ಕೆಲವೊಮ್ಮೆ, ಕೆಲವೊಂದನ್ನು ಒಡೆದುಹಾಕಿದ್ದಕ್ಕೆ ನಾವು ವಿಷಾದ ಪಡುವ ಅಗತ್ಯವಿರುವುದಿಲ್ಲ. ಹೊಸದನ್ನು ಕಟ್ಟುವ ಕನಸು, ಯೋಜನೆ, ಬದ್ಧತೆಗಳು ನಮ್ಮ ಬಳಿ ಇದ್ದಾಗ ಹಳತನ್ನು ಒಡೆಯುವುದು ಹೊಸದರ ದರ್ಶನಕ್ಕೆ ದಾರಿಯಾಗುತ್ತದೆ. ಮಲಯಾಳಂನ ‘ಚಿನ್ನ ಚಿನ್ನ ಆಸೈ’ ಸಿನಿಮಾ ಅಂತದ್ದೊಂದು ಒಡೆದು ನೋಡುವ ಪ್ರಯತ್ನ ಮಾಡಿದೆ. ಮತ್ತು ಆ ಕಾರಣಕ್ಕಾಗಿಯೇ ಅದು ಇನ್ನಿಲ್ಲದಂತೆ ಇಷ್ಟವಾಗುತ್ತದೆ.
ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಅಷ್ಟೇನೂ ಅಪರಿಚಿತವಲ್ಲದ ಸೆಕೆಂಡ್ ಹಾಫ್ ಲವ್ ಸ್ಟೋರಿಯ ಕಥೆ ಇದು. ಅಂದರೆ, ಮಧ್ಯವಯಸ್ಸು ಮೀರಿದ ವಿಧುರ ಮತ್ತು ಐವತ್ತು ದಾಟಿದ ವಿಧವೆಯ ನಡುವೆ ಅರಳುವ ಪ್ರೇಮಕಥೆ. ಈ ಹಿಂದೆ ಇಂತಹ ಹಲವು ಕತೆಗಳು ಅಲ್ಲಲ್ಲಿ ಬಂದುಹೋಗಿವೆ. ನಿಮ್ರತ್ ಕೌರ್-ಇರ್ಫಾನ್ ಖಾನ್ ನಟಿಸಿದ್ದ ಲಂಚ್ ಬಾಕ್ಸ್ ಸಿನಿಮಾ 2013ರಲ್ಲಿ ಹೀಗೊಂದು ಔಟ್ ಆಫ್ ದಿ ಬಾಕ್ಸ್ ಪ್ರಯತ್ನ ಮಾಡಿತ್ತು. ಟಬು-ಅಮಿತಾಬ್ ಜೋಡಿಯ ಚೀನಿ ಕಮ್ ಕೂಡಾ ಇದೇ ಸಾಲಿಗೆ ಸೇರುವಂತದ್ದು. ಹಾಗೆ ನೋಡಿದರೆ, 1975ರಲ್ಲೆ ಗುಲ್ಜಾರ್ ನಿರ್ದೇಶನದ ಆಂಧಿ ಸಿನಿಮಾ ಮುಸ್ಸಂಜೆಯ ಪ್ರೇಮ ತುಡಿತವನ್ನು ತೆರೆದಿಟ್ಟಿತ್ತಾದರೂ, ಅದು ಅಗಲಿದ ಗಂಡ ಹೆಂಡತಿಯರ ನಡುವೆ ಮರುಬೆಸೆಯುವ ಪ್ರೇಮವನ್ನೇ ವಿಸ್ತರಿಸಿ ಹೇಳಿದ್ದರಿಂದ ನೈತಿಕತೆಯ ಗೋಡೆಗಳು ಘಾಸಿಯಾಗಿರಲಿಲ್ಲ.
