ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಅಂತಿಮ ದಿನ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆ 4ಗಂಟೆಗೆ ನೂತನ ಸಚಿವರ ಪದಗ್ರಹಣ ನಡೆಯುತ್ತದೆ.
ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಹಲವು ದಿನಗಳಿಂದ ಕುತೂಹಲ ಮೂಡಿಸುತ್ತಿದೆ. ಲೋಕಭವನದಲ್ಲಿ ನೂತನ ಸಚಿವರ ಪದಗ್ರಹಣಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಂಜೆ ಸುಮಾರು 20 ಮಂದಿಗೆ ಸಚಿವರು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ.
ರಾಹುಲ್ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ರಾಜ್ಯದ ನೂತನ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಹಾಕಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸೋಮವಾರ ಬೆಳಗ್ಗೆ ನೂತನ ಸಚಿವರಾಗುವವರ ಪಟ್ಟಿಯೊಂದಿಗೆ ಬೆಂಗಳೂರಿಗೆ ಬರುತ್ತಾರೆ. ತದನಂತರ ಲೋಕಭವನಕ್ಕೆ ಪಟ್ಟಿ ರವಾನಿಸಲಾಗುತ್ತದೆ. ಸಂಜೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಂದ ಪ್ರಮಾಣವಚನ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ನಾಯಕರಿಗೆ ಯಾವುದೇ ಸುಳಿವು ನೀಡದೇ ಸಂಪುಟ ಆಕಾಂಕ್ಷಿಗಳ ಜೊತೆ ನೇರವಾಗಿ ಚುನಾವಣಾ ರಣತಂತ್ರಗಾರರು ಸಂಪರ್ಕ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ. ನೂತನ ಸಚಿವರಾಗುವವರ ಪಟ್ಟಿ ಭಾನುವಾರ ರಾತ್ರಿವರೆಗೂ ಗೌಪ್ಯವಾಗಿತ್ತು. ಸೋಮವಾರ ಸಚಿವರಾಗಿ ಪ್ರಮಾಣಚನ ಸ್ವೀಕರಿಸುವವರು ಯಾರು ಯಾರು ಎಂಬುದರ ಮಾಹಿತಿ ಹೊರಬರಲಿಲ್ಲ. ಹೀಗಾಗಿ ಸಚಿವಾಕಾಂಕ್ಷಿಗಳು, ಕಾರ್ಯಕರ್ತರು, ಅಭಿಮಾನಿಗಳು ತೀವ್ರ ನಿರೀಕ್ಷೆಯಲ್ಲಿದ್ದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರಿಗೆ ದೂರವಾಣಿ ಮೂಲಕ ವೈಯಕ್ತಿಕವಾಗಿ ಮಾಹಿತಿ ನೀಡಲಾಗಿದೆ. ಇಂದು ಸಂಜೆ ಲೋಕಭವನಕ್ಕೆ ಬಂದು ಪ್ರಮಾಣವಚನ ಸ್ವೀಕರಿಸುವಂತೆ ಹೈಕಮಾಂಡ್ನಿಂದಲೇ ಕರೆ ಹೋಗಿದೆ ಎಂಬ ಮಾತುಗಳೂ ಕೇಳಿಬಂದಿವೆ.
ತಮ್ಮ ತಮ್ಮ ನಾಯಕರು ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಜಿಲ್ಲೆಯ, ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ಬೆಂಗಳೂರಿನತ್ತ ಧಾವಿಸಿ ಬರುತ್ತಿದ್ದಾರೆ. ಇದರಲ್ಲಿ ಯಾರಿಗೆ ಸಂತೋಷ, ಯಾರಿಗೆ ನಿರಾಸೆ ಎಂಬುದು ಸೋಮವಾರ ಸಂಜೆಯಷ್ಟೇ ಖಚಿತವಾಗಲಿದೆ.

