ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇಂದು ನೈಋತ್ಯ ಮುಂಗಾರು ಕೇರಳಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ. ಇದರೊಂದಿಗೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಗುವ ನಾಲ್ಕು ತಿಂಗಳ ಮುಂಗಾರು ಹಂಗಾಮು ಆರಂಭವಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಮುಂಗಾರು ಈಗ ಸಂಪೂರ್ಣ ಕೇರಳ ಮತ್ತು ಮಾಹೆ ಪ್ರದೇಶವನ್ನು ಆವರಿಸಿದೆ. ಕರ್ನಾಟಕದ ಕೆಲವು ಭಾಗಗಳಿಗೆ ಪ್ರವೇಶಿಸಿದೆ. ತಮಿಳುನಾಡಿನ ಕೆಲವು ಭಾಗಗಳಿಗೂ ವಿಸ್ತರಿಸಿದೆ. ಲಕ್ಷದ್ವೀಪ ಹಾಗೂ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಹಲವು ಪ್ರದೇಶಗಳಲ್ಲಿ ಮುಂದುವರಿದಿದೆ.
ಮುಂಗಾರು ಏಕೆ ತಡವಾಯಿತು?
IMD ಮೊದಲು ಮುಂಗಾರು ಮೇ 26ರಂದು ಕೇರಳ ತಲುಪುತ್ತದೆ ಎಂದು ಅಂದಾಜಿಸಿತ್ತು. ಆದರೆ ಹವಾಮಾನ ಪರಿಸ್ಥಿತಿಗಳ ಬದಲಾವಣೆಯಿಂದ ಅದು ತಡವಾಗಿ ಜೂನ್ 4ರಂದು ಪ್ರವೇಶಿಸಿದೆ.
ಕರ್ನಾಟಕದ ಸ್ಥಿತಿ : ಕರ್ನಾಟಕದ ಕರಾವಳಿ ಭಾಗಗಳು ಮತ್ತು ಮಲೆನಾಡು ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮುಂಗಾರು ಮತ್ತಷ್ಟು ಬಲ ಪಡೆದು ವ್ಯಾಪಿಸುವ ನಿರೀಕ್ಷೆಯಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿಯೂ ಮಳೆಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ
ಈ ವರ್ಷ ಮಳೆ ಕಡಿಮೆ ಇರಬಹುದೇ?
ದಕ್ಷಿಣ ಕನ್ನಡಕ್ಕೆ ಇಂದು ಆರೆಂಜ್ ಅಲರ್ಟ್ ಗೋಷಿಸಲಾಗಿದೆ. ಉಳಿದ ಎಲ್ಲಾ ಕಡೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮೈಸೂರು, ಕೋಲಾರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಭಾರಿ ಮಳೆಯಾಗಲಿದೆ.
IMD ಇತ್ತೀಚೆಗೆ ತನ್ನ ಮುಂಗಾರು ಮುನ್ಸೂಚನೆಯನ್ನು ಪರಿಷ್ಕರಿಸಿದ್ದು, ಈ ವರ್ಷ ದೇಶದ ಒಟ್ಟು ಮಳೆ ಪ್ರಮಾಣ ದೀರ್ಘಾವಧಿ ಸರಾಸರಿ (LPA) ಯ 90%ರಷ್ಟಿರಬಹುದು ಎಂದು ಹೇಳಿದೆ. ಕಳೆದ 30–50 ವರ್ಷಗಳ ಸರಾಸರಿ ಮಳೆ ಪ್ರಮಾಣ. 1971–2020ರ ಅವಧಿಯ ಆಧಾರದ ಮೇಲೆ ಭಾರತದ ವಾರ್ಷಿಕ ಮುಂಗಾರು ಮಳೆಯ LPA 87 ಸೆಂ.ಮೀ. ಆಗಿದೆ. ಶೇ.90 ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಕಡಿಮೆ ಮಳೆ ಎಂದು ವರ್ಗೀಕರಿಸಲಾಗುತ್ತದೆ.
ಎಲ್ ನಿನೋ ಪರಿಣಾಮ
ಮಳೆ ಕಡಿಮೆಯಾಗುವ ಸಾಧ್ಯತೆಯ ಪ್ರಮುಖ ಕಾರಣವೆಂದರೆ ಎಲ್ ನಿನೋ ಪರಿಸ್ಥಿತಿ ಬೆಳೆಯುತ್ತಿರುವುದು. ಪ್ರಸ್ತುತ ಪೆಸಿಫಿಕ್ ಮಹಾಸಾಗರದಲ್ಲಿ ENSO ತಟಸ್ಥ ಸ್ಥಿತಿಯಿಂದ ಎಲ್ ನಿನೋ ಸ್ಥಿತಿಗೆ ಪರಿವರ್ತನೆ ನಡೆಯುತ್ತಿದೆ. IMD ಪ್ರಕಾರ, ಜೂನ್‌ನಲ್ಲಿ ಎಲ್ ನಿನೋ ದುರ್ಬಲವಾಗಿರಬಹುದು. ಆದರೆ ಸೆಪ್ಟೆಂಬರ್ ವೇಳೆಗೆ ಅದು ಮಧ್ಯಮ ಅಥವಾ ಪ್ರಬಲ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ.

