ಕೆಪಿಸಿಸಿ ಅಧ್ಯಕ್ಷ ಸ್ಥಾನವು ಕೇವಲ ಒಂದು ಹುದ್ದೆಯಲ್ಲ. ಅದು ಕಾಂಗ್ರೆಸ್ನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಸ್ಥಾನ. ಆ ಸ್ಥಾನಕ್ಕೆ ಸೈದ್ಧಾಂತಿಕ ಸ್ಪಷ್ಟತೆ, ಸಾಮಾಜಿಕ ನ್ಯಾಯದ ಬದ್ಧತೆ, ಸಂಘಟನಾ ಅನುಭವ ಮತ್ತು ಆರ್ಎಸ್ಎಸ್ ರಾಜಕಾರಣದ ಕುರಿತು ಆಳವಾದ ಅರಿವು ಹೊಂದಿರುವ ನಾಯಕನನ್ನು ಆಯ್ಕೆ ಮಾಡಿರುವುದು ಕರ್ನಾಟಕ ಕಾಂಗ್ರೆಸ್ನ ಮಹತ್ವದ ರಾಜಕೀಯ ನಿರ್ಧಾರವಾಗಿದೆ. ಇದು ಈವರೆಗಿನ ಬಿ ಕೆ ಹರಿಪ್ರಸಾದರನ್ನು ಕಂಡ ಪತ್ರಕರ್ತನೊಬ್ಬನ ವಿಶ್ಲೇಷಣೆಯಾಗಿದೆ – ನವೀನ್ ಸೂರಿಂಜೆ, ಪತ್ರಕರ್ತರು.
ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ, ಹುದ್ದೆ ಮತ್ತು ಚುನಾವಣಾ ಲೆಕ್ಕಾಚಾರಗಳಾಚೆಗೆ ಸೈದ್ಧಾಂತಿಕ ರಾಜಕಾರಣದ ಪ್ರತಿನಿಧಿಯಾಗಿ ಗುರುತಿಸಿಕೊಂಡಿರುವ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ, ಅದು ಕಾಂಗ್ರೆಸ್ ಪಕ್ಷ ತನ್ನ ಮೂಲ ಮೌಲ್ಯಗಳತ್ತ ಮರಳುವ ಪ್ರಯತ್ನದ ಸಂಕೇತವಾಗಿ ಕಾಣತೊಡಗಿದೆ.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಮುಂದೆ ದೊಡ್ಡ ಸವಾಲಾಗಿ ನಿಂತಿರುವುದು ಬಿಜೆಪಿ ಅಥವಾ ಆರ್ಎಸ್ಎಸ್ ಮಾತ್ರವಲ್ಲ. ಕಾಂಗ್ರೆಸ್ ತನ್ನದೇ ಆದ ಸೈದ್ಧಾಂತಿಕ ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಿರುವುದು ಕೂಡ ಒಂದು ಪ್ರಮುಖ ಸಮಸ್ಯೆ. ಚುನಾವಣಾ ಗೆಲುವುಗಳಿಗಾಗಿ ಮೃದು ಹಿಂದುತ್ವದ ಹಾದಿ ಹಿಡಿಯುವುದು, ಕೋಮುವಾದದ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಲು ಹಿಂಜರಿಯುವುದು, ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಚುನಾವಣಾ ಸಮಯಕ್ಕೆ ಮಾತ್ರ ಸೀಮಿತಗೊಳಿಸುವುದು ಇತ್ಯಾದಿಗಳೆಲ್ಲವೂ ಕಾಂಗ್ರೆಸ್ನ ಸಾಂಪ್ರದಾಯಿಕ ಬೆಂಬಲಿಗರಲ್ಲಿ ಆತಂಕ ಮೂಡಿಸಿವೆ. ಅಂತಹ ಸಂದರ್ಭದಲ್ಲಿ ಬಿ.ಕೆ. ಹರಿಪ್ರಸಾದ್ ಅವರಂತಹ ನಾಯಕನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ಮಹತ್ವದ ರಾಜಕೀಯ ಸಂದೇಶವಾಗಿದೆ.
