ತಮ್ಮ ಸಿದ್ಧಾಂತ ಪೋಷಣೆಗೆ ಯಾವ ಮಟ್ಟಕ್ಕೂ ಇಳಿಯುವ ಮತ್ತು ಜಾತೀಯತೆಯನ್ನು ಪೋಷಿಸುವ ಜೀವ ವಿರೋಧಿ ನಿಲುವು ಯಾವತ್ತಿದ್ದರೂ ಒಪ್ಪತಕ್ಕದ್ದಲ್ಲ ಮತ್ತು ದೇಶದ ಔನ್ಯತ್ಯಕ್ಕಿದು ಸದಾ ತೊಡಕೇ. ಬ್ರಿಟಿಷ್ ಸರಕಾರದಿಂದ ಸಾರ್ವತ್ರೀಕರಣಗೊಂಡ ವಿದ್ಯಾಕ್ರಾಂತಿಯಿಂದ ಶೂದ್ರ ಸಮುದಾಯ ನಿಧಾನವಾದರೂ ಸ್ವಾಭಿಮಾನದ ಬದುಕಿನೆಡೆ ಸಾಗುತ್ತಿದೆ. ಆದರೆ ಇಂದಿಗೂ ಜಿಗುಟು ಧರ್ಮ ಸಿದ್ಧಾಂತದ ಅಮಲು ಹಚ್ಚಿ ಶೂದ್ರ ಸಮುದಾಯವನ್ನು ಹಿಂದಿನ ನರಕ ಕೂಪಕ್ಕೆ ತಳ್ಳುವ ಮೊದಲು ಸಂಬಂಧಿಸಿದವರೊಮ್ಮೆ ಈಗ ಕಿಚ್ಚು ಹಚ್ಚಿಸಿದ ಈ ಶಂಕರ ಮಧ್ವ ಜಟಾಪಟಿಯ ಒಳ ಹೂರಣವನ್ನು ಅವಲೋಕಿಸಿ ನೋಡುವುದು ಉತ್ತಮ- ಶಂಕರ್ ಸೂರ್ನಳ್ಳಿ, ಲೇಖಕರು.
ಮೂಲತಃ ಈ ಜಟಾಪಟಿ ಮತ್ತು ಶಂಕರ ಎನ್ನುವುದು ವಿರುದ್ಧಾರ್ಥಕ ಪದಗಳು. ಶಂ-ಕರ ಎಂದರೆ ಸಂತೋಷವನ್ನು ಉಂಟು ಮಾಡುವವನು ಎಂದರ್ಥವಾದರೆ ಈ ಜಟಾಪಟಿ ಅಥವಾ ಲಡಾಯಿ ಯಾವತ್ತಿಗೂ ಸಂತೋಷದಾಯಕವಾಗಿರದು.
ಇತ್ತೀಚೆಗೆ ಉಡುಪಿಯಲ್ಲಿ ಸಣ್ಣ ಪ್ರಾಯದ ಮಕ್ಕಳಿಬ್ಬರು ನೀಡಿದ ಕಾರ್ಯಕ್ರಮವೊಂದರಲ್ಲಿ ಮಧ್ವರ ನೇರ ಶಿಷ್ಯ ನಾರಾಯಣಾಚಾರ್ಯ ವಿರಚಿತ ಮಣಿಮಂಜರಿಗ್ರಂಥದ ವಿವಾದಿತ ವಿಚಾರಗಳ ಹಿನ್ನೆಲೆಯಲ್ಲಿ ಅದರಲ್ಲಿ ಶಂಕರಾಚಾರ್ಯರ ನಿಂದನೆಯಿದೆ, ಅದು ಅಕ್ಷಮ್ಯ ಎಂದು ಭಾರಿ ಚರ್ಚೆಗೆ ಕಾರಣವಾಗಿತ್ತು.
