ನಮ್ಮ ನಡುವಿನ ಸೂಕ್ಷ್ಮ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿಯವರ ʼಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು, ಕರಾವಳಿಯ ರಕ್ತ-ಕಣ್ಣೀರುʼ ಕೃತಿ ಇಂದು (ಮೇ 30) ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಪ್ರಮುಖ ಚಿಂತಕರು, ಹಿರಿಯ ಹೋರಾಟಗಾರರು ಇರಲಿದ್ದಾರೆ. ಸಂಜೆ 4 ಗಂಟೆಗೆ ಮಂಗಳೂರಿನ ಬಲ್ಮಠದ ಸಹೋದಯ ಸಂಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ಹೊತ್ತಿನಲ್ಲಿ ಪುಸ್ತಕದ ಕುರಿತು ಬರೆದಿದ್ದಾರೆ ಶ್ರೀನಿವಾಸ ಕಾರ್ಕಳ.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಇರುವ ಕರಾವಳಿ ಕರ್ನಾಟಕದ ಈ ದಕ್ಷಿಣ ಭಾಗ, ಅಂದರೆ ತುಳುನಾಡು ವೈಶಿಷ್ಟ್ಯಗಳು ಮತ್ತು ವೈವಿಧ್ಯಗಳ ಜತೆಯಲ್ಲಿ, ವೈರುದ್ಧ್ಯಗಳ ಪ್ರದೇಶ ಕೂಡಾ.
ಈ ಪ್ರದೇಶ ಬಹುತ್ವಕ್ಕೆ ಮತ್ತು ಸಾಮರಸ್ಯದ ಬದುಕಿಗೆ ಇನ್ನೊಂದು ಹೆಸರು. ಇದು ಬಹುಧರ್ಮೀಯರ, ಬಹುಭಾಷಿಕರ, ಬಹುಸಂಸ್ಕೃತಿಯ ಬೀಡು.
ಬೌದ್ಧ ಮತ್ತು ಜೈನ ಧರ್ಮಗಳು ಕ್ರಿಸ್ತಶಕದ ಆರಂಭದ ಹೊತ್ತಿಗೆ ಇಲ್ಲಿ ಬಂದು ನೆಲೆಸಿದವು. ಶೈವಧರ್ಮವಂತೂ ಆಳುಪರ ಧರ್ಮವಾಗಿದ್ದು, ಇದು ಕ್ರಿಸ್ತಪೂರ್ವದಲ್ಲಿಯೇ ಇಲ್ಲಿಗೆ ಬಂದು ನೆಲೆಸಿರಬೇಕು ಎಂಬ ವಾದವಿದೆ. ಜೊತೆಗೆ, ಗಾಣಪತ್ಯ, ಪಾಶುಪತ, ಭಾಗವತ, ಮಾಧ್ವ, ಕ್ರೈಸ್ತ, ಇಸ್ಲಾಂ ಮತಗಳೂ ತುಳುನಾಡಿನಲ್ಲಿ ಆಶ್ರಯ ಪಡೆದವು, ಇಲ್ಲಿನ ಮಣ್ಣಿನ ಸಾರವನ್ನು ಹೀರಿಕೊಂಡು ಸಮೃದ್ಧವಾಗಿ ಬೆಳೆದವು.