ಹರಿಪ್ರಸಾದ್ ಕೇವಲ ಸಂಘಟನಾ ನಾಯಕನಲ್ಲ. ಅವರು ಅಂಬೇಡ್ಕರ್, ಪೆರಿಯಾರ್, ನೆಹರೂ, ಲೋಹಿಯಾ, ನಾರಾಯಣ ಗುರು ಮತ್ತು ಕಾರ್ಲ್ ಮಾರ್ಕ್ಸ್ ಚಿಂತನೆಗಳ ನಡುವೆ ಸೇತುವೆ ಕಟ್ಟಬಲ್ಲ ಕೆಲವೇ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು. ಆರ್ಎಸ್ಎಸ್ನ ರಾಜಕೀಯ ಮತ್ತು ಸಾಂಸ್ಕೃತಿಕ ಯೋಜನೆಯನ್ನು ಕೇವಲ ಚುನಾವಣಾ ಪ್ರತಿಸ್ಪರ್ಧಿಯಾಗಿ ಅಲ್ಲದೆ, ಒಂದು ಸಾಮಾಜಿಕ-ರಾಜಕೀಯ ಪ್ರಾಜೆಕ್ಟ್ ಆಗಿ ಅರ್ಥೈಸಿಕೊಂಡಿರುವ ಅಪರೂಪದ ನಾಯಕರಲ್ಲಿ ಬಿಕೆಹೆಚ್ ಒಬ್ಬರು.
ಕರಾವಳಿಯಲ್ಲಿ ಕೋಮುವಾದದ ಪ್ರಶ್ನೆ ಉದ್ಭವಿಸಿದಾಗಲೆಲ್ಲಾ ಹರಿಪ್ರಸಾದ್ ಅವರು ಸಚಿವ ಸ್ಥಾನಕ್ಕಾಗಿ ಅಥವಾ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಹೋರಾಡಲಿಲ್ಲ. ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು, ಕಾನೂನು ಸುವ್ಯವಸ್ಥೆ ನಿರ್ವಹಿಸಲು ಸ್ವತಂತ್ರ ಅಧಿಕಾರಿಗಳನ್ನು ನೇಮಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. ಇದು ಅವರ ರಾಜಕಾರಣದ ಸ್ವರೂಪವನ್ನು ತೋರಿಸುತ್ತದೆ. ಅಧಿಕಾರಕ್ಕಿಂತ ವ್ಯವಸ್ಥೆಯ ಸುಧಾರಣೆಗೆ ಆದ್ಯತೆ ನೀಡುವ ರಾಜಕಾರಣ ಇಂದಿನ ದಿನಗಳಲ್ಲಿ ಅಪರೂಪ.