ಮೇಲ್ನೋಟಕ್ಕಿದು ಮಾಧ್ವ ಮತ್ತು ಶಂಕರಾನುಯಾಯಿ (ಮಾಧ್ವ ಸ್ಮಾರ್ತ) ಗಳ ನಡುವಿನ ಜಟಾಪಟಿಯಂತೆ ತೋರಿದರೂ ಸಹ ಇವರುಗಳು ತಮ್ಮೀ ಚರ್ಚೆಗಳ / ನಿಂದನೆಗಳ ನಡುವೆ ಮುಖ್ಯವಾಗಿ ಬೌದ್ಧರು, ಎಡಪಂಥೀಯರು, ಜಿಹಾದಿಗಳು ಅರ್ಥಾತ್ ಮುಸಲ್ಮಾನರುಗಳನ್ನೂ ಎಳೆ ತರುತ್ತಿರುವುದರಿಂದ (ಜಾಲತಾಣಗಳಲ್ಲಿ ಅದರ ಕಾಮೆಂಟ್ ಗಳಲ್ಲಿ ಬರುತ್ತಿರುವ ವಾದ ವಿವಾದಗಳನ್ನು ಗಮನಿಸಿ. ಉದಾ ಜೆಹಾದಿಗಳ ತರಹ ನಿಮ್ಮವರ ನಡವಳಿಕೆಯಿದೆ, ಶಂಕರರು ಬರದಿದ್ದರೆ ಅನ್ಯ ಧರ್ಮಿಯರು ನಿಮ್ಮನ್ನೆಲ್ಲ ಎಳಕೊಂಡು ಹೋಗುತ್ತಿದ್ದರು ಇತ್ಯಾದಿ ಇತ್ಯಾದಿ) ಈ ಚರ್ಚೆ ಮತ್ತಷ್ಟು ವಿಸ್ತಾರ ಗೊಳ್ಳಲು ಕಾರಣವಾಗಿದೆ

ಇನ್ನೂ ಮುಖ್ಯವಾಗಿ ಇದೀಗ ಯಾರ ಕುರಿತಂತೆ ಚರ್ಚೆಗಳು ನಡೆಯುತ್ತಿವೆಯೋ ಅವರುಗಳು ಅವರು ಜೀವಿಸಿದ್ದ ಕಾಲದಲ್ಲಿ ತಮ್ಮ ಜಾತಿ ಧರ್ಮ ಮತ್ತು ಧರ್ಮಾಧಿಕಾರದ ಉನ್ನತ ಸ್ಥಾನಮಾನಗಳ ಕಾರಣಕ್ಕೆ ಸಮಾಜದಲ್ಲಿ ಪ್ರಭುತ್ವಕ್ಕೇ ಆದೇಶಿಸುವಂತಹ ಪ್ರಭಾವಿಗಳಾದ್ದಿದ್ದರ ಕಾರಣಕ್ಕೆ ಇವರೆಲ್ಲರುಗಳ ಕಾರ್ಯ ಚಟುವಟಿಕೆಗಳ ಪ್ರಭಾವವು ನಿಸ್ಸಂಶಯವಾಗಿ ಇಡೀ ಸಮಾಜದ ಮೇಲೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ಇಂತಹ ಚರ್ಚೆಗಳು ಕೇವಲ ಒಂದು ವರ್ಗಕ್ಕಷ್ಟೇ ಸೀಮಿತವಾಗಿರದು.
