ- ಪಂಪನೋದು: ಪಠ್ಯ, ಸಂಕಥನ ಮತ್ತು ರಾಜಕಾರಣ


