ಬೆಂಗಳೂರು : ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಹಿರಿಯ ನಾಯಕ ಡಾ.ಜಿ. ಪರಮೇಶ್ವರ್ ಒಬ್ಬರೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಬುಧವಾರ ಸಂಜೆ 4.05 ಲೋಕಭವನದಲ್ಲಿ ಸಿಎಂ, ಡಿಸಿಎಂ ಜೊತೆಗೆ ಇತರೆ 11 ಸಚಿವರು ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ನಿಶ್ಚಯವಾಗಿದೆ.
ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ನಾಯಕರು ನವದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ತೀವ್ರ ಕಸರತ್ತು ನಡೆಸಿದ್ದು, ಅಳೆದು ತೂಗಿ ಪಟ್ಟಿಯೊಂದನ್ನು ಅಂತಿಮಗೊಳಿಸಿದ್ದಾರೆ. ಯಾರು ಯಾರಿಗೆ ಮಂತ್ರಿ ಸ್ಥಾನ ಲಭ್ಯ ಎಂಬುದನ್ನು ಬಹುತೇಕ ಬುಧವಾರ ಬೆಳಗ್ಗೆ ಪ್ರಕಟಿಸುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಮತ್ತು ಪ್ರಭಾವಿ ಖಾತೆಗಳನ್ನು ದೊರಕಿಸಲು ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ವೇಳೆ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ. ಇಂದು ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ಗಾಂಧಿ ಅವರೊಂದಿಗೆ ಖರ್ಗೆ ನಿವಾಸದಲ್ಲಿ ಸಭೆ ನಡೆಸಲಾಯಿತು. ಈ ಸಭೆಗೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸಹ ತೆರಳಿದ್ದರು. ಬುಧವಾರ ಪದಗ್ರಹಣ ಮಾಡುವವರ ಪಟ್ಟಿಯನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ.
ಸಿದ್ದರಾಮಯ್ಯ ಅವರು ಮೂವರು ಉಪಮುಖ್ಯಮಂತ್ರಿಗಳ ರಚನೆಗೆ ಪಟ್ಟು ಹಿಡಿದಿದ್ದರು ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಒಪ್ಪದ ಕಾಂಗ್ರೆಸ್ ಹೈಕಮಾಂಡ್ ಒಬ್ಬರೇ ಉಪಮುಖ್ಯಮಂತ್ರಿ ಇರಲು ಅವಕಾಶ ಒದಗಿಸಿದ್ದು, ಅದನ್ನು ರಾಜ್ಯದ ಹಿರಿಯ ದಲಿತ ನಾಯಕ, ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆಗಿರುವ ಡಾ.ಪರಮೇಶ್ವರ್ ಅವರನ್ನು ಡಿಸಿಎಂ ಮಾಡಲು ಒಪ್ಪಂದಕ್ಕೆ ಬರಲಾಗಿದೆ.
ಈ ಮಧ್ಯೆ ಪರಮೇಶ್ವರ್ ಅವರು ಕನಿಷ್ಠ ಡಿಸಿಎಂ ಸ್ಥಾನ ನೀಡದಿದ್ದರೆ ಸಚಿವ ಸ್ಥಾನವೂ ಬೇಡ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಪರಮೇಶ್ವರ್ ಅವರ ಹಿರಿತನ, ಪಕ್ಷಸೇವೆ ಮತ್ತು ಈಗಾಗಲೇ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಅವರೊಬ್ಬರನ್ನು ಮಾತ್ರ ಡಿಸಿಎಂ ಮಾಡಲಾಗುತ್ತದೆ ಎನ್ನಲಾಗಿದೆ.
