ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಂದರೆ ಬ್ಯಾರಿಗಳು, ಬಂಟರು, ಬಿಲ್ಲವರ ಪಾರಮ್ಯ ಇರುವಾಗ ಎಂ ಜಿ ಹೆಗ್ಡೆ ಅವರಂತವರು ಅಧ್ಯಕ್ಷ ಆಗಲಿ ಎಂಬ ಅಭಿಪ್ರಾಯ ಮೂಡತೊಡಗಿದೆ. ಪಕ್ಷಕ್ಕಾಗಿ ಸಮಯ ಕೊಡುವವರು ಆಗಬೇಕು, ಪಕ್ಷದ ಸಿದ್ಧಾಂತದ ಬಗ್ಗೆ ಗಟ್ಟಿಯಾಗಿ ನಿಲ್ಲಬೇಕು, ಅದಕ್ಕಿಂತಲೂ ಹೆಚ್ಚಾಗಿ ವಿರೋಧಿಗಳಿಗೆ ಯಾವುದೇ ತಿಣುಕಾಟ ಇಲ್ಲದೆ ದಿಟ್ಟ ಉತ್ತರ ನೀಡುವ ಛಾತಿ ಇರುವವರು ಆಗಬೇಕು ಎಂಬುದು ಬಹು ಮಂದಿಯ ಆಶಯ. ಈ ಆಶಯಗಳನ್ನು ಎಂ ಜಿ ಹೆಗ್ಡೆಯವರು ಈಡೇರಿಸಬಲ್ಲರು ಅನ್ನುವ ನಿರೀಕ್ಷೆ ಈಗ ದಕ್ಷಿಣ ಕನ್ನಡದ ಜನತೆಯದು – ರಮೇಶ್ ಪೆರ್ಲ, ಹಿರಿಯ ಪತ್ರಕರ್ತರು.
ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕಾಗಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸಂಘಟನಾ ಸೃಜನ್ ಅಭಿಯಾನ ನಡೆಯುತ್ತಿದೆ. ದೇಶದ 25 ರಾಜ್ಯಗಳಲ್ಲಿ ಕೂಡ ಈ ಅಭಿಯಾನ ನಡೆಯುತ್ತಿದೆ. ಪ್ರತಿಪಕ್ಷ ಮುಖಂಡ ರಾಹುಲ್ ಗಾಂಧಿ ಚಾಲನೆ ನೀಡಿರುವ ಈ ನಾಯಕರ ಶೋಧ ಕಾರ್ಯವು ಕಾಂಗ್ರೆಸ್ಸಿನ ಪಟ್ಟಭದ್ರ ನಾಯಕರನ್ನು ಹಿಂದಿಕ್ಕಿ ಸೂಕ್ತ ನಾಯಕರ ಆಯ್ಕೆಗೆ ಅವಕಾಶ ನೀಡುವುದೇ ಎಂಬುದನ್ನು ಸಮಯವೇ ನಿರ್ಧರಿಸಲಿದೆ.
ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ನಲ್ವತ್ತಕ್ಕು ಹೆಚ್ಚು ಮಂದಿ ಬಂಟ ಸಮುದಾಯದವರು ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಸಮುದಾಯದವರು ಸೇರಿ ಐದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರಹಗಾರರೂ, ವಾಗ್ಮಿಗಳೂ ಆಗಿರುವ ಕಾಂಗ್ರೆಸ್ ರಾಜ್ಯ ವಕ್ತಾರರಾಗಿರುವ ಎಂ.ಜಿ.ಹೆಗ್ಡೆ ಅವರ ಹೆಸರು ಹೆಚ್ಚಾಗಿ ಓಡಾಡುತ್ತಿದೆ. ಇವರೊಂದಿಗೆ ಹೊಸ ಮುಖಗಳಲ್ಲಿ ಪುತ್ತೂರಿನ ಮಾಜಿ ಬ್ಲಾಕ್ ಅಧ್ಯಕ್ಷ ವಿಶ್ವನಾಥ ರೈ, ಬಂಟ್ವಾಳದ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಮಂಗಳೂರಿನ ಜಿತೇಂದ್ರ ಜೆ.ಸುವರ್ಣ ಹೆಸರು ಚಾಲ್ತಿಯಲ್ಲಿದೆ. ಇನ್ನು ನಿಲಯದ ಕಲಾವಿದರ ದೊಡ್ಡ ಪಟ್ಟಿಯೇ ಇದೆ.
ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಎಂ.ಜಿ.ಹೆಗ್ಡೆ ಅವರನ್ನು ಹಿಂದೂಪರ ಸಂಘಟನೆಯ ಅಪಾಯದಿಂದ ಪಾರು ಮಾಡಿ ಮುಖ್ಯವಾಹಿನಿಯ ರಾಜಕಾರಣಕ್ಕೆ ಕರೆತಂದವರು. ಎಂ.ಜಿ.ಹೆಗ್ಡೆಯವರು ಇತ್ತೀಚೆಗೆ ಗಾಂಧೀಜಿ ಪರವಾದ ಕೆಲಸಗಳನ್ನು ಕೈಗೆತ್ತಿಕೊಂಡು ಸಮಾಜದ ಪ್ರಜ್ಞಾವಂತರ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಇವರು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾಯಿತ ಪ್ರಧಾನ ಕಾರ್ಯದರ್ಶಿ, ಎಸ್‌ಡಿಎಮ್ ಕಾನೂನು ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾಯಿತ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಬಿ ಎ. ಎಲ್ ಎಲ್ ಬಿ ಪದವಿ ಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸರ್ವ ಕಾಲೇಜು ವಿದ್ಯಾರ್ಥಿ ಕೌನ್ಸಿಲ್ ಚುನಾಯಿತ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಎರಡು ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಚುನಾಯಿತ ಸದಸ್ಯ( ಎಬಿವಿಪಿ ವಿರುದ್ಧ ಸ್ವತಂತ್ರ ಗೆಲುವು ಸಾಧಿಸಿದ್ದರು ) ಒಂದು ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಚುನಾಯಿತ ಸದಸ್ಯ( ಎಬಿವಿಪಿ ವಿರುದ್ಧ ಸ್ವತಂತ್ರ ಗೆಲುವು), ಒಂದು ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಆರ್ಥಿಕ ಸಮಿತಿ ಚುನಾಯಿತ ಸದಸ್ಯ( ಎಬಿವಿಪಿ ವಿರುದ್ಧ ಸ್ವತಂತ್ರ ಗೆಲುವು ) ಆಗಿದ್ದವರು ಶೈಕ್ಷಣಿಕ ವಲಯದಲ್ಲಿ ತುಂಬಾ ಕೆಲಸ ಮಾಡಿದ್ದಾರೆ.
ದೇಶದಲ್ಲಿ ಮೊದಲ ಫ್ಯಾಷನ್ ಪದವಿ ಮತ್ತು ಪತ್ತೇದಾರಿ ಪದವಿ ಶಿಕ್ಷಣಕ್ಕೆ ಪಠ್ಯ ಪುಸ್ತಕ ರಚನೆ
ಇಡೀ ದೇಶ ತಿರುಗಿ ವಿಷಯ ಸಂಗ್ರಹ ಮಾಡಿ ಇವರು ಪಠ್ಯ ಪುಸ್ತಕ ರಚಿಸಿದ್ದಾರೆ. ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಇದರ ಸ್ಥಾಪಕ ನಿರ್ದೇಶಕರಾಗಿ ಫ್ಯಾಷನ್ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಕೀರ್ತಿ ಇವರದು. ವಿಶಿಷ್ಟ ಗುಣಸ್ವಭಾವ ಮತ್ತು ಪ್ರತಿಭಾನ್ವಿತರಾದ ಇವರು ಫ್ಯಾಷನ್ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿಯ ಮೂಲ ಪಿತಾಮಹ . ಇವರು ಪಠ್ಯಕ್ರಮ ರಚಿಸಿದ್ದರಿಂದಾಗಿ ದೇಶದಲ್ಲಿ ನೂರಾರು ಕಾಲೇಜುಗಳು ಪ್ರಾರಂಭವಾಗಿ ಸಾವಿರಾರು ಯುವಕರಿಗೆ ಹೊಸ ಉದ್ಯೋಗದ ಬಾಗಿಲು ತೆರೆದಿದೆ.
