ಸಾಕ್ಷ್ಯಗಳ ಆಧಾರದಲ್ಲಿ ಸತ್ಯಕ್ಕೆ ಕನ್ನಡಿ – ʼಕರಾವಳಿಯ ಚರಿತ್ರೆಯಲ್ಲಿ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ʼ

ಇಂದು ವಿಶ್ವ ಪುಸ್ತಕ ದಿನ. ಈ ಹಿನ್ನೆಲೆಯಲ್ಲಿ, ಇದೇ  ಶನಿವಾರ (ಎಪ್ರಿಲ್‌ 25) ಮಂಗಳೂರಿನಲ್ಲಿಎರಡನೇ ಮುದ್ರಣದ ಬಿಡುಗಡೆ  ಕಾಣುತ್ತಿರುವ ಪತ್ರಕರ್ತ ನವೀನ್‌ ಸೂರಿಂಜೆ ಬರೆದ ʼಕರಾವಳಿಯ ಚರಿತ್ರೆಯಲ್ಲಿ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ʼ ಕೃತಿಯನ್ನು ವಿಮರ್ಶಿಸಿದ್ದಾರೆ ಶ್ರೀನಿವಾಸ ಕಾರ್ಕಳ. ಸುಳ್ಳುಗಳ ಮೇಲೆ ಕಟ್ಟಿದ ದ್ವೇಷದ ರಾಜಕಾರಣಕ್ಕೆ ಪ್ರತಿಯಾಗಿ ನೈಜ ಇತಿಹಾಸವನ್ನು ಜನರಿಗೆ ತಲಪಿಸುವ ಪ್ರಯತ್ನ ಇಲ್ಲಿದೆ.

ಕುಂದಾಪುರ ತಾಲೂಕಿನ, ಶಂಕರನಾರಾಯಣದ, ಕ್ರೋಢ ಶಂಕರನಾರಾಯಣ ದೇವಸ್ಥಾನದ ಮುಖ್ಯ ದ್ವಾರವನ್ನು ದಾಟುತ್ತಿದ್ದಂತೆ, ಬಲಗಡೆ ಆಳೆತ್ತರದ ಗಂಟೆಯೊಂದನ್ನು ತೂಗುಹಾಕಿದ್ದು ನಿಮಗೆ ಕಾಣಿಸೀತು. ಮಾಮೂಲಿ ಗಂಟೆಯಂತೆ ಕಾಣಿಸದೆ, ಟೆರಕೋಟಾ ಬಣ್ಣದ ಚರ್ಚಿನ ಗಂಟೆಯನ್ನು ಹೋಲುವ ಅದು, ನಾನು ನನ್ನ ಬಾಲ್ಯ ಮತ್ತು ಕಿಶೋರಾವಸ್ಥೆಯನ್ನು ಕಳೆದ ಹನ್ನೊಂದು ವರ್ಷ ಅಂದರೆ, 1967-78 ರ ದಿನಗಳಲ್ಲಿ, ನಮಗೆ ಒಂದು ವಿಶೇಷ ಆಕರ್ಷಣೆಯ ಸಂಗತಿಯಾಗಿತ್ತು. ಯಾಕೆಂದರೆ, ಅದರಲ್ಲಿ ʼಇದು ಟಿಪ್ಪುಸುಲ್ತಾನರ ಕೊಡುಗೆ, ಇದನ್ನು ಬಾರಿಸಕೂಡದುʼ ಎಂದು ಬರೆದಿತ್ತು!

ಆಮೇಲೆ ಪಕ್ಕದ ವಾರಾಹಿ ಹೊಳೆಯಲ್ಲಿ ಅದೆಷ್ಟೋ ನೀರು ಹರಿದುಹೋಯಿತು. ಆರು ವರ್ಷಗಳ ಹಿಂದೆ, ಅಂದರೆ 2020 ರಲ್ಲಿ ನಾನು ಮತ್ತೆ ಅಲ್ಲಿಗೆ ಹೋದೆ. ʼಟಿಪ್ಪು ಸುಲ್ತಾನರ ಕೊಡುಗೆʼ ಎಂಬುದನ್ನು ಅಳಿಸಿ ಹಾಕಿ, ಅದರ ಮೇಲೆ ʼಇದು ಪ್ರಖ್ಯಾತಿ ಪಟ್ಟ ಗಂಟೆʼ ಎಂದು ಬರೆಯಲಾಗಿತ್ತು. ಕಳೆದ ಶತಮಾನದ ಕೊನೆಯ ದಶಕದಿಂದ ದೇಶದಲ್ಲಿ ಮೇಲುಗೈ ಸಾಧಿಸಿದ ಹಿಂದುತ್ವದ ಕೊಳಕು ರಾಜಕಾರಣವು ಇತಿಹಾಸದ ಸತ್ಯಗಳನ್ನು ಅಳಿಸಿಹಾಕಲು ನಡೆಸಲಾಗುತ್ತಿರುವ ತೀವ್ರ ಯತ್ನ, ಈ ಕಾರಣವಾಗಿ ಸುಳ್ಳು ಇತಿಹಾಸವೊಂದನ್ನು ಹೊಸ ತಲೆಮಾರಿಗೆ ತುರುಕಲು ನಡೆಸಲಾಗುತ್ತಿರುವ ಹುನ್ನಾರವನ್ನು ಅದು ಕೂಗಿ ಹೇಳುತ್ತಿತ್ತು.

