ಯಾವತ್ತೂ ನಾವು ನಿಂತ ನೆಲದ ಪರಿಸರ ಶಿಕ್ಷಣ ಎಂಬುದು ಪಠ್ಯಪುಸ್ತಕದ ಒಂದು ಅಧ್ಯಾಯವಾಗಬಾರದು. ಅದು ಒಂದು ಅನುಭವವಾಗಬೇಕು. ಮಕ್ಕಳು ಮಣ್ಣಿನ ಮೇಲೆ ಕುಳಿತು ಕಲಿಯಬೇಕು. ಕೆರೆಯ ದಂಡೆಯ ಮೇಲೆ ನಿಂತು ನೀರನ್ನು ಅರ್ಥಮಾಡಿಕೊಳ್ಳಬೇಕು. ಗಿಡ ನೆಟ್ಟು ಅದರ ಬೆಳವಣಿಗೆಯನ್ನು ಗಮನಿಸಬೇಕು. ಆಗ ಮಾತ್ರ ಪರಿಸರದ ಬಗ್ಗೆ ಪ್ರೀತಿ ಹುಟ್ಟುತ್ತದೆ. ಇಲ್ಲದಿದ್ದರೆ ಪರಿಸರ ಎಂಬುದು ಪರೀಕ್ಷೆಯಲ್ಲಿ ಉತ್ತರ ಬರೆಯುವ ವಿಷಯವಾಗಿ ಮಾತ್ರ ಉಳಿಯುತ್ತದೆ – ನರೇಂದ್ರ ರೈ ದೇರ್ಲ, ಪರಿಸರ ಕುರಿತ ಬರಹಗಾರರು.
ಇಂದು ವಿಶ್ವ ಪರಿಸರ ದಿನ. ನಿಸರ್ಗ ಕಾಳಜಿಯ ಬಗ್ಗೆ ಭೀಕರ ಭಾಷಣಗಳು ಮೊಳಗುವ ದಿನ. ಈ ನಡುವೆ ನನ್ನನ್ನು ಬಹಳ ವರ್ಷಗಳಿಂದ ಕಾಡುತ್ತಿರುವ ಒಂದು ಪ್ರಶ್ನೆ, ನಾವು ಪರಿಸರದ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ನಿಜವಾಗಿಯೂ ಪರಿಸರದೊಳಗೆ ಬದುಕುತ್ತಿದ್ದೇವೆಯಾ ? ಎಂಬುವುದು.
ಕೆಲವು ವರ್ಷಗಳ ಹಿಂದೆ ಇಸ್ರೇಲ್ ದೇಶದ ಒಂದು ಮಕ್ಕಳ ಗೀತೆಯ ಅನುವಾದವನ್ನು ಓದಿದ್ದೆ. ಆ ಹಾಡು ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿಯೇ ಉಳಿದಿದೆ. ಒಂದು ಮಗು “ನಾನು ಒಂದು ಮನೆ ಕಟ್ಟಿದೆ” ಎನ್ನುತ್ತದೆ. ಇನ್ನೊಂದು ಮಗು “ನಾನು ಒಂದು ಗಿಡ ನೆಟ್ಟೆ” ಎನ್ನುತ್ತದೆ. ಆ ಗಿಡ ಹೂ ಬಿಡುತ್ತದೆ, ಕಾಯಿ ಕಟ್ಟುತ್ತದೆ, ಅದರ ಮೇಲೆ ಹಕ್ಕಿಗಳು ಬಂದು ಕುಳಿತುಕೊಳ್ಳುತ್ತವೆ, ದುಂಬಿಗಳು ಗುನುಗುತ್ತವೆ. ಕೊನೆಯಲ್ಲಿ ಮತ್ತೊಂದು ಮಗು “ಆ ಗಿಡದ ನೆರಳಲ್ಲಿ ಕುಳಿತು ನಾನು ಒಂದು ಕವಿತೆ ಬರೆದೆ” ಎನ್ನುತ್ತದೆ.
