‘ಪಂಪನೋದು’ ಕೃತಿಯು ಪಂಪನ ನೆವದಲ್ಲಿ ನಾಡು, ನುಡಿ ಮತ್ತು ಸಮುದಾಯಗಳ ಪ್ರತಿನಿಧೀಕರಣವನ್ನು ವಿವರಿಸಿದ ರೀತಿ ಕನ್ನಡ ವಿಮರ್ಶಾ ಪರಂಪರೆಗೆ ಹೊಸ ಬಲವನ್ನು ತಂದಿದೆ. ಇಡೀ ಕೃತಿಯು ಪಠ್ಯ ಮತ್ತು ಓದುಗನ ನಡುವಿನ ವ್ಯವಹಾರವು ಕೇವಲ ಸಾಹಿತ್ಯಿಕವಾಗಿರದೆ ರಾಜಕೀಯವೂ ಆಗಿರುತ್ತದೆ ಎಂಬುದನ್ನು ಅತ್ಯಂತ ದೀರ್ಘವಾಗಿ ಮತ್ತು ಗಾಢವಾಗಿ ಸಾಬೀತುಪಡಿಸಿದೆ. ಪಂಪನನ್ನು ಹೇಗೆ ಓದಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ನಾವು ಪಂಪನನ್ನು ಹೇಗೆ ‘ಬಳಸಿಕೊಳ್ಳುತ್ತಿದ್ದೇವೆ’ ಎಂಬುದನ್ನು ಈ ಕೃತಿಯು ನಮಗೆ ಕನ್ನಡಿ ಹಿಡಿದು ತೋರಿಸುತ್ತದೆ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಯಾವುದೇ ಒಂದು ಮಹತ್ಕೃತಿಯ ಓದು ಎಂಬುದು ಕೇವಲ ಆ ಕೃತಿಯ ಅಕ್ಷರಗಳನ್ನು ಅಥವಾ ಆಶಯಗಳನ್ನು ಯಥಾವತ್ ಸ್ವೀಕರಿಸುವ ನಿರುಪದ್ರವಿ ಕ್ರಿಯೆಯಲ್ಲ; ಬದಲಾಗಿ ಆ ಪಠ್ಯವು ಕಾಲದ ದೀರ್ಘಯಾನದಲ್ಲಿ ಪಡೆದುಕೊಳ್ಳುವ ಭಿನ್ನ ವ್ಯಾಖ್ಯಾನಗಳ ಹಿಂದಿನ ರಾಜಕಾರಣವನ್ನು ಶೋಧಿಸುವುದೂ ಆಗಿರುತ್ತದೆ ಎಂಬ ಸಾಂಸ್ಕೃತಿಕ ಪ್ರಜ್ಞೆಯನ್ನು ನಮ್ಮ ಬಹುತೇಕ ಸಾಂಪ್ರದಾಯಿಕ ವಿಮರ್ಶಾ ಕೃತಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಅದರಲ್ಲೂ ಹಳಗನ್ನಡ ವಿಮರ್ಶಾ ಲೋಕದಲ್ಲಿ ಆದಿಕವಿ ಪಂಪನನ್ನು ಕೇವಲ ಆದರ್ಶೀಕರಿಸುವ, ಅವನಿಗೆ ‘ವಿವಿಧ’ ಮುಖವಾಡ ತೊಡಿಸುವ ಅಥವಾ ವೈದಿಕ ಮತ್ತು ಜೈನ ಧರ್ಮಗಳ ನಡುವಣ ಸಮನ್ವಯದ ಒಂದು ಕಲ್ಪಿತ ಮಾದರಿಯನ್ನಾಗಿ ಬಿಂಬಿಸುವ ಪ್ರವೃತ್ತಿ ದಟ್ಟವಾಗಿರುವುದನ್ನು ನಾವು ಕಾಣುತ್ತೇವೆ. ಇಂತಹ ಸಿದ್ಧಮಾದರಿಗಳ ಆಳದಲ್ಲಿ ಅಡಗಿರುವ ಯಜಮಾನ ಪ್ರಜ್ಞೆಯ ‘ಸಮ್ಮತಿ ಉತ್ಪಾದನೆ’ಯ ಹುನ್ನಾರಗಳನ್ನು ಹಾಗೂ ಪಠ್ಯದ ಅರ್ಥವನ್ನು ಒಂದು ನಿರ್ದಿಷ್ಟ ಚೌಕಟ್ಟಿಗೆ ಬಂಧಿಸುವ ಶೈಕ್ಷಣಿಕ ಅಧಿಕಾರಶಾಹಿಯ ಕ್ರಮಗಳನ್ನು ಬಯಲಿಗೆಳೆಯಲು ಪ್ರಯತ್ನಿಸಿದ ವಿಮರ್ಶಾ ಕೃತಿಗಳು ಕನ್ನಡದಲ್ಲಿ ಅತ್ಯಂತ ವಿರಳವಾಗಿವೆ. ಈ ಹಿನ್ನೆಲೆಯಲ್ಲಿ ಜಯಪ್ರಕಾಶ್ ಶೆಟ್ಟಿಯವರ ‘ಪಂಪನೋದು’ ಸಂಶೋಧನಾ ಕೃತಿಯು ಕನ್ನಡ ವಿಮರ್ಶಾ ಪರಂಪರೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿ ಮತ್ತು ಹೊಸ ಚಿಂತನೆಯ ದಾರಿಯಾಗಿ ಗೋಚರಿಸುತ್ತದೆ.