ಕ್ರೋಢ ಶಂಕರನಾರಾಯಣ ದೇವಸ್ಥಾನದಲ್ಲಿರುವ ಟಿಪ್ಪೂ ಹೆಸರು ಅಳಿಸಿದ ಘಂಟೆ

ಟಿಪ್ಪು ಸುಲ್ತಾನ್ ಎಂಬ ಹೆಮ್ಮೆ

1990ರ ತನಕವೂ ನಾಡಿನ ಮಾತ್ರವಲ್ಲ, ದೇಶದ ಹೆಮ್ಮೆಯೆನಿಸಿಕೊಂಡಿದ್ದ, 1790 ರ ಕಾಲಘಟ್ಟದಲ್ಲಿ ಫ್ರಾನ್ಸ್‌ ಮತ್ತು ಅಮೆರಿಕಾದ ಸ್ವಾತಂತ್ರ್ಯ ಹೋರಾಟಗಾರರಿಗೂ ಒಂದು ಸ್ಫೂರ್ತಿಯ ಸೆಲೆಯಾಗಿದ್ದ, ಬ್ರಿಟಿಷರ ವಿರುದ್ಧದ ಹೋರಾಟವನ್ನು ಅವರೆಲ್ಲ ಕಾತರ ಕುತೂಹಲಗಳಿಂದ ಗಮನಿಸಲು ಕಾರಣನಾಗಿದ್ದ, ರಾಕೆಟ್‌ ತಂತ್ರಜ್ಞಾನದ ಕಾರಣ ಅಮೆರಿಕಾದ ನಾಸಾದಲ್ಲಿಯೂ ಉಲ್ಲೇಖಿತನಾದ, ಕರ್ನಾಟಕ ಚರಿತ್ರೆಯ ಏಕೀಕರಣ, ಆಡಳಿತ ಬೆಳವಣಿಗೆ ಸಹಿತ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ನಾಡಿಗೆ ಉಪಕಾರ ಮಾಡಿದ ಟಿಪ್ಪು ಸುಲ್ತಾನ್‌, ಇದ್ದಕ್ಕಿದ್ದಂತೆಯೇ ಭಾರತದ ಪಾಲಿಗೆ ಖಳನಾಯಕನಾದುದು ಹೇಗೆ? ಇದಕ್ಕೆ ಉತ್ತರ ನಿಮಗೆ ಗೊತ್ತೇ ಇದೆ.

ಯುದ್ಧ ನಡೆದುದು ಧರ್ಮಕ್ಕಾಗಿ ಅಲ್ಲ

ಇತಿಹಾಸಕಾರ, ಹೋರಾಟಗಾರ, ಚಿಂತಕ ರಾಮ ಪುನಿಯಾನಿ ಇತಿಹಾಸದ ಸತ್ಯವನ್ನು ಹೊಸ ತಲೆಮಾರಿಗೆ ತಿಳಿಸುವ ಯತ್ನ ಮಾಡುತ್ತಾ ಒಂದು ಕುತೂಹಲಕರ ಸಂಗತಿಯನ್ನು ಮುಂದಿಡುತ್ತಾರೆ. 1576 ರಲ್ಲಿ ಹಳದಿಘಾಟ್ ನಲ್ಲಿ ಅಕ್ಬರ್‌ ಮತ್ತು ರಾಣಾ ಪ್ರತಾಪ ಸಿಂಹನ ಸೇನೆಗಳ ನಡುವೆ ಘನಘೋರ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ಅಕ್ಬರನ ಪ್ರಧಾನ ಸೇನಾಪತಿಯಾಗಿದ್ದವನು ರಾಜಾ ಮಾನ್‌ ಸಿಂಗ್. ರಾಣಾ ಪ್ರತಾಪನ ಅತ್ಯಂತ ವಿಶ್ವಸನೀಯ ಸೇನಾಪತಿಯಾಗಿದ್ದವನು ಹಕೀಂ ಖಾನ್‌ ಸೂರ್. ಹಿಂದೂ ರಾಜನ ಸೇನಾಪತಿ ಮುಸ್ಲಿಂ, ಮುಸ್ಲಿಂ ರಾಜನ ಸೇನಾಪತಿ ಹಿಂದೂ! ಇದರಲ್ಲಿ ಕೋಮುವಾದ ಎಲ್ಲಿದೆ? ರಾಜರುಗಳ ನಡುವೆ ಯುದ್ಧ ನಡೆದುದು ಧರ್ಮಕ್ಕಾಗಿ ಅಲ್ಲ; ಭೂಮಿಗಾಗಿ ಮತ್ತು ಅಧಿಕಾರಕ್ಕಾಗಿ.