ಆದರೆ ಚಿನ್ನ ಚಿನ್ನ ಆಸೈ ಸಿನಿಮಾ ದಾಂಪತ್ಯ ಬಂಧನದ ಹೆಸರಲ್ಲಿ ನಾವು ಕಟ್ಟಿಕೊಂಡ ನೈತಿಕತೆಯ ಗೋಡೆಗಳನ್ನು ಒಡೆದುಹಾಕುವಂತದ್ದು. ಗೋಡೆಗಳಿಗೆ ಬಾಗಿಲುಗಳಿದ್ದಾಗ ಮತ್ತು ಆ ಬಾಗಿಲಿನ ಕೀಲಿಕೈ ನಮ್ಮ ಬಳಿಯೇ ಇದ್ದಾಗ ಮಾತ್ರ ಆ ಗೋಡೆಗಳು ರಕ್ಷಣೆ ಎನಿಸಿಕೊಳ್ಳುತ್ತವೆ. ಇಲ್ಲವಾದಲ್ಲಿ, ರಕ್ಷಣೆಯ ಹೆಸರಿನ ಜೈಲುಗಳಾಗಿಬಿಡುತ್ತವೆ. ಬದುಕಿನ ಮುಸ್ಸಂಜೆಗೂ, ಮುಂಜಾನೆಯಷ್ಟೇ ನವಿರು ಬಣ್ಣಗಳಿರುತ್ತವೆ ಎಂಬುದನ್ನು ಅರ್ಥ ಮಾಡಿಸುವ ಈ ಸಿನಿಮಾ ಪ್ರೇಮದ ಮಿತಿಯನ್ನು ಒಡೆದು ಹಾಕುತ್ತದೆ; ಇನ್ನೊಂದರ್ಥದಲ್ಲಿ ಹೇಳುವುದಾದರೆ, ಪ್ರೇಮವನ್ನು ಬಂಧನದಿಂದ ಬಿಡುಗಡೆಗೊಳಿಸಿ ವಿಶಾಲಗೊಳಿಸುತ್ತದೆ. ಹಾಗೆ ವಿಶಾಲಗೊಳಿಸುವಾಗ ಸಿನಿಮಾಕ್ಕೆ ಇರಬೇಕಾದ ಸೂಕ್ಷ್ಮತೆ, ಎಚ್ಚರ, ಪಕ್ವತೆ, ಗತಿ ಮೇಲಿನ ನಿಯಂತ್ರಣ ಮತ್ತು ಇಂತಹ ವಿಭಿನ್ನ ಕಥೆಯನ್ನು ನೋಡುಗನಿಗೆ ಕನ್ವಿನ್ಸ್ ಮಾಡಿಸುವ ನಿಪುಣತೆಗಳೆಲ್ಲವನ್ನೂ ನಿರ್ದೇಶಕಿ ವರ್ಷಾ ವಾಸುದೇವ್ ಹದವಾಗಿ ಬೆರೆಸಿದ್ದಾರೆ. ಇಂಥಾ ಕತೆಗಳಿಗೆ ಯಾವುದು ಬೇಕು ಎನ್ನುವುದಕ್ಕಿಂತ ಯಾವುದು ಬೇಡ ಎನ್ನುವುದನ್ನು ಅರಿತಿರುವ ನಿರ್ದೇಶಕಿಯು ಅಬ್ಬರವಿಲ್ಲದೆ, ಅನಗತ್ಯ ವಿಎಫ್‌ಎಕ್ಸ್ ಎರಚಾಟವಿಲ್ಲದೆ, ಚಪ್ಪಾಳೆ ಶಿಳ್ಳೆಗಳಿಗಾಗಿಯೇ ಬರೆದ ಸಂಭಾಷಣೆಗಳಿಲ್ಲದೆ, ಪ್ರಶಾಂತ ನೀರಿನ ಮೇಲೆ ನಿರಾತಂಕವಾಗಿ ಸಾಗುವ ದೋಣಿಯಂತೆ ಸಿನಿಮಾವನ್ನು ಕೊಂಡೊಯ್ದಿದ್ದಾರೆ. ತೆಳುವಾದ ಅಲೆಗೆ ತಕ್ಕಂತೆ ಅಲ್ಲಲ್ಲಿ ಹೊಯ್ದಾಟಗಳು ಬಂದುಹೋಗುತ್ತವೆ, ಕಡೆಗೊಮ್ಮೆ ಕ್ಲೈಮ್ಯಾಕ್ಸ್ ರೂಪದಲ್ಲಿ ಶಾಶ್ವತವಾಗಿ ನಿಂತೂ ಬಿಡುತ್ತವೆ. ಆ ಹೊಯ್ದಾಟಗಳೇ ಸಿನಿಮಾದ ಜೀವಂತಿಕೆ. ಪ್ರೇಕ್ಷಕನನ್ನು ಹಿಡಿದಿಡುವ ಬೆಸುಗೆಗಳು.

