ಸರ್ಕಾರಿ ಕಾಲೇಜುಗಳಲ್ಲಿ ಖಾಯಂ ಮತ್ತು ಅತಿಥಿ ಉಪನ್ಯಾಸಕರ ಅನುಪಾತ ಕ್ರಮವಾಗಿ ಇಪ್ಪತ್ತು -ಎಂಭತ್ತು ಇದೆ. ಇದೇ ಪರಿಸ್ಥಿತಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಎಲ್ಲಾ ಕಡೆಯೂ ಇದೆ. ಇದರಿಂದಾಗುವ ದುಷ್ಪರಿಣಾಮ ಶಿಕ್ಷಣದ ಮೇಲೆ ಅಪಾರ – ವೃಂದಾ ಹೆಗ್ಡೆ, ಅತಿಥಿ ಉಪನ್ಯಾಸಕರು.
ಇದು ಈಗಿನ ಕಾಲದ ವಿಶಿಷ್ಠ ವಿದ್ಯಮಾನ. ಹಿಂದೆ ನಿರುದ್ಯೋಗಿ ಅಂದಾಕ್ಷಣ ಕಣ್ಣ ಮುಂದೆ ಬರುತ್ತಿದ್ದುದು ಬಡಕಲು ಶರೀರ, ಬೆನ್ನಿಗಂಟಿದ ಹೊಟ್ಟೆ, ಸವೆದ ಹವಾಯಿ ಚಪ್ಪಲಿ, ಬಗಲಲ್ಲಿ ಜೋಳಿಗೆ, ಬೋಳಿಸದ ಗಡ್ಡ, ಬಸವಳಿದ ಕೋಲುಮುಖ ಹೀಗೆ. ಇಲ್ಲಿ ಹೆಣ್ಣು ಮಕ್ಕಳು ಕಾಣುವುದಿಲ್ಲ. ಅವರಿಗೆ ಮನೆಯಲ್ಲಿ ಕೆಲಸ ಇದ್ದೇ ಇರುತ್ತದೆ. ಆದರೆ ಅಂಥಾ ಮಹಿಳೆಯರು ಎಂದಿಗೂ ಉದ್ಯೋಗಸ್ಥರೆಂದು ಪರಿಗಣಿಸಲ್ಪಡುವುದಿಲ್ಲ. ಅದು ಬೇರೆ ವಿಷಯ. ಈಗಿನ ನಿರುದ್ಯೋಗಿಗಳು ಮೋಟಾರ್ ಬೈಕ್ ನಲ್ಲಿ ಓಡಾಡುತ್ತಾರೆ. ಕೈಯಲ್ಲಿ ಆಂಡ್ರಾಯ್ಡ್ ಫೋನ್ ಇದ್ದೇ ಇರುತ್ತದೆ. ಸಮವಸ್ತ್ರವೂ ಹೆಚ್ಚಿನವರಲ್ಲಿ ಇರುತ್ತದೆ. ಅಂದರೆ ಕೆಲಸ ಇದೆ ಇವರೆಲ್ಲರ ಕೈಯಲ್ಲಿ. ಆದರೆ ಅವ್ಯಾವುದೂ ಉದ್ಯೋಗ ಅಲ್ಲ.!!
ಅಧಿಕೃತ ವೆಬ್ ಗೂಗಲ್ ಪ್ರಕಾರ ಬರೀ 6ರಿಂದ ಏಳು ಪ್ರತಿಶತ ವೃತ್ತಿನಿರತ ಭಾರತೀಯರು ಖಾಯಂ ನೌಕರರು!! ಉಳಿದವರೆಲ್ಲರೂ ತಾತ್ಕಾಲಿಕ, ಗುತ್ತಿಗೆ ಆಧಾರ, ದಿನಗೂಲಿ, ಅತಿಥಿ ಹೀಗೆ ವಿವಿಧ ನಾಮಾಂಕಿತ ಹೊಂದಿದವರು. ಸುಮಾರು ನಾಲ್ಕು ದಶಕಗಳ ಹಿಂದೆ ಈ ವೈಶಿಷ್ಟ್ಯ ಅಂಬೆಗಾಲಿಡುತ್ತಾ ಬಂದಿತು. ಹಣಕಾಸಿನ ಏರುಪೇರುಗಳನ್ನು ಸರಿದೂಗಿಸಲು ಸರ್ಕಾರ ಆಯ್ದುಕೊಂಡ ಮಾರ್ಗ ಎಲ್ ಪಿ ಜಿ. ಅಂದರೆ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಎಂಬ ಮಾಂತ್ರಿಕತೆಗೆ ತಲೆ ಒಡ್ಡಿದ್ದು. 1991 ಜುಲೈ 24ರಂದು ಭಾರತ ದೇಶ ಅಧಿಕೃತವಾಗಿ ಎಲ್ ಪಿ ಜಿ ಯನ್ನು ಅಳವಡಿಸಿತು. ಆಗಲೇ ಸರ್ಕಾರಿ ನೌಕರಿ ಸಿಕ್ಕು ತಕ್ಕಮಟ್ಟಿಗೆ ಬದುಕಲ್ಲಿ ನೆಮ್ಮದಿ ಕಂಡವರೂ ತಮ್ಮ ವೃತ್ತಿ ಪರಿಸರದಲ್ಲಿ ಚಿಗುರೊಡೆಯುತ್ತಿರುವ ಭ್ರಷ್ಟಾಚಾರವನ್ನು ಕಂಡು, ಕೆಲವು ಜನರ ಉದಾಸೀನತೆ, ಸೋಮಾರಿತನ ಕಂಡು ಖಾಸಗೀಕರಣವೇ ಇವರಿಗೆಲ್ಲಾ ಮಾಡುವ ತಕ್ಕ ಶಾಸ್ತಿ ಎಂದು ನಂಬಲು, ಹೇಳಲು ಪ್ರಾರಂಭಿಸಿದ್ದರು. ಆದರೆ ಅವರ ನಂಬಿಕೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬ ವಾಸ್ತವವಾಗುವುದೆಂಬ ತಿಳುವಳಿಕೆ ಆಗಲೇ ಇಲ್ಲ. ಖಾಸಗೀಕರಣ ಎಂದರೆ ಹೆಚ್ಚು ಹೆಚ್ಚು ಖಾಸಗೀ ಕಂಪೆನಿಗಳಿಗೆ ಅನುವು ಮಾಡಿಕೊಡುವುದು, ಖಾಸಗಿ ಕಂಪೆನಿಗಳು ಯಾವುದೇ ಮೀಸಲಾತಿ ನಿಯಮ ಅನುಸರಿಸದೆ ಕೇವಲ ‘ಯೋಗ್ಯತೆ ‘(ಮೆರಿಟ್ ) ಆಧರಿಸಿ ನೇಮಕಾತಿ ಮಾಡುವುದು ಎಂದು ತಿಳಿದ ಮೀಸಲಾತಿ ವಿರೋಧಿ ಜನ ಮೀಸಲಾತಿಯ ಹೆಸರಿನಲ್ಲಿ ‘ಯೋಗ್ಯತೆ’ ಇಲ್ಲದವರೂ ಮೇಲಧಿಕಾರಿಗಳಾಗಿ ಬಂದು ಅವಮಾನ ಆಗುವುದು ತಪ್ಪುತ್ತದೆ ಎಂದು ಒಳಗೊಳಗೇ ಸಂಭ್ರಮಿಸುತ್ತಾ ಹೂಗುಚ್ಚ ಹಿಡಿದು ಸ್ವಾಗತಿಸಿದರು!!