ಬಾಬರ್‌ ಮತ್ತು ಬಹದ್ದೂರ್ ಷಾ ಜಫರ್‌ ನನ್ನು ಹೊರತುಪಡಿಸಿದರೆ, ಉಳಿದ ಎಲ್ಲ ಮೊಗಲ್‌ ಅರಸರು ಇಲ್ಲೇ ಹುಟ್ಟಿ ಇಲ್ಲೇ ಮಣ್ಣಾದವರು. ಅವರು ರಜಪೂತ ಹೆಣ್ಣುಗಳನ್ನು ಮದುವೆಯಾದರು, ಅವರಲ್ಲಿ ಮಕ್ಕಳನ್ನು ಪಡೆದರು. ಬ್ರಿಟಿಷ್‌ ಲೂಟಿಕೋರರಂತೆ ಅವರು, ತಾವು ಸೃಷ್ಟಿಸಿದ ಆಸ್ತಿ ಸ್ವತ್ತು ಸಂಪತ್ತು ಏನನ್ನೂ ವಿದೇಶಕ್ಕೆ ಒಯ್ಯಲಿಲ್ಲ; ಎಲ್ಲವನ್ನೂ ಇಲ್ಲೇ ಬಿಟ್ಟುಹೋದರು. ಅವು ಈಗ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತು ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ವರಮಾನ ತಂದುಕೊಡುತ್ತಿರುವ ಅಮೂಲ್ಯ ಸಂಪತ್ತು.

ಮೊಗಲರು ಈ ದೇಶಕ್ಕೆ ಸಂಗೀತವನ್ನು ಕೊಟ್ಟರು, ಸಾಹಿತ್ಯ, ವಿಶೇಷ ಖಾದ್ಯಗಳು, ಚಿತ್ರಕಲೆ, ಶಿಲ್ಪ ವೈಭವಗಳನ್ನು ಕೊಟ್ಟರು. ಈ ದೇಶದ ಸಂಸ್ಕೃತಿಯನ್ನು ಸಮೃದ್ಧಗೊಳಿಸಿದರು. ಆದರೆ, ಇದ್ದಕ್ಕಿದ್ದಂತೆ 1990ರ ಬಳಿಕ ಅವರು ಈ ದೇಶದ ಪರಮ ಶತ್ರುಗಳಾದುದು ಹೇಗೆ? ಪಠ್ಯಪುಸ್ತಕಗಳಿಂದ ಅವರ ಉಲ್ಲೇಖ ತೆಗೆದುಹಾಕುವಷ್ಟು, ರಸ್ತೆಗಳ ಹೆಸರು ಬದಲಾಯಿಸುವಷ್ಟು, ಅವರ ಗೋರಿಗಳನ್ನೂ ಅಗೆದುಹಾಕುವಷ್ಟು ಅವರ ಬಗ್ಗೆ ದ್ವೇಷ ಅಸಹನೆ ಹುಟ್ಟಿದ್ದು ಹೇಗೆ? ಉತ್ತರ ನಿಮಗೆ ಗೊತ್ತೇ ಇದೆ.

ಇತಿಹಾಸ ಇರುವುದು ತಿದ್ದುವುದಕ್ಕಲ್ಲ

ನಿಜ, ಟಿಪ್ಪು ಕೆಲ ಕ್ರೈಸ್ತರನ್ನು ಶಿಕ್ಷಿಸಿದ. ಮತೀಯ ದ್ವೇಷದಿಂದಲೇ? ಅಲ್ಲ, ತನ್ನ ಪರಮ ಶತ್ರು ಬ್ರಿಟಿಷರಿಗೆ ನೆರವಾದರು ಅನಿಸಿದ, ʼಶತ್ರುವಿನ ಮಿತ್ರರಾದʼ ಕ್ರೈಸ್ತರನ್ನು ಮಾತ್ರ ಆತ ಶಿಕ್ಷಿಸಿದ. ಶತ್ರುಗಳಿಗೆ ನೆರವಾದವರನ್ನು ಶಿಕ್ಷಿಸುವುದು ಆಗಿನ ಯುಗಧರ್ಮ. ಟಿಪ್ಪು ಯುದ್ಧಮಾಡಿದ ಯಾರೊಂದಿಗೆ? ಮಲಬಾರ್‌ ನೊಂದಿಗೆ. ಆದರೆ ಮಲಬಾರ್ ಆಗ ಆತನ ಪಾಲಿಗೆ ಇನ್ನೊಂದು ದೇಶ. ನಾವು ಇಂದು ಕಾಣುವ ಏಕೀಕೃತ ಭಾರತ ಆಗ ಇರಲೇ ಇಲ್ಲ. ಆತ ತನ್ನ ರಾಜ್ಯದ ಪ್ರಜೆಗಳಿಗೆ ಏನಾದರೂ ಅನ್ಯಾಯ ಮಾಡಿದನೇ? ಇಲ್ಲ. ತನ್ನ ಪ್ರಜೆಗಳಿಗೆ ಅನ್ಯಾಯ ಮಾಡಿ ಯಾವ ರಾಜನಿಗೂ ರಾಜ್ಯಭಾರ ಮಾಡುವುದು ಅಸಾಧ್ಯದ ಮಾತು.