ಆ ಹಾಡು ಕೇಳಿದಾಗ ಅದು ಮಕ್ಕಳ ಗೀತೆ ಎನ್ನುವುದಕ್ಕಿಂತ ಒಂದು ನಾಗರಿಕತೆಯ ಘೋಷಣಾಪತ್ರದಂತೆ ನನಗೆ ಕಾಣಿಸುತ್ತದೆ. ಮನುಷ್ಯ ಮನೆ ಕಟ್ಟುತ್ತಾನೆ, ಅಲ್ಲೇ ಗಿಡವನ್ನೂ ನೆಡುತ್ತಾನೆ. ಗಿಡ ಬೆಳೆಯುತ್ತದೆ, ಅದರ ಸುತ್ತ ಜೀವಜಗತ್ತು ನೆಲೆಸುತ್ತದೆ. ಆ ಜೀವಜಗತ್ತಿನ ಮಧ್ಯೆ ಕುಳಿತಾಗಲೇ ಕವಿತೆ ಹುಟ್ಟುತ್ತದೆ.
ಅಂದರೆ ಪ್ರಕೃತಿ ಇಲ್ಲದೆ ಯಾವ ಸಂಸ್ಕೃತಿಯೂ ಇಲ್ಲ, ಹಸಿರು ಇಲ್ಲದೆ ಸಾಹಿತ್ಯವೂ ಇಲ್ಲ, ಜೀವವೈವಿಧ್ಯ ಇಲ್ಲದೆ ಮಾನವೀಯತೆಯೂ ಇಲ್ಲ ಎನ್ನುವ ಆಳವಾದ ಸಂದೇಶ ಆ ಹಾಡಿನೊಳಗೆ ಅಡಗಿದೆ. ಆದರೆ ನಾವು?

ನಾವು ಮನೆಗಳನ್ನು ಕಟ್ಟಿದ್ದೇವೆ. ಗಿಡಗಳಿಗೆ ಜಾಗವಿಲ್ಲ. ಮನೆ ಎದುರು ಮಟ್ಟಸ ಮಾಡಿ ಇಂಟರ್ಲಾಕ್ ಅಂಟಿಸಿದ್ದೇವೆ. ಅದೇ ಸಿಮೆಂಟ್ ಗೂಡಿನೊಳಗಡೆ ಕೂತು “ಅಯ್ಯೋ ಸೆಖೆ ತಡೆಯಲಾರೆ” ಎಂದು ಪರಿತಪಿಸುತ್ತೇವೆ. ಮದಗ, ಕೆರೆಗಳನ್ನು ಮುಚ್ಚಿದ್ದೇವೆ. ಸೆಮಿನಾರ್ ಹಾಲಲ್ಲಿ ಕೂತು ನೀರಿನ ಕೊರತೆ , ಅಂತರ್ಜಲ ಬತ್ತಿದ ಬಗ್ಗೆ ಏರುತ್ತಿರುವ ತಾಪಮಾನದ ಬಗ್ಗೆ ಮಾತನಾಡುತ್ತೇವೆ. ಬೆಟ್ಟಗಳನ್ನು ಕತ್ತರಿಸಿದ್ದೇವೆ. ನಂತರ ಭೂಕುಸಿತದ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ. ಮರಗಳನ್ನು ಉರುಳಿಸಿದ್ದೇವೆ. ನಂತರ ಉಷ್ಣಾಂಶ ಏರಿಕೆಯ ಬಗ್ಗೆ ಸಮ್ಮೇಳನಗಳನ್ನು ಮಾಡುತ್ತಿದ್ದೇವೆ.
ನಾವು ಕಳೆದುಕೊಳ್ಳುತ್ತಿರುವುದರ ಮೌಲ್ಯವನ್ನು ನಾವು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎನ್ನುವುದು ಬಹಿರಂಗ ಸತ್ಯ.
