ಬೆಂಗಳೂರು, ಆ.11: ಕನ್ನಡ ಭಾಷಾ ಶಿಕ್ಷಕರಿಗೆ ಅವಕಾಶ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಪ್ರತಿರೋಧಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಶಿಕ್ಷಣ ಇಲಾಖೆ ಹೊರಡಿಸಿರುವ ಪರಿಷ್ಕೃತ ರಾಜ್ಯಪತ್ರದಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
ಈ ಹಿಂದೆ ಶಿಕ್ಷಕರ ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಆದೇಶದಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ಅನಾನುಕೂಲವಾಗುವ ಅಂಶಗಳಿದ್ದವು. ಇದನ್ನು ಪ್ರಶ್ನಿಸಿದ್ದ ಟಿ.ಎ. ನಾರಾಯಣಗೌಡ, ಶಿಕ್ಷಣ ಇಲಾಖೆಯ ಕ್ರಮವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳ ಮೂಲಕವೂ ಧ್ವನಿ ಎತ್ತಿದ್ದರು. ಒಂದು ವೇಳೆ ಕನ್ನಡ ಶಿಕ್ಷಕರಿಗೆ ಅನ್ಯಾಯವಾದರೆ ಹಿಂದೆಂದೂ ಕಾಣದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸಿದ್ದರು.
ಇದೀಗ ಹೊರಡಿಸಿರುವ ಪರಿಷ್ಕೃತ ರಾಜ್ಯಪತ್ರದಲ್ಲಿ ಅಗತ್ಯ ಬದಲಾವಣೆ ಮಾಡಲಾಗಿದ್ದು, ಭಾಷಾ ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪರಿಷ್ಕೃತ ರಾಜ್ಯಪತ್ರದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಲ್ಲಿ ‘ಭಾಷೆ’, ‘ಸಮಾಜ ಪಾಠಗಳು’, ‘ಗಣಿತ ಮತ್ತು ವಿಜ್ಞಾನ’ ಹಾಗೂ ‘ಜೀವಶಾಸ್ತ್ರ’ ವಿಭಾಗಗಳನ್ನು ಪ್ರತ್ಯೇಕವಾಗಿ ನಮೂದಿಸಲಾಗಿದೆ.
ಈ ಬೆಳವಣಿಗೆಯನ್ನು ಸ್ವಾಗತಿಸಿರುವ ನಾರಾಯಣಗೌಡ, “ನಮ್ಮ ಪ್ರತಿರೋಧದಿಂದಾಗಿ ಶಿಕ್ಷಣ ಇಲಾಖೆ ಕನ್ನಡ ಭಾಷಾ ಶಿಕ್ಷಕರಿಗೆ ಅವಕಾಶ ಮಾಡಿಕೊಟ್ಟಿದೆ. ಈಗ ಹೊರಡಿಸಿರುವ ರಾಜ್ಯಪತ್ರದಲ್ಲಿ ಬದಲಾವಣೆ ಮಾಡಿ ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲಿದೆ” ಎಂದು ಹೇಳಿದ್ದಾರೆ.
ಕನ್ನಡ ಭಾಷಾ ಶಿಕ್ಷಣದ ವಿಚಾರದಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಯಾವುದೇ ತಪ್ಪು ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ.
“ಇಂಥ ತಪ್ಪುಗಳನ್ನು ಮುಂದೆ ಎಂದೂ ಎಸಗಬಾರದು. ಶಿಕ್ಷಣದಂತಹ ಮಹತ್ವದ ಕ್ಷೇತ್ರದಲ್ಲಿ ನಿಯಮ ರೂಪಿಸುವಾಗ ಕನ್ನಡ ಭಾಷೆ, ಕನ್ನಡ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ತಪ್ಪು ನಿರ್ಧಾರ ಕೈಗೊಂಡು ನಂತರ ಪ್ರತಿರೋಧ ಬಂದ ಮೇಲೆ ತಿದ್ದುಪಡಿ ಮಾಡುವ ಪರಿಸ್ಥಿತಿ ಮತ್ತೆ ನಿರ್ಮಾಣವಾಗಬಾರದು. ಇಂತಹ ತಪ್ಪುಗಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.
ಕನ್ನಡ ಭಾಷಾ ಶಿಕ್ಷಕರಿಗೆ ಅವಕಾಶ ಕಲ್ಪಿಸಿರುವ ಪರಿಷ್ಕೃತ ನಿಯಮದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯ ಹಕ್ಕು ಮತ್ತು ಕನ್ನಡಿಗರ ಶೈಕ್ಷಣಿಕ ಹಿತಾಸಕ್ತಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಮುಂದುವರಿಯಲಿದೆ ಎಂದು ನಾರಾಯಣಗೌಡ ಹೇಳಿದ್ದಾರೆ.