ಶೆಟ್ಟಿಯವರ ಈ ಕೃತಿಯು ಪಂಪನನ್ನು ಕುರಿತ ಮತ್ತೊಂದು ಪಡಿಯಚ್ಚಿನ ವಿಶ್ಲೇಷಣೆಯಾಗದೆ, ಕಳೆದ ನೂರಮೂವತ್ತು ವರ್ಷಗಳಿಂದ ಕನ್ನಡದ ವಿದ್ವತ್ ಲೋಕ ಪಂಪನನ್ನು ಹೇಗೆಲ್ಲಾ ಆವಾಹಿಸಿಕೊಂಡಿದೆ ಮತ್ತು ಮರುಸೃಷ್ಟಿಸಿಕೊಂಡಿದೆ ಎಂಬುದನ್ನು ವಿವೇಚಿಸುವ ‘ಓದಿನ ಓದು’ ಅಥವಾ ಒಂದು ಅತ್ಯುತ್ತಮ ‘ಮೆಟಾ-ಕ್ರಿಟಿಸಿಸಂ’ ಆಗಿದೆ. ಪಂಪನ ಕಾವ್ಯಗಳು ಮುದ್ರಣದ ರೂಪವನ್ನು ಪಡೆದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಆವರಣವನ್ನು ಪ್ರವೇಶಿಸಿದ ದಿನದಿಂದ ಕಳೆದ ಐದಾರು ವರ್ಷಗಳವರೆಗೆ ನಡೆದ ಚರ್ಚೆಗಳಲ್ಲಿರುವ ಅಧಿಕಾರ ರಾಜಕಾರಣ, ಅಸ್ಮಿತೆಯ ಹಪಾಹಪಿ ಮತ್ತು ಸಾಮಾಜಿಕ ಸಂಘರ್ಷಗಳನ್ನು ಶೆಟ್ಟಿಯವರು ಇಲ್ಲಿ ಅತ್ಯಂತ ಚಿಕಿತ್ಸಕ ದೃಷ್ಟಿಯಿಂದ ಅನಾವರಣಗೊಳಿಸಿದ್ದಾರೆ. ಪಂಪನ ಪಠ್ಯಗಳ ಮೇಲೆ ವಿವಿಧ ಕಾಲಘಟ್ಟಗಳಲ್ಲಿ ಹೇರಲಾದ ಭಿನ್ನ ಲೋಕದೃಷ್ಟಿಗಳನ್ನು ರಾಜಕೀಯ ಪ್ರಜ್ಞೆಯೊಂದಿಗೆ ಮರುಪರಿಶೀಲನೆಗೆ ಒಡ್ಡುವ ಮೂಲಕ, ಕೃತಿಯು ಹೇಗೆ ಸಾಂಸ್ಥಿಕ ಬಲದೊಂದಿಗೆ ಒಂದು ‘ಸಂಕಥನ’ವಾಗಿ (Discourse) ರೂಪಾಂತರಗೊಳ್ಳುತ್ತದೆ ಎಂಬುದನ್ನು ಲೇಖಕರು ಸಾಬೀತುಪಡಿಸಿದ್ದಾರೆ.

ಈ ಸಂಶೋಧನೆಯ ಮೊದಲ ಮಹತ್ವದ ಸಂಗತಿಯೆಂದರೆ ಚರಿತ್ರೆಯ ನೆಲೆಯಿಂದ ಪಂಪನನ್ನು ಗ್ರಹಿಸಿದ ರೀತಿ. ವಿದ್ವಾಂಸರಾದ ಬಿ.ಎಲ್. ರೈಸ್ ಕಾಲದಿಂದ ಹಿಡಿದು ಎಂ. ಚಿದಾನಂದಮೂರ್ತಿ ಮತ್ತು ಎಂ.ಎಂ. ಕಲಬುರ್ಗಿಯವರವರೆಗೆ ಪಂಪನ ಕಾಲ, ದೇಶ ಮತ್ತು ವಂಶದ ಕುರಿತು ನಡೆದ ಸಂಶೋಧನೆಗಳನ್ನು ಶೆಟ್ಟಿಯವರು ಕೇವಲ ಮಾಹಿತಿಗಳಾಗಿ ನೋಡದೆ, ಅವುಗಳ ಹಿಂದಿರುವ ಸಿದ್ಧಾಂತಗಳನ್ನು ಪರೀಕ್ಷಿಸುತ್ತಾರೆ. ಪಂಪನ ಪೂರ್ವಿಕರು ವೈದಿಕ ಬ್ರಾಹ್ಮಣರಾಗಿದ್ದು ನಂತರ ಜೈನ ಧರ್ಮಕ್ಕೆ ಮತಾಂತರಗೊಂಡ ಸಂಗತಿಯನ್ನು ವಿವರಿಸುವಾಗ ನಮ್ಮ ವಿಮರ್ಶಕರು ಹೇಗೆ ಪಂಪನ ಪ್ರತಿಭೆಯಲ್ಲಿ ವೈದಿಕ ಸತ್ವವನ್ನು ಹುಡುಕಲು ಹವಣಿಸುತ್ತಾರೆ ಎಂಬುದನ್ನು ಶೆಟ್ಟಿಯವರು ಟೀಕಿಸುತ್ತಾರೆ. ಚಿದಾನಂದಮೂರ್ತಿಯವರಂತಹ ವಿದ್ವಾಂಸರು ಪಂಪನ ತಾಯಿಯ ಮನೆತನವನ್ನು ಇಂದಿನ ಬ್ರಾಹ್ಮಣ ಕುಟುಂಬಗಳೊಂದಿಗೆ ಜೋಡಿಸಿ ಸಂಭ್ರಮಿಸುವುದರ ಹಿಂದೆ ಪಂಪನನ್ನು ಮರಳಿ ವೈದಿಕ ಅಸ್ಮಿತೆಗೆ ಒಗ್ಗಿಸುವ ‘ಭೂತಾರಾಧನೆ’ ಅಥವಾ ‘ಮ್ಯೂಸಿಯಂ ಸಂಸ್ಕೃತಿ’ ಇದೆ ಎಂದು ಅವರು ವಾದಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಕಲಬುರ್ಗಿಯವರು ಪಂಪನಿಗೆ ನೀಡಲಾದ ಧರ್ಮಪುರದ ನಾಶದ ಹಿಂದೆ ವೈದಿಕ ಅಸಹಿಷ್ಣುತೆಯನ್ನು ಕಾಣುವ ಕ್ರಮವನ್ನು ಶೆಟ್ಟಿಯವರು ಮತ್ತೊಂದು ಬಗೆಯ ಪ್ರತಿ-ರಾಜಕಾರಣವಾಗಿ ಗುರುತಿಸುತ್ತಾರೆ. ಹೀಗೆ ಚರಿತ್ರೆಯು ಕೇವಲ ಸತ್ಯದ ಹುಡುಕಾಟವಾಗದೆ, ವರ್ತಮಾನದ ಆತಂಕಗಳನ್ನು ಗತದ ಮೇಲೆ ಹೇರುವ ಪ್ರಕ್ರಿಯೆಯಾಗಿರುವ ಬಗೆಯನ್ನು ಈ ಕೃತಿ ತಾತ್ವಿಕವಾಗಿ ಚರ್ಚಿಸುತ್ತದೆ.