ಬಿ ಕೆ ಹರಿಪ್ರಸಾದ್ ಗೃಹ ಸಚಿವರಾಗಬೇಕು, ಉಪ ಮುಖ್ಯಮಂತ್ರಿ ಆಗಬೇಕು ಎಂಬ ಕೂಗು ಇಂದು ನಿನ್ನೆಯದ್ದಲ್ಲ. ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ, ಕೋಮುಹತ್ಯೆ, ಕೋಮು ಹಿಂಸೆ, ದಲಿತ ದೌರ್ಜನ್ಯ ನಡೆದಾಗೆಲ್ಲಾ ಡಿಸಿಎಂ ಅಥವಾ ಗೃಹ ಸಚಿವ ಸ್ಥಾನಕ್ಕೆ ಬಿ ಕೆ ಹರಿಪ್ರಸಾದ್ ಹೆಸರನ್ನು ಜನಸಾಮಾನ್ಯರು ಮತ್ತು ಹೋರಾಟಗಾರರು ಮುನ್ನಲೆಗೆ ತರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಮೇ 27, 2024ರಂದು (ಪಿಕ್ಅಪ್ ಚಾಲಕ ಅಬ್ದುಲ್ ರೆಹಮಾನ್ (34) ಎಂಬುವವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅದು ಕರಾವಳಿಯಲ್ಲಿ ಸರಣಿಯಾಗಿ ಮುಸ್ಲಿಂ ಯುವಕರ ಕೊಲೆ ನಡೆದ ದಿನಗಳು. ಇಡೀ ಅಲ್ಪಸಂಖ್ಯಾತ ಸಮುದಾಯ ಆತಂಕದಲ್ಲಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕುರಿತು ಏನೂ ಮಾಡದೇ ಇದ್ದಾಗ, ಕರಾವಳಿಯ ಕಾಂಗ್ರೆಸ್ ರಾಜಕಾರಣಿಗಳು ಸುಮ್ಮನಿದ್ದಾಗ ಕರಾವಳಿಯ ಕದನ ಭೂಮಿಗೆ ಇಳಿದವರು ಬಿ ಕೆ ಹರಿಪ್ರಸಾದ್ ಮಾತ್ರ. ಆ ದಿನಗಳಲ್ಲಿ ಬಿ ಕೆ ಹರಿಪ್ರಸಾದ್ಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ‘ಮುಸುಕಿನ ಗುದ್ದಾಟ’ ನಡೆಯುತ್ತಿತ್ತು. ಈ ದಿನಗಳಲ್ಲಿ ಬಿ ಕೆ ಹರಿಪ್ರಸಾದ್ ಕೋಮುವಾದ ಮತ್ತು ಕಾಂಗ್ರೆಸ್ನ ಮೃದು ಹಿಂದುತ್ವಕ್ಕೆ ಹೇಗೆ ಏಟು ಕೊಟ್ಟರು ಎಂದರೆ, ಖುದ್ದು ಮುಖ್ಯಮಂತ್ರಿಯೇ ಬಿ ಕೆ ಹರಿಪ್ರಸಾದ್ ಮನೆಗೆ ‘ರಾಜಿ ಸಂಧಾನ’ಕ್ಕೆ ಆಗಮಿಸಿದರು. ಸುದೀರ್ಘವಾಗಿ ನಡೆದ ರಾಜಿ ಸಂಧಾನದಲ್ಲಿ ಬಿ ಕೆ ಹರಿಪ್ರಸಾದರು ತಮಗೆ ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇಟ್ಟಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಅವರ ಮನೆಯ ಮುಂದೆ ನೆರೆದಿದ್ದ ಹಲವು ಪತ್ರಕರ್ತರು ಇದೇ ಪ್ರಶ್ನೆಯನ್ನು ಕೇಳಿದ್ದರು. ಆದರೆ ಬಿ ಕೆ ಹರಿಪ್ರಸಾದರು ಇಟ್ಟ ಬೇಡಿಕೆ ಮುಖ್ಯಮಂತ್ರಿ ಮಾತ್ರವಲ್ಲ, ಪತ್ರಕರ್ತರಾದ ನಮ್ಮನ್ನೂ ದಿಗ್ಭ್ರಮೆ ಮೂಡಿಸಿದ್ದವು. ‘ಕರಾವಳಿಯಲ್ಲಿ ಶಾಂತಿ ನೆಲೆಸಲು ಕಮಿಷನರ್ ಮತ್ತು ಎಸ್ಪಿಯನ್ನು ಬದಲು ಮಾಡಬೇಕು. ಕರಾವಳಿಯ ಕಾಂಗ್ರೆಸ್ ಸೇರಿದಂತೆ ಯಾವ ರಾಜಕಾರಣಿಯ ಮಾತು ಕೇಳದ ದಕ್ಷ ಅಧಿಕಾರಿಯನ್ನು ನೇಮಿಸಬೇಕು. ಕರಾವಳಿಯ ಪೊಲೀಸ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಕೂಡದು’ ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಮುಂದಿರಿಸಿದರು. ಅದರ ಫಲವಾಗಿ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸ್ಪಿ ಅರುಣ್ ಕುಮಾರ್ ನೇಮಕವಾಯಿತು. ಈವರೆಗೆ ಕಾಂಗ್ರೆಸ್ ನ ಹಲವು ಶಾಸಕರು, ಪ್ರಭಾವಿಗಳು ಈ ಇಬ್ಬರು ಅಧಿಕಾರಿಗಳ ವರ್ಗಾವಣೆಗೆ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.
