ಬೆಂಗಳೂರು, ನ.20 : ರಾಜ್ಯದ ಗ್ರಾಮೀಣ ಪ್ರದೇಶಗಳ ಚಿತ್ರಣ ಬದಲಿಸಲು ನಮ್ಮ ಸರ್ಕಾರ 16 ಸಾವಿರ ಕೋಟಿ ರೂಪಾಯಿ ಮೊತ್ತದ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಸುಮಾರು 15 ಸಾವಿರ ಕಿಮೀ ರಸ್ತೆ ಅಭಿವೃದ್ಧಿಗೆ 10 ಸಾವಿರ ಕೋಟಿ ರೂಪಾಯಿ, 6 ಸಾವಿರ ಕೋಟಿ ರೂಪಾಯನ್ನು ಪಂಚಾಯಿತಿ ಮಟ್ಟದ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಹಾಗೂ ‘ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ’ಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಇಷ್ಟು ಬೃಹತ್ ಮೊತ್ತದ ಅನುದಾನ ನೀಡಿರುವುದು ಗುತ್ತಿಗೆದಾರರ ಉದ್ದಾರಕ್ಕೆ, ಜೇಬು ತುಂಬಿಸೋಕಲ್ಲ. ಗ್ರಾಮೀಣ ಜನರ ಬದುಕು ಬದಲಾಯೊಸೋಕೆ ನೀಡಲಾಗುತ್ತಿದೆ. ಈ ಅನುದಾನದಲ್ಲಿ ಒಂದು ರೂಪಾಯಿಯೂ ದುರುಪಯೋಗವಾಗಬಾರದು. ಕಾಮಗಾರಿಗಳಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಕಡ್ಡಾಯ” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರತಿಯೊಂದು ಕಾಮಗಾರಿ ಆರಂಭಿಸುವ ಮೊದಲು ಸ್ಥಳದ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ತೆಗೆದು ಕಡತದಲ್ಲಿ ದಾಖಲಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕದ ಚಿತ್ರಗಳನ್ನೂ ಸಂಗ್ರಹಿಸಬೇಕು. ಕಾಮಗಾರಿ ನಡೆಯುವ ಸ್ಥಳದ ನಿಖರ ನಿರ್ದೇಶಾಂಕಗಳನ್ನು ದಾಖಲಿಸಬೇಕು. ಟೆಂಡರ್ ಪ್ರಕ್ರಿಯೆ ಇಲ್ಲದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ. ಕಾಮಗಾರಿಗಳ ಪ್ರಗತಿಯನ್ನು ಮುಖ್ಯಮಂತ್ರಿ ಡ್ಯಾಶ್ ಬೋರ್ಡ್ ಮೂಲಕ ಪರಿಶೀಲಿಸಲಾಗುವುದು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಚಿತ್ರಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು. ಪ್ರತಿ ಪಂಚಾಯಿತಿ ಮತ್ತು ಜಿಲ್ಲಾಮಟ್ಟದಲ್ಲಿ ವಾಟ್ಸ್ ಆ್ಯಪ್ ಗುಂಪು ರಚಿಸಿ ಕಾಮಗಾರಿಗಳ ವಿವರಗಳನ್ನು ಹಂಚಿಕೊಳ್ಳಬೇಕು ಎಂದರು.