ಧಾರ್ಮಿಕ ಓದಿನ ಸಂದರ್ಭದಲ್ಲಿ ಪಂಪನ ‘ಆದಿಪುರಾಣ’ವನ್ನು ಕನ್ನಡ ವಿಮರ್ಶೆ ಉಪೇಕ್ಷಿಸಿದ್ದರ ಬಗ್ಗೆ ಶೆಟ್ಟಿಯವರು ಆಕ್ಷೇಪವೆತ್ತುತ್ತಾರೆ. ಸಾಂಪ್ರದಾಯಿಕವಾಗಿ ‘ವಿಕ್ರಮಾರ್ಜುನ ವಿಜಯ’ವನ್ನು ಲೌಕಿಕ ಮತ್ತು ಸೆಕ್ಯುಲರ್ ಎಂದು ಸಂಭ್ರಮಿಸಿದ ವಿಮರ್ಶಾಲೋಕ, ಆದಿಪುರಾಣವನ್ನು ಕೇವಲ ಜೈನ ಧರ್ಮದ ಕೈಪಿಡಿಯೆಂದು ಮೂಲೆಗುಂಪು ಮಾಡಿತ್ತು. ತೀನಂಶ್ರೀ ಅವರ ‘ಕೈಕಟ್ಟಿಸಿಕೊಂಡು ಪಟ್ಟುಗಳನ್ನು ತೋರಿಸುವ ಗರಡಿಯಾಳು’ ಎಂಬ ರೂಪಕವು ಪಂಪನ ಧಾರ್ಮಿಕ ಬದ್ಧತೆಯನ್ನು ಕಾವ್ಯದ ಮಿತಿಯೆಂದು ಬಿಂಬಿಸಿತ್ತು. ಆದರೆ, ಶೆಟ್ಟಿಯವರು ಕೆ.ವಿ. ನಾರಾಯಣ ಮತ್ತು ಓ.ಎಲ್. ನಾಗಭೂಷಣ ಸ್ವಾಮಿಯವರ ಆಧುನಿಕ ಓದುಗಳನ್ನು ಬೆಂಬಲಿಸುತ್ತಾ, ಆದಿಪುರಾಣವು ಕೇವಲ ಧಾರ್ಮಿಕ ಉತ್ಪನ್ನವಲ್ಲ, ಅದು ಅರಿವು ಸಿದ್ಧಗೊಳ್ಳುವ ಒಂದು ಪ್ರಕ್ರಿಯೆ ಎಂದು ವಿವರಿಸುತ್ತಾರೆ. ತಿಳಿವಳಿಕೆಯು ಇಡಿಗಂಟಾಗಿ ಪಡೆಯತಕ್ಕದ್ದಲ್ಲ, ಅದು ವೈಯಕ್ತಿಕ ಅನುಭವದಿಂದ ಅರ್ಜಿಸಿಕೊಳ್ಳಬೇಕಾದುದು ಎಂಬ ಜೈನದರ್ಶನದ ಸಾರವು ಪಂಪನ ಕಾವ್ಯದಲ್ಲಿ ಹೇಗೆ ನಾಟ್ಯೀಕರಣಗೊಂಡಿದೆ ಎಂಬುದನ್ನು ಅವರು ವಿವರಿಸುತ್ತಾರೆ. ಧರ್ಮವನ್ನು ಸಾಂಸ್ಥಿಕ ಚೌಕಟ್ಟಿನಿಂದ ಬಿಡಿಸಿ ಅರಿವಿನ ಅನ್ವೇಷಣೆಯಾಗಿ ನೋಡುವ ಈ ಕ್ರಮವು ಪಂಪನ ಓದಿಗೆ ಹೊಸ ಆಯಾಮವನ್ನು ನೀಡಿದೆ.