ಒಬ್ಬ ಉದ್ಯಮಿಯ ಕಥೆ ನೆನಪಾಗುತ್ತದೆ. ನಗರ ಜೀವನದ ಗದ್ದಲದಿಂದ ದೂರ ಇರಬೇಕೆಂದು ಆತ ಹಳ್ಳಿಯೊಂದರಲ್ಲಿ ಸುಂದರ ತೋಟದಮನೆ ಕಟ್ಟಿಕೊಂಡಿದ್ದ. ಅದರ ಸುತ್ತ ಹಸಿರು, ಕೆರೆ, ಹಕ್ಕಿಗಳ ಕಲರವ, ಪರಿಶುದ್ಧ ಗಾಳಿ ಎಲ್ಲವೂ ಇತ್ತು. ಕೆಲವು ವರ್ಷಗಳ ನಂತರ ಅದನ್ನು ಮಾರಾಟ ಮಾಡಲು ನಿರ್ಧರಿಸಿ ಜಾಹೀರಾತು ಬರೆಯಲು ಒಬ್ಬ ಕವಿಯನ್ನು ಕರೆಸಿದ. ಕವಿ ತನ್ನ ಕಲ್ಪನೆಯನ್ನೆಲ್ಲ ಬಳಸಿಕೊಂಡು ಆ ಜಾಗದ ಸೌಂದರ್ಯವನ್ನು ವರ್ಣಿಸಿ ಜಾಹೀರಾತು ಬರೆದ. “ಇಲ್ಲಿ ಕಾಣುವ ಸೂರ್ಯೋದಯ ಬೇರೆಲ್ಲೂ ಕಾಣುವುದಿಲ್ಲ. ಇಲ್ಲಿ ಬೀಸುವ ಗಾಳಿ ಬೇರೆಲ್ಲೂ ಸಿಗುವುದಿಲ್ಲ. ಹಕ್ಕಿಗಳ ಹಾಡು, ಕೋಗಿಲೆಯ ಕೂಗು, ಹಸಿರು ಪರಿಸರ, ನದಿಯ ತಿಳಿನೀರು… ಸ್ವರ್ಗ ಈಗ ಮಾರಾಟಕ್ಕಿದೆ” ಎಂದು ಬರೆದಿದ್ದ.
ಆ ಜಾಹೀರಾತು ಓದಿದ ಉದ್ಯಮಿ ಮಾರಾಟದ ಯೋಚನೆಯನ್ನೇ ಕೈಬಿಟ್ಟನೆಂದು ಹೇಳುತ್ತಾರೆ. ಯಾಕೆಂದರೆ ಆತ ಮಾರಲು ಹೊರಟಿದ್ದ ಜಾಗದ ಮೌಲ್ಯವನ್ನು ಆ ಜಾಹೀರಾತು ಮೊದಲ ಬಾರಿಗೆ ಅವನಿಗೇ ಅರ್ಥಮಾಡಿಸಿತ್ತು.! ಇಂದು ನಾವು ಕೂಡ ಅಂಥದ್ದೇ ಒಂದು ತಿರುವಿನಲ್ಲಿ ನಿಂತಿದ್ದೇವೆ. ನಮ್ಮ ಹಳ್ಳಿಗಳ ಮೌಲ್ಯ, ಹೊಲಗಳ ಮೌಲ್ಯ, ಕೆರೆಗಳ ಮೌಲ್ಯ, ಮರಗಳ ಮೌಲ್ಯ ಇವೆಲ್ಲವನ್ನು ಕಳೆದುಕೊಳ್ಳಲು ಆರಂಭಿಸಿದ ನಂತರವೇ ಅರ್ಥಮಾಡಿಕೊಳ್ಳುತ್ತಿದ್ದೇವೆ.
ನಾವು ಹಳ್ಳಿಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳುತ್ತೇವೆ. ಆದರೆ ಹಳ್ಳಿಗಳನ್ನು ಹಳ್ಳಿಗಳಾಗಿಯೇ ಉಳಿಸುತ್ತಿದ್ದೇವೆಯೇ? ಅಲ್ಲಿ ಹೊಸ ಮರಗಳನ್ನು ನೆಡುತ್ತಿದ್ದೇವೆಯೇ ಅಥವಾ ಹಳೆಯ ಮರಗಳನ್ನು ಕಡಿದು ಹಾಕುತ್ತಿದ್ದೇವೆಯೇ? ಕೆರೆಗಳನ್ನು ಉಳಿಸುತ್ತಿದ್ದೇವೆಯೇ ಅಥವಾ ಅವುಗಳ ಮೇಲೆ ಲೇಔಟ್ ನಿರ್ಮಿಸುತ್ತಿದ್ದೇವೆಯೇ? ಹೊಲಗಳನ್ನು ಕಾಪಾಡುತ್ತಿದ್ದೇವೆಯೇ ಅಥವಾ ಕೆಂಪು ಮಣ್ಣು ತುಂಬಿಸಿ ರಿಯಲ್ ಎಸ್ಟೇಟ್ ಮಾಡುತ್ತಿದ್ದೇವೆಯೇ?