ಕರ್ನಾಟಕದಲ್ಲಿ ವಿಶೇಷವಾಗಿ ಭೂಸುಧಾರಣೆ ಕಾಯಿದೆ ಜಾರಿಯಾದ ನಂತರದಲ್ಲಿ ಅಧಿಕ ಸಂಖ್ಯೆಯಲ್ಲಿದ್ದ ಗೇಣಿದಾರರೆಲ್ಲಾ ಸ್ವತಂತ್ರ ಹಿಡುವಳಿದಾರರಾಗಿ ತಮ್ಮ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಿಕೊಂಡು ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳಿಸುವ ಹೊತ್ತಿಗಾಗಲೇ ತಾಂತ್ರಿಕ ಶಿಕ್ಷಣದ ಬಾಗಿಲು ಅಗಲವಾಗಿ ತೆರೆದು ಅದಾಗಲೇ ಶಿಕ್ಷಣ ಪಡೆದಿದ್ದ ಮೇಲ್ಜಾತಿ, ಮೇಲ್ವರ್ಗದ ಮಕ್ಕಳನ್ನು ಸೆಳೆದು ಖಾಸಗೀಕರಣದ ಸವಲತ್ತು ಅನುಭವಿಸುವಂತೆ ಮಾಡಿತು ವ್ಯವಸ್ಥೆ. 1984ರಲ್ಲೇ ಸಿಇಟಿ ಪರೀಕ್ಷಾ ವಿಧಾನವನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿತು. ಮೇಲ್ಜಾತಿಯ ಮಧ್ಯಮವರ್ಗದವರೆಲ್ಲಾ ಆ ಎಳೆ ಹಿಡಿದು ಖಾಸಗಿ ಕಂಪೆನಿಗಳಿಗೆ ಲಗ್ಗೆ ಇಟ್ಟರು. ಕಂಪ್ಯೂಟರ್ ಯುಗ ಕಾಲಿಟ್ಟಿತ್ತು. ವಿಶೇಷವಾಗಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಹೆಚ್ಚಿನ ಜನರು ಕಂಗೊಳಿಸಿದರು. ಹೊರದೇಶಕ್ಕೆ ದುಡಿಯಲು ಹೋದರು. ಅಲ್ಲೇ ತಳವೂರಿದವರೂ ಅನೇಕರಿದ್ದಾರೆ. ವಿಪರ್ಯಾಸ ಎಂದರೆ ಇವರಲ್ಲಿ ಅನೇಕರು ಈಗಲೂ ಮೀಸಲಾತಿ ವಿರೋಧಿಗಳು. ತಾವು ಕೆಲಸ ಮಾಡಲು ಬಯಸದ ಜಾಗದಲ್ಲೂ ತಮ್ಮ ಜಾತಿ ಬಿಟ್ಟು ಹಿಂದುಳಿದವರು ಬರುವುದನ್ನು ಸಹಿಸದವರು (ಪೌರ ಕಾರ್ಮಿಕ ವೃತ್ತಿ ಬಿಟ್ಟು ). ಜನರ ಮನಸ್ಸಿನಲ್ಲಿ ಮೀಸಲಾತಿ ಅಂದಾಕ್ಷಣ ಬರುವುದು ಎಸ್ಸಿ ಎಸ್ಟಿ ಸಮುದಾಯ. ಅರಸುರವರಿಂದಾಗಿ ಮೀಸಲಾತಿಯಲ್ಲಿ ಸಮಪಾಲು ಪಡೆದ ಓಬಿಸಿಯವರೂ ತಮ್ಮನ್ನು ತಾವು ಮೀಸಲಾತಿ ಪಡೆಯದ ಮೇಲ್ಜಾತಿಯವರು (ಗೊತ್ತೇ ಆಗದಂತೆ ಆರ್ಥಿಕವಾಗಿ ಹಿಂದುಳಿದವರು ಪಡೆದ ಹತ್ತು ಪ್ರತಿಶತ ಇದೆ ಇವರಿಗೆ )ಎಂದೇ ಪರಿಗಣಿಸಿಕೊಳ್ಳುವುದು ಸೋಜಿಗದ ವಿಷಯ. ಹೀಗೆ ಜಾತಿ, ಮೀಸಲಾತಿಗಳು ಪರಸ್ಪರ ತಾಕಲಾಟಕ್ಕಿಳಿದಾಗಲೇ ಆ ಕಡೆಯಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ತಮ್ಮ ಆಟವನ್ನು ಶುರುಹಚ್ಚಿಕೊಂಡಿದ್ದವು.