ಪಂಪನ ಕಾವ್ಯಗಳ ಸಾಮಾಜಿಕ ಓದಿನ ಆಯಾಮದಲ್ಲಿ ಶೆಟ್ಟಿಯವರು ಜಾತಿ ಮತ್ತು ಕುಲದ ಕುರಿತಾದ ಚರ್ಚೆಗಳನ್ನು ಅತ್ಯಂತ ಪ್ರಖರವಾಗಿ ನಡೆಸಿದ್ದಾರೆ. ಪಂಪನ ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ಘೋಷಣೆಯನ್ನು ಉದಾರವಾದಿ ಮಾನವತಾವಾದದ ಲೇಪ ಹಚ್ಚಿ ಓದುವ ಕ್ರಮದ ಹಿಂದೆ ಇರುವ ರಾಜಕಾರಣವನ್ನು ಅವರು ಬಯಲಿಗೆಳೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೆ.ವಿ. ಅಕ್ಷರ ಮತ್ತು ರಾಜಾರಾಮ ಹೆಗಡೆಯವರು ಈ ವಾಕ್ಯದ ಸಾಂದರ್ಭಿಕ ಅರ್ಥವನ್ನು ಹಿಡಿದು ಅದರಲ್ಲಿ ಯಾವುದೇ ಕ್ರಾಂತಿಕಾರಕ ಆಶಯವಿಲ್ಲ ಎಂದು ವಾದಿಸಿದ್ದನ್ನು ಶೆಟ್ಟಿಯವರು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಆದರೆ, ಪಠ್ಯದ ತಾಂತ್ರಿಕ ಸರಿತನಕ್ಕಿಂತ ಹೆಚ್ಚಾಗಿ ಸಂಸ್ಕೃತಿಯ ಹರಿವಿನಲ್ಲಿ ಆ ವಾಕ್ಯವು ಪಡೆದುಕೊಂಡ ಅರ್ಥಪ್ರಾಮುಖ್ಯತೆ ದೊಡ್ಡದು ಎಂದು ಅವರು ಪ್ರತಿಪಾದಿಸುತ್ತಾರೆ. ಕರ್ಣನ ಪಾತ್ರದ ಮೂಲಕ ಪಂಪ ಕುಲವನ್ನು ಗುಣಾಧಾರಿತವಾಗಿ ವಿವರಿಸುವುದು ಅಥವಾ ಅಶ್ವತ್ಥಾಮನ ಮೂಲಕ ರಾಜಸತ್ತೆಯ ಅವಿವೇಕವನ್ನು ಟೀಕಿಸುವುದು ಇಂದಿನ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಹಂಬಲಗಳಿಗೆ ಹೇಗೆ ಪೂರಕವಾಗಿವೆ ಎಂಬುದನ್ನು ಅವರು ಸಮರ್ಥಿಸುತ್ತಾರೆ. ಆಹಾರ ರಾಜಕಾರಣದ ಕುರಿತಾದ ಅವರ ಚರ್ಚೆಯಂತೂ ಅತ್ಯಂತ ಮೌಲಿಕವಾದುದು. ಪಂಪನ ಕಾವ್ಯದಲ್ಲಿ ಮಾಂಸಾಹಾರದ ಗೈರುಹಾಜರಿ ಮತ್ತು ‘ತೊತ್ತಿನ ಮನೆಯ ಕೂಳು’ ಅಥವಾ ‘ತೊತ್ತಿನ ಮೊಲೆವಾಲು’ ಎಂಬ ಪ್ರಯೋಗಗಳ ಮೂಲಕ ದೇಹಕ್ಕಂಟಿದ ಜಾತಿಹೀನತೆಯನ್ನು ಪಂಪ ಹೇಗೆ ಬಿಂಬಿಸಿದ್ದಾನೆ ಮತ್ತು ಇಂತಹವುಗಳನ್ನು ಕನ್ನಡ ವಿಮರ್ಶೆ ಬೈಪಾಸ್ ಮಾಡಿದ್ದನ್ನು ಬಯಲು ಮಾಡಿದ್ದಾರೆ. ಹೀಗೆ ಪಂಪನನ್ನು ಒಬ್ಬ ಸಮಾನತಾವಾದಿ ಅಥವಾ ಸಾಮಾಜಿಕ ಕಳಕಳಿಯ ಚಿಂತಕನಾಗಿ ಗುರುತಿಸಿದ್ದಾರೆ
ಈ ಕೃತಿಯ ಮತ್ತೊಂದು ಮೌಲಿಕ ಮಗ್ಗುಲೆಂದರೆ ಸ್ತ್ರೀವಾದಿ ದೃಷ್ಟಿಕೋನದಿಂದ ಪಂಪನನ್ನು ಪ್ರವೇಶಿಸುವ ಶೆಟ್ಟಿಯವರ ಕ್ರಮ. ಇದು ಕಾವ್ಯದೊಳಗಿನ ಲಿಂಗ ರಾಜಕಾರಣವನ್ನು ಬೆತ್ತಲುಗೊಳಿಸುತ್ತದೆ. ಪಂಪನ ಕಾವ್ಯಗಳಲ್ಲಿ ಹೆಣ್ಣು ಕೇವಲ ಒಂದು ‘ದೇಹ’ವಾಗಿ ಅಥವಾ ‘ಪ್ರವೃತ್ತಿ’ಯಾಗಿ ಮಾತ್ರ ಹಾಜರಿದ್ದಾಳೆ ಹೊರತು, ಅವಳಿಗೊಂದು ಸ್ವತಂತ್ರ ಚೈತನ್ಯದ ಮುಖವಿಲ್ಲ ಎಂಬ ಸ್ತ್ರೀವಾದಿ ವಿಮರ್ಶಕರ(ಬಿ.