ಕೊಡಗು : ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗುತ್ತಿದೆ. ಮಡಿಕೇರಿಯಲ್ಲಿ ಒಂದು ಕಡೆ ತಡೆಗೋಡೆ ಕುಸಿದಿದೆ. ಮತ್ತೊಂದೆಡೆ ಗುಡ್ಡ ಕುಸಿದಿದೆ. ಹಟ್ಟಿಹೊಳೆ, ಭಾಗಮಂಡಲ, ತ್ರಿವೇಣಿ ಸಂಗಮ, ಸ್ವಾನಘಟ್ಟ ಜಲಾವೃತ ವಾಗಿದೆ. ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಭಾರಿ ಹೆಚ್ಚಳವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಸುಳ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಗುಡ್ಡ ಕುಸಿತದಿಂದ ಮುಂಡಾಜೆ- ಧರ್ಮಸ್ಥಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾದ ಕಾರಣ, ಧರ್ಮಸ್ಥಳದಲ್ಲಿರುವ ನೇತ್ರಾವತಿ ಸ್ನಾನಘಟ್ಟ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಸ್ನಾನಘಟ್ಟದ ಮೆಟ್ಟಿಲುಗಳು ಸಹ ನೀರಿನ ಅಡಿಯಲ್ಲಿ ಸಿಲುಕಿದ್ದು, ಸಂಪೂರ್ಣವಾಗಿ ಕಾಣದಂತಾಗಿವೆ. ನೇತ್ರಾವತಿ ನದಿಯ ಪ್ರವಾಹದಿಂದಾಗಿ ಧರ್ಮಸ್ಥಳದ ಪರಿಸರದ ಜನಜೀವನಕ್ಕೂ ಅಡಚಣೆಯಾಗಿದೆ. ಧರ್ಮಸ್ಥಳದ ಮಣ್ಣಸಂಕ ಬಳಿಯ ರಸ್ತೆಯು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಇದಲ್ಲದೆ, ಉಜಿರೆ ಮತ್ತು ಬೆಳ್ತಂಗಡಿ ನಡುವಿನ ಪ್ರಮುಖ ಮಾರ್ಗವಾದ ರಸ್ತೆಯೂ ಸಹ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ತೀರ್ಥಹಳ್ಳಿಯಲ್ಲಿ ಉಕ್ಕಿದ ಮಾಲತಿ ಹೊಳೆ : ತಾಲೂಕಿನ ಆಗುಂಬೆ ಸಮೀಪದ ಮಾಲತಿ ಹೊಳೆ ಉಕ್ಕಿ ಹರಿಯುತ್ತಿದ್ದು, ಹೊಳೆಯಲ್ಲಿ ಕಾರು ಸಿಲುಕಿ ಹೊನ್ನಾವರ ಮೂಲದ ಕುಟುಂಬವೊಂದು ಪರದಾಡಿದೆ. ಕಾರಿಗೆ ಏಕಾಏಕಿ ನೀರು ನುಗ್ಗಿದ್ದರಿಂದ ಕಾರಿನ ಮೇಲೇರಿ ಕುಟುಂಬಸ್ಥರು ಸಹಾಯಕ್ಕಾಗಿ ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕಾರಿಗೆ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಕ್ಕೆ ತಂದಿದ್ದಾರೆ.
ಭಾರೀ ಮಳೆಗೆ ತೀರ್ಥಹಳ್ಳಿಯಲ್ಲಿ ಮಾಲತಿ ಹೊಳೆ ಉಕ್ಕಿ ಹರಿಯುತ್ತಿದೆ. ಇದರಿಂದ ನಾಬಳ ಸೇತುವೆ ಬಂದ್ ಆಗಿದೆ. ಅದೇ ಮಾರ್ಗದಲ್ಲಿ ಹೊನ್ನಾವರ ಮೂಲದ ಕುಟುಂಬವೊಂದು ಶೃಂಗೇರಿಗೆ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ಏಕಾಏಕಿ ಕಾರಿಗೆ ನೀರು ತುಂಬಿ, ಸೇತುವೆ ಮೇಲೆ ನಿಂತಿದೆ. ಇದನ್ನು ಗಮನಿಸಿದ ಸ್ಥಳೀಯರಾದ ಪ್ರವೀಣ್, ಮಂಜುನಾಥ್ ಹಾಗೂ ಇನ್ನಿತರರು ಕೂಡಲೇ ಕಾರಿಗೆ ಹಗ್ಗಕಟ್ಟಿ ಎಳೆದು ಸುರಕ್ಷಿತ ಸ್ಥಳಕ್ಕೆ ತಂದಿದ್ದಾರೆ.