ಕಥೆಯ ಹೂರಣವನ್ನು ತೆರೆದಿಟ್ಟು ನೋಡುಗರ ಕುತೂಹಲವನ್ನು ಕದಡುವುದು ಸಿನಿಮಾ ವಿಮರ್ಶೆ ಎನಿಸಿಕೊಳ್ಳುವುದಿಲ್ಲ. ಹಾಗಾಗಿ ಅಂತಹ ಕುಕೃತ್ಯಕ್ಕೆ ಮುಂದಾಗದೆ ನಾನು ಕಂಡ ಈ ಸಿನಿಮಾದ ಒಂದೆರಡು ರೂಪಕಗಳನ್ನು ಇಲ್ಲಿ ತೆರೆದಿಡಲು ಬಯಸುತ್ತೇನೆ. ಯಾಕೆಂದರೆ ಸಿನಿಮಾ ಎನ್ನುವುದು ನಿರ್ದೇಶಕನಿಗೆ, ಕಥೆಗಾರನಿಗೆ ಏನನ್ನೋ ದಾಟಿಸುವ ಒಂದು ಮಾಧ್ಯಮವಾಗಿರುತ್ತದೆ. ಆ ದಾಟಿಸುವಿಕೆಗೆ ಅವರು ಹಲವು ರೂಪಕಗಳನ್ನು ಸೂಕ್ಷ್ಮವಾಗಿ ಕಥೆಯೊಳಗೆ ಹುದುಗಿಸಿಟ್ಟಿರುತ್ತಾರೆ. ಒಬ್ಬೊಬ್ಬ ನೋಡುಗನ ಕಣ್ಣಿಗೆ ಆ ಒಂದೊಂದು ರೂಪಕ ಭಿನ್ನಭಿನ್ನವಾಗಿ ಗೋಚರಿಸುತ್ತದೆ, ಅಥವಾ ಗೋಚರಿಸದೆಯೂ ಉಳಿದುಬಿಡಬಹುದು. ಆ ಉದ್ದೇಶದಿಂದ ನನ್ನ ನೋಟವನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಚಿನ್ನ ಚಿನ್ನ ಆಸೈ ಸಿನಿಮಾದ ಒಡೆದು ತೋರುವ ಕ್ರಿಯೆ ಕೇವಲ ಪ್ರೇಮಕ್ಕಷ್ಟೇ ಸೀಮಿತವಾದುದಲ್ಲ. ಕಥೆ ನಡೆಯುವ ವಾರಣಾಸಿಯನ್ನೂ ನಮಗೆ ಹೀಗೆಯೇ ಭಿನ್ನಗೊಳಿಸುತ್ತದೆ. ನಮ್ಮಲ್ಲಿ ವಾರಣಾಸಿಯನ್ನು ವಯಸ್ಸಾದವರು ಹಮ್ಮಿಕೊಳ್ಳಬೇಕಾದ ತೀರ್ಥಕ್ಷೇತ್ರವಾಗಿ ನೋಡುವ ಪರಿಪಾಠವಿದೆ. ಅಲ್ಲಿ ಪ್ರಾಣಬಿಟ್ಟರೆ ಮುಕ್ತಿ ಸಿಗುತ್ತೆಂಬ ನಂಬಿಕೆಯನ್ನೂ ಬೇರೂರಿಸಲಾಗಿದೆ. ಎಷ್ಟರಮಟ್ಟಿಗೆಂದರೆ, ಸಾಯುವವರಿಗೆಂದೇ ಸಾವಿನ ಮನೆಗಳನ್ನು ಬಾಡಿಗೆ ನೀಡುವ ವ್ಯವಸ್ಥೆಯೂ ಇದೆ. ಅಲ್ಲಿ ನೀವು ಚೆಕ್ ಇನ್ ಆದ ನಂತರ ಹದಿನೈದು ದಿನಗಳ ಒಳಗೆ ನಿಮ್ಮ ಪ್ರಾಣ ಹೋಗದಿದ್ದರೆ, ನೀವು ಗಂಟುಮೂಟೆ ಸಮೇತ ಚೆಕ್‌ಔಟ್ ಆಗಬೇಕು. ಇಂತಹ ಬಾಡಿಗೆ ಗೃಹಗಳನ್ನು ಮುಕ್ತಿಭವನ ಎಂದು ಕರೆಯಲಾಗುತ್ತೆ. ಇನ್ನು, ಎಲ್ಲೆಲ್ಲೋ ಸತ್ತವರ ಅಸ್ಥಿಯನ್ನು ಕಾಶಿಯ ಗಂಗೆಯಲ್ಲಿ ಲೀನವಾಗಿಸಲಾಗುತ್ತೆ. ಅದು ಕೂಡಾ ಮುಕ್ತಿಯ ನಂಬಿಕೆ. ಹಗಲು ರಾತ್ರಿಯೆನ್ನದೆ ಸದಾ ಉರಿವ ಚಿತೆಗಳು; ಗಂಗಾನದಿಯ ತುಂಬಾ ತೇಲುವ ಚಿತಾಭಸ್ಮದ ತ್ಯಾಜ್ಯಗಳು; ನದಿದಂಡೆಯ ಉದ್ದಕ್ಕೂ ಪಿಂಡಪ್ರದಾನ ನಡೆಸುವ ಪಂಡಿತರ ಸಾಲುಗಳು; ಶವದ ಮಾಂಸವನ್ನು ಭಕ್ಷಿಸುತ್ತಾರೆಂದು ಹೇಳಲಾಗುವ ಬಾಬಾಗಳು… ಇಂಥಾ ದೃಶ್ಯಗಳೆಲ್ಲ ಕಲೆತು ಇಡೀ ಕಾಶಿಯನ್ನು ವಿರಾಗದ ತಾಣದಂತೆ ನಮಗೆ ಕಟ್ಟಿಕೊಟ್ಟಿವೆ. ಸಾರಾಂಶದಲ್ಲಿ ಹೇಳಬೇಕೆಂದರೆ ಕಾಶಿ ಎಂದರೆ ಬದುಕಿನ ಫೈನಲ್ ಸ್ಟಾಪ್, ಅಥವಾ ಉತ್ತುಂಗ ಎನ್ನುವ ಭಾವನೆಯನ್ನು ಮೂಡಿಸುತ್ತವೆ.
ಆದರೆ ಅಂತಹ ಕೊನೆಯ ನಿಲ್ದಾಣದಲ್ಲೂ ಪ್ರೇಮವನ್ನು ಚಿಗುರಿಸುವ ಮೂಲಕ ಕೊನೆಯೆಂಬುದು ನೀರಸವಲ್ಲ; ಅಲ್ಲೂ ಬದುಕಿರುತ್ತೆ, ಭಾವನೆಗಳಿರುತ್ತವೆ, ಹೊಸ ಸಾಧ್ಯತೆಗಳ ಚಿಮ್ಮುಗೆಗಳಿರುತ್ತವೆ ಎಂಬುದನ್ನು ನಿರ್ದೇಶಕಿ ಸೂಕ್ಷ್ಮವಾಗಿ ದಾಟಿಸಿದ್ದಾರೆ. ಬೇರೆಲ್ಲಾದರೂ ಕಥೆ ನಡೆಯಬಹುದಿತ್ತು. ಆದರೆ ಹಿರಿಯ ಜೀವಗಳೊಟ್ಟಿಗೆ ಸಾವಿನ ಅಥವಾ ಮುಕ್ತಿಯ ಅನ್ವರ್ಥವಾಗಿ ಬೆಸೆದುಕೊಂಡಿರುವ ಕಾಶಿಯಲ್ಲೇ ಸಿನಿಮಾ ಬಿಚ್ಚಿಕೊಳ್ಳುವ ಮೂಲಕ ವಯೋವೃದ್ಧ ಬದುಕಿನ ರೂಪಕವಾಗಿ ಕಾಶಿಯೂ ಸಿನಿಮಾದ ಒಂದು