ಬೆಂಗಳೂರು, ಸೆಪ್ಟೆಂಬರ್, 21 : ಕರ್ನಾಟಕದ ಪಶ್ಚಿಮ ಘಟ್ಟ ಅಮೂಲ್ಯ ನೈಸರ್ಗಿಕ ಸಂಪತ್ತು, ನಮ್ಮ ಅನೇಕ ಪ್ರಮುಖ ನದಿಗಳ ಉಗಮಸ್ಥಾನವಾಗಿರುವ ಈ ಪ್ರದೇಶವು ಜಲಮೂಲಗಳ ತಾಣವಾಗಿದೆ, ಕೃಷಿ, ತೋಟಗಾರಿಕೆ, ಕುಡಿಯುವ ನೀರು, ಜೀವ ವೈವಿದ್ಯ ಮತ್ತು ಸ್ಥಳೀಯರ ಗ್ರಾಮೀಣ ಜೀವನೋಪಾಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ನಾವು ನಿಂತಿರುವ ಭೂಮಿ ನಮ್ಮದು. ರೈತರ ಹಕ್ಕು, ಸ್ವಾಭಿಮಾನ ಮತ್ತು ಈ ಭೂಮಿಯನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಡಾ.ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ನೀಡಿರುವ ವರದಿಯನ್ನು ಆಧರಿಸಿ ಹೊರಡಿಸಿದ ಕೇಂದ್ರ ಸರ್ಕಾರದ 27-07-2026ರ ಕರಡು ಅಧಿಸೂಚನೆಯ ಕುರಿತು ಇಂದು ವಿಧಾನಸಭೆಯ ವಿಶೇಷ ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಶ್ಚಿಮ ಘಟ್ಟಗಳನ್ನು ಉಳಿಸಬೇಕು. ಅರಣ್ಯ, ನದಿಗಳು, ಜಲಮೂಲಗಳು ಮತ್ತು ಜೀವವೈವಿದ್ಯವನ್ನು ರಕ್ಷಿಸಬೇಕು. ಅದೇ ಸಮಯದಲ್ಲಿ ರೈತರು, ಆದಿವಾಸಿಗಳು ಮತ್ತು ಸ್ಥಳೀಯ ನಿವಾಸಿಗಳ ಹಕ್ಕು-ಹಿತಾಸಕ್ತಿಗಳನ್ನು ರಕ್ಷಿಸಬೇಕು. ರೈತರ ಕೃಷಿ ಮತ್ತು ತೋಟಗಾರಿಕೆಗೆ ಅನಗತ್ಯ ಅಡ್ಡಿಯಾಗಬಾರದು, ಮೂಲಭೂತ ಸೌಲಭ್ಯಗಳ ಅಭಿವೃಧ್ಧಿಗೆ ಅನಗತ್ಯ ತಡೆ ಉಂಟಾಗಲು ಸರ್ಕಾರ ಬಿಡುವುದಿಲ್ಲ.
ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಹಲವು ಸಭೆಗಳನ್ನು ನಡೆಸಿ, ರೈತರ ಜೊತೆ ಚರ್ಚಿಸಲಾಗಿದೆ. ಸಾವಿರಾರು ರೈತರು ಅರ್ಜಿಗಳನ್ನು ನೀಡಿದ್ದಾರೆ. ಪರಿಹಾರಕ್ಕೆ ಸಲಹೆಗಳನ್ನು ನೀಡಿದ್ದಾರೆ. ಅವೈಜ್ಞಾನಿಕ ಕ್ರಮಗಳಿಂದ ರೈತರಿಗೆ ತೊಂದರೆ ಆಗುತ್ತಿದೆ. ಯಾವುದೇ ಕಾರಣಕ್ಕೂ ರೈತರಿಗೆ ಡಾ: ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯಿಂದ ತೊಂದರೆ ಆಗಬಾರದು. ತೊಂದರೆ ಆಗದಂತೆ ಸರ್ಕಾರದಿಂದ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಹಲವು ಸಭೆಗಳನ್ನು ಹಮ್ಮಿಕೊಳ್ಳುವ ಮೂಲಕ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಡಾ.ಕಸ್ತೂರಿ ರಂಗನ್ ವರದಿಯ ಲಭ್ಯವಿರುವ ಮಾಹಿತಿಯ ಪ್ರಕಾರ ಕರ್ನಾಟಕದ 10 ಜಿಲ್ಲೆಗಳ ESA ವ್ಯಾಪ್ತಿಯಲ್ಲಿ ಸುಮಾರು 16,114.08 ಚದರ ಕಿಲೋ ಮೀಟರ್ ನಿಯಂತ್ರಿತ ಅರಣ್ಯ ಪ್ರದೇಶವಿದ್ದು, ಇದರಲ್ಲಿ ಸುಮಾರು 12,226.68 ಚದರ ಕಿಲೋ ಮೀಟರ್ ಮೀಸಲು ಅರಣ್ಯ, 2,375.83 ಚದರ ಕಿಲೋಮೀಟರ್ ಇತರೆ ಅರಣ್ಯ ಪ್ರದೇಶ ಹಾಗೂ 961.57 ಚದರ ಕಿಲೋ ಮೀಟರ್ ESZ ಪ್ರದೇಶ ಒಳಗೊಂಡಿದೆ. ಉಳಿದ ಸುಮಾರು 3,138.08 ಚದರ ಕಿಲೋಮೀಟರ್ ಪ್ರದೇಶವು ಇSಂ ನಿಯಂತ್ರಣಕ್ಕೆ ಒಳಪಡದ ಪ್ರದೇಶವಾಗಿದೆ ಎಂದು ಸದನದಲ್ಲಿ ವಿವರಿಸಿದರು.
ಇದು ಯಾವುದೇ ಒಂದು ಪಕ್ಷದ ಅಥವಾ ಒಂದು ಪ್ರದೇಶದ ವಿಷಯವಲ್ಲ. ಪಶ್ಚಿಮ ಘಟ್ಟಗಳಲ್ಲ್ಲಿ ಬದುಕುತ್ತಿರುವ ಲಕ್ಷಾಂತರ ಜನರ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆದ್ದರಿಂದ ಈ ವಿಷಯದಲ್ಲಿ ಪಕ್ಷಾತೀತವಾಗಿ ಒಗ್ಗಟ್ಟಿನ ನಿಲುವು ಅಗತ್ಯ. ಈ ಹಿನ್ನೆಲೆಯಲ್ಲಿ ಸದನದ ಮಾನ್ಯ ಎಲ್ಲಾ ಸದಸ್ಯರು ರಾಜಕಾರಣವನ್ನು ಬದಿಗೊತ್ತಿ, ಈ ವಿಷಯದ ಕುರಿತು ಚರ್ಚಿಸಿ ತಮ್ಮ ಸಲಹೆಗಳನ್ನು ನೀಡಿ, ಕರ್ನಾಟಕದ ಒಗ್ಗಟ್ಟಿನ ಧ್ವನಿಯನ್ನು ಪ್ರತಿಬಿಂಬಿಸುವಂತೆ ಎಲ್ಲಾ ಸದಸ್ಯರಿಗೆ ಮನವಿ ಮಾಡಿದರು.