ಈ ಪ್ರಶ್ನೆಗಳು ಇಂದು ಪರಿಸರ ದಿನದ ಭಾಷಣಗಳಿಗಿಂತ ಮುಖ್ಯವಾಗಿವೆ.
ರಾಷ್ಟ್ರಕವಿ ಕುವೆಂಪು ಅವರು ಕಾನೂರು ಹೆಗ್ಗಡತಿ ಕಾದಂಬರಿಯ ಮುನ್ನುಡಿಯಲ್ಲಿ ಹೇಳಿದ ಒಂದು ಮಾತು ನನಗೆ ಆಗಾಗ ನೆನಪಾಗುತ್ತದೆ. ನಗರವನ್ನು ನೋಡುವುದು ಸುಲಭ, ಆದರೆ ಗ್ರಾಮಜೀವನವನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಎಂದು ಅವರು ಹೇಳುತ್ತಾರೆ. ನಗರವು ವೀಕ್ಷಣೆಗೆ ಸಿಗುತ್ತದೆ. ಆದರೆ ಗ್ರಾಮವು ಅನುಭವಕ್ಕೆ ಸಿಗುತ್ತದೆ. ಕಾಡು, ಹೊಲ, ಮಳೆ, ಮಣ್ಣು, ಹಸಿರು ಇವು ದೂರದಿಂದ ಅಧ್ಯಯನ ಮಾಡುವ ವಸ್ತುಗಳಲ್ಲ. ಅವುಗಳೊಳಗೆ ಇಳಿದು ಬದುಕಿದಾಗ ಮಾತ್ರ ಅವುಗಳ ನಿಜವಾದ ಅರ್ಥ ಗೊತ್ತಾಗುತ್ತದೆ.
ಇಂದು ನಮ್ಮ ಪರಿಸರ ಶಿಕ್ಷಣದ ದೊಡ್ಡ ಸಮಸ್ಯೆಯೂ ಇದೇ. ನಾವು ಪರಿಸರವನ್ನು ಹೊರಗಡೆ ನಿಂತು ಅಧ್ಯಯನ ಮಾಡುತ್ತಿದ್ದೇವೆ. ತರಗತಿಯೊಳಗೆ ಕುಳಿತು ಮಣ್ಣಿನ ಬಗ್ಗೆ ಕಲಿಯುತ್ತಿದ್ದೇವೆ. ಪುಸ್ತಕದ ಪುಟಗಳಲ್ಲಿ ನದಿಗಳ ಬಗ್ಗೆ ಓದುತ್ತಿದ್ದೇವೆ. ಪ್ರಾಜೆಕ್ಟರ್ ಪರದೆಯ ಮೇಲೆ ಕಾಡುಗಳನ್ನು ನೋಡುತ್ತಿದ್ದೇವೆ. ಆದರೆ ಮಕ್ಕಳ ಕಾಲು ಮಣ್ಣನ್ನು ಮುಟ್ಟುತ್ತಿಲ್ಲ. ಅವರ ಕೈ ಬೀಜ ಬಿತ್ತುತ್ತಿಲ್ಲ. ಅವರ ಕಿವಿ ಹಕ್ಕಿಗಳ ಹಾಡನ್ನು ಕೇಳುತ್ತಿಲ್ಲ. ಅವರ ಕಣ್ಣು ಹೊಲದಲ್ಲಿ ಮೊಳಕೆಯೊಡೆಯುವ ಸಸಿಯನ್ನು ಗಮನಿಸುತ್ತಿಲ್ಲ.