ಬಿ ಕೆ ಹರಿಪ್ರಸಾದ್ ಅವರ ಸೈದ್ಧಾಂತಿಕ ಬದ್ಧತೆಗೆ ಮತ್ತೊಂದು ಉದಾಹರಣೆಯೆಂದರೆ, ಕರಾವಳಿಗೆ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ಇದ್ದರೂ, ಕೋಮುಗಲಭೆಗಳಾದಾಗ ಬಿ ಕೆ ಹರಿಪ್ರಸಾದ್ ಅವರನ್ನು ಕರಾವಳಿ ಪರಿಶೀಲನೆಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಬಿ ಕೆ ಹರಿಪ್ರಸಾದ್ ಗೃಹ ಸಚಿವರಾಗಬೇಕು ಎಂದು ಒತ್ತಾಯಿಸಿ ಸೋಶಿಯಲ್ ಮಿಡಿಯಾದಲ್ಲಿ ಬಂದ ಬರಹಗಳೇ ಒಂದು ಸಣ್ಣ ಮಟ್ಟಿಗಿನ ಆಂದೋಲನ ಸೃಷ್ಟಿಸಿದ್ದವು.

ಬಿ ಕೆ ಹರಿಪ್ರಸಾದ್ ಅವರು ಗೃಹ ಸಚಿವರಾಗಬೇಕು ಎಂಬ ಇನ್ನೊಂದು ಒತ್ತಡ ಕೇಳಿ ಬಂದಿದ್ದು 2026 ಜನವರಿ 21 ರಂದು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಮಾತನಾಡಬೇಕಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರಕಾರಗಳ ಹಕ್ಕುಗಳ ಕಸಿಯುವಿಕೆ, ವಿ ಬಿ ಗ್ರಾಮ್ ಜಿ ಕಾಯ್ದೆಯ ಮೂಲಕ ಗ್ರಾಮೀಣ ಶ್ರಮಿಕರ, ಕೃಷಿ ಕೂಲಿಕಾರರ ಉದ್ಯೋಗದ ಹಕ್ಕು ನಿರಾಕರಿಸುವ ಮೋದಿ ಸರಕಾರದ ನೀತಿಗಳ ವಿರುದ್ಧ ಇರುವ ಭಾಷಣವನ್ನು ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ಸಿದ್ಧಪಡಿಸಿ ನೀಡಿತ್ತು. ಥಾವರ್ ಚಂದ್ರ ಗೆಹ್ಲೋಟ್ ಅವರು ರಾಜ್ಯ ಸರ್ಕಾರದ ಭಾಷಣ ಓದಲು ನಿರಾಕರಿಸಿದರು. ಸಾಂವಿಧಾನಿಕ ಕರ್ತವ್ಯ ನಿರ್ವಹಿಸದೇ ಬಿಜೆಪಿ ಏಜಂಟ್ ನಂತೆ ವರ್ತಿಸಿದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ವಿಧಾನ ಮಂಡಲದಲ್ಲಿ ಬಿ ಕೆ ಹರಿಪ್ರಸಾದ್ ದಿಟ್ಟತನದಿಂದ ಎದುರು ಗೊಂಡಿದ್ದರು. ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯಪಾಲರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ ಹರಿಪ್ರಸಾದ್ ಅವರು ಈ ಮೂಲಕ ಸಮಸ್ತ ಕರ್ನಾಟಕದ ಧ್ವನಿಯಾಗಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿಗರು ಸದನದೊಳಗೆ ಬಿ ಕೆ ಹರಿಪ್ರಸಾದ್ ಅವರ ಅಂಗಿಯನ್ನು ಹರಿದು ಹಾಕಿ ಹಲ್ಲೆಗೆ ಮುಂದಾಗಿದ್ದರು.