ದಕ್ಷಿಣ ಕನ್ನಡದಲ್ಲಿರುವ ವಿವಿಧ ದರ್ಗಾಗಳಲ್ಲಿ, ಭೂತಾರಾಧನೆಗಳಲ್ಲಿ, ದೇವಸ್ಥಾನಗಳಲ್ಲಿ ಸಮನ್ವಯ ಸಂಸ್ಕೃತಿಯ ತಳಹದಿಯನ್ನು ಕಾಣಬಹುದು. ಮೂಲ್ಕಿ ಬಳಿಯ ಬಪ್ಪನಾಡು ದೇವಸ್ಥಾನವನ್ನು ಕಟ್ಟಿಸಿದವನು ಬಪ್ಪ ಬ್ಯಾರಿಯೆಂಬ ಮುಸ್ಲಿಂ ವ್ಯಾಪಾರಿ. ಈ ದೇವಸ್ಥಾನದ ವಾರ್ಷಿಕ ಪೂಜೆ ಆರಂಭಗೊಳ್ಳುವುದು ಬಪ್ಪ ಬ್ಯಾರಿಯ ಕುಟುಂಬದವರ ಅನುಮತಿಯ ನಂತರವೇ. ದಕ್ಷಿಣಕನ್ನಡದ ಎರಡು ಪ್ರಮುಖ ಭೂತಗಳಾದ ʼಆಲಿ ಚಾಮುಂಡಿʼ ಹಾಗೂ ʼಬೊಬ್ಬರ್ಯ ಭೂತʼ ಸಮನ್ವಯ ಸಂಸ್ಕೃತಿಯ ಪ್ರತೀಕಗಳು. ವಿದೇಶೀ ಮೂಲದ ʼಅರಬ್ಬೀ ಭೂತʼ, ʼಚೀನೀ ಭೂತʼಗಳೂ ದೈವಾರಾಧನಾ ಪ್ರಸ್ಥಾನದ ಕಕ್ಷೆಯೊಳಗೇ ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸೂಫಿ ಪರಂಪರೆಯಲ್ಲಿ ಉಳ್ಳಾಲದ ಮದನಿ ದರ್ಗಾ, ಮಂಗಳೂರಿನಲ್ಲಿರುವ ಸೈದಾನಿ ಬೇಬಿ ದರ್ಗಾ ಪ್ರಮುಖ. ಇಲ್ಲಿನ ದರ್ಗಾಗಳ ಉರೂಸಿನಲ್ಲಿಯಾಗಲೀ, ಕಾರ್ಕಳ ಅತ್ತೂರಿನ ಇಗರ್ಜಿಯ ಸಾಂತ್ ಮಾರಿಯಲ್ಲಿಯಾಗಲೀ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವವರು ಹಿಂದೂಗಳು!
ತುಳುನಾಡು ಭಾಷೆಯ ವಿಷಯದಲ್ಲಿಯೂ ಬಹುತ್ವದ ಮತ್ತು ಸಮನ್ವಯ ಸಂಸ್ಕೃತಿಯ ನೆಲ. ಬಹುಭಾಷೆಯ ಈ ಪ್ರದೇಶದ ಉದ್ದಗಲ ಸಂಚರಿಸಿದರೆ ತುಳು, ಕನ್ನಡ, ಕೊಂಕಣಿ, ಮಲೆಯಾಳ, ಮರಾಠಿ, ತಮಿಳು, ತೆಲುಗು, ಉರ್ದು (ಹಿಂದೂಸ್ಥಾನೀ), ಗುಜರಾಥಿ ಮೊದಲಾದ ಭಾಷೆಗಳ ಜತೆಯಲ್ಲಿ, ಕುಂದಾಪುರ ಭಾಗದ ಕುಂದಗನ್ನಡ, ಸುಳ್ಯ ಭಾಗದ ಗೌಡ ಜನಾಂಗ ಹೆಚ್ಚಾಗಿ ಮಾತನಾಡುವ ಅರೆಗನ್ನಡ, ಹವ್ಯಕರ ಹವ್ಯಕ ಕನ್ನಡ, ಶಿವಳ್ಳಿ ಬ್ರಾಹ್ಮಣರ ಶಿವಳ್ಳಿ ತುಳು, ತುಳುವಿನಲ್ಲಿಯೂ ಉಡುಪಿ ಭಾಗದ ತುಳು, ಮಂಗಳೂರು ತುಳು, ಪುತ್ತೂರು ತುಳು ಹೀಗೆ ಅಸಂಖ್ಯ ಭಾಷಾ ವೈವಿಧ್ಯಗಳು ನಿಮ್ಮ ಕಿವಿಗೆ ಬೀಳದಿರಲಾರದು. ಇಲ್ಲಿ ಅಸಂಖ್ಯ ಭಾಷೆಗಳು ಪರಸ್ಪರ ಗೌರವ ಮತ್ತು ಸಹಿಷ್ಣುತೆಯ ಜತೆಗೆ, ಜತೆ ಜತೆಯಾಗಿ ಬದುಕುತ್ತವೆ, ಜತೆಜತೆಯಾಗಿ ಸಂವಹನ ನಡೆಸುತ್ತಿರುತ್ತವೆ.