ಎನ್. ಸುಮಿತ್ರಾಬಾಯಿ, ಎಚ್.ಎಸ್. ಶ್ರೀಮತಿ) ವಾದವನ್ನು ಶೆಟ್ಟಿ ಮಂಡಿಸುತ್ತಾರೆ. ವಿಜಯವೆಲ್ಲ ಪುರುಷನದು(ವಿಕ್ರಮಾರ್ಜುನ ವಿಜಯ), ವಿನಾಶವೆಲ್ಲ ಹೆಣ್ಣಿನದು(ದ್ರೌಪದಿಯ ಕೇಶಪಾಶ) ಎಂಬ ರೂಪಕಗಳ ಮೂಲಕ ಹೇಗೆ ಲಿಂಗ ರಾಜಕಾರಣವು ನಡೆಯುತ್ತದೆ ಎಂಬುದನ್ನು ಈ ಕೃತಿ ವಿವರಿಸುತ್ತದೆ. ಅಂಬೆ, ಕುಂತಿ, ದ್ರೌಪದಿ ಮತ್ತು ಭಾನುಮತಿಯರ ಪ್ರಸಂಗಗಳನ್ನು ಪುನರ್ವಿಮರ್ಶೆಗೆ ಒಳಪಡಿಸುವ ಮೂಲಕ, ಪಂಪನ ಮಾನವತಾವಾದದಲ್ಲಿ ಸ್ತ್ರೀಜಾತಿಯು ಒಳಗೊಂಡಿದೆಯೇ ಎಂಬ ಕಠಿಣ ಪ್ರಶ್ನೆಯನ್ನು ಶೆಟ್ಟಿ ಎತ್ತುತ್ತಾರೆ. ಹಾಗೆಯೇ ‘ನೀಲಾಂಜನೆ’ಯಂತಹ ಪಾತ್ರವೂ ತೀರ್ಥಂಕರನ ವೈರಾಗ್ಯಕ್ಕೆ ನಿಮಿತ್ತವಾಗುವ ಒಂದು ಸರಕಿನಂತೆ ಬಳಕೆಯಾಗುವುದನ್ನು ಅವರು ವಿಷಾದದಿಂದ ಗುರುತಿಸುತ್ತಾರೆ. ಪಂಪನ ಕಾವ್ಯದ ಉದಾತ್ತ ಮೌಲ್ಯಗಳ ಮುಖಬೆಲೆಯಲ್ಲಿ ಹೆಣ್ಣಿನ ಮುಖಗಳು ನಾಪತ್ತೆಯಾಗಿರುವುದನ್ನು ಎತ್ತಿತೋರಿಸುವ ಮೂಲಕ, ಶೆಟ್ಟಿಯವರು ಗಂಡುಜಗತ್ತಿನ ವಿಮರ್ಶೆ ನಿರ್ಮಿಸಿದ ಪಂಪನ ವೈಭವೀಕೃತ ಬಿಂಬವನ್ನು ಛಿದ್ರಗೊಳಿಸುತ್ತಾರೆ.
ಶೈಕ್ಷಣಿಕ ಆವರಣದಲ್ಲಿ ಪಂಪನ ಪಠ್ಯಗಳನ್ನು ಬಳಸುತ್ತಿರುವ ಕ್ರಮದ ಕುರಿತು ಕೃತಿಯು ನಡೆಸುವ ವಿಶ್ಲೇಷಣೆ ಅತ್ಯಂತ ಮೌಲಿಕವಾದುದಾಗಿದೆ. ವಿಶ್ವವಿದ್ಯಾನಿಲಯಗಳು ಮೂರು ವರ್ಷಕ್ಕೊಮ್ಮೆ ಪಠ್ಯ ಬದಲಾಯಿಸಿದರೂ, ಕೃಷ್ಣಸಂಧಾನ, ಭೀಷ್ಮಪ್ರತಿಜ್ಞೆ ಅಥವಾ ಕರ್ಣಾವಸಾನದಂತಹ ನಿರ್ದಿಷ್ಟ ‘ರಸಘಟ್ಟ’ಗಳನ್ನೇ ಪದೇಪದೇ ಆಯ್ದುಕೊಳ್ಳುವ ಮೂಲಕ ಅಧ್ಯಾಪಕ ವರ್ಗವು ಕಾವ್ಯದೊಳಗಿನ ರಾಜಕೀಯ ಸೂಕ್ಷ್ಮತೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಉದಾಹರಣೆಗಳ ಸಹಿತ ಕೃತಿ ನಿರೂಪಿಸುತ್ತದೆ. ಪಠ್ಯಪುಸ್ತಕಗಳ ಸಂಪಾದಕೀಯ ಟಿಪ್ಪಣಿಗಳು ಓರಿಯಂಟಲ್ ಮತ್ತು ಸಂಸ್ಕೃತ ಕಾವ್ಯಮೀಮಾಂಸೆಯ ಚೌಕಟ್ಟನ್ನು ಮೀರಲಾರದೆ, ಕವಿಯ ವೈದಿಕ ಪೂರ್ವಪರಂಪರೆಯ ಹೆಮ್ಮೆಯನ್ನೇ ಪುನರುತ್ಪಾದಿಸುತ್ತಾ ಜಾಗತೀಕರಣ ಮತ್ತು ಸಾಂಸ್ಕೃತಿಕ ಪೊಲೀಸ್ ಗಿರಿಯ ಇಂದಿನ ಬಿಕ್ಕಟ್ಟುಗಳಿಗೆ ಪಠ್ಯವನ್ನು ಅನ್ವಯಿಸಿಕೊಳ್ಳುವಲ್ಲಿ ಸೋಲುತ್ತಿವೆ ಎಂದು ಕೃತಿ ವಿಷಾದಿಸುತ್ತದೆ. ಈ ಮೂಲಕ ಶೈಕ್ಷಣಿಕ ಪಠ್ಯಗಳು ಕೇವಲ ಭಾಷಾ ಜ್ಞಾನಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ರಾಜಕಾರಣದ ತಾಣಗಳಾಗಬೇಕು ಎಂಬುದು ಅವರ ಆಶಯವಾಗಿದೆ.