ಪಾತ್ರವಾಗಿ ಒಳಗೊಳ್ಳುತ್ತದೆ. ಫಾರ್ ಎ ಚೇಂಜ್ ಬಹಳಷ್ಟು ಸಿನಿಮಾಗಳಲ್ಲಿ, ಡಾಕ್ಯುಮೆಂಟರಿಗಳಲ್ಲಿ ಕಂಡಂತೆ ಭಕ್ತಿಯಾಗಿಯೋ, ವೈರಾಗ್ಯವಾಗಿಯೋ ಕಾಣುವ ಬದಲು ಈ ಸಲ ಹಿಂದೆಂದೂ ಕಂಡಿರದಷ್ಟು ಪ್ರೇಮಮಯವಾಗಿ ಕಾಶಿ ತೆರೆದುಕೊಳ್ಳುತ್ತದೆ. ವಿಪರ್ಯಾಸವೆಂದರೆ, ನಿರ್ದೇಶಕಿಯ ಪ್ರಯತ್ನದ ಹೊರತಾಗಿಯೂ ಕ್ಲೈಮ್ಯಾಕ್ಸ್‌ನಲ್ಲಿ ಕಾಶಿ, ಕಾಶಿಯಾಗಿಯೇ ಉಳಿದು ನೋಡುಗರನ್ನು ಸಂಕಟಕ್ಕೀಡು ಮಾಡುತ್ತದೆ. ವಾಸ್ತವದಲ್ಲಿ ಅದು ಕಾಶಿಯ ಗೆಲುವಲ್ಲ, ಸಿನಿಮಾದ ನಿಲುಕನ್ನೂ ಮೀರಿ ಪ್ರೇಮ ತನ್ನ ವೈಶಾಲ್ಯವನ್ನು ಸಾರುವ ವಾಸ್ತವಿಕ ಪರಿ!
ಇನ್ನು, ಕಳೆದುಹೋಗುವಿಕೆಯ ರೂಪಕವೂ ಇಲ್ಲಿ ಪಡೆದುಕೊಳ್ಳುವಿಕೆಯ ರೂಪವನ್ನು ಧರಿಸಿ ಸಿನಿಮಾದ ಚಲನೆಗೆ ಲವಲವಿಕೆಯನ್ನು ದಕ್ಕಿಸಿಕೊಡುವುದು ವಿಶೇಷ. ಒಂದು ಅಪರಿಚಿತ ಜಾಗದಲ್ಲಿ, ಅಸಂಖ್ಯ ಅಪರಿಚಿತ ಮುಖಗಳ ನಡುವೆ ತನ್ನವರಿಂದ ಸಟ್ಟನೆ ಕಳೆದುಹೋಗಿ ಅನಾಥಪ್ರಜ್ಞೆಯಲ್ಲಿ ನರಳುವುದೆಂದರೆ ಎಂತವರಿಗೂ ವೇದನೆ. ಆದರೆ ಹುಟ್ಟಿದಾರಭ್ಯ ಕೇವಲ ಹೆಣ್ಣೆಂಬ ಕಾರಣಕ್ಕೆ ತನ್ನೆಲ್ಲ ಆಸೆಗಳನ್ನು ಮೂಟೆ ಕಟ್ಟಿಟ್ಟು, ಗಂಡಿನ ಯಜಮಾನಿಕೆಯ ತೊತ್ತಾಗಿ ಬೆಳೆದ ಹೆಣ್ಣಿನ ಪಾಲಿಗೆ ಹೀಗೆ ಕಳೆದುಹೋಗುವುದೆಂದರೆ ಕೇವಲ ಅನಾಥಗೊಳ್ಳುವುದಷ್ಟೇ ಅಲ್ಲ; ಎಲ್ಲಾ ಬಂಧಗಳಿಂದ ಮುಕ್ತಳಾಗಿ, ತನ್ನಂತೆ ತಾನು ಒಂದೆರಡು ಘಳಿಗೆ ಬದುಕುವ ಅದ್ಭುತ ಅವಕಾಶವೂ ಹೌದು ಅನ್ನೋದನ್ನು ಸಿನಿಮಾ ದಾಟಿಸುತ್ತದೆ.

