ಬೆಂಗಳೂರು: ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೈಚಾಚುವವರು, ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವವರು, ಮಕ್ಕಳನ್ನು ಬಳಸಿಕೊಂಡು ನಡೆಯುವ ಭಿಕ್ಷಾಟನೆ… ರಾಜಧಾನಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಮುಂದುವರಿದಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
2027ರ ವೇಳೆಗೆ ಬೆಂಗಳೂರನ್ನು ಭಿಕ್ಷಾಟನೆ ಮುಕ್ತ ನಗರವನ್ನಾಗಿ ಮಾಡುವ ಗುರಿಯೊಂದಿಗೆ ಸರ್ಕಾರ ಮೂರು ಹಂತದ ಕಾರ್ಯತಂತ್ರ ರೂಪಿಸುತ್ತಿದೆ. ಭಿಕ್ಷುಕರನ್ನು ಕೇವಲ ತೆರವುಗೊಳಿಸುವುದಕ್ಕೆ ಬದಲಾಗಿ, ಅವರನ್ನು ಗುರುತಿಸಿ ರಕ್ಷಣೆ, ಪುನರ್ವಸತಿ ಹಾಗೂ ಅಗತ್ಯ ನೆರವು ಒದಗಿಸುವುದಕ್ಕೆ ಒತ್ತು ನೀಡಲಾಗುತ್ತಿದೆ.
ಮೊದಲು ಎಷ್ಟು ಭಿಕ್ಷುಕರಿದ್ದಾರೆ ಎಂಬ ಲೆಕ್ಕ
ಭಿಕ್ಷಾಟನೆ ನಿಯಂತ್ರಣಕ್ಕೆ ಮೊದಲ ಹೆಜ್ಜೆಯಾಗಿ ಬೆಂಗಳೂರಿನಲ್ಲಿ ಹೊಸದಾಗಿ ಸಮಗ್ರ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಗೆ ಸಮೀಕ್ಷೆಯ ಜವಾಬ್ದಾರಿ ನೀಡಲಾಗಿದೆ.
ನಗರದ ಯಾವ ಪ್ರದೇಶಗಳಲ್ಲಿ ಎಷ್ಟು ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ, ಅವರ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆ ಏನು ಮತ್ತು ಪುನರ್ವಸತಿಗೆ ಯಾರಿಗೆ ಯಾವ ರೀತಿಯ ನೆರವು ಬೇಕು ಎಂಬುದನ್ನು ಸಮೀಕ್ಷೆಯ ಮೂಲಕ ಗುರುತಿಸುವ ಉದ್ದೇಶ ಹೊಂದಲಾಗಿದೆ. ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಪಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ: ಸರ್ಕಾರದ ವಿಶೇಷ ನಿಗಾ
ಬೆಂಗಳೂರಿನ ಸಿಗ್ನಲ್‌ಗಳಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ನಡೆಸುತ್ತಿರುವುದು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ವಾಹನಗಳು ನಿಂತಾಗ ಮಕ್ಕಳನ್ನು ಕಳುಹಿಸಿ ಹಣ ಪಡೆಯುವ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಆದ್ಯತೆ ನೀಡಿದೆ.
ಮಕ್ಕಳನ್ನು ಭಿಕ್ಷಾಟನೆಗೆ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ, ಅಂತಹ ಮಕ್ಕಳನ್ನು ರಕ್ಷಿಸಿ ಸೂಕ್ತ ಪುನರ್ವಸತಿ ವ್ಯವಸ್ಥೆಗೆ ಕಳುಹಿಸುವ ಬಗ್ಗೆ ಗಮನ ಹರಿಸಲಾಗುತ್ತಿದೆ.
ಬೆಂಗಳೂರಿನಲ್ಲಿ 7,625 ಭಿಕ್ಷುಕರು ಪತ್ತೆ
2012ರಲ್ಲಿ ನಡೆದ ರಾಜ್ಯಮಟ್ಟದ ಭಿಕ್ಷುಕರ ಗಣತಿಯಲ್ಲಿ ಒಟ್ಟು 20,758 ಮಂದಿ ಪತ್ತೆಯಾಗಿದ್ದರು. ಅದರಲ್ಲಿ ಬೆಂಗಳೂರಿನಲ್ಲೇ 7,625 ಭಿಕ್ಷುಕರು ಇದ್ದರು.
ಕಳೆದ ಹಲವು ವರ್ಷಗಳಲ್ಲಿ ನಗರದ ಜನಸಂಖ್ಯೆ ಮತ್ತು ನಗರೀಕರಣ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಭಿಕ್ಷುಕರ ಸಂಖ್ಯೆ ಎಷ್ಟಿದೆ ಎಂಬುದನ್ನು ಹೊಸ ಸಮೀಕ್ಷೆ ಮೂಲಕ ಪತ್ತೆಹಚ್ಚಲು ಸರ್ಕಾರ ಮುಂದಾಗಿದೆ.
ಕಾನೂನು ಇದ್ದರೂ ಸಮಸ್ಯೆ ಮಾತ್ರ ಮುಂದುವರಿಕೆ
ಭಿಕ್ಷಾಟನೆಯನ್ನು ನಿಯಂತ್ರಿಸಲು ರಾಜ್ಯದಲ್ಲಿ ಪ್ರೊಹಿಬಿಷನ್ ಆಫ್ ಬೆಗ್ಗರಿ ಆ್ಯಕ್ಟ್, 1975 ಜಾರಿಯಲ್ಲಿದೆ. ಆದರೂ ಬೆಂಗಳೂರಿನ ಪ್ರಮುಖ ರಸ್ತೆಗಳು, ಸಿಗ್ನಲ್‌ಗಳು, ಮಾರುಕಟ್ಟೆ ಪ್ರದೇಶಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಭಿಕ್ಷುಕರನ್ನು ಕೇವಲ ಕಾನೂನು ಕ್ರಮದ ಮೂಲಕ ದೂರ ಮಾಡುವ ಬದಲು, ಅವರ ಜೀವನೋಪಾಯದ ಸಮಸ್ಯೆಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವ ಅಗತ್ಯವೂ ಇದೆ.
ಇದೀಗ ಹೊಸ ಸಮೀಕ್ಷೆಯೊಂದಿಗೆ ಸರ್ಕಾರ ಮೂರು ಹಂತಗಳಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವುದರಿಂದ, 2027ರ ವೇಳೆಗೆ ಬೆಂಗಳೂರನ್ನು ಭಿಕ್ಷಾಟನೆ ಮುಕ್ತ ನಗರವನ್ನಾಗಿಸುವ ಗುರಿ ನಿಜವಾಗಿಯೂ ಸಾಕಾರವಾಗುತ್ತದೆಯೇ? ಎಂಬುದು ಕುತೂಹಲ ಮೂಡಿಸಿದೆ.

