ಬೆಂಗಳೂರು : ಕಾವೇರಿ ನದಿ ನೀರು ಹರಿಸುವ ವಿವಾದ ಸಂಬಂಧ ಆಗಸ್ಟ್ 13 ರಂದು ಕರ್ನಾಟಕ ಬಂದ್ ನಡೆಸಲು ವಾಟಾಳ್ ನಾಗರಾಜ್ ಹಾಗೂ ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ.
ಇಂದು ಖಾಸಗಿ ಹೋಟೆಲ್‌ನಲ್ಲಿ ಕನ್ನಡ ಒಕ್ಕೂಟಗಳ ಸಭೆ ನಡೆಸಿದ ಬಳಿಕ ಹೋರಾಟಗಾರ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಪೂರ್ಣ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.
ಇಡೀ ರಾಜ್ಯದ ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಸಾರಿಗೆ ಚಾಲಕರ ಸಂಘಗಳು ಬೆಂಬಲ ಕೊಡುವಂತೆಯೂ ಮನವಿ ಮಾಡಿದ್ದಾರೆ.
ಅಂದು ಯಾವುದೇ ಪರೀಕ್ಷೆಗಳು ಇಲ್ಲದಿರುವುದರಿಂದ ಈ ದಿನಾಂಕವನ್ನು ಕನ್ನಡ ಒಕ್ಕೂಟ ನಿಗದಿ ಮಾಡಿದೆ ಎನ್ನಲಾಗಿದೆ. ಇಂದಿನಿಂದ ಬಂದ್ ಸಿದ್ಧತೆಗೆ 12 ದಿನಗಳು ಸಿಗಲಿವೆ.
ಸಾರಾ ಗೋವಿಂದು ಮಾತನಾಡಿ, ಪದೇ ಪದೇ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ವಾಸ್ತವತೆ ಪರಿಶೀಳಿಸದೇ ಅವೈಜ್ಞಾನಿಕವಾಗಿ ನೀರು ಬಿಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