ಮಣಿರತ್ನಂ ಅವರ ರೋಜಾ ಸಿನಿಮಾದಲ್ಲಿ ಕಳೆದುಹೋದ ತನ್ನ ಗಂಡನನ್ನು ಹುಡುಕುವ ನವವಧುವಾಗಿದ್ದ ನಟಿ ಮಧುಬಾಲ, ಈ ಸಿನಿಮಾದಲ್ಲಿ ಎಳವೆಯಲ್ಲಿ ಕಳೆದುಹೋದ ತನ್ನನ್ನೇ ತಾನು ಹುಡುಕಿಕೊಳ್ಳುವ, ಆ ಹಾದಿಯಲ್ಲಿ ಜಗದ ಹಂಗು ತೊರೆದು ಬೊಗಸೆಯಷ್ಟು ಪ್ರೀತಿಗಾಗಿ ಕಾತರಿಸುವ ಮಾಗಿದ ಹೆಣ್ಣಾಗಿ ಇಷ್ಟವಾಗುತ್ತಾರೆ. ಹೆಣ್ಣಿನ ಪಾಲಿನ ಸಣ್ಣಸಣ್ಣ ಆಸೆಗಳೂ, ಅವಳ ಮನದ ಹಗೇವಿನೊಳಗೆ ಹೊರಚಿಮ್ಮಲು ಎಷ್ಟು ಕಾತರಿಸಿ, ಸೋತುಹೋಗಿರುತ್ತವೆ ಅನ್ನೋದು ಬಹುಶಃ ಹೊರಗಿನ ಗಂಡಸಿಗಿರಲಿ, ಹೆಣ್ಣಾದ ಅವಳಿಗೇ ಅವಳು ಕಳೆದುಹೋಗುವವರೆಗೆ, ಅರ್ಥಾತ್ ತನ್ನನ್ನು ತಾನು ತನ್ನಂತೆಯೇ ಪಡೆದುಕೊಳ್ಳುವವರೆಗೆ ಅರ್ಥವಾಗುವುದಿಲ್ಲ. ಯಾಕೆಂದರೆ ಈ ಸಮಾಜದ ಹೆಣ್ಣಿಗೆ ಬಿಗಿದ ಸಂಕಲೆಗಳು ಅಷ್ಟು ಕಠೋರದವು. ಬಿಚ್ಚಿದ ನಂತರವೂ ಬಿಡಿಸಿಕೊಂಡಿರುವ ಭಾವನೆ ಅವಳಲ್ಲಿ ಮೂಡುವುದಿಲ್ಲ. ಏನನ್ನೋ ಕಳೆದುಕೊಂಡ ವೇದನೆಯೆಲ್ಲ ಖಾಲಿಯಾದ ನಂತರ ತಾನು ಕಳೆದುಕೊಂಡಿದ್ದು ಸಂಕಲೆಗಳು, ಪಡೆದುಕೊಂಡದ್ದು ಸ್ವಾತಂತ್ಯ್ರ ಎಂಬುದು ಅರಿವಿಗೆ ಬರುತ್ತೆ. ತನ್ನವರಿಂದ ಪ್ರತ್ಯೇಕಗೊಂಡು, ತನ್ನ ಹಣ-ವಸ್ತುಗಳನ್ನು ಕಳೆದುಕೊಂಡು ಅಧೀರಳಂತೆ ಪ್ರೇಕ್ಷಕರಿಗೆ ಪರಿಚಯಗೊಳ್ಳುವ ಆ ಸ್ತ್ರೀ ಪಾತ್ರ, ಕೊನೆಗೆ ತನ್ನ ತಂಡ ಸಿಕ್ಕಿ ಅವರ ಜೊತೆ ಮರಳಬೇಕೆನ್ನುವ ಘಳಿಗೆಯಲ್ಲಿ ಅನುಭವಿಸುವ ವೇದನೆಯೇ ಆಕೆ ಅಷ್ಟು ಹೊತ್ತು ಕಳೆದುಕೊಂಡಿದ್ದು ಏನನ್ನು, ಪಡೆದುಕೊಂಡಿದ್ದು ಯಾವುದನ್ನು