ಇಷ್ಟೇ ಅಲ್ಲ ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಕುಲ ಸಚಿವರಾಗಿದ್ದರು. ಓದಿದ್ದು ಬಿ ಎ ಆಗಿದ್ದರೂ, ಒಂದು ಪ್ಯಾರಾ ಮೆಡಿಕಲ್ ಕಾಲೇಜನ್ನು ಸಮರ್ಥವಾಗಿ ಕಟ್ಟಿ ನಿಲ್ಲಿಸಿದವರು.
ಈಗ ವೃತ್ತಿಯಿಂದ ನಿವೃತ್ತರಾಗಿದ್ದು ವ್ಯಕ್ತಿ, ಕೌಟುಂಬಿಕ, ಸಂಸ್ಥೆಗಳಿಗೆ ಆರ್ಥಿಕ, ಆಡಳಿತಾತ್ಮಕ ಸಮಸ್ಯೆ ನಿವಾರಣೆಗೆ ಸಲಹೆ (ಆಪ್ತ ಸಲಹೆ ಕೆಲಸ)ನೀಡುವ ಕೆಲಸ ಮಾಡುತ್ತಿರುವುದರಿಂದ ಪಕ್ಷಕ್ಕಾಗಿ ಪೂರ್ಣಕಾಲ ಕೆಲಸ ಮಾಡುವ ಅವಕಾಶ ಇವರಿಗೆ ಇದೆ.
ಇವರು ವಿಶೇಷ ಪತ್ತೇದಾರರು ಕೂಡ. ಪತ್ತೇದಾರಿ ಕೇಸ್ ಗಳನ್ನು ನಡೆಸಿದ್ದಲ್ಲದೆ, ಪತ್ತೇದಾರಿಕೆ ಕೋರ್ಸ್‌ನ್ನು ತನ್ನ ಕಾಲೇಜಿನಲ್ಲಿ ಆರಂಭಿಸಿದ್ದರು. ಅದರ ಪಠ್ಯ ರಚನೆಯೂ ಇವರದೆ. ಎಂ. ಎಸ್. ಸಿ ಫ್ಯಾಷನ್ ಗೆ ಸಿಲೆಬಸ್ ಮಾಡಲು ದಾವಣಗೆರೆ ವಿಶ್ವವಿದ್ಯಾನಿಲಯದ ಸಮಿತಿ ಸದಸ್ಯರೂ ಆಗಿದ್ದರು.
ಖಾದಿ ಬಟ್ಟೆ ಪ್ರಚಾರಕ್ಕಾಗಿ ದೇಶದ ಹಲವು ಕಡೆ ಖಾದಿ ಫ್ಯಾಷನ್ ಶೋ, ಮತ್ತು ಮಂಗಳೂರಿನಲ್ಲಿ ಅನಾಥ ಮಕ್ಕಳು, ಪೌರ ಕಾರ್ಮಿಕರು, ಕೃಷಿಕರ, ಅಂಧ ಮಕ್ಕಳ, ವಿಶೇಷ ಚೇತನ ಮಕ್ಕಳ, ನಾಗರೀಕರ ಫ್ಯಾಷನ್ ಶೋ ಕಾರ್ಯಕ್ರಮ ಮಾಡಿದ್ದಲ್ಲದೆ, ಖಾದಿ ಮಂಡಳಿ ಜೊತೆಗೆ ಅನೇಕ ಕಾರ್ಯಕ್ರಮ ಮಾಡಿದ್ದಾರೆ. ಗುಜರಾತ್ ನಲ್ಲಿ ನಡೆದ ಭೂಕಂಪದ ವೇಳೆ ಅಲ್ಲಿನ 5 ವಿದ್ಯಾರ್ಥಿಗಳನ್ನು ದತ್ತು ಪಡೆದು ಉಚಿತ ಶಿಕ್ಷಣ ನೀಡಿದ್ದಾರೆ.