ಖಾಸಗೀಕರಣವೆಂಬ ಹೆಬ್ಬಾವು ಸರ್ಕಾರಿ ಸಂಸ್ಥೆಗಳ ಬಾಲದಿಂದ ಪ್ರಾರಂಭಿಸಿ ಒಂದೊಂದೇ ಭಾಗವನ್ನು ನುಂಗಲು ಪ್ರಾರಂಭಿಸಿತು. ಹೇಗೆಂದರೆ ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ, ಅರೆಕಾಲಿಕ, ಔಟ್ ಸೋರ್ಸ್, ಮೊದಲಾದ ಹೆಸರಿನಲ್ಲಿ ಕನಿಷ್ಠ ವೇತನ ಕೊಟ್ಟು ದುಡಿಸಲು ಸರ್ಕಾರವೇ ಮುಂದಾಯಿತು. ನಾನ್ ಪ್ಲಾನ್ಡ್ ಎಕ್ಸ್ಪೆಂಡಿಚರ್ ಆಯೋಜಿತ ಖರ್ಚು ವೆಚ್ಚದ ಅಡಿಯಲ್ಲಿ ಬರುವ ಇವರೆಲ್ಲರೂ ಸರ್ಕಾರ ಎಲ್ಲಿಯದೋ ಹಣವನ್ನು ಇಲ್ಲಿಗೆ ಅಡ್ಜೆಸ್ಟ್ ಮಾಡಿ ಅನುದಾನದ ಹೆಸರಿನಲ್ಲಿ ಬಿಡುಗಡೆ ಮಾಡಿದಾಗ ಗೌರವಧನ ಎಂಬ ಹೆಸರಿನಲ್ಲಿ ಸ್ವೀಕರಿಸಬೇಕು. ಗೌರವಧನ ಪಡೆಯುವವರ ಸಂಖ್ಯೆ ಹೆಚ್ಚುತ್ತಾ ವೇತನ ಪಡೆಯುವ ಖಾಯಂ ನೌಕರರ ಸಂಖ್ಯೆ ಇಳಿಮುಖವಾಗುತ್ತಾ ಹೋಯಿತು. ಹತ್ತೋ ಹದಿನೈದೋ ವರ್ಷಕ್ಕೊಮ್ಮೆ ನೇಮಕಾತಿ ನಡೆಸಿದ ನಾಟಕವಾಡಿದ ಸರ್ಕಾರಗಳು ಭಾಗಶಃ ಖಾಲಿ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿ ಒಂದು ಪ್ರತಿಶತ ಜನರು ಕೆಲಸ ಪಡೆದುಕೊಂಡು, ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ ಎಂಬ ಭ್ರಮೆ ಹುಟ್ಟಿಸುತ್ತಿತ್ತು. ಇದು ಹಂತಹಂತವಾಗಿ ಸರ್ಕಾರ ನೇಮಕಾತಿಯನ್ನು ಕಡಿಮೆ ಮಾಡುತ್ತಾ ಕೊನೆಗೆ ಸಂಪೂರ್ಣ ನಿಲ್ಲಿಸುವುದು ಎಂದು ಊಹೆ ಕೂಡಾ ಮಾಡಲಾರದ ಸ್ಥಿತಿಯಲ್ಲಿ ಆಗಿನ್ನೂ ಪ್ರಥಮ ಶಿಕ್ಷಿತ ಪೀಳಿಗೆ ಇತ್ತು. ಹಾಗಾಗಿ ಗುತ್ತಿಗೆ ಆಧಾರಿತ ಕೆಲಸವೇ ನೌಕರಿ ಎಂದು ಭ್ರಮಿಸುವಂತಿತ್ತು. ಮುಂದುವರಿದಂತೆ ಘೋರ ವಾಸ್ತವ ಅರಿವಾಗಲು ಶುರುವಾಯಿತು. ಸರ್ಕಾರಿ ಕಾಲೇಜುಗಳಲ್ಲಿ ಖಾಯಂ ಮತ್ತು ಅತಿಥಿ ಉಪನ್ಯಾಸಕರ ಅನುಪಾತ ಕ್ರಮವಾಗಿ ಇಪ್ಪತ್ತು -ಎಂಭತ್ತು ಇದೆ. ಇದೇ ಪರಿಸ್ಥಿತಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಎಲ್ಲಾ ಕಡೆಯೂ ಇದೆ. ಇದರಿಂದಾಗುವ ದುಷ್ಪರಿಣಾಮ ಶಿಕ್ಷಣದ ಮೇಲೆ ಅಪಾರ. ಖಾಯಂ ಶಿಕ್ಷಕರು ಕಡಿಮೆ ಇದ್ದು, ಅತಿಥಿ ಶಿಕ್ಷಕರನ್ನು ತಡವಾಗಿ ನಿಯೋಜಿಸುವುದರಿಂದ ಅಲ್ಲಿಯವರೆಗಿನ ಪಾಠ ಪ್ರವಚನಗಳು ಸೊರಗುತ್ತವೆ. ತಡವಾಗಿ ನಿಯೋಜನೆ ಗೊಂಡ ಶಿಕ್ಷಕರ ಮೇಲೆ ಅವಧಿಯೊಳಗೆ ಪಾಠ ಪ್ರವಚನಗಳನ್ನು ಪೂರೈಸಬೇಕು ಎಂಬ ಒತ್ತಡ ಹೇರುವುದರಿಂದ ಶಿಕ್ಷಕರು ತಮ್ಮ ಸಾಮರ್ಥ್ಯ ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾಶವೇ ಇಲ್ಲದೆ ಅವಸರದಲ್ಲಿ ಕೆಲಸ ಪೂರೈಸುವತ್ತ ಮಾತ್ರ ಗಮನ ಕೊಡಬೇಕಾಗುತ್ತದೆ. ಇಲ್ಲಿ ನಲುಗಿ ಹೋಗುವುದು ವಿದ್ಯಾರ್ಥಿ ಸಮೂಹ. ಹಾಗೂ ಶಿಕ್ಷಣ ಕ್ಷೇತ್ರ. ಶಿಕ್ಷಣ ಕ್ಷೇತ್ರವನ್ನು ಸರ್ಕಾರ ಕಡೆಗಣಿಸುತ್ತಿದೆ ಎಂಬ ಕೂಗು ಕೇಳಿಬರುತ್ತಲೇ ಇರುತ್ತದೆ. ದಿನಗಳೆದಂತೆ ಪದವಿ ಶಿಕ್ಷಣ ಅಂದರೆ ಇಷ್ಟೇ ಎನ್ನುವ ಹಂತ ತಲುಪಿದೆ.