ಎಂಬುದನ್ನು ನೋಡುಗರಿಗೆ ಅರ್ಥ ಮಾಡಿಸುತ್ತೆ. ಅಳುಮುಂಜಿ ಹೆಂಗಸಿನಿಂದ ಶುರವಾಗಿ ಅಪರಿಚಿತ ಗಂಡಸಿನೊಟ್ಟಿಗೆ ಯಾರ ಗೊಡವೆಯೂ ಇಲ್ಲದೆ ತೇಲುವ ತೆರೆದ ದೋಣಿಯೊಳಗೆ ರಾತ್ರಿಯ ನೀಲಾಗಸ ನೋಡುತ್ತಾ ನಿರುಮ್ಮಳಾಗಿ ನಿದ್ರಿಸುವ ಆ ಪಾತ್ರದ ರೂಪಾಂತರವು ಹೆಣ್ಣಿನ ಬಿಡುಗಡೆಯ ಮನೋಜ್ಞ ರೂಪಕ. ಬಹುಶಃ ಆ ಸಿನಿಮಾವನ್ನು ಒಬ್ಬ ಪುರುಷ ನಿರ್ದೇಶಿಸಿದ್ದರೆ ಈ ಸಂವೇದನೆ ಅಷ್ಟು ತೀವ್ರವಾಗಿ ಸಿನಿಮಾವನ್ನು ಆವರಿಸಲು ಸಾಧ್ಯವಾಗುತ್ತಿತ್ತೋ ಇಲ್ಲವೋ ತಿಳಿಯದು. ಅದೃಷ್ಟವಶಾತ್ ನಿರ್ದೇಶಕಿ ಕೂಡಾ ಹೆಣ್ಣಾಗಿರುವುದರಿಂದಲೇ ಸಿನಿಮಾದ ಹೆಣ್ತನ, ಬಂಡಾಯಗಳು ನೋಡುಗನನ್ನು ಇನ್ನಿಲ್ಲದಂತೆ ಕಾಡುತ್ತವೆ.
ವಾಸ್ತವದಲ್ಲಿ ಬಿಡುಗಡೆ ಎನ್ನುವಂತದ್ದು ಗಂಡಸಿಗೆ ಸಿಕ್ಕಷ್ಟು ಅಗ್ಗದಲ್ಲಿ ಹೆಣ್ಣಿಗೆ ಸಿಗುವಂತದ್ದಲ್ಲ. ಬಹುಪಾಲು ಹೆಣ್ಮಕ್ಕಳ ಬದುಕಿನಲ್ಲಿ ಸಿಗುವುದೇ ಇಲ್ಲ. ಹಾಗಾಗಿ ಆ ನವಿರು ಪ್ರೇಮದ ಸುತ್ತ ಪುರುಷ ಪಾತ್ರದ ತಲ್ಲಣಗಳು ಹೆಣೆದುಕೊಂಡಿದ್ದರೂ, ಹೆಣ್ಣಿನ ಪಾತ್ರದ ಬಿಡುಗಡೆ ಹೆಚ್ಚು ಆಪ್ತವಾಗುತ್ತದೆ. ಮಲೆಯಾಳಿ ನಟ ಇಂದ್ರನ್ ಅವರ ಮಾಗಿದ ನಟನೆ ಇಷ್ಟವಾಗುತ್ತದಾದರೂ, ನಟನೆಗೂ ಮೀರಿದ ಸ್ತ್ರೀ ಪಾತ್ರದ ರೂಪಾಂತರ ಸಿನಿಮಾವನ್ನು ಆವರಿಸುತ್ತದೆ. ಸಿನಿಮಾದ ಕೊನೆಗೆ ಅವಳಿಗೆ ಸಿಗುವ ಆ ನೆಮ್ಮದಿಯ ಬಿಡುಗಡೆ ಅವಳಿಗಷ್ಟೇ ಸಿಕ್ಕ ಬಿಡುಗಡೆಯಲ್ಲ, ಹಲವು ಅಜ್ಞಾತ ಗೋಡೆಗಳಿಂದ ನಮಗೂ ಸಿಕ್ಕ ಬಿಡುಗಡೆಯಂತೆ ಆ ಪಾತ್ರ ಎದೆಗಿಳಿಯುತ್ತದೆ.