ಹೋರಾಟ
ಕಾಲೇಜು ಜೀವನದಿಂದಲೇ ಹೋರಾಟ ಮಾಡಿಕೊಂಡು ಬಂದಿದ್ದು ಪೂರ್ಣಪ್ರಜ್ಞ ಸಂಜೆ ಕಾಲೇಜಿಗೆ 1983 ರಲ್ಲಿ ಜನರೇಟರ್ ಹಾಕಿಸಿದ್ದು, ಉಡುಪಿಯ ಮೀನು ಮಾರುಕಟ್ಟೆ ವ್ಯವಸ್ಥಿತ ಗೊಳಿಸಿದ್ದು, ಅಕ್ಟೋಬರ್ ನಲ್ಲಿ ಪ್ರಾರಂಭವಾಗುವ ಸಂಜೆ ಕಾಲೇಜುಗಳನ್ನು ಜುಲೈ ನಲ್ಲಿ ಪ್ರಾರಂಭ ಆಗುವಂತೆ ಮಾಡಿದ್ದೂ ಇವರೇ..
ಮೀನುಗಾರಿಕಾ ಅಭಿವೃದ್ಧಿ ನಿಗಮದ ನೌಕರರಿಗೆ 2 ಕೋಟಿ ರೂ. ತುಟ್ಟಿ ಭತ್ಯೆ ಕೊಡಿಸಿದ್ದು ಇವರ ಹೋರಾಟದಿಂದ. ನೇತ್ರಾವತಿ ಉಳಿಸಿ, ಟೋಲ್ ಗೇಟ್ ಹೋರಾಟ, ಬೀದಿ ಬದಿ ವ್ಯಾಪಾರಿಗಳ ಪರ, ಪೌರ ಕಾರ್ಮಿಕರ ಪರ ಹೀಗೆ ಹತ್ತಾರು ಹೋರಾಟಗಳನ್ನು ಸ್ವತಃ ಸಂಘಟಿಸಿದ್ದಾರೆ.
ಕಳೆದ 25 ವರ್ಷಗಳಿಂದ ಕೋಮುವಾದದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು, ಕಾರ್ಯಕ್ರಮ ಮಾಡುವುದು, ವಿಡಿಯೋ ಮಾಡುವುದು ಇತ್ಯಾದಿಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ.
ಜೆರೋಸಾ ಶಾಲೆಯಲ್ಲಿ ಬಿಜೆಪಿ ಕೋಮು ಸಮಸ್ಯೆ ಪ್ರಕರಣದಲ್ಲಿ ಇವರು ಹಾಡಿದ ಅಂತ್ಯ ಯಾವತ್ತೂ ನೆನಪಿರಬೇಕು.
ಮಂಡ್ಯ ಜನರಿಗೆ ಸಕ್ಕರೆ ನಾಡಿಗೆ ಅಕ್ಕರೆ ಪತ್ರ ರಾಜ್ಯದಲ್ಲಿ ಒಂದು ಸಂಚಾಲನವನ್ನೇ ಉಂಟು ಮಾಡಿತ್ತು.
ಕೋಮುವಾದಿಗಳಿಗೆ ಕನಸಿನಲ್ಲೂ ಕಾಡುವ ಇವರ ವಿರುದ್ಧ ಸಂಘ ಪರಿವಾರ ಪ್ರತಿಭಟನೆ ಮಾಡಿತ್ತು. ಕೆಲವರು ಈಗಲೂ ಜೀವ ಬೆದರಿಕೆ ಹಾಕುತ್ತಾರೆ. ಸುಳ್ಯದಿಂದ ಸುರತ್ಕಲ್ ವರೆಗೆ, ಬೈಂದೂರಿನಿಂದ ಕಾಸರಗೋಡು ತನಕ ಕಾಂಗ್ರೆಸ್ ಪಕ್ಷದ ನೂರಾರು ಪ್ರತಿಭಟನಾ ಭಾಷಣ ಮಾಡಿದ್ದು, ಈಗಲೂ ಅದು ಮುಂದುವರಿದಿದೆ.
ಪಕ್ಷದ ಸಂಘಟನೆ
ಶ್ರೀ ಜನಾರ್ದನ ಪೂಜಾರಿಯವರ ಜೊತೆ ರಾಜ್ಯದ 200 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವಾರ್ ರೂಮ್ ಮುಖ್ಯಸ್ಥರಾಗಿದ್ದರು.