ಇನ್ನು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಕೇಳೋಣ. ಏಕಾಏಕಿ ಸರ್ಕಾರ ತೊಂಭತ್ತರ ದಶಕದಲ್ಲಿ ಕೆಲಸವನ್ನು ವಾರಕ್ಕೆ ಗರಿಷ್ಠ ಎಂಟು ಗಂಟೆಗೆ ಸೀಮಿತಗೊಳಿಸಿ ಕಾರ್ಯಭಾರವನ್ನು ಹರಿದು ಹಂಚಿದಾಗ ಪಾಲಿಗೆ ಬಂದಿದ್ದು ಪಂಚಾಮೃತ ಎಂದೂ, ಇದನ್ನು ಬಿಟ್ಟರೆ ಬೇರೆ ಇಲ್ಲ ಎಂದೂ ಸ್ನಾತಕೋತ್ತರ ಪದವಿ ಪಡೆದವರು ಕೆಲಸ ಮುಂದುವರಿಸಿದರು. ಅವರಲ್ಲಿ ಕರ್ನಾಟಕದಲ್ಲಿ ಮಾತ್ರ ಕೆಲವರು ದಶಕಗಳ ಹೋರಾಟ ನಡೆಸಿ, ವಕೀಲರಿಗೆ ಹಣ ಸುರಿದು, ನ್ಯಾಯಾಲಯದಿಂದ ಆದೇಶ ಮಾಡಿಸಿಕೊಂಡು ಖಾಯಂ ಆದರು. ಉಳಿದಂತೆ ಮತ್ತೆ ʼಅತಿಥಿʼಗಳ ಯಾತ್ರೆ ಮುಂದುವರಿಯಿತು. ಪದವಿ ಮುಗಿಸಿದ ತಕ್ಷಣ ಮುಂದೆ ಒಂದು ಖಾಯಂ ನೌಕರಿ ಸಿಗುತ್ತದೆ ಎಂಬ ಭರವಸೆ ಹೊತ್ತು ಅಲ್ಲಿಯ ತನಕ ಅನುಭವ ಪಡೆದುಕೊಳ್ಳುವ ಎಂದು ಸೇರಿದ ತಾತ್ಕಾಲಿಕ ಕೆಲಸವೇ ಖಾಯಂ ಆಗಿ ತಮ್ಮನ್ನು ಅತಂತ್ರಗೊಳಿಸಬಹುದೆಂಬ ನಿರೀಕ್ಷೆ ಹಲವರಲ್ಲಿ ಇರಲಿಲ್ಲ. ಯಾಕೆಂದರೆ ಎಲ್ ಪಿ ಜಿ ಯ ವಿರಾಟ್ ರೂಪದ ಅಂದಾಜು ಯುವಜನರಿಗೆ ಇರಲಿಲ್ಲ. ದಿನಗಳೆದಂತೆ ಇಂಥವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ತಮ್ಮದೇ ವಿದ್ಯಾರ್ಥಿಗಳು ತಮ್ಮ ಜೊತೆಗೇ ಡಾಕ್ಯುಮೆಂಟ್ಸ್ ಫೈಲ್ ಹಿಡಿದು ವೆರಿಫಿಕೇಶನ್ ಗೆ ಸಾಲುಗಟ್ಟಿ ನಿಲ್ಲುವುದನ್ನು ನೋಡುವಾಗ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದದ್ದಕ್ಕೆ ಖುಷಿ ಪಡುವುದೋ ಅಥವಾ ಅವರೂ ಭರವಸೆಯಿಲ್ಲದ ಭವಿಷ್ಯದಲ್ಲಿ ನಲುಗುವರೆಂಬ ವಾಸ್ತವಕ್ಕೆ ಮರುಕ ಪಡುವುದೋ ತಿಳಿಯದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮೊದಲೇ ಹೇಳಿದಂತೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಹೆಚ್ಚಿನ ಸಮಯ ಸಂದ ಬಳಿಕ ನಿಯೋಜನೆಗೊಂಡ ಅತಿಥಿ ಉಪನ್ಯಾಸಕರು ಸರ್ಕಾರ ಅನುದಾನ ಬಿಡುಗಡೆಗೊಳಿಸಿದಾಗ ಗೌರವಧನ ಎಂಬ ಕನಿಷ್ಠ ವೇತನ ಪಡೆದು, ಶೈಕ್ಷಣಿಕ ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳುತ್ತಾರೆ. ಹೀಗೆ ಬಿಡುಗಡೆಗೊಂಡಾಗ ದಿನನಿತ್ಯದ ಖರ್ಚಿಗೆ ಪರದಾಡುವ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಗಾಯದ ಮೇಲೆ ಬರೆ ಎಳೆದಂತೆ ಕೆಲವು ಕಡೆ ಪ್ರಾಂಶುಪಾಲರ, ವಿಭಾಗದ ಮುಖ್ಯಸ್ಥರ ಕಿರುಕುಳ ಬೇರೆ. ಕಾನೂನಿನ ಒಳಹೊಕ್ಕು ತಮಗೆ ಬೇಕಾದ ರೀತಿ ಅರ್ಥೈಸುತ್ತಾ ಅದನ್ನು ಅತಿಥಿ ಉಪನ್ಯಾಸಕರೆಂಬ ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ನಡೆಸುವವರೂ ಹಲವರಿದ್ದಾರೆ. ಉದಾಹರಣೆಗೆ ಖಾಯಂ ಉಪನ್ಯಾಸಕರಿಗಿದ್ದ ದಿನದ ಕೆಲಸದ ಅವಧಿಯನ್ನು ಇವರಿಗೂ ಅನ್ವಯಿಸುವುದು, ಬಿಡುಗಡೆಗೊಂಡ ನಂತರವೂ ಪರೀಕ್ಷಾ ಕಾರ್ಯಗಳನ್ನು ಎಗ್ಗಿಲ್ಲದೇ ಮಾಡಿಸುವುದು, ನಿಯಮ ಇಲ್ಲದಿದ್ದರೂ ವೃತ್ತಿ ತೆರಿಗೆ ಕಟ್ಟಿಸುವುದು, ರಜದ ನಿಯಮವನ್ನಂತೂ ತಮಗೆ ಬೇಕಾದ ಹಾಗೆ ವ್ಯಾಖ್ಯಾನಿಸಿಕೊಂಡು ಕಾಟ ಕೊಡುವುದು. ಹೇಗೆಂದರೆ ಕೆಲಸದ ಅವಧಿಯನ್ನು ವಾರಕ್ಕೆ ಎಂಟರಿಂದ ಹದಿನೈದು ಗಂಟೆಗಳಿಗೆ ಏರಿಸಿದಾಗ ವಾರದಲ್ಲಿ ಆರೂ ದಿನಗಳು ಕಾಲೇಜಿನಲ್ಲಿ ಇರಬೇಕಾದಾಗ ತಿಂಗಳಿಗೆ ಒಂದು ದಿನದ ರಜೆ ಎಂಬ ನಿಯಮ ಸರ್ಕಾರ ನಿರ್ಧರಿಸಿತ್ತು. ಆದರೆ ಈ ರಜೆ ಆಯಾ ತಿಂಗಳಲ್ಲೇ ಪಡೆಯಬೇಕು. ಅಕಸ್ಮಾತ್ ಆ ತಿಂಗಳಲ್ಲಿ ಪಡೆಯದೇ ಹೋದರೆ ನಷ್ಟ ಆಗುವುದೇ ವಿನಃ ಮುಂದಿನ ತಿಂಗಳಿಗೆ ಕೂಡಿಸಲು ಬರುವುದಿಲ್ಲ. ಒಂದಕ್ಕಿಂತ ಹೆಚ್ಚು ದಿನ ಗೈರು ಆದರೆ ಅಷ್ಟು ದಿನದ ವೇತನ ಕಡಿತ ಆಗುವುದು.!! ಕರ್ತವ್ಯದಿಂದ ಬಿಡುಗಡೆಗೊಂಡ ನಂತರವೂ ಊರು ಬಿಟ್ಟು ಹೋಗದಂತೆ, ಹಾಗೆ ಹೋಗುವುದಾದರೆ ತನಗೆ ತಿಳಿಸಿಯೇ ಹೋಗುವಂತೆ ಬೆದರಿಕೆ ಹಾಕಿದ ಪ್ರಾಂಶುಪಾಲರೂ ಇದ್ದಾರೆ. ವೃತ್ತಿ ತೆರಿಗೆಯದ್ದಂತೂ ಪ್ರಹಸನ ಮಾಡಿಬಿಟ್ಟರು. ಎಲ್ಲಾ ಕಾಲೇಜಿಗೂ ಅನ್ವಯವಾಗದ ಈ ನಿಯಮ ಕೆಲವು ಕಾಲೇಜುಗಳಿಗೆ ಮಾತ್ರ ಅನ್ವಯಿಸಿ ಬರುವ ಮೂರು ಕಾಸಿನಲ್ಲೂ ಒಂದು ಕಾಸನ್ನು ಕಿತ್ತುಕೊಳ್ಳುವ ನೀಚತನವನ್ನು ಅನುಸರಿಸಿದರು ಕೆಲವರು. ಇಲ್ಲಿಯವರೆಗೆ ನೀವುಗಳು ಸರ್ಕಾರಕ್ಕೆ ವೃತ್ತಿ ತೆರಿಗೆ ಕಟ್ಟದೆ ಒಂದರ ಮುಂದೆ ಎಣಿಸಲಾರದಷ್ಟು ಸೊನ್ನೆಗಳ ಹಣವನ್ನು ವಂಚಿಸಿದ್ದೀರಿ ಎಂದರೊಬ್ಬ ಮಹಿಳಾ ಪ್ರಾಂಶುಪಾಲರು!! ಆ ಮಹಿಳೆಗೆ ಈ ವ್ಯವಸ್ಥೆಯಲ್ಲಿ ತಾತ್ಕಾಲಿಕ ನಿಯಮದಡಿ ದುಡಿಯುವ ಜನ ಸರ್ಕಾರಕ್ಕೆ ಎಷ್ಟು ಉಳಿಸುತ್ತಾರೆಂಬ ಕನಿಷ್ಠ ಜ್ಞಾನವೂ ಇರಲಿಲ್ಲ. ಹೀಗೆ ದಿನಬೆಳಗಾದರೆ ಹೊಸಹೊಸ ನಿಯಮಗಳ ಹೇರುತ್ತಾ ಹಿಂಸಿಸುವ ಅಧಿಕಾರಿಗಳು. ಈಗ ಯುಜಿಸಿ, ನಾನ್ ಯುಜಿಸಿ ಎಂಬ ವಿಘಟನೆ. ನೆಟ್, ಸ್ಲೆಟ್, ಪಿಎಚ್.ಡಿ ಮಾಡಿಕೊಂಡವರನ್ನು ಮಾತ್ರ ಅತಿಥಿ ಉಪನ್ಯಾಸಕರನ್ನಾಗಿ ನಿಯೋಜಿಸುವಂತೆ ಕೋರಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು. ಸರ್ಕಾರ ಪ್ರತಿವಾದಿ. ಅತ್ಯಂತ ದುರ್ಬಲವಾಗಿ ವಾದ ಮಂಡನೆ ನಡೆಯಿತು. ನ್ಯಾಯಾಧೀಶರು ನಿಯಮದ ಪ್ರಕಾರವೇ ಆಲೋಚಿಸಿದರು. ಅಲ್ಲದೆ ‘ಆನೆ ನಡೆಯುವಾಗ ಇರುವೆಗಳು ಸಾಯುತ್ತವೆ ಏನೂ ಮಾಡಲು ಬರುವುದಿಲ್ಲ’ ಎಂದು ಹೇಳಿ ತಮ್ಮ ಅಸಹಾಯಕತೆಯನ್ನು ದಾರ್ಷ್ಟ್ಯ ದಿಂದಲೇ ವ್ಯಕ್ತಪಡಿಸಿದರು. ಪ್ರತಿವಾದಿ ಸರ್ಕಾರ ಕೈಚೆಲ್ಲಿತು. ಇತ್ತ ಅನುಕೂಲ ಇರುವ ಕೆಲವು ಅತಿಥಿಗಳು ವಾಮಮಾರ್ಗದಿಂದ ಪಿಎಚ್.ಡಿ ತೆಗೆದುಕೊಂಡು ತೂರಿಕೊಂಡರು..