ಶಂಕರ ನಿಂದನೆಯ ಹೆಸರಲ್ಲಿ ಬಾಲಕಿಯರ ಮೇಲಿನ ಕೋಪ ಆರೋಪಗಳು ಇಲ್ಲಿ ಕೇವಲ ಒಂದು ನೆಪವಷ್ಟೇ. ಯಾಕೆಂದರೆ ಧರ್ಮ, ಸಿದ್ಧಾಂತ, ಪ್ರತಿ ಸಿದ್ಧಾಂತ, ವಾದ ವಿವಾದ ಇತ್ಯಾದಿಗಳ ಅರಿವಿರದ ಈ ಬಾಲಕಿಯರು ಬೇಕೆಂದೇ ಉರುದ್ದೇಶಪೂರಿತವಾಗಿ ಇಲ್ಲಿ ಕಾರ್ಯಕ್ರಮ ನಡೆಸಿದ್ದರೆಂಬುವುದನ್ನು ನಂಬಲಾಗದು. ಯಾಕೆಂದರೆ ಮಾಧ್ವರ ಈ ಮಣಿಮಂಜರಿಯ ಪ್ರವಚನ ಮಧ್ವ ಮಠಗಳಲ್ಲಿ ಮುಂಚಿನಿಂದಲೂ ನಿರಂತರವಾಗಿ ನಡೆದು ಬರುತ್ತಿರುವುದು ರಹಸ್ಯವೇನಲ್ಲ
ಅಸಲಿಗೆ ಶಂಕರಾಚಾರ್ಯರು ಜನಿಸಿದ ಶತಮಾನಗಳ ಬಳಿಕ ಮಧ್ವಾಚಾರ್ಯರು ಜನಿಸಿದ್ದು. ಹಿಂದೆ ವೈದಿಕ ಧರ್ಮಗಳ ನೆಲೆಯಲ್ಲಿ ಆಯಾ ಪಂಥಗಳನ್ನು ಕಟ್ಟಿಕೊಂಡವರು ತಮ್ಮ ತತ್ವ ಸಿದ್ಧಾಂತಗಳೇ ಪರಮ ಮತ್ತು ತಮ್ಮದೇ ಶ್ರೇಷ್ಠವೆಂಬ ಚಿಂತನೆಯೊಂದಿಗೆ ಪ್ರಭುತ್ವದ ಪೋಷಕತ್ವದಡಿಯಲ್ಲಿ ನೆಲೆಯೂರಲು ಯತ್ನಿಸುತ್ತಿದ್ದರೇ ವಿನಃ ಇವತ್ತು ಕಾಣಸಿಗುವ ವೈದಿಕ ಅವೈದಿಕರೆಲ್ಲರನ್ನೂ ಕಲೆಹಾಕಿದಂತಹ ಸಂಯುಕ್ತ ಹಿಂದೂ ಧರ್ಮ ಅಂದು ಇನ್ನೂ ರೂಪುಗೊಂಡಿದ್ದಿರಲಿಲ್ಲ. ಪ್ರಭುತ್ವ ಮನ್ನಣೆ ನೀಡುವ ಮತ, ಧರ್ಮ, ಸಿದ್ಧಾಂತಕ್ಕನುಗುಣವಾಗಿ ಜನರ ನಂಬಿಕೆಗಳೂ ಬದಲಾಗಬಹುದಿತ್ತು ಇವುಗಳಿಗೆ ಜೋತು ಬೀಳದೆ ಯಾವ ಮತ ಧರ್ಮಗಳ ಹಂಗೂ ಇಲ್ಲದೆ ತಮ್ಮಷ್ಟಕ್ಕೆ ಬದುಕುವವರೂ ಸಹ ಸಾಕಷ್ಟಿದ್ದರು. ಇಂತಹ ಕಾಲಘಟ್ಟದಲ್ಲಿ ತಮ್ಮ ಮತ ಸಿದ್ಧಾಂತಗಳೇ ಶ್ರೇಷ್ಠ ಅಥವಾ ತಮ್ಮ ಸಿದ್ಧಾಂತದ ಶ್ರೇಷ್ಠತೆಯನ್ನು ತೋರಿಸಿಕೊಳ್ಳಲು ಪರಮತದ ಅಥವಾ ಅನ್ಯ ಮತ ಸಿದ್ಧಾಂತಿಗಳ ಅವಹೇಳನ ಇವೆಲ್ಲವೂ ತೀರಾ ಸಹಜವಿತ್ತು. ಇಂತಹ ತಾಕಲಾಟಗಳ ಪ್ರತಿಫಲನವೇ ಮಾಧ್ವವಿಜಯ, ಶಂಕರವಿಜಯಗಳಂತಹ ಗ್ರಂಥಗಳು.
