ನವದೆಹಲಿ ಅ. 5: ಅಖಿಲ ಭಾರತ ವಿದ್ಯಾರ್ಥಿಗಳ ಸಂಘಟನೆ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರನ್ನು ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.
ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ AISA ನೇತೃತ್ವದಲ್ಲಿ ಜಂತರ್ ಮಂತರ್ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ನೇಹಾ ಬೋರಾ ಅವರನ್ನು ವಶಕ್ಕೆ ಪಡೆದಿದ್ದರು.
ನೇಹಾ ಬೋರಾ ಅವರನ್ನು ನೇರವಾಗಿ ಗುರುತಿಸಲಾಗದ ಬಿಳಿ ಬಣ್ಣದ ವಾಹನದಲ್ಲಿ ಕರೆದೊಯ್ಯಲಾಗಿತ್ತು ಎಂದು AISA ಆರೋಪಿಸಿತ್ತು. ವಾಹನದಲ್ಲಿ ತಮ್ಮೊಂದಿಗೆ ಪುರುಷ ಪೊಲೀಸ್ ಸಿಬ್ಬಂದಿ ಮಾತ್ರ ಇದ್ದರು ಎಂದು ನೇಹಾ ಬೋರಾ ಆರೋಪಿಸಿದ್ದಾರೆ. ನೇಹಾ ಅವರನ್ನು ಕೊಂಡೊಯ್ದ ವಾಹನದ ಚಿತ್ರಗಳು ಕೂಡ ವೈರಲ್ ಆಗಿದ್ದವು. ಅದರಲ್ಲಿ ನೇಹಾ ಅವರೊಂದಿಗೆ ಪುರುಷ ಪೋಲೀಸರು ಮಾತ್ರ ಕಂಡುಬಂದಿದ್ದರು.
ನಂತರ ಅವರನ್ನು ದೆಹಲಿಯ ನರೆಲಾ ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಕೆಲ ಗಂಟೆಗಳ ಬಳಿಕ ಅವರನ್ನು ನಿನ್ನೆ ರಾತ್ರಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಬಿಡುಗಡೆಯಾದ ಬಳಿಕ ನೇಹಾ ಬೋರಾ ನೀಡಿದ ಹೇಳಿಕೆಯಲ್ಲಿ, ತಮ್ಮ ಮೊಬೈಲ್ ಫೋನ್ ಮತ್ತು ಬ್ಯಾಗ್ ತಮ್ಮ ಬಳಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ದೆಹಲಿ ಪೊಲೀಸ್ ಅಧಿಕಾರಿಗಳು ಮೊಬೈಲ್ ಮತ್ತು ಬ್ಯಾಗ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