ಜಾತಿವಾರು, ಪ್ರಾದೇಶಿಕವಾರು ಪ್ರಾತಿನಿಧ್ಯ:
ಡಿ.ಕೆ. ಶಿವಕುಮಾರ್ ಅವರ ಸರ್ಕಾರದಲ್ಲಿ ಸಚಿವರಾಗುವವರನ್ನು ಜಾತಿವಾರು, ಪ್ರಾದೇಶಿಕವಾರು ಪ್ರಾತಿನಿಧ್ಯ ನೀಡಿ ಮೊದಲ ಹಂತದ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಕೆ.ಎಚ್. ಮುನಿಯಪ್ಪ ಅಥವಾ ಅವರ ಪುತ್ರಿ ರೂಪಕಲಾ ಶಶಿಧರ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಡಾ.ಯತೀಂದ್ರ ಸಿದ್ದರಾಮಯ್ಯ,
ಪ್ರಿಯಾಂಕ ಖರ್ಗೆ, ಬೈರತಿ ಸುರೇಶ್, ಎನ್.ಚಲುವರಾಯಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಂಪುಟಕ್ಕೆ ಸೇರುವುದು ಖಚಿತ ಎನ್ನಲಾಗಿದೆ.
ಈ ಪೈಕಿ ಶಾಸಕಿ ರೂಪಾ ಶಶಿಧರ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ಸಂಪುಟಕ್ಕೆ ಸೇರ್ಪಡೆಯಾದಲ್ಲಿ ಹೊಸ ಸಚಿವರಾಗಲಿದ್ದಾರೆ. ಯು.ಟಿ. ಖಾದರ್ ಅವರು ಈಗಾಗಲೇ ಸಿದ್ದರಾಮಯ್ಯ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಉಳಿದಂತೆ ಈ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಸರಿಸುಮಾರು 8-10 ಸಚಿವರೇ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವರಾಗುವುದು ನಿಶ್ಷಿತವಾಗಿದೆ.
ಎಚ್.ಕೆ. ಪಾಟೀಲ ಸ್ಪೀಕರ್?:
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಹಿರಿಯರಾದ ಎಚ್.ಕೆ. ಪಾಟೀಲ ಅವರ ಹೆಸರು ಕೇಳಿಬರುತ್ತಿದ್ದು, ಬಹುತೇಕ ಅವರೇ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸ್ಪೀಕರ್ ಸ್ಥಾನಕ್ಕೆ ಒಪ್ಪದೆ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಲ್ಲಿ ಮತ್ತೋರ್ವ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರಿಗೆ ವಿಧಾನಸ್ಥಾನಧ್ಯಕ್ಷರ ಪೀಠ ಒಲಿಯಲಿದೆ ಎಂದು ಹೇಳಲಾಗುತ್ತಿದೆ.
ಕೆಪಿಸಿಸಿಗೆ ಜಾರಕಿಹೊಳಿ:
ನವದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆಯೂ ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಪ್ರಬಲ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸತೀಶ್ ಜಾರಕಿಹೊಳಿ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗುವುದು ನಿಶ್ಚಿತವಾಗಿದ್ದು, ಇವರು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ತೀರ್ಮಾನಿಸಲಾಗಿದೆ.
ಆದರೆ, ನೂತನ ಸಚಿವರುಗಳಾಗಿ ಅಧಿಕಾರ ಸ್ವೀಕರಿಸಿದವರಿಗೆ ಖಾತೆಗಳ ಬದಲಾವಣೆ ಆಗಲಿದೆ. ಈ ಹಿಂದೆ ಅವರು ನಿರ್ವಹಿಸಿದ ಖಾತೆಗಳನ್ನೇ ಮುಂದುವರಿಸುವುದು ಕಷ್ಟ ಎನ್ನಲಾಗುತ್ತಿದೆ. ಮಂತ್ರಿಸ್ಥಾನಕ್ಕೆ ಪೈಪೋಟಿ ನಡೆಸಿದವರು ಈಗ ಪ್ರಬಲ ಖಾತೆಗಳಿಗೂ ಪೈಪೋಟಿ ನೀಡುವುದು ನಿಶ್ಚಿತವಾಗಿದೆ.