ಯಾವತ್ತೂ ನಾವು ನಿಂತ ನೆಲದ ಪರಿಸರ ಶಿಕ್ಷಣ ಎಂಬುದು ಪಠ್ಯಪುಸ್ತಕದ ಒಂದು ಅಧ್ಯಾಯವಾಗಬಾರದು. ಅದು ಒಂದು ಅನುಭವವಾಗಬೇಕು. ಮಕ್ಕಳು ಮಣ್ಣಿನ ಮೇಲೆ ಕುಳಿತು ಕಲಿಯಬೇಕು. ಕೆರೆಯ ದಂಡೆಯ ಮೇಲೆ ನಿಂತು ನೀರನ್ನು ಅರ್ಥಮಾಡಿಕೊಳ್ಳಬೇಕು. ಗಿಡ ನೆಟ್ಟು ಅದರ ಬೆಳವಣಿಗೆಯನ್ನು ಗಮನಿಸಬೇಕು. ಆಗ ಮಾತ್ರ ಪರಿಸರದ ಬಗ್ಗೆ ಪ್ರೀತಿ ಹುಟ್ಟುತ್ತದೆ. ಇಲ್ಲದಿದ್ದರೆ ಪರಿಸರ ಎಂಬುದು ಪರೀಕ್ಷೆಯಲ್ಲಿ ಉತ್ತರ ಬರೆಯುವ ವಿಷಯವಾಗಿ ಮಾತ್ರ ಉಳಿಯುತ್ತದೆ.
ನಮ್ಮ ಪರಿಸರ ಚರ್ಚೆಗಳಲ್ಲೂ ಒಂದು ವಿಚಿತ್ರ ಕೊರತೆ ಇದೆ. ನಾವು ಪರಿಸರದ ಕೇಂದ್ರದಲ್ಲಿ ಯಾವಾಗಲೂ ಮನುಷ್ಯನನ್ನೇ ಇಡುತ್ತೇವೆ. ಸರ್ಕಾರಗಳು, ಕಾನೂನುಗಳು, ಯೋಜನೆಗಳು ಎಲ್ಲವೂ ಮನುಷ್ಯನ ಸುತ್ತ ತಿರುಗುತ್ತವೆ. ಆದರೆ ಮನುಷ್ಯ ಒಬ್ಬನೇ ಬದುಕಲು ಸಾಧ್ಯವಿಲ್ಲ ಎಂಬ ಮೂಲಭೂತ ಸತ್ಯವನ್ನು ನಾವು ಮರೆತುಬಿಡುತ್ತೇವೆ.
ಮನುಷ್ಯನಿಗೆ ಈ ಭೂಮಿ ಮೇಲೆ ಬದುಕಲು ಒಂದು ಇರುವೆ ಬೇಕು. ಒಂದು ಚಿಟ್ಟೆ ಬೇಕು. ಒಂದು ಹಕ್ಕಿ ಬೇಕು. ಒಂದು ಬೆಕ್ಕು ಬೇಕು. ಒಂದು ಮರ ಬೇಕು. ಒಂದು ಜಲಪಾತ ಬೇಕು. ಒಂದು ಹೂವು ಬೇಕು. ಇವೆಲ್ಲ ಸೇರಿದಾಗ ಮಾತ್ರ ಬದುಕು ಸಂಪೂರ್ಣವಾಗುತ್ತದೆ.
ಈ ಭೂಮಿಯ ಮೇಲೆ ನಾನೊಬ್ಬನೇ ಯಜಮಾನ ಎಂದು ಭ್ರಮಿಸುವುದಿದೆಯಲ್ಲ ಅದೇ ಇವತ್ತು ನಾವು ನಿಸರ್ಗಕ್ಕೆ ಮಾಡುವ ಬಹುದೊಡ್ಡ ಅನ್ಯಾಯ. ಇಲ್ಲಿ ನಾವು ಒಬ್ಬರೇ ಬದುಕುವುದಿಲ್ಲ. ಲಕ್ಷಾಂತರ ಜೀವಿಗಳ ಜೊತೆಗೆ ಬದುಕುತ್ತೇವೆ. ಪರಿಸರ ಎಂದರೆ ಮನುಷ್ಯನ ಸುತ್ತಲಿನ ಜಗತ್ತು ಅಲ್ಲ. ಮನುಷ್ಯನೊಡನೆ ಬದುಕುವ ಜಗತ್ತು.