ಈ ಕೃತಿಯ ಅತ್ಯಂತ ಪ್ರಮುಖ ಯಶಸ್ಸು ಇರುವುದು ಹಳಗನ್ನಡ ಸಾಹಿತ್ಯವನ್ನು ವರ್ತಮಾನದ ಆನ್ವಯಿಕತೆಗೆ ಒಳಪಡಿಸುವಲ್ಲಿ. ಪಂಪನ ಕಾವ್ಯಗಳನ್ನು ಕೇವಲ ಸಹಸ್ರಮಾನದ ಆಚೆಯ ಪ್ರಾಚೀನ ಪಳಮೆಯಾಗಿ ನೋಡದೆ, ಇಂದಿನ ಜಾಗತಿಕ ರಾಜಕಾರಣದ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗಿಸುವ ದಾರಿಯನ್ನು ಕೃತಿ ತೋರಿಸಿಕೊಡುತ್ತದೆ. ಭರತ ಮತ್ತು ಬಾಹುಬಲಿಯರ ನಡುವಣ ಯುದ್ಧವು ಕೇವಲ ಎರಡು ಪುರಾಣ ಪಾತ್ರಗಳ ಕದನವಲ್ಲ, ಅದು ಸಾಮ್ರಾಜ್ಯಶಾಹಿ ಆಕ್ರಮಣಶೀಲ ಅಧಿಕಾರ ದರ್ಪದ ವಿರುದ್ಧ ಅಂಚಿನ ತೃತೀಯ ಜಗತ್ತಿನ ಸಮುದಾಯಗಳು ಒಡ್ಡುವ ಪ್ರತಿರೋಧದ ಪ್ರತೀಕವಾಗಿದೆ. ಆಯುಧಯುದ್ಧವನ್ನು ನಿರಾಕರಿಸಿ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳ ಮೂಲಕ ಕದನ ಮುಗಿಸುವ ಬಾಹುಬಲಿಯು ಇಂದಿನ ಜಾಗತಿಕ ಅಶಾಂತಿ ಮತ್ತು ಯುದ್ಧೋನ್ಮತ್ತತೆಗೆ ಒಂದು ಬದಲಿ ಶಾಂತಿ ಮೀಮಾಂಸೆಯನ್ನು ಒದಗಿಸುತ್ತಾನೆ.
ಅದೇ ರೀತಿ, ಕೃಷ್ಣಸಂಧಾನದ ನೆಪದಲ್ಲಿ ಕರ್ಣನಿಗೆ ಒಡ್ಡಲಾಗುವ ಸಾಮ್ರಾಜ್ಯದ ಆಮಿಷಗಳು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿನ ‘ಆಪರೇಷನ್’ದಂತಹ ಪಕ್ಷಾಂತರ ಮತ್ತು ಮೌಲ್ಯರಹಿತ ಅಧಿಕಾರ ರಾಜಕಾರಣವನ್ನು ವಿವರಿಸಲು ಅತ್ಯುತ್ತಮ ರೂಪಕವಾಗುತ್ತದೆ. ಸೈನಿಕ ಶಿಬಿರಗಳ ಹಿನ್ನೆಲೆಯಲ್ಲಿ ಪಂಪ ಚಿತ್ರಿಸುವ ಕಳ್ಳುಕುಡಿತ ಮತ್ತು ಬೇಟೆಯ ವರ್ಣನೆಗಳು ಕೇವಲ ಸಾಂಪ್ರದಾಯಿಕ ಅಷ್ಟಾದಶ ವರ್ಣನೆಗಳಾಗಿ ಉಳಿಯದೆ, ದುಡಿಯುವ ತಳವರ್ಗದ ಆಹಾರ ಸಂಸ್ಕೃತಿಯನ್ನು ಬರಹದ ಜಗತ್ತಿನಿಂದ ಹೊರಗಿಟ್ಟ ‘ಪಾಕಮೈಲಿಗೆ’ ಮತ್ತು ‘ಗೇಹಮೈಲಿಗೆ’ಯ ಸಾಂಸ್ಕೃತಿಕ ನಿರ್ಬಂಧಗಳಾಗಿ ಚರ್ಚಿಸಲ್ಪಡುತ್ತವೆ. ಈ ಮೂಲಕ ಕೃತಿಯು ಹಳಗನ್ನಡವನ್ನು ವರ್ತಮಾನದ ಉರಿಯುವ ಸಾಂಸ್ಕೃತಿಕ ಪ್ರಶ್ನೆಗಳೊಂದಿಗೆ ಸಂವಾದಿಸುತ್ತದೆ.
