ಬೆಂಗಳೂರು : ಡಾ.ಜಿ. ಪರಮೇಶ್ವರ ಅವರನ್ನು ನೂತನ ಉಪಮುಖ್ಯಮಂತ್ರಿಯಾಗಿ ನೇಮಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರದಿಂದ ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಪರಮೇಶ್ವರ ಅವರು ಏಕೈಕ ಉಪಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎನ್ನಲಾಗಿದೆ.
ಪರಮೇಶ್ವರ ಅವರು ಕರ್ನಾಟಕ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷರಾಗಿದ್ದು, ರಾಜ್ಯದ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಈ ಮೂಲಕ ಇಷ್ಟು ದಿನಗಳ ಡಿಸಿಎಂ ಸ್ಥಾನದ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ.
ಮೂಲಗಳ ಪ್ರಕಾರ, ಪರಮೇಶ್ವರ ಅವರು ಶಿವಕುಮಾರ್ ಅವರಿಗೆ ಏಕೈಕ ಉಪಮುಖ್ಯಮಂತ್ರಿಯಾಗಿರಲು ಬಯಸಿದ್ದಾರೆ. ಆದರೆ ಕಾಂಗ್ರೆಸ್‌ನ ಕೆಲವು ನಾಯಕರು ಇನ್ನೂ ಒಂದಕ್ಕಿಂತ ಹೆಚ್ಚು ಉಪಮುಖ್ಯಮಂತ್ರಿಗಳನ್ನು ನೇಮಿಸುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ.
ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಸಿಗುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ದೊಡ್ಡದಾಗಿದೆ. ಪರಮೇಶ್ವರ್ ಅವರು ಸತತ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದವರು. ರಾಜ್ಯದ ಅತ್ಯಂತ ಪ್ರಭಾವಿ ದಲಿತ ನಾಯಕರಾಗಿರುವ ಅವರಿಗೆ ಗೌರವಯುತ ಸ್ಥಾನ ಸಿಗಲೇಬೇಕು ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಗಟ್ಟಿಯಾದ ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ ಅವರ ಈ ಒತ್ತಡಕ್ಕೆ ಹೈಕಮಾಂಡ್ ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ನೀಡಿದೆ.
ಪರಮೇಶ್ವರರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ದಲಿತ ಸಮುದಾಯಕ್ಕೆ ಮಹತ್ವದ ರಾಜಕೀಯ ಸಂದೇಶ ನೀಡಲು ಮುಂದಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಹೊಸದೇನಲ್ಲ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲೂ ಅವರು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