ದಕ್ಷಿಣ ಕನ್ನಡ ಜಿಲ್ಲೆಯ ಒಂದು ಗಡಿ ಕಡಲಲ್ಲವೇ? ಸಹಜವಾಗಿಯೇ ಇಲ್ಲಿನ ಜನ ಸಾಹಸಿಗಳು, ಹಾಗೆಯೇ ಉದ್ಯಮಶೀಲರು. ಇಲ್ಲಿನ ಸಾಹಸಿಗಳು ಬೊಂಬಾಯಿಯೊಂದಿಗೆ ರಸ್ತೆ ಸಂಪರ್ಕ ಇಲ್ಲದ ಕಾಲದಲ್ಲಿಯೇ ಕಡವು ದಾಟಿ, ದೋಣಿ ಹತ್ತಿ, ಪತ್ತೆಮಾರಿಯಲ್ಲಿ ಸಾಗಿ, ಹಡಗು ಹಿಡಿದು ಬೊಂಬಾಯಿ ತಲಪಿ, ಆ ಬಳಿಕ ಕಡಲಾಚೆಯ ದುಬಾಯಿಗೂ ಹಾರಿ ರಕ್ತ, ಬೆವರು ಹರಿಸಿ, ಶ್ರಮಪಟ್ಟು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಜತೆಗೆ, ತಾವು ದುಡಿದು ಸಂಪಾದಿಸಿದ ಹಣದಲ್ಲಿ ಊರನ್ನೂ ಉದ್ಧಾರ ಮಾಡಿದವರು.
ಇಲ್ಲಿನ ಜನರ ಉದ್ಯಮಶೀಲತೆಗೆ ಇಲ್ಲಿ ಹುಟ್ಟಿಕೊಂಡ ಬ್ಯಾಂಕುಗಳೇ ಸಾಕ್ಷಿ. ಈ ಜಿಲ್ಲೆ ಸುಮಾರು 21 ಬ್ಯಾಂಕುಗಳಿಗೆ ಜನ್ಮ ನೀಡಿದೆ. ಕಾರ್ಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ದೇಶದಲ್ಲಿಯೇ ಉನ್ನತ ಸ್ಥಾನ ಗಳಿಸಿದವು. ಜೊತೆಗೆ ಬೀಡಿ ಉದ್ಯಮ, ಗೇರು ಬೀಜ ಕಾರ್ಖಾನೆ, ಹೆಂಚಿನ ಕಾರ್ಖಾನೆಗಳು, ಕೈಮಗ್ಗ, ರಬ್ಬರ್ ಕೋಕೋ ಬೆಳೆ ಸಂಬಂಧಿತ ಉದ್ಯಮಗಳು ಜಿಲ್ಲೆಯ ಲಕ್ಷಾಂತರ ಮಂದಿಯ ಬದುಕನ್ನು ಹಸನುಗೊಳಿಸಿದವು. ಉಡುಪಿ ಹೊಟೇಲುಗಳಂತೂ ʼವಿಶ್ವಪ್ರಸಿದ್ಧʼ.