ಇಂತಹ ಸೈದ್ಧಾಂತಿಕ ಜಟಾಪಟಿಗಳು ಶೈವ- ವೈಷ್ಣವ, ಮಾಧ್ವ- ಸ್ಮಾರ್ತ- ಬೌದ್ಧ ಹೆಸರಲ್ಲಿ ಅದೂ ತೀರಾ ಅತಿರೇಕವೆನಿಸುವ ಮಟ್ಟದಲ್ಲಿ, ನಡೆದಿರುವ ಬಗ್ಗೆ ಇತಿಹಾಸದಲ್ಲೇ ಸಾಕಷ್ಟು ದಾಖಲೆಗಳಿವೆ. ಸುಮಾರು ಇಪ್ಪತ್ತು ವರ್ಷದ ಹಿಂದೆ (2004ರ ಕೊನೆಯಲ್ಲಿ) ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಕಾರ್ಯಕ್ರಮದ ಹೆಸರು ‘ಶಾಂಕರ ಸಾಪ್ತಾಹ’. ಒಂದು ವಾರ ರಾಜ್ಯದ ಹಲವೆಡೆ ಆಯೋಜಿಸಲಾಗಿದ್ದ ಅದರ ಒಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರೂಪಕನಿಂದ ಹಿಡಿದು ಪ್ರತಿಯೊಬ್ಬರೂ ತಮ್ಮ ಮಾತನ್ನು ಆರಂಭಿಸಿದ್ದು ಮತ್ತು ಒತ್ತು ನೀಡಿದ್ದು ಬುದ್ಧನ ಜರೆಯುವಿಕೆಯಲ್ಲೇ. ಅದು ಎಷ್ಟು ಅತಿರೇಕಕ್ಕೆ ಹೋಗಿತ್ತೆಂದರೆ ಮುಖ್ಯ ಭಾಷಣಕಾರರಾಗಿ ಬಂದ ಮಹನೀಯರು ಅಸಮಾಧಾನದಿಂದ ಸರಿಯಾಗಿ ಮಾತನಾಡದೆ ನಿರ್ಗಮಿಸಿದರು. ಹಾಗಂತ ಅವರೂ ಬ್ರಾಹ್ಮಣರೇ. ಆದರೆ ಹಿಂದಿನವರ ಮಾತು ನಿಂದನೆಯಲ್ಲಿ ತೀರಾ ಅತಿರೇಕವಿತ್ತು. ನಂತರ ಎಲ್ಲಿಯೂ ಕೂಡ ಈ ಸಪ್ತಾಹ ಮುಂದುವರೆಯಲಿಲ್ಲ. ಕಾರಣ ನೆರೆ ರಾಜ್ಯದ ಜಯಲಲಿತಾ ಸರಕಾರ ಇದೇ ಸಿದ್ಧಾಂತಕ್ಕೆ ಸೇರಿದ್ದ ಕಂಚಿ ಶ್ರೀಗಳನ್ನು ಬಂಧಿಸಿತ್ತು.
ಮಾಧ್ವರು ಮಹಾಭಾರತ ಕಾಲದ ಮಣಿಮಂತನೆಂಬ ರಾಕ್ಷಸನೇ ಈ ಶಂಕರಾಚಾರ್ಯ ಎಂದರೆ ಅದೇ ಮಹಾಭಾರತದಲ್ಲಿ ಬೇಡ ವೇಷದ ಶಿವನೊಂದಿಗೆ ಯುದ್ಧದ ಸನ್ನಿವೇಶದಲ್ಲಿ ಅರ್ಜುನ ಕೊಂದ ಹಂದಿಯೇ ಈ ಮಧ್ವಾಚಾರ್ಯ ಎಂದು ತಮ್ಮ ಈಶಾನಸ್ತುತಿಯಲ್ಲಿ ಹೇಳುತ್ತಾರೆ. ಅದೇ ತ್ರಿಮತಾಚಾರ್ಯರಲ್ಲಿ ಮತ್ತೊಬ್ಬರಾದ ರಾಮಾನುಜಾಚಾರ್ಯರು ರಾವಣನಿಗಿಂತಲೂ ಪಾಪಿ ಎಂದೂ ದೂರುವರಿದ್ದಾರೆ. ಅಂದಹಾಗೆ, ಇವರೆಲ್ಲ ಮುಸಲ್ಮಾನರೋ, ಕ್ರಿಶ್ಚಿಯನ್ನರೊ, ಎಡಪಂಥೀಯರೊ, ನಾಸ್ತಿಕರೋ ಖಂಡಿತ ಅಲ್ಲ ಬದಲಿಗೆ ಸನಾತನವಾದಕ್ಕೆ ಹೆಗಲು ಕೊಟ್ಟಿದ್ದೇವೆ ಅನ್ನುವಂತವರೇ.