ವಿಶ್ವ ಪರಿಸರ ದಿನದಂದು ನಾವು ಮರಗಳನ್ನು ಉಳಿಸೋಣ, ನದಿಗಳನ್ನು ಉಳಿಸೋಣ, ಮಣ್ಣನ್ನು ಉಳಿಸೋಣ ಎಂದು ಹೇಳುತ್ತೇವೆ. ಆದರೆ ಬಹುಶಃ ಅದಕ್ಕಿಂತ ದೊಡ್ಡ ಸತ್ಯವೇನೆಂದರೆ ಇವುಗಳನ್ನು ಉಳಿಸುವ ಮೂಲಕ ನಾವು ನಮ್ಮನ್ನೇ ಉಳಿಸಿಕೊಳ್ಳುತ್ತಿದ್ದೇವೆ ಎಂಬುವುದು ನಮಗೆ ಮೊದಲು ಅರ್ಥವಾಗಬೇಕು .
ಯಾಕೆಂದರೆ ಈ ಭೂಮಿಗೆ ನಮ್ಮ ಅಗತ್ಯವಿಲ್ಲ. ನಮಗೆ ಭೂಮಿಯ ಅಗತ್ಯವಿದೆ. ಮರಗಳಿಗೆ ನಮ್ಮ ಅಗತ್ಯವಿಲ್ಲ. ನಮಗೆ ಮರಗಳ ಅಗತ್ಯವಿದೆ. ಪ್ರಕೃತಿಗೆ ನಮ್ಮ ಕರುಣೆ ಬೇಕಿಲ್ಲ. ನಮಗೆ ಪ್ರಕೃತಿಯ ಕರುಣೆ ಬೇಕಾಗಿದೆ.ಆದ್ದರಿಂದ ಪರಿಸರ ಸಂರಕ್ಷಣೆ ಎಂದರೆ ಪ್ರಕೃತಿಗೆ ಮಾಡುವ ಉಪಕಾರವಲ್ಲ. ಅದು ಮನುಷ್ಯ ತನ್ನ ಭವಿಷ್ಯವನ್ನು ಕಾಪಾಡಿಕೊಳ್ಳಲು ನಡೆಸುವ ಅತ್ಯಂತ ಅಗತ್ಯವಾದ ಪ್ರಯತ್ನ. ಮತ್ತು ಆ ಪ್ರಯತ್ನದ ಆರಂಭ ಒಂದು ಗಿಡ ನೆಡುವುದರಿಂದ ಅಲ್ಲ; ಈ ಜಗತ್ತಿನಲ್ಲಿ ನಾವು ಒಬ್ಬರೇ ಇಲ್ಲ ಎಂಬ ಅರಿವಿನಿಂದ. ವಿಶ್ವ ಪರಿಸರದ ದಿನ ನಾವೆಲ್ಲ ಮಾಡಬೇಕಾದ ಸಂಕಲ್ಪ ಪರಿಸರವನ್ನು ಪಳಗಿಸುವ ಕುರಿತು ಅಲ್ಲ ಪರಿಸರಕ್ಕೆ ವಿಧೇಯರಾಗಿ ಬದುಕುವ ಕುರಿತು.
ನರೇಂದ್ರ ರೈ ದೇರ್ಲ
ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಕೃಷಿಕ, ಅಂಕಣಗಾರ, ಸೂಕ್ಷ್ಮ ಸಂವೇದನೆಯ ಲೇಖಕ, ಪರಿಸರ ಕುರಿತ ಬರಹಗಾರ.
ಇದನ್ನೂ ಓದಿ- ಕೆಪಿಸಿಸಿ ಅಧ್ಯಕ್ಷರಾದ ‘ಸೈದ್ಧಾಂತಿಕ ಅಹಿಂದ ಪ್ರಜ್ಞೆ’ ಬಿ.ಕೆ. ಹರಿಪ್ರಸಾದ್!