“ರಸ್ತೆ ಚೆನ್ನಾಗಿದ್ದರೂ ಮತ್ತೆ ಅದೇ ರಸ್ತೆಗೆ ಹಣ ಖರ್ಚು ಮಾಡುವುದು, ಕಾಮಗಾರಿ ಮಾಡದೆ ಬಿಲ್ ಪಡೆಯುವುದು, ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣ ದುರುಪಯೋಗ ಮಾಡುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಅಕ್ರಮಗಳಿಗೆ ಇನ್ನು ಅವಕಾಶವಿಲ್ಲ” ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು
15 ಸಾವಿರ ಕಿಮೀ ರಸ್ತೆ ಅಭಿವೃದ್ಧಿಗೆ 10 ಸಾವಿರ ಕೋಟಿ
“ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಸುಮಾರು 15 ಸಾವಿರ ಕಿಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲು 10 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ರಸ್ತೆ ಮರು ಡಾಂಬರೀಕರಣ, ಜಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರತಿ ಕಿಲೋಮೀಟರ್ ನ ಕಾಮಗಾರಿಯ ಸ್ವರೂಪಕ್ಕೆ ಅನುಗುಣವಾಗಿ 38 ರಿಂದ 70 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಈಗಾಗಲೇ ಪ್ರಗತಿ ಪಥ ಯೋಜನೆಯಡಿ 5 ಸಾವಿರ ಕೋಟಿ ಅನುದಾನವನ್ನೂ ನೀಡಲಾಗಿದೆ” ಎಂದು ಹೇಳಿದರು.
“6 ಸಾವಿರ ಕೋಟಿ ರೂಪಾಯನ್ನು ಪಂಚಾಯಿತಿ ಮಟ್ಟದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಚರಂಡಿ, ಕುಡಿಯುವ ನೀರು ಹಾಗೂ ಅಗತ್ಯ ಮೂಲಸೌಕರ್ಯಗಳಿಗೆ ಈ ಹಣ ಬಳಕೆಯಾಗಲಿದೆ. ಯಾವ ಪಂಚಾಯಿತಿಯಲ್ಲಿ ಯಾವ ಕಾಮಗಾರಿ ಅಗತ್ಯವಿದೆ ಎಂಬುದನ್ನು ಗುರುತಿಸಿ, ಜಿಲ್ಲಾಧಿಕಾರಿಗಳ ಅನುಮತಿ ಮೂಲಕ ಅನುದಾನ ಬಿಡುಗಡೆ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಲಾಗುತ್ತಿದ್ದು, ಇದೊಂದು ದಾಖಲೆ” ಎಂದು ಹೇಳಿದರು.
ಮೊದಲ ಹಂತದಲ್ಲಿ 5 ಲಕ್ಷ ನಿವೇಶನ ಹಂಚಿಕೆ
“ರಾಜ್ಯದಲ್ಲಿ ಒಟ್ಟು 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಿಸಲು ನಿರ್ಧರಿಸಿದ್ದು, ಇದಕ್ಕಾಗಿ ಸುಮಾರು 9 ಸಾವಿರ ಎಕರೆ ಜಮೀನು ಗುರುತಿಸಲಾಗಿದೆ. ನಿವೇಶನಗಳ ಅಭಿವೃದ್ಧಿಗೆ ಅಗತ್ಯವಿರುವ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ವೆಚ್ಚವನ್ನು ವಾಸ್ತವಿಕವಾಗಿ ಪರಿಶೀಲಿಸಿ ಯೋಜನೆ ರೂಪಿಸಲಾಗುವುದು” ಎಂದು ಹೇಳಿದರು.
