ನವದೆಹಲಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ “ನೀವು ಯಾರನ್ನು ರಕ್ಷಿಸಲು ಯತ್ನಿಸುತ್ತಿದ್ದೀರಿ?” ಎಂದು ಸುಪ್ರೀಂಕೋರ್ಟ್ ಸಿಬಿಐಗೆ ತರಾಟೆಗೆ ತೆಗೆದುಕೊಂಡಿದೆ.
ಸುಪ್ರೀಂ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪ್ರಕರಣದ ತನಿಖೆಯನ್ನು ನಡೆಸಿದ ಸಿಬಿಐ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆ ವೇಳೆ ತನಿಖೆಯಲ್ಲಿನ ಗಂಭೀರ ಲೋಪಗಳನ್ನು ಉಲ್ಲೇಖಿಸಿದ ನ್ಯಾಯಪೀಠ, “ನೀವು ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ?” ಎಂದು ಸಿಬಿಐಗೆ ಕಟುವಾಗಿ ಪ್ರಶ್ನಿಸಿತು.
2012ರ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಒಪ್ಪಿಗೆ ಸೂಚಿಸಿದೆ. ಪ್ರಕರಣಕ್ಕೆ ಹೊಸದಾಗಿ ತನಿಖೆ ನಡೆಸಬೇಕೆಂಬ ಮೌಖಿಕ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದ್ದು, ತನಿಖೆಯ ವ್ಯಾಪ್ತಿ ಮತ್ತು ವಿಧಾನಗಳ ಕುರಿತು ವಿವರವಾದ ಲಿಖಿತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.
ಅಪರಾಧ ಸ್ಥಳಕ್ಕೆ ತನಿಖಾಧಿಕಾರಿ ಭೇಟಿ ನೀಡಿರಲಿಲ್ಲ : ಸೌಜನ್ಯ ಮೃತದೇಹ ಪತ್ತೆಯಾದ ಅಪರಾಧ ಸ್ಥಳಕ್ಕೆ ಸಿಬಿಐ ತನಿಖಾಧಿಕಾರಿಯೇ ಎಂದಿಗೂ ಭೇಟಿ ನೀಡಿಲ್ಲ ಎಂಬ ಮಾಹಿತಿ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಇದು ನ್ಯಾಯಸಮ್ಮತ ತನಿಖೆಯ ಮೂಲ ತತ್ವಗಳನ್ನೇ ಪ್ರಶ್ನಿಸುವ ವಿಷಯ ಎಂದು ಪೀಠ ಅಭಿಪ್ರಾಯಪಟ್ಟಿತು.
ಸಿಬಿಐಗೆ ಮತ್ತೆ ತನಿಖೆ ಇಲ್ಲ : ಹೊಸ ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮರುತನಿಖೆಯನ್ನು ಯಾವ ಸಂಸ್ಥೆ ನಡೆಸಬೇಕು ಎಂಬುದರ ಕುರಿತು ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ. ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ನಿಷ್ಪಕ್ಷಪಾತ ತನಿಖೆ ನಡೆಸಬಲ್ಲ ಕರ್ನಾಟಕ ಪೊಲೀಸ್ ಅಧಿಕಾರಿಗಳ ಹೆಸರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಎಸ್‌ಐಟಿಗೆ ತನಿಖೆ ನೀಡುವಂತೆ ಕುಟುಂಬದ ಒಲವು : ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಈ ಪ್ರಕರಣವನ್ನೂ ವಹಿಸಿದರೆ ಕುಟುಂಬಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಮೂಲಗಳು ತಿಳಿಸಿವೆ. ರಾಜ್ಯ ಮಟ್ಟದ ಸ್ವತಂತ್ರ ತನಿಖೆಯಿಂದ ಸಾರ್ವಜನಿಕರ ವಿಶ್ವಾಸ ಹೆಚ್ಚಲಿದೆ ಎಂಬುದು ಕುಟುಂಬದ ಅಭಿಪ್ರಾಯವಾಗಿದೆ.