ವೈದ್ಯಕೀಯ ಕ್ಷೇತ್ರಕ್ಕೆ ಬಂದರೆ, ಇಲ್ಲಿನ ಮಣಿಪಾಲದ ಆಸ್ಪತ್ರೆಗಳ ಬಗ್ಗೆ, ಆ ಬಳಿಕ ಮಣಿಪಾಲದ ಆಸ್ಪತ್ರೆಗಳಿಗೆ ಪೈಪೋಟಿ ನೀಡುವ ಹಾಗೆ ಬೆಳೆದ ಇತರ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಬಗ್ಗೆ ಕೇಳದವರಾರು? ಇನ್ನು ಕ್ರೈಸ್ತ ಮಿಶನರಿಗಳ ಕಾರಣವಾಗಿ ಬಲುಬೇಗನೇ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡ ಕರಾವಳಿ ʼಶಿಕ್ಷಣ ಕಾಶಿʼ ಎಂದೇ ಎನಿಸಿಕೊಂಡುಬಿಟ್ಟಿದೆ. ಇಲ್ಲಿ ಹೊಸತಲೆಮಾರಿನ ನೂರಕ್ಕೆ ನೂರು ಮಂದಿ ಅಕ್ಷರಸ್ಥರು. ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶಗಳು ಹೊರಬಿದ್ದಾಗ ಈ ಜಿಲ್ಲೆಯದು ರಾಜ್ಯದಲ್ಲಿಯೇ ಪ್ರಥಮ ಸ್ಥಾನ.
ಹಾಗಿದ್ದ ಕರಾವಳಿ ಹೀಗಾದುದು ಹೇಗೆ?!
ಇಂತಹ ವೈವಿಧ್ಯ, ವೈಶಿಷ್ಟ್ಯಗಳೊಂದಿಗೆ ಸಮರಸ ಮನೋವೃತ್ತಿಗೆ ಹೆಸರಾದ ನೆಲ, ಶತ ಶತಮಾನಗಳಿಂದ ಎಲ್ಲ ಸಮುದಾಯಗಳ ಜನರು ಶ್ರಮಪಟ್ಟು ದುಡಿದು ಕಟ್ಟಿದ ತುಳುನಾಡು, ಕೋಮು ದೌರ್ಜನ್ಯ, ಕೋಮು ಗಲಭೆಗಳ ಕಾರಣಕ್ಕೆ ಜಗತ್ತಿನಲ್ಲಿ ಸುದ್ದಿಯಾಗುವಂತಾದುದು ಹೇಗೆ?! ವೈಯಕ್ತಿಕ ದ್ವೇಷಗಳೂ ಕೋಮು ಬಣ್ಣ ಪಡೆದು ಊರು ಸುಡುವಂತಾದುದು ಹೇಗೆ?!
ಸಣ್ಣ ಮಟ್ಟಿನ ಮತೀಯ ತಿಕ್ಕಾಟಗಳು ಯಾವ ಕಾಲದಲ್ಲೂ ಹೊಸ ವಿಚಾರವಲ್ಲ. ವಿಜಯನಗರ ಅರಸರ ಕಾಲ ಇರಬಹುದು, ಬ್ರಿಟಿಷ್ ಕಾಲವಿರಬಹುದು, ಇದೇ ಭಾಗದಲ್ಲಿ ಅಂತಹ ಒಂದಲ್ಲ ಒಂದು ಸಂಘರ್ಷಗಳು ನಡೆದ ಉದಾಹರಣೆ ಇತಿಹಾಸದಲ್ಲಿ ಉಲ್ಲೇಖವಾಗಿವೆ. ಇತ್ತೀಚಿನ ಕಾಲಕ್ಕೆ ಬಂದರೂ ಈ ಭಾಗದಲ್ಲಿ 1968 ರಲ್ಲಿ ಕೋಮು ಗಲಭೆಗೆ ಗೋಲಿಬಾರ್ ನಡೆದು ಇಬ್ಬರು ಜೀವ ಕಳೆದುಕೊಂಡ ಉದಾಹರಣೆ ಇದೆ. ಆದರೆ ಕುಪ್ರಸಿದ್ಧ ರಥಯಾತ್ರೆ ಮತ್ತು ಜಾಗತೀಕರಣದ ಬಳಿಕದ ಬೆಳವಣಿಗೆಗಳು ಸಾಂಸ್ಕೃತಿಕ ಫ್ಯಾಸಿಸಂ ಮತ್ತು ರಾಜಕೀಯ ಫ್ಯಾಸಿಸಂ ಗೆ ದಾರಿಮಾಡಿಕೊಟ್ಟು ತುಳುನಾಡಿನ ಚಹರೆಯನ್ನೇ ಬದಲಾಯಿಸಿಬಿಟ್ಟ ಸ್ವರೂಪ ಮತ್ತು ವೇಗ ಆಘಾತಕಾರಿ.