ಬಡವರಿಗೂ 30/40 ಅಳತೆಯ ನಿವೇಶನ
“ಇನ್ನು ಮುಂದೆ ಬಡವರಿಗೆ ನೀಡುವ ನಿವೇಶನಗಳ ಅಳತೆಯನ್ನು ಕನಿಷ್ಠ 30X40 ಅಡಿಗೆ ನಿಗದಿಪಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಹಿಂದೆ 20X30 ಅಡಿ ನಿವೇಶನ ನೀಡಲಾಗುತ್ತಿತ್ತು. ಆದರೆ ಕುಟುಂಬ ಬೆಳೆದಂತೆ ಮನೆ ಕಟ್ಟಲು ಜಾಗ ಸಾಲುವುದಿಲ್ಲ. ಮತ್ತೆ ಹೊಸ ಕೊಳಚೆ ಪ್ರದೇಶಗಳು ಸೃಷ್ಟಿಯಾಗಬಾರದು. ಬಡವರ ಮಕ್ಕಳು ಕೂಡ ಭವಿಷ್ಯದಲ್ಲಿ ಉತ್ತಮ ಮನೆ ಕಟ್ಟಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ 30X40 ಅಡಿ ನಿವೇಶನ ನೀಡಲು ನಿರ್ಧರಿಸಲಾಗಿದೆ. ಅಗತ್ಯವಿದ್ದರೆ ನಿವೇಶನಗಳ ಸಂಖ್ಯೆಯನ್ನು ಕಡಿಮೆ ಮಾಡಿಯಾದರೂ ದೊಡ್ಡ ನಿವೇಶನ ನೀಡಲಾಗುವುದು. ಮನೆ ಇಲ್ಲದ ಕುಟುಂಬಗಳಿಗೆ ನಿವೇಶನ ನೀಡುವಾಗ ಆದ್ಯತೆ ನೀಡಬೇಕು. ಈಗಾಗಲೇ ಮನೆ ಅಥವಾ ನಿವೇಶನ ಹೊಂದಿರುವವರಿಗೆ ಮತ್ತೊಮ್ಮೆ ಸೌಲಭ್ಯ ಕಲ್ಪಿಸಬಾರದು” ಎಂದು ಸ್ಪಷ್ಟಪಡಿಸಿದರು.
“ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ. ಉದ್ಯೋಗ, ಶಿಕ್ಷಣ ಮತ್ತು ಉತ್ತಮ ಬದುಕಿನ ಹುಡುಕಾಟದಲ್ಲಿ ಗ್ರಾಮೀಣ ಜನರು ನಗರಗಳತ್ತ ವಲಸೆ ಹೋಗುವುದನ್ನು ತಡೆಯಲು ಹಳ್ಳಿಗಳಲ್ಲೇ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ” ಎಂದು ಹೇಳಿದರು.
ನಗರಗಳತ್ತ ವಲಸೆ ತಡೆಯಲು ಹಳ್ಳಿಗಳ ಅಭಿವೃದ್ಧಿ
“ಮಹಾತ್ಮ ಗಾಂಧೀಜಿ ಅವರು ಭಾರತದ ಆತ್ಮ ಹಳ್ಳಿಗಳಲ್ಲಿ ಇದೆ ಎಂದಿದ್ದರು. ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ನಮ್ಮ ನಂಬಿಕೆ. ನಾನೂ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಗ್ರಾಮೀಣ ಜನರ ಸಮಸ್ಯೆಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅನುದಾನದ ಕೊರತೆಯಿಂದ ಎದುರಿಸುವ ಸಂಕಷ್ಟಗಳ ಅರಿವು ನನಗಿದೆ. ಹೀಗಾಗಿ ಪಂಚಾಯಿತಿಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ ಇಷ್ಟು ದೊಡ್ಡ ಮೊತ್ತದ ಅನುದಾನ ಒದಗಿಸಲಾಗಿದೆ” ಎಂದು ತಿಳಿಸಿದರು.
“ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಈಗಾಗಲೇ ಶೇ.47ರಷ್ಟು ಜನಸಂಖ್ಯೆ ಸ್ಥಳಾಂತರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ.76ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ. ಉದ್ಯೋಗ, ಶಿಕ್ಷಣ ಹಾಗೂ ಉತ್ತಮ ಜೀವನದ ನಿರೀಕ್ಷೆಯಲ್ಲಿ ರೈತರ ಮಕ್ಕಳು ಊರು ತೊರೆಯುತ್ತಿದ್ದಾರೆ. ಈ ವಲಸೆ ತಡೆಯಬೇಕಾದರೆ ಹಳ್ಳಿಗಳಲ್ಲೇ ಉತ್ತಮ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು” ಎಂದರು.