ಇಷ್ಟೆಲ್ಲಾ ಅವಾಂತರ ನಡೆಯುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರುದ್ಯೋಗದ ಸಲುವಾಗಿ ಎಂದು ಗ್ರಹಿಸುವುದರಲ್ಲಿ ಸಮುದಾಯ ಸೋತಿರುವುದು ದುರಂತ. ಇಂದಿಗೂ ಅತಿಥಿ ಉಪನ್ಯಾಸಕರನೇಕರು ತಮ್ಮೆಲ್ಲಾ ಸಮಸ್ಯೆಗೆ ಆಯಾಯ ಕಾಲದಲ್ಲಿರುವ ರಾಜಕಾರಣಿಗಳು ಮಾತ್ರ ಕಾರಣ ಎಂದು ನಂಬುತ್ತಾರೆ. ಪರಿಸ್ಥಿತಿ ಎಷ್ಟು ಕೈ ಮೀರಿದೆ ಎಂದರೆ ಯಾವೊಂದು ಪಕ್ಷವೂ ಈ ಗಂಟುಗಂಟಾದ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಿಲ್ಲವೇನೋ ಅನ್ನಿಸುವಷ್ಟು. ಆದರೆ ಇಚ್ಛಾಶಕ್ತಿ ಇದ್ದು ಸಮಸ್ಯೆಯ ಮೂಲ ತಿಳಿದ ಒಂದು ಸಣ್ಣ ಗುಂಪಾದರೂ ಒಂದು ಪಕ್ಷದಲ್ಲಿ ಇದ್ದಿದ್ದರೆ ಆಗ ಖಂಡಿತಾ ಸಮಸ್ಯೆ ತಿಳಿಯಾಗುವ ಸಾಧ್ಯತೆ ಇದೆ.

ನನ್ನ ವೃತ್ತಿಯಲ್ಲದ ವೃತ್ತಿಗಾಗಿ(ಅತಿಥಿ ಉಪನ್ಯಾಸಕಿ) ಪ್ರತಿನಿತ್ಯ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಪರಿಚಯವಾಗುವ ಜನ ತಾವು ಮಾಡುವ ಕೆಲಸದ ಜಾಗದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ ಎಂದೇ ಹೇಳುತ್ತಾರೆ. ಒಂದು ತಾಲ್ಲೂಕಾ ಪ್ರದೇಶದಲ್ಲಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವವರ ಪ್ರಕಾರ ಅವರ ಆಸ್ಪತ್ರೆಯಲ್ಲಿ ಒಟ್ಟು ಎಂಭತ್ತೊಂಭತ್ತು ಸರ್ಕಾರ ಅನುದಾನಿಸಿದ ಸ್ಯಾಂಕ್ಷನ್ಡ್ ಹುದ್ದೆಗಳಿದ್ದು, ಅಲ್ಲಿ ಕೇವಲ ಹದಿನಾರು ಜನ ಖಾಯಂ ಕೆಲಸಗಾರರು ಇದ್ದಾರೆ. ಪಶುವೈದ್ಯರನ್ನೂ ಗುತ್ತಿಗೆ ಆಧಾರದ ಮೇಲೆಯೇ ನಿಯೋಜಿಸಿಕೊಳ್ಳುವುದರಿಂದ ಆಗುವ ತೊಂದರೆಗಳನ್ನು ವಿವರಿಸಿದರು. ಯಾವುದಾದರೂ ಜಾನುವಾರು ಸತ್ತಾಗ ಅದರ ಮಾಲೀಕರು ಮರಣೋತ್ತರ ಪರೀಕ್ಷೆ ನಡೆಸಲು ಬೇಡಿಕೆ ಇಡುತ್ತಾರೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ವೈದ್ಯರಿಂದ ಅದನ್ನು ಮಾಡಿಸಲು ಆಗುವುದಿಲ್ಲ. ಏಕೆಂದರೆ ಈ ಪ್ರಕ್ರಿಯೆ ಪೊಲೀಸ್ ವಿಭಾಗದವರಿಗೂ ಸಂಬಂಧಿಸುವುದರಿಂದ ಕೇಸು ಕೆಲವು ಬಾರಿ ದಶಕಗಟ್ಟಲೆ ನಡೆಯುತ್ತದೆ, ಈಗ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ವೈದ್ಯರನ್ನು ಆಗ ಹುಡುಕಿ ನ್ಯಾಯಾಲಯಕ್ಕೆ ಕರೆತರುವುದು ಆಗದ ಮಾತು. ಇನ್ನು ಅರಣ್ಯ ಇಲಾಖೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಪಶುವೈದ್ಯರು ನಿಯೋಜನೆಗೊಳ್ಳಬೇಕು. ಕಾಡಿನ ಪ್ರಾಣಿಗಳ ಬಗ್ಗೆ ತರಬೇತಿ ಹೊಂದಿರಬೇಕು. ಆದರೆ ಎಲ್ಲೂ ಈ ಹುದ್ದೆಯನ್ನು ಭರ್ತಿ ಮಾಡುವುದೇ ಇಲ್ಲ. ಇದರಿಂದಾಗಿ ಒಂದು ಆನೆ ಸತ್ತರೂ ಅದರ ಮರಣೋತ್ತರ ಪರೀಕ್ಷೆಗೆ ಸಾಕುಪ್ರಾಣಿಯ ತರಬೇತಿ ಹೊಂದಿದ ವೈದ್ಯರೇ ಬರಬೇಕು. ಇನ್ನು ವೈದ್ಯರ ಪರಿಸ್ಥಿತಿ ನೋಡುವುದಾದರೆ ಕಷ್ಟಪಟ್ಟು ಓದಿ ಕೆಲಸ ಇಲ್ಲದೆ ಪರದಾಡುವ ಸ್ಥಿತಿ ಅವರದು. ಖಾಸಗಿ ಪಶುವೈದ್ಯಾಲಯಕ್ಕೆ ಹೆಚ್ಚು ಆಸ್ಪದ ಇಲ್ಲದ ನಮ್ಮ ದೇಶದಲ್ಲಿ ಈ ವಿದ್ಯಮಾನ ದುಃಖಕರ.
ಇನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಎಲ್ಲಾ ವಿಷಯಗಳನ್ನು, ಎಲ್ಲಾ ತರಗತಿಗಳನ್ನು ಇರುವ ಶಿಕ್ಷಕರೇ ನಿಭಾಯಿಸಬೇಕಾಗುತ್ತದೆ.
ಇನ್ನೊಮ್ಮೆ ಖಾಸಗಿ ಅನುದಾನಿತ ಶಾಲಾ ಶಿಕ್ಷಕರು ಸಿಕ್ಕಿದ್ದರು. ದಶಕಗಳ ಕಾಲ ತಮ್ಮಲ್ಲಿ ಖಾಯಂ ನೇಮಕಾತಿ ನಡೆಯಲಿಲ್ಲ!!! ಖಾಸಗಿಯಾಗಿ ನೇಮಕ ಮಾಡಿಕೊಳ್ಳಲು ತಮಗೆ ಹಣಕಾಸಿನ ಕೊರತೆ. ಕನಿಷ್ಠ ವೇತನಕ್ಕೆ ದುಡಿಸಲು ಹೊರಟರೆ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕು. ಇದರಿಂದ ಶಾಲೆಯ ಗುಣಮಟ್ಟವೂ ಕುಸಿಯುತ್ತದೆ ಎಂದು ಅಳಲು ತೋಡಿಕೊಂಡರು.
ಖಾಸಗಿಯಾಗಿ ಸರ್ಕಾರಿ ಇಲಾಖೆಗಳಲ್ಲಿ ನೇಮಕಗೊಳ್ಳುವ ಗುತ್ತಿಗೆ ನೌಕರರ ಅವಸ್ಥೆ ಯಾರಿಗೂ ಬೇಡ. ಅವರು ಯಾವಾಗಲೂ ‘ಹೊರಗಿನವರೇ’. ಅತಂತ್ರತೆ, ಅವಮಾನ, ಕೀಳರಿಮೆ ಇವು ಜೊತೆಯಲ್ಲೇ ಇರುವಂಥವು. ಖಾಯಂ ಆದವರು ಯಾರೇ ಇರಲಿ ಅವರು ತಮ್ಮನ್ನು ತಾವು ಪ್ರಭುತ್ವದ ಭಾಗ ಎಂದೇ ತಿಳಿಯುತ್ತಾರೆ. ಉದಾಹರಣೆಗೆ ನಮ್ಮದೇ ವಿದ್ಯಾರ್ಥಿನಿ ಖಾಯಂ ಗುಮಾಸ್ತಳಾಗಿ ತಾನು ಓದಿದ ಕಾಲೇಜಿನಲ್ಲೇ ಕಾರ್ಯ ನಿರ್ವಹಿಸಲು ಬಂದವಳು ತನಗೆ ಪಾಠ ಮಾಡಿದ ಉಪನ್ಯಾಸಕರನ್ನೂ ತಾನು ಶೋಷಣೆ ಮಾಡಲು ಬಳಸಬಹುದು ಎಂದು ತಿಳಿದುಕೊಳ್ಳುವಷ್ಟು ಬೆಳೆದಿರುವುದನ್ನು ಕಂಡಿದ್ದೇವೆ. ಸರ್ವೀಸ್ ಸರ್ಟಿಫಿಕೇಟ್ ಪಡೆಯಲೋ, ಇನ್ಯಾವುದೋ ಕಾರಣಕ್ಕೆ ಬಳಿ ಬಂದವರನ್ನು ಥೇಟ್ ಸರ್ಕಾರಿ ಇಲಾಖೆಗಳಲ್ಲಿ ನಿರ್ಲಕ್ಷ್ಯದಿಂದ ಕಾಣುವವರ ಥರವೇ ಮುಖಗಂಟಿಕ್ಕಿ ಓಡಿಸುವುದನ್ನು ಕಂಡು ಆಘಾತಗೊಂಡಿದ್ದೇವೆ. ಇನ್ನು ಒಳ್ಳೆಯ ಮನಸ್ಥಿತಿಯವರು, ಮಾನವೀಯ ಕಾಳಜಿಯುಳ್ಳವರೆಂದು ಅಂದುಕೊಂಡವರೂ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ತಾವೂ ಪ್ರಭುತ್ವದ ಪರವೇ ಆಲೋಚಿಸಲು ತೊಡಗುತ್ತಾರೆ. ಉದಾಹರಣೆಗೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಮ ಸೆಮಿಸ್ಟರ್ ಕೊನೆಗೊಳ್ಳುವ ಹೊತ್ತಿಗೆ ಅತಿಥಿ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುತ್ತದೆ. ಬಿಡುಗಡೆಗೊಂಡ ನಂತರ ಆ ಕಾಲೇಜಿಗೂ ಅತಿಥಿ ಉಪನ್ಯಾಸಕರಿಗೂ ಯಾವುದೇ ಸಂಬಂಧವಿರುವುದಿಲ್ಲ. ಮುಂದೆ ಮತ್ತೆ ಕೌನ್ಸೆಲಿಂಗ್ ಮಾಡುವವರೆಗೆ, ಅಲ್ಲಿ ಗುದ್ದಾಡಿ ಸ್ಪರ್ಧಿಸಿ ಮತ್ತೆ ಸೇವೆಗೆ ಸೇರುವವರೆಗೆ ವರಮಾನವಿಲ್ಲದೆ ಬೇರೆ ಕೆಲಸ ಮಾಡಿಕೊಂಡಿರಬೇಕಾದ ಪರಿಸ್ಥಿತಿ ಇದೆ. ಆದರೆ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಲು ಕಾಲೇಜುಗಳಲ್ಲಿ ಇರುವ ಖಾಯಂ ಸಿಬ್ಬಂದಿಗಳು ಸಾಲುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಖಾಯಂ ಉಪನ್ಯಾಸಕನೂ/ಳೂ ಬಿಡುಗಡೆಗೊಂಡ ಅತಿಥಿಗಳು ಬಂದು ಇಲ್ಲಿಯವರೆಗೆ ಅವರಿಗೆ ದುಡಿಯಲು (ಕನಿಷ್ಠ ವೇತನಕ್ಕೆ ಎಂಬುದು ಇಲ್ಲಿ ನಗಣ್ಯ) ಅವಕಾಶ ಕಲ್ಪಿಸಿಕೊಟ್ಟ ಕಾಲೇಜಿನ ಋಣ ತೀರಿಸಬೇಕು ಎಂದೇ ಆಲೋಚಿಸುತ್ತಾರೆ!!!