ತಮೇವ ಸಮಯಂ ದೈತ್ಯೋ ಮಣಿನಾಪ್ಯ ಜಾಯತ
ಮನೋರಥೇನ ಮಹತಾ ಬ್ರಾಹ್ಮಣ್ಯಾಮ್ ಜಾರತಾ: ಖಲಾತ್
ಅಂದರೆ ಮಣಿಮಂತನೆಂಬ ಅಸುರನು ಶಂಕರಾಚಾರ್ಯರಾಗಿ ಬ್ರಾಹ್ಮಣ ವಿಧವೆಗೆ ಯಾರಿಂದಲೋ ಹುಟ್ಟಿದರು ಎಂಬರ್ಥವಿಲ್ಲಿದೆ
ಉತ್ಪನ್ನ: ಸಂಕರಾಯಾತ್ಮಾಯಾಮ್ ಸರ್ವಕರ್ಮಾ ಬಹಿಷ್ಕೃತ:
ಇತ್ಯುಕ್ತ: ಸ್ವಜನೈರ್ಮತಾ ಸಂಕರೇತ್ಯಜುಹವ ತಮ್

ಅನೈತಿಕತೆಯ ಹುಟ್ಟಿನ ಕಾರಣಕ್ಕೆ ಸ್ವತಃ ಅವನ ತಾಯಿಯೇ ಅವನನ್ನು ಸಂಕರ (ಬೆರಕೆ) ಎಂದು ಕರೆದಳು ಮಣಿಮಂಜರಿಯಲ್ಲಿ ಬರುವ ಇದು ಎಷ್ಟೊಂದು ಅಸಹ್ಯಕರ ಎಂದರೆ ಶಂಕರಾಚಾರ್ಯರಲ್ಲದೇ ಅವರ ತಾಯಿಯನ್ನೂ ನಿಂದಿಸುವ ಈ ಕೀಳು ಮನಸ್ಥಿತಿ ಸೈದ್ಧಾಂತಿಕ ವಿರೋಧದ ಪರಾಕಾಷ್ಠೆಯನ್ನೇ ತೋರುತ್ತದೆ. ಅನ್ಯ ಮತೀಯರಿಂದ ನಾಸ್ತಿಕರಿಂದಲೂ ಇಂತಹದನ್ನು ನಿರೀಕ್ಷಿಸಲಾಗದು.
ಹರಿಕಥೆ ಹೇಳಿದ ಬಾಲಕಿಯರ ಕಥೆ ಬಿಡಿ ಹಿಂದಿನ ಬಿಜೆಪಿ ಸರಕಾರ ನೇಮಿಸಿದ ಪಠ್ಯ ಪುಸ್ತಕ ರಚನಾ ಸಮಿತಿ ಶಾಲಾ ಮಕ್ಕಳು ಓದುವ ಪಠ್ಯದಲ್ಲೂ ಶಂಕರಾಚಾರ್ಯರನ್ನು ಸಂಕರನೆಂದೇ ಪರೋಕ್ಷವಾಗಿ ಉಲ್ಲೇಖಿಸಿತ್ತು. ಅಂದ ಹಾಗೆ ಸಮಿತಿಯ ಅಧ್ಯಕ್ಷ ಮಧ್ವಮತೀಯನಾಗಿದ್ದ. ಸಂಬಂಧಿಸಿದವರು ತಿದ್ದುಪಡಿಗೆ ವಿನಂತಿಸಿದರೂ ವಿರೋಧಿಸಿದರೂ ಆತ ಅದಕ್ಕೆ ಕ್ಯಾರೇ ಅನ್ನಲಿಲ್ಲವಂತೆ. ಉಡುಪಿಯ ಅನಂತೇಶ್ವರ ದೇಗುಲದ ಅನಂತೇಶ್ವರನನ್ನು ಇಂದಿಗೂ ಹಲವಾರು ಅನಂತೇಶ್ವರ ಅನ್ನುವ ಬದಲು ಅನಂತಾಸನ(ವಿಷ್ಣು)ವೆಂದೇ ಕರೆಯುತ್ತಾರೆ ಶಿವನನ್ನು ಕೂಡ ರುದ್ರದೇವರೆನ್ನುವುದೇ ಹೆಚ್ಚು (ರುದ್ರ ಒಬ್ಬನಲ್ಲ ಏಕಾದಶ ರುದ್ರರಿದ್ದಾರೆ)