ಅನ್ಯಾಯ ಮಾಡುವುದು ಬಿಡಿ, ಮರಾಠರು ಹಿಂದೂಗಳ ದೇಗುಲ ಶೃಂಗೇರಿಗೆ ಹಾನಿ ಮಾಡಿದಾಗ ಅವರನ್ನು ಓಡಿಸಿದ್ದಷ್ಟೇ ಅಲ್ಲ, ಅದರ ದುರಸ್ತಿಗೂ ಆತ ನೆರವು ನೀಡಿದ, ದೀರ್ಘಾವಧಿ ಅನುಕೂಲಕ್ಕಾಗಿ ಉಂಬಳಿಗಳನ್ನೂ ಕೊಟ್ಟ. ಅನೇಕ ದೇಗುಲಗಳಿಗೆ ಉಂಬಳಿ ಕೊಟ್ಟು ಅದೇ ಕಾರಣಕ್ಕೆ ಶತಮಾನಗಳಿಂದ ಅಲ್ಲಿ ಆತನ ಹೆಸರಿನಲ್ಲಿ ಸಲಾಂ ಆರತಿ ಮಾಡುವಂತೆಯೂ ಆಯಿತು. ತನ್ನ ಮನೆ ಪಕ್ಕದಲ್ಲಿಯೇ ರಂಗನಾಥ ಸ್ವಾಮಿಯ ದೇವಸ್ಥಾನವನ್ನು ಯಾವ ತೊಂದರೆಯೂ ಮಾಡದೆ ಇರಿಸಿಕೊಂಡ.

1799 ರ ಟಿಪ್ಪುಸುಲ್ತಾನ ವಿರೋಧಿಗಳೊಂದಿಗೆ ನಡೆದುಕೊಂಡ ರೀತಿ, ಕೊಟ್ಟ ಶಿಕ್ಷೆಗಳು ಇತ್ಯಾದಿಗಳನ್ನು ಹದಿನಾರನೇ ಶತಮಾನದ ರಾಜಕೀಯ, ಭೌಗೋಳಿಕ ಪರಿಸ್ಥಿತಿಗಳ ನೆಲೆಯಲ್ಲಿಟ್ಟು ವಿಶ್ಲೇಷಿಸಬೇಕೇ ಹೊರತು, ಸಂವಿಧಾನ, ಪ್ರಜಾತಂತ್ರ, ಮಾನವಹಕ್ಕುಗಳ ಇಪ್ಪತ್ತೊಂದನೆಯ ಶತಮಾನದ  ಕಾಲಘಟ್ಟದಲ್ಲಿ ನಿಂತು ಅಲ್ಲ. ಇತಿಹಾಸ ಇರುವುದು ಗತಕಾಲವನ್ನು ಅಧ್ಯಯನ ಮಾಡುವುದಕ್ಕೆ, ಆ ಕಾಲದಲ್ಲಿ ಆಗಿರಬಹುದಾದ ತಪ್ಪುಗಳು ಮರುಕಳಿಸದಂತೆ ವರ್ತಮಾನದ ಮತ್ತು ಭವಿಷ್ಯದ ಹೆಜ್ಜೆಗಳನ್ನು ಸರಿಪಡಿಸಿಕೊಳ್ಳುವುದಕ್ಕೆ, ಹೊರತು ತಿದ್ದುವುದಕ್ಕಲ್ಲ, ಇತಿಹಾಸದಲ್ಲಿ ಆಗಿರಬಹುದಾದ ತಪ್ಪುಗಳಿಗೆ ಪ್ರತೀಕಾರ ತೀರಿಸುವುದಕ್ಕಲ್ಲ. ಅಂದಿನ ಇತಿಹಾಸದಲ್ಲಿ ಆಗಿರಬಹುದಾದ ಪ್ರಮಾದಗಳಿಗೆ ಇಂದಿನ ವರ್ತಮಾನದ ಸಮುದಾಯಗಳು ಉತ್ತರಿಸಬೇಕು, ಶಿಕ್ಷೆ ಅನುಭವಿಸಬೇಕು ಎನ್ನುವುದು ಯಾವ ನ್ಯಾಯ?

ಇತಿಹಾಸವನ್ನು ಇತಿಹಾಸವಾಗಿ ನೋಡದೆ, ಅದನ್ನು ಸಮಕಾಲೀನ ಅಧಿಕಾರ ರಾಜಕಾರಣಕ್ಕಾಗಿ ಕೋಮು ಕಣ್ಣುಗಳಿಂದ ನೋಡಲಾರಂಭಿಸಿದಾಗ, ದೇಶದಲ್ಲಿ ಈಗ ಏನು ನಡೆಯತ್ತಿದೆಯೋ ಆ ಎಲ್ಲ ಅತಿರೇಕಗಳು, ಅನಾಹುತಗಳು ಸಂಭವಿಸುತ್ತವೆ.

ದಾರಿ ತಪ್ಪಿಸುವ ದಾಖಲೆಗಳು

ಇತಿಹಾಸದ ಸಂಶೋಧನೆಗೆ ನಮಗೆ ಆಧಾರವಾಗಿರಬೇಕಾದುದು ಯಾವುದು? ಸ್ಮಾರಕ ಕಲ್ಲುಗಳು, ಯಾರೋ ಬರೆದಿಟ್ಟ ದಾಖಲೆಪತ್ರಗಳು ಮಾತ್ರವೇ? ಇತಿಹಾಸದ ವ್ಯಕ್ತಿಗಳು ನಾಯಕರೋ  ಖಳನಾಯಕರೋ ಆಗಿ ಕಾಣಿಸುವುದು ಯಾವ ನೆಲೆಯಿಂದ ಅವರನ್ನು ನಾವು ನೋಡುತ್ತಿದ್ದೇವೆ ಎನ್ನುವುದನ್ನು ಕೂಡಾ ಅವಲಂಬಿಸಿರುತ್ತದೆ. ಭಗತ್‌ ಸಿಂಗ್‌ ನಮ್ಮ ಪಾಲಿಗೆ, ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತ ಕ್ರಾಂತಿಕಾರಿ, ನಮ್ಮೆಲ್ಲರ ಆರಾಧ್ಯ ದೈವ. ಆದರೆ ಬ್ರಿಟಿಷರ ಪಾಲಿಗೆ ಆತ ಕೊಲೆಗಡುಕ, ಗಲ್ಲಿಗೇರಲು ಅರ್ಹನಾದ ಭಯೋತ್ಪಾದಕ. ತಮ್ಮನ್ನು ಬಿಡದೆ ಕಾಡಿದ ಭಗತ್‌ ಸಿಂಗ್‌ ನನ್ನು ಬ್ರಿಟಿಷರು ಹಾಗೆ ಚಿತ್ರಿಸಿರುವುದು ಸಹಜವೇ ಅಲ್ಲವೇ?