ಹೀಗೆ, ಪ್ರತೀ ಕೋಮುಗಲಭೆ, ಕೋಮು ಹಿಂಸೆಯ ಸಂದರ್ಭದಲ್ಲಿ ಸಂತ್ರಸ್ತ ಜನರ ಪರವಾಗಿ ಏಕಪಕ್ಷೀಯವಾಗಿ, ಖಡಕ್ಕಾಗಿ, ನಿಂತಿದ್ದ ಕಾಂಗ್ರೆಸ್ ಜನಪ್ರತಿನಿಧಿ ಬಿ ಕೆ ಹರಿಪ್ರಸಾದ್ ಮಾತ್ರವೇ ? ಎಂದು ಪ್ರಶ್ನಿಸಿದರೆ ‘ಹೌದು, ಬಿ ಕೆ ಹರಿಪ್ರಸಾದ್ ಮಾತ್ರ’ ಎಂದು ಸ್ಪಷ್ಟವಾಗಿ ಉತ್ತರಿಸಬಹುದು. ಉಳಿದ ನಾಯಕರು ಹೇಳಿಕೆಗಳಿಗೆ, ಬ್ಯಾಲೆನ್ಸ್ ಗಳಿಗೆ ಸೀಮಿತವಾಗಿದ್ದ ದಿನಗಳಲ್ಲಿ ಬಿ ಕೆ ಹರಿಪ್ರಸಾದ್ ಸಂತ್ರಸ್ತರ ಪರ ಫೀಲ್ಡಿನಲ್ಲೂ, ಮಾಧ್ಯಮದಲ್ಲೂ, ಪಕ್ಷದಲ್ಲೂ, ಸರ್ಕಾರದಲ್ಲೂ ಸಕ್ರಿಯವಾಗಿ ಕೆಲಸ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಇಂದು ಬೇಕಾಗಿರುವುದು ಇದೇ ರೀತಿಯ ನಾಯಕತ್ವ. ಸರ್ಕಾರ ನಡೆಸಲು ಮುಖ್ಯಮಂತ್ರಿಗಳು ಇರುತ್ತಾರೆ. ಇಲಾಖೆಗಳ ನಿರ್ವಹಣೆಗೆ ಸಚಿವರು ಇರುತ್ತಾರೆ. ಆದರೆ ಪಕ್ಷದ ಸಿದ್ಧಾಂತವನ್ನು ಜೀವಂತವಾಗಿಡಲು, ಕಾರ್ಯಕರ್ತರಲ್ಲಿ ಸೈದ್ಧಾಂತಿಕ ವಿಶ್ವಾಸ ಮೂಡಿಸಲು ಮತ್ತು ಸಮಾಜದ ವಿವಿಧ ವರ್ಗಗಳನ್ನು ಒಂದೇ ರಾಜಕೀಯ ವೇದಿಕೆಗೆ ಕರೆತರಲು ಅಧ್ಯಕ್ಷರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಹರಿಪ್ರಸಾದ್ ಅವರ ಮತ್ತೊಂದು ವಿಶೇಷತೆ ಎಂದರೆ ಅವರು “ಅಹಿಂದ” ರಾಜಕಾರಣವನ್ನು ಕೇವಲ ಚುನಾವಣಾ ರಾಜಕಾರಣಕ್ಕೆ ಬಳಸಲಿಲ್ಲ. ಹಾಗೆ ಜಾತಿ ಅಥವಾ ಅಹಿಂದವನ್ನು ಬಳಸಿದ್ದರೆ ಅವರೂ ಚುನಾವಣೆಯನ್ನು ಸುಲಭವನ್ನು ಗೆಲ್ಲಬಹುದಿತ್ತು. ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರ ರಾಜಕೀಯ ಪಾಲುದಾರಿಕೆಯನ್ನು ಪ್ರಜಾಸತ್ತಾತ್ಮಕ ಭಾರತದ ಮೂಲಭೂತ ಅವಶ್ಯಕತೆಯಾಗಿ ನೋಡುತ್ತಾರೆ. ಅಹಿಂದ ಎಂಬುದು ಮತಗಳ ಲೆಕ್ಕಾಚಾರವಲ್ಲ. ಅದು ಸಾಮಾಜಿಕ ನ್ಯಾಯಕ್ಕಾಗಿನ ದಾರಿಯಾಗಬೇಕು.
ಕರ್ನಾಟಕ ಕಾಂಗ್ರೆಸ್ನ ಇತಿಹಾಸದಲ್ಲಿ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಸಿದ್ದರಾಮಯ್ಯ ಅವರಂತಹ ನಾಯಕರು ಸಾಮಾಜಿಕ ನ್ಯಾಯದ ರಾಜಕಾರಣದ ಆಶಯವನ್ನು ಬಲಪಡಿಸಿದ್ದರು. ಈ ಆಶಯ ಪರಂಪರೆಯನ್ನು ಸಂಘಟನಾ ಮಟ್ಟದಲ್ಲಿ ಮುಂದುವರಿಸಬಲ್ಲ ನಾಯಕತ್ವ ಇಂದು ಅಗತ್ಯವಾಗಿದೆ. ಆ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ ಹರಿಪ್ರಸಾದ್ ಅವರಿಗೆ ಇದೆ.
ಬಿ ಕೆ ಹರಿಪ್ರಸಾದ್ ಅವರ ಇನ್ನೊಂದು ಪ್ರಮುಖ ಗುಣವೆಂದರೆ ‘ಇಂಡಿಯಾ ಒಕ್ಕೂಟ’ದ ಬಗೆಗಿನ ನಂಬಿಕೆ ಮತ್ತು ವಿಶ್ವಾಸ. ಎಲ್ಲಾ ಜಾತ್ಯತೀತ ಪಕ್ಷ, ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಹೋಗಬೇಕು ಎಂಬ ಆಶಯದಲ್ಲಿ ಬಿ ಕೆ ಹರಿಪ್ರಸಾದ್ ನಂಬಿಕೆ ಇರಿಸಿದ್ದಾರೆ. ಜಾತ್ಯತೀತತೆಗಾಗಿ ಹೋರಾಡುವ ಸಂಘಟನೆಗಳು, ವ್ಯಕ್ತಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಹಾಗಾಗಿ ಕಾಂಗ್ರೆಸ್ಸೇತರ ಜಾತ್ಯತೀತ ಶಕ್ತಿಗಳು ಕಾಂಗ್ರೆಸ್ ಹಿತೈಷಿಗಳಾಗಿ ಇರುವ ಸಂದರ್ಭವನ್ನು ಬಿ ಕೆ ಹರಿಪ್ರಸಾದ್ ಸೃಷ್ಟಿಸಬಲ್ಲರು.