ಇಷ್ಟೆಲ್ಲ ಹೇಳಿದ ಮೇಲೆಯೂ, ಕಥೆಯ ಸಾಗುವಿಕೆಗೆ ಅಷ್ಟೊಂದು ಕನ್ವಿನ್ಸ್ ಆದ ಮೇಲೆಯೂ, ಅವರಿಬ್ಬರ ನಡುವೆ ಅರಳಿದ್ದು ಪ್ರೇಮವೇ? ಕಟ್ಟಕಡೆಗೂ ಒಂದು ಹೆಣ್ಣಿನ ಸಂಕಲೆಗಳ ಬಿಡುಗಡೆಗೆ ಒಬ್ಬ ಗಂಡಸಿನ ಪ್ರೇಮವೆ ಅನಿವಾರ್ಯವಾ? ಹಾಗಿದ್ದರೆ ಅದು ಹೆಣ್ಣಿನ ಬಿಡುಗಡೆ ಹೇಗಾಗುತ್ತದೆ? ಎಂಬ ತರ್ಕಗಳನ್ನು ಪ್ರೇಕ್ಷಕರ ಮನದಲ್ಲಿ ಪುಟಿದೆಬ್ಬಿಸುವ ಮಟ್ಟಿಗೆ ಸಿನಿಮಾ ಗೆದ್ದು ಬೀಗುತ್ತದೆ. ಹೆಂಗಸರಿಗಿಂತ ಹೆಚ್ಚಾಗಿ ಗಂಡಸರು ತಪ್ಪದೇ ನೋಡಬೇಕಾದ ಸಿನಿಮಾ ಇದು. ಯಾಕೆಂದರೆ ಹೆಣ್ಮನದ ದುಗುಡ ದುಮ್ಮಾನಗಳನ್ನು ಅರಿತು ಅನುಭವಿಸಬೇಕಾದ ತುರ್ತು ಕಾಲದಲ್ಲಿ ನಾವಿದ್ದೇವೆ. ಹೆಣ್ಣಿನ ಬಿಡುಗಡೆಯೆಂದರೆ ಇಡೀ ಮನುಕುಲದ ಬಿಡುಗಡೆ!
ಇಷ್ಟು ಸಾಕು. ಆ ಸಿನಿಮಾವನ್ನು ನೀವು ನೋಡಿಯೇ ಆನಂದಿಸಿ. ಸಾಧ್ಯವಾದರೆ ಸಿನಿಮಾ ನೋಡಿದ ಮೇಲೆ ಮತ್ತೊಮ್ಮೆ ಈ ಬರಹ ಓದಿ. ನನಗೆ ಅನ್ನಿಸಿದಂತೆ ನಿಮಗೂ ಅನ್ನಿಸಬೇಕು ಅಂತೇನಿಲ್ಲ. ಅವರವರ ಮನದಂತೆ ದೃಷ್ಟಿಯೂ ಬೇರೆ…… ಆದರೆ ಹಲವು ಗ್ರಹಿಕೆಗಳನ್ನು ಒಡೆದುಹಾಕುವ ಯತ್ನದಲ್ಲಿ ಇದೊಂದು ಅದ್ಭುತ ಪ್ರಯೋಗ. ಇದು ಮಾತ್ರ ಸತ್ಯ!
ಮಾಚಯ್ಯ ಎಂ ಹಿಪ್ಪರಿಗಿ
ಸಿನೆಮಾ ವಿಮರ್ಶಕರು
ಇದನ್ನೂ ಓದಿ- ಸಿನೆಮಾ | ʼಸತ್ಲುಜ್ʼ ಸತ್ಯಕ್ಕೆ ಬೆದರಿದ ಸರಕಾರ