ಇದರ ಪರಿಣಾಮ, ಕಾಲಾಂತರದಿಂದ ಜತೆಯಾಗಿ ಬದುಕಿದ ಸಮುದಾಯಗಳು ಪರಸ್ಪರ ಅನುಮಾನದಿಂದ ನೋಡುವಂತಹ, ದ್ವೇಷಿಸುವಂತಹ, ಕೊಲ್ಲುವ ಮಟ್ಟಕ್ಕೂ ಇಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿವೆ. ʼಕಾರಣವೇ ಇಲ್ಲದೆ ಕೊಲ್ಲುವುದನ್ನು ನೀವು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೋಡಬಹುದುʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು. ಇಲ್ಲಿ ಕೊಲ್ಲುವವನಿಗೆ ಯಾಕೆ ಕೊಲ್ಲುತ್ತಿದ್ದೇನೆ ಎಂಬುದು ಗೊತ್ತಿಲ್ಲ, ಕೊಲ್ಲಲ್ಪಡುವವನಿಗೆ ತನ್ನನ್ನು ಯಾಕೆ ಕೊಲ್ಲುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ, ಕೊಲೆಗಾರನಿಗೂ ಕೊಲ್ಲಲ್ಪಡುವವನಿಗೂ ಪರಸ್ಪರ ಯಾವ ಸಂಬಂಧವೂ, ಪರಿಚಯವೂ, ದ್ವೇಷವೂ ಇಲ್ಲ. ಮತಾಂಧರಿಗೆ ʼಒಂದಕ್ಕೆ ಒಂದುʼ ಆದರಾಯಿತು. ಹೀಗೆ ಬುದ್ಧಿವಂತರ ಜಿಲ್ಲೆಯ ಜನ ವಿವೇಕವನ್ನು ಕಳೆದುಕೊಂಡು ಮೃಗಗಳನ್ನೂ ನಾಚಿಸುವ ಹಾಗೆ ಬದಲಾದುದು ಹೇಗೆ? ಇಲ್ಲಿ ಬಹುತೇಕ ಎರಡು ಮತಧರ್ಮಗಳಿಗೆ ಸೇರಿದ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಬಡವರು. ಇದಕ್ಕಿಂತಲೂ ಮುಖ್ಯವಾಗಿ, ಸತ್ತ ಮುಸ್ಲಿಂ ವ್ಯಕ್ತಿ ಹಿಂದೂಗಳೊಂದಿಗೆ ಅನ್ಯೋನ್ಯವಾಗಿದ್ದವನು, ಸತ್ತ ಹಿಂದೂ ವ್ಯಕ್ತಿ ಮುಸಲ್ಮಾನರ ಒಳಿತಿಗಾಗಿ ಕೆಲಸ ಮಾಡಿದವನು!
ಇಲ್ಲಿನ ಗತಕಾಲದ ಸೌಹಾರ್ದ ಪರಂಪರೆ, ಬದಲಾದ ಸ್ಥಿತಿಗಳ ಬಗ್ಗೆ ಅನೇಕ ವ್ಯಾಖ್ಯಾನಗಳನ್ನು ಮಾಡಬಹುದು, ಅನೇಕ ವಿಶ್ಲೇಷಣೆಗಳನ್ನು ಮುಂದಿಡಬಹುದು. ಆದರೆ, ಈ ಮಿತಿಗಳನ್ನು ದಾಟಿ ಈ ದಾರುಣ ಘಟನೆಗಳ ಸಂತ್ರಸ್ತರನ್ನು ಮಾತನಾಡಿಸಿ ಅವರ ಎದೆಯಾಳದ ಮಾತುಗಳಿಗೆ ಕಿವಿಕೊಟ್ಟರೆ ಆಗ ತಿಳಿಯುವ ಸತ್ಯವೇ ಭಿನ್ನ ಬಗೆಯದು ಮತ್ತು ಅದು ಅತ್ಯಂತ ಪ್ರಾಮಾಣಿಕವಾದುದು, ಮಾನವೀಯವಾದುದು.