ಸಿದ್ದರಾಮಯ್ಯ, ಡಿಕೆಶಿ ಪುನಃ ದೆಹಲಿಗೆ:
ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ಗುರುವಾರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಪುನಃ ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ಈ ಭೇಟಿ ವೇಳೆ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ, ರಾಜ್ಯಸಭಾ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಗಳಿಗೆ ಅಭ್ಯರ್ಥಿಗಳ ಘೋಷಣೆ ಬಗ್ಗೆ ಅಂತಿಮ ಮಾಡಲಾಗುತ್ತದೆ.
ರಾಜ್ಯದಲ್ಲಿ ಈಗಾಗಲೇ ನಾಲ್ಕು ರಾಜ್ಯಸಭಾ ಮತ್ತು 8 ವಿಧಾನ ಪರಿಷತ್ತಿನ ಸ್ಥಾನಗಳು ಮಾಸಾಂತ್ಯಕ್ಕೆ ಖಾಲಿಯಾಗಲಿದ್ದು, ಈಗಾಗಲೇ ಆ ಸ್ಥಾನಗಳಿಗೆ ಚುನಾವಣಾ ಅಧಿಸೂಚನೆ ಹೊರಡಿಸಿದ್ದು ನಾಮಪತ್ರ ಪ್ರಕ್ರಿಯೆ ಆರಂಭವಾಗಿದೆ. ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮೂರು ಕಾಂಗ್ರೆಸ್ಗೆ ಮತ್ತು ಎಂಟು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ಗೆ ಐದುರಿಂದ ಆರು ಸ್ಥಾನ ದೊರೆಯುವ ನಿರೀಕ್ಷೆ ಇದ್ದು, ಆ ಸ್ಥಾನಗಳಿಗೂ ಸಹ ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತು ಡಿ.ಕೆ. ಶಿ ಮತ್ತು ಸಿದ್ದರಾಮಯ್ಯ ಚರ್ಚೆ ಮಾಡಲಿದ್ದಾರ.
ಜೂ.8ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಜೂ.7ರೊಳಗೆ ಪಟ್ಟಿ ಅಂತಿಮ ಆಗಬೇಕಿರುವುದರಿಂದ ಮತ್ತೊಂದು ದೆಹಲಿ ಭೇಟಿ ಖಚಿತವಾಗಿದೆ. ಇದೇ ಸಂದರ್ಭದಲ್ಲಿಯೇ ನೂತನ ಸಚಿವರ ಖಾತೆಗಳೂ ಅಖೈರು ಆಗಲಿವೆ.
ಸಂಭವನೀಯ ಸಚಿವರುಗಳ ಪಟ್ಟಿ:
ಡಾ.ಪರಮೇಶ್ವರ್- ಉಪಮುಖ್ಯಮಂತ್ರಿ
ಎಂ.ಬಿ. ಪಾಟೀಲ
ಈಶ್ವರ ಖಂಡ್ರೆ
ಕೆ.ಎಚ್. ಮುನಿಯಪ್ಪ / ಅಥವಾ ಅವರ ಪುತ್ರಿ ರೂಪಕಲಾ ಶಶಿಧರ
ಕೆ.ಜೆ.ಜಾರ್ಜ್
ರಾಮಲಿಂಗಾರೆಡ್ಡಿ
ಕೃಷ್ಣ ಬೈರೇಗೌಡ
ಯು.ಟಿ. ಖಾದರ್
ಡಾ.ಯತೀಂದ್ರ ಸಿದ್ದರಾಮಯ್ಯ
ಪ್ರಿಯಾಂಕ ಖರ್ಗೆ
ಬೈರತಿ ಸುರೇಶ್
ಎನ್.ಚಲುವರಾಯಸ್ವಾಮಿ
ಬಿ.ಕೆ. ಹರಿಪ್ರಸಾದ್