ಇಡಿಯ ಭಾರತ ದೇಶ ತಮ್ಮ ಬ್ರಿಟಿಷರ ಕೈವಶವಾಗಲು ಬಹುದೊಡ್ಡ ಅಡ್ಡಿಯಾಗಿದ್ದುದು ಟಿಪ್ಪುಸುಲ್ತಾನ್. ತಮ್ಮನ್ನು ಇನ್ನಿಲ್ಲದಂತೆ ಕಾಡಿದ, ತಮ್ಮ ಅನೇಕ ಸೇನಾಧಿಕಾರಿಗಳನ್ನು ಕೊಂದ ಟಿಪ್ಪುಸುಲ್ತಾನ್‌ ಬಗ್ಗೆ ಬ್ರಿಟಿಷರು ಬರೆದಿಟ್ಟ ಇತಿಹಾಸ ಬೇರೆ ಹೇಗಿರಲು ಸಾಧ್ಯ? ಟಿಪ್ಪುವಿನ ವ್ಯಕ್ತಿತ್ವವನ್ನು ತೀರ್ಮಾನಿಸಲು ನಾವು ಆ ದಾಖಲೆಗಳನ್ನು ಸಂಪೂರ್ಣ ನಂಬಿದರೆ ನೈಜ ಇತಿಹಾಸವನ್ನು ತಿಳಿಯುವುದು ಸಾಧ್ಯವೇ? ಇವಕ್ಕಿಂತ ಮೌಖಿಕ ಇತಿಹಾಸ ಹೆಚ್ಚು ವಿಶ್ವಾಸಾರ್ಹವಾಗಿರಲೂ ಸಾಧ್ಯವಿದೆಯಲ್ಲವೇ?

ಜನಪ್ರಿಯ ರಾಜರುಗಳಿಗಷ್ಟೇ ಲಾವಣಿ

ಉದಾಹರಣೆಗೆ, ನಮ್ಮಲ್ಲಿ ರಾಜರುಗಳ ಬಗ್ಗೆ ಜನಪದರು ಲಾವಣಿ ಕಟ್ಟಿ, ಅವರ ಶೌರ್ಯ, ಸಾಧನೆಗಳನ್ನು ಹಾಡಿದ, ಕೊಂಡಾಡಿದ ಅನೇಕ ಉದಾಹರಣೆಗಳಿವೆ. ಆದರೆ, ಎಲ್ಲ ರಾಜರುಗಳ ಬಗ್ಗೆ ಅಂತಹ ಲಾವಣಿ ಕಾಣಸಿಗದು. ನಮ್ಮಲ್ಲಿ ಕುಮಾರರಾಮನ ಬಗ್ಗೆ ಲಾವಣಿಗಳಿವೆ. ಟಿಪ್ಪು ಸುಲ್ತಾನ್‌ ಬಗ್ಗೆಯೂ ಲಾವಣಿಗಳಿವೆ. ತಮ್ಮ ರಾಜನ ಬಗ್ಗೆ ಸದಭಿಪ್ರಾಯ ಇದ್ದಾಗ ಮಾತ್ರ ಜನಪದರಿಂದ ಇಂತಹ ಲಾವಣಿಗಳು ಹುಟ್ಟಿಕೊಳ್ಳುತ್ತವೆ.

ನಾವೀಗ ಇತಿಹಾಸ ಎಂದು ಯಾವುದನ್ನು ಒಪ್ಪಿಕೊಂಡಿದ್ದೇವೆಯೋ ಅದು ಸಂಪೂರ್ಣ ಸತ್ಯವಾಗಿರಬೇಕಾಗಿಲ್ಲ. ಆದರೆ, ಇತಿಹಾಸಕಾರರು ಅನೇಕ ವಿಶ್ವಾಸಾರ್ಹ ಆಧಾರಗಳನ್ನು ವಿಶ್ಲೇಷಿಸಿ, ವಿಮರ್ಶಿಸಿ, ಬಹುತೇಕ ಒಪ್ಪಬಹುದಾದಂತಹ ಒಂದು ತೀರ್ಮಾನಕ್ಕೆ ಬಂದಿರುತ್ತಾರೆ. ಬಲವಾದ ಹೊಸ ಪುರಾವೆ ಸಿಕ್ಕು, ಹೊಸ ತೀರ್ಮಾನಕ್ಕೆ ಬಂದ ಬಳಿಕವಷ್ಟೇ ಹಳೆಯ ಇತಿಹಾಸವನ್ನು ನಾವು ತಿರಸ್ಕರಿಸಬೇಕಾಗುತ್ತದೆ. ನಮ್ಮ ಮುಂದೆ ಈಗ ಇರುವ ಇತಿಹಾಸ ಸಾವಿರಾರು ಇತಿಹಾಸಕಾರರು ಶ್ರಮಪಟ್ಟು ಅಸಂಖ್ಯ ಆಧಾರಗಳನ್ನು ಅಧ್ಯಯನ ಮಾಡಿ ಒಂದು ತೀರ್ಮಾನಕ್ಕೆ ಬಂದು ನಮ್ಮ ಮುಂದೆ ಇರಿಸಿರುವಂಥದ್ದು.

