ನವದೆಹಲಿ: ಕಾವೇರಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ತುರ್ತು ವಿಚಾರಣೆ ಕೋರಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಪೀಠದ ಮುಂದೆ ಈ ವಿಷಯ ಪ್ರಸ್ತಾಪಿಸಿದರು. ಗುರುವಾರ ವಿಚಾರಣೆಗೆ ಪಟ್ಟಿ ಮಾಡುತ್ತೇವೆ ಎಂದು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನು ಒಳಗೊಂಡ ಪೀಠ ತಿಳಿಸಿದೆ.
ಆಗಸ್ಟ್ 3 ರಂದು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಕಾವೇರಿ ನೀರಿನ ರಾಜ್ಯದ ಪಾಲನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮೂಲಗಳ ಪ್ರಕಾರ, ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಪ್ರಮಾಣಾನುಗುಣವಾಗಿ ನೀರು ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿಕೊಂಡಿದೆ. ತಮಿಳುನಾಡಿಗೆ ಪ್ರಸ್ತುತ ನೀಡಬೇಕಾಗಿರುವ ಅನುಪಾತದ ಪಾಲು 26.954 ಟಿಎಂಸಿ ಎಂದು ಅದು ತಿಳಿಸಿದೆ. ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಎತ್ತಿಹಿಡಿದಿದೆ.
2018 ರಲ್ಲಿ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ ನಡುವಿನ ನದಿ ನೀರಿನ ಹಂಚಿಕೆಯ ವಿವಾದವನ್ನು ಪರಿಹರಿಸಲು ಕೇಂದ್ರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸಿತ್ತು. ನದಿ ಹರಿಯುವ ರಾಜ್ಯಗಳ ಸದಸ್ಯರಲ್ಲದೇ, ಮಂಡಳಿಯು ಕೇಂದ್ರದ ನಾಮನಿರ್ದೇಶಿತರನ್ನು ಸಹ ಹೊಂದಿದೆ.
ಇತ್ತೀಚೆಗೆ, ಡಿಎಂಕೆ ತಮಿಳುನಾಡಿಗೆ ಕಾವೇರಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕರ್ನಾಟಕವು ಸುಪ್ರೀಂ ಕೋರ್ಟ್‌ನ 2018ರ ಅಂತಿಮ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಡಿಎಂಕೆ ಅರ್ಜಿಯಲ್ಲಿ ತಿಳಿಸಿತ್ತು.
2026 ಜುಲೈ 30 ರಂದು ಸಿಡಬ್ಲುಎಂಎ ದೃಢಪಡಿಸಿದಂತೆ, 2026 ಜುಲೈ 28 ರಂದು ಸಿಡಬ್ಲುಆರ್‌ಸಿ ಯ ನಿರ್ದೇಶನವನ್ನು ತಕ್ಷಣವೇ ಮತ್ತು ಸಂಪೂರ್ಣವಾಗಿ ಜಾರಿಗೆ ತರಲು ಕರ್ನಾಟಕ ರಾಜ್ಯ , ಪ್ರತಿವಾದಿ ಸಂಖ್ಯೆ1ಕ್ಕೆ ನಿರ್ದೇಶನ ನೀಡಿತ್ತು. ಆದೇಶ ಹೊರಡಿಸಿದ ದಿನಾಂಕದಿಂದ ಪ್ರಾರಂಭವಾಗಿ 15 ದಿನಗಳವರೆಗೆ ಬಿಳಿಗುಂಡ್ಲುವಿನಲ್ಲಿ ದಿನಕ್ಕೆ 3,500 ಕ್ಯೂಸೆಕ್‌ಗಳ ಹರಿವನ್ನು ಖಚಿತಪಡಿಸಿಕೊಳ್ಳುವುದು ಮತ್ತು 2026 ಜುಲೈ 29 ರಿಂದ ಅನುಸರಣೆಯಲ್ಲಿನ ಕೊರತೆಯನ್ನು ಸರಿದೂಗಿಸಬೇಕು ಎಂದು ಡಿಎಂಕೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿತ್ತು.