ಮರುತನಿಖೆಗೆ ಕಾರಣವೇನು? : ಸುಪ್ರೀಂ ಕೋರ್ಟ್ ಮರುತನಿಖೆಗೆ ಒಲವು ತೋರಲು ಪ್ರಮುಖ ಕಾರಣಗಳಲ್ಲಿ ಒಂದು, ಡಿಎನ್‌ಎ ತಂತ್ರಜ್ಞಾನದಲ್ಲಿ ಆಗಿರುವ ಪ್ರಗತಿ ಎಂದು ಹೇಳಲಾಗಿದೆ. ಕರ್ನಾಟಕ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ, ಇತ್ತೀಚಿನ ಅತ್ಯಾಧುನಿಕ ಡಿಎನ್‌ಎ ತಂತ್ರಜ್ಞಾನದಿಂದ ಹಳೆಯ ಹಾಗೂ ಹಾಳಾಗಿರುವ ಜೈವಿಕ ಮಾದರಿಗಳಿಂದಲೂ ಉಪಯುಕ್ತ ಸಾಕ್ಷ್ಯಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.
ಸರ್ಕಾರವು, ಸುಮಾರು 15 ವರ್ಷ ಕಳೆದಿದ್ದರೂ ಆಧುನಿಕ ಫೊರೆನ್ಸಿಕ್ ತಂತ್ರಜ್ಞಾನಗಳ ನೆರವಿನಿಂದ ಹೊಸ ವೈಜ್ಞಾನಿಕ ಸಾಕ್ಷ್ಯಗಳನ್ನು ಪತ್ತೆಹಚ್ಚುವ ಸಾಧ್ಯತೆ ಇದೆ ಎಂದು ನ್ಯಾಯಾಲಯಕ್ಕೆ ವಿವರಿಸಿದೆ.
ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಯಾವ ತನಿಖಾ ಸಂಸ್ಥೆ ಮರುತನಿಖೆ ನಡೆಸಲಿದೆ, ತನಿಖೆಯ ವ್ಯಾಪ್ತಿ ಏನು ಹಾಗೂ ಅನುಸರಿಸಬೇಕಾದ ಮಾರ್ಗಸೂಚಿಗಳು ಯಾವುವು ಎಂಬುದರ ಕುರಿತು ವಿವರವಾದ ಆದೇಶ ಹೊರಡಿಸುವ ನಿರೀಕ್ಷೆಯಿದೆ.
ತನಿಖೆ ಮತ್ತು ನ್ಯಾಯಾಲಯದ ತೀರ್ಪು : ಮೊದಲು ಸ್ಥಳೀಯ ಪೊಲೀಸರು ತನಿಖೆ ನಡೆಸಿದ ಪ್ರಕರಣವನ್ನು ನಂತರ ಸಿಐಡಿಗೆ ಹಾಗೂ ಬಳಿಕ ಸಾರ್ವಜನಿಕ ಒತ್ತಾಯದ ಹಿನ್ನೆಲೆಯಲ್ಲಿ ಸಿಬಿಐಗೆ ವರ್ಗಾಯಿಸಲಾಯಿತು. ಕಾರ್ಕಳದ ಸಂತೋಷ್ ರಾವ್ ಅವರನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಆದರೆ ಸೌಜನ್ಯ ಕುಟುಂಬ ಹಾಗೂ ಹಲವು ಹೋರಾಟಗಾರರು ನಿಜವಾದ ಆರೋಪಿಗಳನ್ನು ರಕ್ಷಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ನಂತರ ನಡೆದ ವಿಚಾರಣೆಯಲ್ಲಿ ವೈಜ್ಞಾನಿಕ ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳ ಕೊರತೆ, ವಿಶ್ವಾಸಾರ್ಹ ಡಿಎನ್‌ಎ ಪುರಾವೆಗಳ ಅಭಾವ ಸೇರಿದಂತೆ ಹಲವು ತನಿಖಾ ಲೋಪಗಳನ್ನು ಉಲ್ಲೇಖಿಸಿ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು.
ಪ್ರಕರಣದ ಹಿನ್ನೆಲೆ : 2012ರ ಅಕ್ಟೋಬರ್ 9ರಂದು ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಧರ್ಮಸ್ಥಳದ ಬಳಿ ಬಸ್‌ನಿಂದ ಇಳಿದ ಬಳಿಕ ನಾಪತ್ತೆಯಾಗಿದ್ದರು. ಮರುದಿನ ಮುಖ್ಯ ರಸ್ತೆಯಿಂದ ಸುಮಾರು 25 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಅವರ ಅರ್ಧನಗ್ನ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಹಾಗೂ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಲಕ್ಷಣಗಳು ಪತ್ತೆಯಾಗಿದ್ದವು. ಈ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