ಇವೆಲ್ಲ ನರ ಮನುಷ್ಯರ ಪಾಡಾಯಿತು. ಇನ್ನು ಈ ಸೈದ್ಧಾಂತಿಕ ದ್ವೇಷಿಗಳ ದ್ವೇಷ ದೇವರನ್ನೂ ಕೂಡ ಬಿಟ್ಟಿಲ್ಲವೆಂಬುದು ಅಷ್ಟೇ ಸತ್ಯ. ದೇವಾಲಯವೊಂದರ ಹಕ್ಕುದಾರಿಕೆಗೆ ಸಂಬಂಧಿಸಿದಂತೆ ಕೋರ್ಟ್ ವ್ಯಾಜ್ಯದಲ್ಲಿ ಶಿವನು ಹರಿಗಿಂತ ಏಳು ಹಂತದ ಕೆಳಗಿನ ದಾಸ. ಹರಿಯ ವಾಹನ ಗರುಡನಿಗೂ ಕಡಿಮೆ ಸ್ಥಾನ ಇವನದ್ದು (ಆಧಾರ- ಶ್ರೀ ಮ ಸು ಅಚ್ಯುತ ಶರ್ಮರ ಐತಿಹಾಸಿಕ ಗ್ರಂಥ) ಎಂದು ತಮ್ಮ ಶ್ರೇಷ್ಠತೆಯನ್ನು ಬಿಂಬಿಸಲು ಸ್ವಯಂ ದೇವರನ್ನೇ ತುಚ್ಛೀಕರಿಸಿ ಉಲ್ಲೇಖಿಸಿದ್ದರ ದಾಖಲೆಯಿದೆ.
ವಲಸಿಗರಾಗಿ ಬಂದ ಕಾರಣಕ್ಕೆ ಮೊದಲೇ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣರನ್ನು ಧರ್ಮ ಸುಭಿಕ್ಷೆಯ ನೆಪದಲ್ಲಿ ದಕ್ಷಿಣದ ಸ್ಥಳೀಯ ಅರಸರು ಉತ್ತರದ ಅಹಿಚ್ಛತ್ರದಿಂದ ಕರೆತಂದ ತರುವಾಯ ಅವರನ್ನು ಮೊದಲು ಕಾಡಿದ್ದೇ ಅವರ ಸಂಖ್ಯಾ ಕ್ಷೀಣತೆ. ಈ ಕಾರಣಕ್ಕೆ ತಮ್ಮ ಸಂಖ್ಯಾ ಬಲವರ್ಧನೆಗಾಗಿ ಕರಾವಳಿಯಲ್ಲಿ ಒಂದು ವರ್ಗ ಬಂಟ, ಮೊಗವೀರರನ್ನು ಅನಿವಾರ್ಯವಾಗಿ ಬ್ರಾಹ್ಮಣ ದೀಕ್ಷೆ ನೀಡಿ ಮತಾಂತರಿಸಿದರೆ ಮತ್ತೊಂದು ವರ್ಗ ಬಿಲ್ಲವ ದಲಿತರಿಗೆ ಗಾಳಹಾಕಿತು. ಅದೇ ರೀತಿ ಮತ್ತೊಂದೆಡೆ ರಾಮಾನುಜಾಚಾರ್ಯರು ಕೆಳವರ್ಗದವರನ್ನು ಮತಾಂತರಿಸಿ ಶ್ರೀವೈಷ್ಣವರನ್ನಾಗಿಸಿದರು. ಇವೆಲ್ಲ ಕಾಲದ ಅನಿವಾರ್ಯತೆಗಳೇ ವಿನಃ ಮನಸಾರೆ ನಡೆದಿರುವ ಪ್ರಕ್ರಿಯೆಗಳೇನಲ್ಲ. ಒಂದು ವೇಳೆ ಹಾಗೆ ಇದ್ದಿದ್ದರೆ ಇಂದಿನ ಪಂಕ್ತಿಭೇದ, ಮಡಿ ಮೈಲಿಗೆಗಳೆಲ್ಲ ಇವತ್ತಿಗೂ ಜೀವಂತವಿರುತ್ತಿರಲಿಲ್ಲ.