ಬಿ ಕೆ ಹರಿಪ್ರಸಾದ್ ಅವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅರಿವು ಕೂಡ ಅವರನ್ನು ಇತರ ನಾಯಕರಿಂದ ಭಿನ್ನವಾಗಿಸುತ್ತದೆ. ಕುವೆಂಪು, ಗೋವಿಂದ ಪೈ, ಶಿವರಾಮ ಕಾರಂತ, ದೇವನೂರು ಮಹಾದೇವರಂತಹ ಚಿಂತಕರ ಸಾಹಿತ್ಯವನ್ನು ಅವರು ಕೇವಲ ಉಲ್ಲೇಖಿಸುವುದಿಲ್ಲ. ಸಮಕಾಲೀನ ರಾಜಕೀಯ ಹೋರಾಟಗಳೊಂದಿಗೆ ಜೋಡಿಸಿ ವ್ಯಾಖ್ಯಾನಿಸುತ್ತಾರೆ. ಹೀಗಾಗಿ ಅವರ ರಾಜಕಾರಣ ಕೇವಲ ಚುನಾವಣಾ ಭಾಷಣಗಳಲ್ಲಿ ಸೀಮಿತವಾಗುವುದಿಲ್ಲ. ಅದು ಸಾಂಸ್ಕೃತಿಕ ಪ್ರತಿರೋಧದ ರೂಪ ಪಡೆಯುತ್ತದೆ.
ಇಂದು ಕಾಂಗ್ರೆಸ್ ಎದುರಿಸುತ್ತಿರುವ ಸವಾಲು ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಅಲ್ಲ. ಸಮಾಜದಲ್ಲಿ ಹರಡುತ್ತಿರುವ ದ್ವೇಷ ರಾಜಕಾರಣ, ಜಾತಿ ಆಧಾರಿತ ಅಸಮಾನತೆ ಮತ್ತು ಧಾರ್ಮಿಕ ಧ್ರುವೀಕರಣದ ವಿರುದ್ಧ ಪರ್ಯಾಯ ರಾಜಕೀಯ ನಿರೂಪಣೆಯನ್ನು ಕಟ್ಟುವುದು ಕೂಡ ಆಗಿದೆ. ಅದಕ್ಕೆ ಕೇವಲ ಚುನಾವಣಾ ತಂತ್ರಜ್ಞರು ಸಾಕಾಗುವುದಿಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ಬೀಡುಬಿಟ್ಟಿರುವ ಪೇಯ್ಡ್ ಚುನಾವಣಾ ತಂತ್ರಗಾರರು, ಸಿದ್ಧಾಂತ ರಹಿತ ಪೇಯ್ಡ್ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುವವರಿಂದ ಪಕ್ಷಕ್ಕೊಂದು ಹೈಪ್ ಸಿಗಬಹುದೇ ಹೊರತು ದೀರ್ಘಕಾಲೀನ ಮುನ್ನೋಟ ಇರುವ ಸೈದ್ಧಾಂತಿಕ ಪಕ್ಷ ಕಟ್ಟಲು ಸಾಧ್ಯವಿಲ್ಲ. ಪಕ್ಷದ ಎಲ್ಲಾ ಚಟುವಟಿಕೆಗಳಿಗೆ ಸೈದ್ಧಾಂತಿಕ ನಾಯಕತ್ವ ಬೇಕಾಗುತ್ತದೆ. ಅಂತಹ ನಾಯಕತ್ವದ ಪ್ರತಿನಿಧಿಯಾಗಿ ಬಿ.ಕೆ. ಹರಿಪ್ರಸಾದ್ ಕಾಣಿಸುತ್ತಾರೆ.