ನೂರಾರು ಟಿವಿ ಸಂವಾದ, ಮತ್ತು ತರಬೇತಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಚುನಾವಣಾ ಕಚೇರಿ ಉಸ್ತುವಾರಿ ಮಾಡಿದ್ದಾರೆ. ನೂರಾರು ಪತ್ರಿಕಾಗೋಷ್ಠಿ ಮಾಡಿ, ಪಕ್ಷದ ಪರ ಘರ್ಜಿಸುತ್ತಾರೆ.
ಸಾಹಿತ್ಯ
ಮೂರು ಕಾವ್ಯ ಸಂಕಲನ. ಎರಡು ಕಥಾ ಸಂಕಲನ ಪ್ರಕಟಗೊಂಡಿದೆ.
ಇವರ ಆತ್ಮಕಥೆ, ಖ್ಯಾತ ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿ ಮತ್ತು ಬಿ. ಕೆ ಹರಿಪ್ರಸಾದ್ ಅವರು ಬಿಡುಗಡೆ ಮಾಡಿದ್ದ “ಚಿಮಣಿ ಬೆಳಕಿನಿಂದ” ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಗಾಂಧೀ ಕುರಿತ ಪ್ರಶ್ನೆಗಳಿಗೆ ಉತ್ತರದ, ʼಮಿನುಗು ನೋಟʼಕ್ಕೆ ರಾಜ್ಯ ಗಾಂಧಿ ಸಾಹಿತ್ಯ ಪ್ರಶಸ್ತಿ ಬಂದಿದೆ.( ರಾಷ್ಟ್ರ ಮಟ್ಟದ ಚಿಂತಕ ಶ್ರೀ ಸುಧೀಂದ್ರ ಕುಲಕರ್ಣಿ ಬಿಡುಗಡೆ ಮಾಡಿದ್ದು.)
ಭಾರತ ಮುಸ್ಲಿಮ್ ರಾಷ್ಟ್ರವಾಗುವುದೇ ಪುಸ್ತಕ RSS ಅಪಪ್ರಚಾರಕ್ಕೆ ದಿಟ್ಟ ಉತ್ತರವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಕ್ಕಳಿಗಾಗಿ ಸಾಮರಸ್ಯದ ಕುರಿತು ದೇವಿ ಮತ್ತು ಬಂಗಾರ ಪುಸ್ತಕವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ಗಾಂಧೀ ಮನೆಯ ಅವಲಕ್ಕಿ ಸರ ಕಾದಂಬರಿ, ಪ್ರಕಟವಾಗಿದೆ.
ಸದ್ಯದಲ್ಲೇ ಲವ್ ಜಿಹಾದ್ ಮತ್ತು ಮತಾಂತರ – ವಾಸ್ತವ ಎಂಬ ಪುಸ್ತಕ ಬಿಡುಗಡೆ ಆಗಲಿದೆ. ಇದು ಆರ್ ಟಿ ಐ ಮೂಲಕ 300 ಪೊಲೀಸ್ ಠಾಣೆಗಳ ಅಧಿಕೃತ ದಾಖಲೆಗಳ ಪುಸ್ತಕವಾಗಿದೆ.
ಇವರು ಕೇವಲ ಭಾಷಣಕಾರರಲ್ಲ. ಹೋರಾಟಗಾರ, ಬರಹಗಾರ, ತಳಮಟ್ಟದ ಸಂಘಟಕ. ಹಿಡಿದ ಕೆಲಸ ಮುಗಿಯದೆ ಬಿಡಲ್ಲ, ಯಾರೂ ಇಲ್ಲಾ ಎಂದರೂ ಸರಿ. ಬಹಳ ಸ್ವಾಭಿಮಾನಿ..
ಹಿಂದೂ ಮುಸ್ಲಿಂ ಮತೀಯವಾದದ ಸುಳಿಯಲ್ಲಿದ್ದ ನೂರಕ್ಕೂ ಹೆಚ್ಚು ಯುವಕರು ಹೊರ ಬರಲು ಇವರೇ ಪ್ರೇರಣೆ. ಈಗಲೂ ಹಲವಾರು ಯುವಕರನ್ನು ಹೊರ ತರುವ ಪ್ರಯತ್ನ ಮಾಡುತ್ತಿದ್ದಾರೆ.
ವ್ಯಕ್ತಿ ಅಲ್ಲ – ಶಕ್ತಿ. ಸಮಾಜದ ಆಸ್ತಿ.
