ಛತ್ರಪತಿ ಸಂಭಾಜಿನಗರ: ಯೋಗಗುರು ಬಾಬಾ ರಾಮದೇವ್ ಅವರು ರಾಜಕೀಯ ವಿಚಾರಗಳ ಬಗ್ಗೆ ನೀಡುತ್ತಿರುವ ಹೇಳಿಕೆಗಳಿಗೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ಛತ್ರಪತಿ ಸಂಭಾಜಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೀಪ್ಕೆ, “ರಾಜಕೀಯದ ಬಗ್ಗೆ ಮಾತನಾಡುವ ಬದಲು ನಿಮ್ಮ ಕಂಪನಿಯ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸಿ. ಇಲ್ಲದಿದ್ದರೆ ನಿಮ್ಮ ಕಂಪನಿಯೇ ಒಂದು ದಿನ ಮುಚ್ಚುವ ಪರಿಸ್ಥಿತಿ ಬರಬಹುದು” ಎಂದು ವ್ಯಂಗ್ಯವಾಡಿದರು.
ಮುಂದುವರಿದು ಮಾತನಾಡಿದ ಅವರು, “ನಿಮ್ಮ ಬ್ರ್ಯಾಂಡ್ನ ಉತ್ಪನ್ನಗಳ ಗುಣಮಟ್ಟದ ಕುರಿತು ಈಗಾಗಲೇ ಸುಪ್ರೀಂಕೋರ್ಟ್ ಗಂಭೀರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ. ಆದ್ದರಿಂದ ರಾಜಕೀಯದ ಕುರಿತು ಅನಗತ್ಯ ಹೇಳಿಕೆಗಳನ್ನು ನೀಡುವ ಬದಲು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವತ್ತ ಗಮನಹರಿಸುವುದು ಸೂಕ್ತ” ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಬಾಬಾ ರಾಮದೇವ್ ಅವರು ದೇಶದ ರಾಜಕೀಯ ಬೆಳವಣಿಗೆಗಳು ಮತ್ತು ವಿವಿಧ ಪಕ್ಷಗಳ ಬಗ್ಗೆ ನಿರಂತರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅಭಿಜೀತ್ ದೀಪ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ದೀಪ್ಕೆ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಬಾಬಾ ರಾಮದೇವ್ ಈ ಟೀಕೆಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