ಈ ಕೃತಿಯು ಅಧಿಕವಾಗಿ ಪಾಶ್ಚಿಮಾತ್ಯ ಮಾರ್ಕ್ಸ್ ವಾದಿ, ನವಚಾರಿತ್ರಿಕವಾದಿ ಹಾಗೂ ಸ್ತ್ರೀವಾದಿ ಸಿದ್ಧಾಂತಗಳ ಚೌಕಟ್ಟನ್ನೇ ಅವಲಂಬಿಸಿ ವಿಮರ್ಶಾ ರಾಜಕಾರಣವನ್ನು ವಿಶ್ಲೇಷಿಸುತ್ತದೆ. ಆದರೆ ಭಾರತೀಯ ದೇಶೀ ಚಿಂತನಾ ಪರಂಪರೆಯಲ್ಲಿರುವ ನಾಥ-ಸಿದ್ಧ ಪರಂಪರೆಗಳ ಲೋಕದೃಷ್ಟಿಯಿಂದ ಪಂಪನ ಕಾವ್ಯಗಳನ್ನು ಮರುಪರಿಶೀಲಿಸುವ ಅಗತ್ಯವಿದೆ. ಜೈನಧರ್ಮದ ಅನೇಕಾಂತವಾದ ಮತ್ತು ಸ್ಯಾದ್ವಾದಗಳು ಕೇವಲ ತಾತ್ವಿಕ ಸಿದ್ಧಾಂತಗಳಲ್ಲ, ಅವು ಲೋಕದ ಸತ್ಯವನ್ನು ಬಹುಕೋನಗಳಲ್ಲಿ ಗ್ರಹಿಸುವ ದೇಶೀ ಮೀಮಾಂಸೆಯ ನೆಲೆಗಳಾಗಿವೆ. ವ್ಯಕ್ತಿಯು ಭವದ ಪ್ರವಾಹದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಪರಿಯು ಮಾರ್ಕ್ಸ್ ವಾದದ ಭೌತಿಕವಾದಕ್ಕಿಂತ ಭಿನ್ನವಾದ, ಭಾರತೀಯ ಶ್ರಮಣ ಪರಂಪರೆಯ ಭೌತಿಕ ಮತ್ತು ಆಧ್ಯಾತ್ಮಿಕಗಳ ಮುಖಾಮುಖಿಯಾಗಿದೆ.
ಶೆಟ್ಟಿಯವರು ಬಂಡಾಯ ಮನೋಭಾವದವರಾಗಿರುವ ಕಾರಣದಿಂದಾಗಿ ಪಂಪನ ಕಾವ್ಯಗಳ ಕುರಿತಾದ ಸಂಪ್ರದಾಯವಾದಿ ನಿಲುವುಗಳನ್ನು ಅತ್ಯಂತ ತೀಕ್ಷ್ಣವಾಗಿ ಖಂಡಿಸುತ್ತಾರೆ. ಆದರೆ ತಾವು ಮುಂದುಮಾಡುವ ಎಡಪಂಥೀಯ ಅಥವಾ ಬಂಡಾಯ ಪ್ರವೃತ್ತಿಯ ಓದುಗಳ ಮಿತಿಗಳನ್ನು ಪ್ರಶ್ನಿಸುವಲ್ಲಿ ಸಂಪೂರ್ಣ ಮೌನವಹಿಸುತ್ತಾರೆ. ಹಾಗೆಯೇ ಕೃತಿಯ ಒಟ್ಟು ನಿರೂಪಣೆಯಲ್ಲಿ ಅತಿಯಾದ ಪಾರಿಭಾಷಿಕ ಶಬ್ದಗಳ ಬಳಕೆಯಿಂದಾಗಿ ಬರಹವು ಕೆಲವು ಕಡೆ ಕ್ಲಿಷ್ಟತೆಯ ಜಡ್ಡನ್ನು ಆಹ್ವಾನಿಸಿಕೊಂಡಿದೆ. ಇದು ಶೈಕ್ಷಣಿಕ ವಲಯದ ಸಾಮಾನ್ಯ ಸಹೃದಯನಿಗೆ ಕಾವ್ಯದ ಆಸ್ವಾದನೆಗಿಂತ ಸಿದ್ಧಾಂತದ ಅಬ್ಬರವೇ ಹೆಚ್ಚು ಕಾಣಿಸುವಂತೆ ಮಾಡುತ್ತದೆ. ಆಹಾರ ಸಂಸ್ಕೃತಿಯ ಚರ್ಚೆಯಲ್ಲಿ ಲೇಖಕರು ಪಂಪನಲ್ಲಿ ಮಾಂಸಾಹಾರದ ವರ್ಣನೆಯ ಗೈರುಹಾಜರಿಯನ್ನು ಬ್ರಾಹ್ಮಣ್ಯ ಮತ್ತು ಜೈನಧರ್ಮದ ಸಾಂಸ್ಥಿಕ ಮಡಿವಂತಿಕೆಗೆ ಅನ್ವಯಿಸುತ್ತಾರೆ. ಆದರೆ, ಅಹಿಂಸೆಯೇ ಪರಮಧರ್ಮವಾದ ಜೈನ ಧರ್ಮದ ಕಾವ್ಯದಲ್ಲಿ ಮಾಂಸಾಹಾರದ ವಿವರಗಳನ್ನು ನಿರೀಕ್ಷಿಸುವುದು ಪಠ್ಯದ ಆಂತರಿಕ ತಾತ್ವಿಕತೆಗೆ ವಿರೋಧವಾಗುವುದಿಲ್ಲವೇ? ಎಲ್ಲಕ್ಕಿಂತ ಮುಖ್ಯವಾಗಿ ಕೃತಿಯು ಪ್ರಧಾನವಾಗಿ ಬಿಡಿ ಲೇಖನಗಳು ಹಾಗೂ ಪ್ರಾಸಂಗಿಕ ಪ್ರತಿಕ್ರಿಯೆಗಳನ್ನೇ ತನ್ನ ಸಂಶೋಧನೆಯ ಮೂಲ ಆಕರಗಳನ್ನಾಗಿ ಬಳಸಿಕೊಂಡಿರುವುದರಿಂದ, ಪಂಪನನ್ನು ಕುರಿತು ಬಂದಿರುವ ಬೃಹತ್ ಗಾತ್ರದ ಪಿಹೆಚ್.ಡಿ. ಮಹಾಪ್ರಬಂಧಗಳ ತಾತ್ವಿಕ ಕೊಡುಗೆಯನ್ನು ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಇದು ಸಂಶೋಧನೆಯ ಸಮಗ್ರತೆಯ ದೃಷ್ಟಿಯಿಂದ ಒಂದು ಪ್ರಮುಖ ಕೊರತೆಯಾಗಿ ಕಾಡುತ್ತದೆ.