ಆದರೆ ಯಾವುದನ್ನೂ ಶೋ ಮಾಡದೆ ಜನರ ನಡುವೆ ಹಾಗೇ ಬಂದು, ಎಲ್ಲೋ ನಿಂತು ಕುಳಿತು ಹೋಗುವ ವಿನಮ್ರತೆ. ನೇರ ಮಾತು, ಖಡಕ್ ಬರಹ, ಪ್ರೀತಿಯ ಕವಿತೆ, ಕುತೂಹಲದ ಕಥೆ ಬರೆಯುವ ಇವರು ಒಂದು ಸೋಜಿಗ. ಇವರ ಭಾವಗೀತೆ ಕೇಳಿದರೆ ಇಷ್ಟೊಂದು ಮಧುರವಾಗಿ ಕೂಡಾ ಬರೆಯುತ್ತಾರೋ ಎಂಬ ಪ್ರಶ್ನೆ ಮೂಡುತ್ತದೆ.
ನಿಜವಾಗಿ ಇವರಿಗೆ ಮಂಗಳೂರು ವಿ ವಿ ಗೌರವ ಡಾಕ್ಟರೇಟ್ ಕೊಡಬೇಕು, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು. ಆದರೆ ಈ ವ್ಯಕ್ತಿ ಒಂದು ಬಯೋಡಾಟ ಕೊಡ ರೆಡಿ ಮಾಡಿಲ್ಲ!.
ಇವರು ಕಾಂಗ್ರೆಸ್ ಪಕ್ಷದಲ್ಲಿ ಯಾವ ಹುದ್ದೆಗೂ ತಕರಾರು ಮಾಡಿಲ್ಲ. ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ದಾರೆ. ಅವರು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಕೊಟ್ಟ ವಿಷಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದ ಸಾರ್ವಜನಿಕ ಅಭಿಪ್ರಾಯ ಸಕರಾತ್ಮಕವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಂದರೆ ಬ್ಯಾರಿಗಳು, ಬಂಟರು, ಬಿಲ್ಲವರ ಪಾರಮ್ಯ ಇರುವಾಗ ಎಂ ಜಿ ಹೆಗ್ಡೆ ಅವರಂತವರು ಅಧ್ಯಕ್ಷ ಆಗಲಿ ಎಂಬ ಅಭಿಪ್ರಾಯ ಮೂಡತೊಡಗಿದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಈಗ ಹಣವಂತರೇ ಆಗಬೇಕಂತ ಏನೂ ಇಲ್ಲ ಎಂಬ ಸೂಚನೆ ಬಂದಿದೆ. ಪಕ್ಷಕ್ಕಾಗಿ ಸಮಯ ಕೊಡುವವರು ಆಗಬೇಕು, ಪಕ್ಷದ ಸಿದ್ಧಾಂತದ ಬಗ್ಗೆ ಗಟ್ಟಿಯಾಗಿ ನಿಲ್ಲಬೇಕು, ಅದಕ್ಕಿಂತಲೂ ಹೆಚ್ಚಾಗಿ ವಿರೋಧಿಗಳಿಗೆ ಯಾವುದೇ ತಿಣುಕಾಟ ಇಲ್ಲದೆ ದಿಟ್ಟ ಉತ್ತರ ನೀಡುವ ಛಾತಿ ಇರುವವರು ಆಗಬೇಕು ಎಂಬುದು ಬಹು ಮಂದಿಯ ಆಶಯ. ಈ ಆಶಯಗಳನ್ನು ಎಂ ಜಿ ಹೆಗ್ಡೆಯವರು ಈಡೇರಿಸಬಲ್ಲರು ಅನ್ನುವ ನಿರೀಕ್ಷೆ ಈಗ ದಕ್ಷಿಣ ಕನ್ನಡದ ಜನತೆಯದು..

ರಮೇಶ್ ಪೆರ್ಲ
ಪತ್ರಕರ್ತರು.
ಇದನ್ನೂ ಓದಿ-ಚಿನ್ನ ಚಿನ್ನ ಆಸೈ: ಗಂಡಸರು ನೋಡಬೇಕಾದ ಹೆಂಗಸರ ಸಿನಿಮಾ!