ʼಕರಾವಳಿಯ ರಕ್ತ- ಕಣ್ಣೀರುʼ
ಈ ಸತ್ಯವನ್ನು ಅರಿಯಬೇಕಾದರೆ ನೀವು, ನಮ್ಮ ನಡುವಿನ ಸೂಕ್ಷ್ಮ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿಯವರ ʼಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು, ಕರಾವಳಿಯ ರಕ್ತ-ಕಣ್ಣೀರುʼ ಕೃತಿ ಓದಬೇಕು.
ಇಲ್ಲಿ ಇರ್ಷಾದ್ ಅವರು ಕರಾವಳಿಯ ಕೋಮು ದ್ವೇಷಕ್ಕೆ ಬಲಿಯಾದ 13 ಅಮಾಯಕರ ಕುಟುಂಬಗಳ ಮನೆಯವರನ್ನು ಸ್ವತಃ ಮಾತನಾಡಿಸಿ, ಅವನ್ನು ಯಾವ ಉತ್ಪ್ರೇಕ್ಷೆಯೂ ಇಲ್ಲದೆ ದಾಖಲಿಸಿದ್ದಾರೆ. ಇಲ್ಲಿ ಸಂತ್ರಸ್ತರಾದವರು ಕೇವಲ ಒಂದೇ ಮತಧರ್ಮದವರಲ್ಲ. ಮಹಮ್ಮದ್ ನಾಸಿರ್, ಹರೀಶ್ ಪೂಜಾರಿ, ರಾಜೇಶ್ ಕೋಟ್ಯಾನ್, ಸೈಫಾನ್, ಅಶ್ರಫ್ ಕಲಾಯಿ, ಶರತ್ ಮಡಿವಾಳ, ದೀಪಕ್, ಅಬ್ದುಲ್ ಬಶೀರ್, ಮಸೂದ್, ಪ್ರವೀಣ್ ನೆಟ್ಟಾರು, ಫಾಝಿಲ್, ಅಶ್ರಫ್, ಅಬ್ದುಲ್ ರೆಹಮಾನ್, ಸಮೀರ್, ಹೀಗೆ ಎರಡೂ ಧರ್ಮದ ಬಲಿಪಶುಗಳ ಕತೆಯಿದೆ. ಇಲ್ಲಿ ದಾಖಲಾಗಿರುವ 13 ಕೋಮು ಹತ್ಯೆ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಮೂವರು ಮಾತ್ರ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳ ಸದಸ್ಯರು. ಉಳಿದವರೆಲ್ಲ ತಮ್ಮ ಪಾಡಿಗೆ ತಾವು ದುಡಿದು ತಿನ್ನುವ ವರ್ಗಕ್ಕೆ ಸೇರಿದವರು, ಜಾತಿ ಧರ್ಮಗಳ ಗಡಿ ದಾಟಿ ಸಾಮಾಜಿಕ ಕಾಳಜಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರು.