ಆಧಾರ ರಹಿತ ಆರೋಪ

ಆದರೆ ಈ ಇತಿಹಾಸವನ್ನೆಲ್ಲ ಅಲ್ಲಗಳೆದು ಹೊಸ ಇತಿಹಾಸ ಬರೆಯಹೊರಟಿರುವ ಬಲಪಂಥೀಯರಲ್ಲಿ ತರ್ಕದ ಆಧಾರಗಳಿಲ್ಲ. ಒಪ್ಪತಕ್ಕ ವಾದಗಳಿಲ್ಲ. ಅವರಲ್ಲಿರುವುದು ಬರೇ ಮತೀಯ ದ್ವೇಷ. ಹಾಗಾಗಿಯೇ, ಇತಿಹಾಸದಲ್ಲಿ, ʼಏನು ಮಾಡಿದರುʼ ಎಂಬುದಕ್ಕಿಂತಲೂ, ಅವರಿಗೆ ʼಯಾರು ಮಾಡಿದರು, ಅವರ ಮತಧರ್ಮ ಯಾವುದುʼ ಎಂಬುದು ಮುಖ್ಯವಾಗುತ್ತದೆ. ಮತಧರ್ಮದ ಮೂಲಕವೇ ಅವರು ಆ ರಾಜರುಗಳ ಸಾಧನೆಯನ್ನು ಅಳೆಯ ಹೊರಡುತ್ತಾರೆ. ಲಕ್ಷಗಟ್ಟಲೆ ಹಿಂದೂಗಳನ್ನು ಕೊಂದರು, ಮತಾಂತರಿಸಿದರು, ಸಾವಿರ ಸಾವಿರ ದೇವಸ್ಥಾನಗಳನ್ನು ನಾಶಪಡಿಸಿದರು ಎಂಬೆಲ್ಲ ಕತೆ ಕಟ್ಟುತ್ತಾರೆ. ಕತೆಯೇ ಅವರ ಇತಿಹಾಸ. ಕತೆಗೆ ಆಧಾರ ಇರಬೇಕಾಗಿಲ್ಲ ಅಲ್ಲವೇ? ಹಳದಿಘಾಟ್ ಯುದ್ಧದಲ್ಲಿ ರಾಣಾ ಪ್ರತಾಪ ಗೆದ್ದ ಎಂದು ಸಮರ್ಥಿಸುವಷ್ಟು ಮೂರ್ಖತನವನ್ನು ಅವರು (ಭಂಡ)ಧೈರ್ಯದಿಂದ ಪ್ರದರ್ಶಿಸಬಲ್ಲರು. ಇವತ್ತು ಹೈದರ್‌, ಟಿಪ್ಪು, ಮೊಗಲರು ಮತ್ತು ಭಾರತದ ಒಂದು ಬಹುದೊಡ್ಡ ಸಮುದಾಯ ಇವರ ಪಾಲಿಗೆ ಶತ್ರುಗಳೆನಿಸಲು ಕಾರಣ ಅವರು ಮುಸ್ಲಿಮರು ಮತ್ತು ಮುಸ್ಲಿಮರು ಎಂಬುದಷ್ಟೇ.

ನಾವೀಗ ಮಾಡಬೇಕಾದುದು ಏನು?

ಹೀಗೆ ಬಲಪಂಥೀಯ ಕುತಂತ್ರಿಗಳು ಇತಿಹಾಸವನ್ನು ತಿದ್ದುತ್ತಾ, ತಮ್ಮದೇ ಆದ ಇತಿಹಾಸ ಸೃಷ್ಟಿಸುತ್ತಾ, ಸುಳ್ಳು ಇತಿಹಾಸ ಸೃಷ್ಟಿಸಿ ವಾಟ್ಸಪ್‌ ಗಳ ಮೂಲಕ ಹರಿಯಬಿಟ್ಟು ಹೊಸ ತಲೆಮಾರಿನ ತಲೆತೊಳೆಯತೊಡಗಿದಾಗ, ವಿಚಾರವನ್ನು ವಿಚಾರದ ಮೂಲಕ, ಭಾಷಣವನ್ನು ಭಾಷಣದ ಮೂಲಕ, ಲೇಖನವನ್ನು ಲೇಖನಗಳ ಮೂಲಕ ಎದುರಿಸಬೇಕು ಎನ್ನುವ ಪ್ರಜಾಪ್ರಭುತ್ವವಾದಿಗಳಾದ ನಾವು ಏನು ಮಾಡಬೇಕು? ಆಗ ಮೂರ್ಖರೊಂದಿಗೆ ವ್ಯರ್ಥ ವಾದಗಳಲ್ಲಿ ಶಕ್ತಿ ಮತ್ತು ಸಮಯ ಹಾಳು ಮಾಡುವ ಬದಲು, ಈಗ ಆಕ್ಟಿವಿಸ್ಟ್‌ ಪತ್ರಕರ್ತ ನವೀನ್‌ ಸೂರಿಂಜೆ ಮಾಡಿದಂತೆ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳನ್ನು ಬಳಸಿಕೊಂಡು, ಇತಿಹಾಸದ ಸತ್ಯಗಳನ್ನು ತಣ್ಣಗೆ ಜನರ ಮುಂದಿಡುತ್ತಾ ಹೋಗಬೇಕು. ಸತ್ಯಗಳ ಅರಿವಾಗುತ್ತಿದ್ದಂತೆ ಜನರೇ, ಇತಿಹಾಸವನ್ನು ತಮ್ಮ ಅನುಕೂಲಕ್ಕೆ ತಿದ್ದುವವರ ಕುತಂತ್ರಗಳನ್ನು ತಿರಸ್ಕರಿಸುವ ಕಾಲ ಬಂದೇ ಬಂದೀತು.