ಅವರ ರಾಜಕೀಯ ಜೀವನವನ್ನು ನೋಡಿದರೆ, ಅವರು ಅಧಿಕಾರಕ್ಕಾಗಿ ರಾಜಕಾರಣ ಮಾಡಿದ ಉದಾಹರಣೆಗಳಿಗಿಂತ ಸಿದ್ಧಾಂತಕ್ಕಾಗಿ ಹೋರಾಡಿದ ಉದಾಹರಣೆಗಳೇ ಹೆಚ್ಚು ಕಾಣಿಸುತ್ತವೆ. ಇದೇ ಕಾರಣಕ್ಕೆ ಅವರನ್ನು ಗೃಹ ಸಚಿವ ಅಥವಾ ಡಿಸಿಎಂ ಮಾಡಬೇಕೆಂಬ ಒತ್ತಾಯಗಳು ಕಾಲಕಾಲಕ್ಕೆ ಕೇಳಿಬರುತ್ತಿದ್ದವು. ಆದರೆ ಪಕ್ಷದ ಭವಿಷ್ಯವನ್ನು ಗಮನಿಸಿದರೆ, ಅವರಂತಹ ನಾಯಕ ಸಂಘಟನೆಯ ಚುಕ್ಕಾಣಿ ಹಿಡಿಯುವುದು ಇನ್ನಷ್ಟು ಮಹತ್ವದ್ದಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನವು ಕೇವಲ ಒಂದು ಹುದ್ದೆಯಲ್ಲ. ಅದು ಕಾಂಗ್ರೆಸ್ನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಸ್ಥಾನ. ಆ ಸ್ಥಾನಕ್ಕೆ ಸೈದ್ಧಾಂತಿಕ ಸ್ಪಷ್ಟತೆ, ಸಾಮಾಜಿಕ ನ್ಯಾಯದ ಬದ್ಧತೆ, ಸಂಘಟನಾ ಅನುಭವ ಮತ್ತು ಆರ್ಎಸ್ಎಸ್ ರಾಜಕಾರಣದ ಕುರಿತು ಆಳವಾದ ಅರಿವು ಹೊಂದಿರುವ ನಾಯಕನನ್ನು ಆಯ್ಕೆ ಮಾಡಿರುವುದು ಕರ್ನಾಟಕ ಕಾಂಗ್ರೆಸ್ನ ಮಹತ್ವದ ರಾಜಕೀಯ ನಿರ್ಧಾರವಾಗಿದೆ. ಇದು ಈವರೆಗಿನ ಬಿ ಕೆ ಹರಿಪ್ರಸಾದರನ್ನು ಕಂಡ ಪತ್ರಕರ್ತನೊಬ್ಬನ ವಿಶ್ಲೇಷಣೆಯಾಗಿದೆ. ಮುಂದಿನ ಅಧಿಕಾರದ ದಿನಗಳಲ್ಲಿ ಬದಲಾವಣೆಗೊಂಡರೆ, ಠೀಕಾತ್ಮಕ ವಿಮರ್ಶೆಯನ್ನೂ ಬಿ ಕೆ ಹರಿಪ್ರಸಾದ್ ಎದುರಿಸಬೇಕಾಗುತ್ತದೆ.
ಸದ್ಯದ ಮಟ್ಟಿಗೆ ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಒಬ್ಬ ವ್ಯಕ್ತಿಗೆ ನೀಡಿದ ಹುದ್ದೆಯಾಗಿ ನೋಡುವುದಕ್ಕಿಂತ, ಕಾಂಗ್ರೆಸ್ ತನ್ನ ಸೈದ್ಧಾಂತಿಕ ಬೇರುಗಳನ್ನು ಮರುಶೋಧಿಸುವ ಪ್ರಯತ್ನ ಮಾಡುತ್ತಿದೆ ಎಂದು ನೋಡಬೇಕಾಗಿದೆ. ಅಧಿಕಾರದ ರಾಜಕಾರಣಕ್ಕಿಂತ ಮೌಲ್ಯಗಳ ರಾಜಕಾರಣಕ್ಕೆ ಆದ್ಯತೆ ನೀಡುವ ನಾಯಕತ್ವದ ಅಗತ್ಯವಿರುವ ಈ ಕಾಲಘಟ್ಟದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ಕೆಪಿಸಿಸಿ ಅಧ್ಯಕ್ಷರ ನೇಮಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ ಎಂದರೆ ತಪ್ಪಲ್ಲ.
ನವೀನ್ ಸೂರಿಂಜೆ
ಪತ್ರಕರ್ತರು
ಇದನ್ನೂ ಓದಿ- ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ ಶ್ರೀ ಸಿದ್ದರಾಮಯ್ಯ