ಈ ಕೃತಿಯ ಲೇಖನಗಳು ಯಾವುದೇ ತೀರ್ಪುಗಳನ್ನು ಕೊಡುವುದಿಲ್ಲ. ಸತ್ಯವನ್ನು ತಣ್ಣಗೆ ನಿಮ್ಮ ಮುಂದಿಡುವುದಷ್ಟೇ ಈ ಲೇಖಕರ ಕಾಳಜಿ. ಆದರೆ, ಓದುತ್ತಾ ಓದುತ್ತಾ ಓದುಗರೇ ಒಂದು ತೀರ್ಪಿಗೆ ಬಂದುಬಿಡುವಷ್ಟು ಸಶಕ್ತವಾಗಿದೆ ಇಲ್ಲಿನ ನಿರೂಪಣಾ ಶೈಲಿ. ಕಳೆದುಕೊಂಡವರ ನೋವನ್ನಷ್ಟೇ ಅಲ್ಲ, ಬದುಕಿರುವವರ ಧೈರ್ಯ, ಅನಿವಾರ್ಯ ಸ್ಥಿತಿಗೆ ಹೊಂದಿಕೊಳ್ಳುವ ಅವರ ಮನೋಶಕ್ತಿಯ ಬಗೆಗೂ ಇವು ಹೇಳುತ್ತವೆ. ತಮ್ಮವರನ್ನೇ ಕಳೆದುಕೊಂಡ ಮೇಲೂ ದ್ವೇಷ ಬೇಡ, ಪ್ರತೀಕಾರ ಬೇಡ, ದ್ವೇಷಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು ಎನ್ನುವ ಮಾನವೀಯ ಮನಸುಗಳು, ತುಳುನಾಡಿನ ಸೌಹಾರ್ದತೆಯ ಪರಂಪರೆಯ ಕೊಂಡಿಗಳು ಇನ್ನೂ ಜೀವಂತ ಇವೆ ಎನ್ನುವ ಭರವಸೆಯನ್ನು ಹುಟ್ಟಿಸುತ್ತವೆ.
“ಕರಾವಳಿ ಭಾಗದಲ್ಲಿ ನಡೆಯುವ ಕೋಮು ಸಂಘರ್ಷ ಹಲವು ಆಯಾಮಗಳನ್ನು ಹೊಂದಿದೆ. ಧರ್ಮಾಂಧತೆ, ವ್ಯಾವಹಾರಿಕ ದ್ವೇಷ ಮತ್ತು ಮತಬ್ಯಾಂಕ್ ರಾಜಕೀಯ ಈ ಸಂಘರ್ಷದ ಮೂಲದಲ್ಲಿರುವ ಪ್ರಮುಖ ಮೂರು ಅಂಶಗಳು. ಪರಿಣಾಮವಾಗಿ, ಕೋಮು ಧ್ರುವೀಕರಣದ ಮೂಲಕ ಮತೀಯ ಸಂಘಟನೆಗಳು ಜನರಲ್ಲಿ ದ್ವೇಷ ಮತ್ತು ಅಪನಂಬಿಕೆಯನ್ನು ಬಿತ್ತುವಲ್ಲಿ ಯಶಸ್ವಿಯಾಗಿವೆ. ಇದರ ಫಲವಾಗಿ ಕರಾವಳಿ ಪ್ರದೇಶವು ಕೋಮುವಾದಿಗಳ ಪಾಲಿಗೆ ಬಹುದೊಡ್ಡ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಜನರ ನಡುವಿನ ಐಕ್ಯತೆ ಮತ್ತು ಸೌಹಾರ್ದತೆಯನ್ನು ಭಂಗಗೊಳಿಸಿ ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಈ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ, ಇದು ಕರಾವಳಿಯ ಶಾಂತಿ ಮತ್ತು ಪ್ರಗತಿಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ”. ಎನ್ನುತ್ತಾರೆ ಲೇಖಕ ಇರ್ಷಾದ್. ನಿಜಕ್ಕೂ ಚಿಂತನೆಗಳಿಗೆ ಹಚ್ಚುವ ಮಾತ್ರವಲ್ಲ, ಚಿಂತೆಗೂ ಕಾರಣವಾಗುವ ವಿಚಾರಗಳಿವು.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು
ಇದನ್ನೂ ಓದಿ- “ಸಿದ್ಧಾ”ರ್ಥನ ವಿದಾಯ