ಅನೇಕರಿಗೆ ಗೊತ್ತೇ ಇಲ್ಲದ ಐತಿಹಾಸಿಕ ಸತ್ಯಗಳು

ಕರಾವಳಿಗೂ ಹೈದರ್‌ ಮತ್ತು ಟಿಪ್ಪುವಿಗೂ ವಿಶೇಷ ನಂಟು ಇತ್ತು. ಬ್ರಿಟಿಷರೊಂದಿಗೆ ಮಂಗಳೂರು ಒಪ್ಪಂದ ನಡೆದುದು ಇಲ್ಲಿಯೇ. ಕಡಲಿನ ವ್ಯಾಪಾರ, ವಿದೇಶದೊಂದಿಗೆ ಸಂಬಂಧ ಇತ್ಯಾದಿಗಳಲ್ಲಿ ಕರಾವಳಿ ಯಾವತ್ತೂ ಬಹುಮುಖ್ಯ ಪಾತ್ರ ವಹಿಸುವುದರಿಂದ ಮತ್ತು ಕರ್ನಾಟಕ ಕರಾವಳಿಯು ಶತಶತಮಾನಗಳಿಂದಲೂ ವಿದೇಶದೊಂದಿಗೆ ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಇದ್ದುದರಿಂದ ಹೈದರ್‌ ಮತ್ತು ಟಿಪ್ಪುವಿಗೆ ಮಾತ್ರವಲ್ಲ, ಯಾರೇ ಆಳುವವರಿಗೂ ಇದು ಆಯಕಟ್ಟಿನ ಜಾಗ.

ಇಂತಹ ಪ್ರದೇಶವನ್ನು ಸರಿಸುಮಾರು ಅರ್ಧ ಶತಮಾನಗಳ ಕಾಲ ಆಳಿದ ಅವರಿಬ್ಬರು ಈ ಪ್ರದೇಶದ ಬಗ್ಗೆ ತೋರಿಸಿದ ವಿಶೇಷ ಆಸಕ್ತಿ, ಇಲ್ಲಿ ತೋರಿದ ರಾಜಕೀಯ ಮತ್ತು ಆಡಳಿತದ ಜಾಣ್ಮೆ, ಜನರೊಂದಿಗೆ ವರ್ತಿಸುವಾಗ ತೋರಿದ ಸರ್ವಧರ್ಮ ಸಮಭಾವದ ನಡೆವಳಿಕೆ, ಇಲ್ಲಿನ ಅನೇಕ ಚರ್ಚ್‌ಗಳು, ಪಾದರಿಗಳು, ಮಠಮಾನ್ಯಗಳು ಇತ್ಯಾದಿಗಳೊಂದಿಗೆ ಅವರು ಇರಿಸಿಕೊಂಡ ಗೌರವಯುತ ಸಂಬಂಧ, ಜನರಿಗೆ ಹಿಂಸೆ ನೀಡುತ್ತಿದ್ದ ತಮ್ಮ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುತ್ತಿದ್ದ ರೀತಿ, ಇತ್ಯಾದಿ ಅನೇಕ ಕುತೂಹಲಕಾರಿ ವಿವರಗಳನ್ನು, ಸತ್ಯಗಳನ್ನು, ವಿಶ್ವಾಸಾರ್ಹ ದಾಖಲೆಗಳ ಆಧಾರದಲ್ಲಿ ಈ ಪುಸ್ತಕದಲ್ಲಿ ನವೀನ್‌ ಮಂಡಿಸುತ್ತಾರೆ.

ಒಮ್ಮೆ ಓದ ತೊಡಗಿದರೆ, ಇತಿಹಾಸದ ಬಗ್ಗೆ ಒಂದಿಷ್ಟಾದರೂ ಕುತೂಹಲ ಇರುವ ಯಾರೇ ಆಗಲೀ ಪೂರ್ತಿಯಾಗಿ ಓದದೆ ಕೆಳಗಿಡಲಾರರು ಎಂಬಷ್ಟು ರೋಚಕ ಕಾದಂಬರಿಯ ಗುಣಗಳನ್ನು ಹೊಂದಿರುವ ಐತಿಹಾಸಿಕ ಘಟನೆಗಳ ಸಂಗ್ರಹ ಇಲ್ಲಿದೆ. ಇಲ್ಲಿ ಬಿಡುಬೀಸಾದ ಯಾವುದೇ ಹೇಳಿಕೆಗಳಿಲ್ಲ ಮತ್ತು ಇಲ್ಲಿನ ಯಾವುದೇ ಸಂಗತಿ ನವೀನ್‌ ಕಲ್ಪನೆಯಿಂದ ಬರೆದುದಲ್ಲ ಎನ್ನುವುದು ಗಮನಿಸತಕ್ಕ ಸಂಗತಿ.