ಶಂಕರರ ಬ್ರಹ್ಮಸೂತ್ರ ಭಾಷ್ಯದಲ್ಲಿ ಅಪಶೂದ್ರಾಧಿಕರಣವೆಂಬ ಅಧ್ಯಾಯವೇ ಇದೆ. ಕಾದ ಸೀಸದ ಪ್ರಸ್ತಾಪ ಬರುವುದು ಇಲ್ಲೇ (ಗಾಂಧೀಜಿ ಗೀತೆಗೆ ಭಾಷ್ಯ ಬರೆಯುವಾಗ ಚಾತುರ್ವರ್ಣಮ್.. ಶ್ಲೋಕವನ್ನು ಬೇಕಂತಲೇ ವಿವರಿಸದೆ ಬಿಟ್ಟಿದ್ದರು) ಮಧ್ವರ ನಿತ್ಯನಾರಕಿ ಪದವಂತೂ ಭಾರೀ ಸುದ್ದಿ ಮಾಡಿತ್ತು.
ತಮ್ಮ ಸಿದ್ಧಾಂತ ಪೋಷಣೆಗೆ ಯಾವ ಮಟ್ಟಕ್ಕೂ ಇಳಿಯುವ ಮತ್ತು ಜಾತೀಯತೆಯನ್ನು ಪೋಷಿಸುವ ಜೀವ ವಿರೋಧಿ ನಿಲುವು ಯಾವತ್ತಿದ್ದರೂ ಒಪ್ಪತಕ್ಕದ್ದಲ್ಲ ಮತ್ತು ದೇಶದ ಔನ್ಯತ್ಯಕ್ಕಿದು ಸದಾ ತೊಡಕೇ. ಬ್ರಿಟಿಷ್ ಸರಕಾರದಿಂದ ಸಾರ್ವತ್ರೀಕರಣಗೊಂಡ ವಿದ್ಯಾಕ್ರಾಂತಿಯಿಂದ ಶೂದ್ರ ಸಮುದಾಯ ನಿಧಾನವಾದರೂ ಸ್ವಾಭಿಮಾನದ ಬದುಕಿನೆಡೆ ಸಾಗುತ್ತಿದೆ. ಆದರೆ ಇಂದಿಗೂ ಜಿಗುಟು ಧರ್ಮ ಸಿದ್ಧಾಂತದ ಅಮಲು ಹಚ್ಚಿ ಶೂದ್ರ ಸಮುದಾಯವನ್ನು ಹಿಂದಿನ ನರಕ ಕೂಪಕ್ಕೆ ತಳ್ಳುವ ಮೊದಲು ಸಂಬಂಧಿಸಿದವರೊಮ್ಮೆ ಈಗ ಕಿಚ್ಚು ಹಚ್ಚಿಸಿದ ಈ ಶಂಕರ ಮಧ್ವ ಜಟಾಪಟಿಯ ಒಳ ಹೂರಣವನ್ನು ಅವಲೋಕಿಸಿ ನೋಡುವುದು ಉತ್ತಮ. ತಮ್ಮ ಕರ್ಮಗಳು ಬಲವಂತವೆನಿಸಿದಾಗ ಪ್ರಕೃತಿಯೇ ಈ ರೀತಿಯಲ್ಲಿ ಬಡಿದು ಬುದ್ಧಿ ಹೇಳುವುದು ಸಹಜ ಈಗ ನಡೆಯುತ್ತಿರುವುದೂ ಇದುವೇ.
ಶಂಕರ್ ಸೂರ್ನಳ್ಳಿ
ಲೇಖಕರು
ಇದನ್ನೂ ಓದಿ- https://kannadaplanet.com/its-a-big-story-autobiography-series-26/ ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ-26 | ಅಪ್ಪನ ಕೊನೆಯ ವೇಷ ಮತ್ತು ಇತರ ಕೆಲ ನೆನಪುಗಳು