ಊಳಿಗಮಾನ್ಯ ಪದ್ಧತಿಯ ಯಾವ ಅಂಶಗಳೂ ಮರೆಯಾಗಿಲ್ಲ ಎನ್ನುವುದು ದುಃಖ ಪಡುವ ವಿಷಯ.
ಅಸಲಿಗೆ ಈ ಅಗೋಚರ ನಿರುದ್ಯೋಗಕ್ಕೆ ಬಲಿಯಾದವರಾದರೂ ಯಾರು? ಬಡ, ಹಿಂದುಳಿದ, ಪ್ರಥಮ ಶಿಕ್ಷಿತ ಜನರು. ಲೋಹಿಯಾ ಪ್ರಕಾಶನದ ಎ ಎಂ ಮದರಿಯವರ ಆತ್ಮಕಥೆ “ಗೊಂದಲಿಗ್ಯಾ” ಅಲೆಮಾರಿ ಸಮುದಾಯದ ಆತ್ಮಕಥೆ ಮಾತ್ರವಲ್ಲ, ತಾವು ಮುಖ್ಯವಾಹಿನಿಯಲ್ಲಿ ಈಜುತ್ತಿರುವವರು ಎಂದು ಹೆಮ್ಮೆಯಿಂದ ಬೀಗುತ್ತಿರುವವರ ದುಷ್ಟಮುಖದ ಕಥೆಯೂ ಹೌದು. ಸರ್ಕಾರಗಳಿಂದಲೂ ನಿರ್ಲಕ್ಷಿತವಾದ, ನಿರಂತರ ಉಳಿದ ಸಮುದಾಯಗಳಿಂದ ಅವಮಾನ, ದೌರ್ಜನ್ಯಕ್ಕೆ ಒಳಗಾಗುವ ಅಲೆಮಾರಿ ಜನಾಂಗ ಶಿಕ್ಷಣ ಪಡೆಯಲು ಪಡುವ ಕಷ್ಟ ಊಹಾತೀತ. ಮದರಿಯಂತವರ ಅನುಭವ ಕಥನಗಳೇ ಅವರ ಬದುಕನ್ನು ಅರಿಯಲು ಇರುವ ಸಣ್ಣ ಕಿಂಡಿ. ಸಂವಿಧಾನ ಕೊಡಮಾಡುವ ಹಕ್ಕುಗಳು, ಅನುಕೂಲಗಳು ಸರ್ವರಿಗೂ ಏಕಪ್ರಕಾರವಾಗಿ ತಲುಪುವುದಿಲ್ಲ ಎಂಬುದನ್ನು ದಮನಿತರ ಬದುಕಿನ ಅವಲೋಕನ ನಿಚ್ಚಳವಾಗಿ ತೋರಿಸುತ್ತದೆ. ಇಂಥಾ ಪರಿಸ್ಥಿತಿಯಲ್ಲಿ ಮದರಿಯವರ ಹತ್ತಿರದ ಸಂಬಂಧಿಯೊಬ್ಬರು ಅತಿಥಿ ಉಪನ್ಯಾಸಕರಾಗಿದ್ದಾರೆಂದು ತಿಳಿದುಬರುತ್ತದೆ. ದೇಶದಲ್ಲಿ ಎಲ್ಲಾ ತರದ ಸೌಲಭ್ಯಗಳಿಂದ ವಂಚಿತರಾಗಿ ಬದುಕುವ ಸಮುದಾಯಗಳಿಗೆ ವಿದ್ಯೆ ಎನ್ನುವುದು ಉತ್ತಮ ಬದುಕು ಕಟ್ಟಿಕೊಳ್ಳಲು ಇರುವ ಏಕೈಕ ಅವಕಾಶ. ವಿದ್ಯೆ ಪಡೆದವರನ್ನೂ ಈ ಪರಿ ವಂಚಿಸುವ ವ್ಯವಸ್ಥೆ ಯಾವುದೇ ಸಮಾಜಕ್ಕೆ ಒಳಿತಲ್ಲ.
ಈ ಅತಂತ್ರತೆ ಸಾರ್ವಜನಿಕರಿಗೆ ಅರ್ಥವಾಗಲು ಸಮಯ ತೆಗೆದುಕೊಂಡಿತು. ತಿಳುವಳಿಕೆ ಆಗುವ ಹೊತ್ತಿಗೆ ನ್ಯಾಯಾಂಗದವರೂ ಕೂಡಾ ನಿರುದ್ಯೋಗಿಗಳನ್ನು ಇರುವೆ, ಜಿರಲೆಗೆ ಹೋಲಿಸಿ ತಮ್ಮ ಅಜ್ಞಾನ, ಅಮಾನವೀಯತೆ, ಸಂವೇದನಾ ಶೂನ್ಯತೆಯನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸುವಷ್ಟು ವ್ಯವಸ್ಥೆ ಕೆಟ್ಟು ಹೋಯಿತು.
ಅಗೋಚರವಾಗುಳಿದು ರಕ್ತ ಹೀರುತ್ತಿದ್ದ ನಿರುದ್ಯೋಗ ಸಮಸ್ಯೆ ಜಿರಲೆ ಪ್ರಸಂಗದಿಂದಾಗಿ ಗೋಚರವಾಗುತ್ತಿರುವುದು ಸ್ವಾಗತಾರ್ಹ.
ವೃಂದಾ ಹೆಗ್ಡೆ
ಅತಿಥಿ ಉಪನ್ಯಾಸಕರು
ಇದನ್ನೂ ಓದಿ- ಸಂಶೋಧನೆಯ ಮೇರು ಪರ್ವತ ಎಸ್ ಎಸ್ ಹಿರೇಮಠರ ನೆನಪಿನಲ್ಲಿ