ಶಾಲಾಮಕ್ಕಳು ಓದುವಂತಾಗಬೇಕು

ಟಿಪ್ಪುವಿನಂತಹ ವಿಶಿಷ್ಟ, ಕುತೂಹಲಕರ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಹೇಳುತ್ತಾ ಅವರನ್ನು ಖಳನಾಯಕರನ್ನಾಗಿ ಮಾಡಿ ನಮ್ಮ ಯುವಜನಾಂಗದ ಅರಿವಿನ ವಿಸ್ತಾರಕ್ಕೆ ಕಲ್ಲುಹಾಕುವ ಕೆಲಸ ಮಾಡುವವರ ಹುನ್ನಾರಗಳನ್ನು ಕೌಂಟರ್‌ ಮಾಡಲು ದಾಖಲೆಗಳ ಆಧಾರದಲ್ಲಿ ಇತಿಹಾಸದ ಬಗ್ಗೆ ಸತ್ಯ ಹೇಳುವ ಇಂತಹ ಪುಸ್ತಕಗಳು ಅತ್ಯಂತ ಮುಖ್ಯವಾಗುತ್ತವೆ.

ನಾವು ದೂರದ ಅಲೆಗ್ಸಾಂಡರ್‌ ಬಗ್ಗೆಯೋ, ಮಹಮದ್‌ ಘಜನಿ, ಬಾಬರ್‌ ಬಗ್ಗೆಯೋ, ಓದುತ್ತೇವೆ. ತಿಳಿಯುತ್ತೇವೆ. ಆದರೆ ನಮ್ಮ ಕಾಲಬುಡದಲ್ಲಿಯೇ ರೋಚಕವಾಗಿಯೂ ಇರುವ ಇತಿಹಾಸಗಳ ಬಗ್ಗೆ ನಮಗೆ ಅರಿವಿಲ್ಲ. ನಮಗೆ ಟಿಪ್ಪೂ, ಅಬ್ಬಕ್ಕ ಬಗ್ಗೆ ಗೊತ್ತಿಲ್ಲ, ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಪ್ಪತ್ತು ವರ್ಷಗಳಷ್ಟು ಹಿಂದೆಯೇ 1837 ರಲ್ಲಿ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ಇಲ್ಲಿ ನಡೆದ ರೈತ ದಂಗೆಯ ಬಗ್ಗೆ ಗೊತ್ತಿಲ್ಲ. ಶಿಕ್ಷಣದ್ದೂ ಕೇಂದ್ರೀಕೃತ ವ್ಯವಸ್ಥೆಯಾಗಿದ್ದು ಮಕ್ಕಳಿಗೆ ತಮ್ಮ ಊರಿನ ಇತಿಹಾಸ ತಿಳಿಯುವಂತೆ ಮಾಡುವ ವ್ಯವಸ್ಥೆಯೂ ನಮ್ಮಲ್ಲಿಲ್ಲ.

ಹಾಗಾಗಿ ನವೀನ್‌ ಸೂರಿಂಜೆ ಬರೆದ ʼಕರಾವಳಿ ಚರಿತ್ರೆಯಲ್ಲಿ ಹೈದರ್‌ ಅಲಿ ಮತ್ತು ಟಿಪ್ಪುಸುಲ್ತಾನ್‌ʼ ನಂತಹ ಪುಸ್ತಕ ನಾಡಿನ ಶಾಲಾ ಮಕ್ಕಳ ಪಠ್ಯಪುಸ್ತಕಗಳ ಭಾಗವಾಗಲು ಯೋಗ್ಯವಾದಂಥದ್ದು. ಕನಿಷ್ಠ ಕರಾವಳಿಯ ಮಕ್ಕಳಾದರೂ ಇಲ್ಲಿನ ಸುಲ್ತಾನ್‌ ಬತೇರಿ, ಜಮಲಾಬಾದ್‌ ಕೋಟೆಯ ಮಹತ್ವ, ಟಿಪ್ಪುವಿಗೆ ಅವುಗಳೊಂದಿಗೆ ಇರುವ ಸಂಬಂಧ ಸಹಿತ, ಈ ಪುಸ್ತಕದಲ್ಲಿ ಹೇಳಿರುವ ಅನನ್ಯ ಸಂಗತಿಗಳನ್ನು ತಿಳಿಯುವಂತಾಗಬೇಕು, ತಿಳಿದು ನಮ್ಮ ಇತಿಹಾಸದ ಅನೇಕ ಸಂಗತಿಗಳ ಬಗ್ಗೆ ಹೆಮ್ಮೆ ಪಡುವಂತಾಗಬೇಕು.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ- 20 | ಮೂರು ನಿಮಿಷಗಳಲ್ಲಿ ಮೂರು ಆ*ತ್ಮಹ*ತ್ಯೆ!

More articles

Latest article

Most read