ಇಂತಹ ಕೆಲವುಗಳಾಚೆಗೆ, ಶೆಟ್ಟಿಯವರ ಈ ಕೃತಿಯು ಪಂಪನನ್ನು ಒಂದು ಮುಗಿದುಹೋದ ಅಧ್ಯಾಯವಾಗಿ ನೋಡದೆ, ನಿರಂತರವಾಗಿ ಬೆಳೆಯುತ್ತಿರುವ ಒಂದು ಸಂಕಥನವಾಗಿ ನೋಡುತ್ತದೆ. ಅವರ ವಿಮರ್ಶಾ ವಿಧಾನವು ಮಾರ್ಕ್ಸ್ ವಾದಿ, ಸ್ತ್ರೀವಾದಿ ಮತ್ತು ನವಚಾರಿತ್ರಿಕವಾದಿ ಚಿಂತನೆಗಳ ಹದವಾದ ಮಿಶ್ರಣವಾಗಿದೆ. ಸಂಸ್ಕೃತ ಕಾವ್ಯಮೀಮಾಂಸೆಯ ಯಜಮಾನಿಕೆಯಿಂದ ಕನ್ನಡದ ಸ್ವತಂತ್ರ ಅಸ್ಮಿತೆಯನ್ನು ಬಿಡಿಸಿಕೊಳ್ಳುವ ತುಡಿತ ಇಲ್ಲಿ ಎದ್ದು ಕಾಣುತ್ತದೆ. ಪಂಪನ ಕಾವ್ಯವನ್ನು ಕೇವಲ ‘ರಸ’ಕ್ಕಾಗಿ ಓದದೆ, ಬದುಕಿನ ಸತ್ಯಗಳ ಶೋಧನೆಗಾಗಿ ಮತ್ತು ಶ್ರೇಣೀಕೃತ ಸಮಾಜದ ವಿರುದ್ಧದ ಪ್ರತಿರೋಧಕ್ಕಾಗಿ ಓದಬೇಕೆಂಬ ಶೆಟ್ಟಿಯವರ ಕರೆ ವಿಮರ್ಶಾ ಲೋಕಕ್ಕೆ ಹೊಸ ದಿಕ್ಕನ್ನು ತೋರಿಸಿದೆ. ‘ಪಂಪನೋದು’ ಕೃತಿಯು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ವೈಧಾನಿಕತೆಯ ದೃಷ್ಟಿಯಿಂದಲೂ ಮತ್ತು ತಾತ್ವಿಕ ಖಚಿತತೆಯ ದೃಷ್ಟಿಯಿಂದಲೂ ಒಂದು ಅತ್ಯಂತ ಗಂಭೀರವಾದ ಮತ್ತು ವಿಸ್ತಾರವಾದ ಕೊಡುಗೆಯಾಗಿದೆ. ಇದು ಪಂಪನನ್ನು ಸಂವೇದನಾಶೀಲವಾಗಿ ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ಅವನ ಕಾವ್ಯದ ಮೂಲಕ ಮದ್ದು ಹುಡುಕಲು ಪ್ರೇರೇಪಿಸುತ್ತದೆ. ಶೆಟ್ಟಿಯವರ ಸುದೀರ್ಘವಾದ ಈ ವಿಶ್ಲೇಷಣೆಯು ಕನ್ನಡದ ಬೌದ್ಧಿಕ ಚರಿತ್ರೆಯನ್ನು ಪುನರಚಿಸಿಕೊಳ್ಳುವಲ್ಲಿ ಒಂದು ಆಧಾರಸ್ತಂಭವಾಗಿ ಕೆಲಸ ಮಾಡುತ್ತದೆ ಎಂಬುದು ನಿಸ್ಸಂದೇಹ. ಪಂಪನ ನೆವದಲ್ಲಿ ನಾಡು, ನುಡಿ ಮತ್ತು ಸಮುದಾಯಗಳ ಪ್ರತಿನಿಧೀಕರಣವನ್ನು ಈ ಕೃತಿಯು ವಿವರಿಸಿದ ರೀತಿ ಕನ್ನಡ ವಿಮರ್ಶಾ ಪರಂಪರೆಗೆ ಹೊಸ ಬಲವನ್ನು ತಂದಿದೆ. ಇಡೀ ಕೃತಿಯು ಪಠ್ಯ ಮತ್ತು ಓದುಗನ ನಡುವಿನ ವ್ಯವಹಾರವು ಕೇವಲ ಸಾಹಿತ್ಯಿಕವಾಗಿರದೆ ರಾಜಕೀಯವೂ ಆಗಿರುತ್ತದೆ ಎಂಬುದನ್ನು ಅತ್ಯಂತ ದೀರ್ಘವಾಗಿ ಮತ್ತು ಗಾಢವಾಗಿ ಸಾಬೀತುಪಡಿಸಿದೆ. ಪಂಪನನ್ನು ಹೇಗೆ ಓದಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ನಾವು ಪಂಪನನ್ನು ಹೇಗೆ ‘ಬಳಸಿಕೊಳ್ಳುತ್ತಿದ್ದೇವೆ’ ಎಂಬುದನ್ನು ಈ ಕೃತಿಯು ನಮಗೆ ಕನ್ನಡಿ ಹಿಡಿದು ತೋರಿಸುತ್ತದೆ.
ಡಾ. ರವಿ ಎಂ ಸಿದ್ಲಿಪುರ
ಇವರು ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಕಥೆ – ರಿಟೈರ್ಡ್ ರಾಮಯ್ಯ


